ಕನ್ನಡದ ಹೆಮ್ಮೆಯ ವಾರಪತ್ರಿಕೆ ಸುಧಾದ ಜಾಣರ ಪೆಟ್ಟಿಗೆಯ ಪ್ರತಿಸ್ಪಂದನದಲ್ಲಿ ನನ್ನ ಸಂದರ್ಶನ ಪ್ರಕಟಕವಾಗಿದೆ.
ನನ್ನ ಕಿತಾಪತಿಗಳ ಜಗತ್ತು…
July 23, 2011
ಮುಕ್ತ...ಮುಕ್ತ...ಮುಕ್ತ...., ಮುದ್ರಣ ಮಾಧ್ಯಮ gudihalli nagaraj, jaanara pettige, pratispandana, sudha 2 Comments
July 10, 2011
ಮುಕ್ತ...ಮುಕ್ತ...ಮುಕ್ತ.... postman 4 Comments
ಮುಕ್ತ ಮುಕ್ತದಲ್ಲಿ ನಟನಾದ ಬಳಿಕ ಆಗಿರುವ ಅನುಭವಗಳಲ್ಲಿ ಇದು ಈವರೆಗಿನ ಅತ್ಯಂತ ಕ್ಲಾಸಿಕ್ ಅನುಭವ. ಜನರು ಈ ಧಾರಾವಾಹಿಯನ್ನು ಹೇಗೆಲ್ಲ ನೋಡುತ್ತಾರೆ, ಎಷ್ಟು ಆಸಕ್ತಿಯಿಂದ ವೀಕ್ಷಿಸುತ್ತಾರೆ, ಈ ಧಾರಾವಾಹಿಯಿಂದ ಏನೆಲ್ಲ ಬಯಸುತ್ತಾರೆ ಎಂಬುದಕ್ಕೆ ಇದೊಂದು ಉದಾಹರಣೆ.
ಧರ್ಮ ಭಾರತಿ ಎಂಬ ಮ್ಯಾಗಝೀನ್ ನಲ್ಲಿ ನಾನು ಬರೆದ ಲೇಖನವೊಂದಕ್ಕೆ ಸಂಭಾವನೆಯನ್ನು ಎಂಓ ಮಾಡಲಾಗಿತ್ತು. ಅದನ್ನು ಹಿಡಿದುಕೊಂಡು ಅಂಚೆಯಣ್ಣ ನನ್ನ ಮನೆ ಬಾಗಿಲು ತಟ್ಟಿದರು. ಬಾಗಿಲು ತೆರೆಯುತ್ತಲೇ ನನ್ನನ್ನು ನೋಡಿದವರೆ ಎಕ್ಸೈಟ್ ಆಗಿ “ಓಹ್..ಸಾರ್ ನೀವಾ…” ಎಂದು ಮಾತಿಗಾರಂಭಿಸಿ ಸುಮಾರು ಹದಿನೈದು ನಿಮಿಷಗಳ ಕಾಲ ಹಾಗೆಯೇ ಮಾತಾಡುತ್ತ ನಿಂತುಬಿಟ್ಟರು.
ಚಿಕ್ಕವನಿದ್ದಾಗಿನಿಂದಲೂ ನನಗೆ ಅಂಚೆಯಣ್ಣ ಅಂದರೆ ಎಲ್ಲಿಲ್ಲದ ಪ್ರೀತಿ. ಅಮ್ಮನಿಗೆ ಪತ್ರ ಬರೆಯುವ ಹವ್ಯಾಸ ತುಂಬಾ ಇತ್ತು. ಅದು ನನಗೂ ಹರಿದು ಬಂತು. ಹೊಸವರ್ಷಕ್ಕೆ ದೀಪಾವಳಿಗೆ ಗ್ರೀಟಿಂಗ್ ಕಾರ್ಡ್ ಕಳಿಸುವುದು, ಶಾಲೆಯ ಫಲಿತಾಂಶ ಬಂದ ಮೇಲೆ ಅದನ್ನು ನೆಂಟರಿಷ್ಟರಿಗೆ ತಿಳಿಸುವುದು ಹೀಗೆಲ್ಲ ಮೊದಲು ತುಂಬಾ ಪತ್ರ ಬರೆಯುತ್ತಿದ್ದೆ. ಆದರೆ ಕಳೆದ ಹಲವಾರು ವರ್ಷಗಳಿಂದ ಒಂದೇ ಒಂದು ಪತ್ರ ಬರೆದಿಲ್ಲ. ಕಾರಣ ಸುಲಭ. ಮೊಬೈಲ್ ಬಂದಿದೆ ಅದಕ್ಕೆ. ಇರಲಿ.
ಧಾರಾವಾಹಿ, ಪಾತ್ರಗಳು, ಕಂಟೆಂಟ್ ಎಲ್ಲವನ್ನು ಮಾತನಾಡಿದ ಬಳಿಕ ಅಂಚೆಯಣ್ಣ ಹೇಳಿದರು.
“ಸರ್ ನಿಮಗೊಂದು ರಿಕ್ವೆಸ್ಟ್ ಮಾಡ್ಕೋತಿನಿ. ಬೇಜಾರು ಮಾಡ್ಕೋಬೇಡಿ. ದಯವಿಟ್ಟು ಇದನ್ನ ಸೀತಾರಾಮ್ ಸಾರ್ ಅವರಿಗೂ ಹೇಳಿ” ಅಂದರು.
“ಪರ್ವಾಗಿಲ್ಲ ಹೇಳಿ” ಅಂದೆ.
“ಸರ್, ನೋಡಿ ನಮ್ಮದು ತುಂಬಾ ಹಳೆಯ ಡಿಪಾರ್ಟಮೆಂಟ್. ನಾವು ಪ್ರಧಾನಿ ಬಳಿಯೂ ಹೋಗುತ್ತೇವೆ. ಬಡವನ ಮನೆಗೂ ಹೋಗುತ್ತೇವೆ. ಆದರೆ ನಮ್ಮ ಕಷ್ಟ ಮಾತ್ರ ಹಾಗೇ ಇದೆ. ನಿಮ್ಮ ಸೀರಿಯಲ್ ನಲ್ಲಿ ಪತ್ರ, ಪಾರ್ಸೆಲ್ ಎಲ್ಲ ಹಿಡ್ಕೊಂಡು ಶಂಕರಮೂರ್ತಿ ಮನೆಗೋ, ನಿಮ್ಮ ಮನೆಗೋ ಬರ್ತಾರಲ್ಲ ಆಗ ಅವರ ಕೈಯಲ್ಲಿ ‘ಪೋಸ್ಟ್’ ಅಂತ ಕೂಗ್ಸಿ ಸಾರ್. ‘ಕೊರಿಯರ್’ ಅಂತ ಬೇಡ” ಅಂದರು.
ಒಂದು ಕ್ಷಣ ನನಗೆ ಏನು ಹೇಳಬೇಕೆಂದು ತೋಚಲಿಲ್ಲ.
“ಖಂಡಿತ ಸೀತಾರಾಮ್ ಸರ್ ಗೆ ಹೇಳುತ್ತೇನೆ” ಅಂದೆ. ಅಂಚೆಯಣ್ಣ ಖುಷಿಯಾಗಿ ಮುಂದಿನ ಮನೆಗೆ ಪೋಸ್ಟ್ ಹಾಕಲು ಹೋದರು. ಸರ್ಕಾರ ಮುಂದಿನ ಅಧಿವೇಶನದಲ್ಲಿ ಅಂಚೆ ಇಲಾಖೆಯನ್ನು ಖಾಸಗಿಯವರ ಕೈಗೆ ಕೊಡುವ ನಿರ್ಧಾರ ಮಾಡಲು ಹೊರಟಿದೆ. ನಮ್ಮ ರಾಜಕಾರಣಿಗಳ ಚರ್ಮ ನಿಜಕ್ಕೂ ದಪ್ಪ ಅಲ್ವಾ?
June 3, 2011
ಮುಕ್ತ...ಮುಕ್ತ...ಮುಕ್ತ.... 3 Comments
‘ಮುಕ್ತ ಮುಕ್ತ’ ದ ನನ್ನ ದೇವಾನಂದ ಸ್ವಾಮಿ ಪಾತ್ರ ತೀರ ಮುಗ್ಧ ಹಾಗೂ ಸಾಫ್ಟ್. ಚಿಕ್ಕಂದಿನಿಂದಲೂ ಅಪ್ಪ-ಅಮ್ಮನ ಮಾತುಗಳನ್ನು ಕೇಳಿಕೊಂಡು, ಅದನ್ನು ಶಿರಸಾವಹಿಸುತ್ತ ಬಂದು ಕೊನೆಗೆ ಹೆಂಡತಿ ಹಾಗೂ ಅಪ್ಪನ ನಡುವಿನ ಜಗಳದಿಂದಾಗಿ ನುಜ್ಜುಗುಜ್ಜಾಗುವ ಪಾತ್ರ. ಮದುವೆಯಾದ ಮೇಲೆ “ಕೇವಲ ಹೆಂಡತಿ ಮಾತು ಮಾತ್ರ ಕೇಳಿಕೊಂಡು ಇರುವವ”, “ಹೆಂಡತಿಯ ಗುಲಾಮ” ಅಂತೆಲ್ಲ ಅಪ್ಪನಿಂದ, ತಮ್ಮನಿಂದ ಹೇಳಿಸಿಕೊಳ್ಳುವ ಪಾತ್ರ ಅದು. ಪಾತ್ರದ ಮುಗ್ಧತೆ ಹಾಗೂ ತಾಳ್ಮೆ ಅತಿಯಾಯಿತು ಅಂತ ಅನ್ನಿಸುವಾಗಲೇ ಯಾವುದೋ ಸಂದರ್ಭದಲ್ಲಿ ತನ್ನ ಸ್ವಂತಿಕೆಯನ್ನು ಪ್ರದರ್ಶಿಸಿಬಿಡುತ್ತಾರೆ ದೇವಾನಂದಸ್ವಾಮಿ. ಆದರೆ ನೋಡುವ ಜನರಿಗೆ ಮಾತ್ರ ‘ಅಮ್ಮಾವ್ರ ಗಂಡ’ ಅಂತಲೇ ಅನ್ನಿಸಿದೆ.
ಇಂತಿಪ್ಪ ಸನ್ನಿವೇಶದಲ್ಲಿ ಮೊನ್ನೆ ವಿಜಯನಗರ ಬಿಂಬ ಮಕ್ಕಳಿಗೆ ಬೇಸಿಗೆ ಶಿಬಿರ ಆಯೋಜಿಸಿತ್ತು. 7 ರಿಂದ 14 ವರ್ಷದ ಸುಮಾರು 80 ಜನ ಮಕ್ಕಳಿದ್ದರು. ಜಿ. ಎನ್. ಮೋಹನ್ ಅವರ ಮಾರ್ಗದರ್ಶನದಲ್ಲಿ ಮಕ್ಕಳಿಗೆ ಪತ್ರಿಕೆ ಹಾಗೂ ಬ್ಲಾಗಿಂಗ್ ಕುರಿತು ನಾನು ಕಾರ್ಯಾಗಾರ ನಡೆಸಿಕೊಡಬೇಕಿತ್ತು. ನಾನು ಮಕ್ಕಳ ನಡುವೆ ಕಾಲಿಡುತ್ತಲೇ, ಗುಸುಗುಸು ಪಿಸುಪಿಸು ಶುರುವಾಯಿತು. ಮಕ್ಕಳ ನಡುವೆ ಮುಕ್ತ ಮುಕ್ತ, ದೇವಾನಂದ, ಅಂತೆಲ್ಲ ಹೆಸರುಗಳು ಓಡಾಡತೊಡಗಿದವು. ಆದರೆ ನನ್ನ ಹೆಂಡತಿಯ ಹೆಸರು ಮಾತ್ರ ಮಕ್ಕಳಿಗೆ ನೆನಪಿಗೆ ಬರಲೊಲ್ಲದು. ಕೊನೆಗೆ ಸುಮಾರು 10 ವರ್ಷದ ಹುಡುಗಿಯೊಬ್ಬಳು ಬಂದು ಮುದ್ದು ಮುದ್ದಾಗಿ ಕೇಳಿದಳು, “ಹೇಯ್…ಯೂ….ದಾಟ್ ಗರ್ಲ್ಸ್ ಹಸ್ಬೆಂಡ್ ನೋ….” ಅಂತ.
ಈಗ ಹೇಳಿ ನಾನು ಅಮ್ಮಾವ್ರ ಗಂಡ ತಾನೆ?
June 2, 2011
ಮುಕ್ತ...ಮುಕ್ತ...ಮುಕ್ತ.... 11 Comments
‘ಮುಕ್ತ ಮುಕ್ತ’ದಲ್ಲಿ ನಟಿಸುತ್ತಿರುವ ಈ ಸಂದರ್ಭದಲ್ಲಿ ಜನರ ಮಧ್ಯೆ ತಿರುಗಾಡುವಾಗ ನಡೆಯುವ ಸ್ವಾರಸ್ಯಕರ ಘಟನೆಗಳನ್ನು ಆಗಾಗ ಬರೆಯುತ್ತಿದ್ದೆನೆ. ಮೊನ್ನೆ ನಮ್ಮ ಮನೆ ಸಮೀಪದ ಪಾರ್ಕ್ ನಲ್ಲಿ ನಡೆದ ಘಟನೆಯೊಂದು ಹೀಗಿದೆ.
ಸಾಮಾನ್ಯವಾಗಿ ಮಕ್ಕಳು ಹಾಗೂ ಮಹಿಳೆಯರು ‘ಮುಕ್ತ ಮುಕ್ತ’ ಧಾರಾವಾಹಿಯ ವಿಶೇಷ ಅಭಿಮಾನಿಗಳು. 2 ವರ್ಷದ ಮಕ್ಕಳೂ ಮುಕ್ತ ಮುಕ್ತ ಟೈಟಲ್ ಸಾಂಗ್ ಬಂದಾಕ್ಷಣ ತದೇಕಚಿತ್ತರಾಗಿ ನೋಡುತ್ತಾರೆ ಎಂದು ನನಗೆ ಅನೇಕರು ಹೇಳಿದ್ದಾರೆ. ಇನ್ನು ಮಹಿಳೆಯರಂತೂ ಸರಿಯೇ ಸರಿ. ಮನೆಯ ಸಮೀಪದ ಪಾರ್ಕ್ ಗೆ ಮಗ ಉದಾತ್ತನೊಂದಿಗೆ ಹೋಗಿದ್ದೆ. ಪಾರ್ಕ್ ಪ್ರವೇಶಿಸಿದಾಕ್ಷಣ ದುರುಗುಟ್ಟಿ ನೋಡುವಿಕೆ ಆರಂಭವಾಯಿತು. ನನಗಿದು ಸಾಮಾನ್ಯ. ಉದಾತ್ತನ್ನು ಪಾರ್ಕ್ ನಲ್ಲಿದ್ದ ಜಾರುಗುಂಡಿಯ ಮೇಲೆ ಆಡಿಸತೊಡಗಿದೆ. ಅಲ್ಲಿ ವಿವಿಧ ವಯೋಮಾನದ ಹಲವಾರು ಮಕ್ಕಳು ಕೂಡ ಆಡುತ್ತಿದ್ದರು. ಕೆಲ ಕ್ಷಣ ಕಳೆದ ಬಳಿಕ ಮಹಿಳೆಯೊಬ್ಬರು ನನ್ನ ಬಳಿ ಬಂದು “ಸಾರ್ ನೀವು ದೇವಾನಂದ ಸ್ವಾಮಿ ಅಲ್ವಾ?” ಎಂದರು. “ಹೌದು” ಎಂದು ತಲೆಯಾಡಿಸಿದೆ. “ನಿಮ್ಮ ಆಕ್ಟಿಂಗ್ ತುಂಬಾ ಚೆನ್ನಾಗಿದೆ ಸಾರ್” ಎಂದು ಮಾತಿಗಾರಂಭಿಸದರು. ಟಿಎನ್ಎಸ್ ನಿರ್ದೇಶನ, ನಿವೇದಿತಾಳ ತನ್ಮಯತೆ, ಶಾರದಮ್ಮನ ವಾಹ್ ಅನ್ನಿಸುವಂತಹ ನಟನೆ, ಮಧುಸೂದನ್ ನ ಮ್ಯಾನರಿಸಂ ಎಲ್ಲದರ ಬಗ್ಗೆ ಮಾತುಕತೆ ಸಾಗುತ್ತಿತ್ತು. ಈ ಮಾತುಕತೆ ನಡೆಯುವಾಗ ನನ್ನ ಪಕ್ಕದಲ್ಲಿ ಹುಡುಗನೊಬ್ಬ ಬಂದು ನಿಂತುಕೊಂಡಿದ್ದ. ನನ್ನ ಅಭಿಮಾನಿಯಿರಬೇಕು ಎಂದು ನಾನು ಕೂಡ ಸುಮ್ಮನಿದ್ದೆ. ಆತನನ್ನು ಮಾತನಾಡಿಸುವ ಗೋಜಿಗೂ ಹೋಗಲಿಲ್ಲ. ಆದರೆ ಆ ಹುಡುಗನಲ್ಲಿ ಏನೋ ಒಂದು ರೀತಿಯ ಚಡಪಡಿಕೆ ಇರುವುದನ್ನು ಗುರುತಿಸಿದೆ. ಬಹುಶಃ ಈತನೂ ನನ್ನನ್ನು ಮಾತನಾಡಿಸಲು ಹವಣಿಸುತ್ತಿರಬೇಕು ಎಂದುಕೊಂಡೆ. ನನ್ನ ಹಾಗೂ ಆ ಮಹಿಳೆಯ ಮಾತು ಮುಂದುವರೆಯುತ್ತಿತ್ತು. ಹುಡುಗನ ಚಡಪಡಿಕೆ ಹೆಚ್ಚುತ್ತಿತ್ತು.
ಹುಡುಗ ಕೊನೆಗೆ ನಮ್ಮಿಬ್ಬರ ಮಾತನ್ನು ತುಂಡರಿಸಿ ಕೇಳಿಯೇ ಬಿಟ್ಟ, “ಅಂಕಲ್, ಸ್ವಲ್ಪ ಆ ಕಡೆ ನಿಂತು ಮಾತಾಡ್ತೀರಾ? ನಮಗಿಲ್ಲಿ ಆಟ ಆಡ್ಬೇಕು”
ಹೇಗಿದೆ ಚಮಕ್?
March 29, 2011
ಫೋಟೋ ಫಿನಿಶ್, ಮುಕ್ತ...ಮುಕ್ತ...ಮುಕ್ತ.... grid, HMI light Leave a comment
November 22, 2010
November 15, 2010
ಅನುಭವ (ಕಾಶೀನಾಥಂದು ಅಲ್ಲ ಕಣ್ರೀ..), ಮುಕ್ತ...ಮುಕ್ತ...ಮುಕ್ತ.... 1 Comment
ಮೊನ್ನೆ ನಾನು ಹಾಗೂ ನಮ್ಮ ಲೈಟ್ ಆಫೀಸರ್ (ಶೂಟಿಂಗ್ ನಲ್ಲಿ ಲೈಟ್ ನೋಡಿಕೊಳ್ಳುವವರು) ನಡುವೆ ನಡೆದ ಸಂಭಾಷಣೆ.
“ಸಾ, ನಮ್ಮ ಊರ್ ಕಡೆ ಜಾತ್ರೆ ಐತೆ. ನೀವ್ ಬರ್ಬೇಕು ಸಾ”
“ಹೌದೇನೋ? ಎಲ್ಲಿ ಜಾತ್ರೆ?”
“ನಮ್ ಊರಲ್ಲಿ ಸಾ. ನೀವ್ ಮಂಡ್ಯ ತಾವ ಬಂದು ಪೋನ್ ಹಾಕಿ. ನಾ ಬಂದ್ ಕರ್ಕಂಡ್ ವೋಯ್ತಿನಿ”
“ಟ್ರೈ ಮಾಡ್ತೀನಿ ಕಣೋ. ಟೈಮ್ ಆದ್ರೆ ಖಂಡಿತ ಬರ್ತಿನಿ. ಆದ್ರೆ ನಾ ಬಂದೇ ಬರ್ತಿನಿ ಅಂತ ಕಾಯ್ತಾ ಕೂರ್ಬೇಡ”
“ಸಾಕು ಬಿಡಿ ಸಾ. ನೀವು ಅಂಗ್ ಹೇಳಿದ್ರಲ್ಲ….ಸಾಕು. ಲಾಸ್ಟ್ ಟೈಮ್ ಇದೇ ಟೈಮಲ್ಲಿ ಸಾ ಇವ್ರೆಲ್ಲ ಬರ್ತಿನಿ ಅಂತ ಯೋಳಿ ನನ್ಮಕ್ಳು ಕೈಕೊಟ್ ಬಿಟ್ರು?”
“ಯಾಕೆ ಏನಾಯ್ತು?”
“ನೋಡಿ ಸಾ ಎಲ್ರಿಗೂ ಇನ್ವಿಟೇಸನ್ ಕೊಟ್ಟಿದೆ. ನಮ್ ಊರ್ ಕಡೆ ಜಾತ್ರೆ ಬರ್ಲಾ ಎಲ್ಲಾರೂ ಅಂತ. ಎಲ್ಲಾ ನನ್ಮಕ್ಳೂ ವಪ್ಕಂಡಿದ್ರು. ಅವ್ರು ಬತ್ತಾರೆ ಅಂತ ಹೇಳಿ 70 ಕೆಜಿ ಮಟನ್ನು, 40 ಕೆಜಿ ಚಿಕನ್ನು ಪೆಶಲ್ಲಾಗಿ ಮಾಡ್ಸಿದ್ದೆ. ಮೂರು ಟಗರು ಕಡ್ಸಿದ್ದೆ ಸಾ. ಇನ್ನು ಕೆಲವ್ರು ಎಣ್ಣೆ ಗಿರಾಕಿ ಅಂತ ಗೊತ್ತಿತ್ತು. ಅಂಗಾಗಿ 5 ಸಾವಿರ ರೂಪಾಯಿ ಬಾಟ್ಳು ತರ್ಸಿದ್ದೆ. ಇನ್ನೂ ಹುಡ್ರಲ್ವಾ, ಕ್ಯಾಶ್ ಇರಾಕಿಲ್ಲ ಅಂತ ಬೆಂಗ್ಳೂರಿಂದ ನಮ್ ಮಂಡ್ಯಕ್ಕೆ ಮಂಜನ್ ಸುಮೋ ಬುಕ್ ಮಾಡಿ ಅವಂಗ್ ವಂದ್ ಸಾವಿರ್ ರೂಪಾಯಿ ಕೊಟ್ಟಿದ್ದೆ, ಎಲ್ಲಾರ್ನೂವೇ ಕಕ್ಕಂಡ್ ಬಾ ಅಂತ. ನೀವ್ ನಂಬಲ್ಲ ಸಾ….ನನ್ಮಕ್ಳು ವಬ್ರೂ ಬರ್ಲಿಲ್ಲ ಅವತ್ತು. ಎಲ್ಲಾರೂ ಕೈ ಎತ್ತಿ ಬುಟ್ರು. ಎಷ್ಟೋ ಬೇಜಾರಾಗೋಯ್ತು ಅಂದ್ರೆ, ಮಟನ್ನು, ಚಿಕನ್ನು, ಎಣ್ಣೆ ಎಲ್ಲಾ ವಯ್ದು ನಮ್ ಊರ್ ತಾವ ನಾಲೆ ವಳಗ್ ಎಸೆದ್ ಬುಟ್ಟೆ. ಕಾಸ್ ವೋಯ್ತು ಅಂತ ಬೇಜಾರಿಲ್ಲ ಸಾ….ಆದ್ರೆ ಎಲ್ಲಾ ಸೇರ್ಕಂಡು ನನ್ ಮನಸ್ಸು ಮುರುದ್ರು. ಅವತ್ತೇ ಡಿಸೈಡ್ ಮಾಡ್ದೆ. ಯಾವ್ನ್ ಬರ್ತಾನೆ ಅಂತ ಗ್ವತ್ತಿರತ್ತೋ ಅವಂಗಷ್ಟೇಯಾ ಇನ್ವಿಟೇಸನ್ ಕ್ವಡೋದು ಅಂತ. ಈ ಟೈಮ್ ನೀವ್ ಬನ್ನಿ ಸಾ. ಚೆನ್ನಾಗಿರತ್ತೆ. ನಮ್ಮ ಕಬ್ಬಿನ ತ್ವಾಟದಾಗೆ ಕುಂತ್ಕಂಡ್ ಅಂಗೆ ಬಾಡೂಟ, ಎಣ್ಣೆ ಇಳಿಸ್ತಾ ಇದ್ರೆ…ಆಹಾಹಾ…ಏನ್ ಚಂದ ಸಾ…”
November 3, 2010
ಅವರೇನು ಮಾಡಿದರು?, ಚಿತ್ರರಂಗ, ಬಹುಪರಾಕ್, ಮುಕ್ತ...ಮುಕ್ತ...ಮುಕ್ತ.... chitra, make up chandranna Leave a comment
ಮೇಕಪ್ ಚಂದ್ರಣ್ಣ ಮುಕ್ತ ಮುಕ್ದದಲ್ಲಿ ನನಗೆ ಮೇಕಪ್ ಮಾಡಿದವರು. ಖ್ಯಾತ ನಟ ಶಂಕರನಾಗ್ ಅವರಿಗೆ ಪರ್ಸನಲ್ ಮೇಕಪ್ ಮನ್ ಆಗಿ ಕೂಡ ಚಂದ್ರಣ್ಣ ಕೆಲಸ ಮಾಡಿದವರು ಎಂದು ಗೊತ್ತಾದಾಗ ಅವರ ಬಗ್ಗೆ ಆಸಕ್ತಿ ಬೆಳೆಯಿತು. ಅವರೊಡನೆ ಮಾತನಾಡುತ್ತಿದ್ದಾಗ ಮತ್ತಷ್ಟು ವಿಷಯಗಳು ಸಂಗ್ರಹವಾದವು. ಹೀಗಾಗಿ ಚಂದ್ರಣ್ಣನ ಕುರಿತು ಲೇಖನ ಬರೆಯಲು ಮುಂದಾದೆ. ನಾನು ಬರೆದ ಲೇಖನ ಈ ಬಾರಿಯ ‘ಚಿತ್ರ’ ಪತ್ರಿಕೆಯಲ್ಲಿ ಪ್ರಕಟವಾಗಿದೆ. ತಮಗಾಗಿ ಈ ಲೇಖನ….
October 31, 2010
October 15, 2010
ಮುಕ್ತ...ಮುಕ್ತ...ಮುಕ್ತ.... jaanara pettige, mukta mukta, sudha 4 Comments
October 7, 2010
ಅನುಭವ (ಕಾಶೀನಾಥಂದು ಅಲ್ಲ ಕಣ್ರೀ..), ಮುಕ್ತ...ಮುಕ್ತ...ಮುಕ್ತ.... gliserin, mukta mukta 1 Comment
ಘಜನಿಯ ಅಮೀರ್
ಪಾ ದ ಅಮಿತಾಭ್
ಮೇರೆ ಅಂಗನೇಮೇ ಯ ಮತ್ತದೇ ಅಮಿತಾಭ್
ಚಾಚಿ ಚಾರ್ಸೋಬೀಸ್ ನ ಕಮಲ್
ಎಲ್ಲ ಫಿಲ್ಮ್ ಗಳ ರಜನಿ
ಅದ್ಭುತ ಎಕ್ಸಪ್ರೆಷನ್ನಿನ ಶ್ರೀದೇವಿ
ಕ್ಲಾಸಿಕ್ ನಟನೆಯ ಸ್ಮಿತಾ ಪಾಟೀಲ್
ಹೀಗೆ ಮೊನ್ನೆ ಎಲ್ಲರನ್ನೂ ನೆನೆಸಿಕೊಂಡು ಬಿಟ್ಟೆ
ಅವರ ನಟನೆಗೆ ಸಲಾಂ ಹೊಡೆದು ಬಿಟ್ಟೆ
ಕಹಾಂ ರಾಜಾಭೋಜ, ಕಹಾಂ ಗಂಗೂತೇಲಿ ಎಂದುಕೊಂಡು ಬಿಟ್ಟೆ
ಕಾರಣ ಇಷ್ಟೆ,
ಮೊನ್ನೆ ‘ಮುಕ್ತ ಮುಕ್ತ’ ಶೂಟಿಂಗ್ ನಲ್ಲಿ ಕಣ್ಣಿಗೆ ಎರಡು ಹನಿ ಗ್ಲಿಸರಿನ್
ಹೆಚ್ಚಿಗೆ ಬಿದಿತ್ತು ಅಷ್ಟೆ……!!
September 24, 2010
ಮುಕ್ತ...ಮುಕ್ತ...ಮುಕ್ತ.... devaanandswaamy, mukta mukta 4 Comments
September 17, 2010
ಮುಕ್ತ...ಮುಕ್ತ...ಮುಕ್ತ.... jayashree, mukta mukta, sudha 6 Comments
September 1, 2010
ಅನುಭವ (ಕಾಶೀನಾಥಂದು ಅಲ್ಲ ಕಣ್ರೀ..), ಮುಕ್ತ...ಮುಕ್ತ...ಮುಕ್ತ.... devanandaswamy, karwar, mukta mukta 7 Comments
ಕಿರುತೆರೆ ಕಲಾವಿದರು ಬೆಂಗಳೂರಿಗರಿಗೆ ಅಪರೂಪದವರೇನಲ್ಲ. ನಾನು ಈ ಹಿಂದೆ ಹೇಳಿದಂತೆ ಹಾದಿಗೊಬ್ಬ, ಬೀದಿಗಿಬ್ಬರು ಕಿರುತೆರೆ ಕಲವಿದರು ಬೆಂಗಳೂರಿಲ್ಲಿದ್ದಾರೆ. ಆದರೆ ಇದೇ ಕಿರುತೆರೆ ಕಲಾವಿದರು ಬೆಂಗಳೂರೇತರ ಜಿಲ್ಲೆಗಳಲ್ಲಿ ಕಂಡರೆ, ಅನೇಕ ಸಲ ಜನರಿಗೆ ನಂಬುವುದು ಕಷ್ಟವಾಗುತ್ತದೆ.
ಶೂಟಿಂಗ್ ಸಲುವಾಗಿ ಮೊನ್ನೆ ಕಾರವಾರಕ್ಕೆ ಹೋಗಿದ್ದೆ. ಎಂದಿನಂತೆ ನಾನು ಹೋದಲ್ಲೆಲೆಡೆ, ಮುಕ್ತ ಮುಕ್ತ ದ ಬಗ್ಗೆಯೇ ಚರ್ಚೆ. ನನ್ನ ಆಕ್ಟಿಂಗ್, ಮುಕ್ತ ಮುಕ್ತ ಕಥೆ ಸಾಗುತ್ತಿರುವ ರೀತಿ, ಟಿಎನ್ಎಸ್ ಸರ್ ಅವರ ವಿಭಿನ್ನ ಧಾರಾವಾಹಿ – ಹೀಗೆ ಜನರೊಡನೆ ಚರ್ಚೆ ಸಾಗಿತ್ತು. ಸಂಜೆ ಶೂಟಿಂಗ್ ಮುಗಿಸಿದ ಬಳಿಕ ನಮ್ಮ ಕ್ಯಾಮರಾಮನ್ ನನ್ನನ್ನು ತಮ್ಮ ಮನೆಗೆ ಕರೆದುಕೊಂಡು ಹೋದರು. ತಮ್ಮ ಪತ್ನಿಗೆ ನನ್ನನ್ನು ಪರಿಚಯಸಿತ್ತ, “ಯಾರು ಗೊತ್ತಾಯ್ತಲ್ಲ?” ಎಂದರು. ಅವರ ಪತ್ನಿ ನನ್ನನ್ನು ಕಂಡು ಗುರುತಿಸಿ ಸಂತಸದಿಂದ ನಮಸ್ಕಾರ ಮಾಡಿದರು. ಅಷ್ಟರಲ್ಲಿ ಕ್ಯಾಮರಾಮನ್ ಅವರ ವಯಸ್ಸಾದ, ದಪ್ಪ ಕನ್ನಡಕ ಹಾಕಿಕೊಂಡಿದ್ದ ತಾಯಿ ಕೂಡ ಹೊರಬಂದರು. ಮತ್ತೆ ನಮ್ಮ ಕ್ಯಾಮರಾಮನ್ ತಮ್ಮ ತಾಯಿಗೆ, “ನೋಡಮ್ಮ, ದೇವಾನಂದಸ್ವಾಮಿ ಬಂದಿದಾರೆ” ಎಂದರು. ಅದಕ್ಕೆ ಆ ತಾಯಿ “ಅಯ್ಯೋ ಹೌದಲ್ಲೋ…ಥೇಟ್ ದೇವಾನಂದಸ್ವಾಮಿಯ ಥರಾನೇ ಇದ್ದಾನಲ್ಲಪ್ಪ” ಎಂದು ಉದ್ಗರಿಸಿದರು. ಕ್ಯಾಮರಾಮನ್ಗೆ ಮುಜುಗರವಾದಂತಾಗಿ, “ಏ ಏನಮ್ಮ,,,ಥೇಟ್ ಹಾಗೆಯೇ ಇದ್ದಾನೆ ಅಂದ್ರೇನು?…ಅವರೇ ಬಂದಿರೋದು” ಎಂದರು. ‘ಮುಖ್ಯಮಂತ್ರಿ ಮಗ’ನನ್ನು ತಮ್ಮ ಮನೆಯಲ್ಲಿ ಕಂಡ ತಾಯಿಯ ಸಂತಸ ಇಮ್ಮಡಿಸಿತು. ನನಗೆ ಮಾತ್ರ ನಗು ತಡೆಯಲಾಗಲಿಲ್ಲ.
August 10, 2010
ಮುಕ್ತ...ಮುಕ್ತ...ಮುಕ್ತ.... padabandha, TNS, vijay karnataka, vijaya bandha 2 Comments
August 7, 2010
ಮುಕ್ತ...ಮುಕ್ತ...ಮುಕ್ತ.... mukta mukta, T N S, t n sitaram Leave a comment
June 18, 2010
ಅನುಭವ (ಕಾಶೀನಾಥಂದು ಅಲ್ಲ ಕಣ್ರೀ..), ಮುಕ್ತ...ಮುಕ್ತ...ಮುಕ್ತ.... bellary, mukta mukta, muncipal ground, nature call, toilet, vajpayee arogya shree 6 Comments
ಆರೋಗ್ಯ ಇಲಾಖೆಯ ವಾಜಪೇಯಿ ಆರೋಗ್ಯಶ್ರೀ ಕಾರ್ಯಕ್ರಮದ ಕುರಿತು ಶಾರ್ಟ್ ಫಿಲ್ಮ್ ಮಾಡಲೆಂದು ಮೊನ್ನೆ ಬಳ್ಳಾರಿಗೆ ಹೋಗಿದ್ದೆ. ಅಲ್ಲಿ ಆರೋಗ್ಯಶ್ರೀ ಕ್ಯಾಂಪ್ ಇತ್ತು. ಬಳ್ಳಾರಿಯ ಮುನ್ಸಿಪಲ್ ಮೈದಾನದಲ್ಲಿ ಕಾರ್ಯಕ್ರಮ. ಬಳ್ಳಾರಿಯ ರಣಬಿಸಿಲು ನೆನೆಸಿಕೊಂಡು ಮುಂಜಾನೆಯೇ ತಂಬಿಬೆಗಟ್ಟಲೆ ನೀರು ಕುಡಿದು ಕ್ಯಾಮೆರಾ ಯೂನಿಟ್ ನೊಂದಿಗೆ ಮುನ್ಸಿಪಲ್ ಮೈದಾನಕ್ಕೆ ಹೋಗಿದ್ದೆ. ಆದರೆ ಅದೃಷ್ಟ…ವರುಣ ದೇವ ಪ್ರಸನ್ನನಾಗಿ ಇಡೀ ಮೈದಾನದ ತುಂಬ ಮೋಡ ಕವಿದ ವಾತಾವರಣವನ್ನು ನಿರ್ಮಿಸಿದ್ದ. ಹೀಗಾಗಿ 10 ಗಂಟೆಯ ಸುಮಾರಿಗೆ ನನಗೆ ನೇಚರ್ ಕಾಲ್ ಬಂದುಬಿಟ್ಟಿತು. ಅದಾಗಲೇ ಪ್ರಕೃತಿಯ ಕರೆಗೆ ಓಗೋಟ್ಟು ಬಂದಿದ್ದ ಕ್ಯಾಮರಾಮನ್ ಆಂಜಿ ಅವರಿಗೆ ಕೇಳಿದೆ. “ಟಾಯ್ಲೆಟ್ ಎಲ್ಲಿದೆ ಗೊತ್ತಾ?”
“ಅಯ್ಯೋ ನಾನೂ ತುಂಬಾ ಹುಡುಕಿದೆ ಸಾರ್. ಇಡೀ ಗ್ರೌಂಡ್ ನಲ್ಲಿ ಸಿಗಲಿಲ್ಲ. ಕೊನೆಗೆ ಹೊರಗೆ ಸುಮಾರು ಅರ್ಧ ಕಿಮಿ ದೂರ ನಡೆದುಕೊಂಡು ಹೋಗಿ ಕಾರ್ಯಕ್ರಮ ಮುಗಿಸಿದೆ” ಎಂದರು ಆಂಜಿ.
ಸರಿ, ಎಂದು ನಾನೂ ‘ಆಪರೇಷನ್ ನೇಚರ್ ಕಾಲ್’ ಗೆ ಮುಂದಾದೆ. ಗ್ರೌಂಡ್ ಗೆ ತಾಕಿದಂತೆ ಮತ್ತೊಂದು ಗ್ರೌಂಡ್ ಇತ್ತು. ಆ ಗ್ರೌಂಡ್ ನ ಮೂಲೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಕಚೇರಿಯಿತ್ತು. ಅಲ್ಲಿ ಟಾಯ್ಲೆಟ್ ಇರಬಹುದು ಎಂದು ಅಂದುಕೊಂಡು ಹೋದೆ. ಆದರೆ ನನಗೆ ನಿರಾಸೆ ಕಾದಿತ್ತು. ಎಲ್ಲ ರೂಮ್ ಗಳಿಗೂ ಬೀಗ ಜಡಿಯಲಾಗಿತ್ತು. ಅಷ್ಟರಲ್ಲಿ ನನಗೆ ನೇಚರ್ ಕಾಲ್ ತಡೆದುಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ. ಇನ್ನೇನು ನಾನೂ ಅರ್ಧ ಕಿಮಿ ನಡೆದುಕೊಂಡು ಹೋಗಬೇಕು ಎನ್ನುವಷ್ಟರಲ್ಲಿ, ವ್ಯಕ್ತಿಯೊಬ್ಬರು ಬಂದು ಕೈಕುಲುಕಿದರು. ನಮ್ಮ ಮುಂದಿನ ಸಂಭಾಷಣೆ ಹೀಗಿತ್ತು.
“ಸರ್, ನೀವು ಮುಕ್ತ ಮುಕ್ತ ದಲ್ಲಿ ಮಾಡುತ್ತೀರಿ ಅಲ್ವಾ? ”
“ಹೌದು”
“ದೇವಾನಂದಸ್ವಾಮಿ, ಮುಖ್ಯಮಂತ್ರಿಗಳ ಮಗ ಅಲ್ವಾ?”
“ಹೌದು”
“ನಾನು ನಾಗರಾಜ್ ಅಂತ. ನೀವು ತುಂಬಾ ಚೆನ್ನಾಗಿ ಆಕ್ಟ್ ಮಾಡ್ತೀರಿ ಸರ್”
“ಥ್ಯಾಂಕ್ಯು ಸರ್”
“ನಿಮ್ಮ ಸೀರಿಯಲ್ ತುಂಬಾ ಚೆನ್ನಾಗಿದೆ”
“ಥ್ಯಾಂಕ್ಯು ಸರ್”
“ಎಲ್ಲರ ಆಕ್ಟಿಂಗ್ ತುಂಬಾ ಚೆನ್ನಾಗಿದೆ”
“ಥ್ಯಾಂಕ್ಯು ಸರ್”
“ಇಲ್ಲೇನು ಸಾರ್ ಬಂದಿದ್ದು?”
“ವಾಜಪೇಯಿ ಆರೋಗ್ಯಶ್ರೀ ಕ್ಯಾಂಪ್ ಬಗ್ಗೆ ಶಾರ್ಟ್ ಫಿಲ್ಮ್ ಮಾಡಲು ಬಂದಿದ್ದೇನೆ”
“ಓಹ್ ಹೌದಾ ಸರ್…”
“ಸರ್, ನನಗೆ ಟಾಯ್ಲೆಟ್ ಗೆ ಹೋಗಬೇಕಿತ್ತು. ಇಲ್ಲಿ ಎಲ್ಲಾದ್ರೂ ಟಾಯ್ಲೆಟ್ ಇದ್ಯಾ?”
“ಅಯ್ಯೋ ಬನ್ನಿ ಸಾರ್…”
ಎನ್ನುತ್ತಾ ನಾಗರಾಜ್ ಅವರು ಸ್ಕೌಟ್ಸ್ ಬಿಲ್ಡಿಂಗ್ ನ ಒಂದು ರೂಂನ ಬೀಗ ತೆಗೆಸಿದರು. ಒಳಗೆ ಕರೆದುಕೊಂಡು ಹೋಗಿ ಮತ್ತೊಂದು ರೂಂನ ಬೀಗ ತೆಗೆಸಿದರು. ಒಳಗೆ ಹೋಗಿ ಮತ್ತೊಂದು ಬಾಗಿಲು ತೆರೆದರು. ಟಾಯ್ಲೆಟ್ ಬಾಗಿಲು ನನ್ನ ಭಾಗ್ಯದ ಬಾಗಿಲಿನಂತೆ ಕಂಡಿತು ನನಗೆ. ಟಾಯ್ಲೆಟ್ ನಲ್ಲಿ ನೀರಿಲ್ಲದ ಕಾರಣ ಮೋಟರ್ ಆನ್ ಮಾಡಿಸಿದರು. ನಾನು ನನ್ನ ನೇಚರ್ ಕಾಲ್ ಪೂರೈಸಿ, ಹೊರಗೆ ಬಂದು ನಾಗರಾಜ್ ಅವರಿಗೆ ಮನಃಪೂರ್ವಕವಾಗಿ ವಂದಿಸಿದೆ.
ಎಂತೆಂತಹ ಅನುಭವ ಮಾರಾಯ್ರೆ…..
May 15, 2010
ಚಿಠ್ಠೀ ಆಯೀ ಹೈ…