ಲಲಲ

ಚುನಾವಣೆಯ ಸಂದರ್ಭದಲ್ಲಿ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಹರಟೆಹೊಡೆಯುವುದು ಹಲವು ರಾಜಕಾರಣಿಗಳು ಬೆಳಿಸಕೊಂಡು ಬಂದಿರುವ ಸಂಪ್ರದಾಯ. ಜನರ ಜೊತೆ ನೇರ ಸಂಪರ್ಕದ ಮೂಲಕ ಪ್ರಚಾರ ಮಾಡುವುದು ಇದಕ್ಕೆ ಕಾರಣ. ರಾಜಕಾರಣಿಯೊಬ್ಬ ಗ್ರಾಮಸ್ಥನೊಬ್ಬನ ಮನೆಯಲ್ಲಿ ಊಟಮಾಡಿ, ಆತನ ಹೆಗಲ ಮೇಲೆ ಕೈಯಿಟ್ಟು ಬರ್ತೀನಪ್ಪಾ ಎಂದರೆ ಆಗೋಯ್ತು, ಆ ಇಡೀ ಗ್ರಾಮದ ಓಟೆಲ್ಲ ಆ ರಾಜಕಾರಣಿಗೇ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಕೂಡ ಗ್ರಾಮಗಳೆಂದರೆ ಅಚ್ಚುಮೆಚ್ಚು. ಸಿದ್ದು ಗ್ರಾಮಗಳಿಗೆ ಭೇಟಿ ನೀಡಿದರೆ ಜನ ಅವರನ್ನು ಕರೆಯುವುದು ‘ಅಣ್ಣಾ’ ಎಂದೇ.

ಹೀಗಿದ್ದರೂ, ಗ್ರಾಮಗಳಿಗೆ ಭೇಟಿ ನೀಡುವುದೆಂದರೆ ಅವರಿಗೆ ಅದೇನೋ ಹೆದರಿಕೆ. ಹಿಂದೊಮ್ಮೆ ವಿಧಾನಸಭೆಯ ಮೊಗಸಾಲೆಯಲ್ಲಿ ಇದರ ಕಾರಣವನ್ನು ಅವರೇ ಹೇಳಿದ್ದರು. ತಮ್ಮ ಉಪಚುನಾವಣೆಯ ಸಂದರ್ಭದಲ್ಲಿ ಸಿದ್ದು ಗ್ರಾಮಗಳಲ್ಲಿ ಭರ್ಜರಿಯಾಗಿ ಓಡಾಡುತ್ತಿದ್ದರಂತೆ. ಅವರ ಕಾರು ಗ್ರಾಮಕ್ಕೆ ನುಗ್ಗಿದ ತಕ್ಷಣ ಜನರು, ಅದರಲ್ಲೂ ವಿಶೇಷವಾಗಿ ಮಹಿಳೆಯರು, ಕೈಯಲ್ಲಿ ಆರತಿ ತಟ್ಟೆ ಹಿಡಿದು, ಆರತಿ ಬೆಳಗಿ, ಹಣೆಗೆ ತಿಲಕವಿಟ್ಟು ಸಾಂಪ್ರದಾಯಿಕವಾಗಿ ಸ್ವಾಗತಿಸುತ್ತಿದ್ದರು. ಸರಿ, ಅವರ ಸ್ವಾಗತಕ್ಕೆ ಪ್ರತಿಕ್ರಿಯೆಯಾಗಿ ಸಿದ್ದು ಕೂಡ ಹಸಿರು ನೋಟುಗಳನ್ನು ಆರತಿ ತಟ್ಟೆಯಲ್ಲಿ ಹಾಕುತ್ತಿದ್ದರು. ಆರತಿ ಬೆಳಗುವ ಮೂಲಕ ಚೆನ್ನಾಗಿ ದುಡಿಯಬಹುದು ಎಂದು ಅರಿತ ಹೆಂಗೆಳಯರು ಕ್ರಮೇಣ ಸಿದ್ದು ಹೋದ ಕಡೆಯಲ್ಲೆಲ್ಲ ಸಾಂಪ್ರದಾಯಿಕ ಸ್ವಾಗತ ಕೋರಲು ನಾ ಮುಂದು ತಾ ಮುಂದು ಎಂದು ಮುಗಿಬೀಳಲು ಆರಂಭಿಸಿದರಂತೆ.  “ಬೈ ಇಲೆಕ್ಷನ್ ಟೈಮಲ್ಲಿ ಆರತಿ ತಟ್ಟೆಗೆ ಹೀಗೆ ಹಣ ಹಾಕಿ ಒಂದೇ ದಿನದಲ್ಲಿ ನಾನು ಇಪ್ಪತ್ತು ಸಾವಿರ ರೂಪಾಯಿ ಕಳೆದುಕೊಂಡಿದ್ದೇನೆ, ಗೊತ್ತಾ” ಎಂದರು ಸಿದ್ದು.

ಗೊತ್ತಾಯ್ತಾ ಸಿದ್ದುಗೆ ಗ್ರಾಮಗಳೆಂದರೆ ಹೆದರಿಕೆ ಯಾಕೆ ಅಂತ?

About these ads