ಆ ದಿನಗಳು

145

ಅಂದಿಗೂ ಇಂದಿಗೂ ಬಹುಶಃ ಎಂದಿಗೂ, ಕನ್ನಡ ಚಾನೆಲ್ ಗಳಲ್ಲಿ ನುಗ್ಗಲು ‘ಈ ಟಿವಿ’ ಲಾಂಚ್ ಪ್ಯಾಡ್ ಆಗಿರುವಂತೆ ಪ್ರಿಂಟ್ ಮೀಡಿಯಾದಲ್ಲಿ ನುಗ್ಗಲು ವಿಜಯ ಟೈಮ್ಸ್ ಅದ್ಭುತ ವೇದಿಕೆ ಒದಗಿಸಿಕೊಡುತ್ತಿದ್ದ ಸಂದರ್ಭ. ವಿಜಯ ಟೈಮ್ಸ್ ನಲ್ಲಿ ಪ್ರಕಟಿತ ಪ್ರತಿ ಪದಕ್ಕೆ ಎಂಟಾಣೆ ಲೆಕ್ಕದಲ್ಲಿ ಸ್ಟ್ರಿಂಗರ್ ಆಗಿ ಸೇರಿದ್ದೆ. (ಪ್ರತಿ ಪದಕ್ಕೆ ಎಂಟು ಆಣೆ ಹಾಗೂ ಫೋಟೋ ಗೆ ಇದಕ್ಕಿಂತ ಜಾಸ್ತಿ. ಎಷ್ಟು ಎಂದು ಸರಿಯಾಗಿ ನೆನಪಿಲ್ಲ. ಆಶ್ಚರ್ಯವಾಯಿತೆ?) ನನ್ನ ಗೆಳೆಯರೆಲ್ಲ ನಾನು ಬಂದ ಕೂಡಲೇ ‘ಎಂಟಾಣೆಗೊಂದ್ ಎಂಟಾಣೆಗೊಂದ್’ ಎಂದು ಕಾಲೆಳೆಯುತ್ತಿದ್ದರು.

ಆದರೆ ಅದಾಗಿ ಮೂರೇ ದಿನಕ್ಕೆ ಅದೇ ವಿಜಯ ಟೈಮ್ಸ್ ನಲ್ಲಿ ಟ್ರೇನಿ ಜರ್ನಲಿಸ್ಟ್ ಆಗಿ ಸೇರಿದ್ದೆ. ವಾರ ಕಳೆಯುತ್ತಿದ್ದಂತೆ ಯುದ್ಧಭೂಮಿಗೆ ಕಳಿಸಲಾರಂಭಿಸಿದರು. ಭಾರೀ ಸಿದ್ಧತೆಯೊಂದಿಗೆ, ಶ್ರದ್ಧೆಯೊಂದಿಗೆ, ಭಯ-ಭಕ್ತಿಯೊಂದಿಗೆ ಪ್ರತಿನಿತ್ಯವೂ ಬೆಳಗಾ ಬೆಳಗಾ ಪ್ರೆಸ್ ಕ್ಲಬ್ಬಿಗೆ ಹೋಗಿ ಮಧ್ಯಾಹ್ನದವರೆಗೂ ಅಲ್ಲಿದ್ದು, ಬೇಕಾಗಿದ್ದ ಬೇಡವಾಗಿದ್ದ ಕನಿಷ್ಠ ಎಂಟು ಹತ್ತು ಪ್ರೆಸ್ ಕಾನ್ಫರೆನ್ಸ್ ಗಳನ್ನು ಕವರ್ ಮಾಡಿಕೊಂಡು ಆಫೀಸಿಗೆ ಮರಳಿ ಎಲ್ಲವನ್ನೂ ಶ್ರದ್ಧೆಯಿಂದ ಫೈಲ್ ಮಾಡುತ್ತಿದ್ದೆ. ಮಾರನೆ ದಿನ ಪೇಪರ್ ನಲ್ಲಿ ಒಂದೋ ಎರಡೋ ವರದಿಗಳು ಪ್ರಕಟವಾಗಿರುತ್ತಿದ್ದವು. ಇಂತಿಪ್ಪ ಸನ್ನಿವೇಶದಲ್ಲಿ ಪ್ರೇಸ್ ಕ್ಲಬ್ ಅಲ್ಲದೆ ಇತರ ಕಾರ್ಯಕ್ರಮಗಳಿಗೂ ನನ್ನನ್ನು ಕಳಿಸಿಕೊಡಲು ಆರಂಭಿಸಿದರು.

ಜಸ್ಟಿಸ್ ವೆಂಕಟಾಚಲಯ್ಯ ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದ ಕಾರ್ಯಕ್ರಮವೊಂದು ಹೋಟೆಲ್ ಏಟ್ರಿಯಾದಲ್ಲಿ ಸಂಜೆ ಏರ್ಪಾಡಾಗಿತ್ತು. ಸಮಯ ಕೊಂಚ ಏರುಪೇರಾಗಿ ಸ್ವಲ್ಪ ಲೇಟಾಗಿ ಸಭಾಂಗಣ ಪ್ರವೇಶಿಸಿದೆ. ಬೆಳಗಾವಿಯಂತಹ ಪ್ಯೂರ್ ಗ್ರಾಮೀಣ ಸೊಗಡಿನ ಪ್ರದೇಶದಲ್ಲಿ ಬೆಳೆದಿದ್ದ ನನಗೆ ಬೆಂಗಳೂರಿನ ಝಾಂಗ್ ಪ್ಯಾಂಗ್ ಅಚ್ಚರಿ ಮೂಡಿಸಿತ್ತು. ಹೀಗಾಗಿ ಹೋಟೆಲ್ ಏಟ್ರಿಯಾ ಸ್ವರ್ಗದಂತೆಯೂ ಅಲ್ಲಿರುವ ರಿಸೆಪ್ಶನಿಸ್ಟ್ ಗಳು ರಂಭೆ, ಊರ್ವಶಿಯಂತೆಯೂ ಕಂಡರು. ಅವರನ್ನೆಲ್ಲ ದಾಟಿಕೊಂಡು ಪತ್ರಕರ್ತರು ಕುಳಿತಿದ್ದ ಗುಂಪನ್ನು ಸೇರಿಕೊಂಡೆ. ಸ್ಟೇಜ್ ಮೇಲೆ ಆಗಷ್ಟೇ ಸ್ವಾಗತ ಭಾಷಣ ಮುಗಿದಿತ್ತು. ಹೀಗಾಗಿ ಜಸ್ಚಿಸ್ ವೆಂಕಟಾಚಲಯ್ಯ ಭಾಷಣ ಇನ್ನೂ ಆಗಿಲ್ಲ ಎಂದು ಸಮಾಧಾನವಾಯಿತು. ಆದರೆ ಸ್ಟೇಜ್ ಮೇಲೆ ಕಣ್ಣಾಡಿಸುತ್ತಿದ್ದಂತೆ ನನಗೆ ವೆಂಕಟಾಚಲಯ್ಯ ಕಂಡುಬರಲಿಲ್ಲ. ಅದು ಹೇಗೆ ಕಾರ್ಯಕ್ರಮ ಆರಂಭಿಸಿಬಿಟ್ಟರು ಎಂದು ಅಚ್ಚರಿಯಾದರೂ ಸುಮ್ಮನಿದ್ದೆ. ಈ ಮಧ್ಯೆ ನನ್ನ ಕಣ್ಣುಗಳು ಈ ಹುಡುಗಾಟ ನಡೆಸಿದ್ದಾಗಲೇ ಸ್ಟೇಜ್ ಮೇಲೆ ಯಾರದೋ ಹೆಸರು ಅನೌನ್ಸ್ ಆಗಿ ಅವರು ಬಂದು ಭಾಷಣ ಆರಂಭಿಸಿಬಿಟ್ಟರು. ಹೋಗಿದ್ದೇನೆ ಕರ್ತವ್ಯ ಎಂದುಕೊಂಡು ಅವರ ಭಾಷಣವನ್ನೂ ಗೀಚಿಕೊಳ್ಳತೊಡಗಿದೆ. ಆದರೆ ಅವರ ಇಂಗ್ಲಿಷ್ ಪ್ರತಿಭೆಯೂ, ಅವರ ಸೆಂಟೆನ್ಸ್ ಗಳೂ ನನ್ನ ನೋಟ್ ಪ್ಯಾಡ್ ಮೇಲೆ ಇಳಿಯಲು ಒಲ್ಲೆ ಎನ್ನುತ್ತಿದ್ದವು. ಹೇಗೂ ವೆಂಕಟಾಚಲಯ್ಯ ಅಲ್ಲವಲ್ಲ ಎಂದು ನಾನೂ ಕಾಟಾಚಾರಕ್ಕೆ ಗೊತ್ತಾದಷ್ಟು ಬರೆದುಕೊಳ್ಳತೊಡಗಿದೆ. ಸ್ಟೇಜ್ ಮೇಲಿನ ವ್ಯಕ್ತಿ ಮುಕ್ಕಾಲು ಗಂಟೆ ಮಾತನಾಡಿ ಭಾಷಣ ಮುಗಿಸಿದಾಗ ಸಭೆಯಲ್ಲಿ ಜೋರಾಗಿ ಕರತಾಡನ. ನಿರೂಪಕ ಬಂದು ಭಯಂಕರ ಆಕ್ಸೆಂಟ್ ಭರಿತ ಇಂಗ್ಲೀಷಿನಲ್ಲಿ “ಥ್ಯಾಂಕ್ಸ್ ಫಾರ್ ಎನ್ ಲೈಂಟ್ನಿಂಗ್ ಅಸ್ ಜಸ್ಟಿಸ್ ವೆಂಕಟಾಚಲಯ್ಯ” ಎಂದು ಅಭಿನಂದನೆ ಸಲ್ಲಿಸಿದ. ನನಗೆ ಕಾಲ ಕೆಳಗಿನ ಭೂಮಿಯ ಮೇಲಿನ ಕಾರ್ಪೆಟ್ ಸರಿದ ಅನುಭವ. ವೆಂಕಟಾಚಲಯ್ಯ ಮಾತನಾಡಿಬಿಟ್ಟಿದ್ದಾರೆ. ನಾನೂ ಏನೂ ಬರೆದುಕೊಂಡಿಲ್ಲ. ಏನು ಮಾಡಬೇಕು ಗೊತ್ತಾಗುತ್ತಿಲ್ಲ. ಪೂರ್ಣ ತಲೆ ಕೆಟ್ಟು ಹೋಯಿತು.

ಹಾಗೆಯೇ ಆಫೀಸಿಗೆ ಬಂದೆ. ಸ್ಟೋರಿ ಫೈಲ್ ಮಾಡಲು ಕುಳಿತರೆ ನಾನು ಬರೆದುಕೊಂಡಿದ್ದ ನೋಟ್ಸ್ ನ ತಲೆಬುಡ ಅರ್ಥವಾಗುತ್ತಿಲ್ಲ. ಡೆಡ್ ಲೈನ್ ಬೇರೆ ಸಮೀಪಿಸುತ್ತಿದೆ. ಹೊಸದಾಗಿ ಕೆಲಸಕ್ಕೆ ಬೇರೆ ಸೇರಿದ್ದೇನೆ. ಹೀಗೆ ಮಾಡಿಕೊಂಡಿದ್ದೇನೆ ಎಂದು ಗೊತ್ತಾದರೆ ಚೀಫ್ ಬಿಟ್ಟಾರೆಯೆ. ಯೋಚಿಸಿ ಯೋಚಿಸಿ ಅಳುಬರುವಂತಾಯಿತು. (ಥೂ ಅಳುಮುಂಜಿ…ಹುಡುಗ್ರು ಯಾವಾಗಾದ್ರೂ ಅಳ್ತಾರಾ)

ಆಗ ನನಗೆ ದೇವರಾಗಿ ಒದಗಿದ್ದು ಒಬ್ಬ ಹಿರಿಯ ಪತ್ರಕರ್ತ. ಅವರೂ ಈ ಕಾರ್ಯಕ್ರಮಕ್ಕೆ ಬಂದಿದ್ದರು. ಈ ಮೊದಲೇ ಅವರನ್ನು ಪರಿಚಯಮಾಡಿಕೊಂಡಿದ್ದೆನಾದ್ದರಿಂದ ಅವರಿಗೆ ನೇರವಾಗಿ ಫೋನಾಯಿಸಿದೆ. ಕಷ್ಟ ಹೇಳಿಕೊಂಡೆ. “ಹೆದರಬೇಡಪ್ಪಾ, ನಿನ್ನ ಈಮೇಲ್ ಐಡಿ ಕೊಡು. ನಾನು ಫೈಲ್ ಮಾಡಿರುವ ಸ್ಟೋರಿಯನ್ನು ಮೇಲ್ ಮಾಡುತ್ತೇನೆ. ಅದನ್ನು ನೋಡಿಕೊಂಡು ನಿನ್ನ ಸ್ಟೋರಿ ಬರೆ. ಆದರೆ ವರ್ಡ್ ಟು ವರ್ಡ್ ಕಾಪಿ ಮಾಡಬೇಡ ಆಯ್ತಾ” ಎಂದರು. ಬಿಪಿ ನಾರ್ಮಲ್ ಗೆ ಬಂತು. ದೇಹದ ಜೀವಕೋಶಗಳು ಶಾಂತಗೊಂಡವು. ಐದು ನಿಮಿಷದಲ್ಲಿ ಅವರ ಮೇಲ್ ಬಂತು. ಅದನ್ನು ನೋಡಿ ನನ್ನ ಕಾಪಿ ತಯಾರಿಸಿದೆ. ಫೈಲ್ ಮಾಡಿದೆ. ಅಂದು ಸಹಾಯ ಮಾಡಿದ್ದ ಅವರು ಇಂದಿಗೂ ನನ್ನ ಹಲವು ಸ್ಟೋರಿಗಳಿಗೆ ಮಾರ್ಗದರ್ಶಕರಾಗಿದ್ದಾರೆ.

(ಆಮೇಲೆ ನನ್ನ ಅಚಾತುರ್ಯ ಗೊತ್ತಾಗಿದ್ದು. ಜಸ್ಟಿಸ್ ವೆಂಕಟಾಚಲಯ್ಯ ಹಾಗೂ ಲೋಕಾಯುಕ್ತ ಜಸ್ಟಿಸ್ ವೆಂಕಟಾಚಲ ನಡುವೆ ಕನ್ ಫ್ಯೂಸ್ ಮಾಡಿಕೊಂಡಿದ್ದೆ. ಹೀಗಾಗಿಯೇ ಎಲ್ಲ ಅವಾಂತರವಾಗಿದ್ದು…)

Advertisements

ಅಯ್ಯಾ ಎಂದರೆ ಸ್ವರ್ಗ…ಎಲವೋ ಎಂದರೆ ನರಕ….

behaviour

ಈ ಪ್ರಸಿದ್ಧ ವ್ಯಕ್ತಿಗಳು ಅಂತ ಇರ್ತಾರೆ. ನಿಮಗೂ ಗೊತ್ತಿರಬಹುದು. ಅವರ ಕುರಿತು ಎರಡು ಘಟನೆಗಳು –

ಘಟನೆ – 1

ಸಾಹಿತ್ಯಕ್ಕೆ ಸಂಬಂಧಿಸಿದ ಸ್ಟೋರಿ ಮಾಡುತ್ತಿದ್ದೆ. ಬೈಟ್ ಸಲುವಾಗಿ ಸಾಹಿತಿಗಳನ್ನು ಹುಡುಕುತ್ತಿದ್ದಾಗ ಹೊಳೆದ ಹೆಸರು ಓರ್ವ ಪ್ರಸಿದ್ಧ ಲೇಖಕರದ್ದು. ಫೋನ್ ನಂಬರ್ ಸಂಪಾದಿಸಿದವನೇ ನಂಬರ್ ಡಯಲ್ ಮಾಡಿದೆ. ಪರಿಚಯ ಮಾಡಿಕೊಂಡೆ. ಸ್ಟೋರಿ ಲೈನ್ ತಿಳಿಸಿ ಬೈಟ್ ಬೇಕೆಂದೆ. ತುಂಬ ಸಂತೋಷಗೊಂಡರು. ಬೈಟ್ ತೆಗೆದುಕೊಳ್ಳಲು ಮನೆಗೇ ಕರೆದರು. ಅಡ್ರೆಸ್ ಕೇಳಿದೆ. ತುಂಬ ವಿವರವಾಗಿ ತಿಳಿಸಿದರು. ಅವರು ಅಡ್ರೆಸ್ ಹೇಳಿದ ರೀತಿ ಹೇಗಿತ್ತೆಂದರೆ ಯಾವುದೇ ಸಂದೇಹವಿಲ್ಲದೆ, ಯಾರನ್ನೂ ಕೇಳದೇ ನಮ್ಮ ಕಾರ್ ಹೋಗಿ ನಿಂತಿದ್ದು ಅವರ ಮನೆ ಮುಂದೆಯೇ. ಕಾರಿನಿಂದ ನಾನು ಮತ್ತು ಕ್ಯಾಮೆರಾಮನ್ ಇಳಿದ ತಕ್ಷಣ, ಹೊರಗೆ ಬಂದವರೇ ಸ್ವಾಗತಿಸಿದರು. ಮಗನ ಪರಿಚಯ ಮಾಡಿಸಿ ಒಳ ಕೋಣೆಗೆ ಕರೆದುಕೊಂಡು ಹೋದರು. ಬೈಟ್ ಕೊಡುವುದಕ್ಕಿಂತ ಮೊದಲು ಕಾಫಿ ಕೊಟ್ಟರು. ಉಭಯಕುಶಲೋಪರಿ ವಿಚಾರಿಸಿದರು. ನನ್ನ ಬಗ್ಗೆ, ಕ್ಯಾಮೆರಾಮನ್ ಬಗ್ಗೆ ಕೇಳಿದರು. ಬೈಟ್ ಬ್ಯಾಕ್ ಗ್ರೌಂಡ್ ಗಾಗಿ ಏನಾದರೂ ಬೇಕಾದರೆ ತೆಗೆದುಕೊಳ್ಳಿ ಎಂದು ಹಲವು ವಸ್ತುಗಳನ್ನು ತೋರಿಸಿದರು.  ನಂತರ ನನಗೆ ಬೇಕಾದಂತೆ ಅಗತ್ಯಕ್ಕೆ ತಕ್ಕ ಹಾಗೆ ಬೈಟ್ ನೀಡಿ “ಸಾಕಾ?” ಎಂದು ಕೇಳಿದರು. ಹೊರಗಡೆ ಹೋಗಿದ್ದ ಅವರ ಪತ್ನಿ ಅಷ್ಟರಲ್ಲಿ ಮನೆಗೆ ಬಂದರು. ಅವರೂ ಕೂಡ ಪ್ರಸಿದ್ಧ ಲೇಖಕಿಯೇ. ಬಂದವರೇ ಸೀದಾ ಅಡಿಗೆ ಮನೆಗೆ ಹೋಗಿ, ತಟ್ಟೆ ತುಂಬ ಉಪ್ಪಿಟ್ಟು ತುಂಬಿಕೊಂಡು ಬಂದು ಉಪಚರಿಸಿದರು. ಆತ್ಮೀಯವಾಗಿ ಬೀಳ್ಕೊಟ್ಟರು. ಅದಾದ ನಂತರ, ಬೈಟ್ ಬೇಕೆಂದಾಗಲೆಲ್ಲ ಅವರನ್ನು ಸಂಪರ್ಕಿಸಿದ್ದೇನೆ. ಮನೆಗೆ ಹೋಗಿದ್ದೇನೆ. ಕನಿಷ್ಠ, ಕಾಫಿಯಿಲ್ಲದೆ ವಾಪಸ್ ಬಂದ ನೆನಪಂತೂ ನನಗಾಗಲಿ, ನನ್ನ ಸಹೋದ್ಯೋಗಿ ವರದಿಗಾರರಿಗಾಗಲಿ ಇಲ್ಲ.

ಘಟನೆ – 2

ಈಟಿವಿಯ ಬುಕ್ ಟಾಕ್ ಕಾರ್ಯಕ್ರಮಕ್ಕೆ ಕವಿಯೊಬ್ಬರ ಬೈಟ್ ಬೇಕಾಗಿತ್ತು. ಫೋನ್ ಮಾಡಿದೆ. ಗತ್ತಿನಿಂದಲೇ ಮಾತನಾಡಿದರು. ಕವಿಗಳಲ್ವಾ ಎಂದುಕೊಂಡು ಸುಮ್ಮನಾದೆ. ಮನೆಗೆ ಹೋದೆವು. ನಮ್ಮ ಕಾರ್ ಬಂದ ತಕ್ಷಣ ಇವರೂ ಸಹ ಹೊರಗೆ ಬಂದರು. ಆದರೆ ನಮ್ಮನ್ನು ಬರಮಾಡಿಕೊಳ್ಳಲಲ್ಲ. ಮನೆಯಲ್ಲಿ ಬೇಡ. ಇಲ್ಲಿ ಬನ್ನಿ ನನ್ನ ಪ್ರತ್ಯೇಕ ರೂಮ್ ಟೆರೇಸ್ ಮೇಲಿದೆ. ಅಲ್ಲಿ ಹೋಗೋಣ ಎಂದು ಕರೆದುಕೊಂಡು ಹೋದರು. ಫೋನ್ ನಲ್ಲೇ ಬುಕ್ ಟಾಕ್ ನ ಥೀಮ್ ಹೇಳಿದ್ದೆ. ಆಯಿತು ಬನ್ನಿ ಎಂದಿದ್ದ ಕವಿ ಮಹಾಶಯರು ನಾನು ಹೋದ ಮೇಲೆ “ಹೇಳಿ ಏನು ಸ್ಟೋರಿ?” ಎಂದರು. ಮತ್ತೆ ಎಲ್ಲ ವಿವರಿಸಿದೆ. “ಸರಿ” ಎಂದು ತಮ್ಮ ಪುಸ್ತಕ ಸಂಗ್ರಹದಿಂದ ಯಾವುದೋ ಪುಸ್ತಕ ತೆಗೆದು. ಓದಲಾರಂಭಿಸಿದರು. ಹದಿನೈದು ನಿಮಿಷ ಕಳೆಯಿತು. ಅಷ್ಟರಲ್ಲಿ ನಾನು ಮತ್ತು ಕ್ಯಾಮರಾಮನ್, ಕುರ್ಚಿಗಳನ್ನು ಜೋಡಿಸಿ ಬ್ಯಾಕ್ ಗ್ರೌಂಡ್ ಸಿದ್ಧಮಾಡಿದೆವು. “ಸರ್ ಇಲ್ಲಿ ಕುಳಿತುಕೊಳ್ಳಬಹುದು” ಎಂದೆ. ಇರ್ರೀ ಸ್ವಲ್ಪ….ಪ್ರೀಪೇರ್ ಆಗ್ಬೇಡ್ವಾ…ಎಂದು ಧಿಮಾಕಿನಿಂದಲೇ ನುಡಿದರು. ನಂತರ ಪುಸ್ತಕದಲ್ಲಿಯೇ ಕಣ್ಣು ನಾಟಿಸಿ “ಯಾವ ಡ್ರೆಸ್ ಹಾಕ್ಕೊಳ್ಳಿ?” ಎಂದು ವಿಚಾರಿಸಿದರು. ನನ್ನ ಉತ್ತಕ್ಕೂ ಕಾಯದೇ, “ಜುಬ್ಬಾ ಹಾಕಿಕೊಳ್ಳುತ್ತೇನೆ. ನಮ್ಮ ಸಾಹಿತಿಗಳ ಯೂನಿಫಾರ್ಮ್ ಅಲ್ವೆ ಅದು” ಎಂದೆನ್ನುತ್ತಾ ಮತ್ತೆ ಕೆಳಗಿಳಿದು ಹೋದರು. ಹೋಗುವಾಗ “ಬರೇ ನನ್ನ ಮೇಲಿನ ಭಾಗವಷ್ಟೇ ಕ್ಯಾಮೆರಾದಲ್ಲಿ ಬರುತ್ತೆ ತಾನೆ?” ಎಂದರು. ಹೌದೆಂದೆ. ಆಸಾಮಿ ಮೇಲೆ ಬಂದಾಗ ಚೌಕುಳಿ ಚೌಕುಳಿ ಲುಂಗಿಯ ಮೇಲೆ ಗರಿಗರಿಯಾದ ಜುಬ್ಬಾ ಹಾಕಿಕೊಂಡು ಪ್ರತ್ಯಕ್ಷರಾದರು. ಶೂಟಿಂಗ್ ಪೂರ್ತಿ ಗತ್ತಿನಿಂದಲೇ ನಡೆದುಕೊಂಡರು. ಬಂದ ಕೆಲಸ ಮುಗಿಸಿ ಹೊರನಡೆದೆ.

ಇದೇ ಕವಿಗಳ ಮನೆಗೆ ನನ್ನ ಸಹೋದ್ಯೋಗಿಯೊಬ್ಬಾಕೆ ಹೋದಾಗ ಕವಿಪತ್ನಿ ಹೊರಗೆ ಬಂದು “ಏನು ಬೇಕು ಏನು ಬೇಕು” ಎಂದು ಆವೇಶದಿಂದ ಕೋಪದಿಂದ ಕೇಳಿದರಂತೆ. ಆಕೆಯ ಅವತಾರ ನೋಡಿ ನನ್ನ ಸಹೋದ್ಯೋಗಿ ಸ್ಪಲ್ಪ ಖಾರವಾಗಿಯೇ ಉತ್ತರಿಸಿದಳಂತೆ. ನಂತರ ಕ್ಯಾಮರಾಮನ್ ಬಳಿ ಹೇಳಿದಳಂತೆ, ಹೇಗೆ ಮಾತಾಡಿದ್ಲು ನೋಡಿ. ನಾನೇನೋ ಅವಳ ಗಂಡನ್ನ ಹಾರಿಸ್ಕೊಂಡು ಹೋಗೋಕೆ ಬಂದಂತೆ ಆಡ್ತಾಳೆ…

ಘಟನೆ – 1 ರ ಸಾಹಿತಿ ದಂಪತಿಯ ಹೆಸರು ಹಂಪನಾ ಎಂದು. ಘಟನೆ – 2 ರ ಕವಿಗಳ ಹೆಸರು…….

ತುಂಬ ಸಿಂಪಲ್ ಆಕ್ಸಿಡೆಂಟ್

147

ಅದೊಂದು ಕ್ರಾಸ್ ರೋಡ್.

ನಾಲ್ಕು ರಸ್ತೆ ಕೂಡುವ ಜಾಗ.

ಆತ ಆಫೀಸಿಗಾಗಿ ಬೈಕ್ ನಲ್ಲಿ ದಿನಾಲೂ ಅಲ್ಲಿಂದ ಹಾದು ಹೋಗುತ್ತಿದ್ದ.

ಗೆಳೆಯರು ಆತನನ್ನು ಪದೇ ಪದೇ ಎಚ್ಚರಿಸುತ್ತಿದ್ದರು. “ಹುಷಾರು ಮಾರಾಯ. ಆ ಕ್ರಾಸ್ ರೋಡಿನಲ್ಲಿ ಹಾದುಹೋಗುವಾಗ ಅಕ್ಕಪಕ್ಕದ ರೋಡ್ ಗಳಿಂದ ಸ್ಪೀಡಾಗಿ ಬರುತ್ತಾರೆ. ನೋಡಿಕೊಂಡು ಓಡಿಸು”.

ಹೀಗಾಗಿ ಈತ ಪ್ರತಿನಿತ್ಯ ಕ್ರಾಸ್ ರೋಡ್ ಬಂದೊಡನೆ ಹಾರ್ನ್ ಬಾರಿಸುತ್ತ ಅಕ್ಕಪಕ್ಕ ನೋಡಿ, ಯಾವುದೇ ವಾಹನ ಬರುತ್ತಿಲ್ಲ ಎಂದು ಖಾತರಿ ಮಾಡಿಕೊಂಡು ಮುಂದೆಸಾಗುತ್ತಿದ್ದ.

ಆ ದಿನ ಮತ್ತೆ ಆಫಿಸಿಗೆಂದು ಬೈಕ್ ಏರಿದ.

ಕ್ರಾಸ್ ರೋಡ್ ಸಮೀಪ ಬಂದ.

ಅಕ್ಕ ಪಕ್ಕ ನೋಡಿದ.

ಹಾರ್ನ್ ಬಾರಿಸಿದ.

ಯಾರೂ ಇರಲಿಲ್ಲ.

ಮುಂದೆ ಸಾಗಿದ.

ಆದರೆ ಮುಂದಿನಿಂದ ಭಾರೀ ಟ್ರಕ್ ವೇಗವಾಗಿ ಬರುತ್ತಿದ್ದುದನ್ನು ನೋಡಲೇ ಇಲ್ಲ…..

‘ಕತೆಯಲ್ಲಿ ಬಾಂದಾತ ಮನೆಗೂ ಬಂದು ಕದ ತಟ್ಟಿದ’

guhe

(ಯಶವಂತ ಚಿತ್ತಾಲರ ‘ಕಥೆಯಾದಳು ಹುಡುಗಿ’ ಕಥಾಸಂಕಲನದ ‘ಕತೆಯಲ್ಲಿ ಬಾಂದಾತ ಮನೆಗೂ ಬಂದು ಕದ ತಟ್ಟಿದ’ ಕಥೆಯಿಂದ ಆಯ್ದ ಭಾಗ).

ಕತೆ ನಾನೂ ಓದಿದ ನಾಟಕದ್ದೇ. ಬಹುಶಃ ನೋಯಲ್ ಕಾವರ್ಡ್ ನದಿರಬೇಕು ಅನ್ನಿಸಿತು. ಹೆಸರು ಥಟ್ಟನೆ ನೆನಪಾಗಲಿಲ್ಲ. ಅವನೂ ಸ್ಪಷ್ಟಪಡಿಸಲಿಲ್ಲ. ಮಾನವೀಯ ಮುಖಾಮುಖಿಯ ಮೇಲೆ, ನಮ್ಮ ನಿಶ್ಚಯದ ಮೇಲೆ, ಕ್ರಿಯೆಯ ಮೇಲೆ ಪರಿಸರದಲ್ಲಿಯ ಬೆಳಕು ಎಷ್ಟೊಂದು ನಾಟಕೀಯವಾದ ಪ್ರಬಾವ ಬೀರಬಲ್ಲದೆಂಬುದನ್ನು ಅತ್ಯಂತ ಪರಿಣಾಮಕಾರಿಯಾದ ರೀತಿಯಲ್ಲಿ ತೋರಿಸಿಕೊಡುವ ನಾಟಕವದು.

ಒಬ್ಬ ಸೇಲ್ಸ್ ಮನ್ ಹಾಗೂ ಅವನ ಕಂಪನಿಯ ಎಂಡಿ ನಡುವಿನ ಮುಖಾಮುಖಿ ನಾಟಕದ ಕೇಂದ್ರ ಘಟನೆ. ಸೇಲ್ಸ್ ಮನ್ 20 ವರ್ಷಗಳ ದೀರ್ಘಕಾಲ ಈ ಕಂಪನಿಗಾಗಿ ದುಡಿದೂ, ಮ್ಯಾನೇಜಮೆಂಟಿನ ದುರ್ಲಕ್ಷ್ಯಕ್ಕೆ ಗುರಿಯಾಗಿ ನೊಂದವನು. ಆಗಷ್ಟೇ ಎಂಡಿಯ ಸ್ಥಾನಕ್ಕೆ ಬಂದವನು ಇವನ ಬಾಲ್ಯದ ಗೆಳೆಯನಾಗಿಯೂ ಅನೇಕ ವರ್ಷಗಳ ವರೆಗೆ ಇವನೊಡನೆ ಸಂಪರ್ಕ ತಪ್ಪಿದವನು. ಸಂದರ್ಶನ ಆರಂಭವಾದಾಗ ಅತ್ಯಾಧುನಿಕ ಬೆಡಗಿನ, ಸಜ್ಜಿಕೆಯಿದ್ದ ಎಂಡಿಯ ಕ್ಯಾಬಿನ್ ನಲ್ಲಿ ಕಣ್ಣುಕುಕ್ಕಿಸುವ, ಮನಸ್ಸಿಗೆ ದಿಗ್ಭ್ರಮೆ ಹಿಡಿಸುವ ವಿದ್ಯುದ್ದೀಪಗಳ ಬೆಳಕು ಇರುತ್ತದೆ. ತನ್ನ ಭಡತಿಯ ಬಗ್ಗೆ ಮಾತನಾಡುವ ಉದ್ದೇಶದಿಂದ ಹೋದ ಸೇಲ್ಸ್ ಮನ್, ಎಂಡಿಗೆ ತನ್ನ ಗುರುತೇ ಸಿಕ್ಕಿಲ್ಲವೆಂದು ತಿಳಿದಾಗ ಅಧೀರನಾಗುತ್ತಾನೆ. ತಮ್ಮ ಚಿಕ್ಕಂದಿನ ಅತ್ಯಂತ ಆತ್ಮೀಯ ಕ್ಷಣಗಳ ನೆನಪು ಮಾಡಿಕೊಟ್ಟರೂ, ತಾನು ಅವನಿಗೆ ಹೆಚ್ಚು ಪರಕೀಯನಾಗುತ್ತಿದ್ದುದನ್ನು ಕಂಡು ಹತಾಶನಾಗುತ್ತಾನೆ. ಕ್ಯಾಬಿನ್ ಬಿಟ್ಟು ಹೊರಗೆ ಹೋಗಬೇಕು ಎನ್ನುವಷ್ಟರಲ್ಲಿ ಕಟ್ಟಡದ ಇಲೆಕ್ಟ್ರಿಕ್ ಫ್ಯೂಸ್ ಹಾರಿ ಹೋಗಿ ಕ್ಯಾಬಿನ್ ಕತ್ತಲೆಯಲ್ಲಿ ಮುಳುಗತ್ತದೆ. ಎಂಡಿಯ ಸೆಕ್ರೆಟರಿ ಒಳಗೆ ಬಂದು ಇಂತಹ ತುರ್ತಿನ ಸನ್ನಿವೇಶಗಳಿಗಾಗಿಯೇ ಸಿದ್ಧಮಾಡಿ ಇಟ್ಟಂತಿದ್ದ ಎರಡು ದೊಡ್ಡ ಮೇಣದ ಬತ್ತಿಗಳನ್ನು ಮೇಜಿನ ಮೇಲಿಟ್ಟು ಹೋಗುತ್ತಾಳೆ. ಕೋಣೆಯಲ್ಲಿ ಆಗ ಹರಡಿದ ಮೇಣದ ಬತ್ತಿಯ ಮಂದ ಬೆಳಕಿನಲ್ಲಿ ಎಂಡಿ ಒಮ್ಮೆಗೇ ಚೇತರಿಸಿಕೊಂಡವರ ಹಾಗೆ, “ಅರೆ ನೀನು? ಯಾವಾಗ ಬಂದೆ? ಯಾಕೆ ಹೀಗೆ ಮಾತನಾಡದೆ ಕೂತಿದ್ದೀ?” ಎಂದು ಶುರುಮಾಡಿದವರು ಹೊತ್ತು ಹೋದ ಹಾಗೆ ಭಾವನಾವಶರಾಗುತ್ತ ಬಾಲ್ಯದ ಅನೇಕ ಸಂಗತಿಗಳನ್ನು ತಾವೇ ನೆನೆದುಕೊಳ್ಳಲು ತೊಡಗುತ್ತಾರೆ. ಈ ಬದಲಿಗೆ ಕಾರಣವಾಗಿದ್ದು ರೂಮಿನಲ್ಲಿ ಆಗ ನೆಲೆಸಿದ ಮೇಣದ ಬತ್ತಿಯ ಬೆಳಕಾಗಿತ್ತು. ಎಂಡಿ ಅವನ ನೌಕರಿಯ ಬಗ್ಗೆ, ಹೆಂಡತಿಯ ಬಗ್ಗೆ ಮಕ್ಕಳ ಬಗ್ಗೆ ತುಂಬಿದ ಅಂತಃಕರಣದಿಂದ ವಿಚಾರಿಸುತ್ತಾರೆ. ತಾನು ಬಂದ ಉದ್ದೇಶ ಪ್ರಕಟಿಸಲು ಇದೇ ಸರಿಯಾದ ಕ್ಷಣವೆಂದು ಬಗೆದು ಇವನು ಬಾಯಿತೆರೆಯಬೇಕು ಎಂದುಕೊಳ್ಳುವಷ್ಟರಲ್ಲಿ ರೂಮಿನೊಳಗೆ ಮೊದಲಿನ ಹಾಗೆ ಕಣ್ಣುಕುಕ್ಕಿಸುವ ವಿದ್ಯುದ್ದೀಪಗಳು ಝಗ್ ಎಂದು ಬೆಳಗಿಕೊಳ್ಳುತ್ತವೆ.

“ಮುಂದಿನದನ್ನು ನೀವು ಸರಿಯಾಗಿ ಊಹಿಸಿಕೊಳ್ಳಬಲ್ಲಿರಿ ಸರ್” ಎಂದು ಕತೆ ಮುಗಿಸಿದ ವೋಮ, ನನ್ನಲ್ಲಿ ವಿಸ್ಮಯದಂತೆ ಒಂದು ಬಗೆಯ ಅಸಮಧಾನಕ್ಕೂ ಕಾರಣವಾಗಹತ್ತಿದ್ದ.

ಸತ್ತವನೆದುರೂ ಗಣಪನೆದುರೂ ಒಂದೇ ಮ್ಯೂಸಿಕ್….

ganesh

ನಾ ಭಾಳ ವರ್ಷ ಬೆಳಗಾವ್ಯಾಗಿದ್ದೆ. ಅದಕ್ಕ ಅಲ್ಲಿನ ಗಣಪತಿ ಉತ್ಸವಾ ಸೂಕ್ಷ್ಮವಾಗಿ ಗಮನಿಸಕೋತ್ ಅದರಾಗ್ ಭಾಗವಹಿಸಗೋತ್ ಬಂದೇನಿ. ಈ ಕೆಲ ವರ್ಸದಾಗ ಬೆಂಗಳೂರ್ ನ್ಯಾಗ್ ಆಗೋ ಗಣೇಶ ಉತ್ಸವಾನೂ ನೋಡೇನಿ.

ಬೆಳಗಾವಿ, ಬಿಜಾಪುರ, ಹುಬ್ಬಳ್ಳಿ-ಧಾರವಾಡ, ಗುಲ್ಬರ್ಗಾಗಳ ಗಣೇಶ ಉತ್ಸವiಗಳ ಮ್ಯಾಗ ಮಹಾರಾಷ್ಟ್ರದ ಪ್ರಭಾವಾ ಭಾಳ ಐತಿ. ಬೆಳಗಾವ್ಯಾಗಂತೂ ಭಾಳ ಮೊದಲ ಉತ್ಸವದ ತಯಾರಿ ಸುರುಆಕ್ಕೇತಿ. ಗಣೇಶೋತ್ಸವ ಯುವಕ ಮಂಡಳದ ಯುವಕರೆಲ್ಲ ಕೂಡಕೊಂಡು ಇಡೀ ಊರು ತಿರುಗಿ ಮೊದಲ ಪಟ್ಟಿ(ಚಂದಾ) ಎತ್ತತಾರ. ಎಲ್ಲಾ ಮನಿಗೊಳಿಗ ಹೋಗಿ ಹಿಂದಿನ ವರ್ಸ ಪಟ್ಟಿ  ನೀಡಿದವರ ಹೆಸರು, ಕೊಟ್ಟ ರೋಖ, ಗಣಪತಿ ಮೂರ್ತಿ ಸಲುವಾಗಿ ಖರ್ಚಾದ ರೊಕ್ಕ, ಭಡಜಿ (ಪುರೋಹಿತ), ಹೂವಾ, ಹಣ್ಣ, ನಾರಳ(ತೆಂಗು), ನೈವೇದ್ಯ, ಪೆಂಡಾಲ್, ಮೈಕ್, ಝಾಂಝ್ ಪಥಕ್(ಬೆಳಗಾವಿಯ ವಿಶೇಷ್ ಬ್ಯಾಂಡ್), ಮೆರವಣಿಗಿ ಬಾಬ್ತು, ಕರಂಟ್, ಒಟ್ಟ ಪಟ್ಟಿ ಮತ್ತ ಒಟ್ಟ ಖರ್ಚು, ಉಳಿದ ಶಿಲ್ಲಕ ಹಿಂಗ ಎಲ್ಲಾ ಮಾಹಿತಿ ಇರೋ ಸಣ್ಣ ಬುಕ್ ಕೊಡ್ತಾರ. ಪೆಂಡಾಲಂತೂ ಬರೋಬರ್ ಒಂದ್ ವಾರ್ ಮೊದಲ ತಯಾರ ಆಕ್ಕೇತಿ. ಗಣೇಶ ಚತುರ್ಥಿ ದಿವಸ ದೊಡ್ಡದಾದ 1210 ಅಶೋಕ್ ಲೇಲ್ಯಾಂಡ್ ಟ್ರಕ್ ನ ನೆತ್ತಿ ಮ್ಯಾಗ್ ಕಮಿತ್ ಕಮಿ ಅಂದ್ರ ಧಾ ಫೂಟ್ ಇರೊ ಗಣಪತಿನ ಕುಂಡ್ರಸ್ ಕ್ಯಾಸ್ ಗಲ್ಲಿ ತುಂಬೆಲ್ಲ ಮೆರವಣಿಗಿ ಮಾಡ್ತಾರ. ಗಲ್ಯಾಗ ಗಣೇಶನನ್ನ ನೆತ್ತಿ ಮ್ಯಾಲಿಟ್ ಕೊಂಡ ಟ್ರಕ್, ಜಬರ್ದಸ್ತ್ ಹೊಕ್ಕಿದ್ದರ ಟ್ರಕ್ ಹಿಂದ ಸಣ್ಣು ಹುಡುಗ್ರು, ಟ್ರಕ್ ಮುಂದ ಯೂವಕ್ರೂ ಡ್ಯಾನ್ಸ್ ಆಡತಿರ್ತಾರ. ಗಣಪತಿ ಬಪ್ಪಾ ಮೋರಯಾ, ಏಕ್ ದೋನ್ ತೀನ್ ಚಾರ್-ಗಣಪತೀಚಾ ಜಯ್ ಜಯ್ ಕಾರ್ ಘೋಷಣಾ ಕೇಳಿ ಬರ್ತಾವ. ಆಲ್ ಮೋಸ್ಟ್, ಪ್ರತಿಮನಿ ಮುಂದೂ ಗಣಪಗ ಪೂಜಿ ಸಲ್ಲಿಕೆ ಆಗ್ತದ. ಹಿಂತಾ ಹೊತ್ತನ್ಯಾಗ ಮೂರ್ತಿ ಬಾಜೂಕಿರೋ ಯುವಕರಿಗೂ ಮತ್ತ ಮನಿ ಮುಂದ ನಿಂತಿರೊ ಯುವತಿಯರ ಕಣ್ಣಗೊಳಿಗೂ ಮಿಲಾಕತ್ ಆಗ್ತದ. ಯುವಕ ಕಣ್ಣಗೊಳು ಹೆಮ್ಮೆಯಿಂದ ಬೀಗಿದರ, ಯುವತಿ ಕಣ್ಗೋಳು ನಾಚಿಕೊಳ್ತಾವ.

ಬರೋಬರ್ ಹನ್ನೊಂದು ದಿವಸ ಪ್ರತಿನಿತ್ಯ ಗಣಪತಿಗೆ ಸುಖಕರ್ತಾ ದುಃಖಹರ್ತಾ ವಾರ್ತಾ ವಿಘ್ನಾಚಿ ಮೂಲಕ ಆರತಿಯಾಗ್ತದ. ಹನ್ನೊಂದು ದಿನಾನೂ ರಾಂಗೋಳಿ(ರಂಗೋಲಿ) ಸ್ಪರ್ಧಾ, ಸ್ಲೋಸೈಕ್ಲಿಂಗ್ ಸ್ಪರ್ಧಾ, ದೇವಾಚೆ ಗೀತ(ದೇವರ ನಾಮ) ಸ್ಪರ್ಧಾ ಹೀಂಗ ನಾನಾರೀತಿಯ ಸ್ಪರ್ಧಾ ನಡೀತಾವು. ಹತ್ತನೆ ದಿವಸ ಗಣಪತಿ ಸಮ್ಮುಖದಾಗ, ತನ್ನ ತಲಿಗಿಂತ ಕಮ್ಮಿತ್ ಕಮ್ಮಿ ಅಂದ್ರ ಮೂರು ಪಟ್ಟು ದೊಡ್ಡದಾಗಿ ಹಳದಿ ಪಟಕಾ ಸುತ್ತಿಕೊಂಡ  ಪಂಚಾಯತಿ ಚೇರಮನ್ ರಿಂದ ಗೆದ್ದಾವರಿಗೆ ಬಹುಮಾನ ಕೊಡ್ತಾರ.

ಹನ್ನೊಂದನೆ ದಿವಸ ಮತ್ತ ಗಣಪತಿನ ಟ್ರಕ್ ನ ನೆತ್ತಿ ಮ್ಯಾಗ ಕುಂಡ್ರಿಶಿ ಊರು ಸುತ್ತು ಹಾಕಿ ಗಣಪತಿ ಬಪ್ಪಾ ಮೋರಯಾ, ಫುಡಚಾ ವರ್ಶಿ ಲೌಕರ್ ಯಾ ಅಂತ ಘೋಷಣಾ ಹಾಕಿ ಅರ್ಗಂತಳಾ ಇಲ್ಲಾಂದ್ರ ಕಿಲ್ಲಾ ಕೆರಿಯೊಳಗ ಕಳಿಸಿಕೊಡ್ತಾರು.

ಆದರೆ ಬೆಂಗಳೂರಿನಲ್ಲಿ ಮಾತ್ರ ಗಣೇಶ ಉತ್ಸವದ ರೀತಿಯ ಬೇರೆ. ಇಲ್ಲಿ ಗಣೇಶ ಚತುರ್ಥಿಯಂದೇ ಗಣೇಶ ತರಬೇಕೆಂದೆನೂ ಇಲ್ಲ. ಚತುರ್ಥಿಯ ನಂತರ ಅವರವರ ಅನುಕೂಲಕ್ಕೆ ತಕ್ಕ ಅಚ್ಚಿನ ಮೂರ್ತಿಗಳನ್ನು ತರುತ್ತಾರೆ. ಸತ್ತವರೆದುರು ಬಾರಿಸುವ ತಮಟೆಯ ಮ್ಯೂಸಿಕ್ಕನ್ನೇ ಗಣೇಶನೆದೂರು ಬಾರಿಸುತ್ತಾರೆ. ಲೀಟರ್ ಗಟ್ಟಲೆ ಕಂಟ್ರಿ ಕುಡಿದು ವಿಕಾರವಾಗಿ ಕಿರುಚುತ್ತಾರೆ. ದೆವ್ವ ಹಿಡಿದವರಂತೆ ಡ್ಯಾನ್ಸ್ ಮಾಡುತ್ತಾರೆ. ಮತ್ತೆ ಅನುಕೂಲಕ್ಕೆ ತಕ್ಕ ಹಾಗೆ ಗಣೇಶನನ್ನು ಅಲಸೂರು ಕೆರೆಯಲ್ಲಿ ಮುಳುಗಿಸುತ್ತಾರೆ.

ಗಣೇಶ ಉತ್ಸವದ ಸಂದರ್ಭದಲ್ಲಿ ಗಾಂಧಿ ಬಜಾರ್ ಸಮೀಪದ ವಿದ್ಯಾರಣ್ಯ ಸಂಘ, ಎನ್ ಆರ್ ಕಾಲೋನಿಯ ಕಾಂಗ್ರೆಸ್ ಮರಿನಾಯಕನೊಬ್ಬ ವ್ಯವಸ್ಥೆ ಮಾಡುತ್ತ ಬಂದಿರುವ ಗಣೇಶ, ವಿಜಯನಗರದ ಒಂದೆರಡು ಯುವಕ ಸಂಘಗಳು ಸೇರಿದಂತೆ ಬೆರಳೆಣಿಕೆಯಷ್ಟು ಸಂಘಗಳು ಮಾತ್ರ ಸಾಂಸ್ಕೃತಿಕವಾಗಿ ಹಾಗೂ ತುಂಬ ಚೆಂದವಾಗಿ ಗಣೇಶ ಉತ್ಸವವನ್ನು ಆಚರಿಸುತ್ತವೆ.

ಆದರೆ ಇದೀಗ ಬೆಳಗಾವಿಯಲ್ಲಿಯೂ ಸಾಕಷ್ಟು ನೀರು ಹರಿದು ಹೋಗಿದೆ. “ಅತಾ ಗಣಪತಿ ಆದಿ ಸರ್ಕ ನೈರೆ” (ಈಗ ಗಣಪತಿ ಸಂಭ್ರಮ ಮೊದಲಿನಂತೆ ಇಲ್ಲ ಮಾರಾಯಾ) ಎಂದು ಅಲ್ಲಿನ ಗೆಳೆಯನೊಬ್ಬ ಹೇಳುತ್ತಿದ್ದ. ಈ ಬಾರಿಯೂ ನನಗೆ ಗಣಪತಿ ಹಬ್ಬಕ್ಕೆ ಬೆಳಗಾವಿಗೆ ಹೋಗಲಿಕ್ಕಾಗಿಲ್ಲ. ಮುಂದಿನ ಬಾರಿಯಾದರೂ ಹೋಗಬೇಕು….ಗಣಪತಿ ಬಪ್ಪಾ ಮೋರಯಾ….

ನಿನಗ….

naanu

ಏನಾಗಬೇಕಂತ ನೀ ನನಗ ಕೇಳಿದರ

ಏನ ಹೇಳಲಿ ನಾನು ಮಂದೀಗೆ?

ಮಡದಿ, ಪ್ರೇಯಸಿ, ತಾಯಿ ಏನೂ ಆಗಿರಬಹುದು

ನಮ್ಮಿಬ್ಬರಿಗೆ ಗೊತ್ತಿದ್ದರ ಸಾಕಲ್ಲ?

ಮುಂದೊಮ್ಮೆ ಹೀಂಗನ ವ್ಯಾಳಾನ ಬರಬಹುದು

ನೀನ ಕೇಳಬಹುದು ನನ್ನ ಯಾರಂತ?

ಆಗೇನು ಹೇಳಲಿ ಉತ್ತರವ ಮಂದೀಗೆ

ಹೇಳೀತು ಉತ್ತರ ನನ್ನ ಕೈ ಕಡಗ.

ಬಂದಾಗ ಹೇಳಿದ್ದಿ ಮರಳಿ ಹೋಗುವುದಿಲ್ಲ

ಮತ್ತ ಯಾಕ ನೋಡತಿ ಹಿಂತಿರುಗಿ?

ಹೊರಟು ಹೋಗುವುದಿದ್ದರ ಒಮ್ಮೆಲೆ ಹೇಳಿಬಿಡು

ದುಃಖವ ಬಲ್ಲೆ ನಾ ಮೊದಲಿಂದ.

ಕ್ಷಣಕ್ಷಣವೂ ಸಾಯೂಕಿಂತ ಒಮ್ಮೆ ಸಾಯೋದ ಮೇಲು

ಅಂದಾರ ಯಾರೋ ಜಂಗಮರು

ಕೊಲ್ಲುವುದಿದ್ದರ ಹೇಳು ನಾ ಹೊಂಟೆ ನಿನ ಬಿಟ್ಟು

ಸುಮ್ಮಕ ಯಾಕ ನಿನಗ ತ್ರಾಸ?

ಅರಿವಿಲ್ಲದ ಖೋಡಿ ಮತಿಯಿಲ್ಲದ ಗೇಡಿ

ಜೀವನವೇನು ನಮ್ಮ ಗುಲಾಮ?

ಎಲ್ಲ ತಪ್ಪುಗಳ ಮೇಲೆ ಮತ್ತ ಕೇಳತಿನಿ

ಹೇಳು ಬರತಿಯೇನ ನನ ಸಂಗ.