‘ಕತೆಯಲ್ಲಿ ಬಾಂದಾತ ಮನೆಗೂ ಬಂದು ಕದ ತಟ್ಟಿದ’

guhe

(ಯಶವಂತ ಚಿತ್ತಾಲರ ‘ಕಥೆಯಾದಳು ಹುಡುಗಿ’ ಕಥಾಸಂಕಲನದ ‘ಕತೆಯಲ್ಲಿ ಬಾಂದಾತ ಮನೆಗೂ ಬಂದು ಕದ ತಟ್ಟಿದ’ ಕಥೆಯಿಂದ ಆಯ್ದ ಭಾಗ).

ಕತೆ ನಾನೂ ಓದಿದ ನಾಟಕದ್ದೇ. ಬಹುಶಃ ನೋಯಲ್ ಕಾವರ್ಡ್ ನದಿರಬೇಕು ಅನ್ನಿಸಿತು. ಹೆಸರು ಥಟ್ಟನೆ ನೆನಪಾಗಲಿಲ್ಲ. ಅವನೂ ಸ್ಪಷ್ಟಪಡಿಸಲಿಲ್ಲ. ಮಾನವೀಯ ಮುಖಾಮುಖಿಯ ಮೇಲೆ, ನಮ್ಮ ನಿಶ್ಚಯದ ಮೇಲೆ, ಕ್ರಿಯೆಯ ಮೇಲೆ ಪರಿಸರದಲ್ಲಿಯ ಬೆಳಕು ಎಷ್ಟೊಂದು ನಾಟಕೀಯವಾದ ಪ್ರಬಾವ ಬೀರಬಲ್ಲದೆಂಬುದನ್ನು ಅತ್ಯಂತ ಪರಿಣಾಮಕಾರಿಯಾದ ರೀತಿಯಲ್ಲಿ ತೋರಿಸಿಕೊಡುವ ನಾಟಕವದು.

ಒಬ್ಬ ಸೇಲ್ಸ್ ಮನ್ ಹಾಗೂ ಅವನ ಕಂಪನಿಯ ಎಂಡಿ ನಡುವಿನ ಮುಖಾಮುಖಿ ನಾಟಕದ ಕೇಂದ್ರ ಘಟನೆ. ಸೇಲ್ಸ್ ಮನ್ 20 ವರ್ಷಗಳ ದೀರ್ಘಕಾಲ ಈ ಕಂಪನಿಗಾಗಿ ದುಡಿದೂ, ಮ್ಯಾನೇಜಮೆಂಟಿನ ದುರ್ಲಕ್ಷ್ಯಕ್ಕೆ ಗುರಿಯಾಗಿ ನೊಂದವನು. ಆಗಷ್ಟೇ ಎಂಡಿಯ ಸ್ಥಾನಕ್ಕೆ ಬಂದವನು ಇವನ ಬಾಲ್ಯದ ಗೆಳೆಯನಾಗಿಯೂ ಅನೇಕ ವರ್ಷಗಳ ವರೆಗೆ ಇವನೊಡನೆ ಸಂಪರ್ಕ ತಪ್ಪಿದವನು. ಸಂದರ್ಶನ ಆರಂಭವಾದಾಗ ಅತ್ಯಾಧುನಿಕ ಬೆಡಗಿನ, ಸಜ್ಜಿಕೆಯಿದ್ದ ಎಂಡಿಯ ಕ್ಯಾಬಿನ್ ನಲ್ಲಿ ಕಣ್ಣುಕುಕ್ಕಿಸುವ, ಮನಸ್ಸಿಗೆ ದಿಗ್ಭ್ರಮೆ ಹಿಡಿಸುವ ವಿದ್ಯುದ್ದೀಪಗಳ ಬೆಳಕು ಇರುತ್ತದೆ. ತನ್ನ ಭಡತಿಯ ಬಗ್ಗೆ ಮಾತನಾಡುವ ಉದ್ದೇಶದಿಂದ ಹೋದ ಸೇಲ್ಸ್ ಮನ್, ಎಂಡಿಗೆ ತನ್ನ ಗುರುತೇ ಸಿಕ್ಕಿಲ್ಲವೆಂದು ತಿಳಿದಾಗ ಅಧೀರನಾಗುತ್ತಾನೆ. ತಮ್ಮ ಚಿಕ್ಕಂದಿನ ಅತ್ಯಂತ ಆತ್ಮೀಯ ಕ್ಷಣಗಳ ನೆನಪು ಮಾಡಿಕೊಟ್ಟರೂ, ತಾನು ಅವನಿಗೆ ಹೆಚ್ಚು ಪರಕೀಯನಾಗುತ್ತಿದ್ದುದನ್ನು ಕಂಡು ಹತಾಶನಾಗುತ್ತಾನೆ. ಕ್ಯಾಬಿನ್ ಬಿಟ್ಟು ಹೊರಗೆ ಹೋಗಬೇಕು ಎನ್ನುವಷ್ಟರಲ್ಲಿ ಕಟ್ಟಡದ ಇಲೆಕ್ಟ್ರಿಕ್ ಫ್ಯೂಸ್ ಹಾರಿ ಹೋಗಿ ಕ್ಯಾಬಿನ್ ಕತ್ತಲೆಯಲ್ಲಿ ಮುಳುಗತ್ತದೆ. ಎಂಡಿಯ ಸೆಕ್ರೆಟರಿ ಒಳಗೆ ಬಂದು ಇಂತಹ ತುರ್ತಿನ ಸನ್ನಿವೇಶಗಳಿಗಾಗಿಯೇ ಸಿದ್ಧಮಾಡಿ ಇಟ್ಟಂತಿದ್ದ ಎರಡು ದೊಡ್ಡ ಮೇಣದ ಬತ್ತಿಗಳನ್ನು ಮೇಜಿನ ಮೇಲಿಟ್ಟು ಹೋಗುತ್ತಾಳೆ. ಕೋಣೆಯಲ್ಲಿ ಆಗ ಹರಡಿದ ಮೇಣದ ಬತ್ತಿಯ ಮಂದ ಬೆಳಕಿನಲ್ಲಿ ಎಂಡಿ ಒಮ್ಮೆಗೇ ಚೇತರಿಸಿಕೊಂಡವರ ಹಾಗೆ, “ಅರೆ ನೀನು? ಯಾವಾಗ ಬಂದೆ? ಯಾಕೆ ಹೀಗೆ ಮಾತನಾಡದೆ ಕೂತಿದ್ದೀ?” ಎಂದು ಶುರುಮಾಡಿದವರು ಹೊತ್ತು ಹೋದ ಹಾಗೆ ಭಾವನಾವಶರಾಗುತ್ತ ಬಾಲ್ಯದ ಅನೇಕ ಸಂಗತಿಗಳನ್ನು ತಾವೇ ನೆನೆದುಕೊಳ್ಳಲು ತೊಡಗುತ್ತಾರೆ. ಈ ಬದಲಿಗೆ ಕಾರಣವಾಗಿದ್ದು ರೂಮಿನಲ್ಲಿ ಆಗ ನೆಲೆಸಿದ ಮೇಣದ ಬತ್ತಿಯ ಬೆಳಕಾಗಿತ್ತು. ಎಂಡಿ ಅವನ ನೌಕರಿಯ ಬಗ್ಗೆ, ಹೆಂಡತಿಯ ಬಗ್ಗೆ ಮಕ್ಕಳ ಬಗ್ಗೆ ತುಂಬಿದ ಅಂತಃಕರಣದಿಂದ ವಿಚಾರಿಸುತ್ತಾರೆ. ತಾನು ಬಂದ ಉದ್ದೇಶ ಪ್ರಕಟಿಸಲು ಇದೇ ಸರಿಯಾದ ಕ್ಷಣವೆಂದು ಬಗೆದು ಇವನು ಬಾಯಿತೆರೆಯಬೇಕು ಎಂದುಕೊಳ್ಳುವಷ್ಟರಲ್ಲಿ ರೂಮಿನೊಳಗೆ ಮೊದಲಿನ ಹಾಗೆ ಕಣ್ಣುಕುಕ್ಕಿಸುವ ವಿದ್ಯುದ್ದೀಪಗಳು ಝಗ್ ಎಂದು ಬೆಳಗಿಕೊಳ್ಳುತ್ತವೆ.

“ಮುಂದಿನದನ್ನು ನೀವು ಸರಿಯಾಗಿ ಊಹಿಸಿಕೊಳ್ಳಬಲ್ಲಿರಿ ಸರ್” ಎಂದು ಕತೆ ಮುಗಿಸಿದ ವೋಮ, ನನ್ನಲ್ಲಿ ವಿಸ್ಮಯದಂತೆ ಒಂದು ಬಗೆಯ ಅಸಮಧಾನಕ್ಕೂ ಕಾರಣವಾಗಹತ್ತಿದ್ದ.