ನಿನಗ….

naanu

ಏನಾಗಬೇಕಂತ ನೀ ನನಗ ಕೇಳಿದರ

ಏನ ಹೇಳಲಿ ನಾನು ಮಂದೀಗೆ?

ಮಡದಿ, ಪ್ರೇಯಸಿ, ತಾಯಿ ಏನೂ ಆಗಿರಬಹುದು

ನಮ್ಮಿಬ್ಬರಿಗೆ ಗೊತ್ತಿದ್ದರ ಸಾಕಲ್ಲ?

ಮುಂದೊಮ್ಮೆ ಹೀಂಗನ ವ್ಯಾಳಾನ ಬರಬಹುದು

ನೀನ ಕೇಳಬಹುದು ನನ್ನ ಯಾರಂತ?

ಆಗೇನು ಹೇಳಲಿ ಉತ್ತರವ ಮಂದೀಗೆ

ಹೇಳೀತು ಉತ್ತರ ನನ್ನ ಕೈ ಕಡಗ.

ಬಂದಾಗ ಹೇಳಿದ್ದಿ ಮರಳಿ ಹೋಗುವುದಿಲ್ಲ

ಮತ್ತ ಯಾಕ ನೋಡತಿ ಹಿಂತಿರುಗಿ?

ಹೊರಟು ಹೋಗುವುದಿದ್ದರ ಒಮ್ಮೆಲೆ ಹೇಳಿಬಿಡು

ದುಃಖವ ಬಲ್ಲೆ ನಾ ಮೊದಲಿಂದ.

ಕ್ಷಣಕ್ಷಣವೂ ಸಾಯೂಕಿಂತ ಒಮ್ಮೆ ಸಾಯೋದ ಮೇಲು

ಅಂದಾರ ಯಾರೋ ಜಂಗಮರು

ಕೊಲ್ಲುವುದಿದ್ದರ ಹೇಳು ನಾ ಹೊಂಟೆ ನಿನ ಬಿಟ್ಟು

ಸುಮ್ಮಕ ಯಾಕ ನಿನಗ ತ್ರಾಸ?

ಅರಿವಿಲ್ಲದ ಖೋಡಿ ಮತಿಯಿಲ್ಲದ ಗೇಡಿ

ಜೀವನವೇನು ನಮ್ಮ ಗುಲಾಮ?

ಎಲ್ಲ ತಪ್ಪುಗಳ ಮೇಲೆ ಮತ್ತ ಕೇಳತಿನಿ

ಹೇಳು ಬರತಿಯೇನ ನನ ಸಂಗ.