
ಡಾ. ರಾಜ್ ನಿಧನರಾಗಿ ಒಂದು ವರ್ಷವಾಗಿತ್ತು. ಮೊದಲ ಪುಣ್ಯತಿಥಿಯ ಮುನ್ನಾದಿನ ಕರ್ಟನ್ ರೇಸರ್ ಸ್ಟೋರಿ ಮಾಡಲು ರಾಜ್ ಸಮಾಧಿಗೆ ತೆರಳಿದ್ದೆ. ಸಮಾಧಿಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಯತಿರಾಜ್ ಎಂದಿನಂತೆ ರಾಜ್ಯದ ವಿವಿಧ ಕಡೆಗಳಿಂದ ಬರುತ್ತಿರುವ ಜನತೆ, ಅಂಕಿ-ಸಂಖ್ಯೆ, ಸಮಾಧಿಗೆ ಇನ್ನೂ ಅಗತ್ಯವಿರುವ ಮೂಲಭೂತ ಸೌಕರ್ಯಗಳು ಇತ್ಯಾದಿಗಳ ಬಗ್ಗೆ ಮಾಹಿತಿ ನೀಡುತ್ತಿದ್ದರು. ಹೀಗೆ ಮಾತನಾಡುತ್ತ ಯತಿರಾಜ್, “ಸುಘೋಷ್, ಕಳೆದ ಒಂದು ತಿಂಗಳ ಹಿಂದೆ ಕೋಲಾರದಿಂದ ಒಬ್ಬ ಮನುಷ್ಯ ಬಂದಿದ್ದಾನೆ. ಹಳದಿ-ಕೆಂಪು ಬಣ್ಣದ ಸೈಕಲ್ ತುಳಿಯುತ್ತ ಇಲ್ಲೇ ಸಮಾಧಿಯ ಬಳಿಯೇ ಸುತ್ತಾಡುತ್ತಿರುತ್ತಾನೆ. ಡಾ. ರಾಜ್ ಅಭಿಮಾನಿಯಂತೆ. ಅವರ ಎಲ್ಲ ಚಿತ್ರಗಳನ್ನೂ ನೋಡಿದ್ದಾನಂತೆ. ಆದರೆ ಅವರು ತೀರಿಕೊಂಡಾಗಿನಿಂದ ಮನಸ್ಸಿಗೆ ತೀರ ನೋವಾಗಿ ಅದರಿಂದ ಹೊರಬರಲಾರದೆ ಮೌನವೃತ ಕೈಗೊಂಡಿದ್ದಾನಂತೆ. ಹೀಗೆ ಮೌನವೃತ ಕೈಗೊಳ್ಳುವದರ ಬದಲು ಅಣ್ಣಾವ್ರ ನೆನಪಿನಲ್ಲಿ ಸಮಾಜಕ್ಕೆ ಉಪಯೋಗವಾಗುವಂತಹದ್ದೇನಾದರೂ ಮಾಡು ಎಂದರೆ ಕೇಳಲೊಲ್ಲ. ಅವನ ಮೇಲೆ ಸ್ಟೋರಿ ಮಾಡಬಹುದು” ಎಂದರು. ಎಲಾ..ಎಲಾ…ಡಾ. ರಾಜ್ ತೀರಿಕೊಂಡಿದ್ದಕ್ಕೆ ಈ ಪಾರ್ಟಿ ಮೌನವೃತ ಮಾಡುತ್ತಿದ್ದಾನಲ್ಲ. ‘ಒಳ್ಳೆ’ ಸ್ಟೋರಿ ಮಾಡಬೇಕು ಎಂದುಕೊಂಡು ಆತನನ್ನು ಕರೆಸಿದೆ. ಕ್ಯಾಮೆರಾಮನ್ ಗೆ ಸ್ಟೋರಿ ಬ್ರೀಫ್ ಮಾಡಿ ಆತ ಸಮಾಧಿಯ ಬಳಿ ಸೈಕಲ್ ನಡೆಸುವುದು, ನಡೆದುಕೊಂಡು ಬರುವುದು, ಸಮಾಧಿ ಬಳಿ ಅಣ್ಣಾವ್ರ ಭಾವಚಿತ್ರವನ್ನು ನೋಡುತ್ತ ಜೋಲು ಮುಖ ಹಾಕಿಕೊಂಡು ಕುಳಿತಿರುವುದು ಹೀಗೆ ಹಲವು ಶಾಟ್ ಗಳನ್ನು ತೆಗೆಸಿಕೊಂಡೆ. ಸರಿ ಬೈಟ್ ಗಾಗಿ ನಿಂತುಕೊಂಡಾಗಲೇ ಸಮಸ್ಯೆಯಾಗಿದ್ದು. ಪಾರ್ಟಿ ಮೌನವೃತಧಾರಿ. ಹಾಗಾದರೆ ಬೈಟ್ ಹೇಗೆ ತೆಗೆಯುವುದು. ಇದಕ್ಕೆ ಮತ್ತೆ ಯತಿರಾಜನೇ ಮಧ್ಯಸ್ಥಿಕೆ ವಹಿಸಿದ. ಆತನನ್ನೂ, ಯತಿರಾಜ್ ನನ್ನು ನಿಲ್ಲಿಸಿ ಡಬಲ್ ಫ್ರೇಮ್ ಇಡಲು ಹೇಳಿದೆ. ನಾನು ಪ್ರಶ್ನೆ ಕೇಳುವುದು, ಮೌನವೃತಧಾರಿ ಕೈಸನ್ನೆ, ಬಾಯಿ ಸನ್ನೆ ಮಾಡುವುದು, ಯತಿರಾಜ್ ಅದನ್ನು ಅರ್ಥಮಾಡಿಕೊಂಡು ಮಾತನಾಡುವುದು ಹೀಗೆ ಸಾಗಿತ್ತು ನಮ್ಮ ಬೈಟ್ ನ ವೈಖರಿ. ನಾನು ಕೇಳಿದ್ದಕ್ಕೆ ಆ ಪಾರ್ಟಿ ಏನೇನೋ ಕೈಸನ್ನೆ ಮಾಡುತ್ತಿದ್ದ. ಅದು ಯತಿರಾಜನಿಗೂ ಎಷ್ಟು ಅರ್ಥವಾಗುತ್ತಿತ್ತೋ ಗೊತ್ತಿಲ್ಲ. ಆತನಿಗೆ ಅರ್ಥವಾಗಿದ್ದನ್ನು ಆತ ಬಂದಷ್ಟು ಹೇಳುತ್ತಿದ್ದ. ಈ ತಮಾಷೆ ನೋಡುತ್ತಿದ್ದ ಜನ ಸುತ್ತಲೂ ಜಮಾಯಿಸಿದ್ದರು. ನಂತರ ಅದ್ಯಾಕೋ ಆಸಾಮಿಗೆ ಕ್ಯಾಮೆರ ಮುಂದೆ ಹೀಗೆಲ್ಲ ಮಾಡುವುದು ತೀರ ಬೇಜಾರು ಎನಿಸಿರಬೇಕು. ಒಂದು ಸಂದರ್ಭದಲ್ಲಿ ತಾನು ಮಾಡಿದ ಕೈಸನ್ನೆಯನ್ನು ಯತಿ, ಸರಿಯಾಗಿ ಇಂಟಪ್ರಿಟ್ ಮಾಡುತ್ತಿಲ್ಲ ಎಂದು ಬೇಸರಿಸಿ ಧಡಾರ್ ಎಂದು ಮಾತನಾಡಲು ಆರಂಭಿಸಿಬಿಟ್ಟ. ಹ್ಹೆ..ಹ್ಹೆ..ಹ್ಹೆ….ಎಂದು ಮೊದಲು ನನ್ನ ಕ್ಯಾಮರಾಮನ್ ನಗಲಾರಂಭಿಸುತ್ತಿದ್ದಂತೆ ಸುತ್ತಲಿದ್ದ ಜನ ಹೋ…ಎಂದು ಕಿರುಚಿದರು. ನನಗೆ ಏನೂ ಮಾಡಲು ತೋಚದೆ, ರಾಜ್ ಅಭಿಮಾನಿ ಮೌನವೃತಧಾರಿಯಾದ ಸ್ಟೋರಿಗೆ ಎಳ್ಳು ನೀರು ಬಿಟ್ಟು ಕಾರ್ ಏರಿದೆ. ಅಣ್ಣಾವ್ರ ಹೆಸರಿನಲ್ಲಿ ಏನೆನೆಲ್ಲ ಮಾಡುತ್ತಾರೆ ಅಲ್ವಾ?












ಚಿಠ್ಠೀ ಆಯೀ ಹೈ…