ಅಯ್ಯಾ ಎಂದರೆ ಸ್ವರ್ಗ…ಎಲವೋ ಎಂದರೆ ನರಕ….

behaviour

ಈ ಪ್ರಸಿದ್ಧ ವ್ಯಕ್ತಿಗಳು ಅಂತ ಇರ್ತಾರೆ. ನಿಮಗೂ ಗೊತ್ತಿರಬಹುದು. ಅವರ ಕುರಿತು ಎರಡು ಘಟನೆಗಳು –

ಘಟನೆ – 1

ಸಾಹಿತ್ಯಕ್ಕೆ ಸಂಬಂಧಿಸಿದ ಸ್ಟೋರಿ ಮಾಡುತ್ತಿದ್ದೆ. ಬೈಟ್ ಸಲುವಾಗಿ ಸಾಹಿತಿಗಳನ್ನು ಹುಡುಕುತ್ತಿದ್ದಾಗ ಹೊಳೆದ ಹೆಸರು ಓರ್ವ ಪ್ರಸಿದ್ಧ ಲೇಖಕರದ್ದು. ಫೋನ್ ನಂಬರ್ ಸಂಪಾದಿಸಿದವನೇ ನಂಬರ್ ಡಯಲ್ ಮಾಡಿದೆ. ಪರಿಚಯ ಮಾಡಿಕೊಂಡೆ. ಸ್ಟೋರಿ ಲೈನ್ ತಿಳಿಸಿ ಬೈಟ್ ಬೇಕೆಂದೆ. ತುಂಬ ಸಂತೋಷಗೊಂಡರು. ಬೈಟ್ ತೆಗೆದುಕೊಳ್ಳಲು ಮನೆಗೇ ಕರೆದರು. ಅಡ್ರೆಸ್ ಕೇಳಿದೆ. ತುಂಬ ವಿವರವಾಗಿ ತಿಳಿಸಿದರು. ಅವರು ಅಡ್ರೆಸ್ ಹೇಳಿದ ರೀತಿ ಹೇಗಿತ್ತೆಂದರೆ ಯಾವುದೇ ಸಂದೇಹವಿಲ್ಲದೆ, ಯಾರನ್ನೂ ಕೇಳದೇ ನಮ್ಮ ಕಾರ್ ಹೋಗಿ ನಿಂತಿದ್ದು ಅವರ ಮನೆ ಮುಂದೆಯೇ. ಕಾರಿನಿಂದ ನಾನು ಮತ್ತು ಕ್ಯಾಮೆರಾಮನ್ ಇಳಿದ ತಕ್ಷಣ, ಹೊರಗೆ ಬಂದವರೇ ಸ್ವಾಗತಿಸಿದರು. ಮಗನ ಪರಿಚಯ ಮಾಡಿಸಿ ಒಳ ಕೋಣೆಗೆ ಕರೆದುಕೊಂಡು ಹೋದರು. ಬೈಟ್ ಕೊಡುವುದಕ್ಕಿಂತ ಮೊದಲು ಕಾಫಿ ಕೊಟ್ಟರು. ಉಭಯಕುಶಲೋಪರಿ ವಿಚಾರಿಸಿದರು. ನನ್ನ ಬಗ್ಗೆ, ಕ್ಯಾಮೆರಾಮನ್ ಬಗ್ಗೆ ಕೇಳಿದರು. ಬೈಟ್ ಬ್ಯಾಕ್ ಗ್ರೌಂಡ್ ಗಾಗಿ ಏನಾದರೂ ಬೇಕಾದರೆ ತೆಗೆದುಕೊಳ್ಳಿ ಎಂದು ಹಲವು ವಸ್ತುಗಳನ್ನು ತೋರಿಸಿದರು.  ನಂತರ ನನಗೆ ಬೇಕಾದಂತೆ ಅಗತ್ಯಕ್ಕೆ ತಕ್ಕ ಹಾಗೆ ಬೈಟ್ ನೀಡಿ “ಸಾಕಾ?” ಎಂದು ಕೇಳಿದರು. ಹೊರಗಡೆ ಹೋಗಿದ್ದ ಅವರ ಪತ್ನಿ ಅಷ್ಟರಲ್ಲಿ ಮನೆಗೆ ಬಂದರು. ಅವರೂ ಕೂಡ ಪ್ರಸಿದ್ಧ ಲೇಖಕಿಯೇ. ಬಂದವರೇ ಸೀದಾ ಅಡಿಗೆ ಮನೆಗೆ ಹೋಗಿ, ತಟ್ಟೆ ತುಂಬ ಉಪ್ಪಿಟ್ಟು ತುಂಬಿಕೊಂಡು ಬಂದು ಉಪಚರಿಸಿದರು. ಆತ್ಮೀಯವಾಗಿ ಬೀಳ್ಕೊಟ್ಟರು. ಅದಾದ ನಂತರ, ಬೈಟ್ ಬೇಕೆಂದಾಗಲೆಲ್ಲ ಅವರನ್ನು ಸಂಪರ್ಕಿಸಿದ್ದೇನೆ. ಮನೆಗೆ ಹೋಗಿದ್ದೇನೆ. ಕನಿಷ್ಠ, ಕಾಫಿಯಿಲ್ಲದೆ ವಾಪಸ್ ಬಂದ ನೆನಪಂತೂ ನನಗಾಗಲಿ, ನನ್ನ ಸಹೋದ್ಯೋಗಿ ವರದಿಗಾರರಿಗಾಗಲಿ ಇಲ್ಲ.

ಘಟನೆ – 2

ಈಟಿವಿಯ ಬುಕ್ ಟಾಕ್ ಕಾರ್ಯಕ್ರಮಕ್ಕೆ ಕವಿಯೊಬ್ಬರ ಬೈಟ್ ಬೇಕಾಗಿತ್ತು. ಫೋನ್ ಮಾಡಿದೆ. ಗತ್ತಿನಿಂದಲೇ ಮಾತನಾಡಿದರು. ಕವಿಗಳಲ್ವಾ ಎಂದುಕೊಂಡು ಸುಮ್ಮನಾದೆ. ಮನೆಗೆ ಹೋದೆವು. ನಮ್ಮ ಕಾರ್ ಬಂದ ತಕ್ಷಣ ಇವರೂ ಸಹ ಹೊರಗೆ ಬಂದರು. ಆದರೆ ನಮ್ಮನ್ನು ಬರಮಾಡಿಕೊಳ್ಳಲಲ್ಲ. ಮನೆಯಲ್ಲಿ ಬೇಡ. ಇಲ್ಲಿ ಬನ್ನಿ ನನ್ನ ಪ್ರತ್ಯೇಕ ರೂಮ್ ಟೆರೇಸ್ ಮೇಲಿದೆ. ಅಲ್ಲಿ ಹೋಗೋಣ ಎಂದು ಕರೆದುಕೊಂಡು ಹೋದರು. ಫೋನ್ ನಲ್ಲೇ ಬುಕ್ ಟಾಕ್ ನ ಥೀಮ್ ಹೇಳಿದ್ದೆ. ಆಯಿತು ಬನ್ನಿ ಎಂದಿದ್ದ ಕವಿ ಮಹಾಶಯರು ನಾನು ಹೋದ ಮೇಲೆ “ಹೇಳಿ ಏನು ಸ್ಟೋರಿ?” ಎಂದರು. ಮತ್ತೆ ಎಲ್ಲ ವಿವರಿಸಿದೆ. “ಸರಿ” ಎಂದು ತಮ್ಮ ಪುಸ್ತಕ ಸಂಗ್ರಹದಿಂದ ಯಾವುದೋ ಪುಸ್ತಕ ತೆಗೆದು. ಓದಲಾರಂಭಿಸಿದರು. ಹದಿನೈದು ನಿಮಿಷ ಕಳೆಯಿತು. ಅಷ್ಟರಲ್ಲಿ ನಾನು ಮತ್ತು ಕ್ಯಾಮರಾಮನ್, ಕುರ್ಚಿಗಳನ್ನು ಜೋಡಿಸಿ ಬ್ಯಾಕ್ ಗ್ರೌಂಡ್ ಸಿದ್ಧಮಾಡಿದೆವು. “ಸರ್ ಇಲ್ಲಿ ಕುಳಿತುಕೊಳ್ಳಬಹುದು” ಎಂದೆ. ಇರ್ರೀ ಸ್ವಲ್ಪ….ಪ್ರೀಪೇರ್ ಆಗ್ಬೇಡ್ವಾ…ಎಂದು ಧಿಮಾಕಿನಿಂದಲೇ ನುಡಿದರು. ನಂತರ ಪುಸ್ತಕದಲ್ಲಿಯೇ ಕಣ್ಣು ನಾಟಿಸಿ “ಯಾವ ಡ್ರೆಸ್ ಹಾಕ್ಕೊಳ್ಳಿ?” ಎಂದು ವಿಚಾರಿಸಿದರು. ನನ್ನ ಉತ್ತಕ್ಕೂ ಕಾಯದೇ, “ಜುಬ್ಬಾ ಹಾಕಿಕೊಳ್ಳುತ್ತೇನೆ. ನಮ್ಮ ಸಾಹಿತಿಗಳ ಯೂನಿಫಾರ್ಮ್ ಅಲ್ವೆ ಅದು” ಎಂದೆನ್ನುತ್ತಾ ಮತ್ತೆ ಕೆಳಗಿಳಿದು ಹೋದರು. ಹೋಗುವಾಗ “ಬರೇ ನನ್ನ ಮೇಲಿನ ಭಾಗವಷ್ಟೇ ಕ್ಯಾಮೆರಾದಲ್ಲಿ ಬರುತ್ತೆ ತಾನೆ?” ಎಂದರು. ಹೌದೆಂದೆ. ಆಸಾಮಿ ಮೇಲೆ ಬಂದಾಗ ಚೌಕುಳಿ ಚೌಕುಳಿ ಲುಂಗಿಯ ಮೇಲೆ ಗರಿಗರಿಯಾದ ಜುಬ್ಬಾ ಹಾಕಿಕೊಂಡು ಪ್ರತ್ಯಕ್ಷರಾದರು. ಶೂಟಿಂಗ್ ಪೂರ್ತಿ ಗತ್ತಿನಿಂದಲೇ ನಡೆದುಕೊಂಡರು. ಬಂದ ಕೆಲಸ ಮುಗಿಸಿ ಹೊರನಡೆದೆ.

ಇದೇ ಕವಿಗಳ ಮನೆಗೆ ನನ್ನ ಸಹೋದ್ಯೋಗಿಯೊಬ್ಬಾಕೆ ಹೋದಾಗ ಕವಿಪತ್ನಿ ಹೊರಗೆ ಬಂದು “ಏನು ಬೇಕು ಏನು ಬೇಕು” ಎಂದು ಆವೇಶದಿಂದ ಕೋಪದಿಂದ ಕೇಳಿದರಂತೆ. ಆಕೆಯ ಅವತಾರ ನೋಡಿ ನನ್ನ ಸಹೋದ್ಯೋಗಿ ಸ್ಪಲ್ಪ ಖಾರವಾಗಿಯೇ ಉತ್ತರಿಸಿದಳಂತೆ. ನಂತರ ಕ್ಯಾಮರಾಮನ್ ಬಳಿ ಹೇಳಿದಳಂತೆ, ಹೇಗೆ ಮಾತಾಡಿದ್ಲು ನೋಡಿ. ನಾನೇನೋ ಅವಳ ಗಂಡನ್ನ ಹಾರಿಸ್ಕೊಂಡು ಹೋಗೋಕೆ ಬಂದಂತೆ ಆಡ್ತಾಳೆ…

ಘಟನೆ – 1 ರ ಸಾಹಿತಿ ದಂಪತಿಯ ಹೆಸರು ಹಂಪನಾ ಎಂದು. ಘಟನೆ – 2 ರ ಕವಿಗಳ ಹೆಸರು…….