ಇತ್ತೀಚೆಗೆ ಬೆಳಗಾವಿಗೆ ಹೋಗಿದ್ದೆ. ನಾನು ಅಲ್ಲಿ ಕಳೆದಿರುವುದು ಸುಮಾರು 22 ವರ್ಷ. ಬೆಳಗಾವಿ ನೀರು ಕುಡಿದು ಬೆಳೆದವನು. ಸದಾ ಸಿಹಿ ಸಿಹಿಯಾಗಿರುತ್ತಿದ್ದ ನೀರು ಈ ಬಾರಿ ಮಾತ್ರ ಯಾಕೋ ಸ್ವಲ್ಪ ಬೇರೆಯಾಗಿದೆ ಅನಿಸಿತು. ರುಚಿಯಲ್ಲಿ ಏನೋ ವ್ಯತ್ಯಾಸ. ಸಿಹಿ ಕಡಿಮೆಯಾದ ಅನುಭವ. ಸ್ನೇಹಿತನ್ನ ಕಾರಣವೇನೆಂದು ಕೇಳಿದೆ, “ಇಲ್ಲೀಮಟ ರಾಕಸ್ಕೋಪ್ ನೀರ್ ಕೊಡ್ತಿದ್ರು. ಈಗ ಚೋವೀಸ್ ತಾಸ್ ಪಾಣಿ (24 ಗಂಟೆ ನೀರು) ಅಂತ ಹೇಳಿ ಹಿಡಕಲ್ ಡ್ಯಾಮ್ ನೀರ್ ಬಿಡಾಕ್ ಹತ್ಯಾರ. ನೀ ಈಗ ಕುಡದದ್ದು ಹಿಡಕಲ್ ಡ್ಯಾಮ್ ನೀರು” ಅಂದ. ಬೆಳಗಾವಿಯಲ್ಲಿ ನೀರು ಸರಬರಾಜು ಖಾಸಗೀಕರಣಗೊಂಡಿದೆ. ಸಧ್ಯಕ್ಕೇನೋ ಚೋವೀಸ್ ತಾಸ್ ಪಾಣಿ ಬರುತ್ತಿದೆ. ಆದರೆ, ನೀರು ಸರಬರಾಜು ಖಾಸಗೀಕರಣಗೊಂಡಿರುವುದರಿಂದ ಮುಂದೆ ಇದೇ ರೀತಿ ನೀರು ಬರುತ್ತದೆಯೆಂಬ ಗ್ಯಾರಂಟಿ ಮಾತ್ರ ಕೊಂಚವೂ ಇಲ್ಲ. ಬೆಳಗಾವಿ ಬದಲಾಗುತ್ತಿದೆ. ಆ ಬದಲಾವಣೆ ಗಾಬರಿ ಹುಟ್ಟಿಸುತ್ತಿದೆ.
ನೀರಿನ ರುಚಿ ಬದಲಾಗಿದೆ
May 8, 2012
ಅನುಭವ (ಕಾಶೀನಾಥಂದು ಅಲ್ಲ ಕಣ್ರೀ..) ಖಾಸಗೀಕರಣ, ನೀರು, ಬೆಳಗಾವಿ Leave a comment
ಹೀಗೊಂದು ಪ್ರಶ್ನೆ….
April 19, 2012
ಅಪ್ಪ ಬದಲಾಗಿದ್ದಾನೆ…!!!
June 21, 2011
ಅನುಭವ (ಕಾಶೀನಾಥಂದು ಅಲ್ಲ ಕಣ್ರೀ..), ಮುದ್ರಣ ಮಾಧ್ಯಮ 13 Comments
ಅಪ್ಪ. ಅದೊಂದು ಆತ್ಮವಿಶ್ವಾಸ. ಅದೊಂದು ನಂಬಿಕೆ. ಅದು ಭದ್ರತೆ. ಅದು ಭಯಮಿಶ್ರಿತ ಪ್ರೀತಿ ಅಥವಾ ಪ್ರೀತಿ ಮಿಶ್ರಿತ ಭಯ. ಅದೊಂದು ಆಸರೆ. ದಟ್ಟ ಕೂದಲಿನ ಗಟ್ಟಿ ಎದೆಯ ಮೇಲೆ ಪುಟ್ಟ ತಲೆಯನ್ನಿಟ್ಟು ತಾಚಿ ಮಾಡಿದ ಮಗು ಆ ಸ್ಪರ್ಶವನ್ನೆಂದಿಗೂ ಮರೆಯಲಾರದು. ಅಪ್ಪ ಮುದ್ದಿಸುವಾಗ ಎರಡು ದಿನದಿಂದ ಕ್ಷೌರ ಮಾಡಿರದ ಆತನ ಗಡ್ಡ ಚುಚ್ಚಿದರೂ, ಅದರಲ್ಲೇ ಪ್ರೀತಿ ಕಾಣುತ್ತದೆ ಮಗು. ಅಪ್ಪ ಎಂದಿಗೂ ಅಪ್ಪನೇ.
ಅಪ್ಪ ಯಾರು ಎಂಬುದಕ್ಕೆ ಚೆಂದಾದ ಸುಭಾಷಿತವೊಂದು ಸರಳವಾದ ವ್ಯಾಖ್ಯೆಯನ್ನು ನೀಡುತ್ತದೆ. ಸುಭಾಷಿತ ಹೀಗಿದೆ.
ಜನಿತಾಚೋಪನೇತಾಚ ಯಸ್ತು ವಿದ್ಯಾಂ ಪ್ರಯಚ್ಛತಿ
ಅನ್ನದಾತಾ ಭಯತ್ರಾತಾ ಪಂಚೈತೇ ಪಿತರಸ್ಮೃತಾಃ
ಅರ್ಥ – ಜನ್ಮ ನೀಡಿದವನು, ಉಪನಯನ ಮಾಡಿದವನು, ವಿದ್ಯೆ ಹೇಳಿಕೊಟ್ಟವನು, ಅನ್ನ ನೀಡಿದವನು, ಅಂಜಿಕೆ ಹತ್ತಿರ ಸುಳಿಯದಂತೆ ಕಾಪಾಡಿದವನು – ಈ ಐದನ್ನು ಯಾರು ಮಾಡುತ್ತಾರೋ ಆತ ತಂದೆ ಅನ್ನಿಸಿಕೊಳ್ಳಲು ಅರ್ಹ.
ಹಿಂದಿನ ಕಾಲದಿಂದಲೂ ನಮ್ಮ ಪರಂಪರೆಯಲ್ಲಿ ಅಪ್ಪನಿಗೆ ವಿಶೇಷ ಸ್ಥಾನವನ್ನು ನೀಡಲಾಗಿದೆ. ತಾಯಿಗೆ ನಮಸ್ಕಾರ ಅಂದ ತಕ್ಷಣ ನಾವು ಅನ್ನುವುದೇ ‘ಪಿತೃ ದೇವೋಭವ’ ಎಂದು. ದೇವರ ಸ್ಥಾನವನ್ನು ನೀಡಿರುವ ನಮ್ಮ ಪರಂಪರೆಯೇ ಮಗುವಿನ ಬೆಳವಣಿಗೆಯ ವಿವಿಧ ಹಂತಗಳಲ್ಲಿ ತಂದೆಯಾದವನು ಮಗುವಿನೊಡನೆ ಯಾವ ರೀತಿಯಿಂದ ನಡೆದುಕೊಳ್ಳಬೇಕು ಎಂಬುದನ್ನೂ ಸೂಚಿಸಿದೆ.
ಲಾಲಯೇತ್ ಪಂಚವರ್ಷಾಣಿ
ದಶ ವರ್ಷಾಣಿ ತಾಡಯೇತ್
ಪ್ರಾಪ್ತೇತು ಷೋಡಷೇ ವರ್ಷೇ
ಪುತ್ರಂ ಮಿತ್ರವದಾಚರೇತ್
ಅರ್ಥ – ಮಗುವನ್ನು ಐದು ವರ್ಷದ ವರಗೆ ಪ್ರೀತಿಯಿಂದ ನೋಡಿಕೊಳ್ಳಬೇಕು. ಹತ್ತು ವರ್ಷದವನಾದಾಗ ತಪ್ಪು ಮಾಡುವ ಸಂದರ್ಭದಲ್ಲಿ ಎರಡೇಟು ಹಾಕಿ ತಿದ್ದಬೇಕು. ಆದರೆ ಅದೇ ಮಗು ಹದಿನಾರು ವರ್ಷದವನಾದಾಗ ಅದನ್ನು ಮಿತ್ರನಂತೆ ನೋಡಿಕೊಳ್ಳಬೇಕು ಎನ್ನುತ್ತದೆ ಸುಭಾಷಿತ. ಹೌದು. ದೇವರೂ ಕೂಡ ಮಿತ್ರನಾಗಲು ಸಾಧ್ಯವಲ್ಲವೆ?
ನಮ್ಮಲ್ಲಿ ಮೊದಲಿನಿಂದಲೂ ತಂದೆಯ ಬಗ್ಗೆಯಿದ್ದ ಪರಿಕಲ್ಪನೆ ಒಂದೇ ತೆರನಾಗಿದ್ದಾದರೂ, ಕಾಲದಿಂದ ಕಾಲಕ್ಕೆ ತಂದೆ-ಮಗ ಅಥವಾ ತಂದೆ-ಮಗಳ ಸಂಬಂಧ ಮಾತ್ರ ಕಾಲನ ಹೊಡೆತಕ್ಕೆ ಸಿಕ್ಕು ತನ್ನ ಸ್ವರೂಪವನ್ನು ಬದಲಿಸಿಕೊಂಡಿದೆ. ಆಧುನಿಕತೆ ಹಾಗೂ ಜಾಗತೀಕರಣದ ಇಂದಿನ ಯುಗದಲ್ಲಂತೂ ತಂದೆ-ಮಗನ ಸಂಬಂಧ ಸಾಕಷ್ಟು ಬದಲಾವಣೆಗಳನ್ನು ಕಂಡಿದೆ. ಶ್ರೀರಾಮನ ಆಸ್ಥಾನಕ್ಕೆ ಬಂದು ಕುಶ-ಲವರು ರಾಮ ಚರಿತೆಯನ್ನು ಹಾಡಿದಾಗ ಇದ್ದ ಸಂಬಂಧಕ್ಕೂ, ತಂದೆಯಾದವನು ತನ್ನ ಮಕ್ಕಳ ವಿಧ್ಯಾಭ್ಯಾಸಕ್ಕೋ, ಮದುವೆಗೋ ಎಂದೋ ಮಕ್ಕಳಿಗೆ 2 ವರ್ಷ ತುಂಬುತ್ತಲೇ ಉಳಿತಾಯ ಆರಂಭಿಸಬೇಕು ಅಥವಾ ವಿಮಾ ಪಾಲಿಸಿ ತೆಗೆದುಕೊಳ್ಳಬೇಕು ಎಂದು ಹೇಳುವ ಇಂದಿನ ಕಾಲದ ಸಂಬಂಧಕ್ಕೂ ಸಾಕಷ್ಟು ವ್ಯತ್ಯಾಸವಿದೆ.
ಪುರುಷ ಪ್ರಧಾನ ಸಮಾಜದಲ್ಲಿ ಸಹಜವಾಗಿಯೇ ತಂದೆಗೊಂದು ಸ್ಥಾನ ತಾನೇ ತಾನಾಗಿ ಲಭಿಸಿದೆ. ಆ ತಂದೆ ಎಂತಹ ಕ್ರೂರ ತಂದೆಯೇ ಆಗಿರಲಿ – ಇದು ವಿಪರ್ಯಾಸವಾದರೂ – ಆತನಿಗೊಂದು ಸ್ಥಾನ ಎಂದು ನೀಡಲ್ಪಟ್ಟಿದೆ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ತಂದೆಯಾದವನು ಮಕ್ಕಳಿಗೆ ಒಂದು ಅನನ್ಯತೆಯನ್ನು (ಐಡೆಂಟಿಟಿ) ದೊರಕಿಸಿಕೊಡುತ್ತಾನೆ. “ತಾಯಿಯಾರೋ ಗೊತ್ತಿಲ್ಲ” ಎಂಬುದಕ್ಕಿಂತ “ತಂದೆಯಾರೋ ಗೊತ್ತಿಲ್ಲ” ಎಂಬುದು ನಮ್ಮ ಸಮಾಜದಲ್ಲಿ ಹೆಚ್ಚು ಇರುಸುಮುರುಸು ಉಂಟುಮಾಡುವ ಸಂಗತಿಯಾಗಿದೆ. ಹಿಂದಿ ಚಿತ್ರರಂಗದಲ್ಲಂತೂ ತಂದೆಯಿಲ್ಲದೆ, ಐಡೆಂಟಿಟಿ ಕ್ರೈಸಿಸ್ ನಿಂದ ಬಳಲುವ ನಾಯಕ ಚಿತ್ರದುದ್ದಕ್ಕೂ ಪ್ರೇಕ್ಷಕರ ಕರುಣೆಗಿಟ್ಟಿಸುತ್ತಾನೆ.
ರಾಮಾಯಣದ ಕಾಲದಲ್ಲಿ ವಾಸ್ತವವಾಗಿಯೇ ತಂದೆ ‘ದೇವೋಭವ’ ಆಗಿದ್ದ. ಅದಕ್ಕೇ ಅಲ್ಲವೇ ಸ್ವತಃ ಶ್ರೀರಾಮ ತಂದೆಯ ಮಾತನ್ನು ಉಳಿಸಲು ಪತ್ನಿ ಹಾಗೂ ತಮ್ಮನೊಡನೆ 14 ವರ್ಷಗಳ ಕಾಲ ಕಾಡಿನತ್ತ ಹೆಜ್ಜೆ ಹಾಕಿ ಇನ್ನಿಲ್ಲದ ಕಷ್ಟಗಳಿಗೆ ಸಿಕ್ಕಿಹಾಕಿಕೊಂಡದ್ದು? ರಾಮ ಅಂದಿಗೂ ಇಂದಿಗೂ ನಮಗೆ ಆದರ್ಶ. ಎಲ್ಲ ಸಂಬಂಧಗಳಿಗೂ ಆದರ್ಶ. ಅಗಸನ ಮಾತನ್ನು ಕೇಳಿಕೊಂಡು ಪತ್ನಿಯನ್ನು ದೂರ ಮಾಡಿದ ಎಂಬ ಆರೋಪ ರಾಮನ ಮೇಲಿದ್ದರೂ, ಹಿಂದಿನ ಘಟನೆಗಳು ಆಯಾ ದೇಶ-ಕಾಲ-ಪರಿಸ್ಥಿತಿಯ ಒತ್ತಡಗಳಿಂದ ಉಂಟಾಗಿದ್ದು ಎಂಬುದನ್ನು ಮರೆಯಬಾರದು. ರಾಮ ಅಧಿಕಾರವನ್ನು ತ್ಯಜಿಸಿ ಸೀತೆ ಹಾಗೂ ಲಕ್ಷ್ಮಣನೊಡನೆ ಕಾಡಿಗೆ ಹೋಗಿದ್ದು, ಅಲ್ಲಿ ಲಕ್ಷ್ಮಣ, ಶೂರ್ಪನಖಿಯ ಮೂಗು ಕತ್ತರಿಸಿದ್ದು, ಸೀತೆಗೆ ಮಾಯಾಜಿಂಕೆ ಕಂಡಿದ್ದು, ಸೀತಾಪಹರಣವಾಗಿದ್ದು, ಜಟಾಯು ರೆಕ್ಕೆ ಕತ್ತರಿಸಿಕೊಂಡದ್ದು, ಹನುಮ ಸಮುದ್ರ ಜಿಗಿದದ್ದು, ತನ್ನ ಬಾಲದಿಂದ ಲಂಕೆಗೆ ಬೆಂಕಿ ಇಟ್ಟದ್ದು, ಭಾರತದಿಂದ ಶ್ರೀಲಂಕೆಗೆ ಸೇತುವೆ ನಿರ್ಮಾಣವಾಗಿದ್ದು, ರಾಮ-ರಾವಣ ಯುದ್ಧವಾಗಿದ್ದು, ಕೊನೆಗೆ ರಾಮ ಸೀತೆಯೊಡನೆ ಮರಳಿದ್ದು ಎಲ್ಲವೂ ನಡೆದಿದ್ದು ಕೇವಲ ಕೇವಲ ಶ್ರೀರಾಮನ ಪಿತೃವಾಕ್ಯ ಪರಿಪಾಲನೆಗಾಗಿ!!
ಬಹುಶಃ ಶ್ರೀರಾಮ, “ಇಲ್ಲ ತಂದೆಯೇ, ನೀನು ಕೈಕೇಯಿಗೆ ಮಾತು ಕೊಟ್ಟಿರಬಹುದು. ನಿನ್ನ ಮಾತನ್ನು ಉಳಿಸಿಕೊಳ್ಳುವುದು ನಿನ್ನ ಜವಾಬ್ದಾರಿಯೇ ಹೊರತು. ನನ್ನದಲ್ಲ. ಕ್ಷಮಿಸು. ನನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಒಬ್ಬ ರಾಜನ ಮಗನಾಗಿ ನನ್ನ ಕರ್ತವ್ಯ ಕೇವಲ ಅಯೋಧ್ಯೆಯ ರಕ್ಷಣೆ ಹಾಗೂ ಪ್ರಜಾ ಪರಿಪಾಲನೆ. ಅದು ಧರ್ಮ ಕೂಡ” ಎಂದಿದ್ದರೆ ರಾಮನ ಮಾತಿಗೆ ಭರತನೂ ಎದುರಾಡುತ್ತಿರಲಿಲ್ಲ. ರಾಮಾಯಣವೂ ನಡೆಯುತ್ತಿರಲಿಲ್ಲ! ಆದರೆ ರಾಮ ತಂದೆಯ ಇಕ್ಕಟ್ಟನ್ನು ಅರ್ಥಮಾಡಿಕೊಂಡವನೇ ನೇರವಾಗಿ ಕಾಡಿಗೆ ನಡೆದುಬಿಟ್ಟ. 14 ವರ್ಷಗಳಲ್ಲಿ ಏನೆಲ್ಲ ನಡೆದುಹೋಯಿತು. ಕೇವಲ ರಾಮ ದಶರಥನ ಮೇಲೆ ಇಟ್ಟಿದ್ದ ಭಕ್ತಿ ಹಾಗೂ ಗೌರವಕ್ಕಾಗಿ.
ತ್ರೇತಾಯುಗದಲ್ಲಿ ‘ಪಿತೃವಾಕ್ಯ’ಕ್ಕಾಗಿ ಇಷ್ಟೆಲ್ಲ ನಡೆದರೆ ದ್ವಾಪರಯುಗದಲ್ಲಿ ನಡೆದದ್ದು ಮತ್ತಷ್ಟು ವಿಚಿತ್ರ. ತಂದೆ ಶಂತುನುವಿಗಾಗಿ ಸತ್ಯವತಿಯ ಬಳಿ ತೆರಳಿ ಬ್ರಹ್ಮಚಾರಿಯಾಗಿರುವುದಾಗಿ ಘೋಷಿಸಿದ ಭೀಷ್ಮ ಎಲ್ಲೊ ಒಂದು ಕಂಡೆ ದ್ವಾಪರದಲ್ಲಿ ಶ್ರೀರಾಮನ ಮುಂದುವರಿದ ಭಾಗದಂತೆ, ಆತನ ಪ್ರತಿನಿಧಿಯಂತೆ ಕಂಡುಬರುತ್ತಾನೆ. ಆದರೆ ಈ ಸಾತ್ವಿಕತೆ ಹೆಚ್ಚು ಹೊತ್ತು ಉಳಿಯುವುದಿಲ್ಲ. ಏಕೆಂದರೆ ತಲೆ ಮೇಲೆ ಮಗುವನ್ನು ಹೊತ್ತುಕೊಂಡು ಯಮುನಾ ನದಿ ದಾಟಿ ಕೃಷ್ಣನನ್ನು ಬದುಕಿಸಿದ ವಸುದೇವ ಆದರ್ಶ ತಂದೆಯಾಗಿ ಕಂಡರೆ, ಮತ್ತೊಂದೆಡೆ ಮಕ್ಕಳ ಮೇಲಿನ ಕುರುಡು ಪ್ರೀತಿಯಿಂದ ಮಕ್ಕಳ ವಿನಾಶಕ್ಕೇ ಕಾರಣನಾದ ಧೃತರಾಷ್ಟ್ರನೂ ಕಾಣಸಿಗುತ್ತಾನೆ. ತ್ರೇತಾಯುಗದಲ್ಲಿ ಅಪ್ಪನ ಮಾತಿಗೆ ಮಗ ಬೆಲೆಕೊಟ್ಟು ಕಾಡಿಗೆ ಹೋದರೆ, ದ್ವಾಪರದಲ್ಲಿ ಅಪ್ಪನೇ ಮಕ್ಕಳ ಕುಕರ್ಮಗಳನ್ನು ತಿದ್ದದೆ ಅವರಿಗೆ ರಕ್ಷಣೆಯಾಗಿ ನಿಲ್ಲುತ್ತಾನೆ. ಇದು ಕಾಲದ ಬದಲಾವಣೆಯನ್ನು ತೋರಿಸುವುದರ ಜೊತೆಗೆ ಅಪ್ಪ ಎಂಬ ಮೌಲ್ಯ, ಆದರ್ಶ ಹೇಗೆ ಬದಲಾಯಿತು ಎಂಬುದನ್ನು ಸೂರ್ಯನಷ್ಟು ಸ್ಪಷ್ಟವಾಗಿ ತೋರಿಸುತ್ತದೆ. ಜೊತೆಗೆಯೇ ದ್ವಾಪರಯುಗದಲ್ಲಿ ತಂದೆಯ ಮೌಲ್ಯವೇ ಹಲವಾರು ಸಂದರ್ಭಗಳಲ್ಲಿ ಅಲ್ಲಾಡಿಹೋಗುತ್ತದೆ. ತಂದೆಯ ಅಸ್ತಿತ್ವಕ್ಕೆ ಪ್ರಶ್ನೆ ಚಿಹ್ನೆ ಎದುರಾಗುತ್ತದೆ. ಪಾಂಡುರಾಜ, ಧೃತರಾಷ್ಟ್ರ, ವಿದುರ, ಕರ್ಣ, ಹಾಗೂ ಪಾಂಡವರ ಜನನ ಪ್ರಕ್ರಿಯೆಯಲ್ಲಿ ಅಪ್ಪನಾದವನು ಕೇವಲ ಜೈವಿಕ ತಂದೆ (ಬಯೋಲಾಜಿಕಲ್ ಫಾದರ್) ಆಗುತ್ತಾನೆಯೇ ಹೊರತು ಭಾವನಾತ್ಮಕ ತಂದೆ ಆಗುವುದೇ ಇಲ್ಲ. ಅಪ್ಪನ ಅಸ್ತಿತ್ವ, ಮೌಲ್ಯ, ಪಾತ್ರ, ಇತ್ಯಾದಿಗಳ ಬಗ್ಗೆ ಬಹುಶಃ ಮೊಟ್ಟಮೊದಲ ಸ್ಥಿತ್ಯಂತರ ಇಲ್ಲಿಂದಲೇ ಆರಂಭವಾಯಿತು ಎನ್ನಬಹುದು.
ಇನ್ನು ಕಲಿಯುಗದಲ್ಲಿ ಕಂಡಷ್ಟು ಸ್ಥಿತ್ಯಂತರಗಳು, ಬದಲಾವಣೆಗಳು ಇನ್ನೂ ಅಗಾಧ. ಇಂದು ಅಪ್ಪ ಕೇವಲ ಅಪ್ಪನಾಗಿ ಉಳಿದಿಲ್ಲ. ವಾಸ್ತವವಾಗಿ ಹೇಳಬೇಕೆಂದರೆ ಹೆಚ್ಚುತ್ತಿರುವ ಪರಿಸರ ಮಾಲಿನ್ಯ, ಕೆಲಸದ ಒತ್ತಡ, ಬದಲಾಗಿರುವ ಜೀವನ ಶೈಲಿ, ವ್ಯಾಯಮ ರಹಿತ ಜೀವನ, ಕುಡಿತ-ಸಿಗರೇಟು ಸೇವನೆಯಂತಹ ದುಶ್ಚಟಗಳು, ಅತಿಯಾದ ಬೊಜ್ಜು, ಕಲುಷಿತ ಆಹಾರ-ನೀರು ಸೇವನೆ, ಕುಂಠಿತಗೊಂಡಿರುವ ವೀರ್ಯಾಣುಗಳ ಸಂಖ್ಯೆಯಿಂದಾಗಿ ಜೈವಿಕ ತಂದೆಯಾಗುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. (ಹಾಗಾದರೆ ಭಾರತದ ಜನಸಂಖ್ಯೆ ಇಷ್ಟು ಹೇಗೆ ಹೆಚ್ಚಾಗಿದೆ ಅನ್ನುತ್ತೀರಾ? ಈ ಅಂಶವನ್ನು ಸಧ್ಯ ಪಕ್ಕಕ್ಕಿಟ್ಟು ಯೋಚಿಸೋಣ). ಸಂತಾನ ಹೀನತೆ ಹೊಸ ಯುಗದಲ್ಲಿ ಸವಾಲಾಗಿ ಪರಿಣಮಿಸಿದ್ದರೆ, ವೈದ್ಯಕೀಯ ರಂಗಕ್ಕೆ ಉದ್ಯಮವಾಗಿ ಮಾರ್ಪಟ್ಟಿದೆ. ರಾಜ್ಯ ರಾಜಧಾನಿ ಬೆಂಗಳೂರು ಅಷ್ಟೇ ಅಲ್ಲದೇ ಜಿಲ್ಲಾ ಕೇಂದ್ರಗಳಲ್ಲೂ ಪ್ರತಿವರ್ಷ ಹೊಸ ಹೊಸ ಸಂತಾನ ಹೀನತೆ ಚಿಕಿತ್ಸಾ ಕೇಂದ್ರಗಳು ಸಂತಾನವಿಲ್ಲದ ದಂಪತಿಗಳಿಗೆ ಚಿಕಿತ್ಸೆ ನೀಡುತ್ತಿವೆ. ಇಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆಯೂ ದಿನೇದಿನೇ ಏರುತ್ತಿದೆ. ಬೆಂಗಳೂರಿನಲ್ಲೇ ಪ್ರತಿಷ್ಠಿತ ಚಿಕಿತ್ಸಾ ಕೇಂದ್ರಗಳಲ್ಲಿ ತಿಂಗಳಿಗೆ ಕನಿಷ್ಠ ತಲಾ 5 ಪ್ರನಾಳ ಶಿಶುಗಳು ಜನ್ಮತಾಳುತ್ತಿವೆ. ಪ್ರತಿಯೊಂದು ಪ್ರನಾಳ ಶಿಶುವಿಗೂ ಕನಿಷ್ಠ ಒಂದೂವರೆಯಿಂದ 2 ಲಕ್ಷ ರೂಪಾಯಿಯಷ್ಟು ಖರ್ಚು ತಗಲುತ್ತದೆ. ಆದರೆ ವೈದ್ಯಕೀಯ ಸಾಧನೆಗಳ ಸಹಾಯದಿಂದ ಜೈವಿಕ ತಂದೆ-ತಾಯಿಯಾಗುವವರು, ಭಾವನತ್ಮಕವಾಗಿ, ಲೌಕಿಕವಾಗಿ ಕೂಡ ಉತ್ತಮ ತಂದೆತಾಯಿ ಎನಿಸಿಕೊಳ್ಳಬೇಕಾಗುತ್ತದೆ. ಈ ಹಂತದಲ್ಲೇ ಸ್ವಲ್ಪ ಎಡವಟ್ಟಾಗುತ್ತಿರುವುದು ಕಂಡಬರುತ್ತಿದೆ.
ಮೊನ್ನೆ ಒಬ್ಬ ಹಿರಿಯರು ಹೇಳಿದರು. “ಇತ್ತೀಚೆಗೆ DINK ಕುಟುಂಬಗಳು ಹೆಚ್ಚಾಗುತ್ತಿವೆ” ಅಂತ. “ಹಾಗೆಂದರೇನು?” ಅಂತ ಕೇಳಿದೆ. ಅವರು ಹೇಳಿದ್ದು “DINK ಅಂದರೆ Double Income No Kids ಕುಟುಂಬಗಳು” ಅಂತ. ಮಕ್ಕಳು ಬೇಕೋ ಬೇಡವೋ ಎಂಬ ನಿರ್ಧಾರ ವೈಯುಕ್ತಿಕ ಮಟ್ಟದ್ದು. ಅದರಲ್ಲಿ ಮೂರನೇ ವ್ಯಕ್ತಿ ತಲೆಹಾಕುವ ಹಾಗಿಲ್ಲ. ಎಷ್ಟೋ ದಂಪತಿಗಳು ಮದುವೆಗೆ ಮುನ್ನವೇ ತಮಗೆ ಮಕ್ಕಳು ಬೇಡ ಎಂದು ಪ್ರಜ್ಞಾಪೂರ್ವಕವಾಗಿ ನಿರ್ಧರಿಸುತ್ತಾರೆ. ಆದರೆ ಮಕ್ಕಳು ಬೇಕೆಂದು ಬಯಸುವ ತಂದೆತಾಯಿಗಳು ಆಧುನಿಕತೆ ಹಾಗೂ ಆಧುನಿಕ ಜೀವನ ಶೈಲಿಯ ಒತ್ತಡದಿಂದಾಗಿ ಸಾಕಷ್ಟು ಹಣ ಗಳಿಸುತ್ತಿದ್ದರೂ ಮಕ್ಕಳಾಗದೇ ಕೊರಗುವುದು ಹೊಸ ಯುಗದ ಮತ್ತೊಂದು ದುರಂತ ಎನಿಸುತ್ತದೆ.
ಶ್ರೀಮಂತ ಹಾಗೂ ಮಧ್ಯಮ ವರ್ಗದಲ್ಲಿ ಈ ಕಥೆಯಾದರೆ ಬಡ ವರ್ಗದ ಲೆಕ್ಕಾಚಾರಗಳೇ ಬೇರೆ. ಅಲ್ಲಿ ಮದುವೆಯಾದ ಬಳಿಕ ಅಪ್ಪನಾಗುವುದು ಹೆಮ್ಮೆಯ ವಿಷಯ ಅಲ್ಲವೇ ಅಲ್ಲ. ಮಕ್ಕಳನ್ನು ‘ಹುಟ್ಟಿಸುವುದು’ ಅನಿವಾರ್ಯವೇ ಹೊರತು ಆಯ್ಕೆಯಲ್ಲ. ಹೆಚ್ಚು ಹೆಚ್ಚು ಮಕ್ಕಳಾದಷ್ಟೂ ಕುಟುಂಬದ ಬಡತನ ದೂರವಾಗುತ್ತದೆ ಎಂಬ ಭ್ರಮೆ ಜನಸಂಖ್ಯಾ ಸ್ಫೋಟಕ್ಕೆ ಕಾರಣವಾಗುತ್ತದೆ. ಕುಟುಂಬ ನಿರ್ವಹಣೆಯ ಜವಾಬ್ದಾರಿ ಅಪ್ಪನ ಮೇಲಿರುವುದರಿಂದ ಆತನ ಮೊದಲ ಮಗನ ವಯಸ್ಸು 16 ವರ್ಷಗಳಿದ್ದರೆ ಕೊನೆಯ ಮಗಳಿಗೆ 8 ತಿಂಗಳೂ ಪೂರೈಸಿರುವುದಿಲ್ಲ. ಇವರೂ ಕೇವಲ ಜೈವಿಕ ತಂದೆಯರು. ದ್ವಾಪರ ಯುಗದ ಜೈವಿಕ ಅಪ್ಪಂದಿರ ಹಾಗೆ. ಕಾರಣಗಳು ಬೇರೆ ಬೇರೆ ಇದ್ದರೂ ಪರಿಣಾಮ ಮಾತ್ರ ಒಂದೇ. ಒಂದು ಮಗುವಿಗೆ ಅಪ್ಪನಾಗುವುದೇ ಕಷ್ಟವಿರುವಾಗ ಹತ್ತು ಮಕ್ಕಳಿಗೆ ಒಬ್ಬನೇ ವ್ಯಕ್ತಿ ಅದ್ಹೇಗೆ ಸಮರ್ಥ ತಂದೆಯಾಗಬಲ್ಲ? ಹತ್ತು ಮಕ್ಕಳಲ್ಲಿ ಯಾವ ಮಗು ತಾನೆ ‘ಮೈ ಡ್ಯಾಡಿ ಸ್ಟ್ರಾಂಗೆಸ್ಟ್’ ಅಂತ ಹೆಮ್ಮೆಯಿಂದ ಹೇಳಬಹುದು?
ಈ ಸಮಸ್ಯೆ ಕೇವಲ ಹತ್ತು ಮಕ್ಕಳಿರುವ ಕುಟುಂಬದಲ್ಲಿಯೇ ಇರಬೇಕು ಎಂದೇನಿಲ್ಲ. ಎಷ್ಟೋ ಉಳ್ಳವರ ಮನೆಗಳಲ್ಲಿಯೇ, ಒಂದೇ ಮಗು ಇರುವ ಕುಟುಂಬದಲ್ಲಿ ಕೂಡ ಆ ಒಂಟಿ ಮಗು ಮೈ ಡ್ಯಾಡಿ ಸ್ಟ್ರಾಂಗೆಸ್ಟ್ ಎಂದು ಹೇಳುವ ಪರಿಸ್ಥಿತಿಯಿಲ್ಲ.
ಕೆಲ ವರ್ಷಗಳ ಹಿಂದೆ ಜೋಕೊಂದು ಪ್ರಚಲಿತದಲ್ಲಿತ್ತು. ವಿದೇಶದಲ್ಲಿ ತಂದೆಯಾದವನು ಎಷ್ಟು ಬಿಝಿಯಾಗಿರುತ್ತಾನೆಂದರೆ, ವೀಕೆಂಡ್ ಗಳಲ್ಲಿ ಆತ ಮನೆಗೆ ಬಂದಾಗ ಆತನ ಮಗ ತನ್ನ ತಾಯಿಗೆ “ಮಮ್ಮಿ, ಸಮ್ ಅಂಕಲ್ ಹ್ಯಾಸ್ ಕಮ್” ಎಂದು ಹೇಳುತ್ತಾನೆ ಅಂತ. ಆದರೆ ಈ ಜೋಕ್ ಇದೀಗ ನಮ್ಮಲ್ಲಿನ ಸಾಕಷ್ಟು ಕುಟುಂಬಗಳಲ್ಲಿ ಘಟಿಸಿಬಿಡುವ ಆತಂಕ ಎದುರಾಗಿದೆ. ಮಗು ತನ್ನ ತಂದೆಗೆ ಅಂಕಲ್ ಎಂದು ಹೇಳದಿದ್ದರೂ, ತಂದೆ ಮಕ್ಕಳ ನಡುವಿನ ಸಂಬಂಧದ ರೇಷ್ಮೆ ದಾರಗಳು ಲಡ್ಡಾಗುತ್ತಿವೆ.
ಅಪ್ಪನಾದನವ ಪಾತ್ರ, ಜವಾಬ್ದಾರಿ, ಹರವು, ವಿಸ್ತಾರ, ಇಂದು ತೀರ ಹೆಚ್ಚಿದೆ. ಅಪ್ಪ ಇಂದು ಕೇವಲ ಅಪ್ಪನಾಗಿ ಉಳಿಯದೇ ಅಮ್ಮನ ಪಾತ್ರವನ್ನೂ ನಿರ್ವಹಿಸುತ್ತಿದ್ದಾನೆ. ಹಾಗೆ ನೋಡಿದರೆ, ಅಮ್ಮನಾದವಳು ಕೂಡ ಅಪ್ಪನ ಪಾತ್ರವನ್ನು ನಿರ್ವಹಿಸುತ್ತಿದ್ದಾಳೆ ಬಿಡಿ. ಆದರೆ ಒಂದು ವಿಷಯ ಗಮನದಲ್ಲಿಟ್ಟುಕೊಳ್ಳಬೇಕು. ಭಾಗಶಃ ಎಲ್ಲ ಅಮ್ಮಂದಿರಿಗೂ ಅಪ್ಪನ ಪಾತ್ರವನ್ನು ನಿರ್ವಹಿಸುವದು ಸಾಧ್ಯ. ಆ ಅರ್ಹತೆ, ಸಾಮರ್ಥ್ಯ, ಅಡಾಪ್ಟೆಬಿಲಿಟಿ, ಎಲ್ಲ ಸ್ತ್ರೀಯರಲ್ಲಿದೆ. ಆದರೆ ಪುರುಷರಲ್ಲಿ? ಪುಟ್ಟ ಮಗುವೊಂದರ ಚಡ್ಡಿ ಬದಲು ಮಾಡಬೇಕೆಂದರೂ ಹಲವು ಅಪ್ಪಂದಿರಿಗೆ ಕುತ್ತಿಗೆಗೆ ಬಂದು ಬಿಡುತ್ತದೆ. ಇನ್ನು ಮಗುವಿಗೆ ಒಂದು, ಎರಡು ಮಾಡಿಸುವುದಂತೂ ದೂರ ಉಳಿಯಿತು. ಎಲ್ಲ ಅಪ್ಪಂದಿರೂ ಇದನ್ನು ಮಾಡಲೇಬೇಕೆಂದಿಲ್ಲ. ಹಲವರಿಗೆ ಇದನ್ನು ಮಾಡಲೇಬೇಕಾದ ಅನಿವಾರ್ಯತೆ ಕೂಡ ಇರಲಾರದು.
ಆದರೆ ಅಪ್ಪನಾದವನು ಅಮ್ಮನಾಗುವುದರಲ್ಲಿ ಇರುವ ಸುಖವೇ ಬೇರೆ. ಆ ಮಜವನ್ನು ಅನುಭವಿಸಿದ ಅಪ್ಪಂದಿರಿಗೇ ಗೊತ್ತು, ಆ ಸುಖ ಎಂತಹುದೆಂದು. ಮಕ್ಕಳಿಗೆ ಇನ್ಶೂರೆನ್ಸ್ ಮಾಡಿಸುವುದು, ನೋಟ್ ಪುಸ್ತಕ, ಪೆನ್ನು, ಪಾಟಿಚೀಲ (ಈಗಿನ ಮಕ್ಕಳು ಪಾಟಿ ಬಳಸದೇ ಇರುವುದರಿಂದ ಸ್ಕೂಲ್ ಬ್ಯಾಗ್ ಅನ್ನೋಣವೇ?), ಹೊತ್ತಿಗೆ ಸರಿಯಾಗಿ ಊಟ, ಬಟ್ಟೆ, ವಸತಿ ಒದಗಿಸಿಬಿಟ್ಟರೆ ಅಲ್ಲಿಗೆ ಅಪ್ಪನ ಜವಾಬ್ದಾರಿ ಮುಗಿದುಹೋಯಿತೆ? ಅನೇಕ ಅಪ್ಪಂದಿರು ಇವಿಷ್ಟನ್ನೇ ತಮ್ಮ ಜವಾಬ್ದಾರಿಯೆಂದು ತಿಳಿದುಕೊಂಡಿರುವುದು ಆಘಾತಕಾರಿ. ಮಗು ಒಂದಾ ಮಾಡಿದರೆ, ಆರಾಮವಾಗಿ ಟಿವಿ ನೋಡುತ್ತ, ಚಿಪ್ಸ್ ಮೆಲ್ಲುತ್ತ ಕುಳಿತಿರುವ ಗಂಡ, ಹೆಂಡತಿಯನ್ನು ಕರೆದು “ನೋಡೇ, ಪುಟ್ಟ ಒಂದಾ ಮಾಡಿದೆ. ಒರಸೂ ಒಂಚೂರು” ಎಂದು ಹೇಳುವುದು, ಹಾಗೆಯೇ ಅಡಿಗೆ ಮನೆಯಲ್ಲಿ ದುಡಿದುಡಿದು ಹೈರಾಣಾಗಿರುವ ಹೆಂಡತಿ ಒದ್ದೆ ಕೈಯನ್ನು ಒರೆಸಿಕೊಳ್ಳುತ್ತ ಬಂದು ಪುಟ್ಟನ ಒಂದಾ ಒರೆಸಿ, ಚಡ್ಡಿ ಬದಲಿಸುವುದು – ಅನೇಕ ಮನೆಗಳಲ್ಲಿ ಕಂಡುಬರುತ್ತದೆ. ಮಕ್ಕಳಿಗೆ ಸ್ನಾನಮಾಡಿಸುವುದು, ತುತ್ತು ತಿನ್ನಿಸುವುದು, ತಲೆ ಬಾಚುವುದು, ಬ್ರಷ್ ಮಾಡಿಸುವುದು, ಎಲ್ಲವೂ ತಾಯಿಯೇ. ಆದರೆ ವೈದ್ಯರ ಪ್ರಕಾರ ಮಗುವಿನ ಬೆಳವಣಿಗೆಯಲ್ಲಿ ‘ಸ್ಪರ್ಶ’ ಮಹತ್ವದ ಪಾತ್ರವಹಿಸುತ್ತದೆ. ಈ ಸ್ಪರ್ಶವೇ ವಾಸ್ತವವಾಗಿ ಚಿಕಿತ್ಸೆಯಂತೆ ಕೆಲಸ ಮಾಡುತ್ತದೆ. ಪ್ರೀತಿಯಿಂದ ಮಗುವನ್ನು ಸ್ಪರ್ಶಿಸಿದಾಗ ಸ್ವಾಭಾವಿಕವಾಗಿಯೇ ಮಗುವಿನ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಸಹಾಯಮಾಡಿದಂತಾಗುತ್ತದೆ. ಮಗುವನ್ನೇ ಸ್ಪರ್ಶಿಸದಿರುವ ತಂದೆ ಯಾವುದೇ ರೀತಿಯಲ್ಲಿಯೂ ಆ ಮಗುವಿನ ಮಾನಸಿಕ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಲಾರ. ಆತ ಸಮಾಜದಲ್ಲಿ ಓರ್ವ ಜವಾಬ್ದಾರಿಯುತ ಅಪ್ಪ ಎನಿಸಿಕೊಳ್ಳಬಹುದು. ಆದರೆ ಮಗುವಿನ ಮನಸ್ಸಿನ ಮೂಲೆಯಲ್ಲೆಲ್ಲೋ ಅಪ್ಪನ ಕುರಿತಂತೆ ಒಂದು ಅಂತರ ಉಳಿದುಕೊಂಡುಬಿಡುತ್ತದೆ. ಈ ಅಂತರವೇ ಮುಂದೆ ಮಗ ದೊಡ್ಡವನಾಗಿ ಕಾಲೇಜು ಮೆಟ್ಟಿಲೇರಿದಾಗ ಸ್ಲಾಮ್ ಬುಕ್ ಗಳ ‘ಮೈ ಎನಿಮಿ’ ಕಾಲಂನಲ್ಲಿ ‘ಮೈ ಫಾದರ್’ ಎಂದು ತುಂಬುವಂತೆ ಮಾಡುತ್ತದೆ. ಹೀಗಾಗಿ ಅಪ್ಪನಿಗೆ ಅಗತ್ಯ ಇರಲಿ, ಇಲ್ಲದಿರಲಿ ಆತ ತಾಯಿಯ ಪಾತ್ರವನ್ನೂ ನಿರ್ವಹಿಸಿದರೆ ಮಗು ನಿಜವಾಗಿಯೂ ಮೈ ಡ್ಯಾಡಿ ಸ್ಟ್ರಾಂಗೆಸ್ಟ್ ಎಂದು ಹೇಳಬಹುದು.
ಈ ಹಿಂದೆ ಅಪ್ಪ ನಿಜವಾಗಿಯೂ ಭಯ ಹುಟ್ಟಿಸುವ, ಶಿಕ್ಷಿಸುವ, ತಪ್ಪು ಮಾಡಿದಾಗ ನಾಲ್ಕು ಬಾರಿಸುವ, ತನ್ನ ಮಗನನ್ನೇ ‘ಮಂಗ್ಯಾನ ಮಗನೇ’ ಎಂದು ಬೈಯುವುದುಕ್ಕಷ್ಟೇ ಸೀಮಿತನಾಗಿದ್ದ. ಆದರೆ ಇದನ್ನೆಲ್ಲ ಮಾಡುತ್ತಿದ್ದ ಅಪ್ಪ ಒಳಗಿನಲ್ಲಿ ಕರುಣಾಮಯಿಯೇ ಆಗಿರುತ್ತಿದ್ದ. ಸಡಿಲ ಬಿಟ್ಟರೆ ಎಲ್ಲಿ ಮಗ ಹಾಳಾಗಿಬಿಡುತ್ತಾನೋ ಎಂಬ ಆತಂಕ ಅಪ್ಪನನ್ನು, ಸದಾ ಗಂಟು ಮೂತಿ ಹಾಕಿಕೊಂಡು, ಒಂದು ಕೈಯಲ್ಲಿ ಬರಲು ಮತ್ತೊಂದು ಕೈಯಲ್ಲಿ ಮಗನ ಪ್ರೋಗ್ರೆಸ್ ರಿಪೋರ್ಟ್ ಹಿಡಿದುಕೊಂಡು ಮಗ ಮನೆಗೆ ಬಂದಕೂಡಲೆ ಆತನಿಗೆ ಹೊಡೆಯಲು ಸನ್ನದ್ಧನಾಗಿಯೇ ನಿಂತಿರುವಂತೆ ಮಾಡುತ್ತಿತ್ತು. ಕುಂ. ವೀರಭದ್ರಪ್ಪನನವರ ಆತ್ಮಕಥೆ ‘ಗಾಂಧಿ ಕ್ಲಾಸು’ ನಲ್ಲಿ ಅವರು ತಮ್ಮ ತಂದೆಯನ್ನು ಎಷ್ಟು ಚೆನ್ನಾಗಿ ವರ್ಣಿಸಿದ್ದಾರೆಂದರೆ, ಆ ತಂದೆ ಹಿಂದಿನ ಕಾಲದ ಎಲ್ಲ ತಂದೆಯರ ಪ್ರತಿನಿಧಿಯಂತೆ ನಮಗೆ ತೋರುತ್ತಾರೆ. ಕುಂವಿ ತಂದೆಯ ಬಗ್ಗೆ ನಮಗೆ ನಿಜಕ್ಕೂ ಗೌರವ ಭಾವನೆ ಮೂಡತ್ತದೆ. ಹೊಡೆಯುವ, ಶಿಕ್ಷಿಸುವ ತಂದೆಯನ್ನೇ ಮುಂದೆ ಮಗ ದೊಡ್ಡವನಾದ ಮೇಲೆ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ. ಅಪ್ಪ ತನ್ನ ಒಳ್ಳೆಯದಕ್ಕಾಗಿಯೇ ಹೀಗೆ ಮಾಡಿದ್ದು ಎಂದು ಮಗನಿಗೂ ಗೊತ್ತಿರುತ್ತಿತ್ತು. ಮನೆಯಲ್ಲಿ ನಾಲ್ಕು ಮಕ್ಕಳಿದ್ದರೆ ನಾಲ್ಕೂ ಮಕ್ಕಳಿಗೆ ಒಟ್ಟಿಗೆ ಒಂದೇ ಬಣ್ಣದ ಜವಳಿ ತೆಗೆದುಕೊಂಡು ಬಂದು, “ಸ್ವಲ್ಪ ದೊಡ್ಡದಾಗಿಯೇ ಹೊಲಿಯಪ್ಪ. ಬೆಳೆಯುವ ಹುಡುಗರು” ಎಂದು ಸಿಂಪಿಗೆ ಹೇಳಿ ಅಸಡ್ಡಾಳ ದೊಗಳೆ ಚಡ್ಡಿಗಳನ್ನು ಹೊಲಿಸಿಕೊಂಡು ಬರುತ್ತಿದ್ದ ಅಪ್ಪ, ಅಂದಿನ ಮಕ್ಕಳಿಗೆ ಅಚ್ಚುಮೆಚ್ಚಿನವನಾಗಿರುತ್ತಿದ್ದ. ‘ಮೈ ಆಟೋಗ್ರಾಫ್’ ಚಿತ್ರದಲ್ಲಿ ಹತ್ತನೇ ಕ್ಲಾಸಿನ ಹುಡುಗ ತಂದೆಯ ಕ್ಷೌರದಲಗನ್ನು ಬಳಸಿದಾಗ ತಂದೆ ಮಗನನ್ನು “ಓಹೋ ದೋಡ್ಡೋವ್ನಾಗಿ ಬಿಟ್ಯೇನೋ…ಕತ್ತೆ ಭಡವ” ಎಂದು ಬೈಯ್ಯುತ್ತ ಕೋಲು ತೆಗೆದುಕೊಂಡು ಮಗನಿಗೆ ಬಾರಿಸುತ್ತಾನೆ. ಆದರೆ ಅಂತಹ ತಂದೆಯೇ ಮುಂದೆ ಅದೇ ಮಗನಿಗೆ ಆತ್ಮೀಯ ಗೆಳೆಯನಾಗುತ್ತಾನೆ.
ಆದರೆ ವಿಚಿತ್ರ ನೋಡಿ, ಇಂದು ಮಗುವಿಗೆ ಎಲ್ಲ ಸೌಲಭ್ಯಗಳನ್ನು ತಂದುಕೊಡುವ ಅಪ್ಪಂದಿರ ‘ಉದಯ’ವಾಗಿದ್ದರೂ ವೃದ್ಧಾಶ್ರಮಗಳ ಸಂಖ್ಯೆ ಏರಿದೆ. ಅಲ್ಲಿ ಸೇರಿಸಲ್ಪಡುತ್ತಿರುವ ಅಪ್ಪ-ಅಮ್ಮಂದಿರ ಸಂಖ್ಯೆಯೂ ಏರುತ್ತಿದೆ. ವೃದ್ಧಾಶ್ರಮದಲ್ಲಿರುವ ಒಬ್ಬೊಬ್ಬ ಅಜ್ಜ-ಅಜ್ಜಿಯರ ಕಥೆ ಕೇಳಿದರೆ ಮನುಷ್ಯತ್ವ, ಮಾನವೀಯತೆಯ ಬಗ್ಗೆ ನಂಬಿಕೆಯೇ ಹೊರಟುಹೋಗುತ್ತದೆ. ಹಾಗಾದರೆ ಇಂತಹ ಸ್ಥಿತಿ ಏಕೆ ನಿರ್ಮಾಣವಾಗಿದೆ? ಲಕ್ಷ ಲಕ್ಷ ಗಳಿಸುವ ಮಕ್ಕಳು ಏಕೆ ತಮ್ಮ ಅಪ್ಪನನ್ನೋ-ಅಮ್ಮನನ್ನೋ ವೃದ್ಧಾಶ್ರಮಗಳಿಗೆ ಸೇರಿಸುತ್ತಿದ್ದಾರೆ? ಇದು ಮಕ್ಕಳನ್ನು ಸರಿಯಾಗಿ ಬೆಳೆಸದಿರುವ ಪರಿಣಾಮವೇ? ಅಥವಾ ವೃದ್ಧಾಶ್ರಮಗಳು ಈ ಕಾಲದ, ಬದಲಾದ ಸನ್ನಿವೇಶದ, ಬದಲಾದ ಪರಿಸ್ಥಿತಿಯ ಅನಿವಾರ್ಯ ಅವಿಭಾಜ್ಯ ಅಂಗಗಳೇ?
ಒಂದಂತೂ ಸತ್ಯ. ಅಪ್ಪನ ಜವಾಬ್ದಾರಿ ಕೇವಲ ಭೌತಿಕ ಸಂಗತಿಗಳ ಪೂರೈಕೆಗಷ್ಟೇ ಮುಕ್ತಾಯವಾಗುವುದಿಲ್ಲ. ಒಳಗೆ ಪ್ರೀತಿಯಿಟ್ಟುಕೊಂಡು ಬಾಹ್ಯದಲ್ಲಿ ಬರಲು ಹಿಡಿದು ಶಿಕ್ಷಿಸುವುದು ಇಂದಿನ ಪರಿಸ್ಥಿತಿಗೆ ಹೊಂದುವುದೂ ಇಲ್ಲ. ಏಕೆಂದರೆ ಮಕ್ಕಳ ರಕ್ಷಣೆಗೆಂದು ಮಾನವ ಹಕ್ಕು ಆಯೋಗಗಳಿವೆ, ಸರ್ಕಾರೇತರ ಸಂಸ್ಥೆಗಳಿವೆ. ಹಾಗೆಂದು ಹೇಳಿ, ಮಗ ಹಟ ಮಾಡುತ್ತಾನೆಂದು ಅದನ್ನು ಸಮಾಧಾನಪಡಿಸಲೊಸುಗ ಬೇಕುಬೇಕೆಂದಾಗಲೆಲ್ಲ ಪಿಝಾ ತಿನ್ನಿಸಿದರೆ, ಆತ 12-13 ವರ್ಷಕ್ಕೆಲ್ಲ 70 ಕೆಜಿ ತೂಗುತ್ತಾನೆ. ಅದನ್ನು ಕಡಿಮೆ ಮಾಡುವ ಜವಾಬ್ದಾರಿ ಅಪ್ಪನೇ ಹೊರಬೇಕಾಗುತ್ತದೆಯೇ ಹೊರತು, ಮಾನವ ಹಕ್ಕುಗಳ ಆಯೋಗ ಅಥವಾ ಸರ್ಕಾರೇತರ ಸಂಸ್ಥೆ ಸಹಾಯಕ್ಕೆ ಬರುವುದಿಲ್ಲ! ಇಂದಿನ ಕಾಲದ ಅಪ್ಪಂದಿರು ತೀರ ಸೂಕ್ಷ್ಮವಾಗಿ ತಮ್ಮ ಕಾಯಿಯನ್ನು ಚಲಿಸಬೇಕಾಗಿದೆ. ಒಂದು ಗುಲಗುಂಜಿ ಬಿದ್ದರೆ ಹೆಚ್ಚಾಯಿತು, ತೆಗೆದರೆ ಕಮ್ಮಿಯಾಯಿತು ಎಂಬಂತಹ ಪರಿಸ್ಥಿತಿ. ಕುಪುತ್ರೋ ಜಾಯತೇ ಕ್ವಚಿದಪಿ ಕುಮಾತಾ ನಭವತಿ ಎಂಬುದು ಮಕ್ಕಳಿಗೂ ಗೊತ್ತು. ಹೀಗಾಗಿ ಅಪ್ಪನ ಮೇಲೆ ಗೂಬೆ ಕೂರಿಸುವುದು ಸುಲಭ ಕೂಡ. ಬೆಳೆದ ಮಕ್ಕಳು ಪರೀಕ್ಷೆಯಲ್ಲಿ ಫೇಲಾದರೆಂದು ಆತ್ಮಹತ್ಯೆ ಮಾಡಿಕೊಳ್ಳಬಾರದೆಂದರೆ, ಮುದುಕರಾದಾಗ ತಮ್ಮ ಮಗ ತಮ್ಮನ್ನು ವೃದ್ಧಾಶ್ರಮಕ್ಕೆ ಸೇರಿಸಬಾರದೆಂದರೆ, ಇಂದಿನ ಅಪ್ಪ ‘ದೇವೋಭವ’ ಆಗಬೇಕೆಂದೇನಿಲ್ಲ. ಬರೀ “ಅಪ್ಪ” ನಾದರೆ ಅಷ್ಟೇ ಸಾಕು.
(ಈ ಬಾರಿಯ ಉತ್ಥಾನ ಮಾಸ ಪತ್ರಿಕೆಯಲ್ಲಿ ಪ್ರಕಟವಾಗಿರುವ ಲೇಖನ)
ನಾನು ರಕ್ತ ದಾನ ಮಾಡಿದೆ
June 20, 2011
ನ್ಯೂಸ್ ಪಿಂಟ್ ಪುಸ್ತಕದ ಮುಖಪುಟ ಹೀಗಿದೆ
June 9, 2011
ಅನುಭವ (ಕಾಶೀನಾಥಂದು ಅಲ್ಲ ಕಣ್ರೀ..), ನಿಮಗಿದೋ ಆಮಂತ್ರಣ 10 Comments
ಬ್ರೇಕಿಂಗ್ ನ್ಯೂಸ್ – ನನ್ನ ಪುಸ್ತಕ ಬಿಡುಗಡೆ ಜೂನ್ 12 ರಂದು
June 8, 2011
ಕಾಲೇಜಿನಲ್ಲಿದ್ದಾಗ ಹೀಗೆ ಮಯೂರಾಸನ ಮಾಡ್ತಿದ್ದೆ
June 4, 2011
ಬಾಡೂಟದಲ್ಲಿ ಬರೀ ಗ್ರೇವಿ ತಿಂದದ್ದು
April 3, 2011
ಅನುಭವ (ಕಾಶೀನಾಥಂದು ಅಲ್ಲ ಕಣ್ರೀ..), Media ಬಾಡೂಟ, ಸಿದ್ದರಾಮಯ್ಯ Leave a comment
ಕಳೆದ ಲೋಕಸಭಾ ಚುನಾವಣೆಯಲ್ಲಿ ನಡೆದ ಘಟನೆ. ಚುನಾವಣೆಗೂ ಮೊದಲು ರಾಜಕೀಯ ಪಕ್ಷಗಳ ಪ್ರಮುಖ ನಾಯಕರ ದಿನಚರಿಯನ್ನು ಜನರಿಗೆ ತೋರಿಸಲೆಂದು ‘ಎ ಡೇ ವಿತ್ ದಿ ಲೀಡರ್’ ಎಂಬ ಕಾರ್ಯಕ್ರಮವನ್ನು ರೂಪಿಸಿದ್ದೆವು. ರಾತ್ರಿ 10.30 ರ ‘ಕನ್ನಡನಾಡಿ’ ಮುಗಿದ ಬಳಿಕ ಇದು ಪ್ರಸಾರವಾಗುತ್ತಿತ್ತು. ನನಗೆ ಕಾಂಗ್ರೆಸ್ ನ ಸಿದ್ದರಾಮಯ್ಯನವರ ಜೊತೆ ಇಡೀ ದಿನ ಇದ್ದು ಅವರ ದಿನಚರಿಯನ್ನು ಶೂಟ್ ಮಾಡಬೇಕಾಗಿತ್ತು. ಸಾಕಷ್ಟು ಮೊದಲೇ ಅವರಿಗೆ ವಿಷಯ ತಿಳಿಸಿ ಇಂತಿಂಥ ದಿನ ಬರುತ್ತೇವೆ ಎಂದು ಹೇಳಿದ್ದೆ. ನಿಗದಿತ ದಿನದಂದು ನಾನು ಹಾಗೂ ಕ್ಯಾಮರಾಮನ್ ಮೋಹನ್ ಬೆಳಿಗ್ಗೆ 6 ಗಂಟೆಯ ಹೊತ್ತಿಗೆ ಸಿದ್ದು ಮನೆಯಲ್ಲಿ ಹಾಜರಿದ್ದೆವು. ಅವರು ವ್ಯಾಯಾಮ ಮಾಡುವುದು, ಕಾರ್ಯಕರ್ತರೊಂದಿಗೆ ಮಾತನಾಡುವುದು, ತಿಂಡಿ ತಿನ್ನುವುದು, ಪುಸ್ತಕ ಓದುವುದು ಹೀಗೆ ಎಲ್ಲವನ್ನೂ ಶೂಟ್ ಮಾಡಿಕೊಳ್ಳುತ್ತಿದ್ದೆ. ಜೊತೆಜೊತೆಗೆ ಅವರ ಡ್ರೈವರ್, ಅಡುಗೆಯವರು, ಸೆಕ್ಯುರಿಟಿಯವರೊಂದಿಗೂ ಸಿದ್ದು ಅಭ್ಯಾಸಗಳು, ಚಟುವಟಿಕೆಗಳ ಬಗ್ಗೆ ಮಾತನಾಡುತ್ತಿದ್ದೆ. ಬೆಳಿಗ್ಗೆ 11 ಗಂಟೆ ಸುಮಾರಿಗೆ ಸಿದ್ದರಾಮಯ್ಯ ಮೈಸೂರಿಗೆ ಹೊರಟರು. ಸರಿ, ನಾನು ಹಾಗೂ ಕ್ಯಾಮರಾಮನ್ ಮೋಹನ್ ಕೂಡ ಅವರೊಡನೆ ಅವರ ಎಸ್ ಯು ವಿ ಏರಿದೆವು. ದಾರಿ ಮಧ್ಯದಲ್ಲಿಯೇ ಸಿದ್ದು ಸಂದರ್ಶನ ಮುಗಿಸಿಕೊಂಡೆ. ಮೈಸೂರು ತಲುಪಿ ಕೆಲ ಹಳ್ಳಿಗಳತ್ತ ಸಿದ್ದು ಕಾರ್ ದೌಡಾಯಿಸಿತು.
ಮಧ್ಯಾಹ್ನದ ಊಟ ಯಾವುದೊ ಒಂದು ಹಳ್ಳಿಯಲ್ಲಿ ಏರ್ಪಾಡಾಗಿತ್ತು. ಇಡೀ ಹಳ್ಳಿಯಲ್ಲಿ ಅಂದು ಸಂಭ್ರಮದ ವಾತಾವರಣ. ದೊಡ್ಡದಾಗಿ ಶಾಮಿಯಾನ ಹಾಕಿದ್ದರು. ಸಿದ್ದು ಕಾರ್ ಇಳಿಯುತ್ತಿದ್ದಂತೆ ಜನರ ಜೈಘೋಷ, ಮಹಿಳೆಯರಿಂದ ಆರತಿ ಬೆಳಗಿ ಸ್ವಾಗತ ಇತ್ಯಾದಿ. ಜನರೊಡನೆ ಸುಮಾರು ಹೊತ್ತು ಕಳೆದ ಬಳಿಕ ಸಿದ್ದು ಊಟಕ್ಕೆ ನಡೆದರು. ನಾನೂ ಊಟಕ್ಕೆ ಕುಳಿತುಕೊಳ್ಳುವಂತೆ ಕಾರ್ಯಕರ್ತರು ಆಹ್ವಾನಿಸಿದರು. ಆದರೆ ನನಗೆ ಶಾಟ್ ತೆಗುದುಕೊಳ್ಳಬೇಕಾದ್ದರಿಂದ ಎರಡನೇ ಪಂಕ್ತಿಗೆ ಕೂರೋಣ ಎಂದುಕೊಂಡೆ. ಅಷ್ಟರಲ್ಲಿ ಕ್ಯಾಮರಾನ್ ಮೋಹನ್, “ಸುಘೋಷ್ ನೀವು ಊಟ ಮುಗಿಸಿಬಿಡಿ. ನಿಮ್ಮದಾದ ಮೇಲೆ ಕ್ಯಾಮರಾ ಹಿಡಿದುಕೊಳ್ಳಿ. ಅಷ್ಟರಲ್ಲಿ ನಾನೂ ಊಟ ಮುಗಿಸುತ್ತೇನೆ” ಎಂದರು. ಸರಿ ಎಂದುಕೊಂಡು ನಾನು ಊಟಕ್ಕೆ ಕುಳಿತೆ.
ನಾನು ಹಾಗೂ ಮೋಹನ್, ಸಿದ್ದು ಮನೆಗೆ ಬೆಳಿಗ್ಗೆ ತಲುಪಿದ್ದು 6 ಗಂಟೆಗೆ. ಮಧ್ಯಾಹ ಊಟಕ್ಕೆ ಕುಳಿತಾಗ 2 ಗಂಟೆ. ಅಷ್ಟರವರೆಗೆ ನನ್ನ ಹಾಗೂ ಮೋಹನ್ ಹಣೆಯಲ್ಲಿ ಬರೆದದ್ದು ಕೇವಲ ಬೈಟೂ ಟೀ ಅಷ್ಟೇ. ಹೀಗಾಗಿ ಹೊಟ್ಟೆ ಚುರುಗುಟ್ಟುತ್ತಿತ್ತು.
ಸರಿ, ಎಂದುಕೊಂಡು ಊಟಕ್ಕೆ ಕುಳಿತುಕೊಂಡೆ. ಆಗ ಆಯಿತು ನೋಡಿ ಫಜೀತಿ. ಸಿದ್ದು ಬರುತ್ತಾರೆ ಎಂಬ ಸಂಭ್ರಮದಲ್ಲಿ ಹಳ್ಳಿಯವರು ಭರ್ಜರಿ ಬಾಡೂಟ ಮಾಡಿಸಿದ್ದರು. ತಟ್ಟೆಯಲ್ಲಿ ಅನ್ನ, ಉಪ್ಪು, ಬಿಟ್ಟರೆ ಮಿಕ್ಕಿದ್ದೆಲ್ಲವೂ ನಾನ್ ವೆಜ್. ನಾನೋ ಸಸ್ಯಾಹಾರಿ. ಆದರೆ ನನ್ನ ಸಸ್ಯಾಹಾರಕ್ಕೆ ಗಂಟುಬೀಳಲು ಹೊಟ್ಟೆ ಸುತಾರಾಂ ಒಪ್ಪುತ್ತಿಲ್ಲ. “ಕಲ್ಲನ್ನಾದರೂ ಒಳಗಿಳಿಸು, ಆದರೆ ಏನನ್ನಾದರೂ ಕಳಿಸು” ಎಂದು ಹೊಟ್ಟೆ ಕೂಗಿಕೊಳ್ಳುತ್ತಲೇ ಇತ್ತು. ಮನಸ್ಸು ಮಾತ್ರ “ಯಾವುದೇ ಕಾರಣಕ್ಕೂ ನಾನ್ ವೆಜ್ ಮುಟ್ಟಬೇಡ” ಎಂದು ಎಚ್ಚರಿಸುತ್ತಿತ್ತು. ಕೆಲ ಕ್ಷಣ ಗೊಂದಲದಲ್ಲಿ ಕಳೆದೆ. ನನ್ನನ್ನು ನೋಡಿ ಕಾರ್ಯಕರ್ತರು “ಏನ್ ಸಾರ್ ಊಟ ಸೇರ್ತಾ ಇಲ್ವಾ?” ಅಂದ್ರು.
“ಇಲ್ಲ ನಾನು ವೆಜಿಟೇರಿಯನ್” ಅಂದೆ.
“ಓಹ್ ಹಾಗಾ ಸಾರ್, ಇರಿ ಸಾರ್ ಹಾಗಿದ್ರೆ ಬರೀ ಗ್ರೇವಿ ಹಾಕ್ತೀವಿ. ಪೀಸ್ ಹಾಕಲ್ಲ. ಊಟ ಮಾಡಿ ಸಾರ್” ಎಂದವರೇ ಬಕೇಟಿನಿಂದ ಗ್ರೇವಿ ಸುರಿಸುರಿದು ಅನ್ನದ ಮೇಲೆ ಹಾಕಿದರು. ಈಗ ನಾನು ನನ್ನ ಮೆದುಳಿಗೆ ಹೆಚ್ಚು ಯೋಚಿಸಲು ಅವಕಾಶ ನೀಡದೆ ಉಸಿರು ಬಿಗಿಹಿಡಿದು ಕೆಲ ತುತ್ತು ಇಳಿಸಿದೆ. ಸ್ವಲ್ಪ ಸಮಾಧಾನವಾಯಿತು. ಆದರೆ ಪೂರ್ತಿ ಊಟ ಮಾಡಲು ಆಗಲೇ ಇಲ್ಲ. ಕ್ಯಾಮರಾಮನ್ ಮೋಹನ್ ಗೆ ಮಾತ್ರ ಅಂದು ಔತಣ. ಇಲೆಕ್ಟ್ರಾನಿಕ್ ಮೀಡಿಯಾದಲ್ಲಿ ಕ್ಯಾಮರಾಮನ್ ಮೊದಲು, ಆಮೇಲೆ ರಿಪೋರ್ಟರ್ ಎಂದು ನೆನಪಿಸಿಕೊಂಡು ಮತ್ತೆ ಸಿದ್ದು ದಿನಚರಿಯನ್ನು ಶೂಟ್ ಮಾಡಲು ಆರಂಭಿಸಿದೆ.
ಅಪ್ಪನಾಗುವುದು ಸುಲಭವಲ್ಲ…
March 25, 2011
ಅನುಭವ (ಕಾಶೀನಾಥಂದು ಅಲ್ಲ ಕಣ್ರೀ..) 20 Comments
ಅಪ್ಪನಾಗುವುದು ಸುಲಭ ಎಂದು ನೀವಂದುಕೊಂಡಿದ್ದರೆ
ಖಂಡಿತ ಗಲತ್ ಫೆಮಿ ಮಾಡಿಕೊಂಡಿದ್ದೀರಿ.
ಅಂದರೆ ಅಪ್ಪನಾಗುವುದು ಸುಲಭವೇ….
ಆದರೆ ಅಪ್ಪನಾದ ಬಳಿಕ ಆ ಪದವಿಯನ್ನ ಜೀರ್ಣಿಸಿಕೊಳ್ಳುವುದಿದೆಯಲ್ಲ
ಅದು ಎಲ್ಲರಿಗೂ ಸಾಧ್ಯವಿಲ್ಲ.
ನಿಜವಾಗಲೂ ಹಿಸ್ಟೇರಿಯಾ ತಾಯಿಯಾದವಳಿಗೆ ಹಿಡಿಯಬೇಕಾದುದಲ್ಲ
ಅದು ಅಪ್ಪನಿಗೆ ಹಿಡಿಯಬೇಕಾದದ್ದು,
ನಿಜವಾದ ಅಪ್ಪನಾಗಿದ್ದರೆ ಮಾತ್ರ.
ಬರೀ ಬೀಜ ಕೊಟ್ಟು ಬಿಟ್ಟರೆ ಮುಗಿಯಲಿಲ್ಲ ಸ್ವಾಮಿ.
ಬೀಜವೇನು, ಬೇಕಾದರೆ ಮೂಟೆಗೆ ಮೂಟೆ ಸರ್ಕಾರದ ಸಬ್ಸಿಡಿ ಅಂಗಡಿಗಳಲ್ಲಿ ಸಿಗುತ್ತದೆ.
ಪೈರನ್ನು ಯಾವನು ಹೇಗೆ ಕಾಪಾಡಿಕೊಳ್ಳುತ್ತಾನೆ ಎಂಬುದು ಮುಖ್ಯ.
ದಿನವಿಡೀ ಗಾಣದೆತ್ತಿನಂತೆ ದುಡಿದು ದುಡಿದು ಹೈರಾಣಾಗಿ ಮನೆಗೆ ಬಂದಾಗ
ಪೈರನ್ನು ಎತ್ತಿಕೊಂಡು ಮುದ್ದು ಮಾಡಿ ಅದಕ್ಕೆ ಕಿಶ್ಶಿ ಕೊಟ್ಟು, ಇಶ್ಶಿ ಬಳಿಯಬೇಕು.
ಸರಿಯಾಗಿ ಊಟಕ್ಕೆ ಕುಳಿತು ಒಂದನೇ ತುತ್ತನ್ನು ಜಗಿಯುತ್ತಿರುವಾಗಲೇ
ಪೈರು ಉಚ್ಚೆ ಹೊಯ್ದುಕೊಂಡಿರುತ್ತೆ.
ಅದು ಅದರ ಚಡ್ಡಿಗೆ ತಾಗಿ ನಿಮ್ಮ ಥ್ರೀಫೋರ್ತ್ ಅನ್ನು ಠಂಡಾ ಠಂಡಾ ಕೂಲ್ ಕೂಲ್
ಮಾಡುವವರೆಗೂ ಗೊತ್ತಾಗುವುದಿಲ್ಲ. ಆಗ ರಪ್ ಅಂತ ಊಟಬಿಟ್ಟು ಏಳಬೇಕು.
ನಿಮ್ಮ ಕಣ್ಣೆದುರಿಗೇ ನಿಮ್ಮ 20 ಸಾವಿರ ರೂಪಾಯಿ ಮೊಬೈಲ್ ರಪ್ ಅಂತ ಗೋಡೆಗೆ ಅಪ್ಪಳಿಸಿ ಎರಡು ಹೋಳಾಗಿ
ಬೀಳುವುದನ್ನು ನೋಡುವ ತಾಳ್ಮೆ ಇರಬೇಕು.
ಆಗಷ್ಟೇ ಫಿನೈಲ್ ಹಾಕಿ ಒರೆಸಿದ ನೆಲದ ಮೇಲೆ ರವೆಯ ಡಬ್ಬ ತಲೆಕೆಳಗಾಗಿ ಬೀಳುವುದನ್ನು ನೋಡಿಯೂ
ನೋಡದಂತಿರಬೇಕು.
ಲ್ಯಾಪ್ ಟಾಪ್ ನ ಕೀಗಳು ಕುಯ್ಯು ಮರ್ರೋ ಎಂದು ಪೈರಿನ ಕೈಗೆ ಸಿಕ್ಕಿ ಹೊಯ್ಕೊಳ್ಳುತ್ತಿದ್ದರೂ
ನೀವು ಮಾತ್ರ ಸುದರ್ಶನ ಕ್ರಿಯೆಯನ್ನು ಮಾಡುತ್ತಿರಬೇಕು.
ಇಷ್ಟೆಲ್ಲ ಆದರೂ ಪೈರಿಗೆ ಕೊಂಚ ಜ್ವರ ಬಂದರೆ ಅದರ ಝಳ ನಿಮಗೆ ತಾಗುವಂತಿರಬೇಕು
ಪೈರು ಧಡ್ ಅಂತ ಬಿದ್ದು ತುಟಿ ಒಡೆದುಕೊಂಡರೆ ನೀವು ಭೋರಂತ ಅಳಬೇಕು
ದೇಹ ಆಫೀಸಿನಲ್ಲಿದ್ದರೂ ಮನಸ್ಸು ಪೈರಿನ ಸುತ್ತಲೇ ಇರಬೇಕು.
ಅದಕ್ಕೇ ಹೇಳಿದ್ದು,
ಅಪ್ಪನಾಗುವುದು ಸುಲಭ ಅಲ್ಲ ಕಣ್ರೀ….
ಹೀಗಾಗಿಯೇ ಹೇಳುತ್ತೇನೆ, ಅಪ್ಪನಾಗುವ ಅರ್ಹತೆಯಿದ್ದರೆ ಮಾತ್ರ ಅಪ್ಪನಾಗಿ
ಏಕೆಂದೆರೆ ಅಪ್ಪನಾಗುವುದು ಸುಲಭವಲ್ಲ.
ಎನ್ ಆರ್ ನಾರಾಯಣಮೂರ್ತಿ ಸಂದರ್ಶನ
March 12, 2011
ಅನುಭವ (ಕಾಶೀನಾಥಂದು ಅಲ್ಲ ಕಣ್ರೀ..) vishva kannada sammelana 3 Comments
ವನವಾಸ ಮುಗಿದಿದೆ. ಬ್ಲಾಗ್ ಅಡ್ ಡೇಟ್ ನಿಲ್ಲಿಸಿದ್ದಕ್ಕೆ ನಾನು ಕ್ಷಮೆ ಕೇಳಿದ್ದೂ ಆಗಿದೆ, ತಾವು ಕ್ಷಮಿಸಿದ್ದೂ ಆಗಿದೆ. ಈಗೇನಿದ್ದರೂ ಮತ್ತೆ ರಮ್ಯ ಚೈತ್ರ ಕಾಲ…
ಐತಿಹಾಸಿಕ ಕಾರ್ಯಕ್ರಮವೊಂದರಲ್ಲಿ ತೊಡಗಿಕೊಂಡಿದ್ದರಿಂದ ಬ್ಲಾಗಿಗಾಗಿ ಸಮಯ ಸಿಗಲಿಲ್ಲ. ಆ ಐತಿಹಾಸಿಕ ಕಾರ್ಯಕ್ರಮವೇ ಬೆಳವಾಗಿಯ ವಿಶ್ವ ಕನ್ನಡ ಸಮ್ಮೇಳನ. ಮೊದಲ ದಿನ ಸಾಹಿತಿ ಡಾ. ಯೂ. ಆರ್. ಅನಂತಮೂರ್ತಿಯವರು ಬಿಡುಗಡೆಗೊಳಿಸಿದ ‘ಪುನರಾವಲೋಕನ’ ಸಂದರ್ಭ ಗ್ರಂಥದ ತಯಾರಿಯಲ್ಲಿ ತೊಡಗಿಕೊಂಡಿದ್ದೆ. ಈ ಸಂದರ್ಭ ಗ್ರಂಥಕ್ಕೆ ಪ್ರೋ. ಹಂಪನಾ ಸಂಪಾದಕರು. ಜಿ. ಎನ್. ಮೋಹನ್ ಸಹ- ಸಂಪಾದಕರು. ನಾನು ಈ ಗ್ರಂಥದ ರಿಸೋರ್ಸ್ ಟೀಮ್ ನಲ್ಲಿದ್ದೆ. ಕೇವಲ 20 ದಿನಗಳ ಅವಧಿಯಲ್ಲಿ 400 ಪುಟಗಳ ಸಂದರ್ಭ ಗ್ರಂಥ ತಯಾರಾಗಿ, ಇದೀಗ ಕನ್ನಡಿಗರ ಕೈಯಲ್ಲಿದೆ. ಈ ಪುಸ್ತಕದ ತಯಾರಿ ಹೇಗೆಲ್ಲ ನಡೆಯಿತು, ಕೆಲ ಹೆಸರುವಾಸಿ (ಹೆಸರಷ್ಟೇ ವಾಸಿ) ಎಂದೆನಿಸಿರುವ ಸಾಹಿತಿಗಳೊಡನೆ ಒಡನಾಡುವಾಗ ಆದ ಪ್ರಸಂಗಗಳೇನು ಎಂಬುದನ್ನೆಲ್ಲ ಅಚಾನೂಕವಾಗಿ ಬ್ಲಾಗಿನಲ್ಲಿ ದಾಖಲಿಸುತ್ತೇನೆ.
ಪ್ರಸ್ತುತ, ಈ ಗ್ರಂಥಕ್ಕಾಗಿ ನಾನು ಇನ್ಫೋಸಿಸ್ ನ ಎನ್. ಆರ್. ನಾರಾಯಣಮೂರ್ತಿಯವರನ್ನು ಸಂದರ್ಶಿಸಿದ್ದೇನೆ. ಆ ಸಂದರ್ಶನವನ್ನು ನೀವು ಅವಧಿಯಲ್ಲಿ ಓದಬಹುದು. ಇದೇ ಸಂದರ್ಶನ ಕನ್ನಡಪ್ರಭ ಪತ್ರಿಕೆಯಲ್ಲಿ ಮಾರ್ಚ್ 11 ರಂದು ಪ್ರಕಟವಾಗಿದೆ. ಅದರ ಸ್ಕ್ರೀನ್ ಶಾಟ್ ಇಲ್ಲಿದೆ. ಓದಿ, ಅಭಿಪ್ರಾಯ ತಿಳಿಸಿ.
ಕ್ಷಮಿಸಿ, ಕ್ಷಮಿಸಿ, ಕ್ಷಮಿಸಿ
February 18, 2011
ನಾನು ಸಿಗರೇಟು ಬಿಟ್ಟು ಒಂದು ವರ್ಷ
January 26, 2011
ಅನುಭವ (ಕಾಶೀನಾಥಂದು ಅಲ್ಲ ಕಣ್ರೀ..) cigarette 10 Comments
ಕನಸಾ? ನಂಬಲಾಗುತ್ತಿಲ್ಲ. ಆದರೂ ನಿಜ. ನಾನು ಸಿಗರೇಟು ಸೇದುವುದನ್ನು ಬಿಟ್ಟು ಜನವರಿ 20, 2011 ಕ್ಕೆ ಸರಿಯಾಗಿ ಒಂದು ವರ್ಷ. ಹೋದವರ್ಷ ಜನವರಿ 20 ರಂದು ಸಿಕ್ಕಾಪಟ್ಟೆ ಹೊಟ್ಟೆ ನೋವು ಬಂದು, ಮೂತ್ರಪಿಂಡದಲ್ಲಿ ಕಲ್ಲುಕಂಡು ಬಂದು, ಸಿಸ್ಟೋಸ್ಕೋಪಿಯಾಗಿದ್ದು ಎಲ್ಲವೂ ಹಸಿರಾಗಿದೆ. ಸಿಸ್ಟೋಸ್ಕೋಪಿ ಬಳಿಕ ನನ್ನ ದೇಹದ ಬಗ್ಗೆ ನನಗೆ ಅತೀವ ಪ್ರೀತಿ, ಅಭಿಮಾನ, ಗೌರವ ಬೆಳೆದು ಸಿಗರೇಟು ಸೇದುವುದನ್ನು ಬಿಟ್ಟುಬಿಟ್ಟೆ.
1999 ರಿಂದ 2009 ರ ನಡುವಿನ ಅವಧಿಯಲ್ಲಿ ನಾನು ಸೇದಿದ ಸಿಗರೇಟುಗಳ ಸಂಖ್ಯೆ ಸುಮಾರು ಆರು ಸಾವಿರ ಹಾಗೂ ಬೀಡಿಗಳ ಸಂಖ್ಯೆ ನಾಲ್ಕು. ವಿಲ್ಸ್ ನೇವಿಕಟ್, ಗೋಲ್ಡ್ ಫ್ಲೇಕ್ ಕಿಂಗ್, ಸ್ಮಾಲ್, ವಿಲ್ಸ್ ಕ್ಲಾಸಿಕ್, ಮೆಂಥಾಲ್, ಗುಡಂಗ್ ಗರಂ, ಮೋರ್, ಬ್ಲಾಕ್ ಹೀಗೆ ಹಲವು ಬ್ರಾಂಡ್ ಗಳನ್ನು ಸೇದಿದೆ. ತುಂಬಾ ಹೆಚ್ಚು ಸೇದಿದ ಬ್ರಾಂಡ್ ಗೋಲ್ಡ್ ಫ್ಲೇಕ್ ಕಿಂಗ್. ತುಂಬಾ ಇಷ್ಟಪಟ್ಟ ಬ್ರಾಂಡ್ ಬ್ಲಾಕ್. ತುಂಬಾ ಕಿಕ್ ಕೊಟ್ಟ ಬ್ರಾಂಡ್ ಯಾವುದೇ ಸಿಗರೇಟಲ್ಲ, ಅದು ಬೀಡಿ. ಬಹುಶಃ 30 ನಂಬರ್ ಬ್ರಾಂಡ್ ಇರಬೇಕು. ಬ್ಲಾಕ್ ಹಾಗೂ ಗುಡಂಗ್ ಗರಂ ಸಿಗರೇಟುಗಳಲ್ಲಿ ಲವಂಗ ಹಾಗೂ ಇನ್ನು ಕೆಲವು ಮಸಾಲೆ ಪದಾರ್ಥ ತುಂಬಿರುತ್ತಾರೆ. ಸಿಗರೇಟು ಎಳೆದಾಗ ಚರ್ ಚರ್ ಚಟ್ ಎಂದು ಸದ್ದು ಬರುತ್ತಿತ್ತು.
ಆದರೆ ಇದೀಗ ಎಲ್ಲವನ್ನೂ ಮರೆತಿದ್ದೇನೆ. ಇನ್ನು ಮುಂದೆ ಸಿಗರೇಟು ಸೇದುವುದಿಲ್ಲ ಎಂದು ನಾನೆಂದಿಗೂ ಪ್ರತಿಜ್ಞೆ ಮಾಡಿಲ್ಲ. ಮುಂದೆ ಮತ್ತೆ ಸಿಗರೇಟು ಅಂಟಿಸಿಕೊಳ್ಳುತ್ತೇನೆಯೇ ಗೊತ್ತಿಲ್ಲ. ಇಂದು ಮಾತ್ರ ಸಿಗರೇಟು ಬೇಡವೆನಿಸುತ್ತದೆ. ಸಿಗರೇಟು ಬಿಟ್ಟು ಒಂದು ವರ್ಷದ ಬಳಿಕ ನನಗೆ ನನ್ನ ಬಗ್ಗೆಯೇ ಹೆಮ್ಮೆಯಿದೆ. ಸಿಗರೇಟು ಹೊಗೆಯಿಂದ ವಾತಾವಾರಣವನ್ನು ಕಾಪಾಡಿದ್ದಕ್ಕೆ, ನನ್ನ ಮುದ್ದಿನ ದೇಹವನ್ನು ಶೋಷಿಸದಿದ್ದಕ್ಕೆ, ಹಣ ಹಾಗೂ ಸಮಯ ಉಳಿಸಿಕೊಂಡಿದ್ದಕ್ಕೆ.
ಆದರೆ ಸಿಗಾರ್ ಸೇದುವ ಕನಸು ಮಾತ್ರ ಇನ್ನೂ ಹಾಗೆಯೇ ಉಳಿದುಕೊಂಡಿದೆ. ಬಹುಶಃ ಇನ್ನೆಂದಿಗೂ ಆ ಕನಸು ನನಸಾಗಲಾರದು ಎನಿಸುತ್ತದೆ. ಕೆಲವು ಕನಸುಗಳು ನನಸಾಗದಿದ್ದರೇ ಚೆನ್ನ.
ಎನಿ ವೇ, ವಿಶ್ ಮಿ…..
ಹೀಗೇ ಅನ್ನಿಸಿತು…
December 26, 2010
ಆ ಎತ್ತನ್ನು ಬ್ಯಾಕ್ ಗ್ರೌಂಡ್ ನಲ್ಲಿಟ್ಟು ಪಿಟಿಸಿ ಮಾಡುವುದೇ ಹೆಮ್ಮೆಯ ವಿಷಯ
December 1, 2010
ಅನುಭವ (ಕಾಶೀನಾಥಂದು ಅಲ್ಲ ಕಣ್ರೀ..), Media ramachandrapura math, samraata 1 Comment
2007 ನೇ ಇಸವಿ. ರಾಮಚಂದ್ರಾಪುರ ಮಠದಲ್ಲಿ ಪ್ರಪ್ರಥಮ ವಿಶ್ವ ಗೋ ಸಮ್ಮೇಳನ ಆಯೋಜಿಸಲಾಗಿತ್ತು. ಕವರೇಜ್ ಗೆಂದು ಬೆಂಗಳೂರಿನಿಂದ ನಾನು ಹಾಗೂ ಕ್ಯಾಮರಾಮನ್ ಕೊಂಡಯ್ಯ ಹೋಗಿದ್ದೆವು. ಹೋಗುವುದಕ್ಕಿಂತ ಮೊದಲು ಸಮ್ಮೇಳನದ ಬ್ರೌಷರ್, ಮಠದಲ್ಲಿರುವ ಆಕಳುಗಳ ವಿವಿಧ ತಳಿಗಳ ವಿವರಣೆ ಇತ್ಯಾದಿಗಳ ಬಗ್ಗೆ ಅಧ್ಯಯನ ಮಾಡಿದ್ದೆ. ಅದರಲ್ಲಿ ಸಾಮ್ರಾಟ ಹೆಸರಿನ ಎತ್ತು ನನ್ನ ಗಮನ ಸೆಳೆದಿತ್ತು. ಕಾರಣ ಅದರ ದೈತ್ಯ ದೇಹ ಹಾಗೂ ಅದಕ್ಕಿಂತ ದೈತ್ಯ ಕೋಡುಗಳು. ಚಿತ್ರದಲ್ಲಿ ನೋಡಿಯೇ ರೋಮಾಂಚಿತಗೊಂಡಿದ್ದೆ.
ಮೂಲತಃ ನಮ್ಮದು ಕೃಷಿ ಕುಟುಂಬ. ಅಣ್ಣ ಶ್ರೀಹರ್ಷ ಸಾವಯವ ಕೃಷಿಕ. ಮನೆಯಲ್ಲೇ 10 ರಾಸುಗಳಿವೆ. ನಾನು ಚಿಕ್ಕವನಿದ್ದಾಗ ಅಪ್ಪ ಕೂಡ ರಂಜನಿ ಎಂಬ ಆಕಳನ್ನು ಸಾಕಿದ್ದರು. ಎಚ್ ಎಫ್, ಜರ್ಸಿ, ಮಲೆನಾಡು ಗಿಡ್ಡ ಜಾತಿಯ ದನಗಳನ್ನಷ್ಟೇ ನೋಡಿದ್ದ ನನಗೆ, ಮಠದಲ್ಲಿ ಮಾತ್ರ ಅಚ್ಚರಿ ಕಾದಿತ್ತು. ಪ್ರತಿಯೊಂದೂ ಆಕಳೂ ಪ್ರತಿಯೊಂದೂ ಎತ್ತೂ ಅಬ್ಬಾ…ಅದೇನು ಆಕಾರ, ಅವುಗಳ ಗಂಗೆದೊಗಲು, ಮೂತಿ, ಕೋಡು, ಮೂಗು, ಹುಬ್ಬು, ಬೆನ್ನಿನ ಆಕಾರ, ಬಣ್ಣ ಪ್ರತಿಯೊಂದರಲ್ಲಿಯೂ ವೈವಿಧ್ಯತೆ. ಆಂಧ್ರಪ್ರದೇಶ, ಗುಜರಾತ್, ರಾಜಸ್ಥಾನ, ಮಹಾರಾಷ್ಟ್ರದ ದನಗಳನ್ನು ನೋಡುವುದಂತೂ ಕಣ್ಣಿಗೆ ಹಬ್ಬ. ಕೆಲವು ಆಕಳುಗಳು ತಮ್ಮ ಗಾತ್ರದಿಂದಲೇ ಹತ್ತಿರ ಬಂದು ಮೈದಡವುವಂತೆ ಮಾಡುತ್ತಿದ್ದರೆ, ಇನ್ನೂ ಕೆಲವು ಎತ್ತುಗಳ ಆಕಾರ ಹಾಗೂ ಕೋಡುಗಳು ಒಂದು ಮಾರು ದೂರದಿಂದಲೇ ಹೋಗುವಂತೆ ಮಾಡುತ್ತಿದ್ದವು.
ರಾಮಚಂದ್ರಾಪುರ ಮಠಕ್ಕೆ ಹೋದಮೇಲೆ ಬಿರುಬಿಸಿನಿಲಿನಲ್ಲಿ ಕ್ಯಾಮರಾ, ಟ್ರೈಪಾಡ್ ಹೊತ್ತುಕೊಂಡು ಎಲ್ಲವನ್ನೂ ಶೂಟ್ ಮಾಡಿ ಸ್ಟೋರಿ ಮಾಡಿದ್ದಾಯಿತು. ಸಾಮ್ರಾಟನ ಬಗ್ಗೆ ಪ್ರತ್ಯೇಕ ಸ್ಟೋರಿ ಮಾಡಬೇಕು ಎಂದುಕೊಂಡಿದ್ದೆ. ಎರಡನೇ ದಿನವೇ ಸಂಘಟಕರಿಗೆ ಹೇಳಿ ಸಾಮ್ರಾಟನನ್ನು ಕರೆತರುವಂತೆ ಹೇಳಿದೆ. ಬಯಲೊಂದರಲ್ಲಿ ಹಲವಾರು ದನಗಳು ನಿಂತುಕೊಂಡು ಮೇಯುತ್ತಿದ್ದವು. ಅಲ್ಲಿಗೆ ಸಾಮ್ರಾಟನನ್ನು ಕರೆತರಲಾಯಿತು.
ಅಬ್ಬಾ…..ಆ ಎತ್ತನ್ನು ನೋಡಿಯೇ ಒಂದು ಕ್ಷಣ ದಂಗಾದೆ. ನಾನು ಎಣಿಸದ್ದಕ್ಕಿಂತ ಎತ್ತರವಾಗಿತ್ತು, ಭವ್ಯವಾಗಿತ್ತು. ಕೋಡಗಳು ವಿಶ್ವವನ್ನೇ ವ್ಯಾಪಿಸುವಷ್ಟು ಅಗಲವಾಗಿ ಚಾಚಿಕೊಂಡಿದ್ದವು. ಆತ್ಮವಿಶ್ವಾಸ, ಧೈರ್ಯ, ಸಾಹಸ, ಬಲ, ಸ್ಟೆಮಿನಾಕ್ಕೆ ಸಾಮ್ರಾಟ ಕಳಶ ಪ್ರಾಯನಂತಿದ್ದ. ಎತ್ತೊಂದು ಇಷ್ಟು ಎತ್ತರ ಇರಲು ಸಾಧ್ಯವೇ ಎನ್ನಿಸಿತು. ಸಾಮ್ರಾಟ ದನದ ಹಿಂಡಿನಲ್ಲಿ ನಡೆದು ಬರಬೇಕಾದರೆ ಉಳಿದ ದನಗಳು ಹೆದರಿಕೆಯಿಂದ ಅದರತ್ತ ನೋಡುತ್ತ ದಾರಿ ಮಾಡಿಕೊಟ್ಟವು. ಆ ದೃಶ್ಯವಂತೂ ನನಗೆ ಇನ್ನೂ ಕಣ್ಣಿಗೆ ಕಟ್ಟಿದಂತಿದೆ.
ಹಲವು ಆಂಗಲ್ ಗಳಲ್ಲಿ ಸಾಮ್ರಾಟನನ್ನು ಕ್ಯಾಮೆರಾದಲ್ಲಿ ಸೆರೆಹಿಡಿದೆ. ನಂತರ ಪಿಟಿಸಿ ಮಾಡಬೇಕಾದಾಗ, ಸಾಮ್ರಾಟನ ಪಕ್ಕ ನಿಂತು ಮಾಡೋಣ ಎಂದುಕೊಂಡೆ. ಆದರೆ ದುರಾದೃಷ್ಣ ಅಂದು ಸಾಮ್ರಾಟನಿಗೆ ಆರಾಮಿರಲಿಲ್ಲ. ಹೀಗಾಗಿ ಸ್ವಲ್ಪ ರೆಸ್ಟ್ ಲೆಸ್ ಆಗಿದ್ದ ಆತ ಕಿರಿಕಿರಿ ಮಾಡುತ್ತಿದ್ದ. ಹೀಗಾಗಿ ಹತ್ತಿರ ಹೋಗುವುದು ಬೇಡ ಎಂದರು ಅದನ್ನು ನೋಡಿಕೊಳ್ಳುತ್ತಿದ್ದವರು. ಕೊನೆಗೆ ಸಾಮ್ರಾಟ ಬ್ಯಾಕ್ ಗ್ರೌಂಡ್ ನಲ್ಲಿರುವಂತೆ ಮಾಡಿ ಪಿಟಿಸಿ ಮಾಡಿದೆ. ಇಂದಿಗೂ ನನ್ನ ಫೆವರಿಟ್ ಪಿಟಿಸಿಗಳಲ್ಲಿ ಅದೂ ಒಂದು.
ಆದರೆ ಇನ್ನು ಸಾಮ್ರಾಟ ನೆನಪಷ್ಟೇ..ಛೆ….
(ನಿನ್ನೆ ಪ್ರಕಟವಾಗಿಬೇಕಿದ್ದ ಈ ಲೇಖನ ಕಾರಣಾಂತರಗಳಿಂದ ಇಂದು ಪ್ರಕಟವಾಗುತ್ತಿದೆ. ತಡವಾದುದಕ್ಕೆ ಕ್ಷಮೆಯಿರಲಿ)
70 ಕೆಜಿ ಮಟನ್ನು, 40 ಕೆಜಿ ಚಿಕನ್ನು ಪೆಶಲ್ಲಾಗಿ ಮಾಡ್ಸಿದ್ದೆ
November 15, 2010
ಅನುಭವ (ಕಾಶೀನಾಥಂದು ಅಲ್ಲ ಕಣ್ರೀ..), ಮುಕ್ತ...ಮುಕ್ತ...ಮುಕ್ತ.... 1 Comment
ಮೊನ್ನೆ ನಾನು ಹಾಗೂ ನಮ್ಮ ಲೈಟ್ ಆಫೀಸರ್ (ಶೂಟಿಂಗ್ ನಲ್ಲಿ ಲೈಟ್ ನೋಡಿಕೊಳ್ಳುವವರು) ನಡುವೆ ನಡೆದ ಸಂಭಾಷಣೆ.
“ಸಾ, ನಮ್ಮ ಊರ್ ಕಡೆ ಜಾತ್ರೆ ಐತೆ. ನೀವ್ ಬರ್ಬೇಕು ಸಾ”
“ಹೌದೇನೋ? ಎಲ್ಲಿ ಜಾತ್ರೆ?”
“ನಮ್ ಊರಲ್ಲಿ ಸಾ. ನೀವ್ ಮಂಡ್ಯ ತಾವ ಬಂದು ಪೋನ್ ಹಾಕಿ. ನಾ ಬಂದ್ ಕರ್ಕಂಡ್ ವೋಯ್ತಿನಿ”
“ಟ್ರೈ ಮಾಡ್ತೀನಿ ಕಣೋ. ಟೈಮ್ ಆದ್ರೆ ಖಂಡಿತ ಬರ್ತಿನಿ. ಆದ್ರೆ ನಾ ಬಂದೇ ಬರ್ತಿನಿ ಅಂತ ಕಾಯ್ತಾ ಕೂರ್ಬೇಡ”
“ಸಾಕು ಬಿಡಿ ಸಾ. ನೀವು ಅಂಗ್ ಹೇಳಿದ್ರಲ್ಲ….ಸಾಕು. ಲಾಸ್ಟ್ ಟೈಮ್ ಇದೇ ಟೈಮಲ್ಲಿ ಸಾ ಇವ್ರೆಲ್ಲ ಬರ್ತಿನಿ ಅಂತ ಯೋಳಿ ನನ್ಮಕ್ಳು ಕೈಕೊಟ್ ಬಿಟ್ರು?”
“ಯಾಕೆ ಏನಾಯ್ತು?”
“ನೋಡಿ ಸಾ ಎಲ್ರಿಗೂ ಇನ್ವಿಟೇಸನ್ ಕೊಟ್ಟಿದೆ. ನಮ್ ಊರ್ ಕಡೆ ಜಾತ್ರೆ ಬರ್ಲಾ ಎಲ್ಲಾರೂ ಅಂತ. ಎಲ್ಲಾ ನನ್ಮಕ್ಳೂ ವಪ್ಕಂಡಿದ್ರು. ಅವ್ರು ಬತ್ತಾರೆ ಅಂತ ಹೇಳಿ 70 ಕೆಜಿ ಮಟನ್ನು, 40 ಕೆಜಿ ಚಿಕನ್ನು ಪೆಶಲ್ಲಾಗಿ ಮಾಡ್ಸಿದ್ದೆ. ಮೂರು ಟಗರು ಕಡ್ಸಿದ್ದೆ ಸಾ. ಇನ್ನು ಕೆಲವ್ರು ಎಣ್ಣೆ ಗಿರಾಕಿ ಅಂತ ಗೊತ್ತಿತ್ತು. ಅಂಗಾಗಿ 5 ಸಾವಿರ ರೂಪಾಯಿ ಬಾಟ್ಳು ತರ್ಸಿದ್ದೆ. ಇನ್ನೂ ಹುಡ್ರಲ್ವಾ, ಕ್ಯಾಶ್ ಇರಾಕಿಲ್ಲ ಅಂತ ಬೆಂಗ್ಳೂರಿಂದ ನಮ್ ಮಂಡ್ಯಕ್ಕೆ ಮಂಜನ್ ಸುಮೋ ಬುಕ್ ಮಾಡಿ ಅವಂಗ್ ವಂದ್ ಸಾವಿರ್ ರೂಪಾಯಿ ಕೊಟ್ಟಿದ್ದೆ, ಎಲ್ಲಾರ್ನೂವೇ ಕಕ್ಕಂಡ್ ಬಾ ಅಂತ. ನೀವ್ ನಂಬಲ್ಲ ಸಾ….ನನ್ಮಕ್ಳು ವಬ್ರೂ ಬರ್ಲಿಲ್ಲ ಅವತ್ತು. ಎಲ್ಲಾರೂ ಕೈ ಎತ್ತಿ ಬುಟ್ರು. ಎಷ್ಟೋ ಬೇಜಾರಾಗೋಯ್ತು ಅಂದ್ರೆ, ಮಟನ್ನು, ಚಿಕನ್ನು, ಎಣ್ಣೆ ಎಲ್ಲಾ ವಯ್ದು ನಮ್ ಊರ್ ತಾವ ನಾಲೆ ವಳಗ್ ಎಸೆದ್ ಬುಟ್ಟೆ. ಕಾಸ್ ವೋಯ್ತು ಅಂತ ಬೇಜಾರಿಲ್ಲ ಸಾ….ಆದ್ರೆ ಎಲ್ಲಾ ಸೇರ್ಕಂಡು ನನ್ ಮನಸ್ಸು ಮುರುದ್ರು. ಅವತ್ತೇ ಡಿಸೈಡ್ ಮಾಡ್ದೆ. ಯಾವ್ನ್ ಬರ್ತಾನೆ ಅಂತ ಗ್ವತ್ತಿರತ್ತೋ ಅವಂಗಷ್ಟೇಯಾ ಇನ್ವಿಟೇಸನ್ ಕ್ವಡೋದು ಅಂತ. ಈ ಟೈಮ್ ನೀವ್ ಬನ್ನಿ ಸಾ. ಚೆನ್ನಾಗಿರತ್ತೆ. ನಮ್ಮ ಕಬ್ಬಿನ ತ್ವಾಟದಾಗೆ ಕುಂತ್ಕಂಡ್ ಅಂಗೆ ಬಾಡೂಟ, ಎಣ್ಣೆ ಇಳಿಸ್ತಾ ಇದ್ರೆ…ಆಹಾಹಾ…ಏನ್ ಚಂದ ಸಾ…”
1981 ವೀನಸ್ ಸರ್ಕಸ್ ದುರುಂತ – ಮುಂದೇನಾಯಿತು?
November 10, 2010
ಅನುಭವ (ಕಾಶೀನಾಥಂದು ಅಲ್ಲ ಕಣ್ರೀ..), Uncategorized venus circus, vinod dhondale Leave a comment
‘ಮುಕ್ತ ಮುಕ್ತ’ ದ ಸಂಚಿಕೆ ನಿರ್ದೇಶಕ ವಿನೋದ್ ಧೋಂಡಾಳೆ, ಆ ದುರಂತದ ಸಂದರ್ಭದಲ್ಲಿ ನಡೆದ ಮೈಜುಮ್ಮೆನುವ ಘಟನೆ ಹೇಳಿದರು.
“ಸುಘೋಷ್, ಆ ದಿನ ನನಗೆ ಚೆನ್ನಾಗಿ ನೆನಪಿದೆ ಕಣ್ರೀ. ನಾನಾಗ ಒಂದನೇ ಕ್ಲಾಸೋ, ಎರಡನೇ ಕ್ಲಾಸೋ ಇದ್ದೆ. ಅವತ್ತು ಸರ್ಕಸ್ ನೋಡೋದಿಕ್ಕೆ ಅಂತ ಹೋದ ಮಕ್ಕಳಲ್ಲಿ ನಾನೂ ಒಬ್ಬ. ಆದರೆ ಆ ಬೆಂಕಿಗೆ ನಾನಷ್ಟೇ ಅಲ್ಲ ನಮ್ಮ ಶಾಲೆಯ ಮಕ್ಕಳ್ಯಾರೂ ಬಲಿಯಾಗಲಿಲ್ಲ. ಅದಕ್ಕೆಲ್ಲ ಕಾರಣ ನಮ್ಮ ಸರ್ರು. ಬೆಂಕಿ ಹತ್ತಿಕೊಂಡದ್ದು ಸರ್ಕಸ್ ಮುಗಿದ ಬಳಿಕ. ಆದರೆ ಸರ್ಕಸ್ ಮುಗೀಲಿಕ್ಕೆ ಇನ್ನೂ 15 ನಿಮಿಷ ಬಾಕಿ ಇದೆ ಅನ್ನೋವಾಗ, ಸುಮ್ನೆ ಮಕ್ಕಳೆಲ್ಲ ಒಂದೇ ಸಾರಿ ಹೊರಗೆ ಹೋಗೋದಕ್ಕೆ ನೋಡಿ ಗಲಾಟೆ ಮಾಡ್ತಾರೆ ಅಂತ, ನಮ್ಮ ಸರ್ರು ಹುಂ…ನಡೀರಿ ನಡೀರಿ ಸರ್ಕಸ್ ಮುಗೀತು ಅಂತ ನಮ್ಮನ್ನೆಲ್ಲ ಹೊರಗ್ ಕರ್ಕೊಂಡು ಬಂದು ಬಿಟ್ಟಿದ್ರು. ಅಷ್ಟು ದೂರ ಹೋದ ಮೇಲೆ ಹಿಂತಿರುಗಿ ನೋಡ್ತಿವಿ, ಬೆಂಕಿ ಭಗ ಭಗ ಅಂತ ಉರೀತಾ ಇತ್ತು. ನೋಡಿ, ಟೈಮ್ ಹೇಗೆಲ್ಲ ಇರತ್ತೆ ಅಂತ. ನಮ್ಮ ಸರ್ರಿಗೆ ಎಷ್ಟು ಥ್ಯಾಂಕ್ಸ್ ಹೇಳಿದ್ರೂ ಸಾಲ್ದು. ಅಲ್ವಾ ”
ಎರಡು ಹನಿ ಗ್ಲಿಸರಿನ್
October 7, 2010
ಅನುಭವ (ಕಾಶೀನಾಥಂದು ಅಲ್ಲ ಕಣ್ರೀ..), ಮುಕ್ತ...ಮುಕ್ತ...ಮುಕ್ತ.... gliserin, mukta mukta 1 Comment
ಘಜನಿಯ ಅಮೀರ್
ಪಾ ದ ಅಮಿತಾಭ್
ಮೇರೆ ಅಂಗನೇಮೇ ಯ ಮತ್ತದೇ ಅಮಿತಾಭ್
ಚಾಚಿ ಚಾರ್ಸೋಬೀಸ್ ನ ಕಮಲ್
ಎಲ್ಲ ಫಿಲ್ಮ್ ಗಳ ರಜನಿ
ಅದ್ಭುತ ಎಕ್ಸಪ್ರೆಷನ್ನಿನ ಶ್ರೀದೇವಿ
ಕ್ಲಾಸಿಕ್ ನಟನೆಯ ಸ್ಮಿತಾ ಪಾಟೀಲ್
ಹೀಗೆ ಮೊನ್ನೆ ಎಲ್ಲರನ್ನೂ ನೆನೆಸಿಕೊಂಡು ಬಿಟ್ಟೆ
ಅವರ ನಟನೆಗೆ ಸಲಾಂ ಹೊಡೆದು ಬಿಟ್ಟೆ
ಕಹಾಂ ರಾಜಾಭೋಜ, ಕಹಾಂ ಗಂಗೂತೇಲಿ ಎಂದುಕೊಂಡು ಬಿಟ್ಟೆ
ಕಾರಣ ಇಷ್ಟೆ,
ಮೊನ್ನೆ ‘ಮುಕ್ತ ಮುಕ್ತ’ ಶೂಟಿಂಗ್ ನಲ್ಲಿ ಕಣ್ಣಿಗೆ ಎರಡು ಹನಿ ಗ್ಲಿಸರಿನ್
ಹೆಚ್ಚಿಗೆ ಬಿದಿತ್ತು ಅಷ್ಟೆ……!!
ನಿಮ್ಮ ಗಾಡಿಯ ಲೈಟ್ ಆನ್ ಆಗಿದೆ – ಹೀಗೊಂದು ಪ್ರತಿಕ್ರಿಯೆ
September 16, 2010
ಅನುಭವ (ಕಾಶೀನಾಥಂದು ಅಲ್ಲ ಕಣ್ರೀ..), ವಿಚಾರ 5 Comments
ರಿಸ್ಪೆಕ್ಟ್ ಎವ್ರಿವನ್
ನಿಮ್ಮ ಗಾಡಿಯ ಲೈಟ್ ಆನ್ ಆಗಿದೆ…
September 15, 2010
ಅನುಭವ (ಕಾಶೀನಾಥಂದು ಅಲ್ಲ ಕಣ್ರೀ..), ವಿಚಾರ headlight on, two wheeler 6 Comments
ಸೂರ್ಯ ಮನೆ ಸೇರುವ ಮೊದಲೇ ಬೆಂಗಳೂರಿನಲ್ಲಿ ಯಾರೂ ಮನೆ ಸೇರುವುದಿಲ್ಲ. ಸಾಮಾನ್ಯವಾಗಿ ದ್ವಿಚಕ್ರವಾಹನದಲ್ಲಿ ಹೋಗುವವರು ರಾತ್ರಿ ಮನೆಗೆ ಹೋದ ಬಳಿಕ ಹೆಡ್ ಲೈಟ್ ಆಫ್ ಮಾಡದೇ ಹಾಗೆಯೇ ಗಾಡಿ ಆಫ್ ಮಾಡಿ ಪಾರ್ಕ್ ಮಾಡಿಬಿಡುತ್ತಾರೆ. ಮಾರನೇ ದಿನ ಮತ್ತೆ ಕೆಲಸಕ್ಕೆ ಹೊರಡುವಾಗ ಗಾಡಿಯ ಹೆಡ್ ಲೈಟ್ ಆನ್ ಆಗಿಯೇ ಇರುತ್ತದೆ. ಇದು ಸವಾರರಿಗೆ ಸಾಮಾನ್ಯವಾಗಿ ಗೊತ್ತಾಗುವುದಿಲ್ಲ. ಆದರೆ ಗಾಡಿಯ ಲೈಟ್ ಆನ್ ಇದೆ ಎಂದು ಮುಂದಿನಿಂದ ಬರುತ್ತಿರುವ ಯಾರೊಬ್ಬರೂ ಹೇಳುವುದೇ ಇಲ್ಲ. ಮರ್ಯಾದೆಗೆ ಕಡಿಮೆ ಎಂದು ಭಾವಿಸುತ್ತಾರೋ, ಅಥವಾ ಬೇರೊಬ್ಬರ ಸುದ್ದಿ ತಮಗೇಕೆ ಎಂದು ಭಾವಿಸುತ್ತಾರೋ ಗೊತ್ತಿಲ್ಲ.
ಬೆಂಗಳೂರಿನಲ್ಲಿ ನಾನು ಎಷ್ಟೋ ಬಾರಿ ಹೀಗೆಯೇ ಲೈಟ್ ಆನ್ ಮಾಡಿಕೊಂಡು ಹೋಗುವಾಗ, ಸಿಗ್ನಲ್ ಮಾಡಿ ಲೈಟ್ ಆನ್ ಇದೆ ಹೇಳಿದವರು ಬಹಳಷ್ಟು ಕಡಿಮೆ.
ಆದರೆ ಅದೇ ಬೆಳಗಾವಿಯಲ್ಲಿ ಅಥವಾ ಕೊಪ್ಪದಲ್ಲಿ ಹೀಗೆ ಬೈಕ್ ಲೈಟ್ ಆನ್ ಮಾಡಿಕೊಂಡು ಓಡಿಸಿದರೆ, ಮುಂದಿನಿಂದ ಬರುವ ಪ್ರತಿ ಎರಡನೇ ಅಥವಾ ಮೂರನೇ ವ್ಯಕ್ತಿ, ಕೈಯಿಂದ ಸಿಗ್ನಲ್ ಮಾಡಿ ಲೈಟ್ ಆನ್ ಇದೆ ಎಂದು ಹೇಳುತ್ತಾನೆ.
ಇದು ಸಣ್ಣ ವಿಷಯವಾಗಿ ಕಂಡರೂ, ಬೈಕ್ ನ ಬ್ಯಾಟರಿ ಲೈಫ್ ಮೇಲೆ ಪರಿಣಾಮವಾಗುವುದರ ಜೊತೆಗೆ, ಹಗಲು ಹೊತ್ತಿನಲ್ಲಿ ಹೆಡ್ ಲೈಟ್ ಹಾಕಿಕೊಂಡು ಹೋಗುವುದು ರಾಷ್ಟ್ರೀಯ ನಷ್ಟವಲ್ಲವೆ? ನಾನು ಬೆಂಗಳೂರಿನಲ್ಲಿ ಹೆಡ್ ಲೈಟ್ ಆನ್ ಇರುವುದನ್ನು ಕಂಡಾಗಲೆಲ್ಲ ಕೈಯಿಂದ ಸಿಗ್ನಲ್ ಮಾಡಿ ಎಚ್ಚರಿಸಿದ್ದೇನೆ. ಹೀಗೆ ಮಾಡಿದ್ದಕ್ಕೆ ಕೆಲವೊಮ್ಮೆ ಸವಾರರು ನನ್ನನ್ನೇ ದುರುಗುಟ್ಟಿಕೊಂಡು ನೋಡಿದ್ದಿದೆ. (ನನ್ನ ಬೈಕು, ನನ್ನ ಲೈಟು – ಇವನಪ್ಪನ ಗಂಟೇನು ಹೋಗುತ್ತದೆ ಎಂಬ ಉಡಾಫೆಯೆ?)
ಏನೇ ಆದರೂ, ಹೆಡ್ ಲೈಟ್ ಆನ್ ಇದ್ದರೆ, ಕಾರಿನ ಡೋರ್ ಸರಿಯಾಗಿ ಕೂತಿರದಿದ್ದರೆ, ಹಿಂದುಗಡೆ ಕುಳಿತ ಮಹಿಳೆಯ ವೇಲ್ ಚಕ್ರಕ್ಕೆ ಸಿಗುವ ಸಂಭವವಿದ್ದರೆ, ನಾನಂತೂ ಸವಾರರನ್ನು ಎಚ್ಚರಿಸುತ್ತಿದ್ದೇನೆ. ಮರ್ಯಾದೆಗಿಂತ ಪ್ರಾಣ ದೊಡ್ಡದಲ್ವೆ?
ನನ್ನ ಡೈರಿಯ ಪುಟಗಳು
September 6, 2010
ಅನುಭವ (ಕಾಶೀನಾಥಂದು ಅಲ್ಲ ಕಣ್ರೀ..) diary, my school 3 Comments
ನಾನು ಡೈರಿ ಬರೆಯಲು ಆರಂಭಿಸಿದ್ದು 8 ನೇ ತರಗತಿಯಿಂದ. ಮನೆಯಲ್ಲಿ ಅಮ್ಮ ಮೊದಲಿನಿಂದ ಡೈರಿ ಬರೆಯುವ ಅಭ್ಯಾಸ ಇಟ್ಟುಕೊಂಡಿದ್ದಳು. ಸಹಜವಾಗಿಯೇ ಆ ಅಭ್ಯಾಸ ನನಗೂ ಬಂತು. ಶಾಲಾ ದಿನಗಳಲ್ಲಿ ನಾನು ಬರೆದ ಡೈರಿಯ ಕೆಲ ಆಯ್ದ ಸಾಲುಗಳು ಇಲ್ಲಿವೆ.
ಶುಕ್ರವಾರ, ಜನವರಿ 1, 1993.
ಬೆಳಿಗ್ಗೆ ನಾನು ಡೈರಿ ತಂದೆ. ಅಮ್ಮನ ಸೀರೆ ಇಸ್ತ್ರಿಗೆ ಕೊಟ್ಟು ಬಂದೆ. ಬ್ಯಾಂಕಿಗೆ 200 ರೂಪಾಯಿ ಇಟ್ಟು ಬಂದೆ. ಇಂದು ದೊಡ್ಡಮ್ಮನ ಪತ್ರ ಬಂದಿತು. 26-12-1992 ರಂದು ಸ್ವಿಟ್ಜರ್ ಲ್ಯಾಂಡಿನ ಬೆಂಕಿಪೊಟ್ಟಿಗೆ ಭಾರತೀಯಕ್ಕ ತಂದು ಕೊಟ್ಟಳು. ಇಂದು ಅಪ್ಪನಿಗೆ ಸ್ವಲ್ಪ ಆರಾಮಿರಲಿಲ್ಲ.
ಭಾನುವಾರ, ಜನವರಿ 3, 1993.
ಇಂದು ಗರುಡರೇಖೆ ಚಿತ್ರವಿತ್ತು. ಅಪ್ಪ ಮಧ್ಯಾಹ್ನ ಖಾನಾಪುರಕ್ಕೆ ಹೋಗಬೇಕೆಂದು ರೈಲ್ವೆ ಸ್ಟೇಷನ್ನಿನಲ್ಲಿ ಅಪ್ಪನ 200 ರೂಪಾಯಿ ಪಿಕ್ ಪಾಕೆಟ್ ಮಾಡಿದರು. ಇವತ್ತು ಪುರಿ ಮಾಡಿದ್ದರು.
ಮಂಗಳವಾರ, ಜನವರಿ 5, 1993.
ಇಂದು ಶಾಲೆಗೆ ಸೈಕಲ್ ಮೇಲೆ ಹೋದೆ. ಇಂದು ಡ್ರಿಲ್ ಇತ್ತು. ಇಂದು ವಿಸರ್ಜನಾಂಗ ಮತ್ತು ಗ್ರಾಫ್ ಹೇಳಿದರು. ಸುಂದರ್ ಸರ್ ಅಬಸೆಂಟ್ ಇದ್ದರು. ಹಳ್ಳಿಕರ್ ಸರ್ ಗೆ ಆರಾಮಿರಲಿಲ್ಲ.
ಗುರುವಾರ, ಜನವರಿ 5, 1995
ಇಂದು ಬೆಳಿಗ್ಗೆ ಲೇಟಾಗಿ ಎದ್ದೆನು. ಆದರೂ ಕ್ಲಾಸಿಗೆ ಹೋಗಿದ್ದೆ. 5.2 ಬಿಡಿಸಿದೆವು. ಇಂದು ಸ್ಪೋರ್ಟ್ಸ್ ಮೀಟ್ ಸಲುವಾಗಿ ಹೆಸರುಗಳನ್ನು ತೆಗೆದುಕೊಂಡರು. ನಾನು 100 ಮೀ, 200 ಮೀ, ಓಟ, ಹಾಕಿ ಬಾಲ್ ಥ್ರೋ ಮತ್ತು ರೀಲೆಗೆ ಹೆಸರು ಕೊಟ್ಟೆನು.
ಶನಿವಾರ, ಜನವರಿ 7, 1995
ಇಂದು ಕ್ಲಾಸಿಗೆ ರಜೆ ಇತ್ತು. ಶಾಲೆಯಲ್ಲಿ ಜಿ. ಬಿ. ಸರ್ ಬಂದಿರಲಿಲ್ಲ. ಶೀತಲ್ ನ ಕಾಲು ಉಳುಕಿದೆ. ಪುಟ್ಟತ್ತೆ ಬಂದಿದ್ದರು. ಸಚಿನ್ ಬೆಲ್ಲದ್ ಶಾಲೆಗೆ ಬಂದಿದ್ದ. ಬೈಲಹೊಂಗಲದಲ್ಲಿ ಇಂದು ಗಲಾಟೆ ನಡೆಯಿತು. ಪ್ರಾಣಹಾನಿ ಇಲ್ಲ.
ಬುಧವಾರ, ಜನವರಿ 11, 1995
ಕ್ಲಾಸಿಗೆ ಹೋಗಿದ್ದೆ. ಪುಟ್ಟತ್ತೆ ಬಂದಿದ್ದರು. ಶಾಲೆಯಲ್ಲಿ ಫಂಕ್ಷನ್ ಇತ್ತು. ಆದರೆ ಯಾವುದೋ ಕಾರಣದಿಂದ ರದ್ದಾಯಿತು. ಜಿ. ಆರ್. ಜೋಷಿ ಸರ್ ನನಗೆ ಭಾಷಣ ಬರೆದುಕೊಟ್ಟರು. (ಸಂಸ್ಕೃತದಲ್ಲಿ). ಶಾಲೆಯಲ್ಲಿ ಬೀಜ ಗಣಿತ ಮುಗಿಯಿತು.































ಚಿಠ್ಠೀ ಆಯೀ ಹೈ...