ಬಾಹರ್ ವತ್ತಾಚ್ ನಖರೇವಾಲಿ…..

123

ಕಾಲೇಜಿನ ಪರಮ ಪಡಪೋಶಿತನದ ದಿನಗಳವು. ಏರ್ಪೋರ್ಟಿನಿಂದ ಗೆಳೆಯನ ಅಣ್ಣನೊಬ್ಬ ವಿದೇಶಕ್ಕೆ ಹೋಗುವವನಿದ್ದ. ಆತನನ್ನು ಬೀಳ್ಕೊಡಲು ನಮ್ಮ ಗೆಳೆಯರ ಗುಂಪೆಲ್ಲ ಏರ್ ಪೋರ್ಟಿಗೆ ಹೋಗಿತ್ತು. ವಿಮಾನ ಪ್ರಯಾಣ ಮೊದಲಬಾರಿಯಾಗಿದ್ದರಿಂದ ಆತನಂತೂ ಫುಲ್ ನರ್ವಸ್ ಆಗಿ ಅತ್ತಿಂದಿತ್ತ ಇತ್ತಿಂದತ್ತ ಓಡಾಡುತ್ತಿದ್ದ. ಬಾಲವೊಂದಿಲ್ಲದ ಕೋತಿಗಳಾಗಿದ್ದ ನಾವೆಲ್ಲ ಕ್ಖೆ..ಕ್ಖೆ..ಕ್ಖೆ…ಕ್ಖೆ…. ಎಂದು ನಗಾಡಿಕೊಂಡು, ತಮಾಷೆ ಮಾಡಿಕೊಳ್ಳುತ್ತ ನಿಂತಿದ್ದೆವು. ಅಷ್ಟರಲ್ಲಾಗಲೇ ಏರ್ ಪೋರ್ಟಿನಲ್ಲಿ ಮುದ್ದಿನ ಸೊಕ್ಕಿನ ಬೆಕ್ಕಿನ ಹಾಗೆ ಠಳಾಯಿಸುತ್ತಿದ್ದ ಏರ್ ಹಾಸ್ಟೆಸ್ ಗಳು ನಮ್ಮ ಗಮನ ಸೆಳೆದಿದ್ದರು. ಅವರ ಬಿಗಿಬಿಗಿ ಉಡುಪು, ಬಿಳಿಬಿಳಿ ಕಾಲುಗಳು, ತೀರ ಫ್ರೋಫೆಷನ್ ಎನಿಸುವಂತಹ ನಡೆಯುವ ಸ್ಟೈಲ್, ನೋಟ, ಕೂದಲು ಕಟ್ಟಿಕೊಂಡಿದ್ದ ಪರಿ ಎಲ್ಲವನ್ನೂ, ಅವರ ಬಗ್ಗೆ ನಾವು ಪಿಎಚ್ ಡಿ ಮಾಡುತ್ತಿದ್ದೆವೋ ಎಂಬಂತೆ ತೀರ ಗಮನವಿಟ್ಟು ನೋಡುತ್ತಿದ್ದೆವು. ಗೆಳೆಯರ ಗುಂಪಿನಲ್ಲಿದ್ದಾಗ ಎರಡು ವಿಷಯಗಳ ಬಗ್ಗೆ ಯಾವುದೇ ಪೂರ್ವ ಸೂಚನೆಯಲ್ಲಿದೆ ಚರ್ಚೆಗಳಾರಂಭವಾಗಿ ಬಿಡುತ್ತಿದ್ದವು. ಮೊದಲೆನಯದು ದೇವರ ಬಗ್ಗೆಯಾದರೆ ಎರಡನೆಯದು ಹುಡುಗಿರಯ ಕುರಿತದ್ದು. (ಎತ್ತಣಿಂದೆತ್ತ ಸಂಬಂಧವಯ್ಯಾ ಕುಮಾರಾ….?)

ಸರಿ, ಏರ್ ಹಾಸ್ಟೆಸ್ ಗಳ ಕುರಿತು ಚರ್ಚೆ ಆರಂಭವಾಗಿಯೇ ಬಿಟ್ಟಿತು. ಅವರ ದೇಹದ ಪ್ರತಿಯೊಂದರ ಬಗೆಯೂ ಕಾಮೆಂಟುಗಳು ನಮ್ಮನಮ್ಮಲ್ಲಿ ಆರಂಭವಾದವು. ಅವರ ಸ್ಟೈಲ್ ಕುರಿತು ಗಂಭೀರ ಚರ್ಚೆ ನಡೆಯಲಾರಂಭಿಸಿತು. ಅವರದು ಕೃತಕ ಸೌಂದರ್ಯ ಎಂದು ಒಂದು ಗುಂಪು ವಾದಿಸಿದರೆ, ಮತ್ತೊಂದು ಗುಂಪು ಅಲ್ಲ ಅದು ಗಾಡ್ ಗಿಫ್ಟ್ ಎಂದು ಕೈಕುಟ್ಟಿ ಹೇಳಲಾರಂಭಿಸಿತು. ಚರ್ಚೆಯಲ್ಲಿ ಪಾಲ್ಗೊಂಡಿದ್ದ ತನ್ವೀರ ತನ್ನ ಕನ್ನಡ ಆಕ್ಸೆಟ್ ನ ಉರ್ದುವಿನಲ್ಲಿ ಕ್ಯಾ ಬಾತಾ ಕರ್ ತೈಜಿ ತುಮ್ನಾ,..ಯೇ ಏರ್ ಹಾಸ್ಪೇಸ್ ಛೋಂಕ್ರ್ಯಾ…ಯಹಾಂ ಏರ್ ಪೋರ್ಟ್ ಪೇ ವತ್ತಾಚ್ ನಖರೇವಾಲಿ….ಪ್ಲೇನ್ ಕೇ ಅಂದರ್ ಕಾಮ್ ವಾಲಿ….ಭೈ ಎಂದದ್ದೇ ತಡ, ಚರ್ಚೆ ಮುಗಿದೇ ಹೋಯಿತು.