ಹುಡುಕುವ ಸುದ್ದಿ ಹರಿದಾಡಿ ಬಂದು ಕಾಲ ತೊಡರಿದ್ಹಾಂಗ….

010

ಪ್ರೋ. ಬಿ.ಕೆ. ಚಂದ್ರಶೇಖರ್ ವಿಧಾನ ಪರಿಷತ್ ಸಭಾಪತಿಯಾಗಿದ್ದ ಕಾಲ. ಹೌಸ್, ಕೇವಲ ಒಳಗಷ್ಟೇ ಅಲ್ಲ ಅದರ ಹೊರಗೂ ತನ್ನ ಚಟುವಟಿಕೆಯನ್ನು ವಿಸ್ತರಿಸಬೇಕು ಎಂಬ ಅಭಿಲಾಷೆ ಉಳ್ಳವರಾಗಿದ್ದರು ಬಿಕೆಸಿ. ಹೀಗಾಗಿ ಮೇಲಿಂದ ಮೇಲೆ ಎನ್ ಜಿ ಓ,  ಯಾವುದಾದರೂ ಖಾಸಗಿ ಸಂಸ್ಥೆ, ಸರ್ಕಾರಿ ಇಲಾಖೆ – ಹೀಗೆ ಯಾರೋ ಒಬ್ಬರ ಜೊತೆ ಸೇರಿ ಪರಿಷತ್ತಿನ ಸಹಯೋಗದಲ್ಲಿ ಹಲವು ಉಪಯುಕ್ತ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು.

ಅದೊಮ್ಮೆ ಸೆಂಟ್ರಲ್ ಕಾಲೇಜ್ ಆವರಣದಲ್ಲಿ ವಿಚಾರ ಸಂಕಿರಣ. ‘ಕುಸಿಯುತ್ತಿರುವ ಅಂತರ್ಜಲ ಮಟ್ಟ ಹಾಗೂ ಕೈಗೊಳ್ಳಬೇಕಾದ ಕ್ರಮಗಳು’ ಇದು ವಿಷಯ. ರೈತ ಸಂಘಗಳು, ಪರಿಸರ ಸಂಘಟನೆಗಳು ಸೇರಿದಂತೆ ವಿವಿಧ ಸಂಸ್ಥೆಗಳ ಪ್ರತಿನಿಧಿಗಳು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಬಂದ ಅತಿಥಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳಂತೂ “ಅಂತರ್ಜಲ ಮಟ್ಟ ಅಪಾಯಕಾರಿ ಮಟ್ಟ ತಲುಪಿದೆ. ಇದನ್ನು ತಕ್ಷಣ ತಡೆಗಟ್ಟದಿದ್ದರೆ ನಮ್ಮ ಮಕ್ಕಳು ನೀರಿಲ್ಲದೆ ಸಾಯುತ್ತಾರೆ. ಪಾವಗಡದಂತಹ ಪ್ರದೇಶದಲ್ಲಿ ಫ್ಲೋರೈಡ್ ಯುಕ್ತ ನೀರು ಕುಡಿದು ಜನರು ಅಂಗವಿಕಲರಾಗುತ್ತದ್ದಾರೆ. ಬೆಂಗಳೂರಿನಲ್ಲಿ 450 ಅಡಿ ಕೊರೆದರೂ ನೀರು ಬರುತ್ತಿಲ್ಲ. ಕಳೆದ 10 ವರ್ಷಗಳಲ್ಲಿ ರಾಜ್ಯದಲ್ಲಿ ಬೋರ್ ವೆಲ್ ಗಳ ಸಂಖ್ಯೆ ಮಿತಿಮೀರಿದೆ. ಶ್ರೀಪಡ್ರೆಯಂತಹವರ ಸಲಹೆಯನ್ನು ರಾಜ್ಯ ಸರ್ಕಾರ ತೆಗೆದುಕೊಳ್ಳಬೇಕು. ಹೊಸದಾಗಿ ಕಟ್ಟಲಾಗುತ್ತಿರುವ ಮನೆಗಳಿಗೆ ಮಳೆಕೊಯ್ಲನ್ನು ಕಡ್ಡಾಯ ಮಾಡಬೇಕು” ಎಂದೆಲ್ಲ ಭಾರೀ ಭಾರೀ ಚರ್ಚೆ ನಡೆಸಿದರು. ಕರೆಗಳನ್ನು ನೀಡಿ ಕೊರೆದರು. ಚರ್ಚೆ ಬಿರುಸಾಗಿ ಮುಂದುವರೆಸಿದರು. ಕಾರ್ಯಕ್ರಮ ಕವರ್ ಮಾಡಲು ಹೋದ ನನಗೆ ಪ್ರೋ. ಬಿಕೆಸಿ ಪ್ರಯತ್ನ ತುಂಬ ಖುಷಿಕೊಟ್ಟಿತು. ಎಲ್ಲ ಸಂಪನ್ಮೂಲ ವ್ಯಕ್ತಿಗಳ ಮಾತೂ ಇಷ್ಟವಾಯಿತು. ಆದರೆ ಅಂದು ರಾತ್ರಿ 8 ಗಂಟೆಯ ಈ ಟಿವಿ ಪ್ರೈಮ್ ಬುಲೆಟಿನ್ ನ ಫೋಕಸ್ ನಲ್ಲಿ ಕಾರ್ಯಕ್ರಮದ ಸುದ್ದಿ ಬೇರೆ ರೀತಿಯೇ ಏರ್ ಆಯಿತು.

“ಕುಡಿಯುವ ನೀರನ್ನು ಪ್ಲಾಸ್ಟಿಕ್ ಬಾಟಲಿಗಳಲ್ಲಿ ತುಂಬಿ ಮಿನೆರಲ್ ವಾಟರ್ ಹೆಸರಿನಲ್ಲಿ ಮಾರಾಟ ಮಾಡುವ ಕಂಪನಿಗಳ ಹಾವಳಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಪ್ಲಾಸ್ಟಿಕ್ ಬಾಟಲಿಗಳಲ್ಲಿನ ನೀರು ಶುದ್ಧ ಹೌದು ಅಲ್ಲವೋ ಎಂಬುದನ್ನು ಕೂಡ ಪರೀಕ್ಷಿಸದೆ, ಬಾಟಲಿ ನೀರನ್ನು ಅವ್ಯಾಹತವಾಗಿ ಮಾರಾಟ ಮಾಡುವ ದಂಧೆಯೇ ನಡೆದಿದೆ. ಮಿನರಲ್ ವಾಟರ್ ಕಂಪನಿಗಳು ಬೇಕಾಬಿಟ್ಟಿಯಾಗಿ ನೀರನ್ನು ಬಳಸಿ ಮಾರಾಟ ಮಾಡುತ್ತಿರುವುದರಿಂದ ಅಂತರ್ಜಲ ಮಟ್ಟದ ಮೇಲೆ ವಿಪರೀತ ಪರಿಣಾಮವಾಗುತ್ತಿದೆ. ಮಿನರಲ್ ವಾಟರ್ ಬಳಕೆಯನ್ನು ಎಲ್ಲ ಪರಿಸರವಾದಿಗಳು ವಿರೋಧಿಸುತ್ತಾರೆ. ಆದರೆ ಬೆಂಗಳೂರಿನಲ್ಲಿ ‘ಅಂತರ್ಜಲ ಮಟ್ಟ ಕುಸಿತ ತಡೆಗಟ್ಟುವ’ ಕುರಿತು ವಿಚಾರ ಸಂಕಿರಣ ಏರ್ಪಡಿಸಿದ್ದ ಸಂಘಟಕರಿಗೆ ಮಾತ್ರ ಈ ವಿಷಯ ಗೊತ್ತಿದ್ದಂತೆ ಕಾಣಲಿಲ್ಲ. ಇದಕ್ಕೆ ಸಾಕ್ಷಿ, ವಿಚಾರ ಸಂಕಿರಣದ ಸಂದರ್ಭದಲ್ಲಿ ಟೇಬಲ್ ಮೇಲೆ ರಾರಾಜಿಸಿದ ಮಿನಿರಲ್ ವಾಟರ್ ಬಾಟಲಿಗಳು. ಅಂತರ್ಜಲ ಕುಸಿತ ತಡೆಗಟ್ಟಲು ಬಂದವರು ಮಿನಿರಲ್ ವಾಟರ್ ಕುಡಿದುದು ಆಶ್ಚರ್ಯ ಮೂಡಿಸಿತು”.

ಈ ಲೈನ್ಸ್ ಮೇಲೆ ಪ್ಯಾಕೇಜ್ ಏರ್ ಆಯಿತು. ಇದಕ್ಕೆ ಕುರಬೂರು ಶಾಂತಕುಮಾರ್ ಬೈಟ್ ಇತ್ತು. ಅವರು ಬೈಟ್ ನಲ್ಲಿ ಮಿನರಲ್ ವಾಟರ್ ಕಂಪನಿಗಳನ್ನು ಎಗಾದಿಗಾ ಝಾಡಿಸಿದ್ದರು. ಮತ್ತೊಂದು ಬೈಟ್ ಪ್ರೋ. ಬಿಕೆಸಿ ಅವರದು. ಸುದ್ದಿಯ ಲೈನ್ ಗೊತ್ತಿಲ್ಲದ ಬಿಕೆಸಿ, “ಇಲ್ಲಿ ನೀರಿನ ಕೊರತೆ ಆಗಬಾರದಲ್ಲ….ಅದಕ್ಕೆ ಬಳಸಿದ್ದೇವೆ” ಎಂಬ ಹಾರಿಕೆಯ ಉತ್ತರ ನೀಡಿ ಜಾರಿಕೊಂಡಿದ್ದರು.

ಮರುದಿನದ ಪ್ರಿಂಟ್ ನಲ್ಲಿ ಎಂದಿನಂತೆ ‘ನುಡಿದರು, ಹೇಳಿದರು, ತಿಳಿಸಿದರು, ವಿವರಿಸಿದರು, ಕರೆ ನೀಡಿದರು’ ಎಂಬಂತಹ ವರದಿಗಳು ಪ್ರಕಟವಾಗಿದ್ದವು. ಆದರೆ ನನ್ನ ಸ್ಟೋರಿಗೆ ಉಳಿದ ಜರ್ನಲಿಸ್ಟ್ ಗಳು ಹಾಗೂ ನನ್ನ ಚೀಫ್ ರಿಂದ ಉತ್ತಮ ಪ್ರತಿಕ್ರಿಯೆ ಬಂತು. ಕೊಂಚವೇ ಕೊಂಚ ಕಿವಿ, ಕಣ್ಣು ಓಪನ್ ಮಾಡಿ ಕುಳಿತರೆ ಇಂತಹ ಸುದ್ಧಿ ಸುಲಭವಾಗಿ ಸಿಗುತ್ತದೆ.

ಆದರೆ ಸುದ್ದಿಯೇ ಬಂದು ಕಾಲ ಬುಡಕ್ಕೆ ಬಿದ್ದಾಗ, ಕಣ್ಣೆತ್ತಿಯೂ ನೋಡದೆ, ಮತ್ತೆನನ್ನೋ ಲೀಡ್ ಮಾಡುವ ಜರ್ನಲಿಸ್ಟ್ ಗಳೂ ಇದ್ದಾರೆ. ಏನು ಮಾಡುವುದು ಮಾರಾಯ್ರೇ?