ಗಡಿಯಾರ ಅದಾಗಲೇ ಒಂದು ಗಂಟೆ ತೋರಿಸುತ್ತಿತ್ತು. ಮೈಮೇಲೆ ಬಟ್ಟೆಯಿರದಿದ್ದರಿಂದ ಗಡಗಡ ನಡುಗುತ್ತಿದ್ದೆ.
“ಚಳಿ ಆಗ್ತಾ ಇದ್ಯಾ?” ರಮೇಶ್ ಕೇಳಿದ.
“ಹೌದು” ಎಂದೆ.
“ಇನ್ನೇನು ಮುಗೀತು ಬಿಡಿ” ಅಂದ.
ಪುಟ್ಟರಾಜು ಕೈಯಲ್ಲಿದ್ದ ರೇಜರ್ ನನ್ನ ಬೆನ್ನ ಮೇಲಿನ ರೋಮಗಳ ಬುಡ ಕಡಿಯಲಾರಂಭಿಸಿತ್ತು.
“ಆದರೂ ಪುಟ್ಟರಾಜು, ಈ ಕೆಲಸ ಮಾಡಬೇಕಾದರೆ ಏನೆನ್ನಿಸುತ್ತದೆ ನಿಮಗೆ?” ಕೇಳಿದೆ.
“ಮೊದಲೆಲ್ಲ ತುಂಬಾ ಬೇಜಾರಾಗುತಿತ್ತು ಸಾರ್. ಒಂದೊಮ್ಮೆ ಸಂಬಂಧಿಕರು, ಗೆಳೆಯರು ಕೂಡ ಗೇಲಿ ಮಾಡುತ್ತಿದ್ದರು. ನೀನು ಹೋದ ಜನ್ಮದಲ್ಲಿ ಯಾವುದೋ ಪಾಪ ಮಾಡಿದ್ದೀಯ. ಹೀಗಾಗಿಯೇ ಇಂತಹ ಕೆಲಸ ಮಾಡುತ್ತಿರುವೆ ಎಂದು ಹಂಗಿಸುತ್ತಿದ್ದರು. ನನಗೂ ಹಾಗೆಯೇ ಅನ್ನಿಸುತ್ತಿತ್ತು. ನಿಧಾನವಾಗಿ ನನ್ನ ಕೆಲಸದ ಬಗ್ಗೆ ಒಂದು ರೀತಿಯ ನಿರ್ಲಿಪ್ತ ಭಾವನೆ ಬರುತ್ತಿತ್ತು. ಆದರೆ ನಂತರ ನನ್ನ ಕೆಲಸದ ಮಹತ್ವ ನನಗೇ ಗೊತ್ತಾಗುತ್ತ ಹೋಯಿತು. ನಾನು ಮಾಡುತ್ತಿರುವುದು ರೋಗಿಗಳಿಗೆ ಎಂತಹ ರಿಲೀಫ್ ಕೊಡುತ್ತಿದೆ ಎಂದು ತಿಳಿಯುತ್ತಿದ್ದಂತೆ ಹೆಚ್ಚು ಆಸಕ್ತಿಯಿಂದ ಇಂತಹ ಕೆಲಸ ಮಾಡತೊಡಗಿದೆ. ಮಧ್ಯೆ ಮಧ್ಯೆ ಗೆಳೆಯರು ಹಂಗಿಸುವುದು ನಡೆದೇ ಇತ್ತು. ಆದರೂ ನಾನು ಜಗ್ಗಲಿಲ್ಲ”
ನನಗೆ ತುಂಬಾ ಬೇಜಾರೆನಿಸಿತು. ಛೆ…ಎಷ್ಟು ಒಳ್ಳೆಯ ಕೆಲಸ ಮಾಡುತ್ತಿರುವ ವ್ಯಕ್ತಿಗೆ ಸಮಾಜ ಹೇಗೆ ನೋಡುತ್ತದೆಯಲ್ಲ ಎಂದು. ರಿಯಲ್ ಎಸ್ಟೇಟ್ ನಲ್ಲಿ ಇಲ್ಲೀಗಲ್ ಆಗಿ ದುಡ್ಡು ಮಾಡಿ, ಯಾರದೋ ತಲೆ ಹೊಡೆದು, ಮತ್ತೊಬ್ಬರ ಹೆಂಡತಿ-ಹುಡುಗಿಯ ಮೇಲೆ ಕಣ್ಣು ಹಾಕಿ, ಬಡವರ ರಕ್ತ ಹೀರಿ, ಸಿಕ್ಕಾಪಟ್ಟೆ ದುಡ್ಡುಮಾಡಿಕೊಂಡು ಸ್ಟಾರ್ಚ್ ಹಾಕಿದ ಗರಿಗರಿ ಬಿಳಿಬಿಳಿ ಬಟ್ಟೆ ಹಾಕಿಕೊಂಡು, ಕೊರಳಲ್ಲಿ ಬಂಗಾರದ ಚೈನು, ಬೆರಳುಗಳಲ್ಲಿ ಉಂಗುರ ಹಾಕಿಕೊಂಡು ಮೆರೆಯುವ ಕಳ್ಳರಿಗೆ ಸಮಾಜ ಸನ್ಮಾನಿಸುತ್ತದೆ. ಆದರೆ ಪುಟ್ಟರಾಜುರಂತಹ ವ್ಯಕ್ತಿಗಳಿಗೆ ‘ನೀನು ಯಾವುದೋ ಜನ್ಮದಲ್ಲಿ ಮಾಡಿದ ಪಾಪ’ ಎಂದು ಛೇಡಿಸುತ್ತದೆ. ವಿಪರ್ಯಾಸ ಮತ್ತು ಡಿಸ್ಗಸ್ಟಿಂಗ್.
ಆದರೆ ಇದೇ ಕಾರ್ಯಗೌರವ ರಮೇಶ್ ನಲ್ಲಿ ಇದ್ದಂತೆ ಕಾಣಲಿಲ್ಲ. ಕೇಳಿದ.
“ಸಾರ್, ನೀವೇನು ಕೆಲಸ ಮಾಡುತ್ತೀರಿ?”
“ನಾನು ಫ್ರೀಲ್ಯಾನ್ಸ್ ಜರ್ನಲಿಸ್ಟ್. ಮೊದಲು ಈಟಿವಿಯಲ್ಲಿದ್ದೆ. ಈಗ ವಿವಿಧ ಪತ್ರಿಕೆಗಳಿಗೆ ಬರೆಯುತ್ತೇನೆ. ಜೊತೆಗೆ ಟಿವಿ ಸೀರಿಯಲ್ ನಲ್ಲಿ ಆಕ್ಟ್ ಮಾಡುತ್ತೇನೆ”
“ಯಾವ ಸೀರಿಯಲ್ ಸಾರ್?” ಇಬ್ಬರೂ ಒಮ್ಮೆಲೇ ಕೇಳಿದರು.
“ಈಟಿವಿಯಲ್ಲಿ ಪ್ರತಿದಿನ ರಾತ್ರಿ ಮುಕ್ತ ಮುಕ್ತ ಬರುತ್ತದಲ್ಲ. ಅದರಲ್ಲಿ. ನೋಡಿಲ್ಲವೆ?”
“ಇಲ್ಲ ಸಾರ್. ಟೈಮೇ ಆಗುವುದಿಲ್ಲ. ಇನ್ನು ಮುಂದೆ ನೋಡುತ್ತೇವೆ ಸಾರ್” ಅಂದ ರಮೇಶ್.
ಮತ್ತೆ ಕೇಳಿದ. “ಸಾರ್, ಅಲ್ಲಿ ಸ್ಯಾಲರಿ ಎಲ್ಲ ಹೇಗೆ ಸಾರ್?”
“ತುಂಬಾ ಅಂತಲೂ ಇಲ್ಲ ಕಡಿಮೆ ಅಂತಲೂ ಇಲ್ಲ. ಎಲ್ಲವೂ ಎಕ್ಸಪಿರಿಯನ್ಸ್ ಮೇಲೆ ಹೋಗುತ್ತದೆ. ಇಷ್ಟೇ ಅಂತ ಹೇಳಲಾಗುವುದಿಲ್ಲ”
“ನಾವು ಮಾಡುತ್ತಿರುವ ಕೆಲಸ ಒಳ್ಳೆಯದಾದರೂ, ಸ್ಯಾಲರಿ ತುಂಬ ಕಡಿಮೆ ಸಾರ್” ರಮೇಶ್ ಅಲವತ್ತುಕೊಂಡ.
ನಾನು ಪುಟ್ಟರಾಜುಗೆ ಹೇಳಿದೆ. “ನೀವು ಯಾವತ್ತೂ ಇದು ನಿಮ್ಮ ಹಿಂದಿನ ಜನ್ಮದ ಪಾಪ ಎಂದು ತಿಳಿದುಕೊಳ್ಳಬೇಡಿ. ಬದಲಾಗಿ ನೀವು ಮಾಡುತ್ತಿರುವ ಹೆಚ್ಚಿನ ಪುಣ್ಯದ ಕೆಲಸ ಮತ್ತೊಂದಿಲ್ಲ. ಯಾರು ಇಂತಹ ಕೆಲಸ ಮಾಡುತ್ತಾರೆ ಹೇಳಿ. ಸ್ವಂತ ತಂದೆ, ಅಣ್ಣನೇ ಇದ್ದರೂ ಬಹುಶಃ ಈ ರೀತಿಯ ಕೆಲಸ ಮಾಡಲು ಯಾರೂ ಸಿದ್ದರಾಗಲಿಕ್ಕಿಲ್ಲ. ನೂರು ಜನರನ್ನು ನಿಲ್ಲಿಸಿ, ಈ ಕೆಲಸ ಮಾಡಿ ಎಂದು ಹೇಳಿದರೆ ಎಷ್ಟು ಜನ ಮುಂದೆ ಬರುತ್ತಾರೋ ನನಗಂತೂ ಗೊತ್ತಿಲ್ಲ. ನೀವು ಮಾಡುತ್ತಿರುವುದಂತೂ ಅಪ್ಪಟ ಪುಣ್ಯದ ಕೆಲಸ. ಅದರಲ್ಲಿ ಡೌಟೇ ಬೇಡ”
“ಹೌದು ಸಾರ್” ಎಂದ ಪುಟ್ಟರಾಜು.
ರಮೇಶ್ ಹೇಳಿದ. “ಸಾರ್, ಟಿವಿ ಇಂಡಸ್ಟ್ರಿಯಲ್ಲಿ ಏನಾದರೂ ಕೆಲಸವಿದೆಯೇ ಸಾರ್?”
ನಾನು ಸಣ್ಣದಾಗಿ ನಕ್ಕೆ.
(ನಾಳೆ : ಮಂಡ್ಯದಲ್ಲಿ ಇಪ್ಪತ್ತು ಎಕರೆ ಕಬ್ಬಿನ ಗದ್ದೆ ಇಟ್ಟುಕೊಂಡು, ಬೆಂಗಳೂರಿನ ದರ್ಶಿನಿಗಳಲ್ಲಿ ಕ್ಲೀನರ್ ಗಳಾಗಿದ್ದಾರೆ…)










ಚಿಠ್ಠೀ ಆಯೀ ಹೈ…