ಗೌಡರ ಗತ್ತೇ ಗಮ್ಮತ್ತು

dddd

ಘಟನೆ – 1.

ಆಗಿನ್ನೂ ನಾನು ಈ ಟಿವಿ ಸೇರಿ ಫೀಲ್ಡ್ ಗೆ ಹೋಗುತ್ತಿದ್ದ ಪರ್ವಕಾಲ. ಕೈಯಲ್ಲಿ ಈ ಟಿವಿ ಬೂಮ್ ಹಿಡಿದು ಹೊರಟೆನೆಂದರೆ ಏನೋ ಒಂದು ರೀತಿಯ ಹೆಮ್ಮೆ. ಆಗ ಅಚಾನಕ್ಕಾಗಿ ದೇವೇಗೌಡರ ಪದ್ಮನಾಭನಗರದ ಮನೆಗೆ ಕವರೇಜ್ ಗೆ ಹೋಗುವ ಸಂದರ್ಭ ಎದುರಾಯಿತು. ಗೌಡರ ಮೂಡ್ ಬಗ್ಗೆ ಹಿರಿಯ ಪತ್ರಕರ್ತರಿಂದ ಕೇಳಿ ತಿಳಿದಿದ್ದ ನಾನು ಅಳುಕುತ್ತಲೇ ಅವರ ಮನೆಗೆ ಹೋದೆ. ಒಳಗೆ ಗೌಡರು, ಹೊರಟ್ಟಿ, ಗೌಡರ ಅಂದಿನ ಕಾಲದ ದತ್ತು ಪುತ್ರ ಚೆನ್ನಿಗಪ್ಪ, ಗೌಡರ ಚಾಣಕ್ಯ ದತ್ತಾ ಹೀಗೆ ಎಲ್ಲರೂ ಕುಳಿತಿದ್ದರು. ರಾಜಕೀಯದಲ್ಲಿ ಯಾವುದೋ ಒಂದು ಅಪ್ರೀಯ ಘಟನೆ ನಡೆದು ಗೌಡರು ಫುಲ್ ಗರಂ ಆಗಿದ್ದರು. ಸರಿ, ನಾನು ಬೈಟ್ ಕೇಳಲು ಹೋದರೆ, ಗೌಡರ ಅಂಗರಕ್ಷಕರು ಹಚಾ ಹಚಾ ಎಂದರು. ಆಗ ನಾನು ನಂಬಲಾರದ ಘಟನೆ ನಡೆಯಿತು. ಇದನ್ನೆಲ್ಲ ವಾರೆಗಣ್ಣಿನಲ್ಲಿ ನೋಡುತ್ತಿದ್ದ ಗೌಡರು, ತಮ್ಮ ಅಂಗರಕ್ಷಕರಿಗೆ ಹೇಳಿ ನನ್ನನ್ನು ಒಳಗೆ ಕರೆಸಿದರು. ತಮ್ಮ ಪಕ್ಕದಲ್ಲಿ ಕೂರಿಸಿಕೊಂಡು ನಾನು ಕೇಳಿದ ಎಲ್ಲ ಪ್ರಶ್ನೆಗಳಿಗೆ ಸಮಾಧಾನವಾಗಿ ಉತ್ತರಿಸಿದರು. ನಂತರ ಟೀ ಕೊಡುವಂತೆ ಸಹಾಯಕರಿಗೆ ಹೇಳಿದರು. ಅಂದಿನಿಂದ ನಾನು ಗೌಡರ ಫುಲ್ ಫ್ಯಾನ್ ಆಗಿಬಿಟ್ಟೆ. ಗೌಡರನ್ನು ತೆಗಳುತಿದ್ದ ಪತ್ರಕರ್ತರಿಗೆಲ್ಲ ಬುದ್ಧಿವಾದ ಹೇಳತೊಡಗಿದೆ.

dd

ಘಟನೆ – 2.

ರವೀಂದ್ರ ಕಲಾಕ್ಷೇತ್ರದಲ್ಲಿ ಯಾವುದೋ ಸನ್ಮಾನ ಕಾರ್ಯಕ್ರಮ. ಗೌಡರು ಮುಖ್ಯ ಅತಿಥಿ. ಕಾರ್ಯಕ್ರಮ ಮುಗಿಯುತ್ತಿದ್ದಂತೆ ಎಂದಿನಂತೆ ನಾನು ಹಾಗೂ ಉದಯ ಟಿವಿಯ ಯೂನಿಟ್ ಗೌಡರ ಬೈಟ್ ಗೆ ಹೊರಗೆ ಕಾಯುತ್ತಿದ್ದೆವು. ಗೌಡರು ಹೊರಬರುತ್ತಿದ್ದಂತೆ ತಳ್ಳಾಟ ನೂಕಾಟ ಆರಂಭವಾಯಿತು. ಗೌಡರು ನಮ್ಮ ಬಳಿ ಬರುವಷ್ಟರಲ್ಲಿ ತಳ್ಳಾಟ ಜೋರಾಯಿತು. ಗೌಡರು ನನ್ನ ಎದರು ಬಂದು ನಿಲ್ಲಲಿಕ್ಕೂ, ಯಾವನೋ ಒಬ್ಬನ ಕೈಯಿ ನನ್ನ ಕನ್ನಡಕಕ್ಕೆ ತಾಗಿ ಅದು ಕೆಳಗೆ ಬೀಳಲು ಸರಿ ಹೋಯಿತು. ನನ್ನ ಸ್ಪೆಕ್ಟ್ಸ್, ನನ್ನ ಸ್ಪೆಕ್ಟ್ಸ್ ಎಂದು ನಾನು ಹುಡುಕಲಾರಂಭಿಸಿದೆ. ಇದು ನಂಬಲು ಕಷ್ಟು, ಆದರೆ ಗೌಡರು ಕೂಡ ಕ್ಷಣ ಹೊತ್ತು ನಿಂತು ನನ್ನ ಸ್ಪೆಕ್ಟ್ಸ್ ಅನ್ನು ತಾವೂ ಅತ್ತಿತ್ತ ಕೆಳಗೆ ನೋಡಿ ಹುಡುಕಿದರು. ಅದೂ ಅವರಿಗೂ ಸಿಗಲಿಲ್ಲ. ಹಾಗೆಯೇ ತೆರಳಿದರು. ಕೊನೆಗೆ ನನ್ನ ಕನ್ನಡಕ ಕ್ಯಾಮೆರಾದ ಕೇಬಲ್ ಗೆ ಸಿಕ್ಕು ಜೋತಾಡುತ್ತಿತ್ತು. ಘಟನೆ – 2 ರಿಂದ ನಾನು ಗೌಡರ ಬಗ್ಗೆ ಮತ್ತಷ್ಟು ಅಭಿಮಾನ ಬೆಳೆಸಿಕೊಂಡೆ.

ddd

ಉಪಸಂಹಾರ – (ಅಯ್ಯೋ..ವಿಧಿಯೇ…)

ಕೆಲವೇ ದಿನಗಳು ಕಳೆದ ಬಳಿಕ ಜೆಡಿಎಸ್ ಕಚೇರಿಯಲ್ಲಿ ಯಾವುದೋ ವರದಿಗೆ ತೆರಳಿದ್ದ ಸಂದರ್ಭದಲ್ಲಿ ಗೌಡರು ಗರಂ ಆಗಿದ್ದರು. ತಳ್ಳಾಟ ಆರಂಭವಾಗಿತ್ತು. ನಾನು ಹೇಗೋ ಮಾಡಿ ಗೌಡರ ಬಳಿ ತೆರಳಿ ಮೈಕ್ ಹಿಡಿದೆ. ಉತ್ತರ ಕೊಡುವ ಬದಲಾಗಿ ಗೌಡರು ಮತ್ತಷ್ಟು ಗರಂ ಆಗಿ ಏನೇನೋ ಬಯ್ಯುತ್ತ ಹೋಗಿಬಿಟ್ಟರು. ನಾನು ಘಟನೆ -1 ಹಾಗೂ 2 ನ್ನು ಮರೆತು ನಾರ್ಮಲ್ ಲೆವೆಲ್ ಗೆ ಬಂದೆ.

ನೀತಿ – ಗೌಡರಿಗೆ ಯಾವ ಪತ್ರಕರ್ತರನ್ನು ಎಲ್ಲಿ, ಹೇಗೆ, ಯಾಕೆ, ಇಡಬೇಕು ಎಂಬ ಸ್ಪಷ್ಟ ಕಲ್ಪನೆ ಇದೆ. ಅದೇ ಪತ್ರಕರ್ತರಿಗೆ ಇಲ್ಲ.

(ಕನ್ನಡ ಬ್ಲಾಗರ್ಸ್ ನಲ್ಲಿ ಹಾಕಿದ ಒಂದು ಕಮೆಂಟ್. ಚಿತ್ರಕೃಪೆ – ಕನ್ನಡಪ್ರಭ, ಮೆಟ್ ಬ್ಲಾಗ್)

Advertisements

ನಂಗೂ ಅಣಗ್ಸಕ್ ಬರುತ್ತೆ…ವ್ಯಾ…

dogಚಿತ್ರ – ಸುಘೋಷ್ ಎಸ್. ನಿಗಳೆ

ಮಾಡೆಲ್ – ಕೆಂಚ