ಹುಡುಗನ ಬದುಕಿನ ಪುಟಗಳು…

100_1778

ಗಂಟೆಗೆ ಇಂತಿಷ್ಟು ವೇಗದಲ್ಲಿ ಇಂತಿಷ್ಟು ಎತ್ತರದಲ್ಲಿ ಹಾರುತ್ತಿರುವ ವಿಮಾನದಿಂದ ಇಂತಿಷ್ಟು ಭಾರದ ಕಲ್ಲನ್ನು ಎಸೆದರೆ ಅದು ಭೂಮಿಗೆ ಬೀಳಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬತಹ ಭೌತಶಾಸ್ತ್ರದ ಪ್ರಶ್ನೆಗಳು ನನ್ನ ಭೌತಿಕವನ್ನೇ ಅಲ್ಲಾಡಿಸಿದ್ದ ಸಮಯ. ಬಯಾಲಜಿ, ಗಣಿತ, ಕೆಮಿಸ್ಟ್ರಿಯಲ್ಲಿ ಹಿಡಿತವಿತ್ತಾದ್ದರೂ ನನ್ನ ನೈಜ ಬದುಕಿಗೆ ಜೀವಮಾನವಿಡಿ ಎಳ್ಳಷ್ಟೂ ಸಂಬಂಧವಿರದ ಗಣಿತದ ಸಮಸ್ಯೆಗಳನ್ನೂ, ರಸಾಯನಶಾಸ್ತ್ರದ ಸೂತ್ರಗಳನ್ನು ಅಧ್ಯಯನ ಮಾಡುವುದರಲ್ಲಿ ಯಾವುದೇ ಒಲವಿರಲಿಲ್ಲ. ನಾಟಕ, ಏಕಪಾತ್ರಾಭಿನಯ, ಹಾಡು, ನೃತ್ಯ, ಆಧ್ಯಾತ್ಮ, ಚರ್ಚೆ/ಭಾಷಣ ಸ್ಪರ್ಧೆ, ಸ್ಕೇಟಿಂಗ್, ಟ್ರೆಕ್ಕಿಂಗ್, ಸೈಕ್ಲಿಂಗ್, ಪ್ಲಾಂಚೆಟ್,  ಹೀಗೆ ಛಪ್ಪನ್ನೈವತ್ತಾರು ಹವ್ಯಾಸಗಳು ಮಾತ್ರ ಎರ್ರಾಬಿರ್ರಿ ಮೈದುಂಬಿಕೊಂಡಿದ್ದವು. ಪಿಯುಸಿಯಲ್ಲಿ ಸೈನ್ಸ್ ತೆಗೆದುಕೊಂಡು ಇದನ್ನೆಲ್ಲ ಮೇಂಟೇನ್ ಮಾಡುವುದು, ರಾಜಕಾರಣಿಯಾಗಿದ್ದು ಪ್ರಾಮಾಣಿಕನಾಗಿರುವುದಷ್ಟೇ ಕಷ್ಟವಾಗಿತ್ತು. ಇಂತಿರುವಾಗ, ಕಾಲನೆಂಬ ಕಾಲನು ಕೊಂಚವೂ ತಡಮಾಡದೆ, ಏಪ್ರಿಲ್ ತಿಂಗಳನ್ನು ಧುತ್ತಂತ ಎದುರಿಗಿಟ್ಟು, ‘ಪರೀಕ್ಷೆ ಎದುರಿಸು ಮಗನೆ’ ಎಂದುಬಿಟ್ಟನು.

ಪರೀಕ್ಷೆ ಎದುರಿಸಿದ್ದರೆ ವಿದ್ಯಾದೇವತೆ ಸರಸ್ವತಿಯಾಣೆಗೂ ದಡ ಸೇರುವುದು ಕಷ್ಟವೇನಾಗಿರಲಿಲ್ಲ. ಆದರೆ, ಇನ್ನೊಂದು ವರ್ಷ ಅದೇ ಸೈನ್ಸನ್ನು ಓದುವಷ್ಟು ತಾಳ್ಮೆ, ಆಸಕ್ತಿ ಸೂಜಿಮೊನೆಯಷ್ಟೂ ಇರಲಿಲ್ಲ. ಈ ಮಧ್ಯೆ ಬಿಳಿಬಿಳಿ ಬಣ್ಣದ ನಾಜೂಕು ಕಟಿಯ ಕ್ಲಾಸ್ ಮೇಟ್ ಹಾಗೂ ನಾನಾರು, ಎಲ್ಲಿಂದ ಬಂದೆ, ಎಲ್ಲಿ ಹೋಗುವೆ, ಬ್ರಹ್ಮಚರ್ಯವೇ ಜೀವನ, ಮದುವೆಯಾಗುವುದೇ ಮರಣ ಎಂಬ ಆಧ್ಯಾತ್ಮಿಕ ವಿಚಾರಗಳ ನಡುವೆ ನುಜ್ಜುಗುಜ್ಜಾಗಿ ಪರೀಕ್ಷೆ ತಪ್ಪಿಸಿಕೊಳ್ಳಲು ಪರೀಕ್ಷೆಯ ದಿನದಂದು ಪರೀಕ್ಷೆಗೆ ಹೋಗುವುದಾಗಿ ಹೇಳಿ ಅಮ್ಮನಿಗೆ ನಮಸ್ಕರಿಸಿ ಮನೆಯಿಂದ ಎಸ್ಕೇಪ್ ಆಗಿಬಿಟ್ಟೆ.

ಮೇಯಲು ಬಿಟ್ಟ ಎಮ್ಮೆ ಸಂಜೆಯಾಗುತ್ತಿದ್ದಂತೆ ವಿಧೇಯವಾಗಿ ಕೊಟ್ಟಿಗೆಗೆ ಹಿಂತಿರುವಂತೆ ಪ್ರತಿನಿತ್ಯ ಮನೆಗೆ ಹಿಂತಿರುಗುತ್ತಿದ್ದ ನಾನು ರಾತ್ರಿ ಹತ್ತಾದರೂ ಪತ್ತೆಯಾಗದಿದ್ದಾಗ ಅಮ್ಮ ಕಂಗಾಲಾಗಿ ನೆಂಟರಿಷ್ಟರಿಗೆಲ್ಲ ವಿಷಯ ತಿಳಿಸಿ ಎಲ್ಲೆಡೆ ಹುಡುಕಿದ್ದೇ ಹುಡುಕಿದ್ದು. ಅಪ್ಪ ಬೇರೆ, ನನ್ನ ಅಜ್ಜನ ಮನೆಗೆ ಹೋಗಿದ್ದ. ಇತ್ತ ನಾನು ತಲೆಯಲ್ಲಿ ಬಿಲಿಯಾಂತರ ವಿಚಾರಗಳನ್ನು ತುಂಬಿಕೊಂಡು ಬಸ್ ಹತ್ತಿ ಸೀದಾ ಹೋಗಿದ್ದು ನನ್ನ ಅಜ್ಜನ ಮನೆಗೇ. ಅಲ್ಲಾಗಲೇ ಸ್ವಂತ ಕೆಲಸ ಮಾಡಿಕೊಂಡಿದ್ದ ನನ್ನ ಪ್ರೀತಿಯ ಅಣ್ಣ ಹಾಗೂ ವಾತ್ಸಲ್ಯಮಯಿ ಅಪ್ಪ (ಹೌದು. ನನ್ನ ಅಪ್ಪ ನಿಜವಾಗಲೂ ವಾತ್ಸಲ್ಯಮಯಿ) ನನ್ನನ್ನು ರಿಸೀವ್ ಮಾಡಿಕೊಂಡು ಮೊದಲು ಮಾಡಿದ ಕೆಲಸ…..ನನಗೆ ಧೈರ್ಯ ತುಂಬಿದ್ದು.

ಆಕ್ಚುಲಿ, ಸಮಸ್ಯೆಯ ಪ್ರಸವವಾಗಿದ್ದು ಸೈನ್ಸ್ ಆಯ್ದುಕೊಂಡದ್ದರಿಂದ. ಎಲ್ಲರೂ ಮಾಡುವ ತಪ್ಪಿನಂತೆ ನಾನೂ ಗೆಳೆಯರ ಗುಂಪಿನಲ್ಲಿ ಗೋವಿಂದನಾಗಿ, ಭೂತ, ವರ್ತಮಾನ ಹಾಗೂ ಭವಿಷ್ಯತ್ ಕಾಲಗಳಲ್ಲಿಯೂ ಯುನಿವರ್ಸಲ್ ಟ್ರೂತ್ ಆಗಿರುವ ವಿಜ್ಞಾನ ಶಾಖೆಯನ್ನು ಆಯ್ದುಕೊಂಡಿರುವವರು ಉತ್ತಮರು, ಕಾಮರ್ಸ್ ಮಧ್ಯಮರು ಹಾಗೂ ಆರ್ಟ್ಸ್ ಅಧಮರು ಎಂಬ ಪ್ರಭಾವಳಿಗೆ ಆಕರ್ಷಿತನಾಗಿ ಸೈನ್ಸ್ ತೆಗೆದುಕೊಂಡಿದ್ದೆ. ಮೊದಲ ಹೊಡೆತ ಅಲ್ಲೇ ಬಿದ್ದಿತ್ತು.

ಮಗನ ಘನಂದಾರಿ ಕೆಲಸ ಅಪ್ಪ-ಅಮ್ಮನಲ್ಲೂ ಆತಂಕ ಉಂಟುಮಾಡಿತ್ತು. ಮುಂದೇನು ಎಂದು ಎಲ್ಲರಲ್ಲಿ ಕೊರೆಯುತ್ತಿದ್ದರೂ, ಯಾರೂ ಕೂಡ ನನ್ನನ್ನು ಪ್ರಶ್ನಿಸುತ್ತಿರಲಿಲ್ಲ.

ಆದರೆ ಮುಂದಿನ ಓದಿನ ದಿಕ್ಕನ್ನು ಸೂಚಿಸಿದ್ದು ನನ್ನದೇ ವಿಜ್ಞಾನ ಕಾಲೇಜಿನ ಪ್ರಿನ್ಸಿಪಾಲ್ ಗಲಗಲಿ ಎಂಬುವವರು. ಅವರ ಸಲಹೆಯಂತೆ ಆರ್ಟ್ಸ್ ಶಾಖೆಗೆ ಮತ್ತೆ ಮೊದಲ ವರ್ಷದಿಂದ ಸೇರಿ ನನ್ನ ಪ್ರಿಯ ವಿಷಯಗಳಾದ ಇತಿಹಾಸ, ಸೈಕಾಲಜಿ, ಲಾಜಿಕ್ ಆಯ್ದುಕೊಂಡು ಶಿಕ್ಷಣ ಮುಂದುವರೆಸಿದೆ. ಪಿಯುಸಿ ಎರಡನೇ ವರ್ಷದಲ್ಲಿ ಕಾಲೇಜಿಗೆ ಎರಡನೇ ರಾಂಕ್ ಗಳಿಸಿದೆ. ಎಂ ಎಸ್ ಡಬ್ಲ್ಯೂ ಆಸಕ್ತಿಯಿಂದ ಓದಿದೆ. ನನ್ನ ಎಲ್ಲ ಹವ್ಯಾಸಗಳನ್ನು ಮುಂದುವರೆಸುವುದೂ ಸಾಧ್ಯವಾಯಿತು. ಇದೀಗ ಉತ್ತರ ಕರ್ನಾಟಕದ ಎನ್ ಜಿ ಓ ಒಂದರಲ್ಲಿ ವ್ಯವಸ್ಥಾಪಕನಾಗಿ ದುಡಿಯುತ್ತ ಹಣ, ಕೀರ್ತಿ ಹಾಗೂ ಮನಸ್ಸಿಗೆ ತೃಪ್ತಿಯನ್ನೂ ಕಂಡುಕೊಂಡಿದ್ದೇನೆ.