ತಿ…. ಮುಚ್ಕೊಂಡು ಹೋಗ್ಬೇಕು….

18 Comments

ಪ್ರತಿಬಾರಿ ‘ಮುಕ್ತ ಮುಕ್ತ’ ಸಂವಾದವಾದಾಗಲೂ ನಾವು ಹೋಗುತ್ತಿರುವ ಊರಿನ ದೂರವನ್ನಾಧರಿಸಿ ಎಲ್ಲ ಕಲಾವಿದರೂ ಒಂದು ಅಥವಾ ಎರಡು ಬಸ್ ನಲ್ಲಿ ತೆರಳುತ್ತೇವೆ. ಆದರೆ ಮೊನ್ನೆ ಚಿತ್ರದುರ್ಗದಲ್ಲಿ ನಡೆದ ಸಂವಾದದ ಸಂದರ್ಭದಲ್ಲಿ ಸಂವಾದದ ಹಿಂದಿನ ದಿನ ಮಗನ ನಾಮಕರಣ ಕಾರ್ಯಕ್ರಮವಿದ್ದುದರಿಂದ ಎಲ್ಲರೊಡನೆ ಹೋಗಲಾಗಲಿಲ್ಲ. ಹೀಗಾಗಿ ಮಾರನೇ ದಿನ ಬೆಳಿಗ್ಗೆ ‘ಸುವರ್ಣ ಕರ್ನಾಟಕ ಸಾರಿಗೆ’ಯಲ್ಲಿ ಬೆಂಗಳೂರಿನಿಂದ ದುರ್ಗಕ್ಕೆ ಹೋಗುವ ಸುಯೋಗ ನನಗೊದಗಿಬಂತು.

ಮುಂಜಾನೆ ಏಳೂವರೆಗೆಲ್ಲ ದುರ್ಗದ ಬಸ್ ಹತ್ತಿಬಿಟ್ಟೆ. ಈಗಿತ್ತಲಾಗಿ ಸುವರ್ಣ ಸಾರಿಗೆಯಲ್ಲಿ ತುಂಬಾ ಕಂಫರ್ಟೇಬಲ್ ಆಗಿ ಸೀಟ್ ಸಿಗುತ್ತದೆ. ಕರ್ಚೀಫು, ಟವಲ್ ಹಾಕುವುದಾಗಲಿ, ಸೀಟ್ ಮೇಲೆ ಉಗುಳುವುದಾಗಲಿ ಮಾಡಿ ಸೀಟ್ ಹಿಡಿಯಬೇಕಾದ ಅಗತ್ಯವಿಲ್ಲ. ಹೀಗಾಗಿ ನನಗೂ ನನ್ನ ಪ್ರಿಯವಾದ ವಿಂಡೋ ಸೀಟ್ ಸಿಕ್ಕಿತು. ಕುಳಿತ ತಕ್ಷಣ ನಾನು ಐಪೋಡ್ ಮರೆತಿರುವುದು ಜ್ಞಾಪಕ್ಕೆ ಬಂತು. ಒಮ್ಮೆ ಬೇಜಾರಾದರೂ, ಮತ್ತೊಮ್ಮೆ ಬಸ್ ನಲ್ಲಿನ ಚಟುವಟಿಕೆಗಳನ್ನು, ಜನರ ಮಾತುಗಳನ್ನು ಗಮನಿಸಬಹುದೆಂದು ಸಮಾಧಾನಪಟ್ಟುಕೊಂಡೆ. ಆದರೆ ದುರ್ಗದಲ್ಲಿ ಇಳಿಯುವಾಗ ನನ್ನ ತಲೆಯೆಂಬ ತಲೆಯು, ಕೆಟ್ಟುಕೆರಹಿಡಿದು, ವಿಚಾರಗಳೆಲ್ಲ ಹೊಲಸುಮೇಲೋಗರವಾಗಿ, ದಿಮಿದಿಮಿ ಕುದಿಯುವ ಅಗ್ನಿಕುಂಡವಾಗಿ ಪರಿಣಮಿಸಿಬಿಟ್ಟಿತ್ತು. ಐಪೋಡ್ ತರದೇ ಹೋದುದಕ್ಕೆ ನನ್ನನ್ನು ನಾನು ಜೀವನ ಪೂರ್ತಿ ಕ್ಷಮಿಸಿಕೊಳ್ಳದ ಹಂತ ತಲುಪಿಬಿಟ್ಟಿದ್ದೆ. ದುರ್ಗದ ಲಾಜ್ ನಲ್ಲಿ ತಣ್ಣನೇ ನೀರು ಕುಡಿದಾಗಲೇ ರಕ್ತಕಣಗಳು ಶಾಂತವಾದವು. ಹೀಗೆಲ್ಲ ಆಗಲು ಕಾರಣವಾಗಿದ್ದು ಬಸ್ ನಲ್ಲಿ ನನ್ನ ಸೀಟ್ ಹಿಂಭಾಗದಲ್ಲಿ ಕುಳಿತ ಇಬ್ಬರು ಪ್ರಯಾಣಿಕರು.

ನವರಂಗೋ, ಪೀಣ್ಯದಲ್ಲೋ ಬಸ್ ಹತ್ತಿದ ಇವರು ಅಲ್ಲಿಂದಲೇ ಮಾತಿಗೆ ಶುರವಿಟ್ಟುಕೊಂಡರು. ಇಬ್ಬರೂ ಮಾತಿಗೆ ಶುರುವಿಟ್ಟುಕೊಂಡರು ಎಂಬುದಕ್ಕಿಂತ, ಒಬ್ಬ ಮಾತನಾಡುತ್ತಲೇ ಇದ್ದ, ಮತ್ತೊಬ್ಬ ಕೇಳುತ್ತಲೇ (?) ಇದ್ದ. ಹಾಗೇ ಮಾತನಾಡಿದ್ದರೆ ಏನೂ ತೊಂದರೆಯಿರಲಿಲ್ಲ. ಆದರೆ ಮಾತನಾಡುತ್ತಿದ್ದವನ ಪ್ರತಿ ನಾಲ್ಕನೆಯ ಅಥವಾ ಐದನೆಯ ಸೆಂಟೆನ್ಸ್ “ತಿಕ ಮುಚ್ಕೊಂಡು ಹೋಗ್ಬೇಕು” ಎಂಬುದಾಗಿತ್ತು. ಉದಾಹರಣೆಗೆ ಆತನ ಮಾತಿನ ಓಘ ಹೀಗಿತ್ತು.

ಉದಾಹರಣೆ -1 “ನಮ್ಮ ಹುಡುಗ ಒಬ್ನು ಜರ್ಮನಿಯಲ್ಲವ್ನೆ. ಅವನು ಯೋಳ್ತಾ ಇದ್ದ. ಅಲ್ಲೆಲ್ಲ ರಸ್ತೆ ಮೇಲೆ ಹಾರ್ನ್ ಹೊಡೆಯೋ ಹಾಗೇ ಇಲ್ವಂತೆ. ಮುಂದಿನವನು ನಿಧಾನವಾಗಿ ಹೋಗ್ತಾ ಇದ್ರೆ ಅವನ ಹಿಂದೆ ನಾವು ತಿಕ ಮುಚ್ಕೊಂಡು ವೋಯ್ತಾ ಇರಬೇಕು. ಹಾರ್ನ್ ಮಾಡಂಗೇ ಇಲ್ಲ. ಮಾಡಿದ್ರೆ ಪೈನ್ ಹಾಕ್ತಾರೆ ಪ್ರೋಲಿಸ್ರು…”

ಉದಾಹರಣೆ ಎರಡು – “ಜರ್ಮನಿಯಲ್ಲಿ ಎಲ್ಲ ಬೇಕಂದ್ರಲ್ಲಿ ಬಾರ್ ಇಲ್ಲ. ಎಲ್ಲಿ ಬೇಕಂದ್ರಲ್ಲಿ ಕುಡಿಯೋಅಂಗಿಲ್ಲ. ಕುಡಿಯಕ್ಕಂತಾನೇ ಒಂದು ಜಾಗ ಮಾಡಿದಾರೆ. ಅಲ್ಲ್ ವೋಗ್ಬೇಕು. ಬಾಟ್ಲಿ ತಗೋಬೇಕು. ಮನೆಗೆ ಹೋಗಿ ತಿಕ ಮುಚ್ಕೊಂಡು ಕುಡೀಬೇಕು”.

ಉದಾಹರಣೆ ಮೂರು – “ಮೊನ್ನೆ ಸೀನಪ್ಪ ಸಿಕ್ಕಿದ್ದ. ಎತ್ತು ಮಾರಿ ಟ್ರ್ಯಾಕ್ಟರ್ ತಗೋತಿವ್ನಿ ಅಂದ. ನಾ ಯೋಳ್ದೆ. ಎತ್ತ್ ಇದ್ರೆ ಭೂಮಿಗೆ ನಿಂಗೆ ಇಬ್ರಿಗೂ ಅನುಕೂಲ. ತಿಕ ಮುಚ್ಕೊಂಡು ಎತ್ತಿನ್ ಹಿಂದೆ ಹೆಜ್ಜೆ ಹಾಕೋದು ಕಲಿ ಅಂತ”

ಉದಾಹರಣೆ ನಾಲ್ಕು – “ಮೊಪೆಡ್ ಗೆ ಪೆಟ್ರೋಲ್ ಹಾಕಿಸ್ದೆ. ನೂರು ರೂಪಾಯಿಗೆ ಅಂತ ಹೇಳ್ದೆ. 99.85 ಪೈಸೆದು ಹಾಕ್ದ. ತಿಕ ಮುಚ್ಕೊಂಡು ನೂರು ರೂಪಾಯ್ದು ಹಾಕು ಅಂತ ಹೇಳ್ದೆ. ತಿಕ ಮುಚ್ಕೊಂಡು ಹಾಕ್ದ ನೋಡು”.

ಹೀಗೆ ಸಾಗಿತ್ತು ಆತಿನ ಮಾತಿನ ಪ್ರವಾಹ. ಸ್ವಲ್ಪ ಹೊತ್ತಾಗಿದ್ರೆ ಕೇಳ್ಬಹುದಾಗಿತ್ತು. ಆದರೆ ಯೋಚಿಸಿ. ಬೆಂಗಳೂರಿನಿಂದ ದುರ್ಗದವರೆಗೂ ಈ ರೀತಿಯ ಮಾತನ್ನು ಕೇಳುವುದು ಎಂತಹ ಖುಷಿಯ ಸಂಗತಿ ಎಂದು…ಹೀಗಾಗಿಯೇ ನನ್ನ ತಲೆ ಎಂಬುದು ಹೊಲಸುಮೇಲೋಗರವಾಗಿದ್ದು.

ಕೆಲ ದಿನಗಳ ಬಳಿಕ ನನ್ನ ಗೆಳೆಯನ ಹತ್ತಿರ ಈ ಘಟನೆಯನ್ನು ಹೇಳಿದೆ. ಅದಕ್ಕೆ ಆತ ಹೇಳಿದ್ದು “ಅಯ್ಯೋ ಆತನಿಗೆ ತಿಕ ಮುಚ್ಕೊಂಡು ಕೂತ್ಕೋ ಅಂತ ಹೇಳ್ಬಾರ್ದಾಗಿತ್ತಾ?”

ಭಗವಂತ ಪಿನ್ ಕೊಟ್ಟ ಸೇಫ್ಟಿಗಂತ….

4 Comments

female

ಮಹಿಳೆಯರು ಬಸ್ ಗಳಲ್ಲಿ ಒಂಟಿಯಾಗಿ ಪ್ರಯಾಣಿಸುವಾಗ ಅಂಗಚೇಷ್ಟೇ ಮಾಡಿ ಕಾಟ ಕೊಡುವ ಸಭ್ಯ ಪುರುಷರು ಎಲ್ಲಕಡೆಗೂ ಇರುವವರೇ. ರಾತ್ರಿ ಪ್ರಯಾಣಿಸುವಾಗಲಂತೂ ಇವರ ಕೈಯಲ್ಲಿ ಸಿಕ್ಕಿಹಾಕಿಕೊಂಡರೆ ಆ ಮಹಿಳೆಗಾಗುವ ದೈಹಿಕ, ಮಾನಸಿಕ ಕಿರುಕುಳವಂತೂ ಹೇಳತೀರದಷ್ಟು. ಸಾಮಾನ್ಯವಾಗಿ ಮಧ್ಯವಯಸ್ಸು ದಾಟುತ್ತಿರುವ ಪುರುಷರು ಇಂತಹ ದುಸ್ಸಾಹಸಕ್ಕೆ ಕೈಹಾಕುವುದು ಹೆಚ್ಚು. ಇಂತಹ ಪುರುಷನೊಬ್ಬನಿಂದ ಪಾರಾದ ನನ್ನ ಸಂಬಂಧಿಕಳೊಬ್ಬಳ ಅನುಭವ ಇಲ್ಲಿದೆ.

ಓವರ್ ಟು ನನ್ನ ಸಂಬಂಧಿಕಳು…..

ಮಂಗಳೂರಿನಿಂದ ಉಡುಪಿಗೆ ಹೊರಟಿದ್ದೆ. ಹೊರಡುವಾಗ ಖಾಲಿಯೇ ಇದ್ದ ಬಸ್, ಸ್ಟಾಪ್ ಗಳು ಕಳೆದಂತೆಲ್ಲ ಜನರಿಂದ ತುಂಬತೊಡಗಿತು. ಇಬ್ಬರು ಕೂರುವ ಸೀಟ್ ನಲ್ಲಿ ನಾನು ಕುಳಿತಿದ್ದೆ. ನನ್ನ ಪಕ್ಕದಲ್ಲಿ ಸುಮಾರು 45 ವಯಸ್ಸಿನ ವ್ಯಕ್ತಿಯೊಬ್ಬ ಬಂದು ಕುಳಿತ. ಸ್ಪಲ್ಪ ಸಮಯ ಕಳೆದಿರಬೇಕು. ಆತ ನಿದ್ದೆಗೆ ಜಾರಿದ. ನಾನು ಕಿಟಕಿಯಿಂದ ಆಚೆ ನೋಡುತ್ತ ಕುಳಿತಿದ್ದೆ. ನಿಧಾನವಾಗಿ ಆತನ ತಲೆ ನನ್ನ ಭುಜದ ಮೇಲೆ ವಾಲಲಾರಂಭಿಸಿತು. ನನಗಿಂತ ತುಂಬ ಹಿರಿಯನಾದ್ದರಿಂದ ಹಾಗೂ ತುಂಬ ಸಭ್ಯನಂತೆ ಕಾಣುತ್ತಿದ್ದುದರಿಂದ ನಾನೂ ಸುಮ್ಮನಿದ್ದೆ. ಆದರೆ ನಂತರ ಈ ವಾಲಿಕೆ ತುಸು ಅತೀ ಎನ್ನಿಸುವಷ್ಟು ಹೆಚ್ಚಾಯಿತು. ಕೈಯಿಂದ ಆತನ ತಲೆಯನ್ನು ಸರಿಸಿದೆ. ಸ್ಪಲ್ಪ ಸಮಯ ಸರಿಯಾಗಿದ್ದ ಆತನ ತಲೆ ಮತ್ತೆ ನನ್ನ ಭುಜದ ಮೇಲೆ ವಾಲಿತು. ಈ ಬಾರಿ ಆತನ ದೇಹ ಕೂಡ ಸ್ವಲ್ಪ ವಾಲತೊಡಗಿತ್ತು. ನನಗೆ ಕಿರಿಕಿರಿ ಆಗಲಾರಂಭಿಸಿತು. ಎತ್ತಲೋ ನೋಡುತ್ತಿದ್ದ ನಾನು ಆತನ ಕಡೆ ಛಕ್ಕನೆ ತಿರುಗಿದಾಗ ಆಸಾಮಿ ವಾರೆಗಣ್ಣಿನಿಂದ ನನ್ನನ್ನು ನೋಡುತ್ತಿರುವುದು ಗಮನಕ್ಕೆ ಬಂತು. ಓಹೋ ಇದು ಸಾಮಾನ್ಯವಾದ ನಿದ್ದೆಯಲ್ಲ ಎಂದು ಫಕ್ಕನೆ ಹೊಳೆಯಿತು. ಈ ಬಾರಿ ಸ್ಪಲ್ಪ ರಫ್ ಆಗಿಯೇ ಆತನ ತಲೆ ಸರಿಸಿದೆ. ನಿದ್ದೆಯಿಂದ ಎದ್ದವರಂತೆ ನಟಿಸುತ್ತ ನನಗೆ ಬಸ್ ನಲ್ಲಿ ಮಲಗಿ ಪ್ರಯಾಣಿಸುವುದೇ ಅಭ್ಯಾಸ ಎಂದು ಭಾರೀ ಸಾಭ್ಯಸ್ತನಂತೆ ಪೋಸು ಕೊಡುತ್ತ ಮತ್ತೆ ತಲೆ ವಾಲಿಸಲಾರಂಭಿಸಿದ.

ಆಸಾಮಿಗೆ ಚಿಕಿತ್ಸೆ ಅನಿವಾರ್ಯವಾಗಿತ್ತು. ಬಳೆಗಳಿಗೆ ಸಿಕ್ಕಿಸಿಕೊಂಡಿದ್ದ ಸೇಫ್ಟಿ ಪಿನ್ ತೆಗೆದೆ. ನಿಧಾನವಾಗಿ ನನ್ನ ಭುಜದ ಬಳಿ ಹಿಡಿದೆ. ಇದನ್ನು ಗಮನಿಸದ ಆತ ಟರ್ನಿಂಗ್ ಒಂದರಲ್ಲಿ ತುಸು ಜೋರಾಗಿಯೇ ತಲೆ ವಾಲಿಸಿದ. ಕಿವಿಯ ಪಕ್ಕ ಕಚಕ್ ಎಂದು ಚುಚ್ಚಿತು ನೋಡಿ…ಪಿನ್ನು, ಕೈಯಿಂದ ನೀವಿಕೊಳ್ಳುತ್ತ ಸಿಟ್ಟಿನಿಂದ “ಇದೇನಮ್ಮ ಮಾಡುತ್ತೀದ್ದೀಯಾ?” ಎಂದು ಕೇಳಿದ.

“ನನಗೆ ಬಸ್ ನಲ್ಲಿ ಹೀಗೆ ಪಿನ್ ಹಿಡಿದುಕೊಂಡೇ ಪ್ರಯಾಣಿಸುವುದು ಅಭ್ಯಾಸ” ಎಂದೆ. ಮುಂದೆ ಆತನ ತಲೆ ನನ್ನ ಭುಜದ ಮೇಲೆ ವಾಲುವುದಿರಲಿ, ಆತ ನಿದ್ದೆ ಮಾಡಿದ್ದರೆ ಕೇಳಿ

“ನಿಮ್ಮ ಪ್ರಯಾಣ ಸುಖಕರವಾಗಿರಲಿ” – ಮಾಜಿ ಸಚಿವ.

Leave a comment

balu

ಒಂದೇ ನಂಬರ್ ಪ್ಲೇಟ್ ನಲ್ಲಿ ಎರಡು ಬಸ್ಸುಗಳು, ಪ್ರಯಾಣಿಕರಿಗಿಂತ ಸರಕಿಗೇ ಪ್ರಾಧಾನ್ಯ, ಟಿಕೆಟ್ ಬುಕ್ ಮಾಡುವಾಗ ರಾಜಮರ್ಯಾದೆ ಪ್ರಯಾಣದ ಸಂದರ್ಭದಲ್ಲಿ ಅವಮರ್ಯಾದೆ ಇತ್ಯಾದಿ ಮಾಜಿ ಸಚಿವರೊಬ್ಬರ ಮಾಲೀಕತ್ವದ ಬಸ್ ನ ವಿಶೇಷತೆಗಳು. ರಾಜಕೀಯ ಹಾಕ್ಯಾಟದಲ್ಲಿ ಮಾಜಿ ಮುಖ್ಯಮಂತ್ರಿಯೊಬ್ಬರು ತಮ್ಮ ಬೆಂಬಲಿಗ ಶಾಸಕರನ್ನು ಕರೆದುಕೊಂಡು ರಿಸಾರ್ಟ್ ನಿಂದ ರಾಜಭವನಕ್ಕೂ, ರಾಜಭವನದಿಂದ ರಿಸಾರ್ಟ್ ಗೂ, ಅಲ್ಲಿಂದ ಹೋಟೆಲ್ ಗೂ ಹೀಗೆ ದಿಕ್ಕು ದೆಸೆ ಇಲ್ಲದೆ ತಿರುಗುತ್ತಿದ್ದ ಸಂದರ್ಭದಲ್ಲಿ ಶಾಸಕರಿದ್ದ ಬಸ್ಸಿಗೆ ಚಾಲಕನಾಗಿದ್ದವನೇ ಈ ಮಾಜಿ ಸಚಿವ.

ಇಂತಹ ಶ್ರೇಷ್ಠ ಪರಂಪರೆ, ಸಂಸ್ಕೃತಿ ಹೊಂದಿರುವ ಬಸ್ ನಲ್ಲಿ ಪ್ರಯಾಣಿಸಿದ ಅನುಭವ,ನಾನೆಂದೂ ಮರೆಯಲಾರೆ.

ಹೈದ್ರಾಬಾದ್ ನಿಂದ ಬೆಂಗಳೂರಿಗೆ ಬರುತ್ತಿದ್ದ ಸಂದರ್ಭ. ಎಚ್ ಆರ್ ಡಿಪಾರ್ಟಮೆಂಟಿಗೆ ಟಿಕೆಟ್ ಬುಕ್ ಮಾಡುವಂತೆ ಹೇಳಿದ್ದೇ ಪ್ರಮಾದವಾಯಿತು. ಅವರು ಬುಕ್ ಮಾಡಿದ್ದು ಇದೇ ಮಾಜಿ ಸಚಿವರ ‘ರಾಷ್ಟ್ರೀಯ ಟ್ರಾವೆಲ್ಸ್’ ಬಸ್ಸನ್ನು. ಟ್ರಾವೆಲ್ ಏಜೆಂಟ್ ನ ಆಫೀಸ್ ಗೆ ಹೋದ ಕೆಲವೇ ನಿಮಿಷಗಳಲ್ಲಿ ಹೈದ್ರಾಬಾದಿ ಉರ್ದುವಿನಲ್ಲಿ ಮಾತನಾಡುತ್ತಿದ್ದ ಪರಮ ಕೊಳಕು ಅಂಗಿ ಹಾಗೂ ಜೀನ್ಸ್ ಪ್ಯಾಂಟ್ ಧರಿಸಿ, ತಲೆಗೆ ಅಷ್ಟೇ ಕೊಳಕಾದ ಕರವಸ್ತ್ರವನ್ನು ವಿಚಿತ್ರವಾಗಿ ಕಟ್ಟಿಕೊಂಡಿದ್ದ ಸುಮಾರು 18 – 19 ರ ಹುಡುಗ ಪ್ರಯಾಣಿಕರನ್ನು (ಬಲಿಪಶುಗಳನ್ನು) “ಚಲೋ ಚಲೋ” ಎಂದು ಖಾಸಗಿ ಬಸ್ ನಿಲ್ದಾಣಕ್ಕೆ (ವಧಾ ಸ್ಥಾನಕ್ಕೆ…) ಕರೆದೊಯ್ಯಲು ಲಡಕಾಟಿ ಮೆಟಾಡೋರ್ ಒಂದರಲ್ಲಿ ಹತ್ತಿಸಿದ. ನಾವು ಹತ್ತಿ ಕುಳಿತ ತತಕ್ಷಣ ಮೆಟಾಡೋರ್ ಇಂಜಿನ್ ಮುನಿಸಿಕೊಂಡಿತು. ಲೇಡಿಸ್ ಬಿಟ್ಟು ಉಳಿದವರೆಲ್ಲ ಇಳಿದು ಮೆಟಾಡೋರ್ ನೂಕಿ ಎಂದು ಆ ಹುಡುಗ ಆದೇಶ ಮಾಡಲಾಗಿ, ಪ್ರಯಾಣಿಕರೆಲ್ಲ ಇಳಿದು ಗಾಡಿಯನ್ನು ನೂಕಿ ಇಂಜಿನನ್ನು ಸಂಪ್ರೀತಗೊಳಿಸಿದರು. ಮಾರುತಿ ಓಮ್ನಿಯಲ್ಲಿ ಶಾಲಾಮಕ್ಕಳನ್ನು ತುಂಬಿದ್ದಕ್ಕಿಂತಲೂ ಭಯಂಕರವಾಗಿ ನಮ್ಮನ್ನು ಆ ಮೆಟಾಡೋರ್ ನಲ್ಲಿ ತುಂಬಿಕೊಂಡು ಹೈದ್ರಾಬಾದ್ ನ ಚಿಕ್ಕಗಲ್ಲಿಗಳಲ್ಲಿ ರಭಸದಿಂದ ಕರೆದುಕೊಂಡು ಹೋದ ಹುಡುಗ ಅಂತೂ ಇಂತೂ ಪುರಾತನ ಕಾಲದ ಪಳಿಯುಳಿಕೆಯಂತಿದ್ದ ಬಸ್ ಹತ್ತಿರ ಮೆಟಾಡೋರ್ ನಿಲ್ಲಿಸಿದ. “8.30 ಶಾರ್ಪ್ ಪಿಕ್ ಅಪ್” ಎಂದು ಹೇಳಿದ್ದ ಎಚ್ ಆರ್ ಡಿಪಾರ್ಟಮೆಂಟ್ ನ ಸಿಬ್ಬಂದಿ ಮೇಲೆ ಕೋಪ ಬಂತು. ಕಾರಣ, ರಾಷ್ಟ್ರೀಯ ಟ್ರಾವೆಲ್ಸ್ ಬಸ್ ಬಳಿ ಬಂದಾಗ ಗಂಟೆ 10 ಆಗಿತ್ತು. ಅಷ್ಟೇ ಅಲ್ಲ ಈಗಲೋ ಆಗಲೋ ಎಂದು ಕೊನೆಯುಸಿರೆಳೆಯಲು ಕಾಯುತ್ತಿದ್ದ ಆ ಬಸ್ ಮೇಲೆ ಅಷ್ಟೇ ಎತ್ತರವಾಗಿ ಸಾಮಾನುಗಳನ್ನು ಹಾಕಿ ಕಟ್ಟಲಾಗುತ್ತಿತ್ತು.

ಈ ಮಧ್ಯೆ ಬೆಂಗಳೂರಿಗೆ ಎಂದು ಕರೆದುಕೊಂಡು ಬಂದಿದ್ದು, ಕೇವಲ ನಾಲ್ಕೈದು ಪ್ರಯಾಣಿಕರನ್ನು. ನನಗೋ ಅನುಮಾನ ಆರಂಭವಾಯಿತು. ಆದರೂ ನಮ್ಮನ್ನು  ಕೂರಿಸಿಕೊಂಡು ಬಸ್ ಅಂತೂ ಇಂತೂ ರಾತ್ರಿ 12 ಗಂಟೆಗೆ ಹೈದ್ರಾಬಾದ್ ನಿಂದ ಹೊರಟಾಗ ನಿಟ್ಟುಸಿರುಬಿಟ್ಟೆವು. ಕೇವಲ ನಾಲ್ಕೈದು ಪ್ರಯಾಣಿಕರಿದ್ದರೂ ಕರೆದುಕೊಂಡು ಹೋಗುತ್ತಿದ್ದಾನಲ್ಲ ಎಂದು. ಇನ್ನೇನು ಸವಿನಿದ್ದೆಗೆ ಜಾರಬೇಕು ಎನ್ನುವಷ್ಟರಲ್ಲಿ, ಕೆಲ ಕಿಲೋಮೀಟರ್ ಗಳಷ್ಟು ದೂರ ತೆರಳಿದ್ದ ಬಸ್ ‘ಅಡ್ಡದಾರಿ’ ಹಿಡಿಯಿತು. ಅಡ್ಡದಾರಿಯಲ್ಲಿ ಸುತ್ತಿಸುತ್ತಿ, ನಮ್ಮನ್ನೆಲ್ಲ ಎತ್ತಿಹಾಕಿ, ಭಾರೀ ವಿದ್ಯುತ್ ದೀಪಗಳಿಂದ ಜಗಮಗಿಸುತ್ತಿದ್ದ ಯಾವುದೋ ಪ್ರದೇಶಕ್ಕೆ ಬಸ್ ಬಂದು ನಿಂತಿತು. ನಿದ್ದಗಣ್ಣಿನಿಂದ ಎಚ್ಚೆತ್ತಾಗ ಗೊತ್ತಾಗಿದ್ದು ಅದು, ಹೈದ್ರಾಬಾದ್ ನ ರಾಜೀವ್ ಗಾಂಧಿ ಇಂಟರ್ ನ್ಯಾಷನಲ್ ಏರ್ ಪೋರ್ಟ್ ಎಂದು. ಇದೇನಪ್ಪ ನಾವೆಲ್ಲರೂ ಬಸ್ಸಿನಲ್ಲಿ ಬೆಂಗಳೂರು ಹೋಗಲು ಬಯಸಿದ್ದು, ಇವ ಮಾತ್ರ ನಮ್ಮನ್ನು ‘ಏರೋಪ್ಲೇನ್’ ಹತ್ತಿಸಲು ಹೊರಟಹಾಗಿದೆಯಲ್ಲ ಎಂದು ಕೊಳ್ಳುವಷ್ಟರಲ್ಲಿ, ಮಿಕಿಮಿಕಿ ನೋಡುತ್ತ ಕುಳಿತಿದ್ದ ನಮ್ಮನ್ನು ಅದೇ ಮೆಟಾಡೋರ್ ಹುಡುಗ, “ಝರಾ ಉತರೋ ಭಯ್, ಬಸ್ಕು ಲೇಕ್ ಜಾಕ್ ಆರ್ಟಿಓ ಕೆ ಪಾಸ್ ದಿಕ್ಲಾನಾ ಹೈ” ಎಂದವನೇ ನಮ್ಮನ್ನು ಕೆಳಗಿಳಿಸಿದ. ಬಸ್ ನ ಚಕ್ರಧಾರಿ ಬಸ್ ಸಹಿತ ಕತ್ತಲೆಯಲ್ಲಿ ಮಾಯವಾದ. ಅರ್ಧಗಂಟೆಯಾದರೂ ಬಸ್ ಬರದಿದ್ದಾಗ, ನನಗೆ ಆಂತಕವಾಯಿತು. ಲಾಪ್ ಟಾಪ್ ಸೇರಿದೆಂತ ಸಾವಿರಾರೂ ರೂಪಾಯಿ ಮೌಲ್ಯದ ಆಫೀಸಿನ ಇಲೆಕ್ರ್ಟಾನಿಕ್ ಉಪಕರಗಳನ್ನು ನಾನು ಬೆಂಗಳೂರಿಗೆ ತರುತ್ತಿದ್ದೆ. ಅವೆಲ್ಲ ಬಸ್ ನಲ್ಲೇ ಇದ್ದವು. ರಾಷ್ಟ್ರೀಯ ಟ್ರಾವೆಲ್ಸ್ ಹುಡುಗ ಮಾತ್ರ ಸೆಕೆಂಡಿಗೆ ಒಂದರಂತೆ ಗುಟ್ಕಾ ಉಗುಳುತ್ತ ಕುಳಿತಿದ್ದ. ಬಸ್ ಎಲ್ಲಿ ಹೋಗಿದೆ, ಯಾವಾಗ ಬರುತ್ತದೆ ಎಂಬೆಲ್ಲ ನಮ್ಮ ಪ್ರಶ್ನೆಗಳಿಗೆ “ಆತಾಯ್ ಆತಾಯ್” ಎನ್ನುತ್ತಿದ್ದ.  ಅಂತೂ ಇಂದು ಸುಮಾರು ಒಂದು ಗಂಟೆ ಕಾದ ಬಳಿಕ, ಬಸ್ ಬಂದಿತು. ಆಗ ನೋಡಿದ್ದೇನು, ಕೇವಲ ನಾಲ್ಕೈದು ಸೀಟು ಬಿಟ್ಟು, ಉಳಿದ ಎಲ್ಲ ಸೀಟುಗಳಲ್ಲಿ ಇಂಟರ್ ನ್ಯಾಷನಲ್ ಏರಪೋರ್ಟ್ ನಲ್ಲಿನ ಕೂಲಿ ಕಾರ್ಮಿಕರು ತುಂಬಿಕೊಂಡಿದ್ದರು. ಅವರೆಲ್ಲ ಹೈದ್ರಾಬಾದ್ ಏರ್ ಪೋರ್ಟ್ ನ ಕೆಲಸ ಮುಗಿಸಿ ಬೆಂಗಳೂರು ಏರ್ ಪೋರ್ಟ್ ನ ಕೆಲಸಕ್ಕೆ ನಗರಕ್ಕೆ ಬರುತ್ತಿದ್ದರು. ಪಾಪ…ಬಹುಶಃ ಅವರೆಲ್ಲ ಸ್ನಾನ ಮಾಡದೇ ಎಷ್ಟು ದಿನಗಳಾಗಿದ್ದವೋ ಏನೋ, ಮೊದಲೇ ನಾರುತ್ತಿದ್ದ ಬಸ್ ಈಗ ಗಬ್ಬು ನಾತದಿಂದ ತುಂಬಿಹೋಗಿತ್ತು. ಅಂತೂ ಇಂತೂ ನಾತಬ್ರಹ್ಮರನ್ನು ಸಹಿಸಿಕೊಂಡು ನಿದ್ದೆಗೆ ಜಾರಿ ಬೆಳಿಗ್ಗೆ ಎದ್ದಾಗ ಬಸ್ ಹೋಟೆಲ್ ಒಂದರ ಮುಂದೆ ನಿಂತಿತ್ತು. ಬೇರೆ ಬಸ್ ಗಳಲ್ಲಾದರೆ ಮುಂಜಾನೆ ಏಳುವ ಹೊತ್ತಿಗೆ, ಮೊಬೈಲ್ ಕರ್ನಾಟಕದ ಸಿಗ್ನಲ್ ತೋರಿಸುತ್ತಿತ್ತು. ಆದರೆ ಏಕೋ ಏನೋ ಈ ಹೋಟೆಲ್ ಬಳಿ ನಿಂತು ಕರ್ನಾಟಕದ ಗೆಳೆಯನಿಗೆ ಫೋನ್ ಮಾಡಿದರೆ, “ಮೀರು ಪ್ರಯತ್ನಿಂಚಾಲು ನಂಬರ್ ಬಿಝಿ ಉಂದಿ, ದೈಚೇಸಿ…”ಎಂದೇನೋ ನುಲಿಯತೊಡಗಿತು. ಸರಿ ಅರ್ಧಗಂಟೆ ಕಾಫಿ, ಟೀ, ಸಿಗರೇಟ್, ಗುಟ್ಕಾ ಸಮಾರಾಧನೆಯ ಬಳಿಕ ಬಸ್ ಹೊರಟಿತು. ಬೆಳಿಗೆ 11 ಗಂಟೆಯಾಗುತ್ತ ಬಂದಿದ್ದರೂ, ಬೆಂಗಳೂರು ಹೋಗಲಿ ಚಿಕ್ಕಬಳ್ಳಾಪುರ, ದೇವನಹಳ್ಳಿ ಕೂಡ ಹತ್ತಿರ ಸುಳಿಯಲಿಲ್ಲ. 12 ಗಂಟೆಗೆ ಮತ್ತೆ ರಾಷ್ಟ್ರೀಯ ಟ್ರಾವೆಲ್ಸ್ ಊಟಕ್ಕಾಗಿ ನಿಂತಿತು. ಒಳಗಿದ್ದ ಕೂಲಿ ಕಾರ್ಮಿಕರೆಲ್ಲ ಕೆಳಗಿಳಿದು, ಹಲ್ಲು-ಮುಖ-…ಕ ಇತ್ಯಾದಿಗಳೆನ್ನಲ್ಲ ತೊಳೆದುಕೊಂಡು ಊಟಮಾಡಿ, ವಿಶ್ರಾಂತಿ ಪಡೆದರು. ಕೊನೆಗೆ ದೇವನಹಳ್ಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಂದಾಗ, ಈ ಎಲ್ಲ ಕಾರ್ಮಿಕರು ಬೆಂಗಳೂರು ನೆಲದ ಮೇಲೆ ಪಾದಾರ್ಪಣೆ ಮಾಡಿದರು. ಬಸ್ ಬೆಂಗಳೂರಿಗೆ ಬರುತ್ತಿದ್ದಂತೆ, ಸಾರಥಿಗೆ ರಸ್ತೆಯ ಗೊಂದಲ ಆರಂಭವಾಯಿತು. ಮಲ್ಲೇಶ್ವರಂ ಎರಡು ಮೂರು ಸುತ್ತಿದರೂ ಮೆಜಿಸ್ಟಿಕ್ಕಿನ ರಸ್ತೆ ಕಂಡು ಹಿಡಿಯಲು ಸಾಧ್ಯವಾಗದ ಸಾರಥಿ ಮೇಲೆ ರೇಗಿ ಸಹಸ್ರನಾಮಾರ್ಚನೆ ಮಾಡಿ ನನ್ನ ಸಕಲ ಉಪಕರಣಗೊಂದಿಗೆ ಇಳಿದಾಗ, ಗಂಟೆ ಮೂರಾಗಿತ್ತು. ಹೇಗಿದೆ ಮಾಜಿ ಸಚಿವರ ರಾಷ್ಟ್ರೀಯ ಟ್ರಾವೆಲ್ಸ್….

ಸ್ಟೆಪ್ನಿ – ಬಸ್ ಸಂಸ್ಥೆಯನ್ನೇ ಸರಿಯಾಗಿ ನೋಡಿಕೊಳ್ಳಲು ಬಾರದ ಮಾಜಿ ಸಚಿವರು ತಮ್ಮ ಇಲಾಖೆಯನ್ನು ‘ಕ್ಯಾ ಖಾಕ್’ ನೋಡಿಕೊಂಡಾರೆ…

Follow

Get every new post delivered to your Inbox.

Join 2,049 other followers

%d bloggers like this: