ಕಲಾವಿದರಿಗೆ ಎಂತೆಂತಹ ಕಷ್ಟಗಳಿರುತ್ತವೆ ಗೊತ್ತಾ?

100_3016

ಮೊನ್ನೆ ಶೂಟಿಂಗ್ ನಲ್ಲಿದ್ದಾಗ ಸಹ ಕಲಾವಿದರೊಬ್ಬರು ಈ ಘಟನೆಯನ್ನು ಹೇಳುತ್ತಿದ್ದರು.

ಬೆಳಿಗ್ಗೆಯಿಂದಲೇ ಶೂಟಿಂಗ್ ಶೆಡ್ಯೂಲ್ ಆಗಿತ್ತು. ಆಗ ಪ್ರಮುಖ ಕಲಾವಿದರೊಬ್ಬರು ಪದೇಪದೇ ಐದು ಹತ್ತು ನಿಮಿಷಗಳ ಕಾಲ ಸೆಟ್ ನಿಂದ ಕಣ್ಮರೆಯಾಗುತ್ತಿದ್ದರು. ಅವರ ಹೆಸರು ಕರೆದಾಕ್ಷಣ ಬರುವ, ಶೂಟಿಂಗ್ ಮಧ್ಯದಲ್ಲಿ ಸಿಗರೇಟು ಸೇದುವ ಅಭ್ಯಾಸವಿಲ್ಲದ ಅವರು ಅಂದು ಮಾತ್ರ ಹೀಗೆ ಪದೇ ಪದೇ ಮಾಯವಾಗುತ್ತಿದ್ದು ಆಶ್ಚರ್ಯತರಿಸುತ್ತಿತ್ತು. ಅವರು ಕಣ್ಮರೆಯಾದಗಲೆಲ್ಲ ಸೌಂಡ್ ರಿಕಾರ್ಡಿಸ್ಟ್ ಗೆ ಜುಳು ಜುಳು ಸದ್ದು ಬೇರೆ. ಡೈರೆಕ್ಟರ್ ಇನ್ನೇನು ಆಕ್ಷನ್ ಹೇಳಬೇಕು ಅನ್ನುವಷ್ಟರಲ್ಲಿ ಇವರು ಮಾಯವಾಗುತ್ತಿದ್ದರು. ಸುಮಾರು ನೋಡಿದ ಡೈರೆಕ್ಟರ್ ಕೊನೆಗೆ ಕೇಳಿದರು. “ಏನ್ ಸಾರ್? ಪದೇ ಪದೇ ಎಲ್ಲಿ ಹೋಗುತ್ತಿದ್ದೀರಿ? ಶಾಟ್ ನಡೀತಿರಬೇಕಾದರೆ ನೀವು ಹೀಗೆ ಮಾಡಿದರೆ ಹೇಗೆ? ಇಂದು ಏನಿಲ್ಲವೆಂದರೂ ಆರು ಸೀನ್ ಮುಗಿಸಬೇಕಿದೆ” ಎಂದು ಅಸಮಧಾನ ವ್ಯಕ್ತಪಡಿಸಿದರು.

ಅದಕ್ಕೆ ಆ ಕಲಾವಿದರು ಹೇಳಿದ್ದು.

“ಸಾರಿ ಸಾರ್. ಒಂಚೂರು ಹೆಲ್ತ್ ಪ್ರಾಬ್ಲಮ್. ನಿನ್ನೆ ರಾತ್ರಿ ಹನ್ನೊಂದೂವರೆ ಸುಮಾರಿಗೆ ಮೆಜೆಸ್ಟಿಕ್ ಏರಿಯಾದಲ್ಲಿ ನಡೆದುಕೊಂಡು ಹೋಗುತ್ತಿದ್ದೆ. ಆಗ ನನ್ನ ಹಿಂದಿನಿಂದ ಓಡಿಬಂದ ಹುಡುಗನೊಬ್ಬ ಸಾರ್ ನಮ್ ಓನರ್ ನಿಮ್ಮನ್ನ ಕರೀತಾವ್ರೆ ಎಂದು ನನ್ನ ಕೈಹಿಡಿದುಕೊಂಡು ಸಮೀಪದ ಹೋಟೆಲ್ ಒಂದಕ್ಕೆ ಕರೆದುಕೊಂಡು ಹೋದ. ಆ ಹೋಟೆಲ್ ಮಾಲೀಕ ನನ್ನ ಹಲವಾರು ಸೀರಿಯಲ್ ಗಳನ್ನು ನೋಡಿದ್ದಾನೆ. ಕಿರುತೆರೆ ಕಲಾವಿದರ ಅಪ್ರತಿಮ ಭಕ್ತನಂತೆ. ನಾನು ಹೋಟೆಲ್ ಗೆ ಬರುತ್ತಲೆ ನನ್ನನ್ನು ಅಪ್ಪಿಕೊಂಡು, ನಮಸ್ಕಾರ ಮಾಡಿ ಅವನ ಹೋಟೆಲ್ ನಲ್ಲಿಯೇ ಊಟ ಮಾಡಿಕೊಂಡು ಹೋಗುವಂತೆ ಒತ್ತಾಯಿಸಿದ. ನನ್ನದೂ ಊಟವಾಗಿರಲಿಲ್ಲ. ಸರಿ ಎಂದು ಊಟಕ್ಕೆ ಕುಂತೆ. ಅದೇ ನಾ ಮಾಡಿದ ತಪ್ಪು ನೋಡಿ. ನಮ್ಮ ಹೋಟೆಲ್ ನಲ್ಲಿ ಅದು ಸ್ಪೆಷಲ್, ನಮ್ಮ ಹೋಟೆಲ್ ನಲ್ಲಿ ಇದು ಸ್ಪೆಷಲ್, ಈ ಐಟಮ್ ಇಡೀ ಬೆಂಗಳೂರಿನಲ್ಲಿ ನಾವೊಬ್ಬರೇ ಮಾಡೋದು, ಈ ಐಟಮ್ ನೋಡಿ ಇದರ ಮಸಾಲೆ ಕೊಚ್ಚಿಯಿಂದ ತರಿಸಿರುವುದು ಎಂದು ಬಣ್ಣಿಸುತ್ತ ಒಂದಾದ ಮೇಲೊಂದರಂತೆ ವೆಜ್ಜು, ನಾನ್ವೆಜ್ಜು ಎಲ್ಲ ಬಡಿಸುತ್ತ ಹೋದ. ಸರಿಯಾಗಿ ತಿಂದುಬಿಟ್ಟೆ. ಆಗ ರಾತ್ರಿ 12.30. ಆತನದೂ ಬಾಗಿಲು ಮುಚ್ಚುವ ಸಮಯ. ಆತ ಕೂಡ ಬಹುಶಃ ಅಂದು ಉಳಿದ ಎಲ್ಲ ಐಟಮ್ ಗಳನ್ನು ನನ್ನೆದರು ಬಡಿಸಿದ್ದ ಎಂದು ಕಾಣುತ್ತೆ. ಪ್ರೀತಿಗೆ ಪ್ರೀತಿಯೂ ತೋರಿಸಿದ ಹಾಗಾಯಿತು, ಐಟಮ್ ಗಳೂ ಖಾಲಿಯಾದಾವು ಎಂದಿರಬೇಕು. ಈಗ ನೋಡಿ. ಬೆಳಿಗ್ಗೆಯಿಂದ ಹೊಟ್ಟೆ ಅಪ್ ಸೆಟ್ ಆಗಿದೆ. ಸ್ಪಲ್ಪ ಎಡ್ಜಸ್ಟ್ ಮಾಡ್ಕೊಳ್ಳಿ ಸಾರ್….”

ಸೆಟ್ ನಲ್ಲಿದ್ದವೆರಲ್ಲ ಬಿದ್ದು ಬಿದ್ದು ನಕ್ಕರಂತೆ.