We have made it!!

ನೊಣವೇ…..ಐ ಆಮ್ ಸಾರಿ…..

ನಾವು ಚಿಕ್ಕಂದಿನಲ್ಲಿರಬೇಕಾದರೆ ಹಲವು ವಿಚಿತ್ರ ಕೆಲಸಗಳನ್ನು ಮಾಡುತ್ತೇವೆ. ಅವುಗಳಿಗೆ ಸೈಕಾಟ್ರಿಸ್ಟಗಳು ವಿವಿಧ ಕಾಯಿಲೆಗಳ ಕಾರಣ ಕೊಡುತ್ತಾರೆ ಎಂಬುದು ಬೇರೆ ವಿಚಾರ. ಆದರೆ ಎಲ್ಲರೂ ಒಂದಿಲ್ಲ ಒಂದು ಬಾರಿ, ಈ ರೀತಿಯ ಕೆಲಸಗಳನ್ನು ಮಾಡಿರುತ್ತಾರೆ. ಪಾತರಗಿತ್ತಿಯ ರೆಕ್ಕೆಗಳನ್ನು ಕತ್ತರಿಸುವುದು, ‘ಹೆಲಿಕಾಪ್ಟರ್’ ಎಂದು ಮಕ್ಕಳು ಕರೆಯುವ ಹೆಲಿಕಾಪ್ಟರ್ ನಂತೆ ಕಾಣುವ ಕೀಟವನ್ನು ಹಿಡಿದು ಅದಕ್ಕೆ ದಾರ ಕಟ್ಟಿ ಎಳೆಯುವುದು ಇತ್ಯಾದಿ ಈ ಕೆಟೆಗರಿಯಲ್ಲಿ ಬರುತ್ತವೆ.

ನಾನಾಗ ಎಂಟನೇ ಕ್ಲಾಸಿನಲ್ಲಿದ್ದೆ. ವಿದ್ಯುತ್ ಬಗ್ಗೆ ಆಗಷ್ಟೇ ಪಾಠಗಳು ಆರಂಭವಾಗಿದ್ದವು. ತೀರ ಸಣ್ಣವನಿದ್ದಾಗ ಒಮ್ಮೆ ಶಾಕ್ ಹೊಡೆಸಿಕೊಂಡಿದ್ದು ಬಿಟ್ಟರೆ, ವಿದ್ಯುತ್ ತೀವ್ರತೆ ಅಷ್ಟೊಂದು ಅರ್ಥವಾಗಿರಲಿಲ್ಲ. ಹೀಗಾಗಿ ಆ ವಿದ್ಯುತ್ ಬಗ್ಗೆ ತೀವ್ರವಾದ ಆಸಕ್ತಿ ಹುಟ್ಟಿಕೊಂಡುಬಿಟ್ಟಿತ್ತು. ಇಂತಿಪ್ಪ ಸಂದರ್ಭದಲ್ಲಿ, ಆಗಷ್ಟೇ ನೊಣಗಳನ್ನು ಕೈಯಲ್ಲಿ ಛಕ್ ಎಂದು ಹಿಡಿಯುವ ಅನಗತ್ಯ, ಬೇಡವಾದ ಕಲೆಯನ್ನು ಸಿದ್ಧಿಸಿಕೊಂಡಿದ್ದೆ.

ಆಗ ಹೊಳೆದ ಐಡಿಯಾನೇ ನೊಣಕ್ಕೆ ಶಾಕ್ ಹೊಡೆಸಿ ಕೊಲ್ಲುವುದು.

ನಾನು ಮಾಡುತ್ತಿದ್ದುದ್ದು ಇಷ್ಟೆ. ಮೊದಲು ನೊಣವನ್ನು ಹಿಡಿಯುತ್ತಿದ್ದೆ. ನಂತರ ಅದನ್ನು ಎರಡೂ ಬೆರಳುಗಳಲ್ಲಿ ಹಿಡಿದು ಸಾಕೆಟ್ ನೊಳಗೆ ತೂರಿಸುತ್ತಿದ್ದೆ. ಸ್ವಿಚ್ ಆನ್ ಮಾಡುತ್ತಿದ್ದೆ. ಕ್ಷಣಾರ್ಧದಲ್ಲಿ ಅದರ ಪ್ರಾಣನೊಣ ಹಾರಿಹೋಗುತ್ತಿತ್ತು. ಇಟ್ ವಾಸ್ ಆಸ್ ಸಿಂಪಲ್ ಆಸ್ ದಾಟ್. ಇಷ್ಟರಲ್ಲಿ ಒಂದು ಅಚಾತುರ್ಯ ನಡೆದು ಹೋಯಿತು. ಉಳಿದ ನೊಣಗಳು ನಾನು ಹೀಗೆ ಮಾಡುವುದನ್ನು ನೋಡಿ ಬಿಟ್ಟವು. ಈ ಬಾರಿ ನಾನು ನೊಣವನ್ನು ಸಾಕೆಟ್ ನಲ್ಲಿ ತೂರಿಸಿ, ಇನ್ನೇನು ಸ್ವಿಚ್ ಅದುಮಬೇಕು ಅನ್ನುವಷ್ಟರಲ್ಲಿ ತೂತಿನೊಳಗಿನಿಂದ ಹೊರಬಂದು ಹಾರಿಹೋಗತೊಡಗಿದವು.

ನಾನು ಸೋಲೊಪ್ಪಿಕೊಳ್ಳುವ ಮಾತೇ ಇರಲಿಲ್ಲ. ಯಕಶ್ಚಿತ್ ನೊಣದ ಎದುರಿಗೆ ಸೋಲುವುದುಂಟೆ? ಸಾಧ್ಯವಿಲ್ಲ, ಸಾಧ್ಯವಿಲ್ಲ. ಅದಕ್ಕೆ ಉಪಾಯ ಮಾಡಿದೆ. ನೊಣವನ್ನು ಸಾಕೆಟ್ ನಲ್ಲಿ ತೂರಿಸಿ, ಅದು ಹೊರ ಬರುವಾಗ ಬೆಂಕಿಕಡ್ಡಿಯಿಂದ ಒಳಗೇ ಒತ್ತಿ ಹಿಡಿಯುತ್ತಿದ್ದೆ. ಆಮೇಲೆ ಸ್ವಿಚ್ ಅದುಮಿದರೆ ನೊಣ ಸತ್ತುಹೋಗುತ್ತಿತ್ತು. ಹೀಗೆ ಸಾಗಿತ್ತು ನನ್ನ ಆಟ. ಆಮೇಲೆ ಏನೋ ಆಗಿ ಆ ಬೆಂಕಿಕಡ್ಡಿ ಮುರಿದು ಹೋಗಿಬಿಟ್ಟಿತು.

ಆಗ ನಾನು ಮತ್ತೊಂದು ಬೆಂಕಿಕಡ್ಡಿ ತೆಗೆದುಕೊಳ್ಳಲು ಅಡಿಗೆ ಮನೆಗೆ ಹೋದೆ. ಬೆಂಕಿಪೊಟ್ಟಣ ಖಾಲಿಯಾಗಿತ್ತು. ಹೀಗಾಗಿ ಮತ್ತೆ ರೂಮಿಗೆ ಬಂದು ಗುಂಡುಸೂಜಿಯೊಂದನ್ನು ತೆಗೆದುಕೊಂಡೆ. ನೊಣ ಹಿಡಿದೆ. ಸಾಕೆಟ್ ನೊಳಗೆ ತೂರಿಸಿದೆ. ಅದು ಹೊರಬರಲು ನೋಡಿತು. ಗುಂಡುಸೂಜಿಯಿಂದ ಒಳಗೆ ಒತ್ತಿ ಹಿಡಿದೆ. ಸ್ವಿಚ್ ಅದುಮಿದೆ. ಅಷ್ಟೇ….ಭಡ್…..ಎಂದು ಹೊಡೆಯಿತು ನೋಡಿ ಶಾಕ್. ನಾನೆಲ್ಲೊ, ನೊಣವೆಲ್ಲೋ, ಗುಂಡುಸೂಜಿಯೆಲ್ಲೋ……..ಒಂದು ಕ್ಷಣ ಏನಾಯಿತೆಂದು ಗೊತ್ತಾಗಲಿಲ್ಲ. ಕೈಗೆ ಸರಿಯಾಗಿ ಶಾಕ್ ಹೊಡೆದಿತ್ತು. ನಾನು ಮಾಡಿದ ಪಾಪಕ್ಕೆ ಸರಿಯಾಗಿ ಪ್ರಾಯಶ್ಚಿತ್ತವಾಗಿತ್ತು. ವಿದ್ಯುತ್ ಅವಾಹಕವಾದ ಬೆಂಕಿಕಡ್ಡಿಯ ಮುಖಾಂತರ ವಿದ್ಯುತ್ ಹರಿದಿರಲಿಲ್ಲ. ಆದರೆ ಕಬ್ಬಿಣದ ಗುಂಡುಸೂಜಿಯಿಂದ ವಿದ್ಯುತ್ ಸಡನ್ ಆಗಿ ಹರಿದಿತ್ತು.

ಇಂದಿಗೂ ಅಂತಹ ಆಟ ಆಡಿದ್ದಕ್ಕೆ ನನಗೆ ಖೇದವಿದೆ. ಆದರೆ ಹುಡುಗ ಮನಸ್ಸಿಗೆ ಅದ್ಯಾವುದೂ ಗೊತ್ತಾಗುತ್ತಿರಲಿಲ್ಲ. ದೇವರು ಮಾತ್ರ ಸರಿಯಾಗಿ ಶಿಕ್ಷೆ ನೀಡಿದ್ದ. ಇಂದು ಮಾತ್ರ ನಾನು ಭಾರೀ ಪ್ರಾಣಿಪ್ರಿಯನಾಗಿದ್ದೇನೆ. ನಾನು ಮನೆಯಿಂದ ಹೊರಬಿದ್ದ ತಕ್ಷಣ ಬೀದಿನಾಯಿಗಳು ಬಂದು ಬಾಲವಲ್ಲಾಡಿಸುತ್ತ ನಿಲ್ಲುತ್ತವೆ. ಯಾರ ಬಳಿಯೂ ಹೋಗದ ಇತರರ ಮನೆಯ ಬೆಕ್ಕುಗಳು ನನ್ನ ತೊಡೆಯ ಮೇಲೆ ಬಂದು ಕೂರುತ್ತವೆ. ನಾನು ಇಂದಿಗೂ ಕೂಡ ಸೊಳ್ಳೆಯನ್ನು ಅನಿವಾರ್ಯವಾಗಿಲ್ಲವಾದರೆ ಹೊಡೆಯುವುದಿಲ್ಲ. ಹಾಗೇ…..ನೊಣಕ್ಕೆ ಒಂದೇ ಮಾತು ಹೇಳುತ್ತೇನೆ…..

ನೊಣವೇ…ಐ ಆಮ್ ಸಾರಿ……

ಕಾರ್ಲ್ಟನ್ ಟಾವರ್ ದುರಂತ; ಮಾಧ್ಯಮದವರ ಕಿರಿಕಿರಿ

ಕೃಪೆ – ವಿಜಯ ಕರ್ನಾಟಕ

ಎಂ ಎಸ್ ವರ್ಡ್ ಫೈಲ್ ಕಾಪಿ ಮಾಡುವುದು ಹೀಗೆ…

ಹೆಂಗಸರು ಏನು, ಹೇಗೆ, ಎಷ್ಟು ವಿಚಾರ ಮಾಡುತ್ತಾರೆ?

ಶಶಿ ಜೋಯಿಸ್ ಅವರ ಕೃಪೆಯಿಂದ…..

The following diagram demonstrates the THOUGHTS in male and female brain during the simple question, “Shall we go for a party?”

ಟರ್ನಿಂಗ್ ಪಾಯಿಂಟ್ ಸ್ಟೋರಿ, ಟೋಪಿ ಹಾಕುವ ಹೊಸ ಪರಿ

ಚಿತ್ರರಂಗದಲ್ಲಿ ಆಗುವ ತರಲೆ, ತಾಪತ್ರಯ, ಟೋಪಿ ಹಾಕುವ ಹೊಸ ಹೊಸ ಪದ್ಧತಿಗಳ ಆವಿಷ್ಕಾರಗಳು ಒಂದೆರಡಲ್ಲ. ನನಗೆನಿಸುವ ಮಟ್ಟಿಗೆ ರಾಜಕಾರಣಕ್ಕಿಂತ ಒಂದು ಗುಲಗುಂಜಿ ಹೆಚ್ಚು ದಗಲಬಾಜಿಗಳು ಚಿತ್ರರಂಗದಲ್ಲಿದ್ದಾರೆಂದು. ಸಹಕಲಾವಿದರೊಬ್ಬರು ಮೊನ್ನೆ ನನಗೆ ಹೇಳಿದ ಘಟನೆ ಇದು.

ಪಾಪ ಆ ಹುಡುಗ ಹಿರೋ ಆಗಬೇಕೆಂದು ಬೆಂಗಳೂರಿಗೆ ಬಂದವನು. ಹೇಗ್ಹೇಗೋ ಮಾಡಿ ಒಬ್ಬ ನಿರ್ದೇಶಕನ ಕಣ್ಣಿಗೆ ಬಿದ್ದ. ಸ್ಕ್ರೀನ್ ಟೆಸ್ಟ್ ನೀಡಿದ ಬಳಿಕ ನಿರ್ದೇಶಕ ಹೇಳಿದ್ದಿಷ್ಟು, “ನೀನು ತುಂಬಾ ಚೆನ್ನಾಗಿ ಆಕ್ಟ್ ಮಾಡ್ತೀಯಾ. ನಿನ್ನಂಥವರನ್ನೇ ಗಾಂಧಿ ನಗರ ಆರಿಸಿಕೊಳ್ಳುತ್ತದೆ. ನೀನು ಸರಿಯಾದ ಟೈಮ್ ಗೆ ಬಂದಿದೀಯಾ. ನಾನೊಂದು ಹೊಸ ಚಿತ್ರ ನಿರ್ದೇಶನ ಮಾಡ್ತಾ ಇದ್ದೇನೆ. ಅದರಲ್ಲಿ ಒಂದು ಅದ್ಭುತ ಪಾತ್ರವಿದೆ. ಅದು ಟರ್ನಿಂಗ್ ಪಾಯಿಂಟ್ ನಲ್ಲಿ ಬರುವ ಪಾತ್ರ. ಆದರೆ ಅದಕ್ಕಾಗಿ ನೀನು ಸ್ವಲ್ಪ ಖರ್ಚು ಮಾಡಬೇಕಾಗುತ್ತೆ”  ಎಂದು ಹೇಳಿ ಹುಡಗನಿಂದ ಸಾಕಷ್ಟು ಹಣ ಕಕ್ಕಿಸಿಕೊಂಡಿದ್ದಾನೆ. ಹುಡುಗ ಫೋನ್ ಮಾಡಿದಾಗಲೆಲ್ಲ ಅಂದು ಶೂಟಿಂಗ್ ಇಂದು ಶೂಟಿಂಗ್ ಎಂದು ಹೇಳಿ ಮುಂದೆ ಹಾಕಿದ್ದಾನೆ ನಿರ್ದೇಶಕ ಮಹಾಶಯ. ಅಂತೂ ಕೊನೆಗೊಂದು ದಿನ ಶೂಟಿಂಗ್ ಆರಂಭವಾಗಿದೆ. ಹುಡಗನಿಗೋ ಖುಷಿಯೋ ಖುಷಿ.

ಮೊದಲ ದಿನ ತೀರ ಉತ್ಸಾಹದಿಂದಲೇ ಹೊಸ ಡ್ರೆಸ್ ಹಾಕಿಕೊಂಡು ಶೂಟಿಂಗ್ ಗೆ ಹೋಗಿದ್ದಾನೆ. ಅಂದು ಭೇಟಿಯಾದ ನಿರ್ದೇಶಕ, “ಆಕ್ಟರ್ ಗಳು ಹೇಗೆ ಪಾತ್ರ ಮಾಡುತ್ತಾರೆ ಗಮನಿಸು. ನೀನು ತುಂಬಾ ಕಲಿಯಬೇಕು. ನಿನ್ನದು ಟರ್ನಿಂಗ್ ಪಾಯಿಂಟ್ ನಲ್ಲಿ ಬರುವ ಪಾತ್ರ ಹೀಗಾಗಿ ಚೆನ್ನಾಗಿ ಬರಬೇಕು” ಎಂದಿದ್ದಾನೆ. ಗೋಣು ಆಡಿಸಿದ ಹುಡುಗ ಬೆಳಿಗ್ಗೆಯಿಂದ ಸಂಜೆಯವರೆಗೆ ಗಮನಿಸುವ ಕೆಲಸ ಮಾಡಿದ್ದಾನೆ. ಹೀಗೆ ಹತ್ತು ದಿನ ಶೂಟಿಂಗ್ ನಡೆದಿದೆ. ಹುಡುಗ ಪ್ರತಿದಿನ ಬೆಳಿಗ್ಗೆ ಸೆಟ್ ಗೆ ಬರುವುದು, ತಿಂಡಿ ತಿನ್ನವುದು, ಗಮನಿಸುವುದು, ಕಾಫಿ ಕುಡಿಯುವುದು, ಗಮನಿಸುವುದು, ಮಧ್ಯಾಹ್ನದ ಊಟ ಮಾಡುವುದು ಗಮನಿಸುವುದು, ಸಂಜೆ ತಿಂಡಿ ತಿನ್ನುವುದು ಗಮನಿಸುವುದು ಇದೇ ಕೆಲಸ ಮಾಡಿದ್ದಾನೆ. ಆದರೂ ತಾಳ್ಮೆ ಕಳೆದುಕೊಂಡಿಲ್ಲ. ಟರ್ನಿಂಗ್ ಪಾಯಿಂಟ್ ನಲ್ಲಿ ಬರುವ ಪಾತ್ರ ತಾನೆ?

ಅಂತೂ ಇಂತೂ ಹಲವು ದಿನಗಳ ಶೂಟಿಂಗ್ ಬಳಿಕ ಈತನ ಪಾತ್ರ ಬಂದಿದೆ. ಅಂದು ವಿಶೇಷವಾಗಿ ಸಿದ್ಧವಾಗಿ ಹೋಗಿದ್ದಾನೆ ಹುಡುಗ. ಶೂಟಿಂಗ್ ಲೋಕೆಷನ್ ಫೈನಲೈಸ್ ಆಗಿದ್ದು ನಾಲ್ಕು ರಸ್ತೆ ಕೂಡುವ ಸರ್ಕಲ್ ನಲ್ಲಿ. ಸರ್ಕಲ್ ಮಧ್ಯದಲ್ಲಿ ಹುಡಗನನ್ನು ನಿಲ್ಲಿಸಿದ್ದಾರೆ. ಆ ಕಡೆಯಿಂದ ಹಿರೋ ಬಂದು ಒಂದು ಅಡ್ರೆಸ್ ಕೇಳುತ್ತಾನೆ. ಈತ ಕೈ ತೋರಿಸಿ ಯಾವುದೋ ಒಂದು ರಸ್ತೆಯನ್ನು ತೋರಿಸುತ್ತಾನೆ. ಹುಡುಗ ತೋರಿಸಿದ ರಸ್ತೆಯಲ್ಲಿ ಹಿರೋ ಹೋಗುತ್ತಾನೆ. ಇಷ್ಟೇ ಶೂಟ್ ಆಗಿದ್ದು. ಅದೂ ಲಾಂಗ್ ಶಾಟ್ ನಲ್ಲಿ. ಅಲ್ಲಿಗೆ ಆ ದಿನದ ಶೂಟಿಂಗ್ ಪ್ಯಾಕ್ ಅಪ್ ಆಗಿದೆ. ಹುಡುಗನಿಗೆ ತಲೆ ಬುಡ ಅರ್ಥ ಆಗಿಲ್ಲ. ಸ್ವಲ್ಪ ಬೇಸರಿಸಿಕೊಂಡು “ಇದೇನ್ ಸಾರ್ ಮುಗೀತಾ?” ಅಂತ ನಿರ್ದೇಶಕನನ್ನು ಕೇಳಿದ್ದಾನೆ. ಅದಕ್ಕೆ ನಿರ್ದೇಶಕ “ಹುಂ…ಹೌದು ಮತ್ತೆ. ನಾನು ಹೇಳಿರ್ಲಿಲ್ವಾ ನಿನ್ನದು ಟರ್ನಿಂಗ್ ಪಾಯಿಂಟ್ ನಲ್ಲಿ ಬರುವ ಪಾತ್ರ ಅಂತ. ನೋಡು ಸರ್ಕಲ್ ನಲ್ಲಿ ನೀನು ಹಿರೋಗೆ ರಸ್ತೆ ತೋರಿಸಿದೆಯಲ್ಲ, ಅದು ಕರೆಕ್ಟಾದ ರಸ್ತೆ. ಆತ ಮುಂದೆ ಅದೇ ರಸ್ತೆಯಲ್ಲಿ ಹೋಗಿ ಹಿರೋಯಿನ್ ಳನ್ನು ಮೀಟ್ ಮಾಡುತ್ತಾನೆ. ನೀನು ಅಪ್ಪಿತಪ್ಪಿ ಏನಾದರೂ ಬೇರೆ ರಸ್ತೆ ತೋರಿಸಿದ್ದರೆ ಹಿರೋ ಅಲ್ಲಿಗೇ ಹೋಗಿಬಿಡುತ್ತಿದ್ದ. ಕಥೆ ಬೇರೆ ರೀತಿಯಲ್ಲೇ ಟರ್ನ್ ಪಡೆದುಕೊಳ್ಳುತ್ತಿತ್ತು. ನಾನು ಹೇಳಿದ್ನಲ್ವ ನಿನ್ನದು ಟರ್ನಿಂಗ್ ಪಾಯಿಂಟ್ ಪಾತ್ರ ಅಂತ….”

ನಿರ್ದೇಶಕ ಇನ್ನೂ ಏನೇನೋ ಮುಂದುವರೆಸಿದ್ದಾನೆ. ಹುಡಗನಿಗೆ ತಲೆ ತಿರುಗಿ, ಅಲ್ಲಿಂದ ಕಾಲ್ಕಿತ್ತಿದ್ದಾನೆ.

ಈಗ ಹೇಳಿ ಸೈಜ್ ತೆಗೆದುಕೊಂಡು ಟೊಪ್ಪಿ ಹೊಲೆದು, ಟೊಪ್ಪಿ ಹಾಕುವುದೆಂದರೆ ಇದೇ ತಾನೆ?

ಉಪಸಂಹಾರ -2- ನನ್ನ ಅವಸ್ಥೆಗೆ ಮರುಗಿದವರ ಮಾತುಗಳು

*ಬೇಗ ಚೇತರಿಸಿಕೊಳ್ಳಿ ಸುಘೋಷ್

- ಸಂದೀಪ್ ಕಾಮತ್.

…………………………………………

*Very good narration. keep it up

– ಅವಧಿ

…………………………………………

*ಛೆ ಛೆ ಪಾಪ ಮುಖ್ಯ ಮಂತ್ರಿ ಮಗನಿಗೆ ಹೀಗಾಗಬಾರದಿತ್ತು !!

– ಶಶಿ ಜೋಯಿಸ್

……………………………………………..

*ಸಕತ್ತಾಗಿ End ಮಾಡಿದಿರಾ

– ಗುರುಮೂರ್ತಿ

……………………………………………….

*ಅಬ್ಬಾ..

- ದಿವ್ಯಾ

…………………………………………………

*ತುಂಬಾ ಚೆನ್ನಾಗಿದೆ ಬರಹ. ನಿಮ್ಮ ಅನುಭವ ಮಾಲಿಕೆಯೂ ತುಂಬಾ ಕುತೂಹಲಕಾರಿಯಾಗಿ ಬರ್ತಿದೆ. ಅದೂ ಸಿಸ್ಟರ್ಸ್ ಗಳ ಬಗ್ಗೆ ನಿಮ್ಮ ಮಾತು ಅಕ್ಷರಶಃ ನಿಜ.

ಒಂದು (ಬಿಟ್ಟಿ) ಸಲಹೆ : ನಿಮ್ಮ ಬರಹಗಳಲ್ಲಿ ಇತ್ತೀಚೆಗಂತೂ ತುಂಬಾ ಇಂಗ್ಲೀಷ್ ಪದಗಳು ನುಸುಳಿಕೊಳ್ತಾ ಇದಾವೆ. ಹೆಚ್ಚು ಇಂಗ್ಲೀಷ್ ಪುಸ್ತಕವೇನಾದ್ರೂ ಓದ್ತಿದೀರಾ?:)

– ರಂಜಿತ್

…………………………………………………..

*ಸುಘೋಷ್, ನಿನ್ನೆ ನಿಮ್ಮಿಂದ ಹುಶಾರಿದ್ದಿಲ್ಲ ಎನ್ನುವುದರ ಬಗ್ಗೆ ತಿಳಿದಾಗಿನಿಂದಲೂ ಒಂಥರಾ ಗಿಲ್ಟ್ ಫೀಲ್ ಕಾಡ್ತಾ ಇದೆ. ಒಬ್ಬ ಸಹ ಕಲಾವಿದೆಯಾಗಿ ಜೊತೆಯವರ ಆಗು ಹೋಗುಗಳ ವಿಚಾರವಾಗಿ ಏನೂ ತಿಳಿಯದವಳಾಗಿ ಹೇಗಿದ್ದೇನಲ್ಲಾ ಅಂತ.. ಇತ್ತೀಚಿಗೆ ಬ್ಲಾಗುಗಳಿಗೂ ತುಂಬಾ ಕಡಿಮೆ ಭೇಟಿ ಕೊಡುತ್ತೇನಾದ್ದರಿಂದ ನಿಮ್ ಬ್ಲಾಗಿಗೆ ಬಂದೇ ಇಲ್ಲ, ಹೀಗಾಗಿ ಈ ಮುಖಾಂತರವೂ ವಿಷಯ ಗೊತ್ತಾಗುವ ಚಾನ್ಸ್ ತಪ್ಪಿತು.
ತುಂಬಾ ವಿಷದವಾಗಿ ವಿಷಯ ನಿರೂಪಣೆ ಮಾಡಿದ್ದೀರಿ. ನೀವು ಹೇಳುವ ಪರಿ ಚೆಂದ. ಆದರೆ ಅನುಭವಿಸಿದ ನೋವು… ಉಫ್! ಅಂತೂ ಚೇತರಿಸಿಕೊಳ್ಳುತ್ತಿದ್ದೀರಲ್ಲ ಗುಡ್. ಬೇಗ ಮೊದಲಿನ ಹಾಗೆ ದುಂಡಗಾಗಿ ಬೇಗ.:-)

– ಜಯಲಕ್ಷ್ಮಿ ಪಾಟೀಲ್, (ಜಿಪಿ)

……………………………………………………….

*ಬಹುಶ “ಕಲ್ಲು ಕರಗುವ ಸಮಯ” ಶೀರ್ಷಿಕೆ ಸರಿಯಾಗಬಹುದೇನೋ … ಸುಮ್ನೆ ಹೇಳಿದೆ ಬೇಗ ಚೆತರಿಸಿಕೊಳ್ಳಿ ಎಂಬುದು ನಮ್ಮ ಹಾರೈಕೆ

– ಅವಿನಾಶ್ ತೀರ್ಥಹಳ್ಳಿ

…………………………………………………..

*Very Good

– ಶೆಟ್ಟರು

……………………………………………………

*ನಿಜಕ್ಕೆ ತುಂಬಾ ಹತ್ತಿರವಾದ ಬರಹ . ನಿಮ್ಮ ಬರಹ ನೋಡಿ ಅರ್ಥವಾಗುತ್ತೆ ಒಬ್ಬರನೊಬ್ಬರು ಎಷ್ಟು ಪ್ರೀತಿಸ್ತಿರಾ ಅಂತ . ಮಗುಗೆ ಮಾಡೋದು ತಾಯಿಗೆ ಸಹಜವಾದ ಬಂದ ಗುಣ , ಆದರೆ ನಿಜವಾದ ಅರ್ಥದಲ್ಲಿ ಹೆಂಡತಿ, ಗೆಳತಿ ಆಗೋದು , ಸಿಗೋದು ಎಲ್ಲರಿಗೂ ಸಾಧ್ಯ ಇಲ್ಲ ಬಿಡಿ .
ನಿಜ ಹೇಳಬೇಕಂದರೆ ನಮ್ಮಿಬ್ಬರಲ್ಲಿಯೂ ಯಾರು ಮೊದಲು ಪ್ರಪೋಸ್ ಮಾಡಿದರು ಎಂಬ ಭಿನ್ನಾಭಿಪ್ರಾಯ ಇಂದಿಗೂ ಇದೆ .
ನಿಮಗೆ ಬೇಗ ಗುಣಮುಖ ಅಗಲಿ ಎಂದು ಹಾರೈಸುವ

-ಮನಸಾರೆ

………………………………………………..

*ಜನ್ಮಜನ್ಮಾಂತರಕ್ಕೂ ನೀವಿಬ್ಬರೂ ಜೀವನ ಸಂಗಾತಿಗಳಾಗಿರಿ, ಆದರೆ ಹೀಗೆ ಆಸ್ಪತ್ರೆ ಸೇರುವ ಅನಿವಾರ್ಯತೆ ಬರದಿರಲಿ, ಆಗಾಗ ಪ್ರೀತಿ ವ್ಯಕ್ತಪಡಿಸುವ ಮತ್ತು ಅನುಭವಿಸುವ ಅವಕಾಶಗಳು ಹೇರಳವಾಗಲಿ(ಈ ಜನ್ಮಕ್ಕೂ)..:-)

– ಜಯಲಕ್ಷ್ಮಿ ಪಾಟೀಲ (ಜೆಪಿ)

……………………………………………..

ಉಪಸಂಹಾರ -1, ಸರ್ವಂ ಶ್ರೀ ವಾಸುದೇವಾರ್ಪಣಮಸ್ತು

ಜೀವನದಲ್ಲಿ ಆಗುವ ದುರ್ಘಟನೆಗಳಿಗೆ ನೀವು ಯಾವ ಕಾರಣ ಕೊಡುತ್ತೀರಿ? ಜೀವನದಲ್ಲಿ ಘಟಿಸುವ ಸಾವು, ನೋವು, ಆಪರೇಷನ್, ಆಕ್ಸಿಡೆಂಟ್, ಎಲ್ಲದಕ್ಕೂ ಯಾರನ್ನು ಹೊಣೆಮಾಡಬಹುದು? “ನಾನು ನನ್ನ ಬದುಕಿನಲ್ಲಿ ಯಾರಿಗೂ ಅನ್ಯಾಯ ಮಾಡಿಲ್ಲ ಆದರೂ ದೇವರು ನನಗೆ ಈ ಶಿಕ್ಷೆ ಕೊಟ್ಟ” ಎಂದು ಅನ್ನುವವರನ್ನು ನಾವು ನೋಡಿರುತ್ತೇವೆ, ಕೇಳಿರುತ್ತೇವೆ. ಅತ್ಯಂತ ಸಜ್ಜನ, ಸಂಭಾವಿತ ವ್ಯಕ್ತಿಯ ಹೆಂಡತಿ ಒಂದು ದಿನ ಹೇಳದೆ ಕೇಳದೆ ಪಕ್ಕದ ಮನೆಯ ಹುಡುಗನೊಬ್ಬನೊಂದಿಗೆ ಓಡಿ ಹೋಗಿರುತ್ತಾಳೆ. ಮನೆಯಲ್ಲಿ ಹಕ್ಕಳೆಹುಳವನ್ನೂ ಹೊಡೆಯದ ವ್ಯಕ್ತಿಗೆ ಭಯಂಕರ ಆಕ್ಸಿಡೆಂಟ್ ಆಗಿ ಕಾಲು ಮುರಿದುಕೊಂಡು ಶಾಶ್ವತವಾಗಿ ಅಂಗವಿಕಲಾಗಿರುತ್ತಾನೆ, ಮತ್ತೊಬ್ಬರ ಕಷ್ಟಕ್ಕೆ ಮರಗುವ ವ್ಯಕ್ತಿ ಚಿಕ್ಕವಯಸ್ಸಿನಲ್ಲೇ ಇದ್ದಕ್ಕಿದ್ದಂತೆ ಹಾರ್ಟ್ ಅಟ್ಯಾಕ್ ಆಗಿ ಇಹಲೋಕ ತ್ಯಜಿಸಿರುತ್ತಾನೆ. ಸುನಾಮಿ ಅಲೆಯಲ್ಲಿ ಸತ್ತ ಎರಡೂವರೆ ಲಕ್ಷ ಜನ, ಚಿತ್ರದುರ್ಗದ ಸಂತೆಹೊಂಡದಲ್ಲಿ ಮುಳುಗಿದ 83 ಜನ, ಕುಂಭಕೋಣಂ ಶಾಲೆಯಲ್ಲಿ ಬೆಂದುಹೋದ 90 ಮಕ್ಕಳು……ಈ ಎಲ್ಲ ಮರಣಗಳಿಗೆ ಕಾರಣರಾರು?

ಮನುಷ್ಯನ ಬುದ್ಧಿ, ಶಕ್ತಿ, ಸಾಮರ್ಥ್ಯವನ್ನು ವಿಷಯವೊಂದು ಮೀರಿ ಹೋದಾಗ ಅದಕ್ಕೆ ನಾವು ಕರ್ಮಫಲ, ಹಿಂದಿನ ಜನ್ಮದ ಪಾಪ, ಇತ್ಯಾದಿ ವಿವರಣೆ ಕೊಟ್ಟು ಸಮಾಧಾನಪಡುತ್ತೇವೆ. ವಾಸ್ತವಾಗಿ ಈ ವಿವರಣೆಯಷ್ಟು ಬೇರಾವುದೇ ವಿವರಣೆ ಸಾಂತ್ವನ ಕೂಡ ನೀಡಲಾರದು!!

“ಕರ್ಮಣ್ಯೇವಾಧಿಕಾರಸ್ತೆ ಮಾಫಲೇಷು ಕದಾಚನ” ಎಂಬ ಗೋಪಾಲನ ಮಾತಿನಲ್ಲಿ ದೊಡ್ಡತತ್ವವೇ ಇದೆ. ಅರ್ಥಮಾಡಿಕೊಳ್ಳಬೇಕಷ್ಟೇ. “ದೇವರು ಇಲ್ಲವೇ ಇಲ್ಲ, ಅದು ಮೂಢರಿಗೆ ಅಗತ್ಯವಾಗಿರುವಂತಹದ್ದು, ಬುದ್ಧಿವಂತರಿಗಲ್ಲ. ದೇವರೆಂಬುದು ಮಿಥ್ಯೆ” ಎಂದು ಭಯಂಕರ ವಾದಮಾಡುತ್ತಿದ್ದ ನನ್ನ ಮಿತ್ರನೊಬ್ಬನಿಗೆ ಒಂದು ದಿನ ಹೊಟ್ಟೆನೋವು ಬಂದಾಗ ಹಠಾತ್ ದೈವಭಕ್ತಿ ಜಾಗೃತವಾಗಿದ್ದನ್ನು ನಾನು ನೋಡಿದ್ದೇನೆ. ನಾಸ್ತಿಕನಾಗುವುದು ಸುಲಭ. ಆದರೆ ಆಸ್ತಿಕನಾಗಲು ತುಂಬ ಗಟ್ಸ್ ಬೇಕಾಗುತ್ತದೆ. ದೇವರು ಕಷ್ಟ ಕೊಟ್ಟರೂ, ಅದನ್ನೂ ಆತನ ಮಹಿಮೆ, ಆಶೀರ್ವಾದ ಎಂದು ಅಂದುಕೊಳ್ಳಲು ಎಂತಹ ಮೀಟರ್ ಬೇಕಲ್ಲವೆ?

ಬದುಕಿನಲ್ಲಿ ನಡೆಯುವ ಸಂತಸದ ಘಟನೆಗಳಿಗೆ ಮಾತ್ರ ನಾವು ಯಾವುದೇ ಕಾರಣಗಳನ್ನು ಹುಡುಕಲು ಹೋಗುವುದಿಲ್ಲ. ಆರಂಕಿ ಸಂಬಂಳದ ಜಾಬ್ ಸಿಕ್ಕಿದ್ದಕ್ಕೆ, ಪಿಂಗಾಣಿ ಗಾಜಿನ ಬಣ್ಣದ ಹುಡುಗಿ ಮದುವೆಯಾಗಲು ಒಪ್ಪಿದ್ದಕ್ಕೆ, ಅವಾರ್ಡ್ ಬಂದಿದ್ದಕ್ಕೆ, ನಾವು ಯಾವತ್ತೂ ಕಾರಣಗಳನ್ನು ಹುಡುಕುವುದಿಲ್ಲ. “ಓ ದೇವರೆ ನನಗ್ಯಾಕೆ ಅವಾರ್ಡ್ ಕೊಡಿಸಿದೆ?” ಎಂದು ಹಳಹಳಿಸುವ ವ್ಯಕ್ತಿಯನ್ನು ನೀವೂ ಕಂಡಿಲ್ಲ, ನಾನೂ ಕಂಡಿಲ್ಲ. ಸಂತಸಕ್ಕೆ ಕಾರಣ ಹುಡುಕದ ಯಾರನ್ನೂ ದೂಷಿಸದ ನಾವು, ದುಃಖಕ್ಕೆ ಮಾತ್ರ ದೇವರನ್ನು, ದೈವವನ್ನು, ಅಥವಾ ಮತ್ತ್ಯಾವುದೋ ಜೀವಿಯನ್ನು ಶಪಿಸುವುದು ಅಪರಾಧವಲ್ಲವೆ?

ನನ್ನ ಉದಾಹರಣೆಯನ್ನೇ ತೆಗೆದುಕೊಂಡರೆ ನನಗೆ ಸಿಸ್ಟೋಸ್ಕೋಪಿಯಾಗಿಬೇಕಾಗಿದ್ದ ಅಗತ್ಯವೇ ಇರಲಿಲ್ಲ. ಆದರೆ ಅದು ಆಗಬೇಕು ಎಂದು, ನಾವು ದೇವರೆಂದು ಕರೆಯುವ ಆ ಅಗೋಚರ ಚೈತನ್ಯದ ಮನಸ್ಸಿನಲ್ಲಿದ್ದರೆ, ಅದು ಆಗಲೇಬೇಕಲ್ಲವೆ? ಅದಕ್ಕೆ ಹಳಹಳಿಸಿ ಏನುಪಯೋಗ? ದೇವರು ನಿಶ್ಚಯಿಸಿದ್ದನ್ನು ನಾನು ಬದಲಿಸಲೂ ಸಾಧ್ಯವಿಲ್ಲ. ‘ಮುಕ್ತ ಮುಕ್ತ’ ದಲ್ಲಿ ನನಗೆ ಪಾತ್ರ ಮಾಡುವ ಅವಕಾಶ ನೀಡಿ, ಕೆಲವೇ ತಿಂಗಳುಗಳಲ್ಲಿ ಜನಪ್ರೀಯತೆಯನ್ನು ಮೊಗೆಮೊಗೆದು ತಂದುಕೊಟ್ಟಾಗ ನಾನು ಹಲುಬಲಿಲ್ಲ. ಸಂತಸ ಪಟ್ಟೆ. ಈಗ ಸಿಸ್ಟೋಸ್ಕೋಪಿಯಾದಾಗ ಕೂಡ ನಾನು ಹಲುಬಬಾರದು. ಯಾರನ್ನೂ ದೂಷಿಸಬಾರದು. ಆ ಯೋಗ್ಯತೆ ನನಗಿಲ್ಲ.

ಈ ರೀತಿಯ ಮನಸ್ಥಿತಿ ನಿರ್ಮಾಣವಾದಾಗ ಕಷ್ಟಗಳನ್ನು ಎದುರಿಸುವ ಶಕ್ತಿ ಮತ್ತಷ್ಟು ಹೆಚ್ಚುತ್ತದೆ ಎಂಬುದು ನನ್ನ ನಂಬಿಕೆ ಮತ್ತು ಅನುಭವ. ಆದರೆ ಈ ಎಲ್ಲವನ್ನೂ ಹೇಳಿದರೂ ಪುರುಷ ಪ್ರಯತ್ನವಂತೂ ಇರಲೇಬೇಕು. ಹಾಲಿನ ಉತ್ಪನ್ನಗಳನ್ನು ಸೇವಿಸುವುದನ್ನು ಕಡಿಮೆ ಮಾಡಿ, ಕಪ್ಪು ದ್ರಾಕ್ಷಿ, ಕ್ಯಾಬೀಜ್, ಪನೀರ್, ತಿನ್ನಬೇಡಿ. ಹೆಚ್ಚು ಹೆಚ್ಚು ನೀರು ಕುಡಿಯಿರು ಎಂದು ಡಾಕ್ಟರ್ ಹೇಳಿದ್ದಾರೆ. ಇದನ್ನು ಮರೆತು ಮುಂದೆ ಮತ್ತೊಮ್ಮೆ ಕಿಡ್ನಿ ಸ್ಟೋನ್ ಆದರೆ ಅದಕ್ಕೆ ನಾನು ಹೊಣೆಯಾಗುತ್ತೇನೆಯೇ ಹೊರತು ಆ ದೇವರಲ್ಲವಲ್ಲ.

ಅದಕ್ಕೆ ಮುಕ್ತವಾಗಿ ನಕ್ಕು ಅಂದುಬಿಡುತ್ತೇನೆ, ಸರ್ವಂ ಶ್ರೀ ವಾಸುದೇವಾರ್ಪಣಮಸ್ತು….

(ನಾಳೆ – ಉಪಸಂಹಾರ -2- ನನ್ನ ಅವಸ್ಥೆಗೆ ಮರುಗಿದವರ ಮಾತುಗಳು)

ನಾಳೆ ಉಪಸಂಹಾರ ಭಾಗ-1

ಇಂದು ‘ಉಪಸಂಹಾರ – ಸರ್ವಂ ಶ್ರೀ ವಾಸುದೇವಾರ್ಪಣಮಸ್ತುಟ ಪ್ರಕಟವಾಗಬೇಕಾಗಿತ್ತು. ಲೇಖನವನ್ನು ನಾಳೆ ಪ್ರಕಟಿಸಲಾಗುವುದು.

ಪ್ರೀತಿಯಿರಲಿ

ಸುಘೋಷ್ ಎಸ್. ನಿಗಳೆ.

ಅಲ್ಲೆರಡು ಜೀವಗಳಿದ್ದವು. ದೂರದಿಂದಲೇ ಕೊರಗುತ್ತಿದ್ದವು

ಸಿಕ್ಸ್ ಪ್ಯಾಕ್ ಉಳ್ಳ ವ್ಯಕ್ತಿ ಆರಾಮಿಲ್ಲದಿದ್ದಾಗ ಹೇಗೆ ಮಗುವಿನಂತಾಗಿಬಿಡುತ್ತಾನೋ, ಹಾಗೆಯೇ ಆ ಮಗು ಮೊದಲು ನೆನೆಸಿಕೊಳ್ಳುವುದು ಅಮ್ಮನನ್ನು. ಮನುಷ್ಯನಿಗೆ ಆಘಾತ, ತೊಂದರೆ, ಭಯ, ನೋವು, ಆಕ್ಸಿಡೆಂಟ್ ಏನೇ ಆದರೂ ಆತ ಮೊದಲು ನೆನೆಸಿಕೊಳ್ಳುವುದು ಅಮ್ಮನನ್ನೇ. ಕೈಕಾಲು ಮುರಿದುಕೊಂಡೋ, ಬೆಂಕಿಯಲ್ಲಿ ಸುಟ್ಟುಕೊಂಡೋ ಹಾಸಿಗೆಯ ಮೇಲೆ ಮಲಗಿರುವ ವ್ಯಕ್ತಿ ಅಮ್ಮನನ್ನು ಹೊರತುಪಡಿಸಿ ಬೇರಾರ ಹೆಸರನ್ನು ತೆಗೆದುಕೊಳ್ಳಲು ಸಾಧ್ಯವೇ ಇಲ್ಲ.

ಮೊದಲ ದಿನ ಬೆಳಿಗ್ಗೆ ನನಗೆ ಹೊಟ್ಟೆ ನೋವು ಬಂದಾಗ ಬೊಬ್ಬಿಡುತ್ತಿದ್ದೆನಲ್ಲ…ಆಗ ನಾನು ಮಾಡಿದ್ದು ಕೂಡ ಅದನ್ನೇ. ಅಂದು ಎಷ್ಟು ಬಾರಿ ಅಮ್ಮನ ಹೆಸರನ್ನು ಕೂಗಿಕೊಂಡೆನೋ ಲೆಕ್ಕವಿಟ್ಟಿಲ್ಲ. ನಾನು ಹಾಗೆ ಕೂಗಿದ್ದು ಖಂಡಿತವಾಗಿ ದೂರದ ಕೊಪ್ಪದಲ್ಲಿದ್ದ ನನ್ನಮ್ಮನಿಗೆ ಗೊತ್ತಾಗಿರಲೇಬೇಕು. ಕಾರಣ…ಪ್ರತಿಬಾರಿ ಅಮ್ಮ ಎಂದು ನಾನು ಕೂಗಿದಾಗ ನನ್ನ ಹೊಟ್ಟೆನೋವು ಏನೋ ಒಂದಿಷ್ಟು ಕಡಿಮೆಯಾದಂತೆನಿಸುತ್ತಿತ್ತು. ಹೀಗಾಗಿ ಅಮ್ಮನ ಜಪ ಮುಂದುವರೆದಿತ್ತು. ದೇವರನಾಮ ಹೇಳಿದ್ದರೂ ಬಹುಶಃ ಕಡಿಮೆಯಾಗುತ್ತಿತ್ತು. ಆದರೆ ಎಲ್ಲವೂ ನಮ್ಮ ನಂಬಿಕೆಯ ಮೇಲೆಯೇ ಅವಲಂಬಿತವಾಗಿದೆಯಲ್ಲವೆ? ಅಮ್ಮ ಕೂಡ ನಡೆದಾಡುವ ದೇವರೇ ತಾನೆ. ಅಮ್ಮ ಎಂದರೆ ಏನೋ ಹರುಷವೋ….ನನ್ನ ಪಾಲಿಗೆ ಅವಳೇ ದೈವವೂ….ಅಮ್ಮ ಎನ್ನಲು ಎಲ್ಲಾ ಮರೆತೆನು…..

ನನ್ನಮ್ಮನ ಬಗ್ಗೆ ನನಗೆ ತುಂಬಾ ಗೌರವ ಹುಟ್ಟಿದ್ದು ಹಲವು ವರ್ಷಗಳ ಮೊದಲು. ತುಂಬಾ ಚಿಕ್ಕವನಿದ್ದೆ. ಬಹುಶಃ ನಾಲ್ಕೈದು ವರ್ಷದವನಿರಬೇಕು. ಜ್ವರ ಬಂದು ಮಲಗಿದ್ದೆ. ಮತ್ತೆ ಮತ್ತೆ ವಾಂತಿಯಾಗುತ್ತಿತ್ತು. ಹೀಗೆ ವಾಂತಿಯಾದಗಲೆಲ್ಲ ಅಮ್ಮ ತಕ್ಷಣ ಬೊಗಸೆ ಮುಂದುಮಾಡಿ ವಾಂತಿಯನ್ನು ಕೈಯಲ್ಲಿ ಹಿಡಿದು ಬಚ್ಚಲು ಮನೆಗೆ ಹೋಗಿ ಚೆಲ್ಲುತ್ತಿದ್ದಳು. ಆಗ ಅದೆಂತಹ ಪ್ರೀತಿ ಅಮ್ಮನ ಮೇಲೆ ಬೆಳೆಯಿತೆಂದರೆ ಅದನ್ನು ಅಳೆಯಲೇ ಸಾಧ್ಯವಿಲ್ಲ.

ಇನ್ನು ನನ್ನಪ್ಪನೆಂದರೆ, ಮೈ ಡ್ಯಾಡಿ ಸ್ಟ್ರಾಂಗೆಸ್ಟ್. ಬಲಿಷ್ಠ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ನನ್ನಪ್ಪ ಉತ್ತಮ ಉದಾಹರಣೆಯಾಗಬಲ್ಲ. ಪಿಯುಸಿಯಲ್ಲಿರುವಾಗ ಮನೆಯಿಂದ ನಾನೊಮ್ಮೆ ಓಡಿ ಹೋಗಿದ್ದೆ. ಆ ಸಂಪೂರ್ಣ ಪ್ರಕರಣವನ್ನು ಅಪ್ಪ ಹ್ಯಾಂಡಲ್ ಮಾಡಿದ್ದ ರೀತಿ ನನ್ನನ್ನು ಆತನಿಗೆ ಪೂರ್ಣ ಶರಣಾಗವಂತೆ ಮಾಡಿತ್ತು. ನಾನು ಈಗ ದೇವರಲ್ಲಿ ಮತ್ತೆ ಮತ್ತೆ ಕೇಳುತ್ತಿರುತ್ತೇನೆ….ಓ ದೇವರೆ ನನ್ನನ್ನು ನನ್ನಪ್ಪನ ಹಾಗೆಯೇ ಮಾಡಪ್ಪ ಅಂತ……

ಇಂತಹ ಎರಡು ಜೀವಗಳು ಕೊಪ್ಪದಲ್ಲಿ ನಾಲ್ಕು ದಿನಗಳ ಒಳಗೊಳಗೇ ಕೊರಗಿದ್ದವು. ನನ್ನ ಸ್ಥಿತಿಗೆ ಮರುಗಿದ್ದವು. ಅಪ್ಪ ಮತ್ತೆ ಮತ್ತೆ ಫೋನ್ ಮಾಡುತ್ತಿದ್ದ. ಅಪ್ಪ ಫೋನ್ ಮಾಡಿದಾಗಲೆಲ್ಲ ಅಮ್ಮ ಕೂಡ ಮಾತನಾಡುತ್ತಿದ್ದಳು. ಪ್ರಾಣಾಯಾಮ ಮಾಡು, ಹೆಚ್ಚು ಹೆಚ್ಚು ನೀರು ಕುಡಿ, ಬಾಳೆದಿಂಡಿನ ಪದಾರ್ಥ ಮಾಡಿ ತಿನ್ನು ಅಂತ ಅಪ್ಪ-ಅಮ್ಮನ ಸಲಹೆ ಇಂದಿಗೂ ಮುಂದುವರೆಯುತ್ತಲೇ ಇವೆ. ನಾನು ದೇವರಲ್ಲಿ ಬೇಡಿಕೊಳ್ಳುತ್ತಲೇ ಇದ್ದೆನೆ…ಓ ದೇವರೆ ನನ್ನನ್ನು ನನ್ನಪ್ಪಮ್ಮನಂತೆ ಮಾಡು…..

(ನಾಳೆ – ಉಪಸಂಹಾರ – ಸರ್ವಂ ಶ್ರೀ ವಾಸುದೇವಾರ್ಪಣಮಸ್ತು….)

ಇದ್ರ ಇರಬೇಕು ನನ್ನ ಮಾವನ್ಹಂಗ….

ಪ್ರಾಥಮಿಕ ಶಾಲೆಯಲ್ಲಿದ್ದಾಗ ವಿರುದ್ಧಾರ್ಥಕ ಪದಗಳನ್ನು ಬರೆಯುವಂತೆ ಮಾಸ್ತರರು ಹೇಳುತ್ತಿದ್ದಾಗ ಕೆಲವು ಶಬ್ದಗಳು ವಿರುದ್ಧಾರ್ಥಕ ಪದಗಳ ಪಟ್ಟಿಯಲ್ಲಿ ಖಾಯಂ ಆಗಿ ಇರುತ್ತಿದ್ದವು. ಹುಡುಗ-ಹುಡುಗಿ, ಅಪ್ಪ-ಅಮ್ಮ, ಅಣ್ಣ-ತಮ್ಮ, ಅಕ್ಕ-ತಂಗಿ, ಅತ್ತೆ-ಸೊಸೆ, ಮಾವ-ಅಳಿಯ ಈ ಶಬ್ದಗಳನ್ನು ಕ್ಲಾಸಿನಲ್ಲಿದ್ದ ಅಷ್ಟೂ ವಿದ್ಯಾರ್ಥಿಗಳು ಮೊದಲಿಗೆ ಬರೆದು ನಂತರ ಉಳಿದ ವಿರುದ್ಧಾರ್ಥಕ ಪದಗಳನ್ನು ಬರೆಯುತ್ತಿದ್ದರು. ಈಗ ಅದನ್ನು ಯೋಚಿಸಿದರೆ ತುಂಬ ಮೋಜೆನಿಸುತ್ತದೆ.

ಅತ್ತೆ-ಸೊಸೆ, ಮಾವ-ಅಳಿಯ ಸಂಬಂಧಗಳನ್ನು ನಮ್ಮ ಮಾಧ್ಯಮ, ಸಾಹಿತ್ಯ ಹಾಗೂ ಸಮಾಜ ಬಹುಶಃ ವಿರುದ್ಧಾರ್ಥಕ ಪದಗಳಂತೆಯೇ ನೋಡಿದೆ. ನಿಜಜೀವನದಲ್ಲಿ ಯಾರಿಗೂ ಆದರ್ಶ ಅತ್ತೆ-ಸೊಸೆ, ಮಾವ-ಅಳಿಯ ಸಂಬಂಧಗಳು ಸಿಗದ ಕಾರಣ ಈ ಕೊರತೆಯಿರಬೇಕು. ನನ್ನ ಲಿಸ್ಟ್ ನಲ್ಲಿ ಸಹ ಇಂದಿನವೆರೆಗೆ ಆದರ್ಶ ಅತ್ತೆ-ಸೊಸೆಯಂದಿರ ಸಂಖ್ಯೆ ಐದು ದಾಟಿಲ್ಲ. ವರದಕ್ಷಿಣೆ ಕಿರುಕುಳ, ತವರು ಮನೆಯ ಹೀಗಳೆಯುವಿಕೆ, ಮಾವನ ಮನೆಯ ಮರ್ಯಾದೆ ಹರಾಜು, ಗಂಡನಿಗೆ ಮಂಗಳಾರತಿ, ಅತ್ತೆಯ ಹಿಂಸೆ, ಸೊಸೆಯ ಬಯ್ಗಳ ಮುಂತಾದ ಪ್ರಕರಣಗಳಿಂದ ಒಟ್ಟಿನಲ್ಲಿ ಈ ಸಂಬಂಧಗಳು ಭಾರತೀಯ ಸಮಾಜದ ಗಲ್ಲಿಗಲ್ಲಿಗಳ ಸಂದುಗೊಂದಿಗಳಲ್ಲಿ ಸದಾ ಚರ್ಚೆಯ ವಿಷಯ.

ನಾನು ಆಸ್ಪತ್ರೆ ಸೇರಿದಾಗ ನನ್ನೊಡನೆ ವಿದ್ಯಾಳೇ ಉಳಿದುಕೊಳ್ಳುವುದು ಎಂದು ನಿರ್ಧಾರವಾಗಿತ್ತು. ಹಾಗೆ ನಾವೇ ಮಾತಾಡಿಕೊಂಡಿದ್ದೆವು. ನಾನು, ವಿದ್ಯಾ, ಉದಾತ್ತ ಮೂರು ಜನ ಇರುವುದೆಂದು ಅಂದುಕೊಂಡಿದ್ದೆವು. ಅದೇ ಆಸ್ಪತ್ರೆಯಲ್ಲಿ ಹುಟ್ಟಿದ್ದ ಉದಾತ್ತ ಆಗಲೇ ಹತ್ತಾರು ಸಿಸ್ಟರ್ ಗಳ ಕಣ್ಮಣಿಯಾಗಿದ್ದ. ನಮ್ಮ ನಿರ್ಧಾರವನ್ನು ಕೇಳಿದ ಸಿಸ್ಟರ್ ಗಳು, ಬೇಡ ಬೇಡ ಅವ ಇಲ್ಲಿ ಬೇಡ. ಹಾಸ್ಟಿಟಲ್ ಇನ್ಫೆಕ್ಷನ್ ಆಗಬಹುದು ಎಂದು ಹೇಳಿದ್ದರಿಂದ ವಿದ್ಯಾ ನನ್ನೊಡನೆ ಇರುವುದು ರದ್ದಾಯಿತು.

ಉಳಿದಿದ್ದ ಒಂದೇ ಒಂದು ಆಯ್ಕೆಯೆಂದರೆ ನನ್ನ ಮಾವನದ್ದು. ಈಗಾಗಲೇ ಬರೆದಿರುವಂತೆ ನನ್ನ ಮಾವನಿಗೆ 71 ವಯಸ್ಸು. 35 ವರ್ಷಗಳ ಕಾಲ ಏರ್ ಫೋರ್ಸ್ ನ ಮೆಡಿಕಲ್ ಟ್ರೇಡ್ ನಲ್ಲಿದ್ದವರು. ಇಂದಿಗೂ ನಿತ್ಯ ಐದು ಗಂಟೆಗೆ ಎದ್ದು ಆಸ್ಥಾ ಚಾನಲ್ ಆನ್ ಮಾಡಿ ಬಾಬಾ ರಾಮದೇವ್ ರ ಕೋಚಿಂಗ್ ಕ್ಲಾಸ್ ನಲ್ಲಿ ತಪ್ಪದೆ ಪಾಲ್ಗೊಳ್ಳುತ್ತಾರೆ. ಅವರ ಡ್ರೆಸ್ಸಿಂಗ್ ಸೆನ್ಸ್, ವೈಯುಕ್ತಿಕ ಶಿಸ್ತು, ಎಲ್ಲವೂ ಥೇಟ್ ಏರ್ ಫೋರ್ಸ್ ನದ್ದೆ. ಬಾಂಗ್ಲಾ, ಚೀನಾ, ಪಾಕಿಸ್ತಾನ್ ಮೂರು ಯುದ್ಧಗಳಲ್ಲಿ ಪಾಲ್ಗೊಂಡಿರುವ ನನ್ನ ಮಾವ ರಾಮಚಂದ್ರ ಅನಗೋಳಕರ ಇಂದಿಗೂ ಶಿಸ್ತಿನ ಸಿಪಾಯಿ.

ಆದರೆ ವಯೋ ಸಹಜವಾಗಿ ಇದ್ದಕ್ಕಿದ್ದಂತೆ ಕುಳಿತಲ್ಲೇ ನಿದ್ದೆ ಬಂದುಬಿಡುವುದು, ಈಗ ಹೇಳಿರುವ ವಿಷಯವನ್ನು ಮತ್ತೊಂದು ಕ್ಷಣವೇ ಮರೆತುಬಿಡುವುದು, ದೈಹಿಕ ದುರ್ಬಲತೆ ಮುಂತಾದವುಗಳೂ ಹೆಚ್ಚಾಗುತ್ತಿವೆ. ಅಂತಹವರಿಗೆ ತೊಂದರೆ ಕೊಡುವುದು ನನಗೆ ಮನಸ್ಸಿಲ್ಲದಿದ್ದರೂ ನನ್ನ ಬಳಿ ಯಾವುದೇ ಆಯ್ಕೆ ಇರಲಿಲ್ಲ. ಹೀಗಾಗಿ ರಾತ್ರಿ-ಹಗಲೆನ್ನದೆ ಮಾವ ನನ್ನ ಜೊತೆಗಿದ್ದರು. ಮೆಡಿಕಲ್ ಟ್ರೇಡ್ ನಲ್ಲಿದ್ದುದರಿಂದ ಸಲೈನ್ ಹಚ್ಚುವುದು, ಸಮಯಕ್ಕೆ ಸರಿಯಾಗಿ ಮಾತ್ರೆ ಕೊಡುವುದು, ನನಗೆ ಧೈರ್ಯ ತುಂಬುವುದು ಎಲ್ಲವನ್ನೂ ತುಂಬ ಶ್ರದ್ಧೆಯಿಂದ ಮಾಡಿದರು. ತೀರ ಕಫ ಕಟ್ಟಿ ಖೋರ್…ಖೋರ್ ಎಂದು ಗಟ್ಟಿಯಾಗಿ ಕಫ ಹೊರತೆಗೆದಾಗ ಸಡನ್ ಆಗಿ ನನ್ನ ಮುಂದೆ ಪ್ಯಾನ್ ಹಿಡಿದು ಉಗುಳಲು ಸಹಾಯ ಮಾಡಿದರು. ಅವರ ಕಾಳಜಿ ನನ್ನ ಹೃದಯವನ್ನು ಮುಟ್ಟಿತ್ತು.

ಇಲ್ಲೀತನಕ ಕೇವಲ ಅಳಿಯ-ಮಾವ ಸಂಬಂಧವಿದ್ದ ನಾವು, ನನ್ನ ಸಿಸ್ಟೋಸ್ಕೋಪಿ ಕಾರಣದಿಂದಾಗಿ ಈ ಶಬ್ದಗಳ ಸಂಬಂಧಕ್ಕಿಂತ ಹೆಚ್ಚಿನ ಸಂಬಂಧವನ್ನೇನೋ ಪಡೆದಿದ್ದೇವೆ ಎನಿಸುತ್ತಿದೆ.

(ನಾಳೆ – ಅಲ್ಲೆರಡು ಜೀವಗಳಿದ್ದವು. ದೂರದಿಂದಲೇ ಕೊರಗ್ಗುತ್ತಿದ್ದವು)

ಮನ ತುಂಬಿದ ಮಡದಿ

ನಾನು ಜೀವನಪೂರ್ತಿ ಮದುವೆಯಾಗದೇ ಉಳಿಯುತ್ತೇನೆ. ನಾನು ಯಾರು? ಎಲ್ಲಿಂದ ಬಂದೆ? ಬದುಕಿನ ಮೂಲ ಉದ್ದೇಶ ಏನು? ಜಗತ್ತು ಏಕಿದೆ? ಶೂನ್ಯವೇಕಿಲ್ಲ? ಗಂಡಸಾದರೆ ಮದುವೆಯಾಗಲೇ ಬೇಕೆ? ಪುನರ್ಜನ್ಮ ಇರುವುದು ಸತ್ಯವೆ? ಎಂಬತಹ ಆಧ್ಯಾತ್ಮಿಕ ಪ್ರಶ್ನೆಗಳು ನನಗೆ 10 ನೇ ಕ್ಲಾಸಿನಲ್ಲಿ ಎದುರಾಗಿ, ಅಂತಿಮವಾಗಿ ನಾನು ಮದುವೆಯಾಗದೆ ಮಾನವ ಜೀವನದ ರಹಸ್ಯವನ್ನು ಭೇದಿಸಬೇಕು ಎಂದು 16 ನೇ ವಯಸ್ಸಿನಲ್ಲಿ ನಿರ್ಧರಿಸಿದ್ದೆ.

ಹುಚ್ಚುಖೋಡಿ ಮನಸು,,,,ಅದು ಹದಿನಾರರ ವಯಸು…

ಈ ಎಲ್ಲ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ನನ್ನ ಸಂಸ್ಕೃತ ಶಿಕ್ಷಕರಾಗಿದ್ದ ಶ್ರೀ. ಜಿ. ಆರ್. ಜೋಷಿ ಅವರನ್ನು ದಿನನಿತ್ಯ ಪೀಡಿಸುತ್ತಿದ್ದೆ.

ಮುಂದೆ ಪಿಯುಸಿಗೆ ಬಂದೆ ನೋಡಿ. ಕೆಲವೇ ತಿಂಗಳುಗಳಲ್ಲಿ ನಾನು ಮದುವೆಯಾಗುವುದಿಲ್ಲ ಎಂಬ ನಿರ್ಧಾರ ಎಸ್ ಎಂ ಕೃಷ್ಣರ ಬೆಂಗಳೂರನ್ನು ಸಿಂಗಾಪೂರ್ ಮಾಡುವ ನಿರ್ಧಾರದಂತೆ ಕರಗಿ ಹೋಯಿತು. ಇದಕ್ಕೆ ಕಾರಣವಾಗಿದ್ದು ಅಫ್ ಕೋರ್ಸ್, ನನ್ ಅದರ್ ದ್ಯಾನ್ ನನ್ನ ಕ್ಲಾಸಿನ ಹುಡುಗಿಯರು. ಐದನೇ ಕ್ಲಾಸಿನಿಂದ್ ಕೋಎಡ್ ನಲ್ಲಿ ಕಲಿಯದಿದ್ದವನಿಗೆ ಆಧ್ಯಾತ್ಮ ಅಂಟಿಕೊಳ್ಳುವುದು ಸಹಜ ತಾನೆ? ಆದರೆ ಪಿಯುಸಿಯಲ್ಲಿ ಕೋಎಡ್ ಇದ್ದರಿಂದ ನಿರಂತರ ಐದುವರ್ಷಗಳ ಬಳಿಕ ಹುಡುಗಿಯರ ಪಕ್ಕ ಕುಳಿತು ಪಾಠ ಕೇಳುವ (ನೋಡುವ?) ಅವಕಾಶ ವಿತ್ತು. ಮದುವೆ ಆಗವುದೇ ಆಗಿದ್ದರೆ ಈಗಾಗಲೇ ಯಾಕೆ ಪ್ರೀತಿಸಿ ಮದುವೆಯ ಪ್ರಿಪರೇಷನ್ ಮಾಡಿಕೊಳ್ಳಬಾರದು, ತಂದೆ-ತಾಯಿಗಳಿಗೆ ಎಷ್ಟೂಂತ ತಾನೆ ಜವಾಬ್ದಾರಿ ಕೊಡುವುದು, ನನ್ನ ಕಾಲ ಮೇಲೆ ನಾನು ನಿಲ್ಲುವುದು ಯಾವಾಗ, ನಾನು ಮದುವೆಯಾಗುವ ಹುಡುಗಿಯನ್ನು ನಾನೇ ಆರಿಸಿಕೊಂಡು ಅಪ್ಪ-ಅಮ್ಮನ ಜವಾಬ್ದಾರಿ ಕಡಿಮೆ ಮಾಡಿಕೊಳ್ಳೋಣ ಎಂದು ನಿರ್ಧರಿಸಿಬಿಟ್ಟೆ.

ಮಂಗಗಳ ಉಪವಾಸದಂತೆ…..

‘ದಿಲ್ ಚಾಹತಾ ಹೈ’ನ ಸೈಫ್ ಅಲಿ ಖಾನ್ ಪಾತ್ರ ನೆನಪಿದೆ ತಾನೆ? ಹೆಜ್ಜೆಹೆಜ್ಜೆಗೂ ಹುಡುಗಿ ಹುಡುಗಿಗೂ ಆತನಿಗೆ ಪ್ರೀತಿ ಉಂಟಾಗಿಬಿಡುತ್ತದೆ. ನಾನು ಬಿಎ ಓದುವಷ್ಟರಲ್ಲಿ ನನ್ನ ಪರಿಸ್ಥಿತಿಯೂ ಹಾಗೆಯೇ ಆಗಿಬಿಟ್ಟಿತ್ತು. ಸ್ನೇಹಿತರು ನನ್ನ ವರ್ತನೆ ನೋಡಿ “ಸುಘೋಷ್ ಖೂಪ್ ಪ್ರೇಮಳ ಆಹೆ!!” (ಸುಘೋಷ್ ತುಂಬಾ ಪ್ರೇಮಮಯಿ!!) ಎಂದು ಅಣಗಿಸುತ್ತಿದ್ದರು. ಈ ಎಲ್ಲ ಕನ್ಫ್ಯೂಷನ್ ಗಳ ಮಧ್ಯೆ ನಾನು ಸೀರಿಯಸ್ಸಾಗಿ ಪ್ರೀತಿಸಲು ಆರಂಭಿಸಿದ್ದು, ಇಂದು ನನ್ನ ಬಾಳಸಂಗಾತಿಯಾಗಿರುವ ವಿದ್ಯಾಳನ್ನು.

ವಿವಿಧ ಹುಡುಗಿಯರ ಪ್ರೇಮದಲ್ಲಿ ಮುಳುಗಿಹೋಗಿದ್ದ ನನ್ನನ್ನು ವಿದ್ಯಾ ಸೆಳೆದಿದ್ದಳು. ನಮ್ಮಿಬ್ಬರಲ್ಲಿ ಯಾರು ಮೊದಲು ಪ್ರಪೋಸ್ ಮಾಡಿದರು ಎಂಬ ಬಗ್ಗೆ ಇಂದಿಗೂ ಭಿನ್ನಾಭಿಪ್ರಾಯವಿದೆಯಾದರೂ, ನನ್ನ ಚಿತ್ರಾನ್ನ, ಚಿತ್ರಾನ್ನ, ಚಿತ್ರ ಚಿತ್ರ ಚಿತ್ರಾನ್ನ ಮನಸ್ಸನ್ನು ಅರ್ಥಮಾಡಿಕೊಂಡು, ತನ್ನನ್ನು ತಾನು ಅದಕ್ಕೆ ಹೊಂದಿಸಿಕೊಂಡು ನಮ್ಮ ಸಂಸಾರದಲ್ಲಿ ನನ್ನ ಏಳ್ಗೇಗೆ ತಾನು ಸ್ಯಾಕ್ರಿಫೈಸ್ ಮಾಡುತ್ತ ಇಂದಿಗೂ ವಿದ್ಯಾ ನನಗೆ ವಿದ್ಯೆ ಕಲಿಸುವ ಗುರುವಾಗಿದ್ದಾಳೆ.

ಇಷ್ಟೆಲ್ಲ ಪ್ರವರಕ್ಕೆ ಕಾರಣವಿಷ್ಟೆ….ನಾನು ಸಿಸ್ಟೋಸ್ಕೋಪಿ ಮಾಡಿಸಕೊಂಡಿದ್ದಾಗ ನನ್ನ ಮಗ ಉದಾತ್ತನಿಗೆ ನಾಲ್ಕು ತಿಂಗಳು. ಪ್ರತಿ ಎರಡು ಗಂಟೆಗೊಮ್ಮೆ ಆತನಿಗೆ ಫೀಡ್ ಮಾಡಬೇಕು. ಮನೆಯಲ್ಲಿ ಅಡಿಗೆ ಮಾಡಿಕೊಂಡು, ಡಬ್ಬಿ ಕಟ್ಟಿಕೊಂಡು ನನಗೆ, ಊಟ ತರಬೇಕು. ಒಂದು ಕಡೆ ಗಂಡ ಮತ್ತೊಂದು ಕಡೆ ಮಗನನ್ನು ಸಂಭಾಸುತ್ತಿದ್ದ ವಿದ್ಯಾ ನಿಜವಾಗಿಯೂ ತನ್ನ ಪ್ರೇಮವನ್ನು, ಕಾಳಜಿಯನ್ನು ಮತ್ತೊಮ್ಮೆ ಎತ್ತಿಹಿಡಿದಿದ್ದಳು. ಉದಾತ್ತ ಜೋರಾಗಿ ಉಸಿರುಬಿಟ್ಟರೂ ನಿದ್ದೆಯಿಂದ ಎಚ್ಚರಗೊಳ್ಳುವ ವಿದ್ಯಾ ಆತ ಹುಟ್ಟಿದಾಗಿನಿಂದ ಸುಖವಾಗಿ ನಿದ್ದೆ ಮಾಡಿಲ್ಲ. ನಾನು ಆಸ್ಪತ್ರೆಯಲ್ಲಿ ಮಲಗಿದ್ದಾಗಲಂತೂ ಆಕೆ ರಾತ್ರಿ ಮಲುಗುತ್ತಿದ್ದುದೇ ಅಪರೂಪ. ನಾನು ಆಸ್ಪತ್ರೆಯಲ್ಲಿದ್ದಾಗ ಆಕೆ ಮಾಡಿದ ಕೆಲಸಗಳು ಇವು.

1. ಮನೆಯಲ್ಲಿ ಅಡಿಗೆ ಮಾಡಿ, ಉದಾತ್ತನಿಗೆ ಫೀಡ್ ಮಾಡಿ, ನಂತರ ಆಟೋ ಹಿಡಿದು ಆಸ್ಪತ್ರೆಗೆ ಬಂದು ನನಗೆ ಊಟ ತಂದುಕೊಡುವುದು.(ದಿನಕ್ಕೆ ಮೂರು ಬಾರಿ – ನಾಲ್ಕು ದಿನ)

2. ತನ್ನ ಆಫೀಸ್ ನೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ನನ್ನ ಇನ್ಶೂರೆನ್ಸ್ ಪೇಪರ್ಸ್ ಮೂವ್ ಮಾಡಿಸುವುದು.

3. ಸಿಸ್ಟರ್ ಗಳು ಹೇಳುತ್ತಿದ್ದ ಔಷಧಿಗಳನ್ನು ತಂದು ಕೊಡುವುದು.

4. ನನ್ನ ಆರೋಗ್ಯದ ಬಗ್ಗೆ ನನ್ನಪ್ಪ ಅಮ್ಮನಿಗೆ ನಿರಂತರ ಅಪ್ ಡೇಟ್ ಮಾಡುವುದು.

5. ನನ್ನ ಈ-ಮೇಲ್ ಗಳನ್ನು ಚೆಕ್ ಮಾಡಿ, ಅತ್ಯಗತ್ಯ ಈ-ಮೇಲ್ ಗಳಿಗೆ ಉತ್ತರ ಕಳಿಸುವುದು.

6. ಆಸ್ಪತ್ರೆಗೆ ಬಂದ ಬಳಿಕ ನನಗಾಗಿ ಹಣ್ಣು, ಜೂಸ್, ಎಳನೀರು ಇತ್ಯಾದಿ ತರಲು ಮತ್ತೆ ಹೊರಹೋಗುವುದು.

7. ಕೊನೆಯದಾಗಿ, ನನ್ನ ಬಗ್ಗೆ ಹೃದಯದಿಂದ ಕಾಳಜಿ ವಹಿಸುವುದು.

ವಿದ್ಯಾ ಒಬ್ಬಳೇ ಈ ಕೆಲಸ ಮಾಡುತ್ತಿದ್ದುದರಿಂದ ಅವಳಿಗೆ ನನ್ನಿಂದಾಗುತ್ತಿದ್ದ ತೊಂದರೆಯಿಂದ ನನಗೆ ತುಂಬಾ ಬೇಜಾರಾಗಿತ್ತು. ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆಗಿ ಮನೆಗೆ ಬಂದಾಗ, ವಿದ್ಯಾಗೆ ಕಣ್ತುಂಬಿಕೊಂಡು “ಥ್ಯಾಂಕ್ಯು ವಿದು” ಅಂದಿದ್ದೆ. ಅದಕ್ಕೆ ವಿದ್ಯಾ ಹೇಳಿದ್ದೇನು ಗೊತ್ತೆ? “ಸಾರಿ ಸುಗು. ನಿನ್ನನ್ನು ನಾನು ತುಂಬಾ ಲೇಟಾಗಿ ಆಸ್ಪತ್ರೆಗೆ ಎಡ್ಮಿಟ್ ಮಾಡಿಸಿದೆ. ಬೆಳಿಗ್ಗೆ ನೋವು ಬಂದರೆ ನಾನು ಎಡ್ಮಿಟ್ ಮಾಡಿಸಿದ್ದು ರಾತ್ರಿ 12 ಗಂಟೆಗೆ. ಆಯ್ ಆಮ್ ಸಾರಿ. ನನಗೆ ನಿನ್ನ ಸಿರಿಯಸ್ ಸ್ಥಿತಿ ಅರ್ಥವೇ ಆಗಲಿಲ್ಲ. ಸಾರಿ”

ವಿದು, ಮುಂದಿನ ಜನ್ಮಗಳಿದ್ದರೆ ನೀನೇ ನನ್ನ ಬಾಳಸಂಗಾತಿಯಾಗು ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ.

(ನಾಳೆ – ಇದ್ರ ಇರಬೇಕು ನನ್ನ ಮಾವನ್ಹಂಗ….)

ವಾಕ್ ಮಾಡುತ್ತಿದ್ದೆ…ಯೂರಿನ್ ಬ್ಯಾಗ್ ನೊಂದಿಗೆ….

ಸಿಸ್ಟೋಸ್ಕೋಪಿ ಆದ ನಂತರ ಬಂದು ವಿಚಾರಿಸಿಕೊಂಡು ಹೋಗಿದ್ದ ಡಾ. ಮಧುಸೂದನ್ ಕೋಣೆಯಲ್ಲಿ ಹಾಗೂ ಕಾರಿಡಾರ್ ನಲ್ಲಿ ನಡೆದಾಡುವಂತೆ ಹೇಳಿಹೋಗಿದ್ದರು. ಆದರೆ ನಡೆದಾಡುವುದಿರಲಿ ಮಗ್ಗುಲಾಗಿ ಮಲಗಲೂ ಆಗುತ್ತಿರಲಿಲ್ಲ. ಕಾರಣ…ಯೂರಿನ್ ಬ್ಯಾಗ್. ಪೈಪನನ್ನು ತೊಡೆಗೆ ಬೇರೆ ಅಂಟಿಸಿಬಿಟ್ಟಿದ್ದರು. ಹೀಗಾಗಿ ಸ್ವಲ್ಪ ಜೋರಾಗಿ ಅಲುಗಿದರೂ ನಾ ತಾಳಲಾರೆ….ನಾ ತಾಳಲಾರೆ…..

ಆದರೆ ವಾಕ್ ಮಾಡಲೇಬೇಕಾದ ಅನಿವಾರ್ಯತೆ ಬಂದುಬಿಟ್ಟಿತ್ತು. ಯಾಕೆಂದರೆ ಸಿಸ್ಟೋಸ್ಕೋಪಿ ಆದಮೇಲೆ ಎಕ್ಸ್ ರೇ ತೆಗೆಯುವಂತೆ ಡಾ. ಮಧುಸೂದನ್ ಸೂಚಿಸಿದ್ದರು. ಈಗ ನಾನು ಭೂಗತನಾಗಲೇಬೇಕಿತ್ತು. ಹಾಗಂತ ನಿರ್ಧರಿಸಿಬಿಟ್ಟೆ. ಬೇರೆ ದಾರಿಯೇ ಇರಲಿಲ್ಲ. ಎಕ್ಸ್ ರೇ ಮಾಡುವ ರೂಂ ಅಂಡರ್ ಗ್ರೌಂಡ್ ನಲ್ಲಿದ್ದುದರಿಂದ ಸ್ವಲ್ಪಸಮಯ ನಾನು ಭೂಗತನಾಗಲೇಬೇಕಿತ್ತು !!!

ವ್ಹೀಲ್ ಚೇರ್ ಬಂತು. ಮತ್ತೆ ವ್ಹೀಲ್ ಚೇರ್ ಮೇಲೆ ಕುಳಿತುಕೊಳ್ಳುವ ಸುಯೋಗ. ಮಂಚದ ಮೇಲಿಂದ ನಿಧಾನವಾಗಿ ಮೇಲೆದ್ದು ಪೈಪನ್ನು ನಾನೇ ಎತ್ತಿಕೊಂಡೆ. ವಾರ್ಡ್ ಬಾಯ್ ಯೂರಿನ್ ಬ್ಯಾಗನ್ನು ಎತ್ತಿಕೊಂಡ. ತುಂಬಾ ಅಂದರೆ ತುಂಬಾ ನಿಧಾನವಾಗಿ ವ್ಹೀಲ್ ಚೇರ್ ಅಲಂಕರಿಸಿದೆ. ನನ್ನ ಪ್ರಷ್ಠ ವ್ಹೀಲ್ ಚೇರ್ ಸ್ಪರ್ಶಿಸುತ್ತಲೇ ವ್ಹೀಲ್ ಚೇರ್ ಧನ್ಯವಾಯಿತು. ಪ್ರಷ್ಠಕ್ಕೆ ಮತ್ತೆ ತಂಪು ತಂಪು ಕೂಲ್ ಕೂಲ್.

ವಾರ್ಡ್ ಬಾಯ್ ಯೂರಿನ್ ಬ್ಯಾಗನ್ನು ನನ್ನ ಕೈಯಲ್ಲಿಟ್ಟ. ಏಕೆಂದು ತಿಳಿಯಲಿಲ್ಲ. ಕೈಯಲ್ಲಿ ಹಿಡಿದುಕೊಂಡು ಕುಳಿತೆ. ಆಹಾ…ಫೋಟೋ ತೆಗೆಯುವಂತಿತ್ತು ನನ್ನ ಪೋಸ್. ವ್ಹೀಲ್ ಚೇರ್ ಮೇಲೆ ನಾನು ರಾಜನಂತೆ ಕಂಗೊಳಿಸುತ್ತಿದ್ದೆ. ಕೈಯಲ್ಲಿ ಮಾತ್ರ ಯುರಿನ್ ಬ್ಯಾಗ್ ಇತ್ತು. ಎಂತಹ ಫೋಟೋ ಅಪಾರ್ಚುನಿಟಿ ಅಲ್ಲವೆ? ಆದರೆ ಅದನ್ನು ಭಂಗಗೊಳಿಸುವಂತೆ ವಾರ್ಡ್ ಬಾಯ್ ನನ್ನ ಮೇಲೆ ಬೆಟ್ ಶೀಟ್ ವೊಂದನ್ನು ಹೊದಿಸಿ ಎಲ್ಲವನ್ನೂ ಮುಚ್ಚಿಬಿಟ್ಟ. ಬದುಕಿದೆಯಾ ಸಿಸ್ಟೋಸ್ಕೋಪಿ ಮಾಡಿಸಿಕೊಂಡ ಜೀವವೆ ಎಂದುಕೊಂಡೆ.

ವ್ಹೀಲ್ ಚೇರ್ ಲಿಫ್ಟ್ ನತ್ತ ಪ್ರಯಾಣ ಬೆಳೆಸಿತು. ಲಿಫ್ಟ್ ನಲ್ಲಿ ಮತ್ತದೇ ಗಾಂಧಿ, ಅದೇ ಗಣಪತಿ, ಅದೇ ಲಕ್ಷ್ಮಿ…..ಲಿಫ್ಟ್ ಭೂಗತವಾಗುತ್ತಿದ್ದಂತೆ ಖುಲ್ ಜಾ ಸಿಮ್ ಸಿಮ್. ತೀರ ಕಷ್ಟಪಟ್ಟು ಎಕ್ಸ್ ರೇ ಟೇಬಲ್ ಮೇಲೆ ಮಲಗಿ ಎಕ್ಸ್ ರೇ ಮಾಡಿಸಿಕೊಂಡೆ. ನಾನಾಗ ಎಕ್ಸ್ ರೇ ಹೋಗಲಿ, A ಯಿಂದ Z ವರೆಗಿನ ಯಾವುದೇ ರೇ ಯನ್ನು ಮಾಡಿಸಿದರೂ ಮಾಡಿಸಿಕೊಳ್ಳುವಷ್ಟು ವಿಶಾಲ ಹೃದಯದವನಾಗುವ ಅನಿವಾರ್ಯ ಪರಿಸ್ಥಿತಿ ಇತ್ತು.

(ನಾಳೆ ಮನ ಮೆಚ್ಚಿದ ಮಡದಿ….)

ಸಿಸ್ಟರ್ ಗಳನ್ನು ಸಿಸ್ಟರ್ ಅಂತ ಯಾಕೆ ಕರೆಯಬೇಕು ಎಂಬುದು ಗೊತ್ತಾಯಿತು

ಇದನ್ನು ನೀವೂ ನೋಡಿರುತ್ತೀರಿ. ಕೇಳಿರುತ್ತೀರಿ. ಆಸ್ಪತ್ರೆಯ ಸಿಸ್ಟರ್ ಗಳನ್ನು ನಮ್ಮ ಹಿಂದಿ ಸೀರಿಯಲ್, ಫಿಲ್ಮ್ ಹಾಗೂ ಕನ್ನಡ ಚಲನಚಿತ್ರಗಳಲ್ಲಿ ಒಂದು ವಿಚಿತ್ರ ರೀತಿಯಲ್ಲಿ ಚಿತ್ರಿಸಿದ್ದಾರೆ. ಸಿಸ್ಟರ್ ಳನ್ನು ಗಾಯಗೊಂಡಿರುವ ಹಾಸ್ಯ ನಟ ತಬ್ಬಿಕೊಳ್ಳಲು ನೋಡುವುದು, ಪಟಾಯಿಸಲು ನೋಡವುದು, ಚುಂಬಿಸುವುದು, ಆಸ್ಪತ್ರೆಯ ಡಾಕ್ಟರ್ ಗಳು ಸಿಸ್ಟರ್ ಗಳನ್ನು ಯಾವಾಗಲೂ ತಮ್ಮ ಪ್ರಾಪರ್ಟಿ ಯಂತೆ ಟ್ರೀಟ್ ಮಾಡುವುದು ಹೀಗೆ ಸಿಸ್ಟರ್ ಗಳನ್ನು ಕೆಟ್ಟದಾಗಿಯೇ ತೋರಿಸಲಾಗಿದೆ. ಒಂದೆರಡು ಅಪವಾದಗಳಿರಬಹುದು ಅದಕ್ಕೆ. ಕೆಲ ವರ್ಷಗಳ ಹಿಂದೆ ಬಂದಿದ್ದ ಹಿಂದಿ ಸೀರಿಯಲ್ ಡಾಕ್ಟರ್ ಡಾಕ್ಟರ್ ಅಂತೂ ಸಿಸ್ಟರ್ ಗಳನ್ನು ಕೆಟ್ಟದಾಗಿ ತೋರಿಸಲಾಗಿದೆ ಎಂಬ ಕಾರಣಕ್ಕೆ ಬ್ಯಾನ್ ಆಯಿತು. ಟೈಟ್ ಸ್ಕರ್ಟ್ ತೊಡಿಸಿ, ವಕ್ಷಸ್ಥಳವನ್ನು ಆದಷ್ಟು ಅಪೀಲಿಂಗ್ ಆಗಿ ಮಾಡಿ, ಕ್ಲೀವೇಜ್ ಗೆ ಸಾಕಷ್ಟು ಅವಕಾಶವನ್ನಿಟ್ಟು ಸಿಸ್ಟರ್ ಗಳನ್ನು ತೋರಿಸಿರುವುದೇ ಹೆಚ್ಚು.

ಆದರೆ ಆಸ್ಪತ್ರೆಯಲ್ಲಿ ನನಗೆ ಮಾತ್ರ ಸಿಸ್ಟರ್ ಗಳೆಂಬ 20-30 ರ ನಡುವಿನ ಆ ಅಕ್ಕತಂಗಿಯರು ಇಲ್ಲದೇ ಹೋಗಿದ್ದರೆ ಬಹುಶಃ ಸಿಸ್ಟೋಸ್ಕೋಪಿಯಿಂದ ಹೊರಬರಲು ಮತ್ತಷ್ಟು ತ್ರಾಸಾಗುತ್ತಿತ್ತು ಎನಿಸುತ್ತದೆ. ದಿನದಲ್ಲಿ ಮೂರು ಬಾರಿ ಸರಿಯಾದ ಟೈಮಿಗೆ ಬಂದು ಸರಿಯಾಗಿ ನಾಲ್ಕು ಇಂಜೆಕ್ಷನ್ ಚುಚ್ಚುತ್ತಿದ್ದ, ಆಗಾಗ ಬಂದು ನೋಡಿಕೊಂಡು ಹೇಗಿದ್ದೀರಿ?” ಅಂತ ಕೇಳುತ್ತಿದ್ದ, ನಾನು ಏನು ತಿನ್ನಬೇಕು ಏನು ತಿನ್ನಬಾರದು ಎಂಬುದರ ಬಗ್ಗೆ ಕಟ್ಟುನಿಟ್ಟಾಗಿ ಹೇಳುತ್ತಿದ್ದ, ಟ್ಯಾಬ್ಲೆಟ್ಟನ್ನು ಬೆಡ್ ಮೇಲಿಟ್ಟರೆ, ಬೇಡ್ ಮೇಲಿಡಬೇಡಿ. ಮತ್ತೆ ಇನ್ ಫೆಕ್ಷನ್ ಆಗುತ್ತದೆ ಎಂಬಷ್ಟರ ಮಟ್ಟಿಗೆ ಕೇರ್ ತೆಗೆದುಕೊಳ್ಳುತ್ತಿದ್ದ ಆ ಹುಡುಗಿಯರು ನಿಜವಾಗಿಯೂ ಕೇರಿಂಗ್ ಎನಿಸಿದರು.

ಆಸ್ಪತ್ರೆಯಲ್ಲಿದ್ದಾಗ ಎಂತಹ ಸಿಕ್ಸ್ ಪ್ಯಾಕ್ ವ್ಯಕ್ತಿಯೂ ಮಗುವಿನಂತಾಗಿಬಿಡುತ್ತಾನೆ. ಆತನಿಗೆ ದೈಹಿಕ ಕೇರ್ ನ ಜೊತೆಗೆ ಮಾನಸಿಕ ಸಾಂತ್ವನದ ಅಗತ್ಯ ಕೂಡ ಇರುತ್ತದೆ. ಪುರುಷನಿಗೆ ಮಾನಸಿಕ ಸಾಂತ್ವನ, ಧೈರ್ಯ ತಾಯಿಯಲ್ಲದೆ ಮತ್ತಾರು ಕೊಡಬಲ್ಲಳು? ಒಬ್ಬ ಹೆಣ್ಣು, ದೈಹಿಕವಾಗಿ ದುರ್ಬಲಗೊಂಡ ಪುರುಷಸಿಂಹನಿಗೆ ಧೈರ್ಯ, ಶಕ್ತಿಯನ್ನು ಕೊಡಬಲ್ಲಳು. ಆಸ್ಪತ್ರೆಯಲ್ಲಿ ಈ ಸಿಸ್ಟರ್ ಗಳೂ ನನಗೆ ಮಾಡಿದ್ದು ಇದನ್ನೇ. ನನ್ನ ರೂಂ ಗೆ ಸಿಸ್ಟರ್ ಗಳು ಎಂಟರ್ ಆಗುತ್ತಿದ್ದಂತೆ ಏನೋ ಒಂದು ರೀತಿಯ ಚೈತನ್ಯ ಬಂದಂತಾಗುತ್ತಿತ್ತು. ಹೇಳಿಕೊಳ್ಳಲಾಗದ ಖುಷಿ. ಐ ಯೂಸ್ಟ್ ಟು ಫೀಲ್ ಹ್ಯಾಪಿ.

ಮೊಟ್ಟಮೊದಲ ಬಾರಿಗೆ ನನಗೆ ಆಸ್ಪತ್ರೆಯ ಸಿಸ್ಟರ್ ಗಳು ಗ್ರೇಟ್ ಎನಿಸಿದರು. ಅದಕ್ಕೆ ಮತ್ತೊಂದು ಕಾರಣ…..ನನ್ನ ಜನನಾಂಗದ ಮೂಲಕ ಬ್ಲಾಡರ್ ಗೆ ಜೋಡಿಸಿದ್ದ ಪೈಪನ್ನು ತೆಗೆದಿದ್ದು ಕೂಡ ಒಬ್ಬ ಸಿಸ್ಟರ್ರೇ……

ಐ ಆಮ್ ಗ್ರೇಟ್ ಫುಲ್ ಟು ಯೂ ಸಿಸ್ಟರ್ಸ್……ಥ್ಯಾಂಕ್ಸ್ ವಿಲ್ ಬಿ ಎ ಲಿಮಿಟೆಡ್ ವರ್ಡ್ ಟು ಥ್ಯಾಂಕ್ ಯೂ….

(ಲಾಸ್ಟ್ ಶಾಕ್ – ಈ ಲೇಖನಕ್ಕಾಗಿ ಸೂಟ್ ಆಗುವ ಚಿತ್ರವೊಂದನ್ನು ಇಂಟರ್ನೆಟ್ಟಲ್ಲಿ ಹುಡುಕುತ್ತಿದ್ದೆ. ‘ಇಂಡಿಯನ್ ನರ್ಸ್’ ಎಂದು ಸರ್ಚ್ ವರ್ಡ್ ಟೈಪ್ ಮಾಡಿದ ತಕ್ಷಣ, ಮೊದಲ ಪೇಜ್ ನಲ್ಲಿ ನರ್ಸ್ ಜಯಲಕ್ಷ್ಮಿ ರೇಣುಕನ ಚಿತ್ರಗಳನ್ನು ತೋರಿಸುತ್ತಿದ್ದ ಫೋಟೋ ಥಟ್ ಅಂತ ಬಂತು)

(ನಾಳೆ : ವಾಕ್ ಮಾಡುತ್ತಿದ್ದೆ…ಯೂರಿನ್ ಬ್ಯಾಗ್ ನೊಂದಿಗೆ….)

ಇಂದು ಮುಕ್ತ ಮುಕ್ತ ಸಂವಾದ ಆದಿಚುಂಚನಗಿರಿಯಲ್ಲಿ

ಇಂದು ಮುಕ್ತ ಮುಕ್ತ ಸಂವಾದ ಆದಿಚುಂಚನಗಿರಿಯಲ್ಲಿ ನಡೆಯಲಿದೆ. ಎಲ್ಲ ನಾಗರಿಕರಿಗೆ ಸ್ವಾಗತ.

ಸುಘೋಷ್ ಎಸ್. ನಿಗಳೆ

ಮೂತ್ರವಾಗುವ ಅನುಭವವಾಗುತ್ತಿಲ್ಲ, ಮೂತ್ರ ಮಾತ್ರ ಆಗುತ್ತಿದೆ.

ಆಕ್ಸಿಡೆಂಟ್ ಆದಾಗ ಕೈ ತರಚಿರುತ್ತದೆ ಅಷ್ಟೇ. ಆದರೆ ಆಗ ಉಂಟಾದ ಶಾಕ್ ನಿಂದ ಹೊರಬರಲು ತಿಂಗಳುಗಳೇ ಬೇಕಾಗುತ್ತವೆ. ಆಕ್ಸಿಡೆಂಟ್ ನಲ್ಲಿ ದೇಹಕ್ಕೆ ಏನೇನೂ ಆಗದಿದ್ದರೂ ಕೇವಲ ಶಾಕ್ ನಿಂದಾಗಿ ಟೂ ವ್ಹೀಲರ್, ಫೋರ್ ವ್ಹೀಲರ್ ಓಡಿಸುವುದನ್ನೇ ಬಿಟ್ಟವರಿದ್ದಾರೆ. ಆನೆ ಹೋಗಿಬಿಡುತ್ತದೆ. ಬಾಲ ಮಾತ್ರ ಸಿಕ್ಕಿ ಬೀಳುತ್ತದೆ. ಅಂತಹ ಅನುಭವ ಇದು.

ಸಿಸ್ಟೋಸ್ಕೋಪಿ ಆದ ಬಳಿಕ ನನಗೆ ಸರಿಯಾಗಿ ಎಚ್ಚರವಾದಾಗ ಮಧ್ಯಾಹ್ನ ಒಂದು ಗಂಟೆಯಾಗಿತ್ತು. ನಿಧಾನವಾಗಿ ಮಾತನಾಡಲು ಆರಂಭಸಿದ್ದೆ. ಕಾಲುಗಳಿಗೆ ಸೆನ್ಸೇಷನ್ ಮರಳಿತ್ತು. ಆದರೆ ನಿಶ್ಯಕ್ತಿ ಆವರಿಸಿತ್ತು. ಏನೇ ಆದರೂ ಸಿಸ್ಟೋಸ್ಕೋಪಿ ಮುಗಿಸಿದ್ದ ಸಮಾಧಾನ ಮನಸ್ಸಿನಲ್ಲಿತ್ತು. ನಿಧಾನವಾಗಿ ಮಗ್ಗುಲಾಗೋಣ ಎಂದಕೊಂಡೆ. ಆದರೆ ತೊಡೆಯ ಸಂದಿಯಲ್ಲಿ ಏನು ಹತ್ತಿದ ಹಾಗೆ ಆಯಿತು. ಕತ್ತೆತ್ತಿ ನೋಡಿದರೆ, ಚಾದರದ ಒಳಗಿನಿಂದ ಪೈಪ್ ಒಂದನ್ನು ಬೆಡ್ ನ ಪಕ್ಕ ಇಳಿಬಿಡಲಾಗಿತ್ತು. ಪೈಪನ್ನೇ ಫಾಲೋ ಮಾಡಿದರೆ ಬೆಡ್ ಕೆಳಗಿದ್ದ ಯುರಿನ್ ಬ್ಯಾಗ್ ಗೆ ಪೈಪ್ ಸೇರಿತ್ತು. ಅದರಲ್ಲಿ ಆಗಲೇ ಕಡು ಕಂದು ಬಣ್ಣದ ಮೂತ್ರ ಶೇಖರವಾಗಿತ್ತು. ಓಹ್….ಆಗ ನನಗೆ ಗೊತ್ತಾಯಿತು. ಮೂತ್ರ ವಿಸರ್ಜಿಸಲು ಜನನಾಂಗದಿಂದ ಪೈಪ್ ಅಳವಡಿಸಿದ್ದರೆಂದು.

ನಿಧಾನವಾಗಿ ನೀರು ಕುಡಿಯುತ್ತಿದ್ದೆ. ಆದರೆ ಮೂತ್ರಮಾತ್ರ ಆಗುತ್ತಲೇ ಇರಲಿಲ್ಲ. ಯುರಿನ್ ಬ್ಯಾಗನ್ನು ಮಾತ್ರ ವಾರ್ಡ್ ಬಾಯ್ ಬಂದು ಪ್ರತಿ ಎರಡುಗಂಟೆಗಳಿಗೊಮ್ಮೆ ಖಾಲಿ ಮಾಡಿ ಮತ್ತೆ ಇಟ್ಟು ಹೋಗುತ್ತಿದ್ದ. ನನಗೋ ಸಮಸ್ಯೆ ಬಗೆಹರಿಯಲಿಲ್ಲ. ಮೂತ್ರ ಮಾಡದಿದ್ದರೂ ಹೇಗೆ ಯುರಿನ್ ಬ್ಯಾಗ್ ತುಂಬುತ್ತಿದೆ ಎಂದು. ಕೊನೆಗೆ ಸಂಶಯ ತಾಳಲಾರದೆ ಮಾವನವರನ್ನು ಕೇಳಿದೆ. ಅವರೆಂದರು “ಪೈಪ್ ಹಾಕಿರುವಾಗ ಮೂತ್ರ ಮಾಡುವ ಅನುಭವವಾಗುವುದಿಲ್ಲ. ಆದರೆ ಮೂತ್ರ ವಿಸರ್ಜನೆಯಾಗುತ್ತಿರುತ್ತದೆ” ಎಂದು.

ಸರಿ. ಎಂದೆ. ಆದರೆ ನಿಜವಾದ ಶಾಕ್ ಆಗಿದ್ದು ರಾತ್ರಿಯ ವೇಳೆಗೆ. ಅದನ್ನು ನೆನೆಸಿಕೊಂಡರೆ ಇಂದಿಗೂ ಒಂದು ಕ್ಷಣ ನಡುಗುತ್ತೇನೆ. ಸಿಸ್ಟೋಸ್ಕೋಪಿಯನ್ನು ಇನ್ನೂ ಹತ್ತುಬಾರಿಯಾದರೂ ಮಾಡಿಸಿಕೊಂಡೇನು. ಆದರೆ ಈ ರೀತಿಯ ಪೈಪ್ ನಿಂದ ಮೂತ್ರ ಮಾತ್ರ ವಿಸರ್ಜಿಸಲಾರೆ ಎನಿಸಿಬಿಟ್ಟಿತು.

ನನ್ನ ಕಲ್ಪನೆಯ ಪ್ರಕಾರ ನೇರವಾಗಿ ಜನನಾಂಗಕ್ಕೆ ಒಂದು ಪೈಪ್ ಅಳವಡಿಸಿರುತ್ತಾರೆ. ಅದರಿಂದ ಮೂತ್ರ ವಿಸರ್ಜನೆ ಮಾಡುತ್ತಿದ್ದೇನೆ ಎಂಬುದಾಗಿತ್ತು. ಆದರೆ ಯಾವುದೋ ಕಾರಣಕ್ಕೆ ಗೌನ್ ಸರಿಸಿದಾಗ ಶಾಕ್ ಹೊಡೆಯಿತು. ಪೈಪ್ ಜನನಾಂಗದ ಒಳಗೆ ಹೊರಟುಹೋಗಿತ್ತು. ಧಡ್ ಅಂತ ಮಾವನವರಿಗೆ ಕೇಳಿದೆ.

“ಇದೇನಿದು?”

“ಹೌದು. ಪೈಪನ್ನು ನೇರವಾಗಿ ಬ್ಲಾಡರ್ ಗೆ ಕನೆಕ್ಟ್ ಮಾಡಿರುತ್ತಾರೆ. ಅಲ್ಲಿಂದಲೇ ನೇರವಾಗಿ ಮೂತ್ರ ವಿಸರ್ಜನೆಯಾಗುತ್ತದೆ” ಎಂದರು.

ಸುಸ್ತು ಹೊಡೆದು ಬಿಟ್ಟೆ. ದೈಹಿಕವಾಗಿ ಗಟ್ಟಿಯಿದ್ದರೂ ಮಾನಸಿಕವಾಗಿ ತೀರ ಕಿರಿಕಿರಿ ಆಗಲಾರಂಭಿಸಿತು. ಹೋಗಿ ಬರೋ ಸಿಸ್ಟರ್ ಗಳಿಗೆ, ಡಾಕ್ಟರ್ ಗಳಿಗೆ ಪ್ರತಿ ವಿಸಿಟ್ ನಲ್ಲೂ ಕೇಳತೊಡಗಿದೆ. “ಯಾವಾಗ ಪೈಪ್ ತೆಗೆಯುತ್ತೀರಿ? ತೆಗೆಯುವಾಗ ನೋವಾಗುತ್ತದಾ?” ಅಂತ. “ಇಲ್ಲ. ಇಲ್ಲ” ಎಂದು ಎಲ್ಲರೂ ಹೇಳುತ್ತಲೇ ಇದ್ದರು. ಆದರೆ ಪೈಪ್ ನಿಂದ ಮೂತ್ರ ವಿಸರ್ಜನೆ ಮಾಡಿದ ಅನುಭವ ಮಾತ್ರ…….

(ಸೋಮವಾರ – ಸಿಸ್ಟರ್ ಗಳನ್ನು ಸಿಸ್ಟರ್ ಅಂತ ಯಾಕೆ ಕರೆಯಬೇಕು ಎಂಬುದು ಗೊತ್ತಾಯಿತು).

ವೊಮಿಟಿಂಗ್ ಸೆನ್ಸೇಷನ್ ಆಗಿ ಬೊಂಬಡಾ ಬಜಾಯಿಸಿದ್ದು,…ಸಿಸ್ಟರ್ ಗಳು ಓಡಿ ಬಂದಿದ್ದು

ನಿಧಾನವಾಗಿ ಪುಟ್ಟುರಾಜು ಸಿಸ್ಟರ್ ಗಳು ಹಾಗೂ ಇತರ ವಾರ್ಡ್ ಬಾಯ್ ಗಳ ಸಹಾಯದಿಂದ ಸ್ಟ್ರೇಚರ್ ಮೇಲೆ ಮಲಗಿಸಿದ. ಹೋಗಬೇಕಾದರೆ ವ್ಹೀಲ್ ಚೇರ್, ಬರಬೇಕಾದರೆ ಸ್ಟ್ರೆಚರ್. ಎಂತಹ ಪ್ರಮೋಷನ್! ವ್ಹೀಲ್ ಚೇರ್ ನಿಂದ ವ್ಹೀಲ್ ಬೆಡ್ ವರೆಗೆ. ನನಗೆ ಸುತ್ತಮುತ್ತಲೂ ನಡೆಯುತ್ತಿದ್ದು ಅಸ್ಪಷ್ಟವಾಗಿ ಗೊತ್ತಾಗುತ್ತಿತ್ತು. ಮತ್ತೆ ಲಿಫ್ಟ್ ನೊಳಕ್ಕೆ ತಂದರು. ಗಾಂಧಿ ತಾತಾ, ಲಕ್ಷ್ಮಿ, ಗಣಪತಿ ಮಸುಕುಮಸುಕಾಗಿ ಕಂಡರು. ಮೋಹನ್ ದಾಸ್ ಕರಮಚಂದ್ ಗಾಂಧಿ ಏನೇ ಹೇಳಿದರೂ, ನಾನು ಕೇಳುವ ಸ್ಥಿತಿಯಲ್ಲಿರಲಿಲ್ಲ. ಅಂತೂ ಇಂತೂ ನನ್ನ 202 ಬಂತು. ರೂಮಪ್ರವೇಶವಾಯಿತು.

ಈಗ ನನ್ನನ್ನು ಸ್ಟ್ರೆಚರ್ ನಿಂದ ಹಾಸಿಗೆಯ ಮಲಗಿಸಬೇಕಾಗಿತ್ತು. ಏಳುವ ಸ್ಥಿತಿಯಲ್ಲಿ ನನ್ನಾಣೆಗೂ ನಾನಿರಲಿಲ್ಲ. ಠಕ್ ಅಂತ ಪುಟ್ಟರಾಜು ನನ್ನ ಬೆಡ್ ಮೇಲೆ ಹತ್ತಿ ನಿಂತುಕೊಂಡು ಬಿಟ್ಟ. ಯಾಕಪ್ಪಾ ಹೀಗೆ ಎಂದು ನೋಡುವಷ್ಟರಲ್ಲಿ ನನ್ನನ್ನು ಬೆಡ್ ಶೀಟ್ ಸಮೇತ ಒಮ್ಮೆಲೇ ಎಲ್ಲರೂ ಎತ್ತಿ ಹಾಸಿಗೆ ಮೇಲೆ ಇಟ್ಟುಬಿಟ್ಟರು. ಎಷ್ಟು ನಾಜೂಕಾಗಿ ಈ ಕೆಲಸ ನಡೆಯಿತೆಂದರೆ ನನಗೆ ಪುಟ್ಟರಾಜುವಿನ 12 ವರ್ಷಗಳ ಎಕ್ಸಪಿರಿಯೆನ್ಸ್ ಬಗ್ಗೆ ತುಂಬಾ ಅಭಿಮಾನವೆನಿಸಿತು.

ಸಲೈನ್ ಬಾಟಲಿಯನ್ನು ಮತ್ತೆ ನನ್ನ ಪಕ್ಕದಲ್ಲಿ ಜೋಡಿಸಲಾಯಿತು. “ಇನ್ನು ಸ್ವಲ್ಪ ಹೊತ್ತಲ್ಲಿ ಕಾಲಿಗೆ ಸೆನ್ಸೇಷನ್ ಬರುವುದು. ರೆಸ್ಟ್ ತೆಕ್ಕೊಳ್ಳಿ ಆಯ್ತಾ” ಅಂತ ಮಂಗಳೂರಿನ ಸೂಜಿಮೆಣಸಿನಕಾಯಿ ಸಿಸ್ಟರ್ ಹೇಳಿ ಹೋದಳು. ಆಕೆ ಹೊರಗೆ ಹೋಗಿ ಎರಡು ನಿಮಿಷಗಳಾಗಿರಬೇಕು. ಇನ್ನೇನು ನಾನು ಕಣ್ಣು ಮುಚ್ಚಿ ಮಲಗಬೇಕು ಎನ್ನುವಷ್ಟರಲ್ಲಿ. ವಿಪರೀತ ವೋಮಿಟಿಂಗ್ ಸೆನ್ಸೆಷನ್ ಬಂದುಬಿಟ್ಟಿತ್ತು. ಆದರೆ ವಾಂತಿ ಮಾಡಲು ಹೊಟ್ಟೆಯಲ್ಲಿ ಏನೆಂದರೆ ಏನೂ ಇಲ್ಲ. ವಾಂತಿ ಮಾಡುವ ಹಾಗೆ ಅನಿಸುತ್ತಿದೆ-ವಾಂತಿ ಮಾಡಲಾಗುತ್ತಿಲ್ಲ-ಕನಿಷ್ಠ ಎದ್ದುಕೂರಲು ಶಕ್ತಿಯೂ ಇಲ್ಲ. ವ್ಯಾಬ್ ವ್ಯಾಬ್….ಎಂದು ಜೋರಾಗಿ ಧ್ವನಿ ಹೊರಡಲಾರಂಭಿಸಿತು. ಮೊದಲೇ ಕಂಚಿನ ಕಂಠದ ನನ್ನ ಧ್ವನಿ 202 ರೂಮಿನಿಂದ ಹೊರಗೆ ಹೋದದ್ದೆ ಆಸ್ಪತ್ರೆಯ ಸಮಸ್ತ ಮೂಲೆಮೂಲೆಗಳಲ್ಲಿ ಪ್ರತಿಧ್ವನಿಸಿತು. ಹೀಗೆ ಎರಡು ಮೂರು ಬಾರಿ ಆಯಿತು. ಧಡ ಧಡ ಹವಾಯಿ ಚಪ್ಪಲಿಗಳ ಸದ್ದು ಕೇಳಿ ಬಂತು. ಕಣ್ಣು ಬಿಟ್ಟು ನೋಡುವಷ್ಟರಲ್ಲಿ ನನ್ನ ಸುತ್ತ ಸಿಸ್ಟರ್ ಗಳ ದಂಡೇ ನೆರೆದಿತ್ತು. ಅಬ್ಬಾ ಮಾತೃಹೃದಯವೆ!! (ಸಿಸ್ಟರ್ ಹೃದಯವೇ?) “ಏನಾಯ್ತು?” ಎಂದರು. “ವೋಮಿಟಿಂಗ್ ಸೆನ್ಸೇಷನ್” ಅಂದೆ. ಈಗ ಮಾತನಾಡುವಾಗ ಕನಿಷ್ಠ ಮೂರು ಬಾಟಲಿ ಬಿಯರ್ ಹಾಕಿದವನ ಹಾಗೆ ನಾಲಿಗೆ ತೊದಲಿತು. “ಏನೂ ಆಗಲ್ಲ. ಇಟ್ ಇಸ್ ನಾರ್ಮಲ್. ಆದರೆ ಸೌಂಡ್ ಮಾಡೇಬೇಡಿ. ಆಯ್ತಾ” ಅಂತ ಸಿಸ್ಟರ್ ಧಮಕಿ ಹಾಕಿದಳು. ಅವಳ ಧಮಕಿಗೋ ಏನೋ ಅಂತೂ ನನ್ನ ವಾಂತಿಯ ಸೆನ್ಸೇಷನ್ ಶಾಂತವಾಯಿತು.

ನಿಧಾನವಾಗಿ ಕಣ್ಣುಮುಚ್ಚಿ ಮಲಗಿಕೊಂಡೆ. ಅಷ್ಟರಲ್ಲಿ ಜಿ. ಎನ್. ಮೋಹನ್ ಹಾಗೂ ಟಿ. ಎನ್. ಸೀತಾರಾಮ್ ಸರ್ ಫೋನ್ ಕೆಲವೇ ನಿಮಿಷಗಳ ಅಂತರದಲ್ಲಿ ಬಂತು. ನನ್ನ ಮಾವನೇ ಮಾತನಾಡಿದರು. ಅವರು ಮಾತನಾಡುತ್ತಿದ್ದುದು ಅಸ್ಪಷ್ಟವಾಗಿ ಕೇಳಿಸಿತು. ದೇಹ ಹೈರಾಣಾಗಿದ್ದರೂ ಮನಸ್ಸಿಗೆ ಸಮಾಧಾನವಾಯಿತು.

(ನಾಳೆ : ಮೂತ್ರವಾಗುವ ಅನುಭವವಾಗುತ್ತಿಲ್ಲ. ಮೂತ್ರ ಮಾತ್ರ ಆಗುತ್ತಿದೆ)

ಇಂದು ಸಂಜೆ ಓದಿನರಮನೆಯಲ್ಲಿ ತಿಂಗಳ ಒನಪು

ಆಯ್ತು….ಆಯ್ತು…ಆಗೇssssss…..ಹೋಯ್ತು…..ಸಿಸ್ಟೋಸ್ಕೋಪಿ….

ಹಣೆಯಲ್ಲಿ ಬರೆದಿದ್ದರೆ ಬ್ರಹ್ಮ, ಯಾರು ತಪ್ಪಿಸುವರು ತಮ್ಮ

ಬಂದಿತ್ತು ಮುಂದೆ ಅಂದು, ಸಿಸ್ಟೋಸ್ಕೋಪಿ ಎಂಬ ಗುಮ್ಮ!!

MAJOR OT ಯಲ್ಲಿ ಎಂಟರ್ ಆಗುತ್ತಲೇ ಅಲ್ಲಿ ಎಲ್ಲರೂ ಮುಖಕ್ಕೆ ಮಾಸ್ಕ್ ಹಾಕಿಕೊಂಡಿದ್ದರಿಂದ ಪ್ರತಿಯೊಬ್ಬರೂ ಲಷ್ಕರ್ ಎ ತೋಯ್ಬಾದ ಉಗ್ರಗಾಮಿಗಳಂತೆ ಕಂಡರು. ಅದರಲ್ಲಿ ಮಹಿಳಾ ಉಗ್ರಗಾಮಿಗಳಾದ ಸಿಸ್ಟರ್ ಗಳೂ ಇದ್ದರು. ಪ್ರತಿಯೊಬ್ಬ ಉಗ್ರಗಾಮಿಯೂ ಬರೆಯವುದರಲ್ಲಿ, ಉಪಕರಣ ಅಳವಡಿಸುವುದರಲ್ಲಿ, ಯಾವುದೋ ಮಷಿನ್ ಅನ್ನು ಮಾನಿಟರ್ ಮಾಡುವಲ್ಲಿ ನಿರತರಾಗಿದ್ದರು. ಅದಾಗಲೇ ನನ್ನ ಕನ್ನಡಕವನ್ನು ಮಾವನವರಿಗೆ ನೀಡಿದ್ದೆ. ಹೀಗಾಗಿ ಉಗ್ರಗಾಮಿಗಳು ಮಂಜುಮಂಜಾಗಿ ಕಾಶ್ಮೀರಿನ ಇಬ್ಬನಿಯಲ್ಲಿದ್ದಂತೆ ಕಂಡರು. ಅಲ್ಲಿ ಇದ್ದ ಬೆಡ್ ಮೇಲೆ ನನ್ನನ್ನು ಮಲಗಿಸಿದರು. ಅಷ್ಟರಲ್ಲಿ ಯೂರಾಲಾಜಿಸ್ಟ್ ಡಾ. ಮಧುಸೂದನ್ ಅವರನ್ನು ನಾನು ಗುರುತಿಸಿದ್ದೆ. ಮೊದಲು ನಾನೇ ಡಾ. ಮಧುಸೂದನ್ ಅವರಿಗೆ ಹಲೋ ಡಾಕ್ ಎಂದು ವಿಷ್ ಮಾಡಿದೆ. ಅವರು ಕೂಡ ತಮ್ಮ ಕಣ್ಣುಗಳಲ್ಲೇ ವಿಷ್ ಮಾಡಿದರು.

ಬೆಡ್ ಮೇಲೆ ಮಲಗಿಸಿದ ಬಳಿಕ. ಬೆಡ್ ನ ಅಕ್ಕಪಕ್ಕ ನನ್ನ ಕೈಗಳಿರುವ ಎರಡೂ ಕಡೆಯಲ್ಲಿ ಎಕ್ಸಟೆನ್ಷನ್ ಅಡ್ಜಸ್ಟ್ ಮಾಡಿ ಕೈಯನ್ನು ಅವುಗಳ ಮೇಲೆ ರೆಸ್ಟ್ ಮಾಡುವಂತೆ ಹೇಳಿದರು. ಜೀಸಸ್ ನನ್ನು ಮಲಗಿಸಿದರೆ ಹೇಗೆ ಕಾಣುತ್ತಾನೋ ಆಗ ಸರಿಯಾಗಿ ನಾನು ಹಾಗೇ ಕಾಣುತ್ತಿದ್ದೆ. ಎಡಗೈಗೆ ಸಲೈನ್ ಹಾಕಿದ್ದರು. ನಂತರ ನನ್ನ ತೋರುಬೆರಳಿಗೆ ಕ್ಲಿಪ್ ಅಳವಡಿಸಿದರು. ಅದು ಕುಂಯ್ ಕುಂಯ್ ಸದ್ದು ಮಾಡುತ್ತ ನನ್ನ ಹಾರ್ಟ್ ಬೀಟನ್ನು ದಾಖಲಿಸುತ್ತಿತ್ತು. ಎಡಗೈಗೆ ಬಿಪಿ ಯ ಬೆಲ್ಟ್ ಹಾಕಿದ್ದರು. ಅದು ಅಟೋಮ್ಯಾಟಿಕ್ ಆಗಿ ಸಿಸ್ಟೋಸ್ಕೋಪಿ ಮುಗಿಯುವವರೆಗೂ ನಿಗದಿತ ಅಂತರಕ್ಕೆ ಒಮ್ಮೆ ನನ್ನ ಬಿಪಿ ತೋರಿಸುತ್ತಿತ್ತು.

ಅಷ್ಟರಲ್ಲಿ ಅನಸ್ತೇಷಿಯಿಸ್ಟ್ ಡಾ. ವೇಣುಗೋಪಾಲ್ ಬಂದು ಪರಿಚಯ ಹೇಳಿಕೊಂಡಿದ್ದರು. ನಿಧಾನವಾಗಿ ನನ್ನನ್ನು ಕೂರಿಸಿದರು. ತಲೆ ಕೆಳಗೆ ಬಗ್ಗಿಸುವಂತೆ ಹೇಳಿದರು. “ಸುಘೋಷ್ ಈಗ ನಿಮಗೆ ಅನೇಸ್ತೇಷಿಯಾದ ಇಂಜೆಕ್ಷನ್ ಕೊಡುತ್ತೇನೆ. ಏನೂ ನೋವಾಗುವುದಿಲ್ಲ. ಇಟ್ ಇಸ್ ನಾರ್ಮಲ್ ಇಂಜೆಕ್ಷನ್. ಅದು ಕೊಟ್ಟ ನಂತರ ನಿಮ್ಮ ಸೊಂಟದ ಕೆಳಗಿನ ಭಾಗ ಸೆನ್ಸೇಷನ್ ಕಳೆದುಕೊಳ್ಳುತ್ತದೆ. ಯಾವುದಕ್ಕೂ ವಿಚಲಿತರಾಗಬೇಡಿ” ಎಂದು ಡಾ. ವೇಣುಗೋಪಾಲ್ ತಮ್ಮ ಪ್ರತಿಯೊಂದು ಕೆಲಸವವನ್ನೂ ವಿವರಿಸಿದರು. ನನ್ನ ಬೆನ್ನಿಗೆ ಮೊದಲು ಒಂದು ದ್ರಾವಣ ಸ್ಪ್ರೇ ಮಾಡಿದರು. ತುಂಬಾ ತಣ್ಣಗಿತ್ತು ಅದು. ನಂತರ ಬೆನ್ನಿನ ಮೇಲೆ (ಬಹುಶಃ) ಬಟ್ಟೆಯೊಂದನ್ನು ಇಟ್ಟು, ಅನಸ್ತೇಷಿಯಾದ ಇಂಜೆಕ್ಷನ್ ಚುಚ್ಚಲಾಯಿತು. ಏನೆಂದರೆ ಏನೂ ನೋವಾಗಲಿಲ್ಲ. ನಿಧಾನವಾಗಿ ಮತ್ತೆ ಮಲಗಿಸಿದರು.

ಅನಸ್ತೇಷಿಯಾ ಕೊಟ್ಟ ತಕ್ಷಣದಿಂದ ನಾನು ಕಾಲುಗಳನ್ನು ಸ್ವಲ್ಪಸ್ವಲ್ಪವಾಗಿ ಅಲುಗಾಡಿಸುತ್ತಿದ್ದೆ. ಯಾವಾಗ ನನಗೆ ಕಾಲುಗಳನ್ನು ಅಲುಗಾಡಿಸಲು ಆಗುವುದಿಲ್ಲವೋ ನೋಡೋಣ ಎಂದು. ಸುಮಾರು ಹತ್ತು ನಿಮಿಷದ ಬಳಿಕ ಕಾಲು ಹೋಗಲಿ ಬೆರಳು ಕೂಡ ಅಲ್ಲಾಡಿಸಲು ಆಗಲಿಲ್ಲ. ಐ ಹ್ಯಾಡ್ ನೋ ಸೆನ್ಸ್ ಆಫ್ ಮೈ ಬಾಡೀಸ್ ಲೋವರ್ ಪೋರ್ಷನ್. ಆದರೆ ನಿಧಾನವಾಗಿ ಕಾಲಿನ ಬಳಿ ಮತ್ತೆರಡು ಎತ್ತರದ ಎಕ್ಸಟೆನ್ಶನ್ ತಂದು ಅವುಗಳ ಮೇಲೆ ನನ್ನ ಎರಡೂ ಕಾಲುಗಳನ್ನು ಅಗಲಿಸಿ ಇಡಲಾಯಿತು. ಅದೆಲ್ಲ ನನಗೆ ಗೊತ್ತಾಗುತ್ತಿತ್ತು.

ಡಾ. ವೇಣುಗೋಪಾಲ್ ಕೇಳಿದರು. “ಈಗ ಗೊತ್ತಾಗುತ್ತಿದ್ದೆಯಾ ನಾವು ಏನು ಮಾಡುತ್ತಿದ್ದೇವೆ ಎಂದು?” ಅಂತ.

“ಇಲ್ಲ” ಅಂದೆ.

ಡಾ. ಮಧುಸೂದನ್ ಬಂದು ನನ್ನ ಕಾಲುಗಳ ಬಳಿ ಕುಳಿತುಕೊಂಡರು. ನನ್ನ ಜನನಾಂಗವನ್ನು ಮುಟ್ಟಿದ ಅನುಭವವಾಯಿತು. ಒಂದು ಕ್ಷಣ ಹೆದರಿದೆ.

“ಡಾಕ್, ನೀವು ಮುಟ್ಟುತ್ತಿರುವುದು ಗೊತ್ತಾಗುತ್ತಿದೆ” ಎಂದೆ.

“ಡೋಂಟ್ ವರಿ ಸುಘೋಷ್. ನಾನು ಮುಟ್ಟುವುದು ಗೊತ್ತಾಗುತ್ತೆ. ಆದರೆ ನಿಮಗೆ ಯಾವುದೇ ಪೇನ್ ಅನುಭವಕ್ಕೆ ಬರುವುದಿಲ್ಲ” ಅಂದರು.

ನಿಜವಾಗಿಯೂ ಪೇನ್ ಅನುಭವಕ್ಕೆ ಬರಲಿಲ್ಲ. ಅನಸ್ತೇಷಿಯಾ ಕಂಡುಹಿಡಿದವನಿಗೆ ಮನಸ್ಸಿನಲ್ಲಿಯೇ ವಂದಿಸಿದೆ. ಎಂತಹ ಅದ್ಭುತ ಸಂಶೋಧನೆ ಈ ಅನಸ್ತೇಷಿಯಾ ಎನ್ನಿಸಿತು.

ನಿಧಾನವಾಗಿ ಕಣ್ಣುಗಳನ್ನು ಮುಚ್ಚಿದೆ. ಮಧ್ಯೆ ಮಧ್ಯೆ ಕಣ್ಣು ಬಿಡುತ್ತಿದ್ದರೂ ಏನು ಮಾಡುತ್ತಿದ್ದಾರೆ ಎಂಬ ಅರಿವು ಇರಲಿಲ್ಲ. ಸುಮಾರು 45 ನಿಮಿಷಗಳ ಬಳಿಕ, ನನ್ನ ಹತ್ತಿರ ಬಂದ ಡಾ. ಮಧುಸೂದನ್, “ಗುಡ್ ಸುಘೋಷ್. ತುಂಬಾ ಚೆನ್ನಾಗಿ ರಿಸ್ಪಾಂಡ್ ಮಾಡಿದ್ದೀರಿ. ಎರಡು ಕಲ್ಲುಗಳನ್ನು ತೆಗೆದಿದ್ದೇವೆ. ನೋಡಿ” ಎಂದು ಎರಡು ಕಿಡ್ನಿ ಕಲ್ಲುಗಳನ್ನು ತೋರಿಸಿದರು. ನಾನು ಸುಸ್ತಾದ ಕಣ್ಣುಗಳನ್ನು ಅರೆತೆರೆದು ಆ ಅಮೂಲ್ಯ, ಕ್ಯಾಲ್ಸಿಯಂ ಖಚಿತ, ನನ್ನ ಜೀವವನ್ನೇ ಹಿಂಡಿದ್ದ ಪುಟಪುಟಪುಟಪುಟಾಣಿ ಕಲ್ಲುಗಳನ್ನು ನೋಡಿ, ಮತ್ತೆ ಕಣ್ಮುಚ್ಚಿದೆ.

ಪುಟ್ಟರಾಜು ನನ್ನನ್ನು ಮತ್ತೆ ಎತ್ತಿಕೊಳ್ಳಲು ಬಂದ.

(ನಾಳೆ: ವೊಮಿಟಿಂಗ್ ಸೆನ್ಸೇಷನ್ ಆಗಿ ಬೊಂಬಡಾ ಬಜಾಯಿಸಿದ್ದು,…ಸಿಸ್ಟರ್ ಗಳು ಓಡಿ ಬಂದಿದ್ದು)

ಸ್ಲಂಡಾಗ್ ಅತ್ಯಂತ ಕೆಟ್ಟ ಚಿತ್ರ : ಕಾರ್ನಾಡ್

ಕೃಪೆ : ವಿಜಯ ಕರ್ನಾಟಕ

Previous Older Entries

Follow

Get every new post delivered to your Inbox.

Join 2,089 other followers

%d bloggers like this: