ನಾನು ಫೋರಂ ಮಾಲ್ ಗೆ ಮಾತ್ರ ಬರಲ್ಲ….

chikkamma

ಚಿಕ್ಕಮ್ಮಳದೂ ನನ್ನದೂ ಕಳೆದ ಮೂರು ದಿನಗಳಿಂದ ಒಂದೇ ವಾದ. ನಾನು “ಕರೆದುಕೊಂಡು ಹೋಗುತ್ತೇನೆ. ಬಾ” ಅಂತ. ಅವಳು “ನಾ ಬರಲ್ಲ. ನೀ ಒಬ್ನೇ ಹೋಗಿ ಬಾ” ಅಂತ. ಸಾಧಾರಾಣವಾದ ‘ಬಿ’ ಸೆಂಟರ್ ನಲ್ಲಿ ಜೀವನ ಸವೆಸಿದ್ದ ನನ್ನ ಚಿಕ್ಕಮ್ಮ ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿರುವ ಮಗನ ಮನೆಗೆ ಉಳಿಯಲೆಂದು ಬಂದಿದ್ದಳು. ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್, ಕಬ್ಬನ್ ಪಾರ್ಕ್, ಲಾಲ್ ಬಾಗ್, ಅಕ್ವೇರಿಯಂ, ಎಂ.ಜಿ. ರಸ್ತೆ ಎಲ್ಲವನ್ನೂ ತೋರಿಸಿಯಾಗಿತ್ತು. ಈಗ ಮುಂದಿನ ಸರದಿ ಫೋರಂ ಮಾಲ್ ದಾಗಿತ್ತು. ಎಲ್ಲ ಸ್ಥಳಗಳಿಗೆ ಹರ್ಷದಿಂದಲೇ ಬಂದಿದ್ದ ಚಿಕ್ಕಮ್ಮ, ಫೋರಂ ಮಾಲ್ ಗೆ ಬರಲು ಮಾತ್ರ ಜಪ್ಪಯ್ಯ ಅಂದರೂ ಸಿದ್ಧಳಿರಲಿಲ್ಲ.

ನನ್ನ ಸ್ವಗತ –

ಚಿಕ್ಕಮ್ಮ ಹೀಗೇಕೆ ಹಠ ಹಿಡಿಯುತ್ತಿದ್ದಾಳೆ? ಬೆಂಗಳೂರಿನ ಎಲ್ಲ ಕಡೆ ಬಂದವಳಿಗೆ ಫೋರಂ ಮಾಲ್ ಗೆ ಬರಲೇನು ಕಷ್ಟ? ಉಳಿದ ಸ್ಥಳಗಳಿಗೆ ಬಂದಾಗ ತೀರ ಉತ್ಸಾಹದಿಂದಿದ್ದ, ಅರೆ ಬಟ್ಟೆ ತೊಟ್ಟ ಶ್ರೀಮಂತ (ಬಡ) ಹುಡುಗಿಯರ ಮೇಲೆ ಕಾಮೆಂಟ್ಸ್ ಪಾಸ್ ಮಾಡುತ್ತಿದ್ದ, ಮನೆಯಿಂದಲೇ ಎಲ್ಲ ಕಡೆಗೂ ಮೊಸರನ್ನ, ಬಿಸಿಬೇಳೆಬಾತ್ ಮಾಡಿಕೊಂಡು ಬರುತ್ತಿದ್ದ ಚಿಕ್ಕಮ್ಮ ಈಗೇಕೆ ಹೀಗಾಡುತ್ತಿದ್ದಾಳೆ?

ಚಿಕ್ಕಮ್ಮಳ ಸ್ವಗತ-

ಈ ಮಕ್ಕಳಿಗೇನೂ ತಿಳಿಯುತ್ತದೆ ನನ್ನ ಕಷ್ಟ. ಬನ್ನೇರುಘಟ್ಟ ಪಾರ್ಕ್, ಎಂ.ಜಿ. ರಸ್ತೆಯಲ್ಲ ಒಂದು ತೂಕವಾದರೆ ಈ ಫೋರಂ ಮಾಲ್ ನದೇ ಮತ್ತೊಂದು ತೂಕ. ಇವ ನನ್ನ ಜೊತೆಗೆ ಬಂದರೂ ಪ್ರಯೋಜನವೇನು? ಹೋಗಬೇಕಾಗಿರುವುದು ತಾನಲ್ಲವೆ? ನನಗೆ ಮೊದಲೇ ಅಭ್ಯಾಸವಿಲ್ಲ. ಟಿವಿ ಯಲ್ಲಿ ನೋಡಿದ್ದೇನೆ ಮಾತ್ರ. ಅದೂ ಎಷ್ಟು ವೇಗವಾಗಿ ಸಾಗುತ್ತಿರುತ್ತದೆ. ಈ ನಗರದವರಿಗೇನು ಧಾಡಿ ಅಂತೀನಿ. ಅಲ್ಲ, ಸರಿಯಾಗಿ ದೈಹಿಕ ಶ್ರಮವನ್ನೂ ಮಾಡಲೊಲ್ಲೆ ಅನ್ನುತ್ತಾರಲ್ಲ. ಹಾಗಾಗಿಯೇ ಎಲ್ಲ ನಗರದ ಹೆಣ್ಣುಮಕ್ಕಳೂ ಬ್ಯಾರೆಲ್ ಗಳಾಗಿರುವುದು. ತೀರ ಇಷ್ಟು ಕೂಡ ಸೋಮಾರಿತನವಿರಬಾರದು. ರುಬ್ಬುಕಲ್ಲು ಬಿಸಾಡಿ, ಮನೆಗೆ ವಾಷಿಂಗ್ ಮಷಿನ್ ತಂದು, ಮೈಕ್ರೋ ಓವನ್, ಇಲೆಕ್ಟ್ರಿಕ್ ಕುಕರ್ ನಲ್ಲಿ ಅಡಿಗೆ ಮಾಡಿ ಈಗಾಗಲೇ ಸೋಮಾರಿತನ ಬೆಳೆಸಿಕೊಂಡಿದ್ದಾರೆ. ಹೋಗಲಿ ಮಾಲ್ ಗಳಂತಹ ವಿಶಾಲ ಪ್ರದೇಶದಲ್ಲಿ ಓಡಾಡಿಯಾದರೂ ಸ್ವಲ್ಪ ದೈಹಿಕ ಶ್ರಮ ಮಾಡಬಾರದೆ? ಇಲ್ಲೂ ಸೋಮಾರಿತನವೆ? ನಾನಂತೂ ಆ ಮಾಲ್ ಗೆ ಹೋಗುವುದಿಲ್ಲ. ಅದೇನೋ ಎಲಿವೇಟರ್ ಅಂತ ಹೇಳುತ್ತಾನೆ ಈತ. ಹತ್ತಿ ನಿಂತುಕೊಂಡು ಬಿಡುವುದಂತೆ. ಅದೇ ನಮ್ಮನ್ನು ಮೇಲಿನ ಮಹಡಿಗೆ ತಲುಪಿಸುತ್ತದಂತೆ. ಇಳಿಯುವಾಗ ಕೂಡ ಹಾಗೇ ಅಂತೆ. ಆದರೆ ನನಗೇನು ಆ ಎಲಿವೇಟರ್ ಹತ್ತಲು ಬರುತ್ತದೆಯೆ? ಕಾಲಿಡುವಾಗ ಸ್ಪಲ್ಪ ಹೆಚ್ಚುಕಡಿಮೆಯಾದರೂ ಬಿದ್ದು ಬಿಟ್ಟೇನು….ಕಾಲು ಉಳುಕಿದರೆ ಗತಿಯೇನು? ಅದಕ್ಕಿಂತ ಹೆಚ್ಚಾಗಿ ನಾಲ್ಕು ಜನರ ಮಧ್ಯೆ ಎಲಿವೇಟರ್ ಹತ್ತಲು ಬರದೆ ಬಿದ್ದೆನೆಂದರೆ ನೋಡಿದವರು ಏನೆಂದಾರು?

ಅಂತೂ ಇಂತೂ –

ಅಂತೂ ಇಂತೂ ನಾನು ಚಿಕ್ಕಮ್ಮಳ್ಳನ್ನು ಕನ್ವಿನ್ಸ್ ಮಾಡಿದೆ. ಅಂದು ಸಂಭ್ರಮದಿಂದ ಮನೆಮಂದಿಯೆಲ್ಲ ಫೋರಂ ಮಾಲ್ ಗೆ ಹೋದೆವು. ನಮ್ಮ ರಿಕ್ಷಾ ಸರಿಯಾಗಿ ಫೋರಂ ಮಾಲ್ ನ ಪಕ್ಕದಲ್ಲಿ ನಿಂತಿತು. ಆಟೋಡ್ರೈವರ್ ಎಂದಿನಂತೆ ಎರಡು ರೂಪಾಯಿಗೆ ಚಿಲ್ಲರೆ ನೀಡಲಿಲ್ಲ. ಆತನನ್ನು ಶಪಿಸುತ್ತ ಎಲ್ಲರೂ ಮಾಲ್ ಒಳಗೆ ಪ್ರವೇಶಿಸಿದೆವು. ಅದೇಕೋ ಎಲಿವೇಟರ್ ಸಮೀಪ ಬರುತ್ತಲೇ ಚಿಕ್ಕಮ್ಮ ನನ್ನ ಕೈಹಿಡಿದುಕೊಂಡಳು. ನಾನು ಕಾಲಿಟ್ಟ ತಕ್ಷಣ ನೀನೂ ಕಾಲು ಇಡು ಎಂದೆ. ಆಯಿತು ಎಂಬಂತೆ ತಲೆಯಾಡಿಸಿದಳು. ಅಷ್ಟರಲ್ಲಿ ನಮ್ಮ ಮಧ್ಯದಿಂದ ನುಸುಳಿದ ನಾಲ್ಕಾರು ಚಿಣ್ಣರು ನಮಗಿಂತ ಮೊದಲು ಟಣ್ ಎಂದು ಎಲಿವೇಟರ್ ಹತ್ತಿ ನಮಗೆ ಟಾಟಾ ಮಾಡುತ್ತ ಮೇಲೇರುತ್ತ ಹೋದರು. ಅವರನ್ನು ನೋಡುತ್ತ ಚಿಕ್ಕಮ್ಮ ಅಲ್ಲಿಯೇ ನಿಂತುಕೊಂಡಳು. ನನ್ನ ಕೈಯನ್ನು ಮತ್ತಷ್ಟು ಗಟ್ಟಿಯಾಗಿ ಹಿಡಿದುಕೊಂಡು.

Advertisements

4 thoughts on “ನಾನು ಫೋರಂ ಮಾಲ್ ಗೆ ಮಾತ್ರ ಬರಲ್ಲ….

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.