ಚಿತ್ರ – ಸುಘೋಷ್ ಎಸ್. ನಿಗಳೆ.
ಭಾಗ್ಯದ ಲಕ್ಷ್ಮಿ ಬಾರಮ್ಮ…
July 31, 2009
ಫೋಟೋ ಫಿನಿಶ್ photo, varamahalakshmi Leave a comment
ಇಲ್ಲಿದೆ ನಮ್ಮ ಮನೆ, ಹಾರುವುದು ಸುಮ್ಮನೆ!!
July 31, 2009
ಫೋಟೋ ಫಿನಿಶ್ bird, kerala, photo 1 Comment
ಚಿತ್ರ – ಸುಘೋಷ್ ಎಸ್. ನಿಗಳೆ
ಹಲ್ಲಿಗೊಂದು ಸೆಂಡ್ ಆಫ್ …..
July 30, 2009
ಮುದ್ರಣ ಮಾಧ್ಯಮ my print article, teeth, vijay karnataka 3 Comments

ಪ್ರೀತಿಯ ಹಲ್ಲೇ…,
ಹೌದು ನಿನಗೆ ಹಲ್ಲು ಅಂತಲೇ ಕರೆಯಬೇಕು. ಯಾವ ಹಲ್ಲು ಎಂದು ಕೇಳಿದರೆ ನನ್ನ ಬಳಿ ಉತ್ತರವಿಲ್ಲ. ಏಕೆಂದರೆ ನಾನು ನಿಮಗೆ ಇದುವರೆಗೆ ಹೆಸರೇ ಇಟ್ಟಿಲ್ಲ. ಹಾಗೇನಾದರು ಆದರೆ ನಾನು ನಿಮಗೆ ೩೨ ಹೆಸರು ಹುಡುಕಬೇಕು. ಹುಡುಕುವುದೇನು ದೊಡ್ಡ ಕೆಲಸವಲ್ಲ. ಆದರೆ ಯಾಕೋ ನಿಮಗೆ ಹೆಸರಿಡಲು ನನಗೆ ಹೊಳೆಯಲೇ ಇಲ್ಲ. ನನ್ನಲ್ಲಿ ಕಣ್ಣು, ಕಿವಿ, ಮೂಗು, ಕೈ, ಕಾಲು, ಹೊಟ್ಟೆ ಹೀಗೆ ಪ್ರತಿಯೊಂದು ಅಂಗಕ್ಕೆ ಅವರದೇ ಆದ identity ಇದೆ. ಆದರೆ ನಿಮಗೆ ನೀವೆಲ್ಲರೂ ಸೇರಿ ‘ ಹಲ್ಲುಗಳು’, ಅಷ್ಟೇ. ಕೆಲವರಿಗೆ ದವಡೆ, ಕೋರೆ ಎಂಬ ಹೆಸರಿದ್ದರೂ ನೀವು ಯಾವ ದವಡೆ ಯಾವ ಕೋರೆ ಎಂಬುದಕ್ಕೆ ಕೆರೆದುಕೊಳ್ಳಬೇಕಾಗುತ್ತದೆ. ತಲೆಯನ್ನು. ಹೀಗಿದ್ದೂ ನಿನಗೆ ಡಾ. ತ್ರಿವಿಕ್ರಂ ಹೆಸರಿಟ್ಟಿದ್ದು, ಸೆಕಂಡ್ ಫ್ರೊಂ ದಿ ರೈಟ್ ಟಾಪ್.
ಅಂತೂ ನನ್ನ ನಿನ್ನ ಇಷ್ಟು ವರ್ಷಗಳ ಸಂಬಂಧ ಮುಗಿದಿದೆ. ನೀನು ಹುಟ್ಟಿದಾಗ ಬಹುಶಃ ನನಗೆ ಮೂರೋ ನಾಲ್ಕೋ ವರ್ಷವಿರಬೇಕು. ಆದರೆ ನಿನ್ನಾಣೆಗೂ ನೀನು ಹುಟ್ಟಿದ್ದು ನನಗೆ ತಿಳಿಯಲಿಲ್ಲ. ಎದುರಿನ ಕೆಲವು ಹಲ್ಲುಗಳನ್ನು ಬಿಟ್ಟರೆ, ಒಳಗಿನ ಹಲ್ಲುಗಳಿಗೆ ನನಗೆ ಸಂಬಂಧವೇ ಇರಲಿಲ್ಲ. Actually, ಒಳಗಿನ ಹಲ್ಲುಗಳೇ ಎಲೆ ಮರೆಯ ಕಾಯಿಯ ಹಾಗೆ ಗಿರಣಿಯಂತೆ ಕರಕರ ದುಡಿಯುತ್ತಿದ್ದರೂ ಅವು ನನ್ನ ಬದುಕಿನಲ್ಲಿ ಯಾವುದೇ ಭಾವನಾತ್ಮಕ ಅಸ್ತಿತ್ವ ಹೊಂದಿರಲೇ ಇಲ್ಲ.
ಆದರೆ ಈಗ ನಿಮ್ಮಗಳ imporatance ಗೊತ್ತಾಗುತ್ತಿದೆ. ಡಾ. ತ್ರಿವಿಕ್ರಂ ತಮ್ಮ ಗೌಸ್ ಹಾಕಿದ ಕೈಗಳಲ್ಲಿ ಇಕ್ಕಳ ಹಿಡಿದು ನಿನ್ನನ್ನು ನನ್ನಿಂದ ಬೇರ್ಪಡಿಸಿ ರಕ್ತಸಿಕ್ತವಾಗಿದ್ದ ನಿನ್ನ ದೇಹವನ್ನು ‘ಕಣ್’ ಎಂದು ಟ್ರೇಯಲ್ಲಿ ಹಾಕಿದಾಗ ನನ್ನ ಕಣ್ಣು ತುಂಬಿ ಬಂದಿತ್ತು. ನೋವಿನಿಂದ ಹೀಗಾಗಿದೆ ಎಂದು ಡಾ. ತ್ರಿವಿಕ್ರಂ ಅಂದುಕೊಂಡಿರಬೇಕು. ಆದರೆ ಅವರಿಗೇನು ಗೊತ್ತು, ನನ್ನ ನಿನ್ನ ಅಗಲಿಕೆಯ ದುಃಖ.
ನನ್ನ ನಿನ್ನ ಸಂಬಂಧ ಸುಮಾರು ೨೪-೨೫ ವರ್ಷಗಳದ್ದು ಅಲ್ಲವೇ? ಇಷ್ಟು ವರ್ಷ ನೀನು ನನ್ನೋಡನಿದ್ದೆ . ಆದರೆ ನಿನ್ನ ಇರುವಿಕೆ ಗೊತ್ತಗುತ್ತಿದ್ದುದು ಮಾತ್ರ ಕೆಲವೇ ಕೆಲವು ಸಂದರ್ಭಗಳಲ್ಲಿ. ಎಂಟು ಒಂಬತ್ತೆನೆಯ ಕ್ಲಾಸಿನಲ್ಲಿ ಪರೀಕ್ಷೆಯ ದಿನವೇ ನೀನು ಭಯಂಕರವಾಗಿ ತೊಂದರೆ ಕೊಡಲು ಆರಂಭಿಸುತ್ತಿದೆ. ನೀನು ಹಾಗೆಯೇ ಇದ್ದರೂ, ಒಸಡು ಹಾಗೂ ಗಲ್ಲಕ್ಕೆ ಬಾವು ಬರಲು ಕಾರಣವಾಗುತ್ತಿದ್ದೆ. ಸುಪುತ್ರನ ಬಾತಿದ ಮುಖವನ್ನು ನೋಡುತ್ತಿದ್ದ ಅಪ್ಪ-ಅಮ್ಮ “ಇರಲಿ ಬಿಡು. ಪರೀಕ್ಷೆ ಮುಂದಿನ ಬಾರಿ ಬರೆದರಾಯಿತು” ಎನ್ನುತ್ತಿದ್ದರು. ಒಂದೆರಡು ದಿನಗಳ ಕಾಲ ನನ್ನನ್ನು ನರಳಿಸಿ ಪರೀಕ್ಷೆ ಮುಗಿಯುತ್ತಿದ್ದ ಹಾಗೆ ಸರಿಯಾಗಿ ಬಿಡುತ್ತಿದ್ದೆ. ಮತ್ತೆ ನಿನ್ನ ಇರುವಿಕೆ ಗೊತ್ತಾಗುತ್ತಿದ್ದುದು ಮುಂದಿನ ಪರೀಕ್ಷೆಯ ವೇಳೆಗೆ!!
ಡಾ. ತ್ರಿವಿಕ್ರಂ ನಿನ್ನನ್ನು ಉಳಿಸಿಕೊಳ್ಳಲು ತುಂಬ ಪ್ರಯತ್ನ ಪಟ್ಟರು. ಮೂರು ಬಾರಿ ರೂಟ್ ಕೆನಾಲ್ ಮಾಡಿದರೂ, ಎಸಿ ಕ್ಲಿನಿಕ್ ನಲ್ಲಿ ಅವರ ಹಣೆಯ ಬೆವರು ಕಿತ್ತು ಬಂತೇ ಹೊರತು ಅವರಿಗೆ ನಿನ್ನ ರೂಟ್ ವರೆಗೆ ತಲುಪಲು ಆಗಲೇ ಇಲ್ಲ. “ಲಿಸನ್, ಐ ಥಿಂಕ್ ಇಟ್ ಇಸ್ ಕಂಪ್ಲೀಟ್ಲಿ ಬ್ಲಾಕ್ಡ್. ದೆರಿಸ್ ನೋ ಪಾಯಿಂಟ್ ಇನ್ ವೇಸ್ಟಿಂಗ್ ಟೈಮ್ ಅಂಡ್ ಮನಿ. ವಿ ವಿಲ್ extract ಇಟ್” ಅಂತ ನಿನಗೆ ಮರಣ ದಂಡನೆ ವಿಧಿಸಿದ್ದರು.
ಹಲ್ಲೇ, ನಿನ್ನ ಸಂಬಂಧ ಕೊನೆಗೊಳ್ಳಲು ನಾನೇ ಕಾರಣ. ಬಹುಷಃ ನಿನ್ನ ಬಗ್ಗೆ ನಾನು ಇನ್ನೂ ಹೆಚ್ಚು ಪ್ರೀತಿಯಿಂದ ನಡೆದುಕೊಂಡಿದ್ದರೆ, ನಮ್ಮಿಬ್ಬರ ಅನುಬಂಧ ಇನ್ನೂ ಕೆಲ ವರ್ಷ ಮುಂದುವರೆಯಬಹುದಿತ್ತೇನೋ.
ನೀನು ನನ್ನಿದ ದೂರವಾಗುತ್ತಿರುವ ಈ ಸಂದರ್ಭದಲ್ಲಿ ನಿನ್ನ ಕೊಡುಗೆಯನ್ನು ಸ್ಮರಿಸುವುದು ನನ್ನ ಕರ್ತವ್ಯ. ಇಷ್ಟು ವರ್ಷಗಳ ಕಾಲ ಹಸಿವು ಹಾಗೂ ಬಾಯಿ ಚಪಲಕ್ಕಾಗಿ ಬಾಯಲ್ಲಿ ತುರುಕಿದ್ದ ಎಲ್ಲವನ್ನೂ ಮರು ಮಾತನಾಡದೇ ಅರೆದಿದ್ದಕ್ಕೆ ಮತ್ತು ಆ ಮೂಲಕ ಅಜೀರ್ಣ ಹಾಗೂ ಮೂಲವ್ಯಾಧಿ ಬರದಂತೆ ನೋಡಿಕೊಂಡದ್ದಕ್ಕೆ ನಿನಗಿದೋ ನಮಸ್ಕಾರ. ನಾನು ನಕ್ಕಾಗಲೆಲ್ಲ ಕೆನ್ನೆಯಲ್ಲಿ ಗುಳಿ ಬೀಳಲು ನಿನ್ನದೇ ಕೊಡುಗೆ ನೀಡಿದ್ದಕ್ಕೆ ನಿನಗಿದೋ ನಮಸ್ಕಾರ. ಕಾಲೇಜಿನ ಲ್ಯಾಬ್ ನಲ್ಲಿ ನನ್ನನ್ನು ಒಳಗೊಳಗೇ ಪ್ರೀತಿಸುತ್ತಿದ್ದ ಹುಡುಗಿ ರಪಕ್ಕನೆ ಎದುರಾಗಿ ಕೆನ್ನೆಗೆ ಬಿಗಿಯಾಗಿ ಮುತ್ತು ಕೊಟ್ಟಾಗ ಗಲ್ಲ ಒಳ ಹೋಗದಂತೆ ತಡೆದ್ದಿದ್ದಕ್ಕೆ ನಿನಗಿದೋ ನಮಸ್ಕಾರ. ಹಾಸ್ಟೆಲ್ ರೂಮ್ ನಲ್ಲಿ ಅಸಂಖ್ಯಾತ ಬಿಯರ್ ಬಾಟಲಿಗಳನ್ನು ಓಪನ್ ಮಾಡಲು ಓಪನರ್ ಬದಲು ನಿನ್ನನ್ನು ಬಳಸಿದ್ದಕ್ಕೆ ಕ್ಷಮೆಯಿರಲಿ!
ಈಗ ನಿನ್ನ ಸ್ಥಳದಲ್ಲಿ ಬ್ರಿಜ್ ಕೂರಿಸುತ್ತಾರಂತೆ. ಈಗ ನಿನ್ನ ಬದಲಿಗೆ ಮೂರು ಹಲ್ಲು ಹಾಕಿಸಿಕೊಳ್ಳಬೇಕು ನಾನು. ಆದರೂ ಇಷ್ಟು ವರ್ಷ ನನ್ನೊಡನಿದ್ದು, ಹೀಗೆ ಬೇರೆಯಾಗಿ ಹೋದೆಯಲ್ಲ, ಐ ಆಮ್ ಸಾರಿ ಹಲ್ಲೇ….
(ವಿಜಯ ಕರ್ನಾಟಕದ ಸಾಪ್ತಾಹಿಕ ವಿಜಯದಲ್ಲಿ ಪ್ರಕಟವಾಗಿದ್ದ ಲೇಖನ)
ಗೌಡರ ಗತ್ತೇ ಗಮ್ಮತ್ತು
July 29, 2009
Uncategorized devegowda, politician 2 Comments

ಘಟನೆ – 1.
ಆಗಿನ್ನೂ ನಾನು ಈ ಟಿವಿ ಸೇರಿ ಫೀಲ್ಡ್ ಗೆ ಹೋಗುತ್ತಿದ್ದ ಪರ್ವಕಾಲ. ಕೈಯಲ್ಲಿ ಈ ಟಿವಿ ಬೂಮ್ ಹಿಡಿದು ಹೊರಟೆನೆಂದರೆ ಏನೋ ಒಂದು ರೀತಿಯ ಹೆಮ್ಮೆ. ಆಗ ಅಚಾನಕ್ಕಾಗಿ ದೇವೇಗೌಡರ ಪದ್ಮನಾಭನಗರದ ಮನೆಗೆ ಕವರೇಜ್ ಗೆ ಹೋಗುವ ಸಂದರ್ಭ ಎದುರಾಯಿತು. ಗೌಡರ ಮೂಡ್ ಬಗ್ಗೆ ಹಿರಿಯ ಪತ್ರಕರ್ತರಿಂದ ಕೇಳಿ ತಿಳಿದಿದ್ದ ನಾನು ಅಳುಕುತ್ತಲೇ ಅವರ ಮನೆಗೆ ಹೋದೆ. ಒಳಗೆ ಗೌಡರು, ಹೊರಟ್ಟಿ, ಗೌಡರ ಅಂದಿನ ಕಾಲದ ದತ್ತು ಪುತ್ರ ಚೆನ್ನಿಗಪ್ಪ, ಗೌಡರ ಚಾಣಕ್ಯ ದತ್ತಾ ಹೀಗೆ ಎಲ್ಲರೂ ಕುಳಿತಿದ್ದರು. ರಾಜಕೀಯದಲ್ಲಿ ಯಾವುದೋ ಒಂದು ಅಪ್ರೀಯ ಘಟನೆ ನಡೆದು ಗೌಡರು ಫುಲ್ ಗರಂ ಆಗಿದ್ದರು. ಸರಿ, ನಾನು ಬೈಟ್ ಕೇಳಲು ಹೋದರೆ, ಗೌಡರ ಅಂಗರಕ್ಷಕರು ಹಚಾ ಹಚಾ ಎಂದರು. ಆಗ ನಾನು ನಂಬಲಾರದ ಘಟನೆ ನಡೆಯಿತು. ಇದನ್ನೆಲ್ಲ ವಾರೆಗಣ್ಣಿನಲ್ಲಿ ನೋಡುತ್ತಿದ್ದ ಗೌಡರು, ತಮ್ಮ ಅಂಗರಕ್ಷಕರಿಗೆ ಹೇಳಿ ನನ್ನನ್ನು ಒಳಗೆ ಕರೆಸಿದರು. ತಮ್ಮ ಪಕ್ಕದಲ್ಲಿ ಕೂರಿಸಿಕೊಂಡು ನಾನು ಕೇಳಿದ ಎಲ್ಲ ಪ್ರಶ್ನೆಗಳಿಗೆ ಸಮಾಧಾನವಾಗಿ ಉತ್ತರಿಸಿದರು. ನಂತರ ಟೀ ಕೊಡುವಂತೆ ಸಹಾಯಕರಿಗೆ ಹೇಳಿದರು. ಅಂದಿನಿಂದ ನಾನು ಗೌಡರ ಫುಲ್ ಫ್ಯಾನ್ ಆಗಿಬಿಟ್ಟೆ. ಗೌಡರನ್ನು ತೆಗಳುತಿದ್ದ ಪತ್ರಕರ್ತರಿಗೆಲ್ಲ ಬುದ್ಧಿವಾದ ಹೇಳತೊಡಗಿದೆ.

ಘಟನೆ – 2.
ರವೀಂದ್ರ ಕಲಾಕ್ಷೇತ್ರದಲ್ಲಿ ಯಾವುದೋ ಸನ್ಮಾನ ಕಾರ್ಯಕ್ರಮ. ಗೌಡರು ಮುಖ್ಯ ಅತಿಥಿ. ಕಾರ್ಯಕ್ರಮ ಮುಗಿಯುತ್ತಿದ್ದಂತೆ ಎಂದಿನಂತೆ ನಾನು ಹಾಗೂ ಉದಯ ಟಿವಿಯ ಯೂನಿಟ್ ಗೌಡರ ಬೈಟ್ ಗೆ ಹೊರಗೆ ಕಾಯುತ್ತಿದ್ದೆವು. ಗೌಡರು ಹೊರಬರುತ್ತಿದ್ದಂತೆ ತಳ್ಳಾಟ ನೂಕಾಟ ಆರಂಭವಾಯಿತು. ಗೌಡರು ನಮ್ಮ ಬಳಿ ಬರುವಷ್ಟರಲ್ಲಿ ತಳ್ಳಾಟ ಜೋರಾಯಿತು. ಗೌಡರು ನನ್ನ ಎದರು ಬಂದು ನಿಲ್ಲಲಿಕ್ಕೂ, ಯಾವನೋ ಒಬ್ಬನ ಕೈಯಿ ನನ್ನ ಕನ್ನಡಕಕ್ಕೆ ತಾಗಿ ಅದು ಕೆಳಗೆ ಬೀಳಲು ಸರಿ ಹೋಯಿತು. ನನ್ನ ಸ್ಪೆಕ್ಟ್ಸ್, ನನ್ನ ಸ್ಪೆಕ್ಟ್ಸ್ ಎಂದು ನಾನು ಹುಡುಕಲಾರಂಭಿಸಿದೆ. ಇದು ನಂಬಲು ಕಷ್ಟು, ಆದರೆ ಗೌಡರು ಕೂಡ ಕ್ಷಣ ಹೊತ್ತು ನಿಂತು ನನ್ನ ಸ್ಪೆಕ್ಟ್ಸ್ ಅನ್ನು ತಾವೂ ಅತ್ತಿತ್ತ ಕೆಳಗೆ ನೋಡಿ ಹುಡುಕಿದರು. ಅದೂ ಅವರಿಗೂ ಸಿಗಲಿಲ್ಲ. ಹಾಗೆಯೇ ತೆರಳಿದರು. ಕೊನೆಗೆ ನನ್ನ ಕನ್ನಡಕ ಕ್ಯಾಮೆರಾದ ಕೇಬಲ್ ಗೆ ಸಿಕ್ಕು ಜೋತಾಡುತ್ತಿತ್ತು. ಘಟನೆ – 2 ರಿಂದ ನಾನು ಗೌಡರ ಬಗ್ಗೆ ಮತ್ತಷ್ಟು ಅಭಿಮಾನ ಬೆಳೆಸಿಕೊಂಡೆ.

ಉಪಸಂಹಾರ – (ಅಯ್ಯೋ..ವಿಧಿಯೇ…)
ಕೆಲವೇ ದಿನಗಳು ಕಳೆದ ಬಳಿಕ ಜೆಡಿಎಸ್ ಕಚೇರಿಯಲ್ಲಿ ಯಾವುದೋ ವರದಿಗೆ ತೆರಳಿದ್ದ ಸಂದರ್ಭದಲ್ಲಿ ಗೌಡರು ಗರಂ ಆಗಿದ್ದರು. ತಳ್ಳಾಟ ಆರಂಭವಾಗಿತ್ತು. ನಾನು ಹೇಗೋ ಮಾಡಿ ಗೌಡರ ಬಳಿ ತೆರಳಿ ಮೈಕ್ ಹಿಡಿದೆ. ಉತ್ತರ ಕೊಡುವ ಬದಲಾಗಿ ಗೌಡರು ಮತ್ತಷ್ಟು ಗರಂ ಆಗಿ ಏನೇನೋ ಬಯ್ಯುತ್ತ ಹೋಗಿಬಿಟ್ಟರು. ನಾನು ಘಟನೆ -1 ಹಾಗೂ 2 ನ್ನು ಮರೆತು ನಾರ್ಮಲ್ ಲೆವೆಲ್ ಗೆ ಬಂದೆ.
ನೀತಿ – ಗೌಡರಿಗೆ ಯಾವ ಪತ್ರಕರ್ತರನ್ನು ಎಲ್ಲಿ, ಹೇಗೆ, ಯಾಕೆ, ಇಡಬೇಕು ಎಂಬ ಸ್ಪಷ್ಟ ಕಲ್ಪನೆ ಇದೆ. ಅದೇ ಪತ್ರಕರ್ತರಿಗೆ ಇಲ್ಲ.
(ಕನ್ನಡ ಬ್ಲಾಗರ್ಸ್ ನಲ್ಲಿ ಹಾಕಿದ ಒಂದು ಕಮೆಂಟ್. ಚಿತ್ರಕೃಪೆ – ಕನ್ನಡಪ್ರಭ, ಮೆಟ್ ಬ್ಲಾಗ್)
ನಂಗೂ ಅಣಗ್ಸಕ್ ಬರುತ್ತೆ…ವ್ಯಾ…
July 29, 2009
ಫೋಟೋ ಫಿನಿಶ್, Uncategorized dog, photo Leave a comment
ಚಿತ್ರ – ಸುಘೋಷ್ ಎಸ್. ನಿಗಳೆ
ಮಾಡೆಲ್ – ಕೆಂಚ
ಮುಕ್ತ…..ಮುಕ್ತ….ಮುಕ್ತ….
July 28, 2009
ಮುಕ್ತ...ಮುಕ್ತ...ಮುಕ್ತ...., Uncategorized Leave a comment
‘ಮುಕ್ತ..ಮುಕ್ತ’ ದಲ್ಲಿ ಮುಖ್ಯಮಂತ್ರಿಯ ಹಿರಿಯ ಮಗನಾಗಿ (ದೇವಾನಂದ ಸ್ವಾಮಿ) ಪಾತ್ರ ಮಾಡಲು ಆರಂಭವಾದಾಗಿನಿಂದ ಸ್ನೇಹಿತರಿಂದ ಬಂದ ಕಾಮೆಂಟ್ ಗಳು ಇಲ್ಲಿವೆ. ಕಾಮೆಂಟ್ ಗಳು ಬಂದ ಹಾಗೆ ಮುಕ್ತ ಮುಕ್ತ ಕೆಟಗರಿಯಲ್ಲಿ ಪ್ರಕಟಿಸಲಿದ್ದೇನೆ. ತಾವು ಸಹ ಅಭಿಪ್ರಾಯಗಳನ್ನು ಕಳಿಸಬಹುದು.

*ಶ್ರೀರಂಗ ಕುಲಕರ್ಣಿ, ಸಾಫ್ಟ್ ವೇರ್ ಉದ್ಯೋಗಿ, ಬೆಂಗಳೂರು.
ಯೂ ಆರ್ ಲುಕಿಂಗ್ ಕೂಲ್….
*ಕೇಶವ, ಆರ್ಥಿಕ ತಜ್ಞ, ಬೆಂಗಳೂರು.
ಕಾಂಗ್ರಾಟ್ಸ್…ನ್ಯೂ ಇನ್ನಿಂಗ್ಸ್. ಆಕ್ಟಿಂಗ್ ಈಸ್ ಗುಡ್. ಕ್ಯಾರಿ ಆನ್.
*ಪ್ರಾಚಿ ರವಿಚಂದ್ರ, ಸಾಪ್ಟ್ ವೇರ್ ಇಂಜಿನಿಯರ್, ಬೆಂಗಳೂರು.
ಗುಡ್ ಶೋ.
*ರಾಘವೇಂದ್ರ ಗೌಡ, ಈ ಟಿವಿ ಪತ್ರಕರ್ತ, ಬೆಂಗಳೂರು.
ನೈಸ್ ಆಕ್ಟಿಂಗ್. ಗುಡ್ ಲಕ್.
*ರವಿದತ್ತಪ್ರಸಾದ್, ಎಲ್ಐಸಿ ಉದ್ಯೋಗಿ, ಬೆಂಗಳೂರು
ಕಾಂಗ್ರಾಚುಲೇಷನ್ಸ್
*ಮಧುಕರ ಭಟ್, ವಕೀಲರು, ಬೆಂಗಳೂರು
ಸುಘೋಷ್ ಇಟ್ ವಾಸ್ ರಿಯಲಿ ಗ್ರೇಟ್. ಐ ಲೈಕ್ಡ್ ಯುವರ್ ಎಕ್ಸಪ್ರೆಷನ್ ಅಂಡ್ ಡೈಲಾಗ್ ಡಿಲೆವರಿ.
*ವಾಣಿ ಶ್ರೀಹರ್ಷ, ಗೃಹಿಣಿ ಮತ್ತು ರೈತ ಮಹಿಳೆ, ಕೊಪ್ಪ.
ಮನೆಯಲ್ಲಿ ಎಲ್ಲರಿಗೂ ತುಂಬಾ ಖುಷಿ ಆಯ್ತು. ಆಗ್ತಿದೆ. ಕಾಂಗ್ರಾಟ್ಸ್ ಕಣೋ. ಇದೇ ತರಹ ಮತ್ತೆ ಮತ್ತೆ ಬರ್ತಿರು.
*ಜ್ಯೋತಿ ಇರ್ವತ್ತೂರ್, ಈ ಟಿವಿ ಪತ್ರಕರ್ತೆ, ಬೆಂಗಳೂರು.
ವೆರಿಗುಡ್ ಪರ್ ಫಾರ್ಮನ್ಸ್. ಕೀಪ್ ಇಟ್ ಅಪ್.

*ವಿದ್ಯಾರಶ್ಮಿ, ಪತ್ರಕರ್ತೆ, ಕನ್ನಡಪ್ರಭ, ಬೆಂಗಳೂರು.
ಹಾಯ್, ವೆರಿ ಹ್ಯಾಪಿ ಟು ಸೀ ಯೂ ಇನ್ ಮುಕ್ತಾ ಮುಕ್ತಾ. ನೈಸ್ ರೋಲ್ ಅಂಡ ಯುವರ್ ಆಕ್ಟಿಂಗ್ ಇಸ್ ಆಲ್ಸೋ ನೈಸ್. ಹೋಪ್ ಯು ವಿಲ್ ಶೈನ್. ಆಲ್ ದಿ ಬೆಸ್ಟ್.
*ಶ್ರೀಧರ್ ವಿವಾನ್, ಪತ್ರಕರ್ತ, ಬ್ಯಾಂಗ್ಲೋರ್ ಮಿರರ್, ಬೆಂಗಳೂರು.
ಯೂ ಲುಕ್ ಗುಡ್ ಮ್ಯಾನ್. ನೈಸ್ ಜಾಬ್.
*ಸೌಮ್ಯರಾಣಿ, ಈ ಟಿವಿ ಪತ್ರಕರ್ತೆ, ಬೆಂಗಳೂರು.
ಕಾಂಗ್ರಾಚುಲೇಷನ್ಸ್. ಅಭಿನಯ ಚೆನ್ನಾಗಿದೆ. ಇನ್ನೂ ಚೆನ್ನಾಗಿ ಮುಖದ ಭಾವನೆಗೆ ಹೆಚ್ಚು ಗಮನ ಕೊಡಿ. ಬಾಡಿ ಲಾಂಗ್ವೇಜ್ ತುಂಬಾ ಚೆನ್ನಾಗಿದೆ. ಕೀಪ್ ಇಟ್ ಅಪ್.
*ಪ್ರಸನ್ನ, ಈ ಟಿವಿ ಪತ್ರಕರ್ತ, ಬೆಂಗಳೂರು.
ವಾಟ್ ಎ ಕಮ್ ಬ್ಯಾಕ್. ಯವರ್ ಆಕ್ಟಿಂಗ್ ಈಸ್ ಗುಡ್ ಮಿ. ದೇವಾನಂದ. ವಿಶ್ ಯು ಆಲ್ ದಿ ಸಕ್ಸೆಸ್.
*ಡಾ. ಎಸ್. ಎಲ್. ಕುಲಕರ್ಣಿ, ಕನ್ನಡ ಪ್ರೋಫೆಸರ್, ಆರ್ ಪಿ ಡಿ ಕಾಲೇಜು, ಬೆಳಗಾವಿ.
ದೇವಾನಂದ್…ಆಲ್ ಆಫ್ ಅಸ್ ಎಂಜಾಯ್ಡ್. ಅಪ್ರೋಪ್ರಿಯೇಟ್ ರೋಲ್. ಕಂಟಿನ್ಯೂ ನ್ಯೂ ವೆಂಚರ್.
*ಡಾ. ಲೀಲಾ ಸಂಪಿಗೆ, ಲೇಖಕಿ ಹಾಗೂ ಸಾಮಾಜಿಕ ಕಾರ್ಯಕರ್ತೆ, ಬೆಂಗಳೂರು.
ಹುಟ್ಟು ಕಲಾವಿದ ಅನ್ನಿಸ್ತು.

*ಜಿ. ಎನ್. ಮೋಹನ್, ಸಿಇಓ, ಮೇ ಫ್ಲವರ್ ಮೀಡಿಯಾ ಹೌಸ್, ಬೆಂಗಳೂರು.
ಸುಘೋಷ್
ನಿಮಗೆ ಕಿರುತೆರೆಯಲ್ಲಿ ಒಳ್ಳೆ ಭವಿಷ್ಯವಿದೆ. ನಿಮ್ಮ ಮೊದಲ ಎಪಿಸೋಡ್ ಇದನ್ನು ಸಾಬೀತುಪಡಿಸಿದೆ.
ನೀವು ಲೀಲಾಜಾಲವಾಗಿ ಅಭಿನಯಿಸಿದ್ದೀರಿ. ನಿಮ್ಮೊಳಗೆ ಒಬ್ಬ ಒಳ್ಳೆ ಪ್ರೊಫೆಷನಲ್ ಇದ್ದಾನೆ
ಅವನನ್ನು ಜೋಪಾನವಾಗಿ ಕಾಪಾಡಿಕೊಳ್ಳಿ
ನಿಮ್ಮ ಅಭಿನಯ ನೋಡಿ ನಾನೇ ಸುಸ್ತಾದೆ.
–
ನಾಟಕದ ಲೈಮ್ ಲೈಟ್ ಗಿಂತ ಕ್ಯಾಮೆರಾ ಒದಗಿಸುವ ಲೈಮ್ ಲೈಟ್ ಹೆಚ್ಚಿನದು.
ನಿಮ್ಮ ತಲೆ ನಿಮ್ಮ ಭುಜದ ಮೇಲೆ ಇಂದಿಗೂ ಎಂದಿಗೂ ಇರಲಿ ಎಂಬುದು ನನ್ನ ಆಶಯ
ನಿಮ್ಮ ವಿನಯ, ನಿಮ್ಮ ಪ್ರೊಫೆಷನಲ್ ರೀತಿ ಮಾತ್ರವೇ ನಿಮ್ಮನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ.
ಆಲ್ ದಿ ಸಕ್ಸಸ್
*ಸುರೇಖಾ, ಮೇ ಫ್ಲವರ್ ಮೀಡಿಯಾ ಹೌಸ್, ಬೆಂಗಳೂರು.
ಸೂಪರ್ ಡೈಲಾಗ್ಸ್….
*ಲಕ್ಷ್ಮಿನಾರಯಣ, ಕ್ಯಾಮರಾಮನ್, ಎಎನ್ಐ, ಬೆಂಗಳೂರು.
ಯೂ ಹ್ಯಾವ್ ಗಾಟ್ ಎ ಗುಡ್ ರೋಲ್. ಯುವರ್ ಪರ್ಫಾರ್ಮನ್ಸ್ ಈಸ್ ನ್ಯಾಚುರಲ್. ಕೀಪ್ ಅಪ್ ದಿ ಕ್ವಾಲಿಟಿ.
*ಪ್ರೀತಿ, ಗೃಹಿಣಿ, ಗಾಯಕಿ ಹಾಗೂ ರಂಗಕರ್ಮಿ, ಬೆಂಗಳೂರು.
ಮೈ ಇನ್-ಲಾಝ್ ಥಿಂಕ್ ಯೂ ವೇರ್ ಗುಡ್. ಹೋಪ್ ಯೂ ಫೈಂಡ್ ಮೆನಿ ಮೋರ್ ಗುಡ್ ರೋಲ್ಸ್.

*ಅರ್ಪಣಾ ಎಚ್ ಎಸ್.
ಈ ಟಿವಿ ಪತ್ರಕರ್ತೆ, ಬೆಂಗಳೂರು.
ನಿಮ್ಮ ಚ್ಯಾನಲ್ ನಲ್ಲಿ ಕೆಲ್ಸ ಕೊಡಿ ಪ್ಲೀಸ್.
*ರವಿ ಉಳ್ಳಾಗಡ್ಡಿ. ಈ ಟಿವಿ ಪತ್ರಕರ್ತ, ಧಾರವಾಡ.
ಎನ್ ಸಾರ್ ಸ್ಮಾರ್ಟ್ ಆಗೀದ್ದೀರಾ…
*ಮಮತಾ ಅರಸಿಕೆರೆ, ಶಿಕ್ಷಕಿ, ಹಾಸನ.
ಸಿ.ಎಂ. ಪುತ್ರ ಮಧ್ಯಮ ವರ್ಗದ ಮನೆಯಲ್ಲಿ….ಕಲ್ಪನೆ ಅದ್ಭುತ.
*ನಟರಾಜ ಬೆಳಕವಾಡಿ
ಈ ಟಿವಿ ಪತ್ರಕರ್ತ, ಚನ್ನಪಟ್ಟಣ.
ಯಾವ ಚಾನಲ್ ಸಾರ್. ನಾನೂ ನಿಮ್ಮ ಜೊತೆ ಸೇರ್ಕೋತಿನಿ.
*ಶಶಿಧರ ಕೋಟೆ, ಗಾಯಕರು, ಬೆಂಗಳೂರು.
ನಿನ್ನೆ ಮುಕ್ತಾ ಮುಕ್ತಾದಲ್ಲಿ ನಿಮ್ಮ ಆಕ್ಟಿಂಗ್ ತುಂಬಾ ಚೆನ್ನಾಗಿತ್ತು. ಕೀಪ್ ಇಟ್ ಅಪ್.
*ಮಮತಾ ಅರಸಿಕೆರೆ, ಶಿಕ್ಷಕಿ, ಹಾಸನ.
ನಿನ್ನೆ ಮುಕ್ತಾ ಮುಕ್ತಾದಲ್ಲಿ ವಾಹಿನಿಗೆ ಬೇರೆ ಹೆಸರು ಇಟ್ಟಿರಿ. ಕಾಮನು ಬಿಲ್ಲು ಹೆಸರು ಅಷ್ಟು ಚೆನ್ನಾಗಿಲ್ಲ.
*ರವಿ ಮಂಡ್ಯ, ಕಿರುತೆರೆ ಕಲಾವಿದ, ಬೆಂಗಳೂರು.
ಏನ್ ನಾನಾ, ಫುಲ್ ಮಿಂಚಿಂಗು…
‘ವಿಜಯ ಕರ್ನಾಟಕ’ದಲ್ಲಿ ‘ತಿರುಗುಬಾಣವಾದ ವರ್ಗಾವಣೆ’
July 28, 2009
ಮುದ್ರಣ ಮಾಧ್ಯಮ, Uncategorized Leave a comment
ಇಂದಿನ ‘ವಿಜಯ ಕರ್ನಾಟಕ’ದ ‘ವಾಚಕರ ವಿಜಯ’ದಲ್ಲಿ ಪ್ರಕಟವಾಗಿರುವ ನನ್ನ ಪತ್ರ.


ಏನ್ ಗುರಾಯಿಸ್ತಿದೀಯಾ….?
July 27, 2009
ಫೋಟೋ ಫಿನಿಶ್, Uncategorized 2 Comments

ಚಿತ್ರ – ಸುಘೋಷ್ ಎಸ್. ನಿಗಳೆ.
ರೂಪದರ್ಶಿ – ಗೌರಿ
ಕಾಲೇಜ್ ವಿರಹ, ಸಾವಿರ ತರಹ.
July 26, 2009

(ಸನ್ 2000 ದಲ್ಲಿ ಬಿ. ಎ. ದ್ವೀತಿಯ ವರ್ಷದಲ್ಲಿದ್ದಾಗ ಹಲವು ಹುಡುಗಿಯರ ಕೈಗೆ ಒಂದೇ ವೇಳೆ ಒಂದೇ ಹೃದಯವನ್ನು ಕೊಟ್ಟು ಒದ್ದಾಡುತ್ತಿದ್ದಾಗ, ಬರೆದ ಕವಿತೆ. ಕಾಲೇಜ್ ಮಿಸೆಲನಿಯಲ್ಲಿ ಪ್ರಕಟವಾಗಿ ಹಲವು ಹೆಂಗೆಳೆಯರ ಹುಬ್ಬು ಮೇಲೆರಲು ಕಾರಣವಾಗಿತ್ತು).
ಗೊತ್ತಿಲ್ಲ
ಎಷ್ಟು ದೂರ ಮಾಡಿದರೂ ಅಷ್ಟೇ ಹತ್ತಿರ ಬರುತ್ತಾಳೆ
ಕೇವಲ ನೆನಪುಗಳಿಂದಲೇ ದೇಹ-ಮನಸ್ಸನ್ನು ಹಾಳು ಮಾಡುತ್ತಾಳೆ.
ಅನಿಸುತ್ತದೆ ಒಮ್ಮೊಮ್ಮೆ ದೂರ ಮಾಡುವುದೇ
ಬೇಡ ಇವಳನ್ನು.
ಆದರೆ ಹತ್ತಿರ ಇಟ್ಟುಕೊಂಡರೆ
ಕರಿಯರೇ ಹಾಳು.
ಬಹುಶಃ ನನ್ನನ್ನು ಆಕರ್ಷಿಸಿದ್ದು ರೂಪವೇ ಇರಬೇಕು
ಬಣ್ಣ, ಕಣ್ಣು, ಮೂಗು…?
ಏನೋ ಗೊತ್ತಿಲ್ಲ.
ಹೀಗಾದಾಗ ಬಿಕ್ಕಿ ಬಿಕ್ಕಿ ಅಳು
ಆದರೆ ಏನೂ ಮಾಡಲಾಗದ ಚಡಪಡಿಕೆ.
ಆಸರೆ ಇದೆ – ನಿದ್ದೆ ಗುಳಿಗೆ, ಸಿಗರೇಟ್, ಹೆಂಡ….ಮತ್ತೇನೋ?
ಹಸಿವಿಗೆ ಕೊನೆಯೇ ಇಲ್ಲ
ಏನು ಮಾಡಲಿ, ತೋಚುವುದೇ ಇಲ್ಲ ಮಾಡಿದರೆ
ಜನರ ಕೊಂಕು ಮಾತು, ದೃಷ್ಟಿ.
ಕರೆಯುತ್ತದೆ ಭಗವದ್ಗೀತೆ, ದಾಸಬೋಧ
ಕರೆಯುತ್ತಾರೆ ಓಶೋ, ಜಿಡ್ಡು, ಟಾಲ್ ಸ್ಟಾಯ್.
ಅಲ್ಲಿ ಹೋಗುವುದರೊಳಗೆ ಅಡ್ಡಿ
ಸಂಗೀತ ನಿರ್ದೇಶಕರದ್ದು, ಕಲಾತ್ಮಕ ಚಿತ್ರಗಳದ್ದು.
ಗುರಿ ಅಂಧಕಾರದಲ್ಲಿ ಇದೆ ಅನಿಸುತ್ತದೆ.
ಹಾದಿಯಲ್ಲಿ ನಡೆಯುವುದೇ ಬೇಡ
ಹಿಂತಿರುಗೋಣವೆಂದರೆ ಅಸಾಧ್ಯದ ಮಾತು.
ಎಲ್ಲವನ್ನೂ ನಿಭಾಯಿಸಲೆ?
ಅಥವಾ ಆಟ ಡ್ರಾ ಮಾಡಿಕೊಳ್ಳಲೆ?
ಬ್ರಹ್ಮಚರ್ಯ ಸೋತಾಗ ಮನಸ್ಸು – ದೇಹ ಶಾಂತ.
ಸಜ್ಜಾಗುತ್ತೇನೆ, ಕಾಯುತ್ತೇನೆ
ಹೊಸ ಬದುಕುವ ಶೈಲಿಗೆ.
ಕನಸು ಬರೆಯುವುದು, ಟೆಲಿಪತಿ, ಪ್ಲಾಂಚೆಟ್, ಬ್ಲಾಂಕ್ ಕಾಲ್ಸ್
ನೂರಾರು ಪ್ರಯೋಗಗಳನ್ನು ಮಾಡುತ್ತೇನೆ.
ಗೆಲ್ಲುತ್ತೇನೆಯೆ ಎಂಬ ಪ್ರಶ್ನೆಯ ಉತ್ತರದಲ್ಲಿ
X – factor ಹಾಗೆಯೇ ಉಳಿಯುತ್ತದೆ.
ಥ್ಯಾಂಕ್ಸ್…ಕೆಂಡಸಂಪಿಗೆ
July 26, 2009


ಬ್ಲಾಗ್ ಲೋಕದಲ್ಲಿ ಹೊಸ ಕಿತಾಪತಿಗಳ ಜಗತ್ತೊಂದನ್ನ ಹುಟ್ಟುಹಾಕಿದ್ದಾರೆ ಸುಘೋಷ್ ನಿಗಳೆ. ‘ಕಾಷಿಯಸ್ ಮೈಂಡ್’ ಅವರ ಈ ಜಗತ್ತಿನ ಹೆಸರು. ದೇವರಿಗೇ ಪತ್ರ ಬರೆದು ಇಲ್ಲಿನ ಮಾಧ್ಯಮದವರ ಬಗ್ಗೆ ವರದಿ ಒಪ್ಪಿಸುತ್ತಿರುವ ಸುಘೋಷ್ , ಒಮ್ಮೆ ಹಾಗೇ ಭೂಲೋಕಕ್ಕೆ ಬರಬಾರದ? ಅಂತ ಮನವಿ ಮಾಡುತ್ತಿದ್ದಾರೆ. ಹಾಗೇ, ಕಣ್ಮರೆಯಾಗುತ್ತಿರುವ ಸಾವಯವ ಕೃಷಿಯ ಬಗ್ಗೆ ಒಂದು ಪುಟ್ಟ ಬರಹವಿದೆ.
ಈಗಷ್ಟೇ ಆರಂಭವಾಗಿರುವ ಈ ಲೋಕವನ್ನ ಒಮ್ಮೆ ನೋಡಿಬನ್ನಿ.
ಕಣ್ಮರೆಯಾಗಿದೆ ಸಾವಯವ ಕೃಷಿ.
July 25, 2009
ಉತ್ರಿ ಬಿಳಿ ಜೋಳ ಬಿತ್ರಿ ನಾ ಬರದಿದ್ರ ನೀವ್ ಸತ್ರಿ Leave a comment
ರಾಜ್ಯದಲ್ಲಿ ಕೃಷಿಯ ಕುರಿತು ಸರ್ಕಾರದ ಗೊಂದಲ ನೀತಿ ಮತ್ತೊಮ್ಮೆ ಬಯಲಾಗಿದೆ. ಕಳೆದ ಬಾರಿ ಗೊಬ್ಬರ ಗಲಾಟೆಯಾದಾಗ ಗೋಲಿಬಾರ್ ಮೂಲಕ ಪ್ರತಿಭಟನೆ ಹತ್ತಿಕ್ಕಿದ್ದ ಸರ್ಕಾರ, ಬಳಿಕ ಸಹಜ ಹಾಗೂ ಸಾವಯವ ಕೃಷಿಯ ಜಪ ಮಾಡಿತ್ತು. ಸಾವಯವ ಕೃಷಿಯನ್ನು ಪ್ರೋತ್ಸಾಹಿಸಬೇಕು ಎಂದು ಬೊಬ್ಬಿಡುತ್ತ, ಸಹಜ ಕೃಷಿ ಪರಿಣಿತ ಸುಭಾಷ್ ಪಾಳೆಕರ್ ಅವರನ್ನು ಶಾಸಕರ ಭವನಕ್ಕೆ ಕರೆಸಿ ನಾಲ್ಕಾರು ಶಾಸಕರೆದುರು ಉಪನ್ಯಾಸ ನೀಡಿಸಿತ್ತು. ಆ ಮೂಲಕ ತನಗೆ ಸಹಜ ಹಾಗೂ ಸಾವಯವ ಕೃಷಿಯ ನಡುವಿನ ವ್ಯತ್ಯಾಸದ ಅರಿವಿಲ್ಲ ಎಂದು ಪರೋಕ್ಷವಾಗಿ ಸಾರಿತ್ತು. ಇದು ಸಾಲದೆಂಬಂತೆ, ರಾಜ್ಯದ ಎಲ್ಲ ರೈತರನ್ನೂ ವಿಧಾನ ಸೌಧಕ್ಕೆ ಕರೆಸಿಕೊಂಡು ಸಾವಯವ ಕೃಷಿ ಮಾಡುವುದಾಗಿ ಆಣೆ-ಪ್ರಮಾಣ ಮಾಡಿಸಿಕೊಂಡಿತ್ತು.
ಆದರೆ ಇಂದು ರೈತರ ಬೆರಳಿಗೆ ಚುನಾವಣಾ ಶಾಯಿ ಹಚ್ಚಿ ಗೊಬ್ಬರ ವಿತರಿಸುತ್ತಿದೆ. ಇದನ್ನು ಗಮನಿಸಿದರೆ ಸರ್ಕಾರದ ಮೂರ್ಖತನಕ್ಕೆ ಕೊನೆಯೇ ಇಲ್ಲವೆನೋ ಅನಿಸುತ್ತದೆ.

ಹಲವಾರು ವರ್ಷಗಳಿಂದ ರಸಗೊಬ್ಬರವನ್ನು ಬಳಸಿ ಉಳುಮೆ ಮಾಡುತ್ತಿರುವ ರೈತ ಒಮ್ಮಿಂದೊಮ್ಮೆಗೆ ಸಾವಯವ ಕೃಷಿಯನ್ನು ಅಳವಡಿಸಿಕೊಳ್ಳುವುದು ಕಷ್ಟಸಾಧ್ಯ. ಆದರೆ, ಕಳೆದ ಬಾರಿ ಸಾವಯವ ಕೃಷಿಯನ್ನು ಅಮೂಲ್ಯ ನಿಧಿಯೆಂಬಂತೆ ಕಂಡಿದ್ದ ಸರ್ಕಾರ, ಈ ಬಾರಿ ಆ ಕುರಿತು ಚಕಾರವನ್ನೇ ಎತ್ತಿಲ್ಲ. ಕನಿಷ್ಟ, ಈ ಬಾರಿ ಸಾವಯವ ಕೃಷಿಯನ್ನು ನೂತನವಾಗಿ ಅಳವಡಿಸಿಕೊಂಡಿರುವ ರೈತರ ಸಂಖ್ಯೆ ಎಷ್ಟು, ಅವರ ಅನುಭವ ಹೇಗಿದೆ, ಎದುರಿಸಿದ ಸವಾಲು-ಸಮಸ್ಯೆಗಳು, ಅವಕ್ಕೆ ಪರಿಹಾರ ಕಂಡುಕೊಂಡ ಬಗೆ, ಈ ಪ್ರಕ್ರಿಯೆಯಲ್ಲಿ ಸರ್ಕಾರ, ಕೃಷಿ ಇಲಾಖೆ, ಸ್ವಸಹಾಯ ಗುಂಪುಗಳ ಪಾತ್ರ ಇತ್ಯಾದಿ ಮಾಹಿತಿಯನ್ನು ಕೃಷಿ ಇಲಾಖೆ ಪ್ರಚಾರ ಪಡಿಸಿದರೆ, ಈಗಲೂ ರಾಸಾಯನಿಕ ಗೊಬ್ಬರ ಬಳಸುತ್ತಿರುವ ರೈತರಿಗೆ ದಾರಿದೀಪವಾಗುತ್ತದೆ. ಆದರೆ, ಸರ್ಕಾರ ಮಾತ್ರ ಮುಗುಮ್ಮಾಗಿ ಕುಳಿತಿದ್ದು, ಕಳೆದ ಬಾರಿ ಸಹಜ-ಸಾವಯವ ಕೃಷಿಯ ಹೆಸರಿನಲ್ಲಿ ಮಾಡಿದ ಖರ್ಚು, ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಬರದ ಸಮಯದಲ್ಲಿ ವಿದೇಶ ಪ್ರವಾಸಕ್ಕೆ ತೆರಳುವ ಕೇಂದ್ರ ಕೃಷಿ ಸಚಿವ ಹಾಗೂ ಕೃಷಿಯ ಒಳಹೊರಗನ್ನು ಇಡೀ ಭೂಮಂಡಲದಲ್ಲಿ ತಾವೊಬ್ಬರೆ ತಿಳಿದುಕೊಂಡಿರುವ ಹಾಗೆ ವರ್ತಿಸುವ ರಾಜ್ಯ ಕೃಷಿ ಸಚಿವರ ಮಧ್ಯೆ, ರೈತರನ್ನು ದೇವರೇ ಕಾಪಡಬೇಕು. ಕೆಎಚ್ ಬಿ ಹಗರಣವನ್ನು ನೋಡಿದರೆ, ಭೂಮಿಯ ಬಗ್ಗೆ ಇರುವ ಪ್ರೀತಿ, ಭೂ ಒಡೆಯನ ಬಗ್ಗೆ ಇಲ್ಲವಲ್ಲ ಎಂದು ಖೇದವೆನಿಸುತ್ತದೆ.
ಕಾಷಿಯಸ್ ಮೈಂಡ್ – ನನ್ನ ಕಿತಾಪತಿಗಳ ಜಗತ್ತು!!!
July 24, 2009

ಆದರಣೀಯ ದೇವರಿಗೆ,
24-07-09
ಬನಶಂಕರಿ, ಬೆಂಗಳೂರು.
ಸುಘೋಷನು ಮಾಡುವ ನಮಸ್ಕಾರಗಳು. ಉ.ಕು. ತರುವಾಯ. ನಾನು ಚೆನ್ನಾಗಿದ್ದೇನೆ. ನೀನೂ ಸಹ ಚೆನ್ನಾಗಿರುವಿಯೆಂದು ಭಾವಿಸಿದ್ದೇನೆ. ಅಂದ ಹಾಗೆ ನನ್ನ ಹೊಸ ಪ್ರಯತ್ನವನ್ನು ತಿಳಿಸಲೊಸುಗ ಈ ಪತ್ರವು.
ಹಲವು ವರ್ಷಗಳು ಕಳೆಯಿತು. ಇನ್ನಾದರೂ ಮುನಿಸು ಬಿಟ್ಟು ಪತ್ರ ಬರೆಯೋಣ ಎಂದುಕೊಂಡೆ. ನಿನ್ನ ಅಸ್ತಿತ್ವದ ಬಗ್ಗೆ ಪರ-ವಿರೋಧ ವಾಗ್ವಾದ ಮಾಡುವವರು ಇನ್ನೂ ಭೂಮಂಡಲದಲ್ಲಿ ಇದ್ದಾರೆ. ನಾನೂ ಎರಡೂ ಗುಂಪಿಗೆ ಸೇರಿಲ್ಲ. ಹೀಗಾಗಿ ನಿನಗೆ ಪತ್ರ ಬರೆದು ನನ್ನ ಸ್ಥಿತಿ-ಗತಿಯನ್ನು ತಿಳಿಸಿದರೆ, ನನ್ನ ಅಪ್ಪನ ಗಂಟೆನೂ ಹೋಗುವುದಿಲ್ಲವಲ್ಲ ಎಂಬ ಕಾರಣದಿಂದ ಪತ್ರ ಟೈಪಿಸುತ್ತಿರುವೆ.
ಓ ದೇವನೆ, ಈ ಪಾಪಿ ದುನಿಯಾಕ್ಕೆ ನಾನು ಎಂಟ್ರಿ ಪಡೆದು ಎರಡೂವರೆ ದಶಕಗಳಿಗೂ ಮೆಲಾಗಿದೆ. ಕಾಲಕಾಲಕ್ಕೆ ಅನ್ನ, ನೀರು, ವಾಯು, ಅಂಗವಸ್ತ್ರ, ಇತ್ಯಾದಿ ಧರ್ಮ, ಅರ್ಥ, ಕಾಮಾಕಾಂಕ್ಷೆಗಳನೆಲ್ಲ ಮನಃಪೂರ್ವಕವಾಗಿ ಅನುಭವಿಸುತ್ತಿರುವೆ. ಇರಲಿ. ಆ ಕುರಿತು ಮತ್ತೆ ಹೇಳುತ್ತೇನೆ.
ಈ ಪತ್ರ ಬರೆಯಲು ಮುಖ್ಯ ಕಾರಣವೆಂದರೆ, ರಾಜ್ಯದಲ್ಲಿ ಅಷ್ಟೇ ಏಕೆ ಇಡೀ ದೇಶದಲ್ಲೇ ಮೀಡಿಯಾದ ಪರಿಸ್ಥಿತಿ ಕುಲಗೆಟ್ಟುಹೋಗಿದೆ. ಕೆಲ ಪತ್ರಕರ್ತರು ಆರೋಗ್ಯಕರ ಪತ್ರಿಕೋದ್ಯಮದ ತಲೆಯನ್ನು ಚೊಕ್ಕವಾಗಿ ಬೋಳಿಸಿ, ಉಂಡೆ ನಾಮ ತಿಕ್ಕಿದ್ದಾರೆ. ಜನರಲ್ಲಿ ಮೀಡಿಯಾ ಕುರಿತಂತೆ ಗೌರವ ಭರದಿಂದ ಕಡಿಮೆಯಾಗುತ್ತಿದೆ. ರಾಜಕಾರಣಿಗಳು ಪತ್ರಕರ್ತರನ್ನು “ಏನ್ ಬ್ರದರ್” ಅಂತಲೂ, ಪತ್ರಕರ್ತರು ರಾಜಕಾರಣಿಗಳನ್ನು “ಅಣ್ಣಾ…” ಎಂತಲೂ ಸಂಬೋಧಿಸಿ ಪರಸ್ಪರರ ನಡುವಿನ ಅನ್ಯೋನ್ಯತೆಯನ್ನು ಹೆಚ್ಚಿಸಿಕೊಂಡಿದ್ದಾರೆ. ರಾಜಕಾರಣಿಗಳು ಮಾಡಲು ಬೇರೆನೂ ಕೆಲಸವಿಲ್ಲವಾಗಿ, ತಮಗಿಷ್ಟಬಂದಂತೆ ಟಿವಿ ಚಾನೆಲ್ ಗಳನ್ನು ತೆಗೆಯುತ್ತಿದ್ದಾರೆ. ದೆಹಲಿಯಂತಹ ಪ್ರದೇಶದಲ್ಲಿ ಯಾವುದೇ ಸಾಮಾನ್ಯ ಪತ್ರಿಕಾಗೋಷ್ಟಿಗೆ ಕನಿಷ್ಟ 45 ಕ್ಯಾಮೆರಗಳು ಸಾಲಾಗಿ ನಿಲ್ಲುತ್ತಿವೆ. ದೇಶದ ಪ್ರತಿಷ್ಠಿತ ಪತ್ರಿಕೋದ್ಯಮ ಕಾಲೇಜುಗಳಿಂದ ಬುಳುಬುಳು ಹೊರಬೀಳುತ್ತಿರುವ ಕನ್ಯೆಯರು, ರಾಷ್ಟ್ರೀಯ ವಾಹಿನಿಗಳ ಆರಂಕಿ ಸಂಬಳವನ್ನು ತಮ್ಮ ಕಿರುಬೆರಳಿನ ಚೂಪಾದ ಉಗುರಿನಿಂದ ಧಿಕ್ಕರಿಸಿ, ಕಾರ್ಪೋರೇಟ್ ವಲಯದಲ್ಲಿ ಪಿಆರ್ ಓ ಗಳಾಗಿ ಮೆರೆಯುತ್ತಿದ್ದಾರೆ. ಸ್ಟಿಂಗ್ ಆಪರೇಷನ್ ಎಂಬ ಹೊಸ ಶಾಖೆಯೊಂದು ಪ್ರಾರಂಭಗೊಂಡಿದ್ದು, ಪತ್ರಕರ್ತರು ಹಾಗೂ ಭ್ರಷ್ಟರು ಒಟ್ಟೊಟ್ಟಿಗೆ ಸಮಾಜವನ್ನು ತಿನ್ನಲು ಇಂಬು ಸಿಕ್ಕಿದೆ. ಮುದ್ರಣ ಮಾಧ್ಯಮದಲ್ಲಿ ಸರಿಯಾಗಿ ಅರ್ಕಾವತ್ತು ಕೊಡಲು ಬಾರದ ಪೋರರು ಸಬ್ ಎಡಿಟರುಗಳಾಗಿ ಭರ್ತಿಗೊಂಡು, ಪ್ರೋ. ಜಿ. ವೆಂಕಟಸುಬ್ಬಯ್ಯನಂತಹವರಿಗೆ ಹೊಸ ಹೊಸ ಪದಪ್ರಯೋಗಗಳ ಹಾಗೂ ಶಬ್ದಗಳ ಪರಿಚಯ ಮಾಡಿಸುತ್ತಿದ್ದಾರೆ. ಇರಲಿ. ಈ ಬಗ್ಗೆ ಇನ್ನೂ ಹೆಚ್ಚು ಬರೆಯುವುದು ನನ್ನ ಆರೋಗ್ಯಕ್ಕೂ ನಿನ್ನ ಆರೋಗ್ಯಕ್ಕೂ ಒಳ್ಳೆಯದಲ್ಲವೆಂದು ನಾ ಬಲ್ಲೆ ಅದರಿಂದ ಇಲ್ಲೇ ನಿಲ್ಲಿಸುತ್ತೇನೆ.
ದೇವರೇ, ನಿನಗೆ ತಿಳಿದ ಹಾಗೆ ನಾನು ಟೈಮ್ ವೇಸ್ಟ್ ಇಂಡಿಯಾ ಅಲ್ಲಲ್ಲ ಸಾರಿ, ಟೈಮ್ಸ್ ಆಫ್ ಇಂಡಿಯಾ-ಎನ್ಐಇ, ವಿಜಯ್ ಟೈಮ್ಸ್, ಈ ಟಿವಿ, ಎ ಎನ್ ಐ ಹೀಗೆ ಹಲವು ಮಾಧ್ಯಮ ಪ್ರಾಕಾರಗಳಲ್ಲಿ ದುಡಿದು ಒಳ್ಳೆ ಅನುಭವ ಗಳಿಸಿಕೊಂಡಿದ್ದೇನೆ. ಆದರೆ ಪತ್ರಿಕೋದ್ಯಮದ ಏಕತಾನತೆಯಿಂದ ಬೇಸತ್ತು ಇದೀಗ ಕೊಂಚ ಬ್ರೇಕ್ ತೆಗೆದುಕೊಂಡಿರುವುದು ನಿನಗೆ ತಿಳಿದೇ ಇದೆ. ಏನಕೇನ ಪ್ರಕಾರೇಣ, ಕನ್ನಡ ಕಿರುತೆರೆಯಲ್ಲಿ ಚರ್ಚೆ ಹುಟ್ಟುಹಾಕಿರುವ ಮುಕ್ತ ಮುಕ್ತ ಧಾರಾವಾಹಿಯಲ್ಲಿ ಮುಖ್ಯಮಂತ್ರಿಗಳ ಚೊಚ್ಚಲ ಪುತ್ರನಾಗಿ ನಟಿಸಲು ಮೊದಲುಮಾಡಿದ್ದೇನೆ. ಆದರೆ ಹಾಗೇಂದು ಹೇಳಿ ಮೀಡಿಯಾವನ್ನು ಮರೆತಿಲ್ಲ. ನನ್ನ ಬೇರುಗಳೂ ಇನ್ನೂ ಮೀಡಿಯಾದಲ್ಲೇ ಇವೆ. ಟೊಂಗೆಗಳು ಮಾತ್ರ ಬೇರೆಬೇರೆ ಕಡೆಗೆ ಪಸರಿಸುತ್ತಿವೆ.
ಈ ಮಧ್ಯೆ ಕಾಷಿಯಸ್ ಮೈಂಡ್. ವರ್ಡ್ ಪ್ರೆಸ್. ಕಾಮ್ ಬ್ಲಾಗ್ ಆರಂಭಿಸಿ ಕಿತಾಪತಿಯನ್ನು ಮುಂದುವರೆಸಿದ್ದೇನೆ. ಈ ಕಿತಾಪತಿಗೆ ನಿರ್ವಿಘ್ನಂ ಕುರುಮೇ ದೇವ….
ನನ್ನಿಂದ ಒಳ್ಳೆಯ ಲೇಖನ ಬರೆಸು ದೇವ…
ಓದುಗರಿಂದ ಒಳ್ಳೆಯ ಕಾಮೆಂಟ್ ತರಿಸು ದೇವ…
ಮತ್ತೇನೂ ವಿಶೇಷವಿಲ್ಲ. ಅಲ್ಲಿನ ಎಲ್ಲ ಹಿರಿ-ಕಿರಿಯ ದೇವರುಗಳಿಗೆ ನನ್ನ ನಮಸ್ಕಾರಗಳನ್ನು ತಿಳಿಸು.
ಇಂತಿ ನಿನ್ನ
ಸುಘೋಷ್.
ಇದನ್ನೂ ಓದು – ನೀನು ಯಾವಾಗ ಬರುವಿಯೆಂದು ಮುಂಚಿತವಾಗಿ ತಿಳಿಸಿದರೆ ರಿಸೀವ್ ಮಾಡಿಕೊಳ್ಳಲು ನಾನೇ ಬರುವೆ.










ಚಿಠ್ಠೀ ಆಯೀ ಹೈ…