ಹೇಗಿತ್ತು 2008?

123

ಪ್ರತಿ ವರ್ಷಾಂತ್ಯದಲ್ಲಿಯೂ ಹಾಗೆಯೇ ಅನ್ನಿಸುತ್ತದೆ. “ಛೇ! ಈ ವರ್ಷವೂ ಹೇಗೆ ಕಳೆಯಿತು ಗೊತ್ತೇ ಆಗಲಿಲ್ಲ” ಎಂದು. ಬದುಕಿನಲ್ಲಿ ನಡೆಯುವ ಘಟನೆಗಳು ಕಾಲದ ಇಲಾಸ್ಟಿಸಿಟಿಯನ್ನು ನಿರ್ಣಯಿಸುತ್ತಾವಾದರೂ, ಏಳು-ಬೀಳು ಏನೇ ಇರಲಿ, ವರ್ಷಾಂತ್ಯದಲ್ಲಿ ಹೀಗೆ ಅನ್ನಿಸುವುದು ಮಾತ್ರ ಸಹಜ.

2008 ರ ಆರಂಭದಲ್ಲಿಯೇ ಕೆಲ ವರ್ಷಗಳಿಂದ ಕೈಬಿಟ್ಟು ಹೋಗಿದ್ದ ನಾಟಕದ ಹವ್ಯಾಸ ಮತ್ತೆ ಆವರಿಸಿತು. ನಾನು ನಾಟಕದಿಂದ ದೂರವಿದ್ದ ಸಂದರ್ಭದಲ್ಲಿ ನನ್ನ ಗೆಳೆಯ-ಗೆಳತಿಯರು ನಾಟಕಗಳಲ್ಲಿ ಸಕ್ರೀಯರಾಗಿರುವುದನ್ನು ನೋಡಿ ಗಂಟಲು ಉಬ್ಬಿ ಬರುತ್ತಿತ್ತು. ರಿಹರ್ಸಲ್, ಸೆಟ್-ಪ್ರಾಪರ್ಟಿ, ಕಾಸ್ಟ್ಯೂಮ್, ಪತ್ರಿಕೆಗಳಲ್ಲಿ ನಾಟಕದ ವಿವರ ಎಂದೆಲ್ಲ ಅವರು ಮಾತನಾಡುತ್ತಿದ್ದಾಗ, ಅಳುವೇ ಬರುತ್ತಿತ್ತು. ಆದರೆ ‘2008’ ನನಗೆ ಮತ್ತೆ ನಾಟಕವನ್ನು ನೀಡಿತು. ಕೇವಲ ಮೊದಲ ಪ್ರದರ್ಶನದಲ್ಲಿ ಭಾಗವಹಿಸಿದೆನಾದರೂ ಇಟ್ ವಾಸ್ ಎ ಇಮೋಷನಲ್ ಸಾಟಿಸ್ ಫ್ಯಾಕ್ಷನ್.

ಕನ್ನಡದ ಖಾಸಗಿ ಚಾನೆಲ್ ಒಂದರಲ್ಲಿ ವರದಿಗಾರನಾಗಿದ್ದೆನಾದ್ದರಿಂದ ಕರ್ಣಾಟಕ ಮಹಾದೇಶದ ಉತ್ತರ ದಿಕ್ಕಿನ 11 ಜಿಲ್ಲೆಗಳಲ್ಲಿ ಸುತ್ತಾಡಿ, ಚುನಾವಣಾ ಕಾವನ್ನು ಜನರಿಗೆ ತಲುಪಿಸುವ ಸದವಕಾಶ ನನ್ನದಾಗಿತ್ತು. ಏಳೆಂಟು ಬಾರಿ ವಿಧಾನಸಭೆಗೆ ಆಯ್ಕೆಯಾದ ಶಾಸಕರ ಸ್ವಕ್ಷೇತ್ರದ ಸರ್ಕಾರಿ ಆಸ್ಪತ್ರೆಗಳಲ್ಲಿ ನಾಯಿಗಳು ಮಲಗಿದ್ದುದು, ಜನ ಗುಳೆ ಹೋಗಿ ಖಾಲಿ ಬಿದ್ದಿದ್ದ ಹಳ್ಳಿಗಳು – ಹೀಗೆ ಬದುಕಿನ ಹಲವು ಮುಖಗಳಿಗೆ ಸಾಕ್ಷಿಯಾಗಬೇಕಾಯಿತು.

ಕಬ್ಬಿನ ಗದ್ದೆಯೊಂದರಲ್ಲಿ ಫಕೀರವ್ವ ಎಂಬ ಕೃಷಿ ಆಳೊಬ್ಬಳನ್ನು ಮಾತನಾಡಿಸಲು ಹೊರಟಾಗ, ಎಲೆಯಡಿಕೆ ಜಗಿದು ಜಗಿದು ಹುಳುಕು ಹಿಡಿದ ಹೋಗಿದ್ದ ಹಲ್ಲುಗಳನ್ನು ಪ್ರದರ್ಶಿಸುತ್ತ, “ಯಪ್ಪಾ, ಏಸೋ ವರ್ಸ ಆದು. ಈ ಕಡೀಕ್ ಯಾರೂ ಬಂದಿಲ್ಲ. ಓಟ್ ಹಾಕೋಸ್ಕೊಂಡ್ ಹೋಗಾವ್ರು, ನಾವ್ ಸತ್ತೆವೋ ಬದಕೇವೋ ಅಂತಾನೂ ಕೇಳಾಣಿಲ್ಲ. ನೀ ಅರೆ ಬಂದಿ ನೋಡು, ಪುಣ್ಯಾ ಬರಲಿ ನಿನಗ” ಎಂದದ್ದು 2008 ರ ಅವಸ್ಮರಣೀಯ ಘಟನೆ.

ನಾಲ್ಕೂವರೆ ವರ್ಷಗಳ ಬಳಿಕ ಕೆಲಸ ಬದಲಾಯಿಸಿದ್ದು, ಮತ್ತೆ ನಾಲ್ಕೂವರೆ ತಿಂಗಳಿಗೇ ಹೊಸ ಕೆಲಸವೂ ಬೋರ್ ಅನ್ನಿಸಿ ಕೇರಳದ ಹೌಸ್ ಬೋಟ್ ತೆಕ್ಕೆಯಲ್ಲಿ ದಿನಕಳೆದು, ಇದೀಗ ಮತ್ತೊಂದು ಕೆಲಸದ ಬೆನ್ನು ಹತ್ತಿ 2009 ರ ದಾರಿ ಕಾಯುತ್ತಿದ್ದೇನೆ. ಛೆ! ಎಷ್ಟು ಬೇಗ ಹೊಸ ವರ್ಷ ಬಂದುಬಿಟ್ಟಿತಲ್ಲ!!

(ಜನವರಿ 2009 ರಲ್ಲಿ ಹಾಯ್ ಬೆಂಗಳೂರ್ ನಲ್ಲಿ ಪ್ರಕಟವಾಗಿದ್ದ ಲೇಖನ)