ಆ ದಿನಗಳು ಭಾಗ – 2

vijay times

ಪತ್ರಿಕೋದ್ಯಮವೆಂಬ ಪತ್ರಿಕೋದ್ಯಮದ ಪಿತ್ತ ನೆತ್ತಿಯಲ್ಲಿನ ಬ್ರಹ್ಮರಂಧ್ರದಲ್ಲಿ ಭವ್ಯ ಬಂಗಲೆ ಕಟ್ಟಿಕೊಂಡಿದ್ದ ಸಮಯ. ಭಾರತ ಮಾತೆಯ ಸ್ವಾತಂತ್ರ್ಯಕ್ಕಾಗಿ ಕ್ರಾಂತಿಕಾರಿಗಳಲ್ಲಿರುತ್ತಿದ್ದ ಉತ್ಸಾಹಕ್ಕಿಂತ ಗುಲಗುಂಜಿಯಷ್ಟು ಕಮ್ಮಿ ಉತ್ಸಾಹದೊಂದಿಗೆ ಅಸೈನ್ ಮೆಂಟ್ ಗಳಿಗೆ ಹೋಗುತ್ತಿದ್ದೆ.

ಕೆಪಿಟಿಸಿಎಲ್ ನ ಕಾರ್ಯಕ್ರಮ. ವಿದ್ಯುತ್ ಉತ್ಪಾದನಾ ಘಟಕವೊಂದನ್ನು ಅಂದಿನ ಹೈಟೆಕ್ ಮುಖ್ಯಮಂತ್ರಿ ಎಸ್. ಎಂ. ಕಿಷ್ನ ದೂರದರ್ಶನದಲ್ಲಿದ್ದ ಅಡಿಟೋರಿಯಂನಿಂದ ರೀಮೋಟ್ ಕಂಟ್ರೋಲ್ ಮೂಲಕ ಉದ್ಘಾಟನೆ ಮಾಡುವವರಿದ್ದರು. ನಮ್ಮೂರಿನ ಪಂಚಾಯತಿ ಮೆಂಬರನ್ನೂ ಸರಿಯಾಗಿ ನೋಡಿರದಿದ್ದ ನಾನು ಮುಖ್ಯಮಂತ್ರಿಗಳ ಕಾರ್ಯಕ್ರಮವನ್ನು ಕವರ್ ಮಾಡಲು ಹೊರಟಿದ್ದೆನಾದ್ದರಿಂದ ಭಯ, ಭಕ್ತಿ, ಉತ್ಸಾಹಗಳೆಲ್ಲ ಯದ್ವಾ ತದ್ವಾ ತುಂಬಿಕೊಂಡಿದ್ದವು. ಕಾರ್ಯಕ್ರಮಕ್ಕೆ ಸಾಕಷ್ಟು ಮೊದಲೇ ಹೋಗಿ ಪತ್ರಕರ್ತರ ನಡುವೆ ಆಸೀನನಾದೆ. ಕೆಲವೇ ಹೊತ್ತಿನಲ್ಲಿ ಮುಖ್ಯಮಂತ್ರಿ ಕಿಷ್ನ ಗಂಭೀರವಾಗಿ ಮುಗುಳ್ನಗುತ್ತ ಆಗಮಿಸಿ ಬಟನ್ ಒತ್ತಿ  ವಿದ್ಯುತ್ ಉತ್ಪಾದನಾ ಘಟಕವನ್ನು ಉದ್ಘಾಟಿಸಿದರು. ಉದ್ಘಾಟನೆ ಮುಗಿದ ತಕ್ಷಣ ಪತ್ರಕರ್ತರು ಪ್ರಶ್ನೆ ಕೇಳಲು ಆರಂಭಿಸಿದರು. ಆಗ ಕೆಪಿಟಿಸಿಎಲ್ ಅಧಿಕಾರಿಗಳು ಪತ್ರಿಕಾಗೋಷ್ಠಿಗೆ ಮತ್ತೊಂದು ರೂಮಿನಲ್ಲಿ ವ್ಯವಸ್ಥೆ ಮಾಡಿರುವುದಾಗಿ ಹೇಳಿ,  ನಮ್ಮನ್ನು ಕರೆದುಕೊಂಡು ಹೋಗಲು ಅನುವಾದರು. ಇದಕ್ಕಾಗಿಯೇ ಕಾಯುತ್ತಿದ್ದ ಪತ್ರಕರ್ತರು ನೀಹಿಂದು ನಾಮುಂದು ಎಂದು ಭಯಂಕರ ಸ್ಪೀಡಿನೊಡನೆ ರೂಮಿನತ್ತ ಓಡಲು ಆರಂಭಿಸಿದರು. ಇವರೇಕೆ ಹೀಗೆ ಓಡುತ್ತಿದ್ದಾರೆ ಎಂದು ಮೊದಲಿಗೆ ಅರ್ಥವಾಗಲಿಲ್ಲ. ಎಲ್ಲರೂ ಹೋಗುವ ಗಡಿಬಿಡಿಯಲ್ಲಿ ಎಸ್ಎಂಕೆ ನನ್ನ ಸಮೀಪವೇ ಇದ್ದುದರಿಂದ ತೀವ್ರ ಪುಳಕಿತನಾಗಿ ಅವೊರೊಂದಿಗೆ ನಿಧಾನವಾಗಿಯೇ ರೂಮ್ ಪ್ರವೇಶಿಸಿದೆ. ನೋಡಿದರೆ ಏನಿದೆ ಅಲ್ಲಿ….ಇರೋ ಬರೋ ಕುರ್ಚಿ, ಟೇಬಲ್, ಸ್ಟೂಲ್ ಹೀಗೆ ಪತ್ರಕರ್ತರು ಪ್ರಷ್ಠವಿಡಬಹುದಾದಂತಹ ಜಾಗಗಳನ್ನೆಲ್ಲ ಆಕ್ರಮಿಸಿಕೊಂಡಿದ್ದಾರೆ. ಕೊನೆಗೆ ಹೇಗೋ ಮಾಡಿ ಚೂರು ಜಾಗ ಸಂಪಾದಿಸಿಕೊಂಡು ಕುಳಿತುಕೊಂಡೆ.

ಪತ್ರಕರ್ತರ ಪ್ರಶ್ನೆಗಳು ಆರಂಭವಾದವು. ಎಂದಿನಂತೆ ವಿದ್ಯುತ್ ಕಾರ್ಯಕ್ರಮದಲ್ಲಿ ಅತೀ ಹೆಚ್ಚು ಹಾಗೂ ಅತೀ ಮೌಲ್ಯಯುತ ಪ್ರಶ್ನೆಗಳನ್ನು ಕೇಳಿದ್ದು ವಿಜಯ ಕರ್ನಾಟಕದ ಶ್ರೀಶ ಸರ್. ಪತ್ರಕರ್ತರು ಪ್ರಶ್ನೆ ಕೇಳಿದ್ದು, ಸಿಎಂ ಕಿಷ್ನ ಉತ್ತರಿಸಿದ್ದು ನನಗೆ ಸಾಧಾರಣ ಅರ್ಥವಾಗಿತ್ತು. ಆದರೆ ಮೆಗಾವ್ಯಾಟ್, ಲೋಡ್ ಶೆಡ್ಡಿಂಗ್, ಎಮ್ಓಯು, ಟ್ರಾನ್ಸಮಿಶನ್ ಲಾಸ್ ಎಂದೆಲ್ಲ ಮಾತನಾಡಿದ್ದು ಸೀದಾ ಬೌನ್ಸ್ ಹೊಡೆದಿತ್ತು.

ಕೊಂಚ ಆತಂಕದಿಂದಲೇ ಆಫೀಸಿಗೆ ಬಂದು ಸ್ಟೋರಿ ಫೈಲ್ ಮಾಡಲು ಕುಳಿತೆ. ನಾನು ಬರೆದುಕೊಂಡಿದ್ದ ನೋಟ್ಸ್ ಗಳನ್ನೆಲ್ಲ ಕಷ್ಟಪಟ್ಟು ಒಂಚೂರು ಬಿಡದೇ ಕಂಪ್ಯೂಟರ್ ಗೆ ತುಂಬಿಸಿದೆ. ಆದರೆ ಫೈಲ್ ಮಾಡಿದ ಸ್ಟೋರಿ ಬಗ್ಗೆ ಕಾನ್ಫಿಡನ್ಸೇ ಇರಲಿಲ್ಲ. ಬರೆದ ಪ್ರತಿ ಸೆಂಟೆನ್ಸೂ ಕೂಡ,” ನಾನು ಹೇಳುತ್ತಿರುವ ಮಾಹಿತಿ ಸರಿಯಾಗಿದೆಯಾ?” ಎಂದು ನನ್ನನ್ನು ಪ್ರಶ್ನಿಸತೊಡಗಿದಂತೆ ಭಾಸವಾಯಿತು. ಅವಿಶ್ವಾಸ ಏರುತ್ತ ಹೋಯಿತು. ಕೊನೆಕೊನೆಗೆ ಎಸ್ ಎಂ ಕೃಷ್ಣ ಸರಿಯೋ ಅಥವಾ ಎಂ ಎಸ್. ಕೃಷ್ಣ ಸರಿಯೋ ಎಂಬಂತಹ ಗೊಂದಲ ಆರಂಭವಾಯಿತು. ಯಾರಾದರೂ ನನ್ನನ್ನು ಈ ಪರಿಸ್ಥಿತಿಯಿಂದ ಪಾರಾಮಾಡಬಾರದೆ ಎನಿಸಿತು. ದೇವರಿಗೆ ಮೊರೆಯಿಟ್ಟೆ. ಮೊರೆ ಕೇಳಿಸಿತು ಅಂತ ಕಾಣುತ್ತದೆ.

ಸುದ್ದಿಯನ್ನು ಚೀಫ್ ಗೆ ನೀಡಬೇಕು ಎನ್ನುವಷ್ಟರಲ್ಲಿ ಆಫೀಸ್ ಬಾಯ್ ಬಿಳಿಹಾಳೆಯ ಮೇಲೆ ಮುದ್ದಾಗಿ ಟೈಪ್ ಮಾಡಿದ್ದ ಕನ್ನಡ ಅಕ್ಷರಗಳನ್ನು ನನ್ನ ಪಕ್ಕದ ಕುರ್ಚಿಯ ಮೇಲೆ ಕುಳಿತಿದ್ದ ನನಗಿಂತ ಹಿರಿಯ ವರದಿಗಾರರಿಗೆ ನೀಡಿ, “ಸಾರ್… ಟ್ರಾನ್ಸಲೆಷನ್ ಅಂತೆ. ವಿಟಿಗೂ ಇಂಪಾರ್ಟಂಟ್ ಸ್ಟೋರಿ ಅಂತ ಹೇಳಿದ್ದಾರೆ” ಅಂದ. ಆ ಹಿರಿಯ ವರದಿಗಾರರು ಹಾಗೂ ನಾನು ಸೇರಿಕೊಂಡು ಅದನ್ನು ಇಂಗ್ಲೀಷಿಗೆ ಟ್ರಾನ್ಸಲೇಟ್ ಮಾಡಿದೆವು. ಎಸ್. ಎಂ. ಕಿಷ್ನ ಕಾರ್ಯಕ್ರಮದ ವರದಿಯನ್ನು ವಿಕ ಗೆ ಬರೆದಿದ್ದ ಶ್ರೀಶ ಸರ್,  ಅದನ್ನು ವಿಟಿಗೂ ಕಳಿಸಿಕೊಟ್ಟಿದ್ದ ಪ್ರತಿ ಅದಾಗಿತ್ತು.