ಇನ್ಸಿಡೆಂಟ್ಸ್ @ 100

100

“ಗೋಧಿ ಮೈ ಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು….”

“ಸರ್ ಅಲ್ಲ…ಅದು …ಆಕರ್ಷಕವಾಗಿಯೇ ಇದ್ದಾಳೆ….”

“ನೋಡಮ್ಮ…. ಎಲ್ಲ ಮಕ್ಕಳು ತಮ್ಮ ತಂದೆ ತಾಯಿಗಳಿಗೆ ಆಕರ್ಷಕವಾಗಿಯೇ ಕಾಣಿಸುತ್ತಾರೆ. ಹೆತ್ತವರಿಗೆ ಅದೇನೋ ಮುದ್ದು ಅಂತಾರಲ್ಲ ಹಾಗೆ….ನೀವು ಹೇಳಿದ ಹಾಗೆ ನಾವು ಬರೆಯುತ್ತ ಹೋದರೆ, ಕಾಣೆಯಾದ ವ್ಯಕ್ತಿಗಳ ಬಗ್ಗೆ ಒಂದೊಂದು ಕಾದಂಬರಿಯನ್ನೇ ಬರೆಯಬೇಕಷ್ಟೇ.ಹಾಂ..ಮುಂದಕ್ಕೆ ಬರ್ಕೊಳಪ್ಪ. ಐದಡಿ ಎರಡಿಂಚು ಎತ್ತರ. ದಿನಾಂಕ …….ರಿಂದ ತ್ಯಾಗರಾಜನಗರ ಪೋಲಿಸ್ ಠಾಣಾ ವ್ಯಾಪ್ತಿಯಿಂದ ಕಾಣೆಯಾಗಿರುತ್ತಾರೆ”.

“ಸರ್ ಹೋಗುವಾಗ ಇಪ್ಪತ್ತು ಸಾವಿರ ರೂಪಾಯಿ ಎಟಿಎಂನಿಂದ ವಿತ್ ಡ್ರಾ ಮಾಡಿದ್ದಾಳೆ. ನಾನ್ ಹೇಳಿದ್ನಲ್ಲ ಸರ್ ಬೇಡ ಬೇಡ ಅಂದ್ರೂ ಆ ಹುಡುಗನ ಜೊತೆ ತಿರಗ್ ತಿದ್ಲು. ಬಹುಶಃ ಅವನ ಜೊತೆಯೇ…..”

“ನೋಡಿಮ್ಮ…ನಾವು ಎಲ್ಲಾ ಸಾಧ್ಯತೆನೂ ಪರಿಶೀಲಸ್ ತೀವಿ. ಅವ್ಳು ನಿಮ್ಮ ಮಗಳು. ನಾವು ಹಾಗೆಲ್ಲ ಈಗ್ಲೇ ಕನ್ಕ್ಲೂಷನ್ ಗೆ ಬರಬಾರ್ದು. ಹೋಗಿದ್ರೆ ಎಲ್ಲ ಹೋಗಿರ್ತಾರೆ ಹೇಳಿ…ತಿರುಪತಿ, ಧರ್ಮಸ್ಥಳ, ಉಡುಪಿ ಅಷ್ಟೇ. ಮೊಬೈಲ್ ಪ್ರಿಂಟ್ ಔಟ್ ಬಂದ ಮೇಲೆ ಟ್ರೇಸ್ ಮಾಡಲು ಈಝಿ ಆಗುತ್ತೆ. ಆದ್ರೆ ನಿಮ್ಮ ಮಗಳು ಮೊಬೈಲ್ ಆನ್ ಮಾಡಿಟ್ಟುಕೊಂಡಿರಬೇಕು ಅಷ್ಟೇ”.

ಎಸ್ ಐ ಡಿಕ್ಟೆಷನ್ ಮುಂದುವರೆಸಿದ. ರೈಟರ್ ಬರೆದುಕೊಳ್ಳುವುದನ್ನು ಮುಂದುವರೆಸಿದ.

———————————————————–

ಮತ್ತೊಂದು ಕೋಣೆಯಲ್ಲಿ ….

“ಆಗೋದಿಲ್ಲ ಸಾರ್….ಯಾರು ಪಾಸ್ ಪೋರ್ಟ್ ಅಪ್ಲಿಕೇಷನ್ ಕೊಟ್ಟಿದಾರೋ ಅವರು ಪರ್ಸನಲ್ ಆಗಿ ಬಂದು ಸಾಹೇಬ್ರನ್ನ ಮೀಟ್ ಮಾಡ್ಬೇಕು. ಪಕ್ಕದ ಮನೆಯಿಂದ್ಲೇ ಯಾವಾಗ ಟೆರರಿಸ್ಟುಗಳು ಅರೆಸ್ಟು ಆಗಲು ಆರಂಭಿಸಿದ್ದಾರೋ ಅಂದಿನಿಂದ ನಾವು ಸಹ ಫುಲ್ ಸೇಫ್ ಆಗಿ ಡೀಲ್ ಮಾಡ್ತಾ ಇದೀವಿ. ಬೇಜಾರು ಮಾಡ್ಕೋಬೇಡಿ. ನೀವು ಜರ್ನಲಿಸ್ಟ್ ಇದೀರಿ ಅಂತೀರಾ…ನೀವೇ ನಮ್ಮ ಕಷ್ಟ ಅರ್ಥ ಮಾಡ್ಕೊಳ್ದಿದ್ರೆ ಇನ್ಯಾರು ಮಾಡ್ಕೋಳ್ ಬೇಕು ಹೇಳಿ…”

—————————————————————

ಸ್ವಲ್ಪ ಹೊತ್ತಿನ ನಂತರ ಹೆಡ್ ಕಾನ್ಸಟೇಬಲ್ ಗೊಣಗುತ್ತಿದ್ದ….

“ಪೋಲಿಸ್ ಠಾಣೆಯಲ್ಲಿ ಕಾಸು ತೋರಿಸಿದ್ರೆ ಕೆಲಸ ಆಗಿ ಬಿಡುತ್ತೆ ಅಂತ ತಿಳ್ಕೊಂಡ್ ಬಿಟ್ಟಿದ್ದಾರೆ. ಏನ್ ಜನಾನೋ ಏನೋ. ಅಲ್ರೀ ಸಬ್ ರಿಜಿಸ್ಟ್ರಾರ್ ಆಫೀಸಿಗೆ ಹೋಗಿ ಕೆಲಸ ಮಾಡಿಕೊಂಡು ಬನ್ನಿ ನೋಡೋಣ. ನನ್ನದೇ ಜಮೀನು ವಿಷಯದಲ್ಲಿ ಡಾಕ್ಯುಮೆಂಟ್ ಎಲ್ಲಾ ಪಕ್ಕಾ ಇದ್ದರೂ ಕಣ್ಣಿನಲ್ಲಿ ನೀರು ಬರಿಸಿಕೊಂಡು ಒಂದು ತಿಂಗಳ ಸಂಬಳ ಐದು ಸಾವಿರ ರೂಪಾಯಿ ಸಬ್ ರಿಜಿಸ್ಟ್ರಿ ಕೈಯಲ್ಲಿಡುವಾಗ ಹೇಗಾಗಿತ್ತು ಗೊತ್ತ…?ನನ್ನ ಇಪ್ಪತ್ತೈದು ವರ್ಷಗಳ ಸರ್ವೀಸಿನಲ್ಲಿ ಇಲ್ಲಿವರೆಗೂ ಒಂದೇ ಒಂದು ಪೈಸೆ ಲಂಚ ತಗೊಂಡಿಲ್ಲ ಗೊತ್ತಾ?”

————————————————————–

ಅಷ್ಟರಲ್ಲಿ ವಾಕಿ ಟಾಕಿ ಚೀರಿತು…..

ಸುಮಾರು 26 ವರ್ಷದ ತರುಣ ಹಾಗೂ ಸುಮಾರು 20 ವರ್ಷದ ತರುಣಿಯ ಮೃತ ದೇಹ ಕಾಂಟೋನ್ಮೆಂಟ್ ರೈಲ್ವೆ ನಿಲ್ದಾಣದ ಬಳಿ ಪತ್ತೆಯಾಗಿರುತ್ತದೆ. ಹುಡುಗ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಹಾಗೂ ಕಪ್ಪು ಅಂಗಿ ಧರಿಸಿರುತ್ತಾನೆ. ತರುಣಿಯು ಕೆಂಪು ಬಣ್ಣದ ಸಲ್ವಾರ್ ಕುರ್ತಾ ಧರಿಸಿರುತ್ತಾಳೆ. ಇಂದು ಮುಂಜಾನೆ ಈ ಇಬ್ಬರು ರೈಲ್ವೆ ನಿಲ್ದಾಣದಲ್ಲಿ ತಿರುಗಾಡುತ್ತಿದ್ದರು ಎನ್ನಲಾಗಿದೆ. ಇವರು ಪ್ರೇಮಿಗಳಿರಬಹುದು ಎಂದು ಶಂಕಿಸಲಾಗಿದೆ. ಮುಖ ರೈಲಿಗೆ ಸಿಕ್ಕು ಸಂಪೂರ್ಣ…..ಹೋಗಿರುವುದರಿಂದ ಗುರುತು ಪತ್ತೆ ಕಷ್ಟವಾಗಿದೆ. ಯಾರಾದರೂ ವಾರಸುದಾರರಿದ್ದಲ್ಲಿ ವಿಕ್ಟೋರಿಯಾ ಆಸ್ಪತ್ರೆಯನ್ನು ಸಂಪರ್ಕಿಸಬಹುದು.

———————————————————

ಪಿಸಿ ಮತ್ತೊಬ್ಬನಿಗೆ ಹೇಳುತ್ತಿದ್ದ….

“ಬೋ…..ಮಗ ಹೇಳಿಕೊಳ್ಳಾಕೆ ಡಾಕ್ಟರು. ಮಾಡೋದು ಮಾತ್ರ ಹಲ್ಕಾ ಕೆಲಸ. ಪಾಸ್ ಪೋರ್ಟ್ ಹೇಗಾದ್ರೂ ಆಗುತ್ತೆ ಅಂತ ಏಜೆಂಟನ್ನ ಹಿಡ್ಕೊಂಡಿದ್ದ. ಈಗ ನೋಡಿ ಹಲ್ಕಟ್ ಪ್ಯಾಲೆ ಥರ ಆಡ್ತಾ ಇದಾನೆ. ಕಳೆದ ಎರಡು ವರ್ಷದಿಂದ ಆ ಮನೆಯಲ್ಲೇ ಇದೀನಿ ಅಂತ ಪತ್ರ ಬರೆದುಕೊಂಡು ಓನರ್ ಸೈನ್ ಫೋರ್ಜರಿ ಮಾಡಿದ್ದ. ಇಪ್ಪತ್ತೈದು ವರ್ಷದ ಸರ್ವಿಸ್ ನಂದು. ಇಂಥ ನೂರಾರು ಕೇಸ್ ನೋಡಿದೀನಿ….”

—————————————————————-

ಠಾಣೆಯಲ್ಲಿದ್ದ ಟಿವಿ ಬೊಂಬಡ ಬಜಾಯಿಸಿತು…

“ಭಾರೀ ತಿಮಿಂಗಿಲಗಳು ಲೋಕಾಯುಕ್ತ ಬಲೆಗೆ.

ಲೋಕಾಯುಕ್ತ ಪೋಲಿಸರು ಇಂದು ಬೆಳಗಿನ ಜಾವ ಹತ್ತು ಜನ ಸಬ್ ರಿಜಿಸ್ಟ್ರಾರ್ ಗಳು ಹಾಗೂ ಇಬ್ಬರು ಎಸ್ ಪಿ ಗಳ ಮನೆಗಳ ಮೇಲೆ ಮಿಂಚಿನ ದಾಳಿ ನಡೆಸಿ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವುದನ್ನು ಪತ್ತೆ ಹಚ್ಚಿದ್ದಾರೆ. ಈ ಎಲ್ಲರೂ ನಿವೃತ್ತಿ ವಯಸ್ಸನ್ನು ಸಮೀಪಿಸುತ್ತಿದ್ದು, ನಗರದ ಪ್ರತಿಷ್ಥಿತ ಬಡಾವಣೆಗಳಲ್ಲಿ ಅಪಾರ್ಟಮೆಂಟ್, ರೆಸಾರ್ಟ್ ಹಾಗೂ ಹೋಟೆಲ್ ಗಳನ್ನು ಹೊಂದಿದ್ದಾರೆ. ಬನ್ನಿ ಈ ಕುರಿತು ಹೆಚ್ಚಿನ ಮಾಹಿತಿ ಪಡೆಯೋಣ ನಮ್ಮ ಪ್ರತಿನಿಧಿ ಮೇಕ್ ಮನಿ ಅವರಿಂದ….

“ಮೇಕ್ ಮನಿ, ಹೇಳಿ ಇವ್ರು ಇಷ್ಟೆಲ್ಲ ಹಣ ಮಾಡ್ಕೊಂಡಿದ್ದು ಹೇಗೆ?”

“ಏನೊಂದು ಇವತ್ತು ಏನೊಂದು ಈ ದಾಳಿ ನಡೆದಿದೆ. ಏನೊಂದು ಈ ದಾಳಿಯಲ್ಲಿ ಲೋಕಾಯುಕ್ತರು ಏನೊಂದು ಈ ಹತ್ತು ಜನ ಸಬ್ ರಿಜಿಸ್ಟ್ರಿಗಳ ಮನೆ ಮೇಲೆ ಏನೊಏಓನಏನೊಂದು ದಾಳಿ ನಡೆಸಿ ಏನೊಂದು ಇಬ್ರು ಎಸ್ ಪಿಗಳ ಮನೆ ಏನೊಂದು ಈ…. ಆ….ಉ…ಎ……”