ಸುಧಾ ವಾರಪತ್ರಿಕೆಯಲ್ಲಿನ ಜಾಣರ ಪೆಟ್ಟಿಗೆ ಅಂಕಣ ಟಿವಿ ಲೋಕದ ವಿಮರ್ಶೆಗೆ ಮೀಸಲು. ಮುಕ್ತ ಮುಕ್ತ ಧಾರಾವಾಹಿಯ ಪಾತ್ರಧಾರಿ ಶಾಂಭವಿ (ಸೀತಾ ಕೋಟೆ) ಕುರಿತಂತೆ ಅಕ್ಟೋಬರ್ 1 ರ ಸಂಚಿಕೆಯಲ್ಲಿ ಪ್ರಕಟವಾಗಿರುವ ಅಭಿಪ್ರಾಯ ಹಾಗೂ ಅಕ್ಟೋಬರ್ 15 ಸಂಚಿಕೆಯಲ್ಲಿ ಪ್ರಕಟವಾಗಿರುವ ಆ ಪತ್ರಕ್ಕೆ ಬಂದಿರುವ ಪ್ರತಿಕ್ರಿಯೆ ಇಲ್ಲಿವೆ.

ಈ ಟಿವಿಯ ‘ಮುಕ್ತ ಮುಕ್ತ’ದಲ್ಲಿ ಶಾಂಭವಿ ಪಾತ್ರದಲ್ಲಿ ಅಭಿನಯಿಸುತ್ತಿರುವ ಸೀತಾ ಕೋಟೆಯವರನ್ನು ಅವರ ಹೆಸರಿನಿಂದ ಕರೆದರೆ ಯಾರೂ ಗುರುತಿಸಲಾರರು. ಆ ಪಾತ್ರದೊಂದಿಗೆ ಅಷ್ಟೊಂದು ತಾದಾತ್ಮ್ಯ ಅವರದು. ಬಹಳ ಗಟ್ಟಿಯಾದ ಪಾತ್ರ ಅದು. ಅಂತಹ ಪಾತ್ರ ಸಿಕ್ಕಿದ್ದಕ್ಕೆ ಸೀತಾ ಕೋಟೆಯವರು ಸೀತಾರಾಂಗೆ ಎಷ್ಟು ಋಣಿಯಾದರೂ ಸಾಲದು. ಮುಕ್ತ ಮುಗಿಯುವವರೆಗೂ ಸೀತಾ ಕೋಟೆ ಮತ್ತೊಂದರಲ್ಲಿ ಅಭಿನಯಿಸಬಾರದಿತ್ತು. ಆದರೆ ಜೋಗಳುದಲ್ಲಿ ಅಭಿನಯಿಸುವ ಮೂಲಕ ಶಾಂಭವಿಯ ಇಮೇಜನ್ನು ಕಡಿಮೆ ಮಾಡಿಕೊಂಡಿದ್ದಾರೆ. ಮತ್ತೊಂದರಲ್ಲಿ ನಟಿಸುವ ತುರ್ತು ಅವರಿಗೇನಿತ್ತು. ಹೇಳಿ-ಕೇಳಿ ಅವರೊಬ್ಬ ನೃತ್ಯಗಾರ್ತಿ. ಉಳಿದ ಸಮಸ್ಯೆ ಕಳೆಯಲು ಅವರಿಗೆ ಸಮಸ್ಯೆ ಏನೂ ಇರಲಿಲ್ಲ. ಈಗ ದುಡಿಯುತ್ತಿರುವುದು ಸಾಲದೆ? ದುಡ್ಡಿನ ಆಸೆಗೆ ಹಾಗೆ ಮಾಡುತ್ತಿರಬಹುದೆ?
-ಜಿ. ರೇಣುಕಾ, ಚಿತ್ರದುರ್ಗ.
——————————————————
ಅ. 1 ರ ಜಾಣರಪೆಟ್ಟಿಗೆಯಲ್ಲಿ ಪ್ರಕಟವಾಗಿರುವ ಜಿ. ರೇಣುಕಾ ಅವರ ಶಾಂಭವಿಗೆ ಬೇಕಿತ್ತೆ ಪತ್ರದಲ್ಲಿ ಸೀತಾ ಕೋಟೆಯವರು ಶಾಂಭವಿ ಪಾತ್ರ ಮಾತ್ರ ಮಾಡಬೇಕು. ಮತ್ಯಾವುದೂ ಬೇಡ ಎಂಬ ಅಭಿಪ್ರಾಯಕ್ಕೆ ನನ್ನ ಪ್ರತಿಕ್ರಿಯೆ. ಪ್ರತಿಯೊಬ್ಬ ಕಲಾವಿದನಿಗೂ ಆತನದೇ/ಆಕೆಯದೇ ವೈಯುಕ್ತಿಕ ಬದುಕು ಎಂಬುದೊಂದಿರುತ್ತದೆ. ತೆರೆಯ ಮೇಲಿನ ಬದುಕಿಗೂ, ವಾಸ್ತವದ ಬದುಕಿಗೂ ಸೂಜಿ ಮೊನೆಯಷ್ಟೂ ಸಂಬಂಧವಿರುವುದಿಲ್ಲ. ತೆರೆಯ ಮೇಲೆ ರಾಜನಾಗಿ ಮೆರೆಯುವ ಕಲಾವಿದ, ವಾಸ್ತವದಲ್ಲಿ ಎರಡೊಪ್ಪತ್ತು ಊಟಕ್ಕೂ ಗತಿ ಇಲ್ಲದವನಾಗಿರುತ್ತಾನೆ. ಇಂತಹ ಸಂದರ್ಭದಲ್ಲಿ ಕಲಾವಿದನೊಬ್ಬ ಹೊಟ್ಟೆಪಾಡಿಗಾಗಿ ಹಲವು ಧಾರಾವಾಹಿಗಳಲ್ಲಿ ನಟಿಸಿದರೆ ತಪ್ಪೇನು
ಕಲಾವಿದರು ಕೋಟ್ಯಂತರ ರೂಪಾಯಿ ದುಡಿಯುತ್ತಾರೆ ಎಂಬ ಭ್ರಮೆ ಬೇಡ. ಜನಪ್ರಿಯತೆ ಎಂಬುದು ನೋಡಲು, ಕೇಳಲಷ್ಟೇ ಚಂದ. ಆದರೆ ಅದು ನಮ್ಮ ಡೈನಿಂಗ್ ಟೇಬಲ್ ಮೇಲೆ ಊಟವನ್ನೇನು ಬಡಿಸುವುದಿಲ್ಲ. ಕೊನೆಯ ಮಾತು…ಪಾತ್ರ ಗಟ್ಟಿಯಿದೆ ಎಂದು ಒಂದೇ ಧಾರಾವಾಹಿಗೆ ಅಂಟಿಕೊಂಡರೆ ಕಲಾವಿದ ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆ ಹಾಕಿಕೊಂಡು ಮಲಗಬೇಕಷ್ಟೇ.
- ನೊಂದ ಕಿರುತೆರೆ ಕಲಾವಿದ, ಬೆಂಗಳೂರು.
—————————————————
ಶಾಂಭವಿಗೆ ಬೇಕಿತ್ತೆ ಎಂಬ ಜಾಣರೊಬ್ಬರ ಟೀಕೆಗೆ ನನ್ನ ಅಭಿಪ್ರಾಯ. ಪ್ರತಿಯೊಬ್ಬ ಕಲಾವಿದರ ವೃತ್ತಿಯೇ ನಟನೆ. ಒಬ್ಬ ಪ್ರತಿಭಾವಂತ ಕಲಾವಿದೆ ತನಗೆ ಯಾವುದೇ ಪಾತ್ರ ನೀಡಿದರೂ ಅದನ್ನು ಅತ್ಯಂತ ಸಹಜವಾಗಿ ಸಮರ್ಥವಾಗಿ ನಿಭಾಯಿಸಬಲ್ಲಳು. ಇಂತಹ ವಿಭಿನ್ನ ಪಾತ್ರಗಳಲ್ಲಿ ನಟಿಸುವುದರಿಂದ ಆಕೆಯ ಇಮೇಜ್ ಹೆಚ್ಚುತ್ತದೆಯೆ ಹೊರತು ಇದರಿಂದ ಆಕೆಯ ಯಶಸ್ಸಿಗೆ ಹಾನಿಯೇನೂ ಇಲ್ಲ. ಅಲ್ಲದೆ ತನಗೆ ಸಿಗುವ ಅವಕಾಶಗಳನ್ನು ಸ್ವೀಕರಿಸುವುದು ಅಥವಾ ತಿರಸ್ಕರಿಸುವುದು ಆಕೆಯ ವೈಯುಕ್ತಿಕ ವಿಷಯ. ಇದನ್ನು ಪ್ರಶ್ನಿಸುವ ಅಧಿಕಾರ ಯಾರಿಗೂ ಇರುವುದಿಲ್ಲ.
- ಶಾಂತಾ ಬೆಂಗಳೂರು.









ಚಿಠ್ಠೀ ಆಯೀ ಹೈ…