ಏನ್ ಗುರಾಯಿಸ್ತಿದೀಯಾ….?

akalu

ಚಿತ್ರ – ಸುಘೋಷ್ ಎಸ್. ನಿಗಳೆ.

ರೂಪದರ್ಶಿ – ಗೌರಿ

Advertisements

ಕಾಲೇಜ್ ವಿರಹ, ಸಾವಿರ ತರಹ.

Adike and vikas marriage 051

(ಸನ್ 2000 ದಲ್ಲಿ ಬಿ. ಎ. ದ್ವೀತಿಯ ವರ್ಷದಲ್ಲಿದ್ದಾಗ ಹಲವು ಹುಡುಗಿಯರ ಕೈಗೆ ಒಂದೇ ವೇಳೆ ಒಂದೇ ಹೃದಯವನ್ನು ಕೊಟ್ಟು ಒದ್ದಾಡುತ್ತಿದ್ದಾಗ, ಬರೆದ ಕವಿತೆ. ಕಾಲೇಜ್ ಮಿಸೆಲನಿಯಲ್ಲಿ ಪ್ರಕಟವಾಗಿ ಹಲವು ಹೆಂಗೆಳೆಯರ ಹುಬ್ಬು ಮೇಲೆರಲು ಕಾರಣವಾಗಿತ್ತು).

ಗೊತ್ತಿಲ್ಲ

ಎಷ್ಟು ದೂರ ಮಾಡಿದರೂ ಅಷ್ಟೇ ಹತ್ತಿರ ಬರುತ್ತಾಳೆ

ಕೇವಲ ನೆನಪುಗಳಿಂದಲೇ ದೇಹ-ಮನಸ್ಸನ್ನು ಹಾಳು ಮಾಡುತ್ತಾಳೆ.

ಅನಿಸುತ್ತದೆ ಒಮ್ಮೊಮ್ಮೆ ದೂರ ಮಾಡುವುದೇ

ಬೇಡ ಇವಳನ್ನು.

ಆದರೆ ಹತ್ತಿರ ಇಟ್ಟುಕೊಂಡರೆ

ಕರಿಯರೇ ಹಾಳು.

ಬಹುಶಃ ನನ್ನನ್ನು ಆಕರ್ಷಿಸಿದ್ದು ರೂಪವೇ ಇರಬೇಕು

ಬಣ್ಣ, ಕಣ್ಣು, ಮೂಗು…?

ಏನೋ ಗೊತ್ತಿಲ್ಲ.

ಹೀಗಾದಾಗ ಬಿಕ್ಕಿ ಬಿಕ್ಕಿ ಅಳು

ಆದರೆ ಏನೂ ಮಾಡಲಾಗದ ಚಡಪಡಿಕೆ.

ಆಸರೆ ಇದೆ – ನಿದ್ದೆ ಗುಳಿಗೆ, ಸಿಗರೇಟ್, ಹೆಂಡ….ಮತ್ತೇನೋ?

ಹಸಿವಿಗೆ ಕೊನೆಯೇ ಇಲ್ಲ

ಏನು ಮಾಡಲಿ, ತೋಚುವುದೇ ಇಲ್ಲ ಮಾಡಿದರೆ

ಜನರ ಕೊಂಕು ಮಾತು, ದೃಷ್ಟಿ.

ಕರೆಯುತ್ತದೆ ಭಗವದ್ಗೀತೆ, ದಾಸಬೋಧ

ಕರೆಯುತ್ತಾರೆ ಓಶೋ, ಜಿಡ್ಡು, ಟಾಲ್ ಸ್ಟಾಯ್.

ಅಲ್ಲಿ ಹೋಗುವುದರೊಳಗೆ ಅಡ್ಡಿ

ಸಂಗೀತ ನಿರ್ದೇಶಕರದ್ದು, ಕಲಾತ್ಮಕ ಚಿತ್ರಗಳದ್ದು.

ಗುರಿ ಅಂಧಕಾರದಲ್ಲಿ ಇದೆ ಅನಿಸುತ್ತದೆ.

ಹಾದಿಯಲ್ಲಿ ನಡೆಯುವುದೇ ಬೇಡ

ಹಿಂತಿರುಗೋಣವೆಂದರೆ ಅಸಾಧ್ಯದ ಮಾತು.

ಎಲ್ಲವನ್ನೂ ನಿಭಾಯಿಸಲೆ?

ಅಥವಾ ಆಟ ಡ್ರಾ ಮಾಡಿಕೊಳ್ಳಲೆ?

ಬ್ರಹ್ಮಚರ್ಯ ಸೋತಾಗ ಮನಸ್ಸು – ದೇಹ ಶಾಂತ.

ಸಜ್ಜಾಗುತ್ತೇನೆ, ಕಾಯುತ್ತೇನೆ

ಹೊಸ ಬದುಕುವ ಶೈಲಿಗೆ.

ಕನಸು ಬರೆಯುವುದು, ಟೆಲಿಪತಿ, ಪ್ಲಾಂಚೆಟ್, ಬ್ಲಾಂಕ್ ಕಾಲ್ಸ್

ನೂರಾರು ಪ್ರಯೋಗಗಳನ್ನು ಮಾಡುತ್ತೇನೆ.

ಗೆಲ್ಲುತ್ತೇನೆಯೆ ಎಂಬ ಪ್ರಶ್ನೆಯ ಉತ್ತರದಲ್ಲಿ

X – factor ಹಾಗೆಯೇ ಉಳಿಯುತ್ತದೆ.

ಥ್ಯಾಂಕ್ಸ್…ಕೆಂಡಸಂಪಿಗೆ

kendasampige_logo

1235055064.pjpeg

ಬ್ಲಾಗ್ ಲೋಕದಲ್ಲಿ ಹೊಸ ಕಿತಾಪತಿಗಳ ಜಗತ್ತೊಂದನ್ನ ಹುಟ್ಟುಹಾಕಿದ್ದಾರೆ ಸುಘೋಷ್ ನಿಗಳೆ. ‘ಕಾಷಿಯಸ್ ಮೈಂಡ್’ ಅವರ ಈ ಜಗತ್ತಿನ ಹೆಸರು. ದೇವರಿಗೇ ಪತ್ರ ಬರೆದು ಇಲ್ಲಿನ ಮಾಧ್ಯಮದವರ ಬಗ್ಗೆ ವರದಿ ಒಪ್ಪಿಸುತ್ತಿರುವ ಸುಘೋಷ್ , ಒಮ್ಮೆ ಹಾಗೇ ಭೂಲೋಕಕ್ಕೆ ಬರಬಾರದ? ಅಂತ ಮನವಿ ಮಾಡುತ್ತಿದ್ದಾರೆ. ಹಾಗೇ, ಕಣ್ಮರೆಯಾಗುತ್ತಿರುವ ಸಾವಯವ ಕೃಷಿಯ ಬಗ್ಗೆ ಒಂದು ಪುಟ್ಟ ಬರಹವಿದೆ.

ಈಗಷ್ಟೇ ಆರಂಭವಾಗಿರುವ ಈ ಲೋಕವನ್ನ ಒಮ್ಮೆ ನೋಡಿಬನ್ನಿ.

ಕಣ್ಮರೆಯಾಗಿದೆ ಸಾವಯವ ಕೃಷಿ.

mane2 005ರಾಜ್ಯದಲ್ಲಿ ಕೃಷಿಯ ಕುರಿತು ಸರ್ಕಾರದ ಗೊಂದಲ ನೀತಿ ಮತ್ತೊಮ್ಮೆ ಬಯಲಾಗಿದೆ. ಕಳೆದ ಬಾರಿ ಗೊಬ್ಬರ ಗಲಾಟೆಯಾದಾಗ ಗೋಲಿಬಾರ್ ಮೂಲಕ ಪ್ರತಿಭಟನೆ ಹತ್ತಿಕ್ಕಿದ್ದ ಸರ್ಕಾರ, ಬಳಿಕ ಸಹಜ ಹಾಗೂ ಸಾವಯವ ಕೃಷಿಯ ಜಪ ಮಾಡಿತ್ತು. ಸಾವಯವ ಕೃಷಿಯನ್ನು ಪ್ರೋತ್ಸಾಹಿಸಬೇಕು ಎಂದು ಬೊಬ್ಬಿಡುತ್ತ, ಸಹಜ ಕೃಷಿ ಪರಿಣಿತ ಸುಭಾಷ್ ಪಾಳೆಕರ್ ಅವರನ್ನು ಶಾಸಕರ ಭವನಕ್ಕೆ ಕರೆಸಿ ನಾಲ್ಕಾರು ಶಾಸಕರೆದುರು ಉಪನ್ಯಾಸ ನೀಡಿಸಿತ್ತು. ಆ ಮೂಲಕ ತನಗೆ ಸಹಜ ಹಾಗೂ ಸಾವಯವ ಕೃಷಿಯ ನಡುವಿನ ವ್ಯತ್ಯಾಸದ ಅರಿವಿಲ್ಲ ಎಂದು ಪರೋಕ್ಷವಾಗಿ ಸಾರಿತ್ತು. ಇದು ಸಾಲದೆಂಬಂತೆ, ರಾಜ್ಯದ ಎಲ್ಲ ರೈತರನ್ನೂ ವಿಧಾನ ಸೌಧಕ್ಕೆ ಕರೆಸಿಕೊಂಡು ಸಾವಯವ ಕೃಷಿ ಮಾಡುವುದಾಗಿ ಆಣೆ-ಪ್ರಮಾಣ ಮಾಡಿಸಿಕೊಂಡಿತ್ತು.

ಆದರೆ ಇಂದು ರೈತರ ಬೆರಳಿಗೆ ಚುನಾವಣಾ ಶಾಯಿ ಹಚ್ಚಿ ಗೊಬ್ಬರ ವಿತರಿಸುತ್ತಿದೆ. ಇದನ್ನು ಗಮನಿಸಿದರೆ ಸರ್ಕಾರದ ಮೂರ್ಖತನಕ್ಕೆ ಕೊನೆಯೇ ಇಲ್ಲವೆನೋ ಅನಿಸುತ್ತದೆ.

vikas marriage 046

ಹಲವಾರು ವರ್ಷಗಳಿಂದ ರಸಗೊಬ್ಬರವನ್ನು ಬಳಸಿ ಉಳುಮೆ ಮಾಡುತ್ತಿರುವ ರೈತ ಒಮ್ಮಿಂದೊಮ್ಮೆಗೆ ಸಾವಯವ ಕೃಷಿಯನ್ನು ಅಳವಡಿಸಿಕೊಳ್ಳುವುದು ಕಷ್ಟಸಾಧ್ಯ. ಆದರೆ, ಕಳೆದ ಬಾರಿ ಸಾವಯವ ಕೃಷಿಯನ್ನು ಅಮೂಲ್ಯ ನಿಧಿಯೆಂಬಂತೆ ಕಂಡಿದ್ದ ಸರ್ಕಾರ, ಈ ಬಾರಿ ಆ ಕುರಿತು ಚಕಾರವನ್ನೇ ಎತ್ತಿಲ್ಲ. ಕನಿಷ್ಟ, ಈ ಬಾರಿ ಸಾವಯವ ಕೃಷಿಯನ್ನು ನೂತನವಾಗಿ ಅಳವಡಿಸಿಕೊಂಡಿರುವ ರೈತರ ಸಂಖ್ಯೆ ಎಷ್ಟು, ಅವರ ಅನುಭವ ಹೇಗಿದೆ, ಎದುರಿಸಿದ ಸವಾಲು-ಸಮಸ್ಯೆಗಳು, ಅವಕ್ಕೆ ಪರಿಹಾರ ಕಂಡುಕೊಂಡ ಬಗೆ, ಈ ಪ್ರಕ್ರಿಯೆಯಲ್ಲಿ ಸರ್ಕಾರ, ಕೃಷಿ ಇಲಾಖೆ, ಸ್ವಸಹಾಯ ಗುಂಪುಗಳ ಪಾತ್ರ ಇತ್ಯಾದಿ ಮಾಹಿತಿಯನ್ನು ಕೃಷಿ ಇಲಾಖೆ ಪ್ರಚಾರ ಪಡಿಸಿದರೆ, ಈಗಲೂ ರಾಸಾಯನಿಕ ಗೊಬ್ಬರ ಬಳಸುತ್ತಿರುವ ರೈತರಿಗೆ ದಾರಿದೀಪವಾಗುತ್ತದೆ. ಆದರೆ, ಸರ್ಕಾರ ಮಾತ್ರ ಮುಗುಮ್ಮಾಗಿ ಕುಳಿತಿದ್ದು, ಕಳೆದ ಬಾರಿ ಸಹಜ-ಸಾವಯವ ಕೃಷಿಯ ಹೆಸರಿನಲ್ಲಿ ಮಾಡಿದ ಖರ್ಚು, ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಬರದ ಸಮಯದಲ್ಲಿ ವಿದೇಶ ಪ್ರವಾಸಕ್ಕೆ ತೆರಳುವ ಕೇಂದ್ರ ಕೃಷಿ ಸಚಿವ ಹಾಗೂ ಕೃಷಿಯ ಒಳಹೊರಗನ್ನು ಇಡೀ ಭೂಮಂಡಲದಲ್ಲಿ ತಾವೊಬ್ಬರೆ ತಿಳಿದುಕೊಂಡಿರುವ ಹಾಗೆ ವರ್ತಿಸುವ ರಾಜ್ಯ ಕೃಷಿ ಸಚಿವರ ಮಧ್ಯೆ, ರೈತರನ್ನು ದೇವರೇ ಕಾಪಡಬೇಕು. ಕೆಎಚ್ ಬಿ ಹಗರಣವನ್ನು ನೋಡಿದರೆ, ಭೂಮಿಯ ಬಗ್ಗೆ ಇರುವ ಪ್ರೀತಿ, ಭೂ ಒಡೆಯನ ಬಗ್ಗೆ ಇಲ್ಲವಲ್ಲ ಎಂದು ಖೇದವೆನಿಸುತ್ತದೆ.

ಕಾಷಿಯಸ್ ಮೈಂಡ್ – ನನ್ನ ಕಿತಾಪತಿಗಳ ಜಗತ್ತು!!!

100_3091

ಆದರಣೀಯ ದೇವರಿಗೆ,

24-07-09

ಬನಶಂಕರಿ, ಬೆಂಗಳೂರು.

ಸುಘೋಷನು ಮಾಡುವ ನಮಸ್ಕಾರಗಳು. ಉ.ಕು. ತರುವಾಯ. ನಾನು ಚೆನ್ನಾಗಿದ್ದೇನೆ. ನೀನೂ ಸಹ ಚೆನ್ನಾಗಿರುವಿಯೆಂದು ಭಾವಿಸಿದ್ದೇನೆ. ಅಂದ ಹಾಗೆ ನನ್ನ ಹೊಸ ಪ್ರಯತ್ನವನ್ನು ತಿಳಿಸಲೊಸುಗ ಈ ಪತ್ರವು.

ಹಲವು ವರ್ಷಗಳು ಕಳೆಯಿತು. ಇನ್ನಾದರೂ ಮುನಿಸು ಬಿಟ್ಟು ಪತ್ರ ಬರೆಯೋಣ ಎಂದುಕೊಂಡೆ. ನಿನ್ನ ಅಸ್ತಿತ್ವದ ಬಗ್ಗೆ ಪರ-ವಿರೋಧ ವಾಗ್ವಾದ ಮಾಡುವವರು ಇನ್ನೂ ಭೂಮಂಡಲದಲ್ಲಿ ಇದ್ದಾರೆ. ನಾನೂ ಎರಡೂ ಗುಂಪಿಗೆ ಸೇರಿಲ್ಲ. ಹೀಗಾಗಿ ನಿನಗೆ ಪತ್ರ ಬರೆದು ನನ್ನ ಸ್ಥಿತಿ-ಗತಿಯನ್ನು ತಿಳಿಸಿದರೆ, ನನ್ನ ಅಪ್ಪನ ಗಂಟೆನೂ ಹೋಗುವುದಿಲ್ಲವಲ್ಲ ಎಂಬ ಕಾರಣದಿಂದ ಪತ್ರ ಟೈಪಿಸುತ್ತಿರುವೆ.

ಓ ದೇವನೆ, ಈ ಪಾಪಿ ದುನಿಯಾಕ್ಕೆ ನಾನು ಎಂಟ್ರಿ ಪಡೆದು ಎರಡೂವರೆ ದಶಕಗಳಿಗೂ ಮೆಲಾಗಿದೆ. ಕಾಲಕಾಲಕ್ಕೆ ಅನ್ನ, ನೀರು, ವಾಯು, ಅಂಗವಸ್ತ್ರ, ಇತ್ಯಾದಿ ಧರ್ಮ, ಅರ್ಥ, ಕಾಮಾಕಾಂಕ್ಷೆಗಳನೆಲ್ಲ ಮನಃಪೂರ್ವಕವಾಗಿ ಅನುಭವಿಸುತ್ತಿರುವೆ. ಇರಲಿ. ಆ ಕುರಿತು ಮತ್ತೆ ಹೇಳುತ್ತೇನೆ.

ಈ ಪತ್ರ ಬರೆಯಲು ಮುಖ್ಯ ಕಾರಣವೆಂದರೆ, ರಾಜ್ಯದಲ್ಲಿ ಅಷ್ಟೇ ಏಕೆ ಇಡೀ ದೇಶದಲ್ಲೇ ಮೀಡಿಯಾದ ಪರಿಸ್ಥಿತಿ ಕುಲಗೆಟ್ಟುಹೋಗಿದೆ. ಕೆಲ ಪತ್ರಕರ್ತರು ಆರೋಗ್ಯಕರ ಪತ್ರಿಕೋದ್ಯಮದ ತಲೆಯನ್ನು ಚೊಕ್ಕವಾಗಿ ಬೋಳಿಸಿ, ಉಂಡೆ ನಾಮ ತಿಕ್ಕಿದ್ದಾರೆ. ಜನರಲ್ಲಿ ಮೀಡಿಯಾ ಕುರಿತಂತೆ ಗೌರವ ಭರದಿಂದ ಕಡಿಮೆಯಾಗುತ್ತಿದೆ. ರಾಜಕಾರಣಿಗಳು ಪತ್ರಕರ್ತರನ್ನು “ಏನ್ ಬ್ರದರ್” ಅಂತಲೂ, ಪತ್ರಕರ್ತರು ರಾಜಕಾರಣಿಗಳನ್ನು “ಅಣ್ಣಾ…” ಎಂತಲೂ ಸಂಬೋಧಿಸಿ ಪರಸ್ಪರರ ನಡುವಿನ ಅನ್ಯೋನ್ಯತೆಯನ್ನು ಹೆಚ್ಚಿಸಿಕೊಂಡಿದ್ದಾರೆ. ರಾಜಕಾರಣಿಗಳು ಮಾಡಲು ಬೇರೆನೂ ಕೆಲಸವಿಲ್ಲವಾಗಿ, ತಮಗಿಷ್ಟಬಂದಂತೆ ಟಿವಿ ಚಾನೆಲ್ ಗಳನ್ನು ತೆಗೆಯುತ್ತಿದ್ದಾರೆ. ದೆಹಲಿಯಂತಹ ಪ್ರದೇಶದಲ್ಲಿ ಯಾವುದೇ ಸಾಮಾನ್ಯ ಪತ್ರಿಕಾಗೋಷ್ಟಿಗೆ ಕನಿಷ್ಟ 45 ಕ್ಯಾಮೆರಗಳು ಸಾಲಾಗಿ ನಿಲ್ಲುತ್ತಿವೆ. ದೇಶದ ಪ್ರತಿಷ್ಠಿತ ಪತ್ರಿಕೋದ್ಯಮ ಕಾಲೇಜುಗಳಿಂದ ಬುಳುಬುಳು ಹೊರಬೀಳುತ್ತಿರುವ ಕನ್ಯೆಯರು, ರಾಷ್ಟ್ರೀಯ ವಾಹಿನಿಗಳ ಆರಂಕಿ ಸಂಬಳವನ್ನು ತಮ್ಮ ಕಿರುಬೆರಳಿನ ಚೂಪಾದ ಉಗುರಿನಿಂದ ಧಿಕ್ಕರಿಸಿ, ಕಾರ್ಪೋರೇಟ್ ವಲಯದಲ್ಲಿ ಪಿಆರ್ ಓ ಗಳಾಗಿ ಮೆರೆಯುತ್ತಿದ್ದಾರೆ. ಸ್ಟಿಂಗ್ ಆಪರೇಷನ್ ಎಂಬ ಹೊಸ ಶಾಖೆಯೊಂದು ಪ್ರಾರಂಭಗೊಂಡಿದ್ದು, ಪತ್ರಕರ್ತರು ಹಾಗೂ ಭ್ರಷ್ಟರು ಒಟ್ಟೊಟ್ಟಿಗೆ ಸಮಾಜವನ್ನು ತಿನ್ನಲು ಇಂಬು ಸಿಕ್ಕಿದೆ. ಮುದ್ರಣ ಮಾಧ್ಯಮದಲ್ಲಿ ಸರಿಯಾಗಿ ಅರ್ಕಾವತ್ತು ಕೊಡಲು ಬಾರದ ಪೋರರು ಸಬ್ ಎಡಿಟರುಗಳಾಗಿ ಭರ್ತಿಗೊಂಡು, ಪ್ರೋ. ಜಿ. ವೆಂಕಟಸುಬ್ಬಯ್ಯನಂತಹವರಿಗೆ ಹೊಸ ಹೊಸ ಪದಪ್ರಯೋಗಗಳ ಹಾಗೂ ಶಬ್ದಗಳ ಪರಿಚಯ ಮಾಡಿಸುತ್ತಿದ್ದಾರೆ. ಇರಲಿ. ಈ ಬಗ್ಗೆ ಇನ್ನೂ ಹೆಚ್ಚು ಬರೆಯುವುದು ನನ್ನ ಆರೋಗ್ಯಕ್ಕೂ ನಿನ್ನ ಆರೋಗ್ಯಕ್ಕೂ ಒಳ್ಳೆಯದಲ್ಲವೆಂದು ನಾ ಬಲ್ಲೆ ಅದರಿಂದ ಇಲ್ಲೇ ನಿಲ್ಲಿಸುತ್ತೇನೆ.

ದೇವರೇ, ನಿನಗೆ ತಿಳಿದ ಹಾಗೆ ನಾನು ಟೈಮ್ ವೇಸ್ಟ್ ಇಂಡಿಯಾ ಅಲ್ಲಲ್ಲ ಸಾರಿ, ಟೈಮ್ಸ್ ಆಫ್ ಇಂಡಿಯಾ-ಎನ್ಐಇ, ವಿಜಯ್ ಟೈಮ್ಸ್, ಈ ಟಿವಿ, ಎ ಎನ್ ಐ ಹೀಗೆ ಹಲವು ಮಾಧ್ಯಮ ಪ್ರಾಕಾರಗಳಲ್ಲಿ ದುಡಿದು ಒಳ್ಳೆ ಅನುಭವ ಗಳಿಸಿಕೊಂಡಿದ್ದೇನೆ. ಆದರೆ ಪತ್ರಿಕೋದ್ಯಮದ ಏಕತಾನತೆಯಿಂದ ಬೇಸತ್ತು ಇದೀಗ ಕೊಂಚ ಬ್ರೇಕ್ ತೆಗೆದುಕೊಂಡಿರುವುದು ನಿನಗೆ ತಿಳಿದೇ ಇದೆ. ಏನಕೇನ ಪ್ರಕಾರೇಣ, ಕನ್ನಡ ಕಿರುತೆರೆಯಲ್ಲಿ ಚರ್ಚೆ ಹುಟ್ಟುಹಾಕಿರುವ ಮುಕ್ತ ಮುಕ್ತ ಧಾರಾವಾಹಿಯಲ್ಲಿ ಮುಖ್ಯಮಂತ್ರಿಗಳ ಚೊಚ್ಚಲ ಪುತ್ರನಾಗಿ ನಟಿಸಲು ಮೊದಲುಮಾಡಿದ್ದೇನೆ. ಆದರೆ ಹಾಗೇಂದು ಹೇಳಿ ಮೀಡಿಯಾವನ್ನು ಮರೆತಿಲ್ಲ. ನನ್ನ ಬೇರುಗಳೂ ಇನ್ನೂ ಮೀಡಿಯಾದಲ್ಲೇ ಇವೆ. ಟೊಂಗೆಗಳು ಮಾತ್ರ ಬೇರೆಬೇರೆ ಕಡೆಗೆ ಪಸರಿಸುತ್ತಿವೆ.

ಈ ಮಧ್ಯೆ ಕಾಷಿಯಸ್ ಮೈಂಡ್. ವರ್ಡ್ ಪ್ರೆಸ್. ಕಾಮ್ ಬ್ಲಾಗ್ ಆರಂಭಿಸಿ ಕಿತಾಪತಿಯನ್ನು ಮುಂದುವರೆಸಿದ್ದೇನೆ. ಈ ಕಿತಾಪತಿಗೆ ನಿರ್ವಿಘ್ನಂ ಕುರುಮೇ ದೇವ….

ನನ್ನಿಂದ ಒಳ್ಳೆಯ ಲೇಖನ ಬರೆಸು ದೇವ…

ಓದುಗರಿಂದ ಒಳ್ಳೆಯ ಕಾಮೆಂಟ್ ತರಿಸು ದೇವ…

ಮತ್ತೇನೂ ವಿಶೇಷವಿಲ್ಲ. ಅಲ್ಲಿನ ಎಲ್ಲ ಹಿರಿ-ಕಿರಿಯ ದೇವರುಗಳಿಗೆ ನನ್ನ ನಮಸ್ಕಾರಗಳನ್ನು ತಿಳಿಸು.

ಇಂತಿ ನಿನ್ನ

ಸುಘೋಷ್.

ಇದನ್ನೂ ಓದು – ನೀನು ಯಾವಾಗ ಬರುವಿಯೆಂದು ಮುಂಚಿತವಾಗಿ ತಿಳಿಸಿದರೆ ರಿಸೀವ್ ಮಾಡಿಕೊಳ್ಳಲು ನಾನೇ ಬರುವೆ.