ಆ ದಿನಗಳು

145

ಅಂದಿಗೂ ಇಂದಿಗೂ ಬಹುಶಃ ಎಂದಿಗೂ, ಕನ್ನಡ ಚಾನೆಲ್ ಗಳಲ್ಲಿ ನುಗ್ಗಲು ‘ಈ ಟಿವಿ’ ಲಾಂಚ್ ಪ್ಯಾಡ್ ಆಗಿರುವಂತೆ ಪ್ರಿಂಟ್ ಮೀಡಿಯಾದಲ್ಲಿ ನುಗ್ಗಲು ವಿಜಯ ಟೈಮ್ಸ್ ಅದ್ಭುತ ವೇದಿಕೆ ಒದಗಿಸಿಕೊಡುತ್ತಿದ್ದ ಸಂದರ್ಭ. ವಿಜಯ ಟೈಮ್ಸ್ ನಲ್ಲಿ ಪ್ರಕಟಿತ ಪ್ರತಿ ಪದಕ್ಕೆ ಎಂಟಾಣೆ ಲೆಕ್ಕದಲ್ಲಿ ಸ್ಟ್ರಿಂಗರ್ ಆಗಿ ಸೇರಿದ್ದೆ. (ಪ್ರತಿ ಪದಕ್ಕೆ ಎಂಟು ಆಣೆ ಹಾಗೂ ಫೋಟೋ ಗೆ ಇದಕ್ಕಿಂತ ಜಾಸ್ತಿ. ಎಷ್ಟು ಎಂದು ಸರಿಯಾಗಿ ನೆನಪಿಲ್ಲ. ಆಶ್ಚರ್ಯವಾಯಿತೆ?) ನನ್ನ ಗೆಳೆಯರೆಲ್ಲ ನಾನು ಬಂದ ಕೂಡಲೇ ‘ಎಂಟಾಣೆಗೊಂದ್ ಎಂಟಾಣೆಗೊಂದ್’ ಎಂದು ಕಾಲೆಳೆಯುತ್ತಿದ್ದರು.

ಆದರೆ ಅದಾಗಿ ಮೂರೇ ದಿನಕ್ಕೆ ಅದೇ ವಿಜಯ ಟೈಮ್ಸ್ ನಲ್ಲಿ ಟ್ರೇನಿ ಜರ್ನಲಿಸ್ಟ್ ಆಗಿ ಸೇರಿದ್ದೆ. ವಾರ ಕಳೆಯುತ್ತಿದ್ದಂತೆ ಯುದ್ಧಭೂಮಿಗೆ ಕಳಿಸಲಾರಂಭಿಸಿದರು. ಭಾರೀ ಸಿದ್ಧತೆಯೊಂದಿಗೆ, ಶ್ರದ್ಧೆಯೊಂದಿಗೆ, ಭಯ-ಭಕ್ತಿಯೊಂದಿಗೆ ಪ್ರತಿನಿತ್ಯವೂ ಬೆಳಗಾ ಬೆಳಗಾ ಪ್ರೆಸ್ ಕ್ಲಬ್ಬಿಗೆ ಹೋಗಿ ಮಧ್ಯಾಹ್ನದವರೆಗೂ ಅಲ್ಲಿದ್ದು, ಬೇಕಾಗಿದ್ದ ಬೇಡವಾಗಿದ್ದ ಕನಿಷ್ಠ ಎಂಟು ಹತ್ತು ಪ್ರೆಸ್ ಕಾನ್ಫರೆನ್ಸ್ ಗಳನ್ನು ಕವರ್ ಮಾಡಿಕೊಂಡು ಆಫೀಸಿಗೆ ಮರಳಿ ಎಲ್ಲವನ್ನೂ ಶ್ರದ್ಧೆಯಿಂದ ಫೈಲ್ ಮಾಡುತ್ತಿದ್ದೆ. ಮಾರನೆ ದಿನ ಪೇಪರ್ ನಲ್ಲಿ ಒಂದೋ ಎರಡೋ ವರದಿಗಳು ಪ್ರಕಟವಾಗಿರುತ್ತಿದ್ದವು. ಇಂತಿಪ್ಪ ಸನ್ನಿವೇಶದಲ್ಲಿ ಪ್ರೇಸ್ ಕ್ಲಬ್ ಅಲ್ಲದೆ ಇತರ ಕಾರ್ಯಕ್ರಮಗಳಿಗೂ ನನ್ನನ್ನು ಕಳಿಸಿಕೊಡಲು ಆರಂಭಿಸಿದರು.

ಜಸ್ಟಿಸ್ ವೆಂಕಟಾಚಲಯ್ಯ ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದ ಕಾರ್ಯಕ್ರಮವೊಂದು ಹೋಟೆಲ್ ಏಟ್ರಿಯಾದಲ್ಲಿ ಸಂಜೆ ಏರ್ಪಾಡಾಗಿತ್ತು. ಸಮಯ ಕೊಂಚ ಏರುಪೇರಾಗಿ ಸ್ವಲ್ಪ ಲೇಟಾಗಿ ಸಭಾಂಗಣ ಪ್ರವೇಶಿಸಿದೆ. ಬೆಳಗಾವಿಯಂತಹ ಪ್ಯೂರ್ ಗ್ರಾಮೀಣ ಸೊಗಡಿನ ಪ್ರದೇಶದಲ್ಲಿ ಬೆಳೆದಿದ್ದ ನನಗೆ ಬೆಂಗಳೂರಿನ ಝಾಂಗ್ ಪ್ಯಾಂಗ್ ಅಚ್ಚರಿ ಮೂಡಿಸಿತ್ತು. ಹೀಗಾಗಿ ಹೋಟೆಲ್ ಏಟ್ರಿಯಾ ಸ್ವರ್ಗದಂತೆಯೂ ಅಲ್ಲಿರುವ ರಿಸೆಪ್ಶನಿಸ್ಟ್ ಗಳು ರಂಭೆ, ಊರ್ವಶಿಯಂತೆಯೂ ಕಂಡರು. ಅವರನ್ನೆಲ್ಲ ದಾಟಿಕೊಂಡು ಪತ್ರಕರ್ತರು ಕುಳಿತಿದ್ದ ಗುಂಪನ್ನು ಸೇರಿಕೊಂಡೆ. ಸ್ಟೇಜ್ ಮೇಲೆ ಆಗಷ್ಟೇ ಸ್ವಾಗತ ಭಾಷಣ ಮುಗಿದಿತ್ತು. ಹೀಗಾಗಿ ಜಸ್ಚಿಸ್ ವೆಂಕಟಾಚಲಯ್ಯ ಭಾಷಣ ಇನ್ನೂ ಆಗಿಲ್ಲ ಎಂದು ಸಮಾಧಾನವಾಯಿತು. ಆದರೆ ಸ್ಟೇಜ್ ಮೇಲೆ ಕಣ್ಣಾಡಿಸುತ್ತಿದ್ದಂತೆ ನನಗೆ ವೆಂಕಟಾಚಲಯ್ಯ ಕಂಡುಬರಲಿಲ್ಲ. ಅದು ಹೇಗೆ ಕಾರ್ಯಕ್ರಮ ಆರಂಭಿಸಿಬಿಟ್ಟರು ಎಂದು ಅಚ್ಚರಿಯಾದರೂ ಸುಮ್ಮನಿದ್ದೆ. ಈ ಮಧ್ಯೆ ನನ್ನ ಕಣ್ಣುಗಳು ಈ ಹುಡುಗಾಟ ನಡೆಸಿದ್ದಾಗಲೇ ಸ್ಟೇಜ್ ಮೇಲೆ ಯಾರದೋ ಹೆಸರು ಅನೌನ್ಸ್ ಆಗಿ ಅವರು ಬಂದು ಭಾಷಣ ಆರಂಭಿಸಿಬಿಟ್ಟರು. ಹೋಗಿದ್ದೇನೆ ಕರ್ತವ್ಯ ಎಂದುಕೊಂಡು ಅವರ ಭಾಷಣವನ್ನೂ ಗೀಚಿಕೊಳ್ಳತೊಡಗಿದೆ. ಆದರೆ ಅವರ ಇಂಗ್ಲಿಷ್ ಪ್ರತಿಭೆಯೂ, ಅವರ ಸೆಂಟೆನ್ಸ್ ಗಳೂ ನನ್ನ ನೋಟ್ ಪ್ಯಾಡ್ ಮೇಲೆ ಇಳಿಯಲು ಒಲ್ಲೆ ಎನ್ನುತ್ತಿದ್ದವು. ಹೇಗೂ ವೆಂಕಟಾಚಲಯ್ಯ ಅಲ್ಲವಲ್ಲ ಎಂದು ನಾನೂ ಕಾಟಾಚಾರಕ್ಕೆ ಗೊತ್ತಾದಷ್ಟು ಬರೆದುಕೊಳ್ಳತೊಡಗಿದೆ. ಸ್ಟೇಜ್ ಮೇಲಿನ ವ್ಯಕ್ತಿ ಮುಕ್ಕಾಲು ಗಂಟೆ ಮಾತನಾಡಿ ಭಾಷಣ ಮುಗಿಸಿದಾಗ ಸಭೆಯಲ್ಲಿ ಜೋರಾಗಿ ಕರತಾಡನ. ನಿರೂಪಕ ಬಂದು ಭಯಂಕರ ಆಕ್ಸೆಂಟ್ ಭರಿತ ಇಂಗ್ಲೀಷಿನಲ್ಲಿ “ಥ್ಯಾಂಕ್ಸ್ ಫಾರ್ ಎನ್ ಲೈಂಟ್ನಿಂಗ್ ಅಸ್ ಜಸ್ಟಿಸ್ ವೆಂಕಟಾಚಲಯ್ಯ” ಎಂದು ಅಭಿನಂದನೆ ಸಲ್ಲಿಸಿದ. ನನಗೆ ಕಾಲ ಕೆಳಗಿನ ಭೂಮಿಯ ಮೇಲಿನ ಕಾರ್ಪೆಟ್ ಸರಿದ ಅನುಭವ. ವೆಂಕಟಾಚಲಯ್ಯ ಮಾತನಾಡಿಬಿಟ್ಟಿದ್ದಾರೆ. ನಾನೂ ಏನೂ ಬರೆದುಕೊಂಡಿಲ್ಲ. ಏನು ಮಾಡಬೇಕು ಗೊತ್ತಾಗುತ್ತಿಲ್ಲ. ಪೂರ್ಣ ತಲೆ ಕೆಟ್ಟು ಹೋಯಿತು.

ಹಾಗೆಯೇ ಆಫೀಸಿಗೆ ಬಂದೆ. ಸ್ಟೋರಿ ಫೈಲ್ ಮಾಡಲು ಕುಳಿತರೆ ನಾನು ಬರೆದುಕೊಂಡಿದ್ದ ನೋಟ್ಸ್ ನ ತಲೆಬುಡ ಅರ್ಥವಾಗುತ್ತಿಲ್ಲ. ಡೆಡ್ ಲೈನ್ ಬೇರೆ ಸಮೀಪಿಸುತ್ತಿದೆ. ಹೊಸದಾಗಿ ಕೆಲಸಕ್ಕೆ ಬೇರೆ ಸೇರಿದ್ದೇನೆ. ಹೀಗೆ ಮಾಡಿಕೊಂಡಿದ್ದೇನೆ ಎಂದು ಗೊತ್ತಾದರೆ ಚೀಫ್ ಬಿಟ್ಟಾರೆಯೆ. ಯೋಚಿಸಿ ಯೋಚಿಸಿ ಅಳುಬರುವಂತಾಯಿತು. (ಥೂ ಅಳುಮುಂಜಿ…ಹುಡುಗ್ರು ಯಾವಾಗಾದ್ರೂ ಅಳ್ತಾರಾ)

ಆಗ ನನಗೆ ದೇವರಾಗಿ ಒದಗಿದ್ದು ಒಬ್ಬ ಹಿರಿಯ ಪತ್ರಕರ್ತ. ಅವರೂ ಈ ಕಾರ್ಯಕ್ರಮಕ್ಕೆ ಬಂದಿದ್ದರು. ಈ ಮೊದಲೇ ಅವರನ್ನು ಪರಿಚಯಮಾಡಿಕೊಂಡಿದ್ದೆನಾದ್ದರಿಂದ ಅವರಿಗೆ ನೇರವಾಗಿ ಫೋನಾಯಿಸಿದೆ. ಕಷ್ಟ ಹೇಳಿಕೊಂಡೆ. “ಹೆದರಬೇಡಪ್ಪಾ, ನಿನ್ನ ಈಮೇಲ್ ಐಡಿ ಕೊಡು. ನಾನು ಫೈಲ್ ಮಾಡಿರುವ ಸ್ಟೋರಿಯನ್ನು ಮೇಲ್ ಮಾಡುತ್ತೇನೆ. ಅದನ್ನು ನೋಡಿಕೊಂಡು ನಿನ್ನ ಸ್ಟೋರಿ ಬರೆ. ಆದರೆ ವರ್ಡ್ ಟು ವರ್ಡ್ ಕಾಪಿ ಮಾಡಬೇಡ ಆಯ್ತಾ” ಎಂದರು. ಬಿಪಿ ನಾರ್ಮಲ್ ಗೆ ಬಂತು. ದೇಹದ ಜೀವಕೋಶಗಳು ಶಾಂತಗೊಂಡವು. ಐದು ನಿಮಿಷದಲ್ಲಿ ಅವರ ಮೇಲ್ ಬಂತು. ಅದನ್ನು ನೋಡಿ ನನ್ನ ಕಾಪಿ ತಯಾರಿಸಿದೆ. ಫೈಲ್ ಮಾಡಿದೆ. ಅಂದು ಸಹಾಯ ಮಾಡಿದ್ದ ಅವರು ಇಂದಿಗೂ ನನ್ನ ಹಲವು ಸ್ಟೋರಿಗಳಿಗೆ ಮಾರ್ಗದರ್ಶಕರಾಗಿದ್ದಾರೆ.

(ಆಮೇಲೆ ನನ್ನ ಅಚಾತುರ್ಯ ಗೊತ್ತಾಗಿದ್ದು. ಜಸ್ಟಿಸ್ ವೆಂಕಟಾಚಲಯ್ಯ ಹಾಗೂ ಲೋಕಾಯುಕ್ತ ಜಸ್ಟಿಸ್ ವೆಂಕಟಾಚಲ ನಡುವೆ ಕನ್ ಫ್ಯೂಸ್ ಮಾಡಿಕೊಂಡಿದ್ದೆ. ಹೀಗಾಗಿಯೇ ಎಲ್ಲ ಅವಾಂತರವಾಗಿದ್ದು…)

Advertisements