ಸಾಯೊನಾರಾ…ಸಾಯೊನಾರಾ…ವಾದಾ ನಿಭಾವೋಗೆ ಸಾಯೊನಾರಾ

sayonara

ಜಪಾನ್ ನ ಟೋಕಿಯೋ ನಗರದ ಚುಮುಚುಮು ಮುಂಜಾವು. ವರ್ಷದ ಭಾಗಶಃ ಎಲ್ಲದಿನವೂ ಆಗುವಂತೆ ಅಂದೂ ಕೂಡ ಹನಿಹನಿ ಮಳೆ ಬೀಳುತ್ತಿತ್ತು. ಟೋಕಿಯೋಗೆ ಕೆಲಸದ ನಿಮಿತ್ತ ಬಂದಿದ್ದ ಭಾರತೀಯನೊಬ್ಬ ಬಸ್ ಹಿಡಿದು ಹನೇದಾ ಏರ್ ಪೋರ್ಟ್ ಗೆ ಹೋಗಬೇಕಿತ್ತು. ಸುಮಾರು 6.30 ಕ್ಕೆ ಬಸ್ ಸ್ಟಾಪಿಗೆ ಬಂದ. 6.45 ಕ್ಕೆ ಬಸ್ ಬರುವುದಿತ್ತು. ಬಸ್ ಸ್ಟಾಪಿನಲ್ಲಿ ಈತನೇ ಮೊದಲೇ ವ್ಯಕ್ತಿ. ಐದು ನಿಮಿಷ ನಿಂತುಕೊಂಡ. ಅಷ್ಟರಲ್ಲಾಗಲೇ ಐದಾರು ಜನ ಜಪಾನಿಯರು ಬಂದು ಈತನ ಹಿಂದೆ ನೀಟಾಗಿ ಕ್ಯೂನಲ್ಲಿ ನಿಂತುಕೊಂಡರು. ಬಸ್ ಬರಲು ಇನ್ನೂ 10 ನಿಮಿಷ ಇದೆಯಲ್ಲ ಎಂದುಕೊಂಡು ಈತ ಹತ್ತಿರದಲ್ಲಿಯೇ ಇದ್ದ ಅಂಗಡಿಗೆ ಕೋಕ್ ಕೊಳ್ಳಲೆಂದು ಹೋದ. ಅಂಗಡಿಗೆ ಹೊಕ್ಕ ತಕ್ಷಣ ಒಳಗಿನ ಮರ್ಚಂಟೈಸಿಂಗ್ ನೋಡಿ ವಿಸ್ಮಿತನಾದ. ಸಮಯ ಹೋಗಿದ್ದು ತಿಳಿಯಲಿಲ್ಲ. ಹಾಗೆ ನೋಡುತ್ತಿದ್ದಾಗ ತಕ್ಷಣ ತಾನು ಆಫೀಸಿಗೆ ಹೋಗಬೇಕಾಗಿರುವುದು ನೆನಪಾಯಿತು. ಛಕ್ಕನೆ ಗಡಿಯಾರ ನೋಡಿಕೊಂಡ. ಸರಿಯಾಗಿ 6.45 ತೋರಿಸುತ್ತಿತ್ತು. ಬಿಟ್ಟ ಬಾಣದಂತೆ ಅಂಗಡಿಯಿಂದ ಹೊರಬಂದು ಬಸ್ ಸ್ಪಾಪಿಗೆ ಬಂದ. ಅಲ್ಲಾಗಲೇ ಬಸ್ ಬಂದು ನಿಂತಿತ್ತು. ಆದರೆ ಏನಾಶ್ಚರ್ಯ…..ಬಸ್ ಬಾಗಿಲು ತೆರೆದಿದ್ದರೂ ಯಾರೊಬ್ಬರೂ ಬಸ್ ಹತ್ತುತ್ತಿಲ್ಲ. ಎಲ್ಲರೂ ಈತನನ್ನೇ ನೋಡುತ್ತಿದ್ದಾರೆ. ಈತನಿಗೆ ಏಕೆಂದು ತಿಳಿಯಲಿಲ್ಲ. ಹಾಗೇ ಓಡಿ ಬಂದವನೇ ಬಸ್ ಹತ್ತಿದ. ಆತ ಹತ್ತಿದ ತಕ್ಷಣ ಉಳಿದ ಜಪಾನಿಯರು ಲಗುಬಗೆಯಿಂದ ಬಸ್ ಹತ್ತಿದರು.

ನಂತರ ಆಫೀಸಿನಲ್ಲಿ ನಡೆದ ಘಟನೆಯನ್ನು ಜಪಾನಿ ಮಿತ್ರನೊಬ್ಬನಿಗ ವಿವರಿಸಿದ. ಆಗ ಮಿತ್ರ ಹೇಳಿದ, “ಹೌದು ಇಲ್ಲಿ ಹಾಗೆಯೇ. ಕ್ಯೂ ನಲ್ಲಿ ನೀನು ಮೊದಲಿದ್ದೆಯಲ್ಲೇವೆ? ಹೀಗಾಗಿ ನೀನೇ ಮೊದಲು ಬಸ್ ಹತ್ತಬೇಕು. ನೀನು ಹತ್ತುವವರೆಗೂ ಯಾರೂ ಬಸ್ ಹತ್ತುವುದಿಲ್ಲ. ಕ್ಯೂ ಮುರಿಯುವುದು ಇಲ್ಲಿನ ಶಿಷ್ಟಾಚಾರವಲ್ಲ”.

ಎಲ್ಲ ರೀತಿಯ ಯೋಗಾಸನಗಳನ್ನು ಬಲವಂತವಾಗಿ ಮಾಡಿಸುವ ಪುಣೆಯ ಸಿಟಿಬಸ್ ಗಳು ಈತನಿಗೆ ತಕ್ಷಣ ನೆನಪಾದವು.

(ಈ ಘಟನೆ ಹೇಳಿದ್ದು ನನ್ನ ಚಿಕ್ಕಮ್ಮನ ಮಗ ರೋಹನ್ ಫಣಸಳಕರ್. ಇಲ್ಲಿನ ಕಥಾನಾಯಕ ಆತನೇ)

ದೇವರನ್ನು ನಂಬದವನಿಗೆ…

kol

ಐತಿಹಾಸಿಕ ರಾಜಕೀಯ ಕಾದಂಬರಿ ಅವಧೇಶ್ವರಿಯನ್ನು ಬರೆದವರು ಶಂಕರ್ ಮೊಕಾಶಿ ಪುಣೇಕರ್. ಪುರುಕುತ್ಸ, ಪುರುಕುತ್ಸಾನಿ, ತ್ರಸದುಸ್ಯು, ತಾರ್ಕ್ಷ್ಯ, ಸಿಂಹಭಟ್ಟ ಪ್ರಧಾನ ಪಾತ್ರಗಳು. ಅವರ ಕಾದಂಬರಿ ಓದುತ್ತಿದ್ದಾಗ ತುಂಬ ಇಷ್ಟವಾದ ಸಾಲುಗಳು ಇವು.

ಎಲ್ಲಿಯವರೆಗೆ ಪರಿಸ್ಥಿತಿ ಸಾಧ್ಯಾಸಾಧ್ಯತೆಯ ಅಂಕೆಯಲ್ಲಿ ಇರುತ್ತದೆಯೋ ಅಲ್ಲಿಯವರೆಗೆ ವೈಚಾರಿಕತೆ ಕೆಲಸ ಮಾಡಬಲ್ಲದು.

ಎಲ್ಲಿ ವಿಚಾರದ ಅಂಕೆಗೆ ಸಿಕ್ಕದ ತೊಡಕು ಉಂಟಾಗುತ್ತದೆ, ಅಲ್ಲಿ…..

ಬುದ್ಧಿವಂತ ಕಂಗೆಡುತ್ತಾನೆ.

ಶೃದ್ಧಾವಂತ ದೇವರಿಗೆ ಮೊರೆ ಹೋಗುತ್ತಾನೆ.

ದೇವರನ್ನು ನಂಬದವನಿಗೆ ದೇವರೇ ಗತಿ.

ಇನ್ಸಿಡೆಂಟ್ಸ್ @ 100

100

“ಗೋಧಿ ಮೈ ಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು….”

“ಸರ್ ಅಲ್ಲ…ಅದು …ಆಕರ್ಷಕವಾಗಿಯೇ ಇದ್ದಾಳೆ….”

“ನೋಡಮ್ಮ…. ಎಲ್ಲ ಮಕ್ಕಳು ತಮ್ಮ ತಂದೆ ತಾಯಿಗಳಿಗೆ ಆಕರ್ಷಕವಾಗಿಯೇ ಕಾಣಿಸುತ್ತಾರೆ. ಹೆತ್ತವರಿಗೆ ಅದೇನೋ ಮುದ್ದು ಅಂತಾರಲ್ಲ ಹಾಗೆ….ನೀವು ಹೇಳಿದ ಹಾಗೆ ನಾವು ಬರೆಯುತ್ತ ಹೋದರೆ, ಕಾಣೆಯಾದ ವ್ಯಕ್ತಿಗಳ ಬಗ್ಗೆ ಒಂದೊಂದು ಕಾದಂಬರಿಯನ್ನೇ ಬರೆಯಬೇಕಷ್ಟೇ.ಹಾಂ..ಮುಂದಕ್ಕೆ ಬರ್ಕೊಳಪ್ಪ. ಐದಡಿ ಎರಡಿಂಚು ಎತ್ತರ. ದಿನಾಂಕ …….ರಿಂದ ತ್ಯಾಗರಾಜನಗರ ಪೋಲಿಸ್ ಠಾಣಾ ವ್ಯಾಪ್ತಿಯಿಂದ ಕಾಣೆಯಾಗಿರುತ್ತಾರೆ”.

“ಸರ್ ಹೋಗುವಾಗ ಇಪ್ಪತ್ತು ಸಾವಿರ ರೂಪಾಯಿ ಎಟಿಎಂನಿಂದ ವಿತ್ ಡ್ರಾ ಮಾಡಿದ್ದಾಳೆ. ನಾನ್ ಹೇಳಿದ್ನಲ್ಲ ಸರ್ ಬೇಡ ಬೇಡ ಅಂದ್ರೂ ಆ ಹುಡುಗನ ಜೊತೆ ತಿರಗ್ ತಿದ್ಲು. ಬಹುಶಃ ಅವನ ಜೊತೆಯೇ…..”

“ನೋಡಿಮ್ಮ…ನಾವು ಎಲ್ಲಾ ಸಾಧ್ಯತೆನೂ ಪರಿಶೀಲಸ್ ತೀವಿ. ಅವ್ಳು ನಿಮ್ಮ ಮಗಳು. ನಾವು ಹಾಗೆಲ್ಲ ಈಗ್ಲೇ ಕನ್ಕ್ಲೂಷನ್ ಗೆ ಬರಬಾರ್ದು. ಹೋಗಿದ್ರೆ ಎಲ್ಲ ಹೋಗಿರ್ತಾರೆ ಹೇಳಿ…ತಿರುಪತಿ, ಧರ್ಮಸ್ಥಳ, ಉಡುಪಿ ಅಷ್ಟೇ. ಮೊಬೈಲ್ ಪ್ರಿಂಟ್ ಔಟ್ ಬಂದ ಮೇಲೆ ಟ್ರೇಸ್ ಮಾಡಲು ಈಝಿ ಆಗುತ್ತೆ. ಆದ್ರೆ ನಿಮ್ಮ ಮಗಳು ಮೊಬೈಲ್ ಆನ್ ಮಾಡಿಟ್ಟುಕೊಂಡಿರಬೇಕು ಅಷ್ಟೇ”.

ಎಸ್ ಐ ಡಿಕ್ಟೆಷನ್ ಮುಂದುವರೆಸಿದ. ರೈಟರ್ ಬರೆದುಕೊಳ್ಳುವುದನ್ನು ಮುಂದುವರೆಸಿದ.

———————————————————–

ಮತ್ತೊಂದು ಕೋಣೆಯಲ್ಲಿ ….

“ಆಗೋದಿಲ್ಲ ಸಾರ್….ಯಾರು ಪಾಸ್ ಪೋರ್ಟ್ ಅಪ್ಲಿಕೇಷನ್ ಕೊಟ್ಟಿದಾರೋ ಅವರು ಪರ್ಸನಲ್ ಆಗಿ ಬಂದು ಸಾಹೇಬ್ರನ್ನ ಮೀಟ್ ಮಾಡ್ಬೇಕು. ಪಕ್ಕದ ಮನೆಯಿಂದ್ಲೇ ಯಾವಾಗ ಟೆರರಿಸ್ಟುಗಳು ಅರೆಸ್ಟು ಆಗಲು ಆರಂಭಿಸಿದ್ದಾರೋ ಅಂದಿನಿಂದ ನಾವು ಸಹ ಫುಲ್ ಸೇಫ್ ಆಗಿ ಡೀಲ್ ಮಾಡ್ತಾ ಇದೀವಿ. ಬೇಜಾರು ಮಾಡ್ಕೋಬೇಡಿ. ನೀವು ಜರ್ನಲಿಸ್ಟ್ ಇದೀರಿ ಅಂತೀರಾ…ನೀವೇ ನಮ್ಮ ಕಷ್ಟ ಅರ್ಥ ಮಾಡ್ಕೊಳ್ದಿದ್ರೆ ಇನ್ಯಾರು ಮಾಡ್ಕೋಳ್ ಬೇಕು ಹೇಳಿ…”

—————————————————————

ಸ್ವಲ್ಪ ಹೊತ್ತಿನ ನಂತರ ಹೆಡ್ ಕಾನ್ಸಟೇಬಲ್ ಗೊಣಗುತ್ತಿದ್ದ….

“ಪೋಲಿಸ್ ಠಾಣೆಯಲ್ಲಿ ಕಾಸು ತೋರಿಸಿದ್ರೆ ಕೆಲಸ ಆಗಿ ಬಿಡುತ್ತೆ ಅಂತ ತಿಳ್ಕೊಂಡ್ ಬಿಟ್ಟಿದ್ದಾರೆ. ಏನ್ ಜನಾನೋ ಏನೋ. ಅಲ್ರೀ ಸಬ್ ರಿಜಿಸ್ಟ್ರಾರ್ ಆಫೀಸಿಗೆ ಹೋಗಿ ಕೆಲಸ ಮಾಡಿಕೊಂಡು ಬನ್ನಿ ನೋಡೋಣ. ನನ್ನದೇ ಜಮೀನು ವಿಷಯದಲ್ಲಿ ಡಾಕ್ಯುಮೆಂಟ್ ಎಲ್ಲಾ ಪಕ್ಕಾ ಇದ್ದರೂ ಕಣ್ಣಿನಲ್ಲಿ ನೀರು ಬರಿಸಿಕೊಂಡು ಒಂದು ತಿಂಗಳ ಸಂಬಳ ಐದು ಸಾವಿರ ರೂಪಾಯಿ ಸಬ್ ರಿಜಿಸ್ಟ್ರಿ ಕೈಯಲ್ಲಿಡುವಾಗ ಹೇಗಾಗಿತ್ತು ಗೊತ್ತ…?ನನ್ನ ಇಪ್ಪತ್ತೈದು ವರ್ಷಗಳ ಸರ್ವೀಸಿನಲ್ಲಿ ಇಲ್ಲಿವರೆಗೂ ಒಂದೇ ಒಂದು ಪೈಸೆ ಲಂಚ ತಗೊಂಡಿಲ್ಲ ಗೊತ್ತಾ?”

————————————————————–

ಅಷ್ಟರಲ್ಲಿ ವಾಕಿ ಟಾಕಿ ಚೀರಿತು…..

ಸುಮಾರು 26 ವರ್ಷದ ತರುಣ ಹಾಗೂ ಸುಮಾರು 20 ವರ್ಷದ ತರುಣಿಯ ಮೃತ ದೇಹ ಕಾಂಟೋನ್ಮೆಂಟ್ ರೈಲ್ವೆ ನಿಲ್ದಾಣದ ಬಳಿ ಪತ್ತೆಯಾಗಿರುತ್ತದೆ. ಹುಡುಗ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಹಾಗೂ ಕಪ್ಪು ಅಂಗಿ ಧರಿಸಿರುತ್ತಾನೆ. ತರುಣಿಯು ಕೆಂಪು ಬಣ್ಣದ ಸಲ್ವಾರ್ ಕುರ್ತಾ ಧರಿಸಿರುತ್ತಾಳೆ. ಇಂದು ಮುಂಜಾನೆ ಈ ಇಬ್ಬರು ರೈಲ್ವೆ ನಿಲ್ದಾಣದಲ್ಲಿ ತಿರುಗಾಡುತ್ತಿದ್ದರು ಎನ್ನಲಾಗಿದೆ. ಇವರು ಪ್ರೇಮಿಗಳಿರಬಹುದು ಎಂದು ಶಂಕಿಸಲಾಗಿದೆ. ಮುಖ ರೈಲಿಗೆ ಸಿಕ್ಕು ಸಂಪೂರ್ಣ…..ಹೋಗಿರುವುದರಿಂದ ಗುರುತು ಪತ್ತೆ ಕಷ್ಟವಾಗಿದೆ. ಯಾರಾದರೂ ವಾರಸುದಾರರಿದ್ದಲ್ಲಿ ವಿಕ್ಟೋರಿಯಾ ಆಸ್ಪತ್ರೆಯನ್ನು ಸಂಪರ್ಕಿಸಬಹುದು.

———————————————————

ಪಿಸಿ ಮತ್ತೊಬ್ಬನಿಗೆ ಹೇಳುತ್ತಿದ್ದ….

“ಬೋ…..ಮಗ ಹೇಳಿಕೊಳ್ಳಾಕೆ ಡಾಕ್ಟರು. ಮಾಡೋದು ಮಾತ್ರ ಹಲ್ಕಾ ಕೆಲಸ. ಪಾಸ್ ಪೋರ್ಟ್ ಹೇಗಾದ್ರೂ ಆಗುತ್ತೆ ಅಂತ ಏಜೆಂಟನ್ನ ಹಿಡ್ಕೊಂಡಿದ್ದ. ಈಗ ನೋಡಿ ಹಲ್ಕಟ್ ಪ್ಯಾಲೆ ಥರ ಆಡ್ತಾ ಇದಾನೆ. ಕಳೆದ ಎರಡು ವರ್ಷದಿಂದ ಆ ಮನೆಯಲ್ಲೇ ಇದೀನಿ ಅಂತ ಪತ್ರ ಬರೆದುಕೊಂಡು ಓನರ್ ಸೈನ್ ಫೋರ್ಜರಿ ಮಾಡಿದ್ದ. ಇಪ್ಪತ್ತೈದು ವರ್ಷದ ಸರ್ವಿಸ್ ನಂದು. ಇಂಥ ನೂರಾರು ಕೇಸ್ ನೋಡಿದೀನಿ….”

—————————————————————-

ಠಾಣೆಯಲ್ಲಿದ್ದ ಟಿವಿ ಬೊಂಬಡ ಬಜಾಯಿಸಿತು…

“ಭಾರೀ ತಿಮಿಂಗಿಲಗಳು ಲೋಕಾಯುಕ್ತ ಬಲೆಗೆ.

ಲೋಕಾಯುಕ್ತ ಪೋಲಿಸರು ಇಂದು ಬೆಳಗಿನ ಜಾವ ಹತ್ತು ಜನ ಸಬ್ ರಿಜಿಸ್ಟ್ರಾರ್ ಗಳು ಹಾಗೂ ಇಬ್ಬರು ಎಸ್ ಪಿ ಗಳ ಮನೆಗಳ ಮೇಲೆ ಮಿಂಚಿನ ದಾಳಿ ನಡೆಸಿ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವುದನ್ನು ಪತ್ತೆ ಹಚ್ಚಿದ್ದಾರೆ. ಈ ಎಲ್ಲರೂ ನಿವೃತ್ತಿ ವಯಸ್ಸನ್ನು ಸಮೀಪಿಸುತ್ತಿದ್ದು, ನಗರದ ಪ್ರತಿಷ್ಥಿತ ಬಡಾವಣೆಗಳಲ್ಲಿ ಅಪಾರ್ಟಮೆಂಟ್, ರೆಸಾರ್ಟ್ ಹಾಗೂ ಹೋಟೆಲ್ ಗಳನ್ನು ಹೊಂದಿದ್ದಾರೆ. ಬನ್ನಿ ಈ ಕುರಿತು ಹೆಚ್ಚಿನ ಮಾಹಿತಿ ಪಡೆಯೋಣ ನಮ್ಮ ಪ್ರತಿನಿಧಿ ಮೇಕ್ ಮನಿ ಅವರಿಂದ….

“ಮೇಕ್ ಮನಿ, ಹೇಳಿ ಇವ್ರು ಇಷ್ಟೆಲ್ಲ ಹಣ ಮಾಡ್ಕೊಂಡಿದ್ದು ಹೇಗೆ?”

“ಏನೊಂದು ಇವತ್ತು ಏನೊಂದು ಈ ದಾಳಿ ನಡೆದಿದೆ. ಏನೊಂದು ಈ ದಾಳಿಯಲ್ಲಿ ಲೋಕಾಯುಕ್ತರು ಏನೊಂದು ಈ ಹತ್ತು ಜನ ಸಬ್ ರಿಜಿಸ್ಟ್ರಿಗಳ ಮನೆ ಮೇಲೆ ಏನೊಏಓನಏನೊಂದು ದಾಳಿ ನಡೆಸಿ ಏನೊಂದು ಇಬ್ರು ಎಸ್ ಪಿಗಳ ಮನೆ ಏನೊಂದು ಈ…. ಆ….ಉ…ಎ……”

ಇಂಥವರಿದ್ದರೆ, ದೇವರು ದೆವ್ವ ಇಬ್ಬರೂ ಬೇಡ!!

jyotishi

ಶ್ರೀ. ………………., ಪ್ರಸಿದ್ಧ ದೈವಶಕ್ತಿ ಜ್ಯೋತಿಷ್ಯರು

ಮಾನವನ ಬದುಕು ಜನನ-ಮರಣಗಳ ನಡುವೆ ಸಾಗುವ ಸಂಕಷ್ಟಗಳ ಅಕ್ಷಯ ಪಾತ್ರೆ. ಸದಾ ಕಾಡುವ ನಮ್ಮ ಕಷ್ಟಗಳಿಗೆ ಬೆಳಕಾಗಿ ಕಾಣುವುದು ಜೋತಿಷ್ಯ ಶಾಸ್ತ್ರ. ನಿಮ್ಮ ಬದುಕಿನ ಭವ್ಯ ಭವಿಷ್ಯಯದ ಕನಸು ನನಸು ಮಾಡಲು ಬಹುಜನರ ಒತ್ತಾಯದ ಮೇರೆಗೆ ಬೆಂಗಳೂರಿನಲ್ಲೇ ವಾಸವಾಗಿದ್ದಾರೆ ಶ್ರೀ…………ಜ್ಯೋತಿಷಿ. ನಿಮ್ಮ ಸಮಸ್ಯೆಗೆ ಪರಿಹಾರ ಸಿಗದೆ ನೊಂದಿದ್ದರೆ ಯಾವುದೇ ಕಠಿಣ ಸಮಸ್ಯೆಗಳಿಗೆ ಅತೀಶೀಘ್ರ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯೆ, ನಿರುದ್ಯೋಗ, ವ್ಯಾಪರದಲ್ಲಿ ನಷ್ಟ, ವಿವಾಹ ವಿಳಂಬ, ಸಂತಾನ ಹೀನತೆ, ಸ್ತ್ರೀ-ಪುರುಷ ವಶೀಕರಣ, ಪ್ರೇಮ ವೈಫಲ್ಯ, ಪತಿ-ಪತ್ನಿ ಅಶಾಂತಿ, ಅನಾರೋಗ್ಯ, ಕುಟುಂಬ ಸಮಸ್ಯೆ, ಶತ್ರು ಕಾಟ, ಜಾಗದ ವ್ಯಾಜ್ಯೆ, ಬಿಜನೆಸ್, ವಿದೇಶ ಪ್ರಯಾಣ, ಸಾಲಬಾಧೆ, ಶತ್ರು ಬಾಧೆ, ದಾಂಪತ್ಯ, ಲೈಂಗಿಕ ಸುಖ, ಮನಃಶಾಂತಿ, ಕೋರ್ಟ್ ಕೇಸ್, ಮಾಟಮಂತ್ರ, ದುಷ್ಟ ಶಕ್ತಿ, ಗುಪ್ತ ಸಮಸ್ಯೆ ಸೇರಿದಂತೆ ನಿಮ್ಮ ಎಲ್ಲಾ ತೊಂದರೆಗಳಿಗೂ ಕೇರಳದ ಶಾಸ್ತ್ರೀಯ ಪದ್ಧತಿಯಿಂದ ಶಾಶ್ವತ ಪರಿಹಾರ ಶತಸಿದ್ಧ.

ನಿಮ್ಮ ಸಮಸ್ಯೆಗಳಿಗೆ ಕೇವಲ 7 ದಿನಗಳಲ್ಲಿ ಪರಿಹಾರ ಮಾಡಿಕೊಡುತ್ತಾರೆ. ಇಲ್ಲದಿದ್ದರೆ ಹಣ ವಾಪಸ್.

ಐದು ಪ್ರಶ್ನೆಗಳಿಗೆ ಉಚಿತ ಉತ್ತರ.

ವಿಳಾಸ- ರೂಮ್ ನಂ. ………, , ಡೀಲಕ್ಸ್ ಲಾಡ್ಜ್,. ಮೆಜೆಸ್ಟಿಕ್, ಗಾಂಧಿನಗರ ಬೆಂಗಳೂರು.

ನಮ್ಮ ಬಳಿ ಲಕ್ಷಾಂತರ ಜನರು ಸಮಸ್ಯೆ ಪರಿಹಾರ ಮಾಡಿಕೊಂಡು ಹೋಗಿದ್ದಾರೆ.

——————————————————-

ಈಗ ಹೇಳಿ ಇಂಥವರಿದ್ದರೆ ದೇವರು ದೆವ್ವ ಎಲ್ಲ ಬೇಕಾ?

ಇಂಟರ್ನೆಟ್ ನಲ್ಲಿ ಬೇಸಾಯ ಪದ್ಧತಿ

1234

“ವಜ್ರದಂತಿ…. ವಜ್ರದಂತಿ…… ವಿಕೋ ವಜ್ರದಂತಿ

ವಿಕೋ ಪೌಡರ್ ವಿಕೋ ಪೇಸ್ಟ್……

ಆಯುರ್ವೇದಿಕ್ ಜಡಿ ಬೂಟಿಯೊಂಸೆ ಬನಾ ಸಂಪೂರ್ಣ ಸ್ವದೇಶಿ

ವಿಕೋ…… ವಜ್ರದಂತಿ”

ವಿವಿಧ ಭಾರತಿಯಲ್ಲಿ ರಾತ್ರಿ 10.30 ಕ್ಕೆ ಆರಂಭವಾಗುವ ‘ಆಪ್ ಕೀ ಫರಮಾಯಿಶ್’ ಕಾರ್ಯಕ್ರಮದಲ್ಲಿನ ಈ ಜಾಹಿರಾತನ್ನು ಕೇಳಿಯೇ ನಾನು ನಿದ್ದೆಹೋಗುವುದು. ಇನ್ನೇನು ಕಣ್ಣು ಹತ್ತಬೇಕು, ಅಷ್ಟರಲ್ಲಿ ನನ್ನ ಗೆಳತಿ ಫೋನಾಯಿಸಿದಳು. ನಾನು ಹಲೋ ಎನ್ನುವ ಮೊದಲೇ “ಹಾವೆರ್ಸ್ಟ್ ಯಾರ್” ಎಂದಳು. ನನಗೆ ಅರ್ಥವಾಗಲಿಲ್ಲ. “ವಾಟ್?” ಎಂದೆ. “ಇಫ್ ಯೂ ಡೋಂಟ್ ಹಾರ್ವೆಸ್ಟ್ ನೌ ಇಟ್ ವಿಲ್ ಪೆರಿಶ್” ಎಂದಳು. ಆಗ ಅರ್ಥವಾಯಿತು. ಮಹಾರಾಯತಿ ಫಾರ್ಮ್ ವಿಲ್ಲೆ ಬಗ್ಗೆ ಮಾತನಾಡುತ್ತಿದ್ದಾಳೆ ಎಂದು. “ಕಾನ್ ಐ ಹಾರ್ವೆಸ್ಟ್ ಟುಮಾರೋ ಮಾರ್ನಿಂಗ್” ಕೇಳಿದೆ. “ನೋ. ಐ ಡೋಂಟ್ ಥಿಂಕ್ ಸೋ,,,ಎ ವೇಟ್…. ಐ ವಿಲ್ ಕಾಲ್ ಯೂ ಲೇಟರ್…ಐ ಆಮ್ ಸಪ್ಪೋಸ್ಡ್ ಟು ಗೋ ಟು ದಿ ಮಾರ್ಕೆಟ್ ನೌ ….ಓಕೆ…..ಬೈ…ಟೇಕ್ ಕೇರ್…..”ಎಂದು ಹೇಳಿ ಫೋನಿಟ್ಟಳು.

ಫೇಸ್ ಬುಕ್ ನಲ್ಲಿ ಫಾರ್ಮ್ ವಿಲ್ಲೆ ಎಂಬ ಆಟವೊಂದಿದೆ. ಸಿಂಪಲ್ ಆಟ. ನಿಮಗೆ ಒಂದಿಷ್ಟು ಜಮೀನಿರುತ್ತದೆ. ಅಲ್ಲಿ ಮೆಕ್ಕೆಜೋಳ, ಬದನೆಕಾಯಿ, ಟೋಮೆಟೋ, ಗೋಡಂಬಿ, ಅವರೆಕಾಯಿ ಸೇರಿದಂತೆ ಹಲವು ದವಸಧಾನ್ಯಗಳನ್ನು ಬೆಳೆಯಬಹುದು. ಅಷ್ಟೇ ಅಲ್ಲ ಕುರಿ, ಆಕಳು ಸಾಕಾಣಿಕೆ ಸೇರಿದಂತೆ ಹಲವು ಕೃಷಿಪೂರಕ ಕೆಲಸಗಳನ್ನು ಮಾಡಬಹುದು. ಧಾನ್ಯ ಮಾರಿ ಬಂದ ಹಣದಿಂದ ಮಾರ್ಕೆಟ್ ಗೆ ಹೋಗಿ ಬೀಜಗಳನ್ನು ಖರೀದಿಸಿ ಬಿತ್ತನೆ ಮಾಡಬಹುದು. ನಿಮ್ಮ ಪಕ್ಕದ ಜಮೀನಿಗೆ ಬರುವಂತೆ ನಿಮ್ಮ ಗೆಳೆಯರನ್ನು ಆಹ್ವಾನಿಸಬಹುದು. ಅವರಿಗೆ ಆಕಳು, ಕುರಿ, ಮರ ಹೀಗೆ ಹಲವು ಕೃಷಿಗೆ ನೆರವಾಗಬಲ್ಲಂತಹುಗಳನ್ನು ಗಿಫ್ಟ್ ನೀಡಬಹುದು. ಹೀಗೆ ಮಾಡುತ್ತ ಮಾಡುತ್ತ ನಿಮ್ಮ ಪಾಯಿಂಟ್ಸ್ ಹೆಚ್ಚಿಸುತ್ತ ಹೋಗಬೇಕು.

ಆಮೆಗೂ ಅವಮಾನವಾಗುವ ಹಾಗಿರುವ ನನ್ನ ಇಂಟರ್ನೆಟ್ ಕನೆಕ್ಷನ್ ನಿಂದ ಈ ಆಟ ಆಡುವುದು ಸಾಧ್ಯವೇ ಇರಲಿಲ್ಲ. ನನ್ನ ಜಮೀನಿನಲ್ಲಿ ತಿರುಗಾಡುವ ಸಂದರ್ಭದಲ್ಲಿ ಆಕಸ್ಮಾತ್ತಾಗಿ ಬೀಜ ಬಿತ್ತನೆಯಾಗಿಬಿಟ್ಟಿತ್ತು. ಕೇವಲ ನಾಲ್ಕು ಗಂಟೆಯಲ್ಲಿ ಬೆಳೆ ಬಂದುಬಿಟ್ಟಿತ್ತು. ಅದನ್ನು ಬೇಗ ಹಾರ್ವೆಸ್ಟ್ ಯಾರ್ ಇಲ್ಲದಿದ್ದರೆ ಅದು ಪೆರಿಶ್ ಎಂದು ಹೇಳಲು ನನ್ನ ಗೆಳತಿ ಫೋನ್ ಮಾಡಿದ್ದಳು.

ನಂತರ ನನಗೆ ನಿದ್ದೆ ಹತ್ತಲಿಲ್ಲ.

ಯಾವ ಹಂತಕ್ಕೆ ಬೆಳೆದು ಬಿಟ್ಟಿದ್ದೇವಲ್ಲ ಎಂಬ ಯೋಚನೆ ಬಂತು. ನಮಗೆ ಕೃಷಿ ಬೇಡ. ಕೃಷಿಕ ಬೆಂಬಲ ಬೆಲೆ ಇಲ್ಲದೆ, ಗೊಬ್ಬರವಿಲ್ಲದೆ, ಸಾಲ ತೀರಿಸಲಾಗದೆ ಸಾಯುತ್ತಿದ್ದಾನೆ. ಆತನ ಬಗ್ಗೆ ಕನ್ಸರ್ನ್ ಇಲ್ಲ. ರೈತ ಹೋರಾಟಗಳಿಗೆ ಬೆಲೆಯಿಲ್ಲ. ರೈತನ ಆತ್ಮಹತ್ಯೆಗೆ ಕ್ಯಾರೆ ಇಲ್ಲ.  ಸಗಣಿ ಕಂಡರೆ ಮುಖ ಸಿಂಡರಿಸುವ, ಬೆಂಗಳೂರಿನಲ್ಲಿ ಮಳೆ ಬಂದರೆ ಶಪಿಸುವ ನಮಗೆ ಫಾರ್ಮ್ ವಿಲ್ಲೆ ಮಾತ್ರ ಬೇಕು. ಇಂಟರ್ನೆಟ್ ನಲ್ಲಿ ಕೃಷಿ ಮಾತ್ರ ಬೇಕು. ಹೇಗಿದೆ ನೋಡಿ ತಮಾಷೆ?

ಊರಿಗೆ ಹೋದಾಗಲೆಲ್ಲ ಅಣ್ಣನಿಗೆ ಕುತ್ರಿ ಹಾಕಲು ಸಹಾಯ ಮಾಡುವ, ಬಟ್ಟು ಕೊಯ್ದುಕೊಂಡು ಅಡಕೆ ಸುಲಿಯುವ, ಕೊಟ್ಟಿಗೆಯಲ್ಲಿ ಸಗಣಿ ಬಳಿಯುವ, ಎರೆಗೊಬ್ಬರದಲ್ಲಿ ಎರೆಹುಳು ಆರಿಸುವ ನನಗೆ ಈ ಫಾರ್ಮ್ ವಿಲ್ಲೆ ನಿಜಕ್ಕೂ ತಮಾಷೆಯಾಗಿ ಕಂಡಿತು.  

ನನಗೆ ಫಾರ್ಮ್ ವಿಲ್ಲೆ ಬಗ್ಗೆಯಾಗಲಿ ಅಥವಾ ಈ ರೀತಿಯ ಆಟದ ಬಗ್ಗೆಯಾಗಲಿ ಯಾವುದೇ ಗ್ರಜ್ ಇಲ್ಲ. ಈ ಆಟವಾಡುವವರು ನನ್ನ ಗೆಳೆಯ ಗೆಳತಿಯರೇ ಆಗಿರುವುದರಿಂದ ಅವರ ಬಗ್ಗೆ ಕೋಪವೂ ಇಲ್ಲ. ಆದರೆ ಒಟ್ಟಾರೆ ನಾವು ಸಾಗುತ್ತಿರುವ ದಿಕ್ಕಿನ ಬಗ್ಗೆ ಯೋಚನೆಯಾಯಿತು. ವಾಸ್ತವತೆಯನ್ನು ಧಿಕ್ಕರಿಸುವ, ಅದೇ ವಾಸ್ತವತೆ ಬೇರೊಂದು ರೂಪದಲ್ಲಿ ಬಂದರೆ ಅಪ್ಪಿಕೊಳ್ಳುವ ಮನೋಧರ್ಮ ವಿಚಿತ್ರವಾಗಿದೆಯಲ್ಲ ಅನಿಸಿತು. ಫಾರ್ಮ್ ವಿಲ್ಲೆಯಂತಹ ಆಟವನ್ನು ಶೋಧಿಸಿರುವ ವ್ಯಕ್ತಿ, ಆಟದ ಜೊತೆಜೊತೆಗೇ ಕೃಷಿಕರಿಗೆ ನೆರವಾಗಬಲ್ಲವಂತಹುದನ್ನೇನಾದರೂ ಮಾಡಿದರೆ ಉತ್ತಮ ಅಲ್ಲವೆ? ಹಾಗೆಯೇ ಕೇವಲ ಫಾರ್ಮ್ ವಿಲ್ಲೆ ಆಡುವ ಗೆಳೆಯ-ಗೆಳತಿಯರು ಕೃಷಿ, ಕೃಷಿಕನ ಏಳಿಗೆಗಾಗಿ ವಾಸ್ತವ ನೆಲೆಗಟ್ಟಿನಲ್ಲಿ ಏನಾದರೂ ಯೋಚನೆ ಮಾಡಬಹುದಲ್ಲವೆ?

ಒಂಬತ್ತರ ಗಮ್ಮತ್ತು

9

ಕನ್ನಡದ ಖ್ಯಾತ ಟಿವಿ ಚಾನಲ್ ಒಂದು ಹಲವಾರು ತಿಂಗಳುಗಳಿಂದ ಈ ಸ್ಕ್ರಾಲ್ ಬಿಡುತ್ತಿದೆ.

“ನಮ್ಮ ಚಾನೆಲ್ ಹೆಸರು ಹೇಳಿಕೊಂಡು ಯಾರಾದರೂ ನಿಮ್ಮ ಹತ್ತಿರ ಹಣ ಕೇಳಿದರೆ ಅಥವಾ ಬೆದರಿಸಿದರೆ 080———- ಈ ನಂಬರ್ ಗೆ ಕಾಲ್ ಮಾಡಿ ನಮಗೆ ತಿಳಿಸಿ”.

ಆ ಚಾನೆಲ್ ನ ಪತ್ರಕರ್ತರೇ ಜನರಿಂದ ನೇರಾನೇರ ಹಣಪಡೆದು ಕೆಲಸ ಬಿಟ್ಟು (ಅಥವಾ ಕೆಲಸ ಬಿಡಿಸಿ) ಹೋಗುತ್ತಿರುವಾಗ ಮೇಲಿನ ಹೇಳಿಕೆ ವಿಪರ್ಯಾಸವೆನಿಸುವುದಿಲ್ಲವೆ?