ದೇವರ ಮೂರ್ತಿಗಳನ್ನು ಹೊರತು ಪಡಿಸಿ ದೇವರ ಕೋಣೆಯಲ್ಲಿದ್ದ ಎಲ್ಲ ಸಾಮಾನುಗಳನ್ನು ಅಡಿಗೆ ಮನೆಯಲ್ಲಿನ ಸಿಂಕ್ ಹತ್ತಿರ ತಂದೆ. ಊದುಬತ್ತಿಯ ಸ್ಟಾಂಡ್ ಮೇಲೆ ಬೂದಿ ಉದುರಿ ಅದು ಮಾಸಿಹೋಗಿತ್ತು. ನಿಲಾಂಜನಕ್ಕೆ ಜಿಡ್ಡು ಹಿಡಿದಿತ್ತು. ಧೂಪವಿಡುವ ಬಿಲ್ಲೆಯನ್ನು ಡಿಸ್ಪೋಸ್ ಮಾಡಿದರೆನೇ ಚೆನ್ನ ಎನಿಸಿತು. ತಾಮ್ರದ ಉದ್ಧರಣೆ, ತಟ್ಟೆ, ಲೋಟಕ್ಕೆ ಚಿಕನ್ ಪಾಕ್ಸ್ ಆಗಿತ್ತು. ಅರಿಶಿನ-ಕುಂಕುಮ ಇಡುವ ಬೆಳ್ಳಿಯ ಬಟ್ಟಲುಗಳು ಬೆಳ್ಳಿಯವೇ ಎಂಬುದರ ಬಗ್ಗೆ ಸಂಶಯ ಬರುತ್ತಿತ್ತು. ಗಂಟೆ ಮಾತ್ರ ಫಳಫಳನೇ ಹೊಳೆಯುತ್ತ, ತನ್ನನ್ನು ಯಾರೂ ಬಳಸಿಯೇ ಇಲ್ಲ ಎಂದು ಸಾರಿ ಹೇಳುತ್ತಿತ್ತು.
ನಾಗಂದಿಗೆ ಮೇಲಿನ ಕೆಂಪು ಡಬ್ಬಿ ತೆಗೆದು, ಅದರಲ್ಲಿ ಉದ್ದ ಚಮಚ ಹಾಕಿ ಒಂದಷ್ಟು ಪೀತಾಂಬರಿಯನ್ನು ಸುರುವಿಕೊಂಡೆ. ನಾಳೆ ಏರ್ ಟೆಲ್ ಬಿಲ್ ತುಂಬಬೇಕು. ಮೊದಲು ಬೆಳ್ಳಿಯ ನಿಲಾಂಜನ ಕೈಗೆತ್ತಿಕೊಂಡೆ.ಅದರಲ್ಲಿದ್ದ ಬತ್ತಿಯ ಕಾಲು ಹಿಡಿದೆಳೆದು ಕಸದ ಬುಟ್ಟಿಗೆ ಬಿಸಾಕಿ, ನಿಲಾಂಜನವನ್ನು ನಳದ ಕೆಳಗೆ ಹಿಡಿದೆ. ಈ ಬಾರಿಯ ಹಾಯ್ ಬೆಂಗಳೂರಿನಲ್ಲಿಯಾದರೂ ನನ್ನ ಆರ್ಟಿಕಲ್ ಬರಲಿದೆಯೆ?. ಓ ಮನಸೇ ನೀರಸವಾಗುತ್ತಿದೆಯಲ್ಲ…. ಬಲಗೈ ಬೆರಳುಗಳಿಗೆ ಕೊಂಚವೇ ಪೀತಾಂಬರಿ ಮೆತ್ತಿಸಿ ನಿಲಾಂಜನಕ್ಕೆ ಬಳಿದೆ. ಎರಡೂ ಹೆಬ್ಬಟ್ಟುಗಳಿಂದ ಚೆನ್ನಾಗಿ ತಿಕ್ಕಿದೆ. ಪಕ್ಕಕ್ಕಿಟ್ಟೆ.
ತಾಮ್ರದ ಉದ್ಧರಣೆ, ತಟ್ಟೆ, ಲೋಟಕ್ಕೆ ಗಸಗಸಗಸನೆ ಪೀತಾಂಬರಿ ಉಜ್ಜಿದೆ. ಸುಮಾರು ಹೊತ್ತು ಉಜ್ಜುತ್ತಲೇ ಇದ್ದೆ. ಚಿಕನ್ ಪಾಕ್ಸ್ ಹೋಗಲಿಲ್ಲ. ಕಪಾಟಿನಲ್ಲಿದ್ದ ಹಳೆಯ ಟೂತ್ ಬ್ರಶ್ ತಂದೆ. ಪೀತಾಂಬರಿಯಲ್ಲಿ ಅದ್ದಿ ಉಜ್ಜಿದೆ. ರೋಗ ವಾಸಿಯಾಯಿತು. ಮೊನ್ನೆ ಮಟಮಟ ಮಧ್ಯಾಹ್ನ ಪ್ರಯಾಣಿಸುತ್ತಿರಬೇಕಾದರೆ ಸ್ಲೀಪರ್ ಬಸ್ಸಿನಲ್ಲಿ ಎಲ್ಲರೂ ನಿದ್ರಿಸುತ್ತಿದ್ದಾಗ ನಾನೂ ಅವಳು ಇಬ್ಬರೇ ಎಚ್ಚರವಾಗಿದ್ದೆವು. ವಿಪರೀತ ಎಸಿಯಿಂದಾಗಿ ಇಬ್ಬರಿಗೂ ನಿದ್ದೆ ಬರುತ್ತಿರಲಿಲ್ಲ. ಇಬ್ರೂ ಕ್ಯಾಬಿನ್ ಗೆ ಹೋಗಿ ಬೈಟು ಸಿಗರೇಟು ಸೇದಿದ್ದು ಎಷ್ಟು ಚೆನ್ನಾಗಿತ್ತಲ್ಲ. ತಾಮ್ರದ ವಹಿವಾಟೇ ಹಾಗೇ. ಎಷ್ಟು ತೋಳೆದರೂ ನಂತರ ಒರೆಸಿಯೇ ಇಡಬೇಕು. ಇಲ್ಲದಿದ್ದರೆ, ಮತ್ತೆ ಕಲೆ ಉಳಿದುಬಿಡುತ್ತದೆ. ಟರ್ಕಿಸ್ ಟಾವೇಲಿನಿಂದ ಚೆನ್ನಾಗಿ ಒರೆಸಿದೆ. ಫಳಫಳನೆ ಹೊಳೆಯುವಂತೆ ಮಾಡಿದೆ.
ಹಿತ್ತಾಳೆಯ ಊದುಬತ್ತಿ ಸ್ಟಾಂಡನ್ನು ಡಿಟ್ಯಾಚ್ ಮಾಡಿದೆ. ಸಾವಯವ ಕೃಷಿಗೆ ಉತ್ತೇಜನ ನೀಡಲು…….ಮತ್ತೆ ಬ್ರಷ್ಷನ್ನು ಪೀತಾಂಬರಿಯಲ್ಲಿ ಅದ್ದಿ ದಶದಿಕ್ಕುಗಳಿಂದಲೂ ತಿಕ್ಕಿದೆ. ಸ್ಟಾಂಡ್ ಮೇಲೆ ಮಾಡಿದ್ದ ಡಿಸೈನ್ ನಿಂದಾಗಿ ಸಂದಿಯಲ್ಲೆಲ್ಲ ಜಿಡ್ಡು ಮೆತ್ತಿಕೊಂಡಿತ್ತು. ಮತ್ತಷ್ಟು ಪೀತಾಂಬರಿ ಅಂಟಿಸಿದೆ. ಅವನು ಒಂದು ಕೋಟಿ ಮಾಡಿಕೊಂಡನಂತೆ. ನಾವು ಪ್ರೆಸ್ ಕಾನ್ಫರೆನ್ಸಿನಲ್ಲಿ ಪೆನ್ನು, ಪ್ಯಾಡು ತೆಗೆದುಕೊಂಡರೆ ಈ ಹಲ್ಕಟ್ ಮ್ಯಾನೇಜ್ ಮೆಂಟಿಗೆ ಎಕ್ಸಪ್ಲನೇಶನ್ ಕೊಡಬೇಕು. ಸರಿಹೋಯಿತು. ಜಿಡ್ಡು ಎಲ್ಲ ಹೋಗಿ ಸರಿಹೋಯಿತು. ಸ್ಟಾಂಡ್ ಕೂಡ ಮೊದಲಿನಂತಾಯಿತು.
ಅಷ್ಟರಲ್ಲಿ ಪೀತಾಂಬರಿ ಮುಗಿಯಿತು. ಮತ್ತಷ್ಟು ಪೀತಾಂಬರಿ ಸುರಿದುಕೊಂಡೆ. ಅರಿಶಿನ-ಕುಂಕುಮದ ಬೆಳ್ಳಿಯ ಬಟ್ಟಲುಗಳು ತೇಜ ಕಳೆದುಕೊಂಡಿದ್ದವು. ಮೊದಲು ಸೋಪಿನಿಂದ ತೊಳೆದೆ. ಅದಗ್ವಾಡಿ ಅದ ಸೂರು ದಿನವೆಲ್ಲ ಬೇಜಾರು ಹಾಡು ಚೆನ್ನಾಗಿದೆ. ಶಂಕರ್ ನಾಗ್ ವಾಯ್ಸ್ ಸೂಪರ್. ಅಟಲ್ ಬಿಹಾರಿ ವಾಜಪೇಯಿ ವಯಸ್ಸೇಷ್ಟು ಈಗ? ನಂತರ ಮತ್ತೆ ಗಸಗಸನೆ ಪೀತಾಂಬರಿ ತಿಕ್ಕಿ ಬಟ್ಟಲುಗಳು ಬೆಳ್ಳಿಯವೇ ಎಂಬ ಕುರಿತಾದ ಸಂಶಯವನ್ನು ದೂರ ಮಾಡಿದೆ.
ಧೂಪವಿಡುವ ಬಿಲ್ಲೆಯನ್ನು ಕಸದ ಬುಟ್ಟಿಗೆ ಎಸೆದೆ. ಗಂಟೆಯನ್ನು ಕೇವಲ ಒರೆಸಿದೆ.
ಪೂಜೆಯ ಎಲ್ಲ ತಯಾರಿ ಆಗಿತ್ತು. ಎಲ್ಲ ಸಾಮಾನುಗಳನ್ನು ತೆಗೆದುಕೊಂಡು ದೇವರ ಕೋಣೆ ಪ್ರವೇಶಿಸಿದೆ. ದೇವರ ಮೂರ್ತಿಗೆ ಅಲಂಕಾರ ಮಾಡಿದೆ. ದೀಪ ಬೆಳಗಿದೆ. ಊದುಬತ್ತಿ, ಧೂಪ ಹಚ್ಚಿದೆ. ಮಂತ್ರ ಹೇಳಿದೆ. ನೈವೇದ್ಯ ತೋರಿಸಿದೆ. ದೇವರಿಗೆ ಬಾಗಿ ನಮಸ್ಕರಿಸಿದೆ. ತಲೆಯೆತ್ತಿ ನೋಡಿದೆ. ದೇವರು ಕಾಣಿಸಲಿಲ್ಲ.
(ಅಗಸ್ಟ್ 29, 2009 ರಂದು ಪ್ರಕಟವಾಗಿದ್ದು)





