‘ಮುಕ್ತ ಮುಕ್ತ ಸಂವಾದ’ ಹಾಗೂ ತಿಪಟೂರಿನ ಶ್ರೀಸಾಮಾನ್ಯ

ತಿಪಟೂರು

ಭ್ರಮೆ ಒಡೆಯಿತು. ಕಣ್ಣು ತೆರೆಯಿತು. ಪರದೆ ಸರಿಯಿತು. ಸಣ್ಣ ಊರಲ್ಲಿ ಯಾರು ಬರುತ್ತಾರೆ? ಜನರ ಕ್ವಾಲಿಟಿ ಏನು ಮಹಾ ಇರುತ್ತದೆ? ಹಾಲ್ ಕೂಡ ಸಣ್ಣದಂತೆ…. ಇತ್ಯಾದಿ ಸಂಶಯಗಳೊಂದಿಗೆ ತಿಪಟೂರಿಗೆ ಹೋದಾಗ ಮಧ್ಯಾಹ್ನ 12.30. ಬಿ.ಎಂ.ಶ್ರೀ ರೆಸಿಡೆನ್ಸಿಯಲ್ಲಿ ಫ್ರೆಶ್ ಆಗಿ, ಅತಿಥೇಯರೊಬ್ಬರ ಮನೆಯಲ್ಲಿ ಪುಷ್ಕಳ ಊಟಮುಗಿಸಿಕೊಂಡು ಸಂವಾದ ನಡೆಯುವ ಸ್ಥಳಕ್ಕೆ ಹೋದಾಗ ನನಗೆ ನಿಜಕ್ಕೂ ಶಾಕ್!!

ಹಾಲ್ ಅಕ್ಷರಶಃ ಜಾಮ್ ಪ್ಯಾಕ್ಡ್ ಆಗಿತ್ತು. ಸ್ಟೇಜ್ ಮುಂದೆ ಸಹ ಜನರು ಒತ್ತೊತ್ತಾಗಿ ನೆಲದ ಮೇಲೆ ಕುಳಿತಿದ್ದರು. ಸ್ಟೇಜ್ ಬಲಕ್ಕೆ, ಎಡಕ್ಕೆ, ಹಿಂದೆ ಕೊನೆಕೊನೆಗೆ ಸ್ಜೇಜ್ ಪಕ್ಕ ಮಾಡಿರುವ ಮೆಟ್ಟಿಲುಗಳ ಮೇಲೆ ಸಹ ಜನರು ಸುಮಾರು ಮೂರು ಗಂಟೆ ಕಾಲ ನಿಂತು ಮುಕ್ತ ಮುಕ್ತ ಸಂವಾದಕ್ಕೆ ಸಾಕ್ಷಿಯಾದರು!!

ಎಲ್ಲಕ್ಕಿಂತ ಖುಶಿಯಾಗಿದ್ದು ಜನರು ಕೇಳುತ್ತಿದ್ದ ಪ್ರಶ್ನೆಗಳಿಗೆ. ಸಾಮಾನ್ಯವಾಗಿ ಕೌಟುಂಬಿಕ ಪ್ರಶ್ನೆಗಳನ್ನು ನಾನು ನೋಡಿರುವ ಮೂರು ಸಂವಾದಗಳಲ್ಲಿ ಹೆಚ್ಚು ಕೇಳಲಾಗಿತ್ತು. ಆದರೆ ಈ ಸಂವಾದದಲ್ಲಿ ಮಾತ್ರ ರಾಜಕೀಯ, ಭ್ರಷ್ಟಾಚಾರ, ವ್ಯವಸ್ಥೆಯ ಆರೋಗ್ಯ, ಜೂನಿಯರ್ ವಕೀಲರು ಎದುರಿಸುತ್ತಿರುವ ಸಂಕಷ್ಟ ಮುಂತಾದವುಗಳ ಬಗ್ಗೆ ಪ್ರೇಕ್ಷಕರಿಂದ ಮೌಲ್ಯಾಧಾರಿತ ಪ್ರಶ್ನೆಗಳು ಬಂದವು. ನಿರ್ದೇಶಕ ಟಿ. ಎನ್. ಸೀತಾರಾಮ್ ಕೂಡ ಆ ಪ್ರಶ್ನೆಗಳಿಗೆ ಅಷ್ಟೇ ಮೌಲ್ಯಯುತ ಹಾಗೂ ಕನ್ವಿನ್ಸಿಂಗ್ ಉತ್ತರ ನೀಡಿದರು. ಅಫ್ ಕೋರ್ಸ್ ಹಾಸ್ಯದ ಟಚ್ ಜೊತೆಗೆ.

ತಿಪಟೂರಿನ ಓರ್ವ ಶ್ರೀಸಾಮಾನ್ಯ ಕೇಳಿದ್ದ ಪ್ರಶ್ನೆಗೆ ಟಿ. ಎನ್. ಸೀತಾರಾಮ್ ಸೇರಿದಂತೆ, ಕಲಾವಿದರು, ಪ್ರೇಕ್ಷಕರು ತಲೆದೂಗಿದರು. ಇಟ್ ವಾಸ್ ಶಾಟ್ ಎಟ್ ದಿ ಸೆಂಟರ್…..ಆ ವ್ಯಕ್ತಿಯ ಕಾನ್ಫಿಡೆನ್ಸ್ ಲೆವೆಲ್, ಪ್ರಶ್ನೆ ಕೇಳಿದ ರೀತಿ, ಪ್ರಶ್ನೆಯ ಹಿಂದಿದ್ದ ಸಾಮಾಜಿಕ ಕಳಕಳಿ, ಅವರು ಮುಕ್ತಾ ಮುಕ್ತಾ ವನ್ನು ಎಷ್ಟು ಕೂಲಂಕುಷವಾಗಿ ವೀಕ್ಷಿಸುತ್ತಾರೆ ಎಂಬುದನ್ನು ಅವರ ಪ್ರಶ್ನೆ ಪ್ರತಿನಿಧಿಸಿತ್ತು. ಪ್ರಶ್ನೆ ಮುಗಿದ ಕೂಡಲೆ ಜನರಿಂದ ಚಪ್ಪಾಳೆಯೂ ಬಂತು. ಅಂಡ್ ಬಿಲಿವ್ ಮಿ ಆ ಪ್ರಶ್ನೆ ಕೇಳಿದ್ದು ಬೇರಾರೂ ಅಲ್ಲ ನಾವು ತೀರ ಸಾಮಾನ್ಯ ವ್ಯಕ್ತಿ ಎಂದು ಪರಿಗಣಿಸುವ ಓರ್ವ ಆಟೋ ಚಾಲಕ!!

ತಿಪಟೂರಿನ ಸಂವಾದದ ಹಲವು ವಿಶೇಷಗಳನ್ನು ನೀವು ನೋಡಿಯೇ ಆನಂದಿಸಬೇಕು. ಬರುವ ಭಾನುವಾರ (20-09-2009) ರಂದು ತಿಪಟೂರಿನ ಸಂವಾದ ‘ಈ ಟಿವಿ’ಯಲ್ಲಿ ಬೆಳಿಗ್ಗೆ 10.05 ಕ್ಕೆ ಪ್ರಸಾರವಾಗಲಿದೆ. ದಯವಿಟ್ಟು ವೀಕ್ಷಿಸಿ.