ಇವರನ್ನು ಅಭಿಮಾನಿಗಳೆಂದು ಯಾಕಾದರೂ ಕರೆಯಬೇಕು?

ಫೋಟೋ ಕೃಪೆ – ವಿಜಯ ಕರ್ನಾಟಕ.

ರಾಜಕುಮಾರ್ ನಿಧನಾರಾದಾಗ ನಡೆದ ರೀತಿಯ ಘಟನೆಗಳೇ ಮತ್ತೆ ವಿಷ್ಣು ಸಾವಿನ ಸಂದರ್ಭದಲ್ಲಿ ನಡೆದಿವೆ. ಯಾರೂ ಪ್ರಾಣಕಳೆದುಕೊಂಡಿಲ್ಲ ಎಂಬುದೊಂದು ಮಾತ್ರ ಸಮಾಧಾನ. ಆದರೆ ಆಸ್ತಿಪಾಸ್ತಿ ಹಾನಿ ಯಾರಪ್ಪನ ಹೊಣೆ? ನಿಜವಾದ ಅಭಿಮಾನಿಗಳು ಹೀಗೆ ಮಾಡಲು ಸಾಧ್ಯವೆ? ರಜೆ ಸಿಕ್ಕ ಕೂಡಲೇ ಸಿಕ್ಕಾಪಟ್ಟೆ ಕುಡಿದು ತೂರಾಡುತ್ತ ಅಸಹ್ಯವಾಗಿ ಕಿರುಚಾಡುತ್ತ ಅಂಗಡಿಗಳಿಗೆ ಕಲ್ಲು ಹೊಡೆಯುವ ಇವರು, ಈಗ ಮಾಡಿರುವುದು ರಾಜ್ಯದ ಅಪಮಾನ.

ಹಿಂದಿನ ಕಾಲದ ಲೆಟರ್ ಗಳು

1970 ನೇ ಇಸವಿಯಲ್ಲಿ ಅಂದರೆ ಸುಮಾರು 40 ವರ್ಷಗಳ ಹಿಂದೆ ನನ್ನ ಅಜ್ಜ, ನನ್ನಮ್ಮನಿಗೆ ಬರೆದ ಪತ್ರ ಇಲ್ಲಿದೆ. ಆ ಕಾಲದ ಅಕ್ಷರ, ಭಾಷೆ, ಎಲ್ಲವೂ ನಿಖರ – ನಿಖರ.

ಅಂದಕಾಲತ್ತಿಲ್ ಬೆಂಕಿಪೊಟ್ಟಣಗಳನ್ನು ನೋಡಿದ್ದೀರಾ?

ಮಿಡ್ಲ್ ಸ್ಕೂಲ್ ಹಾಗೂ ಹೈಸ್ಕೂಲ್ ನಲ್ಲಿರುವಾಗ ಬೆಂಕಿಪೊಟ್ಟಣಗಳನ್ನು ಸಂಗ್ರಹಿಸುವ ಹವ್ಯಾಸವಿತ್ತು. ಸುಮಾರು 1000 ಬೆಂಕಿಪೊಟ್ಟಣಗಳನ್ನು ಸಂಗ್ರಹಿಸಿದ್ದೆ. ತಿಪ್ಪೆಗುಂಡಿಯಿಂದ ಹಿಡಿದು ಫೈವ್ ಸ್ಟಾರ್ ಹೋಟೆಲ್ ವರೆಗೂ ಎಲ್ಲವನ್ನೂ ಶೋಧಿಸಿ ಬೆಂಕಿಪೊಟ್ಟಣಗಳನ್ನು ಹುಡುಕುತ್ತಿದ್ದೆ. ಮೊನ್ನೆ ಅಟ್ಟದ ಮೇಲಿನ ಸಾಮಾನು ತೆಗೆಯುತ್ತಿದ್ದಾಗ ನನ್ನ ಹೈಸ್ಕೂಲು ದಿನದ ಬೆಂಕಿ ಪೊಟ್ಟಣಗಳು ಮತ್ತೆ ಕಣ್ಣಿಗೆ ಬಿದ್ದವು. ನಿಮಗೂ ಇವು ನೆನಪಿರಬಹುದು.

ವಜ್ರದ ರಸವನ್ನು ಎರಕ ಹೊಯ್ದ ಮೈಕಟ್ಟು

ಅಶ್ವಘೋಷ, ಸತ್ಯಕಾಮರ ಕೃತಿ. ಅದರಲ್ಲಿನ ಮೊದಲ ಪುಟದ ಸಾಲುಗಳು ನನ್ನನ್ನು ತೀರ ಕಾಡಿದವು. ಅವು ಹೀಗಿವೆ.


ವಜ್ರದ ರಸವನ್ನು ಎರಕ ಹೊಯ್ದ ಮೈಕಟ್ಟು.

ಅಗಲವಾದ ಎದೆ, ನೀಳ ತೋಳುಗಳು.

ಎತ್ತರದ ನಿಲುವು, ಎಷ್ಟು ನೋಡಿದರೂ ಸಾಲದ ಚೆಲವು…

ತಮಗೆ ಕಣ್ಣಿದ್ದುದು ಸಾರ್ಥಕವಾಯಿತು,

ಇದು ನೋಡಿದ ಹಲವರ ಉಲ್ಲೇಖ.

ದಾರಿ ನಡೆಯುವವರೆಲ್ಲ ತಡೆದು ನಿಂತು ನೋಡುತ್ತಾರೆ. ನೋಡಿದ ಜನರ ತಲೆಯೊಳಗಿನ ಚಕ್ಕಕ್ಕೆ ಹೊಸಗತಿ. ನೋಡದ ಹಲವರಿಗೆ ಕುತೂಹಲ. ಹುಡುಗಿಯರಿಗೆ ಇವನೊಬ್ಬ ಇಮ್ಮಡಿ ರತಿಪತಿ.

ಈ ಹಾದಿಗೆ ಇವನು ಬಂದದ್ದು ಇಂದೇ. ಯಾರ ಕಣ್ಣೂ ಈ ಪುರುಷಸಿಂಹನನ್ನು ಹಿಡಿದು ನಿಲ್ಲಿಸುವುದಿಲ್ಲ. ಹಾಗೆಯೇ ಮುಂದೆ ಮುಂದೆ ಸಾಗಿದ್ದಾನೆ. ಈಗತ ಈತ ನಡೆದದ್ದು ನಗರದ ಒಂದು ಅಂಚಿನಲ್ಲಿ, ಅಲ್ಲ, ಸೆರಗಿನಲ್ಲಿ.

ಇದು ನಿಜವಾಗಿಯೂ ಸಾಕೇತದ ಸೆರಗು. ಸಾಕೇತದ ಆಕರ್ಷಕ ವಸ್ತುಗಳು ಇಲ್ಲಿವೆ. ನಗರದ ಸೌಂದರ್ಯದ ಭಂಡಾರವೇ ಇಲ್ಲಿದೆ. ಆತ ನಡೆಯುತ್ತಿದ್ದಂತೆಯೇ ಗಕ್ಕನೆ ನಿಂತ. ಸಿಂಹ ಚಕಿತವಾಗಿತ್ತು. ನಿಂತ ಎನ್ನುವುದರೊಳಗಾಗಿಯೇ ಮುಂದೆ ಬಂದಿದ್ದ. ಹಿಂದೆ ನೋಡಿದ. ಅದು ಸಿಂಹಾವಲೋಕನ.

ಅವನೇ ಶ್ರುತಿಸ್ತೋಮ, ಅಶ್ವಘೋಷ.

ಪತ್ರಕರ್ತರ ಕಷ್ಟಗಳು ಒಂದೆರಡಲ್ಲ….

ಇದು ಪ್ರತಿಯೊಬ್ಬ ಪತ್ರಕರ್ತನ ಬದುಕಿನ ಅನಿವಾರ್ಯ. ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಅದೇ….ಸಾವಿನ ಸುದ್ಧಿಯನ್ನು ಖಚಿತಪಡಿಸುವುದು. “ಇಂತಿಂಥವರು, ಇಂತಿಂಥ ಸಮಯಕ್ಕೆ ಹಿಂಗಿಂಗಾಗಿ, ಹೆಂಗೆಂಗ್ ಇದ್ರೋ, ಹಂಗಂಗೆ ಸಾವನ್ನಪ್ಪಿದ್ದಾರೆ” ಎಂಬ ಢಂ ಢಂ ಸುದ್ದಿ ಬಂದುಬಿಡುತ್ತದೆ. ಚೀಫ್ ಗೆ ಬಂದ ಯಾವುದೋ ಫೋನ್ ಕರೆ, ಪತ್ರಕರ್ತನ ಗೆಳೆಯ ದೂಕಿದ ಪ್ರಶ್ನಾರ್ಥಕ ಚಿಹ್ನೆಯಿರುವ ಎಸ್ಎಂಎಸ್, ಆಫೀಸಿನ ಸೆಕ್ಯುರಿಟಿ ಗಾರ್ಡ್ ಉದುರಿಸಿದ ಅಣಿಮುತ್ತು, “ಆ ಚಾನಲ್ ನಲ್ಲಿ ಈಗಾಗಲೇ ಅದನ್ನು ಬ್ರೇಕಿಂಗ್ ಹೊಡೆಯುತ್ತಿದ್ದಾರಂತೆ” ಎಂಬ ಗಾಳಿ ಸುದ್ದಿ – ಹೀಗೆ ಯಾವುದಾದರೊಂದು ರೂಪದಲ್ಲಿ ಈ ಸಾವಿನ ಸುದ್ದಿಯೆಂಬುದು ಪತ್ರಕರ್ತನ ಕೊರಳಿಗೆ ಬೀಳುತ್ತದೆ. ನಂತರ ನಡೆಯುವುದೇ ಅದನ್ನು ಖಚಿತಪಡಿಸಿಕೊಳ್ಳುವ ದೊಂಬರಾಟ. ಪ್ರಿಂಟ್ ಮೀಡಿಯಾಗಿಂತ ಟಿವಿ ಮೀಡಿಯಾ ಪತ್ರಕರ್ತನಿಗೆ ಇದು ಹೆಚ್ಚಿನ ಸವಾಲು. ಯಾಕೆಂದರೆ “ಈಗಾಗಲೇ ಆ ಚಾನಲ್ ನಲ್ಲಿ ಬ್ರೇಕಿಂಗ್ ಹೊಡೆಯುತ್ತಿದ್ದಾರೆ” ಎಂಬ ಗಾಳಿ ಸುದ್ದಿ ಬೇರೆ ಬಂದಿರುತ್ತದ್ದಲ್ಲ…ಅದನ್ನು ಖಚಿತಪಡಿಸಿಕೊಳ್ಳೋಣವೆಂದರೆ ಈತ ಯಾವುದೋ ಸಂತೆಯಲ್ಲಿದ್ದಾನೆ. ಅವರು ಬ್ರೇಕಿಂಗ್ ಹೊಡೆಯುತ್ತಿದ್ದಾರೋ ಇಲ್ಲವೋ ಅನ್ನುವುದನ್ನು ಖಚಿತಪಡಿಸುತ್ತ ಕೂರುವುದಕ್ಕಿಂತ, ಸಾವಿನ ಸುದ್ದಿಯನ್ನೇ ಖಚಿತಪಡಿಸಿಕೊಂಡರೆ ಉತ್ತಮ ಎಂಬ ಪರಿಸ್ಥಿತಿ. ಒಮ್ಮೊಮ್ಮೆಯಂತೂ ಐಶ್ವರ್ಯ ರೈ, ಸಲ್ಮಾನ್ ಖಾನ್ ಮುಂತಾದ ಅತೀ ಅತೀ ಅತೀ ಇಂಪಾರ್ಟಂಟ್ ವ್ಯಕ್ತಿಗಳ ಸುದ್ದಿಯೇ ಹೀಗೆ ಬಂದು ಬಿಡುತ್ತದೆ. ಅದು ಎಷ್ಟರಮಟ್ಟಿಗೆ ಹಬ್ಬಿರುತ್ತದೆಂದರೆ ಅದನ್ನು ಕೇಳಿ ಕೇಳಿ ಒಂದು ಹಂತದಲ್ಲಿ ಪತ್ರಕರ್ತನಾದವನು ಸುದ್ದಿಯನ್ನು ಖಚಿತಪಡಿಸಿಕೊಳ್ಳುವದರ ಬದಲಾಗಿ ಆಯಾ ವ್ಯಕ್ತಿಗಳ ಬಯೋಡೇಟಾ ಸಂಗ್ರಹದಲ್ಲಿ ತೊಡಗಿಕೊಂಡು ಬಿಡುತ್ತಾನೆ.

ಇನ್ನು ಸಾವಿನ ಸುದ್ದಿಯನ್ನು ಖಚಿತಪಡಿಸಿಕೊಳ್ಳುವಾಗಲಂತೂ ತೀರ ಕೇರ್ ಫುಲ್ ಇರಬೇಕಾಗುತ್ತದೆ. “ಇಂತಹವರು ಸತ್ತರಂತೆ, ಹೌದೆ?” ಎಂದು ಫೋನಿನಲ್ಲಿ ಪತ್ರಕರ್ತ, ತನ್ನ ಸೋರ್ಸ್ ಗೆ ಕೇಳಿದ್ದರೆ, ಆ ಸೋರ್ಸ್ ಗೆ ‘ಹೌದೆ?’ ಕೇಳಿರುವುದೇ ಇಲ್ಲ. ಕೇವಲ “ಇಂತಹವು ಸತ್ತರಂತೆ” ಎಂದಷ್ಟೇ ಕೇಳಿರುತ್ತದೆ. ಆ ಸೋರ್ಸೋ, ಈ ಮರಣವಾರ್ತೆಯನ್ನು ತಾನೇ ಮೊದಲು ತನ್ನ ಪರಿಚಯದವರಿಗೆ ತಿಳಿಸಿಸಬೇಕು ಎಂಬ ಉತ್ ಉತ್ ಉತ್ ಉತ್ಸಾಹದಲ್ಲಿ ಪತ್ರಕರ್ತನ ಫೋನ್ ಕಟ್ ಮಾಡಿದವನೇ, so and so expired. ಎಂದು ಮೇಸುಜು ಕುಟ್ಟಿ ಸೆಂಡ್ ಟು ಆಲ್ ಆಪ್ಶನ್ ಒತ್ತಿಬಿಟ್ಟಿರುತ್ತಾನೆ. ಬರಗಾಲದಲ್ಲಿ ಅಧಿಕಮಾಸ ಅಂತ ಇದಕ್ಕೇ ಹೇಳುತ್ತಾರೆ.

ಒಮ್ಮೆ ಹೀಗಾಯಿತು. ಕೆಲ ವರ್ಷಗಳ ಹಿಂದಿನ ಮಾತು. ಚಲನಚಿತ್ರ ರಂಗಕ್ಕೆ ಸಂಬಂಧಿಸಿದ ಖ್ಯಾತನಾಮರೊಬ್ಬರು ತೀರಿಕೊಂಡಂರಂತೆ ಎಂಬ ಸುದ್ಧಿ ನ್ಯಾಷನಲ್ ಮೀಡಿಯಾದ ಪತ್ರಕರ್ತೆಯೊಬ್ಬಳಿಗೆ ಬಂತು. ಈ ನ್ಯಾಷನಲ್ ಮೀಡಿಯಾದವರಿಗೆ ಯಾವಾಗಲೂ ಸುದ್ದಿಯ ಮೂಲವನ್ನೇ ಹುಡುಕುವ ಹಂಬಲ. ಹೀಗಾಗಿ ಈ ಪತ್ರಕರ್ತೆ ಸೀದಾ ಆ ಖ್ಯಾತನಾಮರ ಮನೆಯ ಲ್ಯಾಂಡ್ ಲೈನಿಗೆ ಫೋನಾಯಿಸಿ ಬಿಟ್ಟಿದ್ದಾಳೆ. ಅಲ್ಲಿ ಯಾರೋ ಒಬ್ಬರು ಫೋನ್ ರಿಸೀವ್ ಮಾಡಿದ್ದಾರೆ. ಈಕೆ ತಾನು ಹಿಂಗಿಂಗೆ, ತನ್ನ ಹೆಸರು ಹಂಗಂಗೆ, ತಾನು ಇಲ್ಲಿಲ್ಲಿ ಕೆಲಸ ಮಾಡುತ್ತಿರುವ ಜರ್ನಲಿಸ್ಟು ಅಂದ ತಕ್ಷಣ ಆ ಕಡೆಯ ಧ್ವನಿ, ಯದ್ವಾ ತದ್ವಾ ಬಯ್ಯಲು ಆರಂಭಿಸಿದೆ. “ಹೌದಮ್ಮ, ನಾನು ಬದುಕಿರುವಾಗಲೇ ನೀವೆಲ್ಲ ನನ್ನ ಕೊಂದುಬಿಡ್ತಾ ಇದೀರಲ್ಲ…ನನ್ನ ಸಾವಿನ ಸುದ್ದಿ ನನಗೂ ಬಂದಿದೆ. ಇಂತಹ ಸುದ್ದಿಗಳನ್ನು ಹರಿಯ ಬಿಡೋರು ನೀವೇ….ಮತ್ತೆ ಫೋನ್ ಮಾಡಿ ಕನ್ ಫರ್ಮಾ ಅಂತ ಕೇಳೊರೂ ನೀವೇ… ಯಾಕೆ ನಂಗೆ ಹಿಂಗೆಲ್ಲ ತೊಂದ್ರೆ ಕೊಡ್ತಾ ಇದೀರಾ?” ಎಂದು ಎಗರಾಡಿದೆ. ಈಕೆ ಸಮಾ ಉಗಿಸಿಕೊಂಡು ಫೋನ್ ಇಟ್ಟಿದ್ದಾಳೆ.

ಇನ್ನು ಬೇರೆ ರೀತಿ ಎಡವಟ್ಟುಗಳಾಗುವ ಸಂಭವವೂ ಇರುತ್ತದೆ. ಪತ್ರಕರ್ತನಿಗೆ ಶೇ. 99 ಪ್ರತಿಶತ ಗೊತ್ತಿರುತ್ತದೆ ವ್ಯಕ್ತಿ ಇಹಲೋಕ ತ್ಯಜಿಸಿದ್ದಾರೆ ಎಂದು. ಆದರೆ ಆ ಒಂದು ಪ್ರತಿಶತ ಚಾನ್ಸ್ ಆದರೂ ಯಾಕೆ ತೆಗೆದುಕೊಳ್ಳಬೇಕು ಎಂದುಕೊಂಡು ಮತ್ತಷ್ಟು ಕ್ರಾಸ್ ಚೆಕ್ ಮಾಡ್ತಾ ಕೂತುಬಿಟ್ಟಿರುತ್ತಾನೆ. ಅದರಲ್ಲಿ ಐದು ನಿಮಿಷ ಕಳೆದುಹೋಗಿಬಿಟ್ಟಿರುತ್ತದೆ. ಅಷ್ಟರಲ್ಲಿ ವೈರಿ ಚಾನಲ್ ನಲ್ಲಿದ್ದ ಹುಡುಗ ಹಿಂದೆ ಮುಂದೆ ನೋಡದೆ ಸುದ್ದಿ ಏರ್ ಮಾಡಿಬಿಟ್ಟಿರುತ್ತಾನೆ. ಈ ಪತ್ರಕರ್ತನಿಗೆ ಚೀಫ್ ನ ಕೆಂಗಣ್ಣೇ ಗತಿಯಾಗುತ್ತದೆ.

ಪತ್ರಕರ್ತರ ಕಷ್ಟಗಳು ಒಂದೆರಡಲ್ಲ….