ಹುಚ್ಚು ಮನಸ್ಸಿನ ಐದು ಆವಿಷ್ಕಾರಗಳು

suhalf

ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಚಲಿಸುವ ವಸ್ತು ಯಾವುದು? ಡೌಟೇ ಇಲ್ಲ…. ಅದು ಮನಸ್ಸು. ಜಗತ್ತಿನಲ್ಲಿ ಅತೀ ದೊಡ್ಡ ಗಡವ ಯಾವುದು? ನೋ ಡೌಟ್. ಅದೂ ಮನಸ್ಸೇ. ಒಂದು ಕ್ಷಣ ಇಲ್ಲೇ ಬೆಡ್ ರೂಂ ನಲ್ಲಿದ್ದರೆ ಮತ್ತೊಂದು ಕ್ಷಣ ಚಂದ್ರಲೋಕಕ್ಕೋ, ಶೇರ್ ಮಾರ್ಕೆಟ್ಟಿಗೋ ಲಗ್ಗೆ ಇಟ್ಟಿರುತ್ತದೆ. (ಕೆಲವರ ಮನಸ್ಸು ಬೆಡ್ ರೂಂ ಬಿಟ್ಟು ಬೇರೆಲ್ಲೂ ಹೋಗುವುದೇ ಇಲ್ಲ ಎಂಬುದು ಬೇರೆ ಮಾತು). ಮೊನ್ನೆ ಒರಾಂಗುಟಾನ್ ನಂತಹ ನನ್ನ ಮನಸ್ಸು ಪಾನಮತ್ತವಾಗಿತ್ತು. ಸಾಲದೆಂಬಂತೆ ಅದಕ್ಕೆ ಚೇಳು ಕುಟುಕಿತ್ತು. ಸಾಲದೆಂಬಂತೆ ಅದರ ಮೈಯಲ್ಲಿ ಭೂತ ಹೊಕ್ಕಿತ್ತು. ಸಾಲದೆಂಬಂತೆ ಅದು ಟೀವಿಯಲ್ಲಿ ಸಚ್ ಕಾ ಸಾಮ್ನಾ ನೋಡುತ್ತಿತ್ತು. ಇಂತಿಪ್ಪ ಸಂದರ್ಭದಲ್ಲಿ ಭವಿಷ್ಯದ ಕರಾಳ ಕತ್ತಲನ್ನು ಊಹಿಸಿದ ಅದು ಸಡನ್ ಆಗಿ ಪರೋಪಕಾರ ಮಾಡಲು ಸಿದ್ಧವಾಯಿತು. ಅಂತಹ ಸಂದರ್ಭದಲ್ಲಿ ಅದಕ್ಕೆ ಮುಂದಿನ ಪೀಳಿಗೆಗೆ ಯಾವ ರೀತಿಯ ಆವಿಷ್ಕಾರಗಳು ಉಪಯೋಗವಾಗಬಹುದು ಎಂದು ಯೋಚಿಸಿತು. ಅದು ಯೋಚಿಸಿದ ಆವಿಷ್ಕಾರಗಳು ಹೀಗಿವೆ.

1. ಥ್ರೀ ಟೈರ್ ಸಿಟಿ ಸೈಬಸ್ (ಸೈಕಲ್ ಬಸ್) – ಹೌದು. ಈ ಬಸ್ ಗೆ ಮೂರೇ ಚಕ್ರ. ಮೂರು ಚಕ್ರಗಳಿಂದ ಆಟೋ ಓಡಬಹುದಾದರೆ ಬಸ್ ಯಾಕಾಗಬಾರದು? ಈ ಬಸ್ಸಿನಲ್ಲಿ ಪ್ರತಿ ಸೀಟಿನ ಕೆಳಗೂ ಸೈಕಲ್ ಗೆ ಇರುವಂತೆ ಪೆಡಲ್ ಗಳಿರುತ್ತವೆ. ಪ್ರತಿಯೊಬ್ಬ ಪ್ರಯಾಣಿಕನೂ ತಾನು ಕುಳಿತುಕೊಂಡ ಬಳಿಕ ತಿಕ್ಕಲು ತಿಕ್ಕಲಾಗಿ ನಿದ್ದಗೆ ಶರಣಾಗದೆ ಪೆಡಲ್ ತುಳಿಯಲು ಆರಂಭಿಸಬೇಕು. ಗರ್ಭಿಣಿಯರು, ಮಕ್ಕಳು ಹಾಗೂ ಹಿರಿಯ ನಾಗರಿಕರು ಯಥಾಶಕ್ತಿ ತುಳಿಯಬಹುದು ಅಥವಾ ತುಳಿಯದೇ ಇರಬಹುದು. ಆಯ್ಕೆಯ ಸ್ವಾತಂತ್ರ್ಯ ಅವರಿಗೆ ಬಿಟ್ಟದ್ದು. ಹೀಗೆ ಎಲ್ಲ ಪ್ರಯಾಣಿಕರು ಪೆಡಲ್ ತುಳಿಯುವ ಮೂಲಕ ಬಸ್ ಮುಂದೆ ಚಲಿಸುತ್ತದೆ. ಪ್ರಯಾಣಿಕರು ಕಡಿಮೆಯಿದ್ದರೆ, ಎಮರ್ಜೆನ್ಸಿ ಎಂಜಿನ್ ಸ್ಟಾರ್ಟ್ ಮಾಡಿ ಕೊಂಚ ವೇಗ ದಯಪಾಲಿಸಬಹುದು. ಈ ಪೆಡಲ್ ಬಳಿಯೇ ಚಿಕ್ಕದೊಂದು ಮೋಟರ್ ಅಳವಡಿಸಲಾಗಿರುತ್ತದೆ. ಪೆಡಲ್ ತುಳಿಯುತ್ತಿರುವಂತೆ ಈ ಮೋಟರ್ ಕೂಡ ಚಾರ್ಜ್ ಆಗುತ್ತದೆ. ಹೀಗೆ ಚಾರ್ಜ್ ಆದ ಮೋಟರ್ ನಿಂದ ಪ್ರಯಾಣಿಕರು ತಮ್ಮ ಮೊಬೈಲ್ ಇತ್ಯಾದಿಗಳನ್ನು ಚಾರ್ಜ್ ಮಾಡಿಕೊಳ್ಳಬಹುದು. ಆದರೆ ಚಾರ್ಜಿಂಗ್ ಸೌಲಭ್ಯಕ್ಕೆ ಬಿಎಂಟಿಸಿ ವತಿಯಿಂದ ಪಾಸ್ ತೆಗೆದುಕೊಳ್ಳಬೇಕಾಗುತ್ತದೆ. ಪರಿಸರ ಸಂರಕ್ಷಣೆಯಲ್ಲಿ ಇದೊಂದು ದಿಟ್ಟ ಹೆಜ್ಜೆ.

2. ಟೆಲಿಪತಿ ಪಿಸಿಓ – ಎಲ್ಲ ಕಡೆ ಪಿಸಿಓಗಳಿರುವಂತೆ ಟೆಲಿಪತಿ ಸೆಂಟರ್ ಗಳಿರುತ್ತವೆ. ಈ ಸೆಂಟರ್ ಗಳಲ್ಲಿ ಟೆಲಿಪತಿ ಮೂಲಕ ಸಂದೇಶ ಕಳಿಸುವಲ್ಲಿ ನಿಷ್ಣಾತರಾದ ಟೆಲಿಪತಿ ಕಾಲ್ ಎಕ್ಸಿಕ್ಯೂಟಿವ್ಸ್ ಇರುತ್ತಾರೆ. ಇವರ ಬಳಿ ತೆರಳಿ ನಮಗೆ ಸಂದೇಶ ರವಾನಿಸಬೇಕಾದ ವ್ಯಕ್ತಿಯ ಫೋಟೋ ನೀಡಿ, ನಮ್ಮ ಸಂದೇಶ ತಿಳಿಸಿದರೆ ಮುಗಿಯಿತು. ಟೆಲಿಪತಿ ಕಾಲ್ ಎಕ್ಸಿಕ್ಯೂಟಿವ್ ಗಳು ಸಂದೇಶ ರವಾನಿಸುತ್ತಾರೆ. ಇದೊಂದು ರೀತಿ ಹ್ಯೂಮನ್ ಪೇಜರ್ ಸರ್ವಿಸ್ ಇದ್ದಹಾಗೆ. ಕೊಂಚ ಹೊತ್ತು ಕಾದರೆ ಮರು ಸಂದೇಶವನ್ನೂ ತಿಳಿಸಲಾಗುತ್ತದೆ. ಈ ಪದ್ಧತಿಯು ಹೆಚ್ಚು ಸಮಯ ಬೇಡುತ್ತದಾದರೂ, ಮೊಬೈಲ್ ಸಿಗ್ನಲ್ ಗಳಿಂದ ಆಗುವ ಹಾನಿ ತಡೆಗಟ್ಟುವಲ್ಲಿ ಸಹಕಾರಿ.

3. ಚೇನ್ ಸ್ನ್ಯಾಚಿಂಗ್ ಡಿಟೆಕ್ಟಿಂಗ್ ಆಟೋಮ್ಯಾಟಿಕ್ ಅಲಾರ್ಮ್ ಸಿಸ್ಟಮ್ – ಒಂಟಿ ಮಹಿಳೆಯರ ಅಥವಾ ಫಾರ್ ದೆಟ್ ಮ್ಯಾಟರ್ ಪತಿಯ ಜೊತೆ ಹೊರಟ ಮಹಿಳೆಯರ ಕತ್ತಿನಲ್ಲಿರುವ ಸರ ಅಪಹರಣ ಪ್ರಕರಣ ತಡೆಯಲು ಇದು ಸಹಾಯಕ. ಪ್ರತಿಯೊಬ್ಬ ಮಹಿಳೆಯೂ ತಾನು ಚಿನ್ನದ ಅಂಗಡಿಯಿಂದ ಆಭರಣ ಖರೀದಿಸುವಾಗ ಮೊಬೈಲ್ ರೀತಿಯ ಪುಟ್ಟ ಯಂತ್ರವೊಂದನ್ನು ಖರೀದಿಸಬೇಕಾಗುತ್ತದೆ. ಆಭರಣಗಳನ್ನು ಧರಿಸಿ ಹೊರಹೋಗುವ ಸಂದರ್ಭದಲ್ಲಿ ಮಹಿಳೆಯರು ಈ ಯಂತ್ರವನ್ನು ತಮ್ಮ ಬಳಿ ಇಟ್ಟುಕೊಂಡಿರುವುದು ಅವಶ್ಯ. ಕಳ್ಳರು ಬೈಕ್ ನಲ್ಲಿ ಬಂದು ಸರ ಎಗರಿಸಿ ಓಡಿಹೋಗುತ್ತಿರುವಂತೆ ಯಂತ್ರದಲ್ಲಿರುವ ಗುಂಡಿಯನ್ನು ತಕ್ಷಣ ಒತ್ತಬೇಕು. ಆಗ ಈ ಯಂತ್ರ ಸೆಕೆಂಡಿನ ಹತ್ತನೇ ಒಂದರಷ್ಟು ಸಮಯದಲ್ಲಿ ಸರದ ಬಾರ್ ಕೋಡ್ ಅನ್ನು ಚೇನ್ ಸ್ನ್ಯಾಚಿಂಗ್ ಡಿಟೆಕ್ಟಿಂಗ್ ಸೆಂಟರ್ ಗೆ ತಲುಪಿಸುತ್ತದೆ. ಅಲ್ಲಿನ ಸಿಸ್ಟಮ್ ಗಳು ತಕ್ಷಣ ಅಲಾರ್ಮ್ ಬಟನ್ ಒತ್ತುತ್ತಿರವಂತೆ ಸರದಲ್ಲಿ ಅಳವಡಿಸಲಾಗಿರುವ ನಾನೋ ಚಿಪ್ ಗಳ ಸಹಾಯದಿಂದ ಈಗಾಗಲೇ ವಿದ್ಯುದ್ದೀಪ ಕಂಬಗಳಲ್ಲಿ ಅಳವಡಿಸಲಾಗಿರುವ ಸೈರನ್ ಗಳು ಕಳ್ಳರು ಓಡಿಹೋಗುವ ದಿಕ್ಕಿನ ಉದ್ದಕ್ಕೂ ಲಬೋ ಲಬೋ ಎಂದ ಬಾಯಿ ಬಡಿದುಕೊಳ್ಳಲಾರಂಭಿಸುತ್ತವೆ. ಮುಂದೆ ಸಾರ್ವಜನಿಕರ ಸಹಾಯದಿಂದ ಕಳ್ಳರಿಗೆ ಧರ್ಮದೇಟು ಹಾಕಬಹುದು. ಕನ್ನಡ ಸುದ್ದಿವಾಹಿನಿಗಳ ಕ್ರೈಮ್ ಕಾರ್ಯಕ್ರಮ ತಂಡ ಚಿತ್ರೀಕರಣ ಮುಗಿಸಿದ ಬಳಿಕ, ಪೋಲಿಸರು ಎಂದಿನಂತೆ ಕೊನೆಯಲ್ಲಿ ಬಂದು ಕಳ್ಳನನ್ನು ಬಂಧಿಸಿ ಆತನ ಚಿತ್ರವನ್ನು ಪೋಲಿಸ್ ಆಲ್ಬಮ್ ಗೆ ಸೇರಿಸಬಹುದು.

4. ಸಿಗ್ನಲ್ ಜಂಪ್ ಕಂಟ್ರೋಲಿಂಗ್ ಡಿವೈಸ್ – ಡೆನ್ಮಾರ್ಕ್ ನಲ್ಲಿ ಜನಗಳಿಗಿಂತ ದನಗಳ ಸಂಖ್ಯೆ ಜಾಸ್ತಿಯಿರುವಂತೆ ಬೆಂಗಳೂರಿನಲ್ಲಿ ಜನಗಳಿಗಿಂತ ಟೂ ವ್ಹೀಲರ್ ಹಾಗೂ ಇತರ ವಾಹನಗಳ ಸಂಖ್ಯೆ ಬೆಳೆಯುತ್ತಿದೆ. ಹೀಗಾಗಿ ಪೀಕ್ ಅವರ್ ನಲ್ಲಿಯೂ ಸಿಗ್ನಲ್ ಜಂಪ್ ಮಾಡುವ ಪರಿಪಾಠ ಪ್ರಾಚೀನ ಕಾಲದಿಂದಲೂ ಅಚಾನೂಕವಾಗಿ ನಡೆದುಕೊಂಡು ಬಂದಿದೆ. ಚಾಲಕರ ಈ ಜಂಪಿಂಗ್ ಪ್ರವೃತ್ತಿಯಿಂದಾಗಿ ಅಪಘಾತಗಳ ಪ್ರಮಾಣ ಏರುತ್ತಿದೆ. ಇದನ್ನು ತಡೆಗಟ್ಟಲು ಪ್ರತಿ ಸಿಗ್ನಲ್ ನಲ್ಲಿಯೂ ಸಿಗ್ನಲ್ ಜಂಪ್ ಕಂಟ್ರೋಲಿಂಗ್ ಡಿವೈಸ್ ಅಳವಡಿಸಲಾಗಿರುತ್ತದೆ.

ಹಸಿರು ದೀಪ ಆರಿ, ಕೇಸರಿ ದೀಪ (ಎಡಪಂಥೀಯರು ಬೇಕಾದರೆ ಇದನ್ನು ಆರೆಂಜ್ ದೀಪ ಎಂದು ಓದಿಕೊಳ್ಳಬಹುದು) ಉರಿಯುತ್ತಿರುವಂತೆ ಸೀತಾಮಾತೆಯನ್ನು ಭೂತಾಯಿಯು ಬಾಚಿಕೊಳ್ಳುವ ಸಂದರ್ಭದಲ್ಲಿ ಬಾಯಿ ಬಿಟ್ಟಂತೆ ಝಿಬ್ರಾ ಕ್ರಾಸಿಂಗ್ ಗುಂಟ ಭೂಮಿ ಬಾಯಿತೆರೆಯುತ್ತದೆ. ಅದರಿಂದ ನಿಧಾನವಾಗಿ ಒಂದೂವರೆ ಇಂಚು ಅಗಲದ ಕಬ್ಬಿಣದ ಮೊಳೆಗಳು ನಿಧಾನವಾಗಿ ಹೊರಬರುತ್ತವೆ. ಯಾರಾದರೂ ಸಿಗ್ನಲ್ ಜಂಪ್ ಮಾಡಿದರೆ ಅಷ್ಟೇ…ಅವರ ವಾಹನದ ಟೈರ್ ಮೊಳೆಗೆ ಸಿಕ್ಕು ಢಬ್ ಎನ್ನುತ್ತದೆ ಅಥವಾ ಫುಸ್ ಎಂದು ನಿಧಾನವಾಗಿ ಗಾಯಗೊಳ್ಳುತ್ತದೆ. ಮುಂದೆ ಗಾಡಿಯನ್ನು ತಳ್ಳಿಕೊಂಡು ಹೋಗುವ ದುರ್ದೆಸೆ ಯಾರಿಗೆ ಬೇಕು ಎಂಬ ಭಯದಿಂದ ಎಲ್ಲರೂ ಸಿಗ್ನಲ್ ಲೈಟ್ ಫಾಲೋ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೇಗಿದೆ ಐಡಿಯಾ?

5. ಇಂಡೀಸಂಟ್ ಕಾಮೆಂಟ್ ಎಲಿಮಿನೇಟಿಂಗ್ ಟೆಕ್ನಿಕ್ – ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಸೇರಿದಂತೆ ರಾಜ್ಯದ ವಿವಿಧೆಡೆ ನಡೆಯುವ ನಾಟಕ ಪ್ರದರ್ಶನಗಳ ಸಂದರ್ಭದಲ್ಲಿ ಹಲವು ಕಿಡಿಗೇಡಿ ಪ್ರೇಕ್ಷಕರು (ಕಿಡಿಗೇಡಿಯಾಗಿದ್ದರೆ ಪ್ರೇಕ್ಷಕ ಎನ್ನಬೇಕೆ ಎಂಬುದು ಬೇರೆ ಪ್ರಶ್ನೆ) ಅಸಭ್ಯ ಕಾಮೆಂಟ್ ಗಳನ್ನು ಮಾಡುವುದು ಸಾಮಾನ್ಯ. ಇದರ ನಿಯಂತ್ರಣಕ್ಕಾಗಿ ಆಡಿಟೋರಿಯಂನ ಮೇಲ್ಭಾಗದಲ್ಲಿ ಕಲ್ಲುಗಳಿಂದ ತುಂಬಿದ ಬಾಕ್ಸಿಂಗ್ ಗ್ಲೌಸ್ ಗಳನ್ನು ಕಟ್ಟಲಾಗಿರುತ್ತದೆ. ಯಾವುದೇ ಕಿಡಿಗೇಡಿ ಪ್ರೇಕ್ಷಕ ಅಸಭ್ಯ ಕಾಮೆಂಟ್ ಮಾಡಿದರೆ ಲೈಟಿಂಗ್ ರೂಮಿನಲ್ಲಿರುವ ವ್ಯಕ್ತಿ, ಕಿಡಿಗೇಡಿ ಕುಳಿತ ಸೀಟ್ ನಂಬರಿನ ಗುಂಡಿ ಒತ್ತುತ್ತಾನೆ. ಆಗ ತಕ್ಷಣ ಮೇಲಿನಿಂದ ಬಾಕ್ಸಿಂಗ್ ಗ್ಲೌಸ್ ಭಾರೀ ವೇಗವಾಗಿ ಬಂದು ಕಿಡಿಗೇಡಿ ತಲೆಗೆ ಕುಕ್ಕುತ್ತದೆ ಅಥವಾ ಜಪ್ಪುತ್ತದೆ. ಆಗ ಕಿಡಿಗೇಡಿ ಬಾಯಿ ಮುಚ್ಚಿಕೊಂಡು ನಾಟಕ ನೋಡಬೇಕಾಗುತ್ತದೆ. ಕರ್ನಾಟಕದ ಸಂಸ್ಕೃತಿ ರಕ್ಷಣೆಗೆ ಇದು ಅನಿವಾರ್ಯ ಕ್ರಮ ಹಾಗೂ ಕರ್ಮ.