ನೀರಿನಲ್ಲಿ ಹೀಗೆ ಡೈವ್ ಹೊಡೆಯಲು ಗಟ್ಸ್ ಬೇಕು…

img_0675

ಚಿತ್ರ – ನಾನು

ಸ್ಥಳ – ಸಂಗಮ, ಮೈಸೂರು.

ಕಾಂಡೋಮ್: ಮಾತಾಡಿದವರೆಲ್ಲ ಮಹಾಶೂರರು…

CONDOM

ನಿನ್ನೆ ಪೋಸ್ಟ್ ಮಾಡಿದ ‘ಕಾಂಡೋಮ್ ಖರೀದಿ : ಯಾಕಿಷ್ಟು ಮಡಿವಂತಿಕೆ?’ ಗೆ ಅತ್ಯುತ್ತಮ ಪ್ರತಿಕ್ರಿಯೆ ಬಂದಿದೆ. ನಿನ್ನೆ ಒಂದೇ ದಿನ 270 ಕ್ಕಿಂತಲೂ ಹೆಚ್ಚು ಹಿಟ್ಸ್ ಬಂದಿವೆ ಹಾಗೂ ಬರುತ್ತಲೇ ಇದೆ. ಕಮೆಂಟ್, ಮೇಲ್, ಫೋನ್, ಎಸ್ಎಂಎಸ್ ಮೂಲಕ ಹಿತೈಷಿಗಳು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಮೋಟುಗೋಡೆಯ ಗೆಳೆಯರು ಗೋಡೆ ಹಾರಿಬಂದು ನನ್ನ ಲೇಖನವನ್ನು ಹಾರಿಸಿಕೊಂಡು ಹೋಗಿದ್ದಾರೆ. ಅವರಿಗೆ ನನ್ನ ಥ್ಯಾಂಕ್ಸ್. ತಿಳಿಹಾಸ್ಯದ ಜೊತೆಗೆ ಈ ಸಮಸ್ಯೆಯನ್ನು ಬಗೆಹರಿಸುವ ಸಲಹೆಗಳು ಕೂಡ ಬಂದಿವೆ. ಅವು ಇಲ್ಲಿವೆ –

 

ಅವಧಿ ಹೇಳುತ್ತಾರೆ….

very good illustration and write up
pity the condom
maataadone mahaashoora…!

———————————

ಆಸು ಹೆಗ್ಡೆ, ಹೇಳುತ್ತಾರೆ…

ಹೌದೌದು…ಇದುವರೆಗೆ…ಆಗಿದ್ದ…ಮಾತಾಡೋನೇ ಮಹಾಶೂರಾ
ಇನ್ನಿನ್ನು…ಬರೆದೋನೂ…ಬರೆಯೋನೂ …ಆಗಿದ್ದಾನೆ…ಆಗುತ್ತಾನೆ…ಮಹಾಶೂರಾ…

——————————-

ಪ್ರಮೋದ್ ಹೇಳುತ್ತಾರೆ….

ಕಹಿ ಸತ್ಯ

——————————-

ಸಂತೋಷ್ ಅನಂತಪುರ ಹೇಳುತ್ತಾರೆ….

Hey…Very true dude….ಅಪ್ರಿಯವಾದ ಸತ್ಯವನ್ನು ಹೇಳಿದ್ದೀರಿ…!

——————————-

ಉಮೇಶ್ ದೇಸಾಯಿ ಹೇಳುತ್ತಾರೆ….

ಕಾಶಿನಾಥ ನೆನಪಾದ ನೋಡರಿ ಇರ್ಲಿ ಒಳ್ಳೆ ಲೇಖನ ಅಭಿನಂದನೆಗಳು.

——————————

ಸುಪ್ತವರ್ಣ ಹೇಳುತ್ತಾರೆ….

ಮಹಿಳಾ ಡ್ರಗ್ಗಿಸ್ಟ್ ಗಳಿರುವ ಕಡೆ ಸ್ವಲ್ಪ ಜಾಸ್ತಿನೇ ಮುಜುಗರ ಎನ್ನುವುದು ಹೌದಾದರೂ ನನ್ನ ಅನುಭವದ ಪ್ರಕಾರ ಇವತ್ತಿನ ತನಕ ಯಾವುದೇ ಮೆಡಿಕಲ್ ಅಂಗಡಿಯಲ್ಲಿ ಅಂಗಡಿಯಾತ ನನಗೆ ಮುಜುಗರ ತಂದಿಲ್ಲ. ಅವರಿಗೆ ಅದು ದಿನನಿತ್ಯದ ಕೆಲಸ. ಮುಜುಗರ ಏನಿದ್ದರೂ ನಮ್ಮ ಮನಸ್ಸಿನ ಆಟ ಅಷ್ಟೆ. ಏನೋ! ನಿಮ್ಮ ಅನುಭವ ಬೇರೇನೇ ಇರಬಹುದು! ಮೊದಲ ಸಲ ಕಾಂಡೋಮ್ ಕೊಳ್ಳುವುದು ಮಾತ್ರ ಮೊದಲ ಸಲದ ಸೆಕ್ಸ್ ಗಿಂತ ಕಷ್ಟ ! ಇದು ನನ್ನ ಅನುಭವ !

—————————–

ಸುನಾಥ್ ಹೇಳುತ್ತಾರೆ…

ಕಾಂಡೋಮ್ ಬಗೆಗೆ ಈಗಿರುವ ಪ್ರಚಾರ ಏನೇನೂ ಸಾಲದು ಅಂತ ನನ್ನ ಅಭಿಪ್ರಾಯ.
ಸರಕಾರ ಮಿತಸಂತಾನಕ್ಕೆ ಇನ್ನೂ ಜಾಸ್ತಿ ಪ್ರಚಾರ ಕೊಡಬೇಕು. ಕಾಂಡೋಮ್ ಗಳು ಸಿಗುವ ಜಾಗಗಳಲ್ಲಿ ದೊಡ್ಡ ಫಲಕಗಳನ್ನು ಹಾಕಬೇಕು. ಅಲ್ಲಿ ಆಕರ್ಷಕವಾದ ಸ್ಲೋಗನ್ಸ್ ಬೇಕು. ನನಗೆ ನೆನಪಿದ್ದ ಎರಡು ಹಳೆಯ ಸ್ಲೋಗನ್ಸ್ ಹೇಳುತ್ತೇನೆ:
(೧) Make love, not children!
(೨) None is fun!

ಮುಖ್ಯವಾಗಿ, ಇದರಲ್ಲಿ ಏನೂ ತಪ್ಪಿಲ್ಲವೆನ್ನುವ ಭಾವನೆ ಬರುವಂತಹ ಜಾಹೀರಾತುಗಳು ಬರಬೇಕು. ಅಂದಾಗ ಗ್ರಾಹಕನ/ಗ್ರಾಹಕಿಯ ಮುಜುಗರ ತಪ್ಪೀತು.

 

ಕಾಂಡೋಮ್ ಖರೀದಿ : ಯಾಕಿಷ್ಟು ಮಡಿವಂತಿಕೆ?

CONDOM

ಈ ಲೇಖನ ಓದುವ ಮೊದಲು ನಿಮ್ಮಲ್ಲಿ ಒಂದು ರಿಕ್ವೆಸ್ಟ್. ಲೈಂಗಿಕತೆ, ಕಾಮ, ಕಾಂಡೋಮ್  ಇತ್ಯಾದಿಗಳ ಬಗ್ಗೆ ಮಾತನಾಡಲು, ಚರ್ಚಿಸಲು ನಿಮಗೆ ಮುಜುಗರ ಎನಿಸುತ್ತದೆಯಾದರೆ ದಯವಿಟ್ಟು ಲೇಖನ ಓದಬೇಡಿ. ಈ ಲೇಖನ ಕೇವಲ ‘ಪುರುಷರಿಗೆ’ ಮಾತ್ರ. ಅಂದ ಹಾಗೆ ಭಾರೀ ಸೀಕ್ರೆಟ್ ಏನನ್ನೂ ಬರೆಯಲು ಹೋಗುತ್ತಿಲ್ಲ ಮತ್ತೆ ಹಾಂ…

ಜನಸಂಖ್ಯಾ ನಿಯಂತ್ರಣಕ್ಕಾಗಿ, ಸೇಫ್ ಸೆಕ್ಸ್ ಗಾಗಿ, ಏಡ್ಸ್ ತಡೆಗಟ್ಟುವುದಕ್ಕಾಗಿ, ಮಕ್ಕಳ ನಡುವಿನ ಅಂತರಕ್ಕಾಗಿ, ಹೀಗೆ ಹಲವು ಕಾರಣಗಳಿಗೆ ಸರ್ಕಾರ ನೇರವಾಗಿ ಕಾಂಡೋಮ್ ಪ್ರಮೋಟ್ ಮಾಡುತ್ತದೆ. (‘ಮಾತಾಡೋನೇ ಮಹಾಶೂರ’ ಆಡ್ ನೆನಪಾಯಿತೆ?). ಅಷ್ಟೇ ಅಲ್ಲ ವೈದ್ಯರು, ಆಸ್ಪತ್ರೆಗಳು, ತಜ್ಞರು ಕೂಡ ಕಾಂಡೋಮ್ ಬಳಕೆಯನ್ನು ಪ್ರೋತ್ಸಾಹಿಸುತ್ತಾರೆ. ಅನೇಕ ಶೌಚಾಲಯಗಳಲ್ಲಿ ಕಾಂಡೋಮ್ ವೆಂಡಿಂಗ್ ಮಷಿನ್ ಗಳನ್ನು ಸರ್ಕಾರವೇ ಇರಿಸಿದೆ. ಅಷ್ಟೇ ಅಲ್ಲ ಹಲವು ಕಡೆಗಳಲ್ಲಿ ಕಾಂಡೋಮ್ ಅನ್ನು ಉಚಿತವಾಗಿ ಹಂಚಲಾಗುತ್ತದೆ. (ಉಚಿತವಾಗಿ ಹಂಚುವ ಕಾಂಡೋಮ್ ಗಳ ಗುಣಮಟ್ಟದ ಚರ್ಚೆ ಸಧ್ಯ ಬೇಡ) ನಾಕೋ, ಕೆಎಸ್ಎಪಿಎಸ್ ನಂತಹ ಸಂಸ್ಥೆಗಳಂತೂ ಎಚ್ಐವಿ ತಡೆಗಟ್ಟಲು ನಡೆಸುವ ಪ್ರಚಾರದಲ್ಲಿ ಕಾಂಡೋಮ್ ಬಳಕೆಗೆ ಅಗ್ರ ಸ್ಥಾನ ನೀಡುತ್ತವೆ.

ಸನ್ನಿವೇಶ ಹೀಗಿದ್ದರೂ ನಮ್ಮ ಮೆಡಿಕಲ್ ಶಾಪ್ ನಡೆಸುವವರು ಮಾತ್ರ ಇನ್ನೂ ಯಾವುದೋ ಓಬಿರಾಯನ ಕಾಲದಲ್ಲಿದ್ದಾರೆ ಎನಿಸುತ್ತದೆ. ಮೆಡಿಕಲ್ ಶಾಪ್ ನವರಷ್ಟೇ ಅಲ್ಲ, ಗ್ರಾಹಕರು ಕೂಡ.

ಕಾಂಡೋಮ್ ಖರೀದಿ ಎಂಬುದು ಬಹುತೇಕ ಪುರುಷರಿಗೆ ಒಂದು ದೊಡ್ಡ ಸಮಸ್ಯೆ. ಇತರ ಗ್ರಾಹಕರು ಅದರಲ್ಲೂ ವಿಶೇಷವಾಗಿ ಮಹಿಳಾ ಗ್ರಾಹಕರು ಇಲ್ಲದಿರುವ ಸಂದರ್ಭದಲ್ಲಿ, ಮೆಡಿಕಲ್ ಶಾಪ್ ನಲ್ಲಿ ಮಹಿಳಾ ಸಹಾಯಕಿಯರು ಇಲ್ಲವೆಂದು ಖಾತ್ರಿ ಪಡಿಸಿಕೊಂಡು ಹೋಗಬೇಕು. ಮಾಲ್ ಗಳಲ್ಲಿ ಕೊಳ್ಳುವುದಾದರೋ, ಅದು ಬೇರೊಂದು ಸಮಸ್ಯೆ. ಆ ಕಾಂಡೋಮ್ ಗಳನ್ನು ಒಳ್ಳೆ ಚಾಕಲೇಟ್ ಪೆಪ್ಪರಮಿಂಟ್ ಇಟ್ಟಹಾಗೆ ಧಗ್ ಅಂದ ಎಲ್ಲರೆದುರೇ ಪ್ರದರ್ಶನಕ್ಕಿಟ್ಟುಬಿಟ್ಟಿರುತ್ತಾರೆ. ಆ ಕಡೆ ಈ ಕಡೆ ನೋಡಿ ತನ್ನನ್ನು ಯಾರೂ ಗಮನಿಸುತ್ತಿಲ್ಲ ಎಂದು ಖಾತ್ರಿ ಪಡಿಸಿಕೊಂಡು ಸೆಕೆಂಡಿನ ಸಾವಿರದ ಒಂದನೇ ಭಾಗದ ಸ್ಪೀಡಿನಲ್ಲಿ ಧಡಕ್ಕನೇ ಕೈ ಹಾಕಿ ಕಾಂಡೋಮ್ ಪ್ಯಾಕೆಟ್ಟನ್ನು ಬುಟ್ಟಿಗೆ ಎಸೆಯಬೇಕು. ಈ ಎಲ್ಲ ಆಧ್ವಾನದಲ್ಲಿ ಆ ಕಾಂಡೋಮ್ ನ ಬ್ರಾಂಡ್ ಯಾವುದು, ಅದರ ಸೈಜ್ ಏನು (ಏನು ಕಾಂಡೋಮ್ ಗಳಲ್ಲಿಯೂ ಸೈಜ್ ಇರುತ್ತಾ?), ಕಲರ್ ಏನು, ಅದು ಆಯಿಲ್ ಲೂಬ್ರಿಕೇಟೆಡ್ಡಾ ಅಥವಾ ಡ್ರೈ ಕಾಂಡೋಮಾ, ಬೆಲೆ ಎಷ್ಟು, ಪ್ಯಾಕೆಟ್ಟಿನಲ್ಲಿ ಎಷ್ಟು ಕಾಂಡೋಮ್ ಗಳಿವೆ ಇತ್ಯಾದಿಯೆಲ್ಲ ನೋಡಲು ಸಮಯವೆಲ್ಲಿರುತ್ತದೆ. ಹೀಗೆ ಸಾಗುತ್ತದೆ ಪುರುಷರ ಸಮಸ್ಯೆಗಳು.

ಇನ್ನೂ ಮೆಡಿಕಲ್ ಶಾಪ್ ನಲ್ಲಿ ಖರೀದಿಸುವುದಂತೂ ಸಾಹಸವೇ ಸರಿ. ಯಾರೂ ಇಲ್ಲದಿದ್ದಾಗ ಹೋಗಿ ಕೇಳಿದರೂ, ಆ ಆಸಾಮಿ ನಾವು ಕಾಂಡೋಮ್ ಕೇಳುತ್ತಿದ್ದಂತೆಯೆ ದೆವ್ವ ಬಡಿದಂತಾಡುತ್ತಾನೆ. ಆ ಬ್ರಾಂಡ್ ಇದೆಯಾ, ಈ ಬ್ರಾಂಡ್ ಇದೆಯಾ ಎಂದು ನೀವು ಕೇಳಲು ಆರಂಭಿಸಿದಿರೋ, “ಸಾರ್ ಒಳಗೆ ಬನ್ನಿ. ಇಲ್ಲಿ ಡ್ರಾವರ್ ನಲ್ಲಿ ಸಾಕಷ್ಟು ಇದೆ. ಬೇಕಾದ್ದು ನೋಡಿ” ಎಂದು ನಿಮ್ಮನ್ನು ನೇರವಾಗಿ ಅಂಗಡಿಯೊಳಗೆ ಆಹ್ವಾನಿಸಿ ಬಿಡುತ್ತಾನೆ. ಕೆಲವು ಮೆಡಿಕಲ್ ಶಾಪ್ ನವರಂತೂ ನಾವು ಕಾಂಡೋಮ್ ಕೇಳಿ ಮಹಾಪರಾಧ ಮಾಡಿಬಿಟ್ಟಿದ್ದೇವೆ ಎಂಬಂತೆ ನಮ್ಮನ್ನು ನೋಡುತ್ತಾರೆ. ಅಲ್ರೀ ಮಹಾರಾಯರೇ, ನಿಮಗೆ ಅದನ್ನು ಮಾರಲು ಮುಜುಗರ ಎಂದರೆ, ಅಂಗಡಿಯಲ್ಲಿ ಯಾಕ್ರೀ ಇಟ್ಟುಕೊಳ್ತೀರಿ?

ಈ ಎಲ್ಲ ರೀತಿಯ ಕನ್ ಪ್ಯೂಶನ್ ಗಳಾಗುವುದಕ್ಕೆ ಬಹುಶಃ ಇನ್ನೂ ಕಾಂಡೋಮ್ ಬಗ್ಗೆ ಇರುವ ಟಾಬೂ ಹಾಗೂ ಸ್ಟಿಗ್ಮಾ ಕಾರಣವೆನಿಸುತ್ತದೆ. ಈಗ ಹೇಳಿ ಮಾತಾಡೋನೆ ಮಹಾಶೂರ ಅಲ್ವೆ?

ಇಂದಿನ ವಿದ್ಯಾರ್ಥಿಗಳೇ, ಇಂದಿನ ಜರ್ನಲಿಸ್ಟ್ ಗಳು…

ಬೆಂಗಳೂರು ವಿಶ್ವವಿದ್ಯಾನಿಲಯದ ಇಲೆಕ್ಟ್ರಾನಿಕ್ ಮೀಡಿಯಾ ವಿಭಾಗದ ವಿದ್ಯಾರ್ಥಿಗಳನ್ನುದ್ದೇಶಿ ಇಂದು ಮಾತನಾಡಿದೆ. ಒಂದು ತಾಸು ಎಂದು ನಿಗದಿಯಾಗಿದ್ದ ಸಂವಾದ ಮೂರು ಗಂಟೆಯವರೆಗೆ ನಡೆಯಿತು. ಸಂವಾದದ ಕೆಲ ಕ್ಷಣಗಳು ಇಲ್ಲಿವೆ.

1

2

3

4

5

6

7

9

10

ನಿಮ್ಮ ತೋಟವನ್ನು ರಕ್ಷಿಸುವ ಉಪಾಯ

mmm 068

ಗದ್ದೆ, ತೋಟಗಳನ್ನು ರಕ್ಷಿಸಲು ಕರಂಟ್ ಬೇಲಿ, ಕಾವಲು, ಬೆರ್ಚಪ್ಪ ದಂತಹ ಉಪಾಯಗಳ ಜೊತೆ ಈ ರೀತಿಯ ಉಪಾಯಗಳೂ ಇವೆ. ಕೊಪ್ಪದ ತೋಟವೊಂದರಲ್ಲಿ ಕಂಡುಬಂದ ಬೋರ್ಡ್ ಇದು.

ಸ್ಯಾಂಡಲ್ ಮಾರಾಟಕ್ಕಿದೆ

Copy of Sandal_Frame

ನನ್ನ ಸಂಬಂಧಿ ಅಭಿಜೀತ್  ಉದಯೋನ್ಮುಖ ಚಿತ್ರ ಕಲಾವಿದ. ಅಷ್ಟೇ ಅಲ್ಲ ವಿವಿಧ ಮಾದರಿಯ ಸ್ಯಾಂಡಲ್ ಗಳನ್ನು ಹೊಲಿಯುವುದರಲ್ಲಿ ಎತ್ತಿದ ಕೈ. ಆತ ಈಗ ಮಾಡಿರುವ ಗ್ಲೇಡಿಯೇಟರ್ ಸ್ಯಾಂಡಲ್ಸ್ ಮಾರಾಟಕ್ಕಿದೆ. ಸ್ಯಾಂಡಲ್ ವಿವರ ಇಲ್ಲಿದೆ.

ಹೆಸರು – ಗ್ಲೇಡಿಯೇಟರ್ ಸ್ಯಾಂಡಲ್ಸ್.

ಸೈಜ್ – 7 (ಬೇಡಿಕೆಯಿದ್ದಲ್ಲಿ ಇತರ ಸೈಜ್ ಗಳೂ ಲಭ್ಯ)

ವಿವರಣೆ – ಕೈಯಿಂದ ತಯಾರಿಸಿದ್ದು.

ಮಟೀರಿಯಲ್ – ಪರ್ಷಿಯನ್ ಚರ್ಮ ಮತ್ತು ರಬ್ಬರ್ ಸೋಲ್. (ಸ್ಯಾಂಡಲ್ ಧರಿಸಿದ ನಂತರ, ಚರ್ಮದ ದಾರದಿಂದ ಕಾಲಿಗೆ ಕಟ್ಟಿಕೊಳ್ಳಬೇಕು).

ವಾಟರ್ ಪ್ರೂಫ್ – ಹೌದು.

ರಫ್ ಯೂಸ್ – ಮಾಡಬಹುದು.

ಬೆಲೆ- ರೂ. 2000/- (ಎರಡು ಸಾವಿರ ಮಾತ್ರ)

ಸಂಪರ್ಕಿಸಿ – ಅಭಿಜೀತ್ – 9986442865

ಬಿಬಿಎಂಪಿ: ಭ್ರ,ಷ್ಟ ಅಧಿಕಾರಿಗಳನ್ನು ಮಟ್ಟಹಾಕಿ

ಇತ್ತೀಚೆಗೆ ಬಿಬಿಎಂಪಿ, ಭರತಲಾಲ್ ಮೀನಾ ನೇತೃತ್ವದಲ್ಲಿ ಬೆಂಗಳೂರಿನಾದ್ಯಂತ ರಾಜಕಾಲುವೆಗಳ ಮೇಲೆ ಅನಧಿಕೃತವಾಗಿ ಕಟ್ಟಲಾಗಿರುವ ಕಟ್ಟಡಗಳನ್ನು ನೆಲಸಮ ಮಾಡುವ ಕೆಲಸ ಭರದಿಂದ ಮಾಡುತ್ತಿದೆ. ಅದಕ್ಕೆ ಸಂಬಂಧಿಸಿದಂತೆ ಟೈಮ್ಸ್ ಆಫ್ ಇಂಡಿಯಾಸಿಟಿ ಮೇಲ್ ಬಾಕ್ಸ್ ನಲ್ಲಿ ಇಂದು ಪ್ರಕಟವಾಗಿರುವ ನನ್ನ ಪತ್ರ.

TOI

ಇದೀಗ ಸುಳ್ಳು ಹೇಳುವುದು ತುಂಬಾ ಸುಲಭ

mobile

ಇದೀಗ ಸುಳ್ಳು ಹೇಳುವುದು ತುಂಬಾ ಸುಲಭ. ಹೌದು, ಮೊಬೈಲ್ ಬಂದಾಗಿನಿಂದ ಸುಳ್ಳು ಹೇಳುವುದು ತುಂಬಾ ಸುಲಭವಾಗಿ ಪರಿಣಮಿಸಿದೆ. ಉದಾಹರಣೆಗೆ ಇದನ್ನೇ ತೆಗೆದುಕೊಳ್ಳಿ. ನೀವು ಯಾರಿಗೋ ಕಾಲ್ ಮಾಡುತ್ತೀರಿ…ಸುಮಾರು ರಿಂಗ್ ಆಗುತ್ತದೆ. ಆದರೆ ಅತ್ತ ಕಡೆಯಿಂದ ಮೊಬೈಲ್ ರೀಸಿವ್ ಆಗವುದಿಲ್ಲ. ನೀವು ಒಂದೆರಡು ಬಾರಿ ಪ್ರಯತ್ನಿಸುತ್ತೀರಿ. ಆಗಲೂ ಯಾವುದೇ ಉತ್ತರ ಬರುವುದಿಲ್ಲ. ನೀವು ಸುಮ್ಮನಾಗುತ್ತೀರಿ. ವಿಷಯ ಅಷ್ಟು ಅರ್ಜೆಂಟ್ ಇರುವುದಿಲ್ಲವಾದ್ದರಿಂದ ನೀವು ನಿಮ್ಮ ಪ್ರಯತ್ನ ಅಲ್ಲಿಗೆ ಬಿಡುತ್ತೀರಿ. ಒಂದೆರಡು ದಿನ ಬಿಟ್ಟು ನಿಮಗೆ ಮತ್ತೆ ಕಾಲ್ ಮಾಡುವುದು ನೆನಪಾಗುತ್ತದೆ. ಈ ಬಾರಿ ಎರಡೇ ರಿಂಗ್ ಗೆ ಅತ್ತ ಕಡೆ ಮೊಬೈಲ್ ರಿಸೀವ್ ಆಗುತ್ತದೆ. ಉಭಯ ಕುಶಲೋಪರಿ ಮಾತನಾಡಿದ ನಂತರ ನೀವು ಕೇಳುತ್ತೀರಿ, “ಅಲ್ಲಯ್ಯಾ, ಎರಡು ದಿನ ಮೊದಲು ಮೂರ್ನಾಲ್ಕು ಬಾರಿ ಕಾಲ್ ಮಾಡಿದ್ದೆ. ನೀನು ರಿಸೀವ್ ಏಕೆ ಮಾಡಲಿಲ್ಲ?”

ಇದಕ್ಕೆ ಆತ ಕೊಡಬಹುದಾದ ಉತ್ತರಗಳು ಹೀಗಿವೆ.

1.       “ಏನು ಎರಡು ದಿನಗಳ ಹಿಂದೆ ಕಾಲ್ ಮಾಡಿದ್ದೆಯಾ. ಮತ್ತೆ ನನ್ನ ಫೋನ್ ರಿಂಗೇ ಆಗಿಲ್ಲ”.

2.       “ನೀನು ಕಾಲ್ ಮಾಡಿರುವುದು ಸಾಧ್ಯವೇ ಇಲ್ಲ. ನನ್ನ ಮಿಸ್ಡ್ ಕಾಲ್ ಲಿಸ್ಟ್ ನಲ್ಲಿಯೂ ನಿನ್ನ ಹೆಸರಿಲ್ಲ”.

3. “ಹೌದು ಕಣೋ. ನಾನಾಗ ಮೀಟಿಂಗ್ ನಲ್ಲಿದ್ದೆ. ಆಮೇಲೆ ಅರ್ಧಗಂಟೆ ಬಿಟ್ಟು ಫೋನ್ ಮಾಡ್ದೆ. ಆದ್ರೆ ನೀನು ರಿಸೀವೇ ಮಾಡ್ಲಿಲ್ಲ…”(ಇದು ಆರೋಪದಿಂದ ತಪ್ಪಿಸಿಕೊಳ್ಳುವ ಹಾಗೂ ನಿಮ್ಮನ್ನೇ ದೋಷಿಯ ಸ್ಥಾನದಲ್ಲಿ ನಿಲ್ಲಿಸುವ ಸ್ಕೆಚ್)

4. “ಹೌದು ಕಣೋ. ನಾನಾಗ ಬೈಕ್ ಓಡಿಸುತ್ತಿದ್ದೆ. ಬೈಕ್ ಸೈಡಿಗೆ ನಿಲ್ಲಿಸಿ ನಿನಗೆ ಫೋನ್ ಮಾಡಿದೆ. ಆದರೆ ನಿನ್ನ ಫೋನ್ ನಾಟ್ ರೀಚೆಬಲ್ ಬಂತು”. (ಇದಕ್ಕೆ ಏನು ಪ್ರತ್ಯುತ್ತರ ಹೇಳುತ್ತೀರಿ?)

5. “ಎರಡು ದಿನಗಳ ಹಿಂದೆ ನಾನು ಔಟ್ ಆಫ್ ಸ್ಟೇಷನ್ ಇದ್ದೆ. ನಿನ್ನೆಯಷ್ಟೇ ಬಂದೆ. ನಿನಗೆ ಕಾಲ್ ಮಾಡಿದ್ದೆ, ಆದರೆ ಎಂಗೇಜ್ ಬರುತ್ತಿತ್ತು”. (ಇದನ್ನೂ ನೀವು ನಂಬಲೇಬೇಕು.)

ಇಷ್ಟೇ ಅಲ್ಲ. ಇವು ಕೇವಲ ಎಕ್ಸಾಂಪಲ್ ಅಷ್ಟೇ. ಇದೇ ರೀತಿಯ ಮತ್ತಷ್ಟು ಉತ್ತರಗಳು ಸಿಗುತ್ತವೆ. ಇಲ್ಲಿ ಸಂಪೂರ್ಣ ದೋಷವನ್ನು ಯಾಂತ್ರಿಕತೆಯ ಮೇಲೆ ಹೊರೆಸಿ ಜವಾಬ್ದಾರಿಯಿಂದ ಪಾರಾಗುವ ಪ್ರಯತ್ನ ಸ್ಪಷ್ಟವಾಗಿ ಕಂಡುಬರುತ್ತದೆ. ಇಂತಹ ಉತ್ತರಗಳಲ್ಲಿ ಯಾವುದನ್ನು ನಂಬಬೇಕು, ಯಾವುದನ್ನು ನಂಬಬಾರದು ಎಂಬುದು ತಿಳಿಯುವುದಿಲ್ಲ. ನೀವು ನಂಬಿದರೂ, ನಂಬದಿದ್ದರೂ ಆಕಡೆಯವನಿಗೇನೂ ಪರಿಣಾಮವಾಗುವುದಿಲ್ಲ. ಏಕೆಂದರೆ ಆತ ಈಗಾಗಲೇ ಹೀಗೆ ಉತ್ತರ ಕೊಟ್ಟು ಸ್ವತಃ ಕ್ಲಿನ್ ಚಿಟ್ ಪಡೆದುಕೊಂಡುಬಿಟ್ಟಿದ್ದಾನೆ. ಹಣೆಯನ್ನು ಚಚ್ಚಿಕೊಳ್ಳುವ ಹೊರತು ನಿಮಗೆ ಬೇರಾವ ಆಪ್ಶನ್ ಇರುವುದಿಲ್ಲ.

ಮೊದಲಾದರೆ, ಅಂದರೆ ಮನೆಯಲ್ಲಿ ಲಾಂಡ್ ಲೈನ್ (ಈ ಶಬ್ದ ಕೂಡ ಹೊಸತು. ಕೆಲ ವರ್ಷಗಳ ಹಿಂದೆ ಫೋನ್ ಎಂದರೆ ಲ್ಯಾಂಡ್ ಲೈನ್ ಎಂದೇ ಅರ್ಥವಾಗುತ್ತಿತ್ತು.) ಇರುತಿತ್ತು. ಕಾಲರ್ ಐಡಿ ಇಲ್ಲದ, ಕಪ್ಪುಬಣ್ಣದ, ರೋಟೆಟಿಂಗ್ ಡಯಲಿಂಗ್ ಇರುವ, ಪ್ರತಿ ನಂಬರ್ ತಿರುವಿದಾಗಲೂ ಗರ್..ಎಂದು ಸದ್ದು ಮಾಡುತ್ತಿದ್ದ ಫೋನ್ ಗಳು. ಆಗ ಈ ರೀತಿಯ ಕನ್ ಫ್ಯೂಶನ್ ಗಳಿಗೆ ಆಸ್ಪದವೇ ಇರಲಿಲ್ಲ. ಫೋನ್ ಬಂದರೆ ಎತ್ತಿಕೊಳ್ಳದೇ ಬೇರೆ ವಿಧಿ ಇರುತ್ತಿರಲಿಲ್ಲ. ಒಂದು ವೇಳೆ ಫೋನ್ ರಿಸೀವ್ ಆಗಿಲ್ಲ ಅಂದರೆ ಮನೆಯಲ್ಲಿ ಯಾರೂ ಇಲ್ಲ ಎಂದು ನಿಶ್ಚಿತವಾಗಿ ತಿಳಿದುಕೊಂಡುಬಿಡುತ್ತಿದ್ದೆವು. ಯಾಂತ್ರಿಕತೆ ಮುಂದುವರೆದ ಹಾಗೆಲ್ಲ ಸುಳ್ಳು ಹೇಳುವುದು ಹೆಚ್ಚಾಗಿದೆ ಮತ್ತು ಸುಲಭವಾಗಿದೆ.

ನನ್ನ ಆತ್ಮೀಯ ಗೆಳತಿಯೊಬ್ಬಳಿದ್ದಾಳೆ. ಹೆಚ್ಚಾಗಿ ನಾನೇ ಅವಳ ಮೊಬೈಲ್ ಗೆ ವಾರಕ್ಕೊಮ್ಮೆ ಕಾಲ್ ಮಾಡುತ್ತಿರುತ್ತೇನೆ. ಆದರೆ ಅಕೆ ರಿಸೀವ್ ಮಾಡವುದೇ ಇಲ್ಲ.  ಎರಡು ಮೂರು ವಾರ ಬಿಟ್ಟು ಆಕೆ ರಿಸೀವ್ ಮಾಡಿ ನಾನು ಮೇಲೆ ಹೇಳಿದ ಐದು ಕಾರಣಗಳಲ್ಲಿ ಯಾವುದಾದರೂ ಒಂದನ್ನು ಹೇಳುತ್ತಾಳೆ. ನಾನು ಒಪ್ಪಿಕೊಳ್ಳಲೇ ಬೇಕು. ಇದು ಕೇವಲ ನನ್ನ ಗೆಳತಿಯೊಬ್ಬಳ ವಿಷಯವಲ್ಲ. ಹಲವರಿಗೆ ಇಂತಹ ಅನುಭವಗಳಾಗಿರುತ್ತವೆ. ಮೊಬೈಲ್ ರಿಸೀವ್ ಮಾಡದಿದ್ದರೆ, ನನಗಂತೂ ತೀರ ಕಿರಿಕಿರಿಯಾಗುತ್ತದೆ. ಜೊತೆಗೆ ಸಿಟ್ಟೂ ಬರುತ್ತದೆ. ಇದರಿಂದ ಒಮ್ಮೊಮ್ಮೆ ಸಂಬಂಧಗಳೇ ಸೊರಗಿಹೋಗುವ ಸಾಧ್ಯತೆ ಇರುತ್ತದೆ.

ಮೋಸ್ಟ್ ಮೊಬೈಲ್ ಯೂಸರ್ಸ್ ದೇಶಗಳಲ್ಲಿ ಭಾರತ ಮಂಚೂಣಿಯಲ್ಲಿದೆಯಂತೆ. ಮೊಬೈಲ್ ಮ್ಯಾನರ್ಸ್ ನಲ್ಲಿ ಯಾವ ಸ್ಥಾನದಲ್ಲಿ ಯಾರಿಗಾದರೂ ಗೊತ್ತಿದೆಯೆ?

“Don’t eat a person who is working”

566

Five cannibals (man eaters) get appointed as programme producers  in a tv channel.

During the welcoming ceremony the boss says: “You’re all part of our team now. You can earn good money here, and you can go to the company canteen for something to eat. So don’t trouble the other employees”.

The cannibals promise not to trouble the other employees.

Four weeks later the boss returns and says: “You’re all working very hard, and I’m very satisfied with all of you. One of our programme producer has disappeared however. Do any of you know what happened to her?” The cannibals disown all knowledge of the missing programme producer. After the boss has left, the leader of the cannibals says to the others: “Which of you idiots ate the programme producer?”

One of the cannibals raises his hand hesitantly, to which the leader of the cannibals says: “You FOOL! For four weeks we’ve been eating copy editors , bulleting producers, executives , and chiefs and no-one has noticed anything, and now YOU ate one programme producer and it got noticed. So here after please don’t eat a person who is working.”

ಮಾಧ್ಯಮ ಪರಿಸ್ಥಿತಿ ಹೇಗಿದೆ? ಮತ ಚಲಾಯಿಸಿ…

ರಾಜ್ಯದಲ್ಲಿ ಮಾಧ್ಯಮಗಳ ಪರಿಸ್ಥಿತಿ ಹೇಗಿದೆ ಎಂಬ ಬಗ್ಗೆ ಪೋಲ್ ಆರಂಭಿಸಿದ್ದೇನೆ. ನೀವೂ ವೋಟ್ ಮಾಡಿ…

ಗೌಡರ ಗತ್ತೇ ಗಮ್ಮತ್ತಿನ ಚರ್ಚೆ

ಈ ಹಿಂದೆ ನನ್ನ ಬ್ಲಾಗ್ ನಲ್ಲಿ ಗೌಡರ ಗತ್ತೇ ಗಮ್ಮತ್ತು ಎಂಬ ಪೋಸ್ಟ್ ಹಾಕಿದ್ದೆ. ಕೆಲ ದಿನಗಳ ಹಿಂದೆ ಅದೇ ಪೋಸ್ಟನ್ನು ಫೇಸ್ ಬುಕ್ ನಲ್ಲಿ ಪ್ರಕಟಿಸಿದ್ದೆ. ಅದಕ್ಕೆ ಬಂದ ಆಸಕ್ತಿದಾಯಕ ಪ್ರತಿಕ್ರಿಯೆಗಳು ಇಲ್ಲಿವೆ.

dg

ಅರಕಲಗೂಡು ಜಯರಾಮ್ ಹೇಳುತ್ತಾರೆ….

ಹೌದು ಸರ್ ಪತ್ರಕರ್ತರಿಗೆ ಸುದ್ದಿಯ ಹಪಾಹಪಿ ಇರುತ್ತದೆ ವಿನಹ, ನಾವು ಭೇಟಿ ಮಾಡಲು ತೆರಳುತ್ತಿರುವ ವ್ಯಕ್ತಿಯನ್ನು ಹೇಗೆ ಟ್ರಾಕ್ ಮಾಡಬೇಕು, ಯಾವ ಸಂಧರ್ಭ ಬಳಸಿಕೊಳ್ಳಬೇಕು ಎಂಬುದು ಗೊತ್ತಿರುವುದಿಲ್ಲ. ಗುಂಪಿನೊಳಗೆ ಗೋವಿಂದ ಅಂತ ನುಗ್ಗಿ ಬಲವಂತದ ಬೈಟ್ ತೆಗೆದುಕೊಳ್ಳುವುದು ತಪ್ಪು. ಇಲ್ಲಿ ಪರಸ್ಪರರ ಭಾವನೆಗಳನ್ನು ಗೌರವಿಸುವ ಅವಕಾಶವಿರಬೇಕು. ದೇವೇಗೌಡ ಹುಂಬತನದ ವ್ಯಕ್ತಿತ್ವದವರು ಎನಿಸುವುದು ನಿಜ. ಅದಕ್ಕೆ ಅವರ ಸ್ಥಾನಮಾನಗಳು ಕಾರ… Read Moreಣವಿರಬಹುದು ಹಾಗಾಗಿ ಪತ್ರಕರ್ತನಾದವನಿಗೆ ಹಪಾಹಪಿ ಇದ್ದರೆ ಸಾಲದು ಒಳನೋಟವು ಬೇಕು. ಅದರಲ್ಲೂ ದೃಶ್ಯ ಮಾಧ್ಯಮದ ಪತ್ರಕರ್ತರಿಗೆ ಇಂತಹ ತಿಳುವಳಿಕೆ ಅಗತ್ಯವಾಗಿರಲೇಬೇಕು. (ಯಾರಿಗಾದರೂ ನೋವಾದರೆ ಕ್ಷಮಿಸಿ)

ರಮೇಶ್ ಎಸ್ ಪೆರ್ಲಾ ಹೇಳುತ್ತಾರೆ….

@AJ your right..Devegowda never disappointed me

ಅಶ್ವಿನಿ ಶ್ರೀಪಾದ್ ಹೇಳುತ್ತಾರೆ….

ನಂಗೆ ನಿಮ್ಮ ಕೊನೆ ಲೈನ್ ಇಷ್ಟ ಆಯ್ತು. Its very much true. ನಮ್ಮ ಜನಕ್ಕೆ ಬುದ್ಧಿ ಇಲ್ಲ.

ಪ್ರದೀಪ್ ಪೈ ಹೇಳುತ್ತಾರೆ…..

Media is bit by bite. Mediamen use and abuse politicians. Politicians overuse, abuse and use otherwise the media-men. E-media is bit by this bite syndrome, politicians wound the media men more by using this bite syndrome

ರಮೇಶ್ ಎಸ್. ಪೆರ್ಲಾ ಹೇಳುತ್ತಾರೆ….

ನೀತಿ – ಗೌಡರಿಗೆ ಯಾವ ಪತ್ರಕರ್ತರನ್ನು ಎಲ್ಲಿ, ಹೇಗೆ, ಯಾಕೆ, ಇಡಬೇಕು ಎಂಬ ಸ್ಪಷ್ಟ ಕಲ್ಪನೆ ಇದೆ. ಅದೇ ಪತ್ರಕರ್ತರಿಗೆ ಇಲ್ಲ.. (ಯಾರಿಗಾದರೂ ನೋವಾದರೆ ಏನು ಮಾದುವುದು..)

ಅರಕಲಗೂಡು ಜಯರಾಮ್ ಹೇಳುತ್ತಾರೆ….

yeah i agree with perla… bcoz ಯಾವ ಪತ್ರಕರ್ತರನ್ನು ಹೇಗೆ ಎಲ್ಲಿಡಬೇಕೆಂಬುದು ಗೌಡಪ್ಪನಿಗೆ ಮತ್ತು ಅವರ ಪುತ್ರರಿಗೆ ಚೆನ್ನಾಗಿ ಗೊತ್ತು! ಗೌಡ ಹುಂಬ ವ್ಯಕ್ತಿತ್ವದವರು. ತಮಗೆ ಇಷ್ಟ ಬಂದರೆ ಮಾತು, ಅದೂ ಬೇಕೋ ಬೇಡವೋ ಎಂಬಂತೆ ವರ್ತಿಸುತ್ತಾರೆ. ಕಳೆದ ವಿಧಾನ ಸಭಾ ಚುನಾವಣೆಗಳಲ್ಲಿ ಜೆಡಿಎಸ್ರ ಹೀನಾಯ ಸೋಲು ಕಂಡಾಗ ಟಿವಿ9 ಪತ್ರಕರ್ತರನ್ನು ಬೆಂಗಳೂರಿನಲ್ಲಿ ನಡೆದ ಪಕ್ಷದ ಸಭೆಯಿಂದ ನಿರ್ದಾಕ್ಷ್ಯೀಣ್ಯವಾಗಿ ಹಚಾ ಅಂದಿದ್ದರು. ಆಗ ಸ್ಥಳದಲ್ಲಿದ್ದ ಇತರೆ ಪತ್ರಕರ್ತರು ತೆಪ್ಪಗಾಗಿದ್ದರೆ ವಿನಹ ಯಾರೊಬ್ಬರು ಪ್ರತಿಭಟಿಸಲಿಲ್ಲ. ಒಮ್ಮೆ ಉದಯ ಟಿವಿಯಲ್ಲಿ ದೀಪಕ್ ತಿಮ್ಮಯ್ಯ ಪ್ರಶ್ನೆಗಳ ಮೇಲೆ ಪ್ರಶ್ನೆ ಎಸೆಯುತ್ತ ನೀರಿಳಿಸುವ ಪ್ರಯತ್ನ ಮಾಡಿದರೆ ದೇವೇಗೌಡರು ದೀಪಕ್ ತಿಮ್ಮಯ್ಯನಿಗೂ ತಿರುಗುಬಾಣವಾಗಿ ಆತನನ್ನೆ ಮಂಗ ಮಾಡಿದರೆ ವಿನಹ ತಮ್ಮ ಮೈ ನೀರಿಳಿಸಲು ಬಿಡಲಿಲ್ಲ, ಅಂತಹ ಚಾಣಾಕ್ಷತೆ, ಕುಖ್ಯಾತಿ ಗೌಡರಿಗಿದೆ. ಅಷ್ಟೇ ಅಲ್ಲ ಗೌಡರಿಗೆ ಪತ್ರಕರ್ತರು ಅನುಕೂಲ ಸಿಂದುವಾಗಿ ಬಳಕೆಯಾಗುತ್ತಾರೆಯೇ ವಿನಹ ಬೇರೇ ಏನೂ ಅಲ್ಲ… ಕಿರಿಯ ಪತ್ರಕರ್ತರ ಮುಂದೆ ಘಟಾನುಘಟಿ ಹಿರಿಯ ಪತ್ರಕರ್ತರ ಪರಿಚಯ ಹೇಳಿ ಕಿರಿ ಕಿರಿ ಮಾಡುತ್ತಾರೆ . ನಿಮ್ಮ ನೀತಿಯಿಂದ ಯಾರಿಗಾದರು ನೋವಾಗಿದ್ದರೆ definately he is unfit for the journalism… what u say?

ಟಿಪ್ಪು ಸಾವಿನ ಸಂದರ್ಭದಲ್ಲಿ….

tippu

ಟಿಪ್ಪು ಸುಲ್ತಾನ್ ನ ಅಂತಿಮ ಯುದ್ಧದ (1799) ಸಂದರ್ಭದಲ್ಲಿ ಆತನ ಕುದುರೆಯ ಮೇಲೆ ಹೊದಿಸಿದ್ದ ಬಟ್ಟೆ ಇದು. ಕೆಲ ತಿಂಗಳ ಹಿಂದೆ ಬೆಂಗಳೂರಿನ ಟಿಪ್ಪು ಅರಮನೆಯಲ್ಲಿ ಪ್ರದರ್ಶನಕ್ಕಿಡಲಾಗಿತ್ತು.

ಕ್ಯಾಮೆರಾ ಕಂಡೊಡನೆ ಶೋಕ ನಾಪತ್ತೆ

speak

ಡಾ. ರಾಜ್ ನಿಧನರಾಗಿ ಒಂದು ವರ್ಷವಾಗಿತ್ತು. ಮೊದಲ ಪುಣ್ಯತಿಥಿಯ ಮುನ್ನಾದಿನ ಕರ್ಟನ್ ರೇಸರ್ ಸ್ಟೋರಿ ಮಾಡಲು ರಾಜ್ ಸಮಾಧಿಗೆ ತೆರಳಿದ್ದೆ. ಸಮಾಧಿಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಯತಿರಾಜ್ ಎಂದಿನಂತೆ ರಾಜ್ಯದ ವಿವಿಧ ಕಡೆಗಳಿಂದ ಬರುತ್ತಿರುವ ಜನತೆ, ಅಂಕಿ-ಸಂಖ್ಯೆ, ಸಮಾಧಿಗೆ ಇನ್ನೂ ಅಗತ್ಯವಿರುವ ಮೂಲಭೂತ ಸೌಕರ್ಯಗಳು ಇತ್ಯಾದಿಗಳ ಬಗ್ಗೆ ಮಾಹಿತಿ ನೀಡುತ್ತಿದ್ದರು. ಹೀಗೆ ಮಾತನಾಡುತ್ತ ಯತಿರಾಜ್, “ಸುಘೋಷ್, ಕಳೆದ ಒಂದು ತಿಂಗಳ ಹಿಂದೆ ಕೋಲಾರದಿಂದ ಒಬ್ಬ ಮನುಷ್ಯ ಬಂದಿದ್ದಾನೆ. ಹಳದಿ-ಕೆಂಪು ಬಣ್ಣದ ಸೈಕಲ್ ತುಳಿಯುತ್ತ ಇಲ್ಲೇ ಸಮಾಧಿಯ ಬಳಿಯೇ ಸುತ್ತಾಡುತ್ತಿರುತ್ತಾನೆ. ಡಾ. ರಾಜ್ ಅಭಿಮಾನಿಯಂತೆ. ಅವರ ಎಲ್ಲ ಚಿತ್ರಗಳನ್ನೂ ನೋಡಿದ್ದಾನಂತೆ. ಆದರೆ ಅವರು ತೀರಿಕೊಂಡಾಗಿನಿಂದ ಮನಸ್ಸಿಗೆ ತೀರ ನೋವಾಗಿ ಅದರಿಂದ ಹೊರಬರಲಾರದೆ ಮೌನವೃತ ಕೈಗೊಂಡಿದ್ದಾನಂತೆ. ಹೀಗೆ ಮೌನವೃತ ಕೈಗೊಳ್ಳುವದರ ಬದಲು ಅಣ್ಣಾವ್ರ ನೆನಪಿನಲ್ಲಿ ಸಮಾಜಕ್ಕೆ ಉಪಯೋಗವಾಗುವಂತಹದ್ದೇನಾದರೂ ಮಾಡು ಎಂದರೆ ಕೇಳಲೊಲ್ಲ. ಅವನ ಮೇಲೆ ಸ್ಟೋರಿ ಮಾಡಬಹುದು” ಎಂದರು. ಎಲಾ..ಎಲಾ…ಡಾ. ರಾಜ್ ತೀರಿಕೊಂಡಿದ್ದಕ್ಕೆ ಈ ಪಾರ್ಟಿ ಮೌನವೃತ ಮಾಡುತ್ತಿದ್ದಾನಲ್ಲ. ‘ಒಳ್ಳೆ’ ಸ್ಟೋರಿ ಮಾಡಬೇಕು ಎಂದುಕೊಂಡು ಆತನನ್ನು ಕರೆಸಿದೆ. ಕ್ಯಾಮೆರಾಮನ್ ಗೆ ಸ್ಟೋರಿ ಬ್ರೀಫ್ ಮಾಡಿ ಆತ ಸಮಾಧಿಯ ಬಳಿ ಸೈಕಲ್ ನಡೆಸುವುದು, ನಡೆದುಕೊಂಡು ಬರುವುದು, ಸಮಾಧಿ ಬಳಿ ಅಣ್ಣಾವ್ರ ಭಾವಚಿತ್ರವನ್ನು ನೋಡುತ್ತ ಜೋಲು ಮುಖ ಹಾಕಿಕೊಂಡು ಕುಳಿತಿರುವುದು ಹೀಗೆ ಹಲವು ಶಾಟ್ ಗಳನ್ನು ತೆಗೆಸಿಕೊಂಡೆ. ಸರಿ ಬೈಟ್ ಗಾಗಿ ನಿಂತುಕೊಂಡಾಗಲೇ ಸಮಸ್ಯೆಯಾಗಿದ್ದು. ಪಾರ್ಟಿ ಮೌನವೃತಧಾರಿ. ಹಾಗಾದರೆ ಬೈಟ್ ಹೇಗೆ ತೆಗೆಯುವುದು. ಇದಕ್ಕೆ ಮತ್ತೆ ಯತಿರಾಜನೇ ಮಧ್ಯಸ್ಥಿಕೆ ವಹಿಸಿದ. ಆತನನ್ನೂ, ಯತಿರಾಜ್ ನನ್ನು ನಿಲ್ಲಿಸಿ ಡಬಲ್ ಫ್ರೇಮ್ ಇಡಲು ಹೇಳಿದೆ. ನಾನು ಪ್ರಶ್ನೆ ಕೇಳುವುದು, ಮೌನವೃತಧಾರಿ ಕೈಸನ್ನೆ, ಬಾಯಿ ಸನ್ನೆ ಮಾಡುವುದು, ಯತಿರಾಜ್ ಅದನ್ನು ಅರ್ಥಮಾಡಿಕೊಂಡು ಮಾತನಾಡುವುದು ಹೀಗೆ ಸಾಗಿತ್ತು ನಮ್ಮ ಬೈಟ್ ನ ವೈಖರಿ. ನಾನು ಕೇಳಿದ್ದಕ್ಕೆ ಆ ಪಾರ್ಟಿ ಏನೇನೋ ಕೈಸನ್ನೆ ಮಾಡುತ್ತಿದ್ದ. ಅದು ಯತಿರಾಜನಿಗೂ ಎಷ್ಟು ಅರ್ಥವಾಗುತ್ತಿತ್ತೋ ಗೊತ್ತಿಲ್ಲ. ಆತನಿಗೆ ಅರ್ಥವಾಗಿದ್ದನ್ನು ಆತ ಬಂದಷ್ಟು ಹೇಳುತ್ತಿದ್ದ. ಈ ತಮಾಷೆ ನೋಡುತ್ತಿದ್ದ ಜನ ಸುತ್ತಲೂ ಜಮಾಯಿಸಿದ್ದರು. ನಂತರ ಅದ್ಯಾಕೋ ಆಸಾಮಿಗೆ ಕ್ಯಾಮೆರ ಮುಂದೆ ಹೀಗೆಲ್ಲ ಮಾಡುವುದು ತೀರ ಬೇಜಾರು ಎನಿಸಿರಬೇಕು. ಒಂದು ಸಂದರ್ಭದಲ್ಲಿ ತಾನು ಮಾಡಿದ ಕೈಸನ್ನೆಯನ್ನು ಯತಿ, ಸರಿಯಾಗಿ ಇಂಟಪ್ರಿಟ್ ಮಾಡುತ್ತಿಲ್ಲ ಎಂದು ಬೇಸರಿಸಿ ಧಡಾರ್ ಎಂದು ಮಾತನಾಡಲು ಆರಂಭಿಸಿಬಿಟ್ಟ. ಹ್ಹೆ..ಹ್ಹೆ..ಹ್ಹೆ….ಎಂದು ಮೊದಲು ನನ್ನ ಕ್ಯಾಮರಾಮನ್ ನಗಲಾರಂಭಿಸುತ್ತಿದ್ದಂತೆ ಸುತ್ತಲಿದ್ದ ಜನ ಹೋ…ಎಂದು ಕಿರುಚಿದರು. ನನಗೆ ಏನೂ ಮಾಡಲು ತೋಚದೆ, ರಾಜ್ ಅಭಿಮಾನಿ ಮೌನವೃತಧಾರಿಯಾದ ಸ್ಟೋರಿಗೆ ಎಳ್ಳು ನೀರು ಬಿಟ್ಟು ಕಾರ್ ಏರಿದೆ. ಅಣ್ಣಾವ್ರ ಹೆಸರಿನಲ್ಲಿ ಏನೆನೆಲ್ಲ ಮಾಡುತ್ತಾರೆ ಅಲ್ವಾ?

ಹುಚ್ಚು ಮನಸ್ಸಿನ ಐದು ಆವಿಷ್ಕಾರಗಳು

suhalf

ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಚಲಿಸುವ ವಸ್ತು ಯಾವುದು? ಡೌಟೇ ಇಲ್ಲ…. ಅದು ಮನಸ್ಸು. ಜಗತ್ತಿನಲ್ಲಿ ಅತೀ ದೊಡ್ಡ ಗಡವ ಯಾವುದು? ನೋ ಡೌಟ್. ಅದೂ ಮನಸ್ಸೇ. ಒಂದು ಕ್ಷಣ ಇಲ್ಲೇ ಬೆಡ್ ರೂಂ ನಲ್ಲಿದ್ದರೆ ಮತ್ತೊಂದು ಕ್ಷಣ ಚಂದ್ರಲೋಕಕ್ಕೋ, ಶೇರ್ ಮಾರ್ಕೆಟ್ಟಿಗೋ ಲಗ್ಗೆ ಇಟ್ಟಿರುತ್ತದೆ. (ಕೆಲವರ ಮನಸ್ಸು ಬೆಡ್ ರೂಂ ಬಿಟ್ಟು ಬೇರೆಲ್ಲೂ ಹೋಗುವುದೇ ಇಲ್ಲ ಎಂಬುದು ಬೇರೆ ಮಾತು). ಮೊನ್ನೆ ಒರಾಂಗುಟಾನ್ ನಂತಹ ನನ್ನ ಮನಸ್ಸು ಪಾನಮತ್ತವಾಗಿತ್ತು. ಸಾಲದೆಂಬಂತೆ ಅದಕ್ಕೆ ಚೇಳು ಕುಟುಕಿತ್ತು. ಸಾಲದೆಂಬಂತೆ ಅದರ ಮೈಯಲ್ಲಿ ಭೂತ ಹೊಕ್ಕಿತ್ತು. ಸಾಲದೆಂಬಂತೆ ಅದು ಟೀವಿಯಲ್ಲಿ ಸಚ್ ಕಾ ಸಾಮ್ನಾ ನೋಡುತ್ತಿತ್ತು. ಇಂತಿಪ್ಪ ಸಂದರ್ಭದಲ್ಲಿ ಭವಿಷ್ಯದ ಕರಾಳ ಕತ್ತಲನ್ನು ಊಹಿಸಿದ ಅದು ಸಡನ್ ಆಗಿ ಪರೋಪಕಾರ ಮಾಡಲು ಸಿದ್ಧವಾಯಿತು. ಅಂತಹ ಸಂದರ್ಭದಲ್ಲಿ ಅದಕ್ಕೆ ಮುಂದಿನ ಪೀಳಿಗೆಗೆ ಯಾವ ರೀತಿಯ ಆವಿಷ್ಕಾರಗಳು ಉಪಯೋಗವಾಗಬಹುದು ಎಂದು ಯೋಚಿಸಿತು. ಅದು ಯೋಚಿಸಿದ ಆವಿಷ್ಕಾರಗಳು ಹೀಗಿವೆ.

1. ಥ್ರೀ ಟೈರ್ ಸಿಟಿ ಸೈಬಸ್ (ಸೈಕಲ್ ಬಸ್) – ಹೌದು. ಈ ಬಸ್ ಗೆ ಮೂರೇ ಚಕ್ರ. ಮೂರು ಚಕ್ರಗಳಿಂದ ಆಟೋ ಓಡಬಹುದಾದರೆ ಬಸ್ ಯಾಕಾಗಬಾರದು? ಈ ಬಸ್ಸಿನಲ್ಲಿ ಪ್ರತಿ ಸೀಟಿನ ಕೆಳಗೂ ಸೈಕಲ್ ಗೆ ಇರುವಂತೆ ಪೆಡಲ್ ಗಳಿರುತ್ತವೆ. ಪ್ರತಿಯೊಬ್ಬ ಪ್ರಯಾಣಿಕನೂ ತಾನು ಕುಳಿತುಕೊಂಡ ಬಳಿಕ ತಿಕ್ಕಲು ತಿಕ್ಕಲಾಗಿ ನಿದ್ದಗೆ ಶರಣಾಗದೆ ಪೆಡಲ್ ತುಳಿಯಲು ಆರಂಭಿಸಬೇಕು. ಗರ್ಭಿಣಿಯರು, ಮಕ್ಕಳು ಹಾಗೂ ಹಿರಿಯ ನಾಗರಿಕರು ಯಥಾಶಕ್ತಿ ತುಳಿಯಬಹುದು ಅಥವಾ ತುಳಿಯದೇ ಇರಬಹುದು. ಆಯ್ಕೆಯ ಸ್ವಾತಂತ್ರ್ಯ ಅವರಿಗೆ ಬಿಟ್ಟದ್ದು. ಹೀಗೆ ಎಲ್ಲ ಪ್ರಯಾಣಿಕರು ಪೆಡಲ್ ತುಳಿಯುವ ಮೂಲಕ ಬಸ್ ಮುಂದೆ ಚಲಿಸುತ್ತದೆ. ಪ್ರಯಾಣಿಕರು ಕಡಿಮೆಯಿದ್ದರೆ, ಎಮರ್ಜೆನ್ಸಿ ಎಂಜಿನ್ ಸ್ಟಾರ್ಟ್ ಮಾಡಿ ಕೊಂಚ ವೇಗ ದಯಪಾಲಿಸಬಹುದು. ಈ ಪೆಡಲ್ ಬಳಿಯೇ ಚಿಕ್ಕದೊಂದು ಮೋಟರ್ ಅಳವಡಿಸಲಾಗಿರುತ್ತದೆ. ಪೆಡಲ್ ತುಳಿಯುತ್ತಿರುವಂತೆ ಈ ಮೋಟರ್ ಕೂಡ ಚಾರ್ಜ್ ಆಗುತ್ತದೆ. ಹೀಗೆ ಚಾರ್ಜ್ ಆದ ಮೋಟರ್ ನಿಂದ ಪ್ರಯಾಣಿಕರು ತಮ್ಮ ಮೊಬೈಲ್ ಇತ್ಯಾದಿಗಳನ್ನು ಚಾರ್ಜ್ ಮಾಡಿಕೊಳ್ಳಬಹುದು. ಆದರೆ ಚಾರ್ಜಿಂಗ್ ಸೌಲಭ್ಯಕ್ಕೆ ಬಿಎಂಟಿಸಿ ವತಿಯಿಂದ ಪಾಸ್ ತೆಗೆದುಕೊಳ್ಳಬೇಕಾಗುತ್ತದೆ. ಪರಿಸರ ಸಂರಕ್ಷಣೆಯಲ್ಲಿ ಇದೊಂದು ದಿಟ್ಟ ಹೆಜ್ಜೆ.

2. ಟೆಲಿಪತಿ ಪಿಸಿಓ – ಎಲ್ಲ ಕಡೆ ಪಿಸಿಓಗಳಿರುವಂತೆ ಟೆಲಿಪತಿ ಸೆಂಟರ್ ಗಳಿರುತ್ತವೆ. ಈ ಸೆಂಟರ್ ಗಳಲ್ಲಿ ಟೆಲಿಪತಿ ಮೂಲಕ ಸಂದೇಶ ಕಳಿಸುವಲ್ಲಿ ನಿಷ್ಣಾತರಾದ ಟೆಲಿಪತಿ ಕಾಲ್ ಎಕ್ಸಿಕ್ಯೂಟಿವ್ಸ್ ಇರುತ್ತಾರೆ. ಇವರ ಬಳಿ ತೆರಳಿ ನಮಗೆ ಸಂದೇಶ ರವಾನಿಸಬೇಕಾದ ವ್ಯಕ್ತಿಯ ಫೋಟೋ ನೀಡಿ, ನಮ್ಮ ಸಂದೇಶ ತಿಳಿಸಿದರೆ ಮುಗಿಯಿತು. ಟೆಲಿಪತಿ ಕಾಲ್ ಎಕ್ಸಿಕ್ಯೂಟಿವ್ ಗಳು ಸಂದೇಶ ರವಾನಿಸುತ್ತಾರೆ. ಇದೊಂದು ರೀತಿ ಹ್ಯೂಮನ್ ಪೇಜರ್ ಸರ್ವಿಸ್ ಇದ್ದಹಾಗೆ. ಕೊಂಚ ಹೊತ್ತು ಕಾದರೆ ಮರು ಸಂದೇಶವನ್ನೂ ತಿಳಿಸಲಾಗುತ್ತದೆ. ಈ ಪದ್ಧತಿಯು ಹೆಚ್ಚು ಸಮಯ ಬೇಡುತ್ತದಾದರೂ, ಮೊಬೈಲ್ ಸಿಗ್ನಲ್ ಗಳಿಂದ ಆಗುವ ಹಾನಿ ತಡೆಗಟ್ಟುವಲ್ಲಿ ಸಹಕಾರಿ.

3. ಚೇನ್ ಸ್ನ್ಯಾಚಿಂಗ್ ಡಿಟೆಕ್ಟಿಂಗ್ ಆಟೋಮ್ಯಾಟಿಕ್ ಅಲಾರ್ಮ್ ಸಿಸ್ಟಮ್ – ಒಂಟಿ ಮಹಿಳೆಯರ ಅಥವಾ ಫಾರ್ ದೆಟ್ ಮ್ಯಾಟರ್ ಪತಿಯ ಜೊತೆ ಹೊರಟ ಮಹಿಳೆಯರ ಕತ್ತಿನಲ್ಲಿರುವ ಸರ ಅಪಹರಣ ಪ್ರಕರಣ ತಡೆಯಲು ಇದು ಸಹಾಯಕ. ಪ್ರತಿಯೊಬ್ಬ ಮಹಿಳೆಯೂ ತಾನು ಚಿನ್ನದ ಅಂಗಡಿಯಿಂದ ಆಭರಣ ಖರೀದಿಸುವಾಗ ಮೊಬೈಲ್ ರೀತಿಯ ಪುಟ್ಟ ಯಂತ್ರವೊಂದನ್ನು ಖರೀದಿಸಬೇಕಾಗುತ್ತದೆ. ಆಭರಣಗಳನ್ನು ಧರಿಸಿ ಹೊರಹೋಗುವ ಸಂದರ್ಭದಲ್ಲಿ ಮಹಿಳೆಯರು ಈ ಯಂತ್ರವನ್ನು ತಮ್ಮ ಬಳಿ ಇಟ್ಟುಕೊಂಡಿರುವುದು ಅವಶ್ಯ. ಕಳ್ಳರು ಬೈಕ್ ನಲ್ಲಿ ಬಂದು ಸರ ಎಗರಿಸಿ ಓಡಿಹೋಗುತ್ತಿರುವಂತೆ ಯಂತ್ರದಲ್ಲಿರುವ ಗುಂಡಿಯನ್ನು ತಕ್ಷಣ ಒತ್ತಬೇಕು. ಆಗ ಈ ಯಂತ್ರ ಸೆಕೆಂಡಿನ ಹತ್ತನೇ ಒಂದರಷ್ಟು ಸಮಯದಲ್ಲಿ ಸರದ ಬಾರ್ ಕೋಡ್ ಅನ್ನು ಚೇನ್ ಸ್ನ್ಯಾಚಿಂಗ್ ಡಿಟೆಕ್ಟಿಂಗ್ ಸೆಂಟರ್ ಗೆ ತಲುಪಿಸುತ್ತದೆ. ಅಲ್ಲಿನ ಸಿಸ್ಟಮ್ ಗಳು ತಕ್ಷಣ ಅಲಾರ್ಮ್ ಬಟನ್ ಒತ್ತುತ್ತಿರವಂತೆ ಸರದಲ್ಲಿ ಅಳವಡಿಸಲಾಗಿರುವ ನಾನೋ ಚಿಪ್ ಗಳ ಸಹಾಯದಿಂದ ಈಗಾಗಲೇ ವಿದ್ಯುದ್ದೀಪ ಕಂಬಗಳಲ್ಲಿ ಅಳವಡಿಸಲಾಗಿರುವ ಸೈರನ್ ಗಳು ಕಳ್ಳರು ಓಡಿಹೋಗುವ ದಿಕ್ಕಿನ ಉದ್ದಕ್ಕೂ ಲಬೋ ಲಬೋ ಎಂದ ಬಾಯಿ ಬಡಿದುಕೊಳ್ಳಲಾರಂಭಿಸುತ್ತವೆ. ಮುಂದೆ ಸಾರ್ವಜನಿಕರ ಸಹಾಯದಿಂದ ಕಳ್ಳರಿಗೆ ಧರ್ಮದೇಟು ಹಾಕಬಹುದು. ಕನ್ನಡ ಸುದ್ದಿವಾಹಿನಿಗಳ ಕ್ರೈಮ್ ಕಾರ್ಯಕ್ರಮ ತಂಡ ಚಿತ್ರೀಕರಣ ಮುಗಿಸಿದ ಬಳಿಕ, ಪೋಲಿಸರು ಎಂದಿನಂತೆ ಕೊನೆಯಲ್ಲಿ ಬಂದು ಕಳ್ಳನನ್ನು ಬಂಧಿಸಿ ಆತನ ಚಿತ್ರವನ್ನು ಪೋಲಿಸ್ ಆಲ್ಬಮ್ ಗೆ ಸೇರಿಸಬಹುದು.

4. ಸಿಗ್ನಲ್ ಜಂಪ್ ಕಂಟ್ರೋಲಿಂಗ್ ಡಿವೈಸ್ – ಡೆನ್ಮಾರ್ಕ್ ನಲ್ಲಿ ಜನಗಳಿಗಿಂತ ದನಗಳ ಸಂಖ್ಯೆ ಜಾಸ್ತಿಯಿರುವಂತೆ ಬೆಂಗಳೂರಿನಲ್ಲಿ ಜನಗಳಿಗಿಂತ ಟೂ ವ್ಹೀಲರ್ ಹಾಗೂ ಇತರ ವಾಹನಗಳ ಸಂಖ್ಯೆ ಬೆಳೆಯುತ್ತಿದೆ. ಹೀಗಾಗಿ ಪೀಕ್ ಅವರ್ ನಲ್ಲಿಯೂ ಸಿಗ್ನಲ್ ಜಂಪ್ ಮಾಡುವ ಪರಿಪಾಠ ಪ್ರಾಚೀನ ಕಾಲದಿಂದಲೂ ಅಚಾನೂಕವಾಗಿ ನಡೆದುಕೊಂಡು ಬಂದಿದೆ. ಚಾಲಕರ ಈ ಜಂಪಿಂಗ್ ಪ್ರವೃತ್ತಿಯಿಂದಾಗಿ ಅಪಘಾತಗಳ ಪ್ರಮಾಣ ಏರುತ್ತಿದೆ. ಇದನ್ನು ತಡೆಗಟ್ಟಲು ಪ್ರತಿ ಸಿಗ್ನಲ್ ನಲ್ಲಿಯೂ ಸಿಗ್ನಲ್ ಜಂಪ್ ಕಂಟ್ರೋಲಿಂಗ್ ಡಿವೈಸ್ ಅಳವಡಿಸಲಾಗಿರುತ್ತದೆ.

ಹಸಿರು ದೀಪ ಆರಿ, ಕೇಸರಿ ದೀಪ (ಎಡಪಂಥೀಯರು ಬೇಕಾದರೆ ಇದನ್ನು ಆರೆಂಜ್ ದೀಪ ಎಂದು ಓದಿಕೊಳ್ಳಬಹುದು) ಉರಿಯುತ್ತಿರುವಂತೆ ಸೀತಾಮಾತೆಯನ್ನು ಭೂತಾಯಿಯು ಬಾಚಿಕೊಳ್ಳುವ ಸಂದರ್ಭದಲ್ಲಿ ಬಾಯಿ ಬಿಟ್ಟಂತೆ ಝಿಬ್ರಾ ಕ್ರಾಸಿಂಗ್ ಗುಂಟ ಭೂಮಿ ಬಾಯಿತೆರೆಯುತ್ತದೆ. ಅದರಿಂದ ನಿಧಾನವಾಗಿ ಒಂದೂವರೆ ಇಂಚು ಅಗಲದ ಕಬ್ಬಿಣದ ಮೊಳೆಗಳು ನಿಧಾನವಾಗಿ ಹೊರಬರುತ್ತವೆ. ಯಾರಾದರೂ ಸಿಗ್ನಲ್ ಜಂಪ್ ಮಾಡಿದರೆ ಅಷ್ಟೇ…ಅವರ ವಾಹನದ ಟೈರ್ ಮೊಳೆಗೆ ಸಿಕ್ಕು ಢಬ್ ಎನ್ನುತ್ತದೆ ಅಥವಾ ಫುಸ್ ಎಂದು ನಿಧಾನವಾಗಿ ಗಾಯಗೊಳ್ಳುತ್ತದೆ. ಮುಂದೆ ಗಾಡಿಯನ್ನು ತಳ್ಳಿಕೊಂಡು ಹೋಗುವ ದುರ್ದೆಸೆ ಯಾರಿಗೆ ಬೇಕು ಎಂಬ ಭಯದಿಂದ ಎಲ್ಲರೂ ಸಿಗ್ನಲ್ ಲೈಟ್ ಫಾಲೋ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೇಗಿದೆ ಐಡಿಯಾ?

5. ಇಂಡೀಸಂಟ್ ಕಾಮೆಂಟ್ ಎಲಿಮಿನೇಟಿಂಗ್ ಟೆಕ್ನಿಕ್ – ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಸೇರಿದಂತೆ ರಾಜ್ಯದ ವಿವಿಧೆಡೆ ನಡೆಯುವ ನಾಟಕ ಪ್ರದರ್ಶನಗಳ ಸಂದರ್ಭದಲ್ಲಿ ಹಲವು ಕಿಡಿಗೇಡಿ ಪ್ರೇಕ್ಷಕರು (ಕಿಡಿಗೇಡಿಯಾಗಿದ್ದರೆ ಪ್ರೇಕ್ಷಕ ಎನ್ನಬೇಕೆ ಎಂಬುದು ಬೇರೆ ಪ್ರಶ್ನೆ) ಅಸಭ್ಯ ಕಾಮೆಂಟ್ ಗಳನ್ನು ಮಾಡುವುದು ಸಾಮಾನ್ಯ. ಇದರ ನಿಯಂತ್ರಣಕ್ಕಾಗಿ ಆಡಿಟೋರಿಯಂನ ಮೇಲ್ಭಾಗದಲ್ಲಿ ಕಲ್ಲುಗಳಿಂದ ತುಂಬಿದ ಬಾಕ್ಸಿಂಗ್ ಗ್ಲೌಸ್ ಗಳನ್ನು ಕಟ್ಟಲಾಗಿರುತ್ತದೆ. ಯಾವುದೇ ಕಿಡಿಗೇಡಿ ಪ್ರೇಕ್ಷಕ ಅಸಭ್ಯ ಕಾಮೆಂಟ್ ಮಾಡಿದರೆ ಲೈಟಿಂಗ್ ರೂಮಿನಲ್ಲಿರುವ ವ್ಯಕ್ತಿ, ಕಿಡಿಗೇಡಿ ಕುಳಿತ ಸೀಟ್ ನಂಬರಿನ ಗುಂಡಿ ಒತ್ತುತ್ತಾನೆ. ಆಗ ತಕ್ಷಣ ಮೇಲಿನಿಂದ ಬಾಕ್ಸಿಂಗ್ ಗ್ಲೌಸ್ ಭಾರೀ ವೇಗವಾಗಿ ಬಂದು ಕಿಡಿಗೇಡಿ ತಲೆಗೆ ಕುಕ್ಕುತ್ತದೆ ಅಥವಾ ಜಪ್ಪುತ್ತದೆ. ಆಗ ಕಿಡಿಗೇಡಿ ಬಾಯಿ ಮುಚ್ಚಿಕೊಂಡು ನಾಟಕ ನೋಡಬೇಕಾಗುತ್ತದೆ. ಕರ್ನಾಟಕದ ಸಂಸ್ಕೃತಿ ರಕ್ಷಣೆಗೆ ಇದು ಅನಿವಾರ್ಯ ಕ್ರಮ ಹಾಗೂ ಕರ್ಮ.

“ನೀವು ಬರದಿದ್ರೆ ಸ್ವಾಮಿಗಳಿಗೆ ಕೋಪ ಬರುತ್ತೆ ಮತ್ತೆ ಹಾಂ…ಢಾಂ…ಢೂಂ…”

religion

ಸಮಾಜದ ಮೇಲ್ಪದರಲ್ಲಿರುವವರು ಯಾವ್ಯಾವುದೋ ಭ್ರಮೆಯಲ್ಲಿಯೇ ಬದುಕುತ್ತಾರೆ. ತಮ್ಮಿಂದಲೇ ಜಗತ್ತು ನಡೆಯುತ್ತಿರುವುದು. ತಾವಿಲ್ಲದಿದ್ದರೆ ಸೂರ್ಯ ಉದಯಿಸುವುದಿಲ್ಲ. ಹುಂಜ ಕೂಗುವುದಿಲ್ಲ ಎಂದೆಲ್ಲ ಅಂದುಕೊಂಡುಬಿಟ್ಟಿರುತ್ತಾರೆ. ಇಂತಹ ಕ್ಯಾಟಗರಿಯಲ್ಲಿ ಹಲವು ಧಾರ್ಮಿಕ ಗುರುಗಳೂ ಸೇರುತ್ತಾರೆ.

ಅದೊಂದು ಬಹುದೊಡ್ಡ ಯಾಗ. ರಾಜಕಾರಣಿಗಳು, ಐಎಎಸ್ ಗಳು, ಐಪಿಎಸ್ ಗಳು, ವಿವಿಐಪಿಗಳು ಆ ಆಯಾಗಕ್ಕೆ ಬಂದಂತಹ ಸಂದರ್ಭ. ಭಾರೀ ಇತಿಹಾಸವುಳ್ಳ, ರಾಜ್ಯದಲ್ಲಷ್ಟೇ ಅಲ್ಲ ದೇಶವಿದೇಶಗಳಲ್ಲಿ ಖ್ಯಾತಿ ಗಳಿಸಿರುವ ಮಠವೊಂದರ ಹಿರಿಯ ಸ್ವಾಮಿಜೀ ಆ ಯಾಗಕ್ಕೆ ಬಂದಿದ್ದರು. ಅಫ್ ಕೋರ್ಸ್ ಅವರ ಮಠವೇ ಆ ಯಾಗ ನಡೆಸುತ್ತಿತ್ತು. ಬೆಳ್ಳಂಬೆಳಿಗ್ಗೆಯೇ ನಾನು ಅದರ ಕವರೇಜ್ ಗೆ ಹೋಗಿದ್ದೆ. ಆ ಸಮಯದಲ್ಲಿ ಕಂಚಿ ಶಂಕರಾಚಾರ್ಯ ಕೊಲೆ ಪ್ರಕರಣವೊಂದರಲ್ಲಿ ಸಿಕ್ಕಿಹಾಕಿಕೊಂಡ ಕಾಲ. ಹಾಗಾಗಿ ಅದಕ್ಕೆ ಸಂಬಂಧಿಸಿದಂತೆ ಈ ಸ್ವಾಮಿಜೀಯ ಬೈಟ್ ಪಡೆಯುವುದು ನನ್ನ ಉದ್ದೇಶವಾಗಿತ್ತು. ಹೋದ ತಕ್ಷಣವೇ ಸ್ವಾಮಿಜೀಯ ಪಿ.ಆರ್.ಓ. ಗೆ ನಾನು ಸ್ವಾಮಿಜೀಯ ಇಂಟರ್ವ್ಯೂ ಮಾಡಬೇಕು ಎಂದು ಹೇಳಿದ್ದೆ. ಬೆಳಿಗ್ಗೆ ಏಳು ಗಂಟೆಗೆ ಹೋಗಿದ್ದ ನಾವು ಒಂಬತ್ತು ಗಂಟೆಯವರೆಗೂ ಕಾದರೂ ಸ್ವಾಮಿಜೀಯ ಸುಳಿವಿಲ್ಲ. ಸಾಮಾನ್ಯವಾಗಿ ಸ್ಟೋರಿಯ ಇಂಪಾರ್ಟೆನ್ಸ್ ನೋಡಿ ನಾನು ಬೈಟ್ ಗಾಗಿ ಕಾಯುತ್ತಿದ್ದೆ. ಅಷ್ಟರಲ್ಲಾಗಲೇ ನಮಗೆ ಪಾನಕ, ಫಲಾಹಾರ ಎಲ್ಲವನ್ನೂ ನೀಡಿ ಸತ್ಕರಿಸಿಯಾಗಿತ್ತು. ‘ಸ್ವಾಮಿಗಳು ಪೂಜೆಯಲ್ಲಿದ್ದಾರೆ ಇನ್ನೇನು ಬಂದುಬಿಡುತ್ತಾರೆ, ಸ್ವಾಮಿಗಳು ಅನುಷ್ಠಾನದಲ್ಲಿದ್ದಾರೆ ಇನ್ನೇನು ಬಂದು ಬಿಡುತ್ತಾರೆ’ ಎಂಬಿತ್ಯಾದಿ ಉತ್ತರಗಳನ್ನು ನೀಡಿ ಆ ಪಿ.ಆರ್.ಓ. ನಾವು ಕೂರುವಂತೆ ಮಾಡಿದ್ದರು. ಕೊನೆಗೂ ನಾನು ಬೇಸತ್ತು “ಸ್ವಲ್ಪ ಹೊತ್ತು ಬಿಟ್ಟು ಬರುತ್ತೇವೆ” ಎಂದು ಅಲ್ಲಿಂದ ಕಾಲ್ಕಿತ್ತೆ.

12.30 ರ ಸುಮಾರಿಗೆ ಸ್ವಾಮಿಜೀಯ ಆಗಮನವಾಗಿದೆ ಎಂದೂ, ನಾವು ಬಂದೂ ಬೈಟ್ ತೆಗೆದುಕೊಳ್ಳಬೇಕೆಂದು ಸ್ವಾಮಿಜೀಯ ಪಿ.ಆರ್.ಓ. ಫೋನ್ ಮಾಡಿದ. ಅಷ್ಟರಲ್ಲಾಗಲೇ ನಾನು ಯಾವುದೋ ಅಸೈನ್ ಮೆಂಟ್ ನಲ್ಲಿ ಬಿಝಿ ಇದ್ದೆನಾದ್ದರಿಂದ ಹಾಗೂ ಅದು ಮುಗಿಯುವುದು ಸಂಜೆಯಾಗುವ ಎಲ್ಲ ಸಾಧ್ಯತೆ ಇದ್ದುದರಿಂದ “ಸ್ವಾಮಿಜೀಯ ಬೈಟ್ ಗೆ ಬರಲಾಗುವುದಿಲ್ಲ” ಎಂದೆ. ತಕ್ಷಣ ಆ ಪಿ.ಆರ್. ಓ., “ಅದ್ಹೇಗ್ರೀ ನೀವು ಬರುವುದಿಲ್ಲ? ನೀವು ಬರದಿದ್ರೆ ಸ್ವಾಮಿಗಳಿಗೆ ಕೋಪ ಬರುತ್ತೆ ಮತ್ತೆ ಹಾಂ…ಢಾಂ…ಢೂಂ…”ಎಂದು ವಿಚಿತ್ರ ಟೋನ್ ನಲ್ಲಿ ಹೇಳಿದ. ನನಗೆ ಸಾಮಾನ್ಯವಾಗಿ ಸಿಟ್ಟು ಬರುವುದೇ ಇಲ್ಲ. ಆದರೆ ಬಂದಾಗ ತಡೆದುಕೊಳ್ಳುವುದು ಕಷ್ಟ. “ರೀ ಸ್ವಾಮಿ…ನೀವು ಯಾರ್ ಜೊತೆ ಮಾತಾಡ್ತೀದೀರಾ ಗೊತ್ತಾ ನಿಮ್ಗೆ? ನಿಮ್ಮ ಸ್ವಾಮಿಗೆ ಕೋಪ ಬಂದ್ರೆ ಸಂತೋಷವಾಗಿ ಮಾಡ್ಕಳ್ಳಿಕ್ಕೆ ಹೇಳ್ರಿ…ಅಲ್ರೀ…ಅವರು ಸ್ವಾಮಿ ಅಲ್ವಾ…ಇನ್ನೂ ಅರಿಷಡ್ವರ್ಗಗಳನ್ನು ಗೆದ್ದಿಲ್ವಾ…?”ಎಂದೆ. ಮತ್ತೆ ಪಿ.ಆರ್.ಓ. ಮಾತನಾಡಿಲ್ಲ.

ಬೆಂಗಳೂರಿನಲ್ಲಿ ಶಿವಾಜಿ ಬೆಂಕಿಪೊಟ್ಟಣ

ಮೊನ್ನೆ ಬೆಂಗಳೂರಿನ ಹೊರವಲಯದಲ್ಲಿ ಶೂಟಿಂಗ್ ಗೆಂದು ಹೋಗುತ್ತಿದ್ದಾಗ, ಅಂಗಡಿಯೊಂದರಲ್ಲಿ ಈ ಬೆಂಕಿಪೊಟ್ಟಣ ಕಣ್ಣಿಗೆ ಬಿತ್ತು. ಇದು ದೇಶಭಕ್ತಿಯನ್ನು ಬಿಂಬಿಸುವ ಪ್ರಯತ್ನವೆ? ಅಥವಾ ವ್ಯಾಪಾರ ಹೆಚ್ಚಿಸುವ ಗಿಮಿಕ್ಕೆ? ಅಥವಾ ಮಹಾಪುರುಷರನ್ನು ಸಾಮಾನ್ಯರಿಗೆ ಈ ಮೂಲಕ ತೋರಿಸುವ ಪ್ರಯತ್ನವೆ? ಅಥವಾ ಇವೆಲ್ಲಕ್ಕೂ ಮೀರಿ ಮತ್ತೇನಾದರೂ ಉದ್ದೇಶವಿದೆಯೆ? ಅಥವಾ ಈ ರೀತಿ ಉತ್ಪನ್ನಗಳು ಇರಬೇಕೆ, ಇರಬೇಡವೆ? ನಿಮಗೇನ್ನಿಸುತ್ತದೆ? ದಯವಿಟ್ಟು ತಿಳಿಸಿ.

shivajishivaji back

ಹತ್ತ್ ಹೆತ್ತವ್ಳಿಗೆ….

hospital

ಆಸ್ಪತ್ರೆಯಲ್ಲಿ ಪುಟ್ಟ ಹುಟ್ಟಿದ ಎರಡನೇ ದಿನ. ಮೊದಲ ದಿನ ಸ್ಪಲ್ಪ ಅತ್ತರೂ ನಾನು ಹಾಗೂ ಅವನಮ್ಮ ತೀರ ಕಂಗಾಲಾಗಿ ಆತನನ್ನು ಸಮಾಧಾನ ಪಡಿಸಲು ಸತತ ಪ್ರಯತ್ನ ಮಾಡುತ್ತಿದ್ದೆವು. ಕೆಲವೊಮ್ಮೆಯಂತೂ ಇಬ್ಬರಿಗೂ ಕೈಕಾಲು ಆಡದ ಸ್ಥಿತಿ. ಒಟ್ಟಿನಲ್ಲಿ ನಮ್ಮ ಉಸಿರೇ ನಿಂತಂತಹ ಅನುಭವ. ಇಬ್ಬರಿಗೂ ಯಾವುದೂ ಗೊತ್ತಿಲ್ಲ. ತೀರ ಹೊಸ ಅನುಭವ. ಪುಟ್ಟನೋ ಚಿತ್ರ ವಿಚಿತ್ರ ಧ್ವನಿಯಲ್ಲಿ ಅತ್ತು ಇಬ್ಬರನ್ನೂ ಹೆದರಿಸುತ್ತಿದ್ದ. ಆದರೆ ಎರಡನೇ ದಿನ ನನ್ನಮ್ಮ ಕೊಪ್ಪದಿಂದ ದೇವತೆಯಂತೆ ಬಂದಳು. ಆಮೇಲೇನು ಕೇಳುವುದು. ಎಲ್ಲ ಜವಾಬ್ದಾರಿಯನ್ನು ಅವಳೇ ವಹಿಸಿಕೊಂಡು ಬಿಟ್ಟಳು.hospital

ಈ ಮಧ್ಯೆ ಬೇರೆ ಬೇರೆ ಸಿಸ್ಟರ್ ಗಳು ಬಂದು ಹೋಗುವುದು ನಡೆದೇ ಇತ್ತು. (ಮೊಟ್ಟ ಮೊದಲ ಬಾರಿ ಬೆಂಗಳೂರಿನ ಆಸ್ಪತ್ರೆಯಲ್ಲಿ ಮಲೆಯಾಳಿಗಳಲ್ಲದ ಅಚ್ಚ ಕನ್ನಡಿಗ ಸಿಸ್ಟರ್ ಗಳನ್ನು ನೋಡಿದ್ದೆ. ಹಾಗೆಂದು ಮಲೆಯಾಳಿ ಸಿಸ್ಟರ್ ಗಳ ಮೇಲೆ ನನಗೆ ಗ್ರಜ್ ಇದೆ ಎಂದು ಭಾವಿಸಬೇಕಿಲ್ಲ) ಇನ್ನೂ 20 ರ ಆಸುಪಾಸಿನಲ್ಲಿರುವ ಸಿಸ್ಟರ್ ಗಳಿಗೆ ಪುಟನನ್ನು ನೋಡಿ ಖುಷಿಯೋ ಖುಷಿ. ಗಂಟೆಗಂಟೆಗೆಲ್ಲ ಬಂದು ಮಾತನಾಡಿಸಿ, ಆರೋಗ್ಯ ವಿಚಾರಿಸಿ ಹೋಗುತ್ತಿದ್ದರು. ಕಾಲ್ ಮಾಡಿದರೆ ತಕ್ಷಣ ಬಂದು ಅಟೆಂಡ್ ಮಾಡುತ್ತಿದ್ದರು. ಒಬ್ಬ ಸಿಸ್ಟರ್ ಮಾತ್ರ ಪುಟ್ಟನನ್ನು ನೋಡುವ ನೆಪದಲ್ಲಿ ನನ್ನವಳಿಗೆ, ನನಗೆ, ನನ್ನಮ್ಮನಿಗೆ ಮಗುವನ್ನು ನೋಡಿಕೊಳ್ಳುವ ಬಗ್ಗೆ ಸಲಹೆ ನೀಡಲಾರಂಭಿಸಿದ್ದಳು. ಸಲಹೆಗಳೆನೋ ಮಹತ್ವದ್ದೇ ಆಗಿದ್ದವು. ಆದರೆ ಆಕೆ ಹೇಳುತ್ತಿದ್ದ ರೀತಿ ಮಾತ್ರ ತೀರ ಅಟಿಟ್ಯೂಡ್ ಆಗಿತ್ತು. ಸಲಹೆಗಳನ್ನು ಆಜ್ಞೆಯಂತೆ ನೀಡುತ್ತಿದ್ದಳು. ಮೇಲಾಗಿ ಆಕೆ ಹೇಳುತ್ತಿದ್ದ ಸಂಗತಿಗಳು ನನ್ನಮ್ಮನಿಗೆ ಗೊತ್ತಿದ್ದವೇ ಆಗಿದ್ದವು. ಬರಬರುತ್ತ ಇದು ನಮಗೆ ಕಿರಿಕಿರಿಯಾಗತೊಡಗಿತು. ಎಷ್ಟೂಂತ ಸಹಿಸಿಕೊಳ್ಳುವುದು.   hospitalಒಂದೆರಡು ಬಾರಿ ನೋಡಿದ ನನ್ನಮ್ಮ ಕಡೆಗೊಮ್ಮೆ ಆಕೆ ವಾರ್ಡ್ ನಿಂದ ಹೊರಕ್ಕೆ ಹೋಗವಾಗ “ಏ ಸುಘೋಷ… ನೋಡಾ, ಹತ್ತ್ ಹೆತ್ತವ್ಳಿಗೆ ಒಂದ್ ಹೆತ್ತವ್ಳು ಹೇಳ್ಳಿಕ್ಕೆ ಬಂದ್ಲಂತೆ…”ಎಂದು ಕಮೆಂಟು ಹಾರಿಸಿದಳು. ಅದಾದ ಮೇಲೆ ಆ ಸಿಸ್ಟರ್ ಳ ಸಲಹೆಗಳು ನಿಂತುಹೋದವು.

“ಶಾಂಭವಿಗೆ ಬೇಕಿತ್ತೆ?” ಮುಂದುವರಿದ ಭಾಗ…

ಅಕ್ಟೋಬರ್ 22 ರ ಸುಧಾದಲ್ಲಿ ‘ಮುಕ್ತ ಮುಕ್ತ’ ದ ಶಾಂಭವಿಗೆ ಬೇಕಿತ್ತೆ? ಚರ್ಚೆಗೆ ಮತ್ತೆ ಅಭಿಪ್ರಾಯಗಳು ಬಂದಿವೆ. ಅದು ಇಲ್ಲಿದೆ.

janara pettige


sudha

ನಮ್ಮ ಪುಟ್ಟನನ್ನು ಮಲಗಿಸಿದವರಿಗೆ ಒಂದು ಅಬ್ಜ ಬಹುಮಾನ….

1234

ತೀರ ಕಷ್ಟು ಪಟ್ಟು ಸತತ ಒಂದು ಗಟೆಯ ಪ್ರಯತ್ನದ ನಂತರ ನಾನು ಹಾಗೂ ನನ್ನವಳು ಮಗುವನ್ನು ಹೇಗೋ ಮಾಡಿ ಮಲಗಿಸಿಯಾಗಿತ್ತು. ನನ್ನವಳ ತೊಡೆಯ ಮೇಲೆ ಅಂತೂ ಇಂತೂ ಸುಖವಾಗಿ ನಿದ್ದೆ ಹೋಗಿದ್ದ ಪುಟ್ಟ. ಇನ್ನು ಆತನನ್ನು ಹಾಸಿಗೆಯ ಮೇಲೆ ಮಲಗಿಸಬೇಕು. ನಾನು ನಿಧಾನವಾಗಿ ಎದ್ದೆ. ಕಾಲು ಸಪ್ಪಳವಾಗದಂತೆ ಬೆಕ್ಕಿನ ಹೆಜ್ಜೆಯಲ್ಲಿ ನಡೆಯುತ್ತ ಬೆಡ್ ಮೇಲಿನ ಹಾಸಿಗೆ ಬಳಿ ಹೋಗಿ ಅದನ್ನು ಸರಿಪಡಿಸಿದೆ. ಮ್ಯಾಣಗುಬಟದ ಮೇಲೆ ಹೊಸ ಧುಬಟಿ ಹಾಕಿ, ಪುಟ್ಟನ ತಲೆ ಒಂದೇ ಕಡೆ ಬಾರದಂತೆ ಎರಡೂ ಕಡೆ ದಿಂಬು ಜೋಡಿಸಿದೆ.

1234ಮತ್ತೆ ಬಂದು ಎರಡೂ ಕೈಗಳಿಂದ ತುಂಬಾ ಜಾಗರೂಕನಾಗಿ ಪುಟ್ಟನನ್ನು ಹೂವಿನಂತೆ ಎತ್ತಿಕೊಂಡೆ. ನಿಧಾನವಾಗಿ ನಡೆಯುತ್ತ ನಾಜೂಕಿನಿಂದ ಹಾಸಿಗೆ ಮೇಲೆ ಮಲಗಿಸಿದೆ. ಅಷ್ಟರಲ್ಲಿ ನನ್ನವಳು ಹೊಸ ನ್ಯಾಪಿ ಸಿದ್ಧಪಡಿಸಿದ್ದಳು. ಅದನ್ನು ನಯವಾಗಿ ಪುಟ್ಟನಿಗೆ ತೊಡಿಸಿದೆ. ಆತನ ಮೈಮೇಲೆ ಧುಬಟಿ ಹೊದಿಸಿದೆ. ಮತ್ತೆ ಹತ್ತು ನಿಮಿಷ ತಟ್ಟಿ ತಟ್ಟಿ ಎಲ್ಲ ಸರಿಯಿದೆಯೆ ಎಂದು ನೋಡಿಕೊಂಡೆ. ಕೊಡೆಯ ಆಕಾರದಲ್ಲಿರುವ ಮಚ್ಛರ್ ದಾನಿಯನ್ನು ಬಿಡಿಸಿ ಪುಟ್ಟನ ಮೇಲಿಟ್ಟೆ. ಫ್ಯಾನ್ ಗಾಳಿ ಹಾಗೂ ದೀಪದ ಬೆಳಕು ನೇರವಾಗಿ ಹೊಡೆಯದಂತೆ ಅದರ ಮೇಲೆ ತೆಳುವಾದ ಬಟ್ಟೆಯೊಂದನ್ನು ಹೊದಿಸಿದೆ. ಪುಟ್ಟ ಗಾಢ ನಿದ್ದೆಗೆ ಜಾರಿದ್ದಾನೆ ಅಂದುಕೊಂಡೆವು.1234

ಇನ್ನೇನು ನಾನು ಹೊರಗೆ ಹೋಗಬೇಕು. ಅಷ್ಟರಲ್ಲಿ ನನಗೆ ತಡೆದುಕೊಳ್ಳಲಾಗದಂತಹ ಸೀನು ಬಂತು. ಅದೇ ಬೆಕ್ಕಿನ ಹೆಜ್ಜೆಯಲ್ಲಿ ಬಿರುಸಾಗಿ ನಡೆದರೂ, ರೂಮಿನಿಂದ ಹೊರಗೆ ಹೋಗಲು ಸಾಧ್ಯವಾಗಲಿಲ್ಲ. ಅಲ್ಲಿಯೇ ರೂಮಿನ ಮೂಲೆಗೆ ಹೋಗಿ ಸೀನಿಬಿಟ್ಟೆ. ಪುಟ್ಟ ಮತ್ತೆ ಎದ್ದು ಅಳಲಾರಂಭಿಸಿದ….

ಇಂದು ಲಾಲಾ ಹರದಯಾಳ್ ಜನುಮದಿನ…

freedom

Lala Hardayal was a revolutionary and a scholar who dedicated himself to the cause of Indian Freedom. He was the General Secretary of the Gadar party and was a prominent leader in the Gadar movement. He traveled to many parts of the world and helped to spread the freedom movement.

Lala was born on October 14, 1884 at Delhi. From the Government College of Lahore, he secured the Master Degree in English Literature. He pursued further education and was awarded a State Scholarship by the Government of India. As a result he went to study at Oxford, England. While in England he involved himself into the Indian struggle for freedom.

In England he came in close contacts with revolutionaries and reformers like C.F.Andrews, S.K.Verma and Bhai Permanand. He raised his voice against the British Oppression of Indians and resigned from his scholarship. He returned to India and dedicated himself to political activities in Lahore. He left his family life to adopt the life of a monk. During this period, he contributed articles to the Modern Review and The Punjabi and his association with the Revolutionaries became prominent. He left India for London in 1908 as the situation in India was very tense. In order to propagate the freedom movement further, Lala crossed the borders of Paris, West Indies and South America to reach USA.

In USA, he helped to organize the Gadar movement. Sensing trouble, the British Government pressed the U.S Government to arrest him. Hence he migrated to Germany and further to Sweden and England only to go back to USA where he passed away.

Apart from his political and patriotic contribution, Lala has contributed a lot in the field of Literature and earned his Doctorate on Buddhist Sanskrit Literature. He breathed his last in Philadelphia, USA on 4 th March 1939.

ಮಾಹಿತಿ/ಫೋಟೋ – ಇಂಟರ್ನೆಟ್

ಹುಡುಗನ ಬದುಕಿನ ಪುಟಗಳು…

100_1778

ಗಂಟೆಗೆ ಇಂತಿಷ್ಟು ವೇಗದಲ್ಲಿ ಇಂತಿಷ್ಟು ಎತ್ತರದಲ್ಲಿ ಹಾರುತ್ತಿರುವ ವಿಮಾನದಿಂದ ಇಂತಿಷ್ಟು ಭಾರದ ಕಲ್ಲನ್ನು ಎಸೆದರೆ ಅದು ಭೂಮಿಗೆ ಬೀಳಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬತಹ ಭೌತಶಾಸ್ತ್ರದ ಪ್ರಶ್ನೆಗಳು ನನ್ನ ಭೌತಿಕವನ್ನೇ ಅಲ್ಲಾಡಿಸಿದ್ದ ಸಮಯ. ಬಯಾಲಜಿ, ಗಣಿತ, ಕೆಮಿಸ್ಟ್ರಿಯಲ್ಲಿ ಹಿಡಿತವಿತ್ತಾದ್ದರೂ ನನ್ನ ನೈಜ ಬದುಕಿಗೆ ಜೀವಮಾನವಿಡಿ ಎಳ್ಳಷ್ಟೂ ಸಂಬಂಧವಿರದ ಗಣಿತದ ಸಮಸ್ಯೆಗಳನ್ನೂ, ರಸಾಯನಶಾಸ್ತ್ರದ ಸೂತ್ರಗಳನ್ನು ಅಧ್ಯಯನ ಮಾಡುವುದರಲ್ಲಿ ಯಾವುದೇ ಒಲವಿರಲಿಲ್ಲ. ನಾಟಕ, ಏಕಪಾತ್ರಾಭಿನಯ, ಹಾಡು, ನೃತ್ಯ, ಆಧ್ಯಾತ್ಮ, ಚರ್ಚೆ/ಭಾಷಣ ಸ್ಪರ್ಧೆ, ಸ್ಕೇಟಿಂಗ್, ಟ್ರೆಕ್ಕಿಂಗ್, ಸೈಕ್ಲಿಂಗ್, ಪ್ಲಾಂಚೆಟ್,  ಹೀಗೆ ಛಪ್ಪನ್ನೈವತ್ತಾರು ಹವ್ಯಾಸಗಳು ಮಾತ್ರ ಎರ್ರಾಬಿರ್ರಿ ಮೈದುಂಬಿಕೊಂಡಿದ್ದವು. ಪಿಯುಸಿಯಲ್ಲಿ ಸೈನ್ಸ್ ತೆಗೆದುಕೊಂಡು ಇದನ್ನೆಲ್ಲ ಮೇಂಟೇನ್ ಮಾಡುವುದು, ರಾಜಕಾರಣಿಯಾಗಿದ್ದು ಪ್ರಾಮಾಣಿಕನಾಗಿರುವುದಷ್ಟೇ ಕಷ್ಟವಾಗಿತ್ತು. ಇಂತಿರುವಾಗ, ಕಾಲನೆಂಬ ಕಾಲನು ಕೊಂಚವೂ ತಡಮಾಡದೆ, ಏಪ್ರಿಲ್ ತಿಂಗಳನ್ನು ಧುತ್ತಂತ ಎದುರಿಗಿಟ್ಟು, ‘ಪರೀಕ್ಷೆ ಎದುರಿಸು ಮಗನೆ’ ಎಂದುಬಿಟ್ಟನು.

ಪರೀಕ್ಷೆ ಎದುರಿಸಿದ್ದರೆ ವಿದ್ಯಾದೇವತೆ ಸರಸ್ವತಿಯಾಣೆಗೂ ದಡ ಸೇರುವುದು ಕಷ್ಟವೇನಾಗಿರಲಿಲ್ಲ. ಆದರೆ, ಇನ್ನೊಂದು ವರ್ಷ ಅದೇ ಸೈನ್ಸನ್ನು ಓದುವಷ್ಟು ತಾಳ್ಮೆ, ಆಸಕ್ತಿ ಸೂಜಿಮೊನೆಯಷ್ಟೂ ಇರಲಿಲ್ಲ. ಈ ಮಧ್ಯೆ ಬಿಳಿಬಿಳಿ ಬಣ್ಣದ ನಾಜೂಕು ಕಟಿಯ ಕ್ಲಾಸ್ ಮೇಟ್ ಹಾಗೂ ನಾನಾರು, ಎಲ್ಲಿಂದ ಬಂದೆ, ಎಲ್ಲಿ ಹೋಗುವೆ, ಬ್ರಹ್ಮಚರ್ಯವೇ ಜೀವನ, ಮದುವೆಯಾಗುವುದೇ ಮರಣ ಎಂಬ ಆಧ್ಯಾತ್ಮಿಕ ವಿಚಾರಗಳ ನಡುವೆ ನುಜ್ಜುಗುಜ್ಜಾಗಿ ಪರೀಕ್ಷೆ ತಪ್ಪಿಸಿಕೊಳ್ಳಲು ಪರೀಕ್ಷೆಯ ದಿನದಂದು ಪರೀಕ್ಷೆಗೆ ಹೋಗುವುದಾಗಿ ಹೇಳಿ ಅಮ್ಮನಿಗೆ ನಮಸ್ಕರಿಸಿ ಮನೆಯಿಂದ ಎಸ್ಕೇಪ್ ಆಗಿಬಿಟ್ಟೆ.

ಮೇಯಲು ಬಿಟ್ಟ ಎಮ್ಮೆ ಸಂಜೆಯಾಗುತ್ತಿದ್ದಂತೆ ವಿಧೇಯವಾಗಿ ಕೊಟ್ಟಿಗೆಗೆ ಹಿಂತಿರುವಂತೆ ಪ್ರತಿನಿತ್ಯ ಮನೆಗೆ ಹಿಂತಿರುಗುತ್ತಿದ್ದ ನಾನು ರಾತ್ರಿ ಹತ್ತಾದರೂ ಪತ್ತೆಯಾಗದಿದ್ದಾಗ ಅಮ್ಮ ಕಂಗಾಲಾಗಿ ನೆಂಟರಿಷ್ಟರಿಗೆಲ್ಲ ವಿಷಯ ತಿಳಿಸಿ ಎಲ್ಲೆಡೆ ಹುಡುಕಿದ್ದೇ ಹುಡುಕಿದ್ದು. ಅಪ್ಪ ಬೇರೆ, ನನ್ನ ಅಜ್ಜನ ಮನೆಗೆ ಹೋಗಿದ್ದ. ಇತ್ತ ನಾನು ತಲೆಯಲ್ಲಿ ಬಿಲಿಯಾಂತರ ವಿಚಾರಗಳನ್ನು ತುಂಬಿಕೊಂಡು ಬಸ್ ಹತ್ತಿ ಸೀದಾ ಹೋಗಿದ್ದು ನನ್ನ ಅಜ್ಜನ ಮನೆಗೇ. ಅಲ್ಲಾಗಲೇ ಸ್ವಂತ ಕೆಲಸ ಮಾಡಿಕೊಂಡಿದ್ದ ನನ್ನ ಪ್ರೀತಿಯ ಅಣ್ಣ ಹಾಗೂ ವಾತ್ಸಲ್ಯಮಯಿ ಅಪ್ಪ (ಹೌದು. ನನ್ನ ಅಪ್ಪ ನಿಜವಾಗಲೂ ವಾತ್ಸಲ್ಯಮಯಿ) ನನ್ನನ್ನು ರಿಸೀವ್ ಮಾಡಿಕೊಂಡು ಮೊದಲು ಮಾಡಿದ ಕೆಲಸ…..ನನಗೆ ಧೈರ್ಯ ತುಂಬಿದ್ದು.

ಆಕ್ಚುಲಿ, ಸಮಸ್ಯೆಯ ಪ್ರಸವವಾಗಿದ್ದು ಸೈನ್ಸ್ ಆಯ್ದುಕೊಂಡದ್ದರಿಂದ. ಎಲ್ಲರೂ ಮಾಡುವ ತಪ್ಪಿನಂತೆ ನಾನೂ ಗೆಳೆಯರ ಗುಂಪಿನಲ್ಲಿ ಗೋವಿಂದನಾಗಿ, ಭೂತ, ವರ್ತಮಾನ ಹಾಗೂ ಭವಿಷ್ಯತ್ ಕಾಲಗಳಲ್ಲಿಯೂ ಯುನಿವರ್ಸಲ್ ಟ್ರೂತ್ ಆಗಿರುವ ವಿಜ್ಞಾನ ಶಾಖೆಯನ್ನು ಆಯ್ದುಕೊಂಡಿರುವವರು ಉತ್ತಮರು, ಕಾಮರ್ಸ್ ಮಧ್ಯಮರು ಹಾಗೂ ಆರ್ಟ್ಸ್ ಅಧಮರು ಎಂಬ ಪ್ರಭಾವಳಿಗೆ ಆಕರ್ಷಿತನಾಗಿ ಸೈನ್ಸ್ ತೆಗೆದುಕೊಂಡಿದ್ದೆ. ಮೊದಲ ಹೊಡೆತ ಅಲ್ಲೇ ಬಿದ್ದಿತ್ತು.

ಮಗನ ಘನಂದಾರಿ ಕೆಲಸ ಅಪ್ಪ-ಅಮ್ಮನಲ್ಲೂ ಆತಂಕ ಉಂಟುಮಾಡಿತ್ತು. ಮುಂದೇನು ಎಂದು ಎಲ್ಲರಲ್ಲಿ ಕೊರೆಯುತ್ತಿದ್ದರೂ, ಯಾರೂ ಕೂಡ ನನ್ನನ್ನು ಪ್ರಶ್ನಿಸುತ್ತಿರಲಿಲ್ಲ.

ಆದರೆ ಮುಂದಿನ ಓದಿನ ದಿಕ್ಕನ್ನು ಸೂಚಿಸಿದ್ದು ನನ್ನದೇ ವಿಜ್ಞಾನ ಕಾಲೇಜಿನ ಪ್ರಿನ್ಸಿಪಾಲ್ ಗಲಗಲಿ ಎಂಬುವವರು. ಅವರ ಸಲಹೆಯಂತೆ ಆರ್ಟ್ಸ್ ಶಾಖೆಗೆ ಮತ್ತೆ ಮೊದಲ ವರ್ಷದಿಂದ ಸೇರಿ ನನ್ನ ಪ್ರಿಯ ವಿಷಯಗಳಾದ ಇತಿಹಾಸ, ಸೈಕಾಲಜಿ, ಲಾಜಿಕ್ ಆಯ್ದುಕೊಂಡು ಶಿಕ್ಷಣ ಮುಂದುವರೆಸಿದೆ. ಪಿಯುಸಿ ಎರಡನೇ ವರ್ಷದಲ್ಲಿ ಕಾಲೇಜಿಗೆ ಎರಡನೇ ರಾಂಕ್ ಗಳಿಸಿದೆ. ಎಂ ಎಸ್ ಡಬ್ಲ್ಯೂ ಆಸಕ್ತಿಯಿಂದ ಓದಿದೆ. ನನ್ನ ಎಲ್ಲ ಹವ್ಯಾಸಗಳನ್ನು ಮುಂದುವರೆಸುವುದೂ ಸಾಧ್ಯವಾಯಿತು. ಇದೀಗ ಉತ್ತರ ಕರ್ನಾಟಕದ ಎನ್ ಜಿ ಓ ಒಂದರಲ್ಲಿ ವ್ಯವಸ್ಥಾಪಕನಾಗಿ ದುಡಿಯುತ್ತ ಹಣ, ಕೀರ್ತಿ ಹಾಗೂ ಮನಸ್ಸಿಗೆ ತೃಪ್ತಿಯನ್ನೂ ಕಂಡುಕೊಂಡಿದ್ದೇನೆ.

‘ಮುಕ್ತ ಮುಕ್ತ’ ದ ಶಾಂಭವಿಗೆ ಬೇಕಿತ್ತೆ?

ಸುಧಾ ವಾರಪತ್ರಿಕೆಯಲ್ಲಿನ ಜಾಣರ ಪೆಟ್ಟಿಗೆ ಅಂಕಣ ಟಿವಿ ಲೋಕದ ವಿಮರ್ಶೆಗೆ ಮೀಸಲು. ಮುಕ್ತ ಮುಕ್ತ ಧಾರಾವಾಹಿಯ ಪಾತ್ರಧಾರಿ ಶಾಂಭವಿ (ಸೀತಾ ಕೋಟೆ) ಕುರಿತಂತೆ ಅಕ್ಟೋಬರ್ 1 ರ ಸಂಚಿಕೆಯಲ್ಲಿ ಪ್ರಕಟವಾಗಿರುವ ಅಭಿಪ್ರಾಯ ಹಾಗೂ ಅಕ್ಟೋಬರ್ 15  ಸಂಚಿಕೆಯಲ್ಲಿ ಪ್ರಕಟವಾಗಿರುವ ಆ ಪತ್ರಕ್ಕೆ ಬಂದಿರುವ ಪ್ರತಿಕ್ರಿಯೆ ಇಲ್ಲಿವೆ.

shambhavi

ಈ ಟಿವಿಯ ‘ಮುಕ್ತ ಮುಕ್ತ’ದಲ್ಲಿ ಶಾಂಭವಿ ಪಾತ್ರದಲ್ಲಿ ಅಭಿನಯಿಸುತ್ತಿರುವ ಸೀತಾ ಕೋಟೆಯವರನ್ನು ಅವರ ಹೆಸರಿನಿಂದ ಕರೆದರೆ ಯಾರೂ ಗುರುತಿಸಲಾರರು. ಆ ಪಾತ್ರದೊಂದಿಗೆ ಅಷ್ಟೊಂದು ತಾದಾತ್ಮ್ಯ ಅವರದು. ಬಹಳ ಗಟ್ಟಿಯಾದ ಪಾತ್ರ ಅದು. ಅಂತಹ ಪಾತ್ರ ಸಿಕ್ಕಿದ್ದಕ್ಕೆ ಸೀತಾ ಕೋಟೆಯವರು ಸೀತಾರಾಂಗೆ ಎಷ್ಟು ಋಣಿಯಾದರೂ ಸಾಲದು. ಮುಕ್ತ ಮುಗಿಯುವವರೆಗೂ ಸೀತಾ ಕೋಟೆ ಮತ್ತೊಂದರಲ್ಲಿ ಅಭಿನಯಿಸಬಾರದಿತ್ತು. ಆದರೆ ಜೋಗಳುದಲ್ಲಿ ಅಭಿನಯಿಸುವ ಮೂಲಕ ಶಾಂಭವಿಯ ಇಮೇಜನ್ನು ಕಡಿಮೆ ಮಾಡಿಕೊಂಡಿದ್ದಾರೆ. ಮತ್ತೊಂದರಲ್ಲಿ ನಟಿಸುವ ತುರ್ತು ಅವರಿಗೇನಿತ್ತು. ಹೇಳಿ-ಕೇಳಿ ಅವರೊಬ್ಬ ನೃತ್ಯಗಾರ್ತಿ. ಉಳಿದ ಸಮಸ್ಯೆ ಕಳೆಯಲು ಅವರಿಗೆ ಸಮಸ್ಯೆ ಏನೂ ಇರಲಿಲ್ಲ. ಈಗ ದುಡಿಯುತ್ತಿರುವುದು ಸಾಲದೆ? ದುಡ್ಡಿನ ಆಸೆಗೆ ಹಾಗೆ ಮಾಡುತ್ತಿರಬಹುದೆ?

-ಜಿ. ರೇಣುಕಾ, ಚಿತ್ರದುರ್ಗ.

——————————————————

ಅ. 1 ರ ಜಾಣರಪೆಟ್ಟಿಗೆಯಲ್ಲಿ ಪ್ರಕಟವಾಗಿರುವ ಜಿ. ರೇಣುಕಾ ಅವರ ಶಾಂಭವಿಗೆ ಬೇಕಿತ್ತೆ ಪತ್ರದಲ್ಲಿ ಸೀತಾ ಕೋಟೆಯವರು ಶಾಂಭವಿ ಪಾತ್ರ ಮಾತ್ರ ಮಾಡಬೇಕು. ಮತ್ಯಾವುದೂ ಬೇಡ ಎಂಬ ಅಭಿಪ್ರಾಯಕ್ಕೆ ನನ್ನ ಪ್ರತಿಕ್ರಿಯೆ. ಪ್ರತಿಯೊಬ್ಬ ಕಲಾವಿದನಿಗೂ ಆತನದೇ/ಆಕೆಯದೇ ವೈಯುಕ್ತಿಕ ಬದುಕು ಎಂಬುದೊಂದಿರುತ್ತದೆ. ತೆರೆಯ ಮೇಲಿನ ಬದುಕಿಗೂ, ವಾಸ್ತವದ ಬದುಕಿಗೂ ಸೂಜಿ ಮೊನೆಯಷ್ಟೂ ಸಂಬಂಧವಿರುವುದಿಲ್ಲ. ತೆರೆಯ ಮೇಲೆ ರಾಜನಾಗಿ ಮೆರೆಯುವ ಕಲಾವಿದ, ವಾಸ್ತವದಲ್ಲಿ ಎರಡೊಪ್ಪತ್ತು ಊಟಕ್ಕೂ ಗತಿ ಇಲ್ಲದವನಾಗಿರುತ್ತಾನೆ. ಇಂತಹ ಸಂದರ್ಭದಲ್ಲಿ ಕಲಾವಿದನೊಬ್ಬ ಹೊಟ್ಟೆಪಾಡಿಗಾಗಿ ಹಲವು ಧಾರಾವಾಹಿಗಳಲ್ಲಿ ನಟಿಸಿದರೆ ತಪ್ಪೇನು

ಕಲಾವಿದರು ಕೋಟ್ಯಂತರ ರೂಪಾಯಿ ದುಡಿಯುತ್ತಾರೆ ಎಂಬ ಭ್ರಮೆ ಬೇಡ. ಜನಪ್ರಿಯತೆ ಎಂಬುದು ನೋಡಲು, ಕೇಳಲಷ್ಟೇ ಚಂದ. ಆದರೆ ಅದು ನಮ್ಮ ಡೈನಿಂಗ್ ಟೇಬಲ್ ಮೇಲೆ ಊಟವನ್ನೇನು ಬಡಿಸುವುದಿಲ್ಲ. ಕೊನೆಯ ಮಾತು…ಪಾತ್ರ ಗಟ್ಟಿಯಿದೆ ಎಂದು ಒಂದೇ ಧಾರಾವಾಹಿಗೆ ಅಂಟಿಕೊಂಡರೆ ಕಲಾವಿದ ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆ ಹಾಕಿಕೊಂಡು ಮಲಗಬೇಕಷ್ಟೇ.

– ನೊಂದ ಕಿರುತೆರೆ ಕಲಾವಿದ, ಬೆಂಗಳೂರು.

—————————————————

ಶಾಂಭವಿಗೆ ಬೇಕಿತ್ತೆ ಎಂಬ ಜಾಣರೊಬ್ಬರ ಟೀಕೆಗೆ ನನ್ನ ಅಭಿಪ್ರಾಯ. ಪ್ರತಿಯೊಬ್ಬ ಕಲಾವಿದರ ವೃತ್ತಿಯೇ ನಟನೆ. ಒಬ್ಬ ಪ್ರತಿಭಾವಂತ ಕಲಾವಿದೆ ತನಗೆ ಯಾವುದೇ ಪಾತ್ರ ನೀಡಿದರೂ ಅದನ್ನು ಅತ್ಯಂತ ಸಹಜವಾಗಿ ಸಮರ್ಥವಾಗಿ ನಿಭಾಯಿಸಬಲ್ಲಳು. ಇಂತಹ ವಿಭಿನ್ನ ಪಾತ್ರಗಳಲ್ಲಿ ನಟಿಸುವುದರಿಂದ ಆಕೆಯ ಇಮೇಜ್ ಹೆಚ್ಚುತ್ತದೆಯೆ ಹೊರತು ಇದರಿಂದ ಆಕೆಯ ಯಶಸ್ಸಿಗೆ ಹಾನಿಯೇನೂ ಇಲ್ಲ. ಅಲ್ಲದೆ ತನಗೆ ಸಿಗುವ ಅವಕಾಶಗಳನ್ನು ಸ್ವೀಕರಿಸುವುದು ಅಥವಾ ತಿರಸ್ಕರಿಸುವುದು ಆಕೆಯ ವೈಯುಕ್ತಿಕ ವಿಷಯ. ಇದನ್ನು ಪ್ರಶ್ನಿಸುವ ಅಧಿಕಾರ ಯಾರಿಗೂ ಇರುವುದಿಲ್ಲ.

– ಶಾಂತಾ ಬೆಂಗಳೂರು.

ನಾ ಚಿಕ್ಕವನಾಗಿದ್ದಾಗಿನಿಂದಲೂ ಸಲ್ಮಾನ್ ಖಾನ್…

sughosh kid

ಬಲದಿಂದ ಮೊದಲನೆಯವನು, ನಾಯಿಯ ಪಕ್ಕ ಅದರ ಕಿವಿ ಹಿಡಿದುಕೊಂಡು ಬರಿಮೈಯಲ್ಲಿ ನಿಂತಿರುವವನು ನಾನು.

ಕಲಾವಿದರಿಗೆ ಎಂತೆಂತಹ ಕಷ್ಟಗಳಿರುತ್ತವೆ ಗೊತ್ತಾ?

100_3016

ಮೊನ್ನೆ ಶೂಟಿಂಗ್ ನಲ್ಲಿದ್ದಾಗ ಸಹ ಕಲಾವಿದರೊಬ್ಬರು ಈ ಘಟನೆಯನ್ನು ಹೇಳುತ್ತಿದ್ದರು.

ಬೆಳಿಗ್ಗೆಯಿಂದಲೇ ಶೂಟಿಂಗ್ ಶೆಡ್ಯೂಲ್ ಆಗಿತ್ತು. ಆಗ ಪ್ರಮುಖ ಕಲಾವಿದರೊಬ್ಬರು ಪದೇಪದೇ ಐದು ಹತ್ತು ನಿಮಿಷಗಳ ಕಾಲ ಸೆಟ್ ನಿಂದ ಕಣ್ಮರೆಯಾಗುತ್ತಿದ್ದರು. ಅವರ ಹೆಸರು ಕರೆದಾಕ್ಷಣ ಬರುವ, ಶೂಟಿಂಗ್ ಮಧ್ಯದಲ್ಲಿ ಸಿಗರೇಟು ಸೇದುವ ಅಭ್ಯಾಸವಿಲ್ಲದ ಅವರು ಅಂದು ಮಾತ್ರ ಹೀಗೆ ಪದೇ ಪದೇ ಮಾಯವಾಗುತ್ತಿದ್ದು ಆಶ್ಚರ್ಯತರಿಸುತ್ತಿತ್ತು. ಅವರು ಕಣ್ಮರೆಯಾದಗಲೆಲ್ಲ ಸೌಂಡ್ ರಿಕಾರ್ಡಿಸ್ಟ್ ಗೆ ಜುಳು ಜುಳು ಸದ್ದು ಬೇರೆ. ಡೈರೆಕ್ಟರ್ ಇನ್ನೇನು ಆಕ್ಷನ್ ಹೇಳಬೇಕು ಅನ್ನುವಷ್ಟರಲ್ಲಿ ಇವರು ಮಾಯವಾಗುತ್ತಿದ್ದರು. ಸುಮಾರು ನೋಡಿದ ಡೈರೆಕ್ಟರ್ ಕೊನೆಗೆ ಕೇಳಿದರು. “ಏನ್ ಸಾರ್? ಪದೇ ಪದೇ ಎಲ್ಲಿ ಹೋಗುತ್ತಿದ್ದೀರಿ? ಶಾಟ್ ನಡೀತಿರಬೇಕಾದರೆ ನೀವು ಹೀಗೆ ಮಾಡಿದರೆ ಹೇಗೆ? ಇಂದು ಏನಿಲ್ಲವೆಂದರೂ ಆರು ಸೀನ್ ಮುಗಿಸಬೇಕಿದೆ” ಎಂದು ಅಸಮಧಾನ ವ್ಯಕ್ತಪಡಿಸಿದರು.

ಅದಕ್ಕೆ ಆ ಕಲಾವಿದರು ಹೇಳಿದ್ದು.

“ಸಾರಿ ಸಾರ್. ಒಂಚೂರು ಹೆಲ್ತ್ ಪ್ರಾಬ್ಲಮ್. ನಿನ್ನೆ ರಾತ್ರಿ ಹನ್ನೊಂದೂವರೆ ಸುಮಾರಿಗೆ ಮೆಜೆಸ್ಟಿಕ್ ಏರಿಯಾದಲ್ಲಿ ನಡೆದುಕೊಂಡು ಹೋಗುತ್ತಿದ್ದೆ. ಆಗ ನನ್ನ ಹಿಂದಿನಿಂದ ಓಡಿಬಂದ ಹುಡುಗನೊಬ್ಬ ಸಾರ್ ನಮ್ ಓನರ್ ನಿಮ್ಮನ್ನ ಕರೀತಾವ್ರೆ ಎಂದು ನನ್ನ ಕೈಹಿಡಿದುಕೊಂಡು ಸಮೀಪದ ಹೋಟೆಲ್ ಒಂದಕ್ಕೆ ಕರೆದುಕೊಂಡು ಹೋದ. ಆ ಹೋಟೆಲ್ ಮಾಲೀಕ ನನ್ನ ಹಲವಾರು ಸೀರಿಯಲ್ ಗಳನ್ನು ನೋಡಿದ್ದಾನೆ. ಕಿರುತೆರೆ ಕಲಾವಿದರ ಅಪ್ರತಿಮ ಭಕ್ತನಂತೆ. ನಾನು ಹೋಟೆಲ್ ಗೆ ಬರುತ್ತಲೆ ನನ್ನನ್ನು ಅಪ್ಪಿಕೊಂಡು, ನಮಸ್ಕಾರ ಮಾಡಿ ಅವನ ಹೋಟೆಲ್ ನಲ್ಲಿಯೇ ಊಟ ಮಾಡಿಕೊಂಡು ಹೋಗುವಂತೆ ಒತ್ತಾಯಿಸಿದ. ನನ್ನದೂ ಊಟವಾಗಿರಲಿಲ್ಲ. ಸರಿ ಎಂದು ಊಟಕ್ಕೆ ಕುಂತೆ. ಅದೇ ನಾ ಮಾಡಿದ ತಪ್ಪು ನೋಡಿ. ನಮ್ಮ ಹೋಟೆಲ್ ನಲ್ಲಿ ಅದು ಸ್ಪೆಷಲ್, ನಮ್ಮ ಹೋಟೆಲ್ ನಲ್ಲಿ ಇದು ಸ್ಪೆಷಲ್, ಈ ಐಟಮ್ ಇಡೀ ಬೆಂಗಳೂರಿನಲ್ಲಿ ನಾವೊಬ್ಬರೇ ಮಾಡೋದು, ಈ ಐಟಮ್ ನೋಡಿ ಇದರ ಮಸಾಲೆ ಕೊಚ್ಚಿಯಿಂದ ತರಿಸಿರುವುದು ಎಂದು ಬಣ್ಣಿಸುತ್ತ ಒಂದಾದ ಮೇಲೊಂದರಂತೆ ವೆಜ್ಜು, ನಾನ್ವೆಜ್ಜು ಎಲ್ಲ ಬಡಿಸುತ್ತ ಹೋದ. ಸರಿಯಾಗಿ ತಿಂದುಬಿಟ್ಟೆ. ಆಗ ರಾತ್ರಿ 12.30. ಆತನದೂ ಬಾಗಿಲು ಮುಚ್ಚುವ ಸಮಯ. ಆತ ಕೂಡ ಬಹುಶಃ ಅಂದು ಉಳಿದ ಎಲ್ಲ ಐಟಮ್ ಗಳನ್ನು ನನ್ನೆದರು ಬಡಿಸಿದ್ದ ಎಂದು ಕಾಣುತ್ತೆ. ಪ್ರೀತಿಗೆ ಪ್ರೀತಿಯೂ ತೋರಿಸಿದ ಹಾಗಾಯಿತು, ಐಟಮ್ ಗಳೂ ಖಾಲಿಯಾದಾವು ಎಂದಿರಬೇಕು. ಈಗ ನೋಡಿ. ಬೆಳಿಗ್ಗೆಯಿಂದ ಹೊಟ್ಟೆ ಅಪ್ ಸೆಟ್ ಆಗಿದೆ. ಸ್ಪಲ್ಪ ಎಡ್ಜಸ್ಟ್ ಮಾಡ್ಕೊಳ್ಳಿ ಸಾರ್….”

ಸೆಟ್ ನಲ್ಲಿದ್ದವೆರಲ್ಲ ಬಿದ್ದು ಬಿದ್ದು ನಕ್ಕರಂತೆ.

ಮ್ಯಾಂವ್ ಮ್ಯಾಂವ್ ಬೆಕ್ಕೆ, ಮುದ್ದಿನ ಸೊಕ್ಕೆ

mmm 036ಚಿತ್ರ – ನಾನು

ಮಾಡೆಲ್ – ಚುಕ್ಕಿ (ನಾಲ್ಕು ತಿಂಗಳಿಗೆ ಒಮ್ಮೆಯಂತೆ, ಒಂದು ಬಾರಿಗೆ ಮೂರರಂತೆ ಮರಿ ಹಾಕಿ ವರ್ಷಪೂರ್ತಿ ಬಿಝಿ ಇರುವವಳು ಇವಳು…)

ಭಗವಂತ ಪಿನ್ ಕೊಟ್ಟ ಸೇಫ್ಟಿಗಂತ….

female

ಮಹಿಳೆಯರು ಬಸ್ ಗಳಲ್ಲಿ ಒಂಟಿಯಾಗಿ ಪ್ರಯಾಣಿಸುವಾಗ ಅಂಗಚೇಷ್ಟೇ ಮಾಡಿ ಕಾಟ ಕೊಡುವ ಸಭ್ಯ ಪುರುಷರು ಎಲ್ಲಕಡೆಗೂ ಇರುವವರೇ. ರಾತ್ರಿ ಪ್ರಯಾಣಿಸುವಾಗಲಂತೂ ಇವರ ಕೈಯಲ್ಲಿ ಸಿಕ್ಕಿಹಾಕಿಕೊಂಡರೆ ಆ ಮಹಿಳೆಗಾಗುವ ದೈಹಿಕ, ಮಾನಸಿಕ ಕಿರುಕುಳವಂತೂ ಹೇಳತೀರದಷ್ಟು. ಸಾಮಾನ್ಯವಾಗಿ ಮಧ್ಯವಯಸ್ಸು ದಾಟುತ್ತಿರುವ ಪುರುಷರು ಇಂತಹ ದುಸ್ಸಾಹಸಕ್ಕೆ ಕೈಹಾಕುವುದು ಹೆಚ್ಚು. ಇಂತಹ ಪುರುಷನೊಬ್ಬನಿಂದ ಪಾರಾದ ನನ್ನ ಸಂಬಂಧಿಕಳೊಬ್ಬಳ ಅನುಭವ ಇಲ್ಲಿದೆ.

ಓವರ್ ಟು ನನ್ನ ಸಂಬಂಧಿಕಳು…..

ಮಂಗಳೂರಿನಿಂದ ಉಡುಪಿಗೆ ಹೊರಟಿದ್ದೆ. ಹೊರಡುವಾಗ ಖಾಲಿಯೇ ಇದ್ದ ಬಸ್, ಸ್ಟಾಪ್ ಗಳು ಕಳೆದಂತೆಲ್ಲ ಜನರಿಂದ ತುಂಬತೊಡಗಿತು. ಇಬ್ಬರು ಕೂರುವ ಸೀಟ್ ನಲ್ಲಿ ನಾನು ಕುಳಿತಿದ್ದೆ. ನನ್ನ ಪಕ್ಕದಲ್ಲಿ ಸುಮಾರು 45 ವಯಸ್ಸಿನ ವ್ಯಕ್ತಿಯೊಬ್ಬ ಬಂದು ಕುಳಿತ. ಸ್ಪಲ್ಪ ಸಮಯ ಕಳೆದಿರಬೇಕು. ಆತ ನಿದ್ದೆಗೆ ಜಾರಿದ. ನಾನು ಕಿಟಕಿಯಿಂದ ಆಚೆ ನೋಡುತ್ತ ಕುಳಿತಿದ್ದೆ. ನಿಧಾನವಾಗಿ ಆತನ ತಲೆ ನನ್ನ ಭುಜದ ಮೇಲೆ ವಾಲಲಾರಂಭಿಸಿತು. ನನಗಿಂತ ತುಂಬ ಹಿರಿಯನಾದ್ದರಿಂದ ಹಾಗೂ ತುಂಬ ಸಭ್ಯನಂತೆ ಕಾಣುತ್ತಿದ್ದುದರಿಂದ ನಾನೂ ಸುಮ್ಮನಿದ್ದೆ. ಆದರೆ ನಂತರ ಈ ವಾಲಿಕೆ ತುಸು ಅತೀ ಎನ್ನಿಸುವಷ್ಟು ಹೆಚ್ಚಾಯಿತು. ಕೈಯಿಂದ ಆತನ ತಲೆಯನ್ನು ಸರಿಸಿದೆ. ಸ್ಪಲ್ಪ ಸಮಯ ಸರಿಯಾಗಿದ್ದ ಆತನ ತಲೆ ಮತ್ತೆ ನನ್ನ ಭುಜದ ಮೇಲೆ ವಾಲಿತು. ಈ ಬಾರಿ ಆತನ ದೇಹ ಕೂಡ ಸ್ವಲ್ಪ ವಾಲತೊಡಗಿತ್ತು. ನನಗೆ ಕಿರಿಕಿರಿ ಆಗಲಾರಂಭಿಸಿತು. ಎತ್ತಲೋ ನೋಡುತ್ತಿದ್ದ ನಾನು ಆತನ ಕಡೆ ಛಕ್ಕನೆ ತಿರುಗಿದಾಗ ಆಸಾಮಿ ವಾರೆಗಣ್ಣಿನಿಂದ ನನ್ನನ್ನು ನೋಡುತ್ತಿರುವುದು ಗಮನಕ್ಕೆ ಬಂತು. ಓಹೋ ಇದು ಸಾಮಾನ್ಯವಾದ ನಿದ್ದೆಯಲ್ಲ ಎಂದು ಫಕ್ಕನೆ ಹೊಳೆಯಿತು. ಈ ಬಾರಿ ಸ್ಪಲ್ಪ ರಫ್ ಆಗಿಯೇ ಆತನ ತಲೆ ಸರಿಸಿದೆ. ನಿದ್ದೆಯಿಂದ ಎದ್ದವರಂತೆ ನಟಿಸುತ್ತ ನನಗೆ ಬಸ್ ನಲ್ಲಿ ಮಲಗಿ ಪ್ರಯಾಣಿಸುವುದೇ ಅಭ್ಯಾಸ ಎಂದು ಭಾರೀ ಸಾಭ್ಯಸ್ತನಂತೆ ಪೋಸು ಕೊಡುತ್ತ ಮತ್ತೆ ತಲೆ ವಾಲಿಸಲಾರಂಭಿಸಿದ.

ಆಸಾಮಿಗೆ ಚಿಕಿತ್ಸೆ ಅನಿವಾರ್ಯವಾಗಿತ್ತು. ಬಳೆಗಳಿಗೆ ಸಿಕ್ಕಿಸಿಕೊಂಡಿದ್ದ ಸೇಫ್ಟಿ ಪಿನ್ ತೆಗೆದೆ. ನಿಧಾನವಾಗಿ ನನ್ನ ಭುಜದ ಬಳಿ ಹಿಡಿದೆ. ಇದನ್ನು ಗಮನಿಸದ ಆತ ಟರ್ನಿಂಗ್ ಒಂದರಲ್ಲಿ ತುಸು ಜೋರಾಗಿಯೇ ತಲೆ ವಾಲಿಸಿದ. ಕಿವಿಯ ಪಕ್ಕ ಕಚಕ್ ಎಂದು ಚುಚ್ಚಿತು ನೋಡಿ…ಪಿನ್ನು, ಕೈಯಿಂದ ನೀವಿಕೊಳ್ಳುತ್ತ ಸಿಟ್ಟಿನಿಂದ “ಇದೇನಮ್ಮ ಮಾಡುತ್ತೀದ್ದೀಯಾ?” ಎಂದು ಕೇಳಿದ.

“ನನಗೆ ಬಸ್ ನಲ್ಲಿ ಹೀಗೆ ಪಿನ್ ಹಿಡಿದುಕೊಂಡೇ ಪ್ರಯಾಣಿಸುವುದು ಅಭ್ಯಾಸ” ಎಂದೆ. ಮುಂದೆ ಆತನ ತಲೆ ನನ್ನ ಭುಜದ ಮೇಲೆ ವಾಲುವುದಿರಲಿ, ಆತ ನಿದ್ದೆ ಮಾಡಿದ್ದರೆ ಕೇಳಿ

ಕ್ಯಾಮೆರಾ ಕಣ್ಣಲ್ಲಿ ಕೊಪ್ಪದ ಮಳೆಗಾಲ

mmm 006ನಮ್ಮ ತೆಂಗಿನ ತೋಟ

mmm 010ಮನೆಯ ಅಂಗಳದ ನೋಟ….

mmm 012ನಮ್ಮ ಮನೆಗೆ ಬರಬೇಕಿದ್ದರೆ ಇದೇ ದಾರಿ…

mmm 022ಮನೆಯ ಪಂಪ್ ಹೌಸ್…ಮುಸುರೆ ಹಳ್ಳದಿಂದ ಜಮೀನಿಗೆ ನೀರು ಪೂರೈಕೆ…

mmm 026ತುಂಬಿ ಹರಿಯುತ್ತಿರುವ ಮುಸುರೆ ಹಳ್ಳ…ಅಪ್ಪ ಹೇಳುವಂತೆ ಇದು ಬತ್ತಿದ್ದನ್ನು ಅವರೆಂದೂ ಕಂಡಿಲ್ಲ…

mmm 064ಮನೆಯ ಹತ್ತಿರದ ಪ್ರಕೃತಿ ಸೌಂದರ್ಯ….

mmm 065ಕೊಪ್ಪದ ಮೇಲ್ ಮಂಜು….

mmm 066ಕೊಪ್ಪದ ಎಸ್ ಟಿ ಡಿ ಟವರ್ ಬೆಟ್ಟ….

mmm 069ಎಲ್ಲೆಲ್ಲಿ ನೋಡಲಿ ಹಸಿರನ್ನೇ ಕಾಣುವೆ….

mmm 070ಹಸಿರಿನ ವನಸಿರಿಗೆ ಒಲಿದು…

mmm 074

ಉತ್ರಿ, ಬಿಳಿ ಜೋಳ ಬಿತ್ರಿ, ನಾ ಬರದಿದ್ರ ನೀವ್ ಸತ್ರಿ…

mmm 077ಹಸಿರನ್ನು ಕಾಪಾಡುವ ಬೆರ್ಚಪ್ಪ….

mmm 078ಅಡಿಕೆಯ ತೋಟ…

mmm 079ಗದ್ದೆಯ ಪಕ್ಕದ ಹಾದಿ….

ಪತ್ರಕರ್ತರನ್ನೇ ಬೇಸ್ತು ಬೀಳಿಸುವ ಮಹಾನುಭಾವರು!!

ಪತ್ರಕರ್ತರು ಸಾಮಾನ್ಯವಾಗಿ ಬುದ್ಧಿವಂತರು. (ಅಥವಾ ಹಾಗೆಂದು ಅವರು ಅಂದುಕೊಂಡಿರುತ್ತಾರೆ). ಆದರೆ ಇಂತಹ ಪತ್ರಕರ್ತರನ್ನೇ ಬೇಸ್ತು ಬೀಳಿಸುವು ಮಹಾನುಭಾವರು ಕೂಡ ಇರುತ್ತಾರೆ.

ನನ್ನ ಪತ್ರಕರ್ತ ಗೆಳತಿಯೊಬ್ಬಳು ತನ್ನ ಸ್ಪೆಷಲ್ ಸ್ಟೋರಿಗಳಿಂದಾಗಿಯೇ ಪ್ರಸಿದ್ಧಳಾಗಿದ್ದಳು. ಅವಳ ಸ್ಟೋರಿಯ ಪ್ರೋಮೋ ಬಂತೆಂದರೆ ಜರ್ನಲಿಸ್ಟುಗಳು ಕೂಡ ಕುತೂಹಲದಿಂದ ರಾತ್ರಿಯ ಬುಲೆಟಿನ್ ಗೆ ಕಾಯುತ್ತಿದ್ದರು. ಒಟ್ಟಿನಲ್ಲಿ ತಲಿಮ್ಯಾಗ್ ಹೋಡಿಯೂವಂತ ಸ್ಟೋರಿ ಮಾಡ್ತಿದ್ಲ ನೋಡ್ರೀ ಆಕಿ….ಹೀಗಿರಬೇಕಾದರೆ ಯಾರೋ ಆಕೆಯ ಮೊಬೈಲ್ ಗೆ ಕರೆ ಮಾಡಿದ್ದಾರೆ. ಆ ಕಡೆಯಿಂದ ಮಾತನಾಡಿದ ಧ್ವನಿ, “ಮೇಡಂ, ನಾವೊಂದು ಪೋಲ್ಯೂಷನ್ ಫ್ರೀ ವಾಹನವನ್ನು ಡಿಸೈನ್ ಮಾಡಿದ್ದೇವೆ. ಇದರ ವಿಶೇಷತೆಯೆಂದರೆ ಈ ಡಿಸೈನ್ ನಿಂದಾಗಿ ಯಾವುದೇ ಪರಿಸರ ಮಾಲಿನ್ಯವಾಗುವುದಿಲ್ಲ. ದೇಶದಲ್ಲಿಯೇ ಪ್ರಥಮ ಎನ್ನಬಹುದಾದ ಪ್ರಯೋಗ ಇದು. ಈ ವಾಹನದ ಬಳಕೆಯಿಂದ ನಮ್ಮ ಸುತ್ತಮುತ್ತಲಿನ ಹವೆ ಶುದ್ಧವಾಗಿದ್ದು, ಜನರ ಆರೋಗ್ಯಕ್ಕೆ ಕೂಡ ಯಾವುದೇ ತೊಂದರೆಯಾಗುವುದಿಲ್ಲ. ನೀವು ಬಂದು ಸ್ಟೋರಿ ಮಾಡಬೇಕು ಮೇಡಂ” ಎಂದಿದೆ. ಈಕೆಗೆ ಖುಷಿ ಹಾಗೂ ಆಶ್ಚರ್ಯ ಒಟ್ಟೊಟ್ಟಿಗಾಗಿ, “ಯಾವ ಇಂಧನವನ್ನು ಬಳಸುತ್ತಿದ್ದೀರಿ?” ಎಂದು ಕೇಳಿದ್ದಾಳೆ. ಆ ಧ್ವನಿ, “ಪೆಟ್ರೋಲ್ ಅಥವಾ ಡೀಸೆಲ್. ಏನಾದರೂ ಬಳಸಬಹುದು ಮೇಡಂ. ಇಂಧನ ಇಲ್ಲಿನ ಸಮಸ್ಯೆಯೇ ಅಲ್ಲ. ನಮ್ಮ ಡಿಸೈನ್ ನದ್ದೇ ವಿಶೇಷತೆ. ತಾವು ಬರಬೇಕು” ಎಂದು ಮತ್ತೊಮ್ಮೆ ರಿಕ್ವೆಸ್ಟ್ ಮಾಡಿದೆ. ಸರಿ ಒಂದೊಳ್ಳೆ ಸ್ಟೋರಿ ಸಿಕ್ಕಿತು ಎಂದು ಹಿಗ್ಗೆ ಹೀರೆಕಾಯಿಯಾದ ನನ್ನ ಗೆಳತಿ ಕ್ಯಾಮೆರಾಮನ್ ನನ್ನು ಎತ್ತಾಕಿಕೊಂಡು ಸೀದಾ ಅವರು ಹೇಳಿದ ಜಾಗಕ್ಕೆ ಹೋಗಿದ್ದಾಳೆ. ಅವಳನ್ನು ಭರಪೂರ ಆದರಿಂದ ಸ್ವಾಗತಿಸಿದ ಮೂರ್ನಾಲ್ಕು ಮಂದಿ ಪುಟ್ಟದಾದ ಆಟಿಕೆಯ ಬಸ್ಸನ್ನು ತೋರಿಸಿದ್ದಾರೆ. ಆ ಬಸ್ ನ ಡಿಸೈನ್ ಹೀಗಿತ್ತು. (ಇದು ನಾನು ಬರೆದಿರುವ ಚಿತ್ರ. ನೀವು ಕಲ್ಪಿಸಿಕೊಳ್ಳಲು ಅನುಕೂಲವಾಗಲಿ ಎಂದು).

Bus

“ನೋಡಿ ಮೇಡಂ ಈ ಬಸ್. ಇದರ ಸೈಲೆನ್ಸರ್ ಹೀಗೆ ಹಿಂದೆ ಬಂದು ಹೀಗೆ ಬಸ್ ಗಿಂತ ಮೇಲಕ್ಕೆ ಹೋಗುತ್ತದೆ. ಹೀಗಾಗಿ ಬಸ್ ಹೊರಹಾಕುವ ಹೊಗೆ ಸೀದಾ ಮೇಲಕ್ಕೆ ಹೋಗುತ್ತದೆ. ಬಸ್ ಹಿಂದೆ ಬರುವ ವಾಹನಗಳಿಗೆ, ಟೂ ವೀಲರ್ ನವರಿಗೆ ಇದರ ಹೊಗೆ ತಾಗುವುದೇ ಇಲ್ಲ. ಇದು ಕೇವಲ ಬಸ್ ನ ಪ್ರೋಟೋಟೈಪ್. ಬೇಕಾದರೆ ಇದೇ ಮೆಥೆಡ್ಡನ್ನು ಎಲ್ಲ ವಾಹನಗಳಿಗೆ ಬಳಸಬಹುದು. ಈ ಡಿಸೈನ್ ನ ಮತ್ತೊಂದು ಅನುಕೂಲ ಎಂದರೆ…..”ಎಂದೆಲ್ಲ ಕೊರೆದಿದ್ದಾರೆ.

ನನ್ನ ಪತ್ರಕರ್ತ ಗೆಳತಿ ಬೇಸ್ತು ಬಿದ್ದಿದ್ದಾಳೆ. ಹೇಗಿದ್ದಾರೆ ಪತ್ರಕರ್ತರನ್ನು ಬೇಸ್ತು ಬೀಳಿಸುವ ಮಹಾನುಭಾವರು?

ಸಿಟಿ ಮಾರ್ಕೆಟ್ ನಲ್ಲಿ ಬಿಳಿ ಜೋಳದ ಹುಡು‘ಕಾಟ’.

jola

ಹುಡುಕಾಟದ ಶ್ರೀಗಣೇಶಾಯನಮಃ ಆರಂಭಾಗಿದ್ದು ಬೈಕ್ ನಿಲ್ಲಿಸಲು ಪಾರ್ಕಿಂಗ್ ಸ್ಥಳ ಹುಡುಕಲು ಸಿಟಿ ಮಾರ್ಕೆಟ್ಟಿನ ಎರಡು ಮೂರು ಪ್ರದಕ್ಷಿಣೆ ಹಾಕುವ ಮೂಲಕ. ಕೊನೆಗೂ ಹೇಗೋ ಮಾಡಿ ಸಿಟಿ ಮಾರ್ಕೆಟ್ ನಿಂದ ದೂರ ಸಾಗಿ ಕಲಾಸಿ ಪಾಳ್ಯದ ಖಾಸಗಿ ಬಸ್ ಸ್ಟ್ಯಾಂಡ್ ಸಮೀಪ್ ನನ್ನ ನಾಯಕ ಹೊಂಡವನ್ನು (ಹಿರೋ ಹೊಂಡ) ವನ್ನು ಪಾರ್ಕ್ ಮಾಡುವ ವೇಳೆಗೆ ಮೂಗಿನ ತುದಿಯಲ್ಲಿ ಬೆವರು ಟಿಸಿಲೊಡೆದಿತ್ತು.

ಸಿಟಿ ಮಾರ್ಕೆಟ್ ಗೆ ಹೋಗುವ ದರ್ದಿಗೆ ಮೂಲ ಕಾರಣವೆಂದರೆ ಚಪಾತಿ ತಿಂದು ತಿಂದು ಹೀಟಾಗಿ, ಬೆಳಿಗ್ಗೆಯೆದ್ದು ಪ್ರಾತರ್ವಿಧಿ ಸಾಫ್ಟ್ ಆಗದೆ ಲೇಟಾಗಿ, ಬೈಕ್ ನಡೆಸುವಾಗ ಪರಮಹಿಂಸೆಯಾಗುತ್ತಿತ್ತು. ಚಪಾತಿ, ಆಲೂಗಡ್ಡೆ, ಕಾಫಿ, ಟೀ, ಸಿಗರೇಟು, ಬದನೆಕಾಯಿ, ಕರಿದ ತಿಂಡಿ ಪದಾರ್ಥ, ಉಪ್ಪಿನಕಾಯಿ, ಮಸಾಲೆ ಆಹಾರ ಕಡಿಮೆ ಮಾಡಿ ಎಂದು ತೀರ್ಥಹಳ್ಳಿಯ ಆಯುರ್ವೇದಿಕ್ ವೈದ್ಯರು ಮೋಡಿ ಅಕ್ಷರಗಳಂತೆ ಕಾಣುವ ಬರಹದಲ್ಲಿ ಆರ್ ಎಕ್ಸ್ ಬರೆದು ಹತ್ತು ವರ್ಷಗಳಾಗುತ್ತ ಬಂದಿದ್ದರೂ, ಈ ಎಲ್ಲ ಪಥ್ಯವನ್ನು ನಾನು ಚಾಚೂ ತಪ್ಪದೆ ಪಾಲಿಸಿರಲಿಲ್ಲ. ಜ್ವಾಳದ್ ರೊಟ್ಟಿ ಹೊಟ್ಟಿಗಿ ತಂಪಲೇ ಮಗನಾ….ಮತ್ತ್ ಏಕ್ ದಂ ಪವರ್ ಬರ್ತೈತ್ ಲೇ ಎಂಬ ದೂರದ ಬೆಳಗಾವಿಯ ಸಮೀಪದ ಮಿತ್ರನೊಬ್ಬನ ಸಲಹೆಯ ಮೇರೆಗೆ ಜ್ವಾಳದ ರೊಟ್ಟಿಯನ್ನು ನನ್ನ ಊಟದ ಮೆನುವಿನಲ್ಲಿ ಸೇರಿಸಲು ನಿರ್ಧರಿಸಿದೆ. ಆದರೆ, ಬಿಗ್ ಬಝಾರ್-ಸ್ಮಾಲ್ ಬಝಾರ್, ಮೋರ್-ಲೆಸ್, ಟೋಟಲ್-ಪಾರ್ಷಿಯಲ್, ನೀಲಗಿರೀಸ್-ಬಿಳಿಗಿರಿಸ್ ಎಲ್ಲ ಸುತ್ತಾಡಿದರೂ ಜ್ವಾಳ ಸಿಗಲಿಲ್ಲ. ಟೋಟಲ್ ನಲ್ಲಂತೂ ಜೋಳ ಕೇಳಿದ್ದಕ್ಕೆ ಮೆಕ್ಕೆ ಜೋಳ ಪ್ಯಾಕ್ ಮಾಡಿಕೊಡಲು ಅಲ್ಲಿನ ಬಡಕಲು ದೇಹದ ಸೊಟ್ಟ ಮೂತಿಯ ಸೇಲ್ಸ್ ಎಕ್ಸಿಕ್ಯೂಟಿವ್ ಸನ್ನದ್ಧಳಾಗಿದ್ದಳು.

ಅಂತೂ ಸರ್ವದೇವ ನಮಸ್ಕಾರಃ ಕೇಶವಂ ಪ್ರತಿಗಚ್ಛತಿ ಎಂಬಹಾಗೆ, ಸರ್ವ ವಸ್ತುಗಳಿಗೆ ಒಂದೇ ಕಟ್ಟೆಯಾಗಿರುವ ನಮ್ಮ ಕೆ ಆರ್ ಮಾರುಕಟ್ಟೆಗೆ ಹೋದೆ. ಬೈಕ್ ನಿಲ್ಲಿಸಿದ ಬಳಿಕ ಕಲಾಸಿಪಾಳ್ಯದಲ್ಲಿ ಯಮರಾಯನ ಆಸ್ಥಾನದ ಗೌರವಾನ್ವಿತ ಖಾಯಂ ಸದಸ್ಯರಾಗಿರುವ ಖಾಸಗಿ ಬಸ್ ಗಳಿಂದ ತಪ್ಪಿಸಿಕೊಂಡು ಅಂಗಡಿ ಸಾಲುಗಳ ಮಧ್ಯೆ ನಡೆಯತೊಡಗಿದೆ. ಪ್ರಾಣಿಗಳು ಸತ್ತಾಗ, ಹರಿಯುವ ನೀರಿನಲ್ಲಿ ಬಯೋಕಾನ್ ನ ವೇಸ್ಟ್ ಸೇರಿದಾಗ ಬರುವಂತಹ ವಾಸನೆಯನ್ನು ತಡೆದುಕೊಂಡು ಬಾಬಾ ರಾಮದೇವರ ಕಪಾಲಭಾತಿ ಪ್ರಾಣಾಯಾಮ ಮಾಡುತ್ತ ಸಿಟಿ ಮಾರ್ಕೆಟ್ಟು ಸೇರಿ, ದೀರ್ಘವಾಗಿ ಅನುಲೋಮ-ವಿಲೋಮ ಮಾಡಿದೆ. ಈ ಮಧ್ಯೆ ಎಕ್ಸೈಟಿಂಗ್ ಗರ್ಲ್ಸ್ ಹಾಗೂ ಗೆಸ್ಟ್ ಹೌಸ್ ಚಿತ್ರಗಳ ಪೋಸ್ಟರ್ ದರ್ಶನದಿಂದ ಈ ಪ್ರಕ್ರಿಯೆಯಲ್ಲಿ ಕೊಂಚ ತೊಂದರೆಯುಂಟಾಯಿತು. ಏ ಇದು ಮರ್ಯಾದಸ್ಥರು ಹೋಗುವ ಸಿನಿಮಾ ಕಣ್ ಬ್ರದರ್, ಬಾ ನಾವು ಸವಾರಿ ನೋಡೋಣ ಎಂದು ಕಾಲೇಜ್ ಹುಡುಗನೊಬ್ಬ ಮತ್ತೊಬ್ಬನನ್ನು ಅಲ್ಲಿಂದ ಎಳೆದುಕೊಂಡು ಹೋದದ್ದು ನೋಡಿ, ಆ ಬ್ರದರ್ ಬಗ್ಗೆ ಕೆಡುಕೆನಿಸಿತು.

ಸಿಟಿ ಮಾರ್ಕೆಟ್ ಸೇರಿದ ಮೇಲೆ ಶುರುವಾಯಿತು ನನ್ನ ಜ್ವಾಳದ ಬೇಟೆ. ಹಾರ್ಟ್ ಆಫ್ ದಿ ಸಿಟಿ ಮಾರ್ಕೆಟ್ ಸೇರಿದಂತೆ ಅದರ ಜಠರ, ಧಮನಿ, ಹೊಟ್ಟೆ, ತೊಡೆ, ಶೀರ್ಷ, ಪುಪ್ಪುಸ, ಠಸ್ ಪುಸ ಎಲ್ಲವನ್ನೂ ಸುತ್ತಿದರೂ ಜೋಳದ ಪತ್ತೆಯಿಲ್ಲ. ನನ್ನನ್ನು ನೋಡಿ ಯೇssssಸ್ ಏನ್ ಬೇಕ್ ಸಾರ್..ಎಂದು ಕೇಳಿದ್ದ ಬೇರೆ ಬೇರೆ ಅಂಗಡಿಯ ಹುಡುಗರೆಲ್ಲ ನಾನು ಹಾದಿ-ಬೀದಿ ತಪ್ಪಿ ಮತ್ತೆ ಅದೇ ಅದೇ ಅಂಗಡಿಗಳ ಮುಂದೆ ಸುಳಿದಾಡಲು ತೊಡಗಿದಾಗ ದೀರ್ಘವಾಗಿ ಆಕಳಿಸಿ ಬೇಸರ ವ್ಯಕ್ತಪಡಿಸಿದರು. ಎಷ್ಟು ಸುತ್ತಿದರೂ ಜೋಳದ ಪತ್ತೆಯಿಲ್ಲ. ಜೋಳ ಬಿಟ್ಟು ಜಗತ್ತಿನಲ್ಲಿರುವ ಎಲ್ಲ ವಸ್ತುಗಳನನ್ನು ನಾನು ಸಿಟಿ ಮಾರ್ಕೆಟ್ಟಿನಲ್ಲಿ ನೋಡಿಯಾಗಿತ್ತು. ಅಂತೂ ಇಂತೂ ಕೊನೆಗೆ ಧಾನ್ಯಗಳ ಅಂಗಡಿಯೊಂದನ್ನು ನಾನು ಪತ್ತೆ ಹಚ್ಚುವ ವೇಳೆಗೆ, ನನ್ನ ಜೀನ್ಸ್ ಪ್ಯಾಂಟ್ ಪಾದದ ಬಳಿ ಭಯಂಕರ ಒದ್ದೆಯಾಗಿ, ಟೀಶರ್ಟ್  ಮುದ್ದೆಯಾಗಿ, ಕನ್ನಡಕದ ಮೇಲೆ ಮಿಲಿಯಾಂತರ ಧೂಳಿನ ಕಣಗಳ ಶೇಖರಣೆಯಾಗಿ, ತಲೆ ಹೀಟಾಗಿತ್ತು. ಆದರೆ ಹೊಟ್ಟೆಗೆ ಬೇಕಾದದ್ದು ಸಿಕ್ಕದ್ದರಿಂದ ಈ ಎಲ್ಲ ತೊಂದರೆಗಳನ್ನು ಮರೆತು ಅಂಗಡಿ ಮುಂದೆ ನಿಂತೆ. ಬಹುಶಃ ದೇವರು ಬಂದಿದ್ದರೂ ಆ ತಮಿಳು ಅಂಗಡಿಯವ ಅಷ್ಟು ಖುಶಿಯಾಗುತ್ತಿದ್ದನೋ ಇಲ್ಲವೋ, ಆದರೆ ಮುಂದೆ ನಿಂತ ಗಿರಾಕಿಯನ್ನು ನೋಡಿ ಪೋಲಿಸ್ ಪೇದೆಯೊಬ್ಬ ಐಪಿಎಸ್ ಗೆ ನೀಡುವಷ್ಟೇ ಗೌರವವನ್ನು ನೀಡಿದ.

ಜೋಳ ಇದ್ಯಾ ಕೇಳಿದೆ.

ಇದೆ ಇದೆ ಎಂದ.

ಹೇಗೆ ಕೇಜಿ

ಎಷ್ಟು ಬೇಕು

ಹೇಗೆ ಕೇಜಿ ಎಂದು ತಿಳಿಸಿದರೆ ಹೇಳಬಹುದು

ಒನ್ ಟ್ವೆಂಟಿ ರುಪಿಸ್ ಕೆಜಿ

ರೇಟು ಕೇಳಿ, ಮನಮೋಹನ್ ಸಿಂಗ್ ಹಾಗೂ ಪ್ರಣಬ್ ಮೇಲೆ ಭಯಂಕರ ಕೋಪ ಬಂತು. ಬಡವರ ಆಹಾರವಾಗಿರುವ ಜೋಳ 120 ರೂಪಾಯಿ ಕೆಜಿಯೇ ಎಂದು ಅಚ್ಚರಿಯಾಯಿತು. ಆದರೆ ಎಲ್ಲೋ ಯಡವಟ್ಟಾಗಿದೆ ಅನ್ನಿಸಿ ತೋರಿಸಿ ನೋಡೋಣಎಂದೆ. ನೀಟಾಗಿ ಪ್ಯಾಕ್ ಮಾಡಲಾಗಿದ್ದ ಪ್ರಿಂಟೆಡ್ ಪ್ಲಾಸ್ಟಿಕ್ ಚೀಲವೊಂದರಿಂದ ಮುಷ್ಟಿ ತುಂಬ ಜೋಳ ತೆಗೆದು ನನ್ನ ಕೈಗೆ ನೀಡಿದ. ಅಂಗಡಿಯವನ ಯಡವಟ್ಟು ಬಯಲಾಯಿತು. ಆಸಾಮಿ, ಬಿಗ್ ಬಝಾರ್ ನ ಹುಡುಗಿಯ ಹಾಗೆ ಮೆಕ್ಕೆ ಜೋಳ ತೆಗೆದು ಕೊಟ್ಟಿದ್ದ.

ಏ..ಈ ಜೋಳ ಅಲ್ಲ. ರೊಟ್ಟಿ ಮಾಡ್ತಾರಲ್ಲ….ಜೋಳ..ಅದು ಎಂದೆ. ಆತನಿಗೆ ಅರ್ಥವಾಗಲಿಲ್ಲ.

ಬಿಳಿಬಿಳಿಯಾಗಿರುತ್ತೆ,..ಗುಂಡಗಿರುತ್ತೆ…ಗುಂಡಗಿದ್ದರೂ ಅದಕ್ಕೆ ಒಂದು ಕಡೆ ಚೊಚ್ಚಿನ ಥರ ಇರುತ್ತೆ ಅಂದೆ.

ಹೀಗೆ ಹೇಳುತ್ತಲೇ, ನಾನು ಡಬಲ್ ಮೀನಿಂಗ್ ಥರದ್ದು ಏನಾದರೂ ಮಾತನಾಡಿದೆನೆ ಎಂಬ ಸಂಶಯ ಬಂತು. ಅಷ್ಟರಲ್ಲಿ ಅಂಗಡಿಯವ ನನ್ನ ವಿವರಣೆಯನ್ನು ಕೇಳಿ ಪೋಲಿ ನಗೆ ನಕ್ಕು, ಏ ಅದು ಇಲ್ಲ ನಮ್ಮಲ್ಲಿ ಎಂದ.

ನಾನು ಪೆಚ್ಚು ಮೋರೆ ಹಾಕಿಕೊಂಡು ಅಂಗಡಿಯಿಂದ ಹೊರಬಿದ್ದೆ. ಹಾಗೇ ಅಂಗಡಿಯ ಬೋರ್ಡ್ ಕಡೆ ನೋಡಿದಾಗ ಗೊತ್ತಾಗಿದ್ದು, ಅದು ಬಿತ್ತುವ ಬೀಜಗಳನ್ನು ಮಾರುವ ಅಂಗಡಿ ಎಂದು.

ಮತ್ತೆ ಹಟ ಬಿಡದ ದೇವೇಗೌಡರಂತೆ ಜ್ವಾಳದ ಬೇಟೆಗೆ ತೊಡಗಿದೆ. ಕೊನೆಗೂ ನಾನು ಯುರೇಕಾ ಯುರೇಕಾ ಎಂದು ಬಟ್ಟೆ ಹಾಕಿಕೊಂಡು ಕೂಗಾಡುವಾಗ ಸುಮಾರು ಎರಡು ಗಂಟೆ ಕಳೆದಿತ್ತು. ಈ ಅಂಗಡಿಯವ ಮಾತ್ರ ಪರಮ ನಿರ್ಲಿಪ್ತತೆಯಿಂದ ದೊಡ್ಡದಾಗಿ ಆಕಳಿಸಿ ತನ್ನ ಸಹಾಯಕನಿಂದ ಸುಮಾರು 10 ಚೀಲಗಳನ್ನು ಕೆಳಗಿಳಿಸಿ ಅದರೆ ಕೆಳಗೆ ಭಯಾನಕ ನಿರ್ಲಕ್ಷ್ಯತನದಿಂದ ಇಡಲಾಗಿದ್ದ ಜೋಳವನ್ನು ತೂಗಿಸಿ ಕೊಟ್ಟ. ಅದನ್ನು ಹಿಡಿದುಕೊಂಡು ಬೈಕ್ ಏರಿ ಸೀದಾ ಮನೆಗೆ ಬಂದರೆ, ಜೋಳ ನೋಡಿ ನನ್ನ ಅರ್ಧಾಂಗಿ, ಅಷ್ಟೂ ಗೊತ್ತಾಗೋದಿಲ್ವೇನ್ರೀ ನಿಮ್ಗೆ, ಜೋಳ ಮುಗ್ಗಾಗಿರೋದು ಕಣ್ಣಿಗೆ ಅಷ್ಟು ಚೆನ್ನಾಗಿ ಕಾಣ್ತಿರೋವಾಗ ಯಾಕ್ರೀ ತರಕ್ ಹೋದ್ರೀ ಎಂದು ಚಪಾತಿ ಮಾಡಲು ಗೋಧಿ ಹಿಟ್ಟು ಕಲೆಸಲಾರಂಭಿಸಿದಳು.