ಇದೀಗ ಸುಳ್ಳು ಹೇಳುವುದು ತುಂಬಾ ಸುಲಭ

mobile

ಇದೀಗ ಸುಳ್ಳು ಹೇಳುವುದು ತುಂಬಾ ಸುಲಭ. ಹೌದು, ಮೊಬೈಲ್ ಬಂದಾಗಿನಿಂದ ಸುಳ್ಳು ಹೇಳುವುದು ತುಂಬಾ ಸುಲಭವಾಗಿ ಪರಿಣಮಿಸಿದೆ. ಉದಾಹರಣೆಗೆ ಇದನ್ನೇ ತೆಗೆದುಕೊಳ್ಳಿ. ನೀವು ಯಾರಿಗೋ ಕಾಲ್ ಮಾಡುತ್ತೀರಿ…ಸುಮಾರು ರಿಂಗ್ ಆಗುತ್ತದೆ. ಆದರೆ ಅತ್ತ ಕಡೆಯಿಂದ ಮೊಬೈಲ್ ರೀಸಿವ್ ಆಗವುದಿಲ್ಲ. ನೀವು ಒಂದೆರಡು ಬಾರಿ ಪ್ರಯತ್ನಿಸುತ್ತೀರಿ. ಆಗಲೂ ಯಾವುದೇ ಉತ್ತರ ಬರುವುದಿಲ್ಲ. ನೀವು ಸುಮ್ಮನಾಗುತ್ತೀರಿ. ವಿಷಯ ಅಷ್ಟು ಅರ್ಜೆಂಟ್ ಇರುವುದಿಲ್ಲವಾದ್ದರಿಂದ ನೀವು ನಿಮ್ಮ ಪ್ರಯತ್ನ ಅಲ್ಲಿಗೆ ಬಿಡುತ್ತೀರಿ. ಒಂದೆರಡು ದಿನ ಬಿಟ್ಟು ನಿಮಗೆ ಮತ್ತೆ ಕಾಲ್ ಮಾಡುವುದು ನೆನಪಾಗುತ್ತದೆ. ಈ ಬಾರಿ ಎರಡೇ ರಿಂಗ್ ಗೆ ಅತ್ತ ಕಡೆ ಮೊಬೈಲ್ ರಿಸೀವ್ ಆಗುತ್ತದೆ. ಉಭಯ ಕುಶಲೋಪರಿ ಮಾತನಾಡಿದ ನಂತರ ನೀವು ಕೇಳುತ್ತೀರಿ, “ಅಲ್ಲಯ್ಯಾ, ಎರಡು ದಿನ ಮೊದಲು ಮೂರ್ನಾಲ್ಕು ಬಾರಿ ಕಾಲ್ ಮಾಡಿದ್ದೆ. ನೀನು ರಿಸೀವ್ ಏಕೆ ಮಾಡಲಿಲ್ಲ?”

ಇದಕ್ಕೆ ಆತ ಕೊಡಬಹುದಾದ ಉತ್ತರಗಳು ಹೀಗಿವೆ.

1.       “ಏನು ಎರಡು ದಿನಗಳ ಹಿಂದೆ ಕಾಲ್ ಮಾಡಿದ್ದೆಯಾ. ಮತ್ತೆ ನನ್ನ ಫೋನ್ ರಿಂಗೇ ಆಗಿಲ್ಲ”.

2.       “ನೀನು ಕಾಲ್ ಮಾಡಿರುವುದು ಸಾಧ್ಯವೇ ಇಲ್ಲ. ನನ್ನ ಮಿಸ್ಡ್ ಕಾಲ್ ಲಿಸ್ಟ್ ನಲ್ಲಿಯೂ ನಿನ್ನ ಹೆಸರಿಲ್ಲ”.

3. “ಹೌದು ಕಣೋ. ನಾನಾಗ ಮೀಟಿಂಗ್ ನಲ್ಲಿದ್ದೆ. ಆಮೇಲೆ ಅರ್ಧಗಂಟೆ ಬಿಟ್ಟು ಫೋನ್ ಮಾಡ್ದೆ. ಆದ್ರೆ ನೀನು ರಿಸೀವೇ ಮಾಡ್ಲಿಲ್ಲ…”(ಇದು ಆರೋಪದಿಂದ ತಪ್ಪಿಸಿಕೊಳ್ಳುವ ಹಾಗೂ ನಿಮ್ಮನ್ನೇ ದೋಷಿಯ ಸ್ಥಾನದಲ್ಲಿ ನಿಲ್ಲಿಸುವ ಸ್ಕೆಚ್)

4. “ಹೌದು ಕಣೋ. ನಾನಾಗ ಬೈಕ್ ಓಡಿಸುತ್ತಿದ್ದೆ. ಬೈಕ್ ಸೈಡಿಗೆ ನಿಲ್ಲಿಸಿ ನಿನಗೆ ಫೋನ್ ಮಾಡಿದೆ. ಆದರೆ ನಿನ್ನ ಫೋನ್ ನಾಟ್ ರೀಚೆಬಲ್ ಬಂತು”. (ಇದಕ್ಕೆ ಏನು ಪ್ರತ್ಯುತ್ತರ ಹೇಳುತ್ತೀರಿ?)

5. “ಎರಡು ದಿನಗಳ ಹಿಂದೆ ನಾನು ಔಟ್ ಆಫ್ ಸ್ಟೇಷನ್ ಇದ್ದೆ. ನಿನ್ನೆಯಷ್ಟೇ ಬಂದೆ. ನಿನಗೆ ಕಾಲ್ ಮಾಡಿದ್ದೆ, ಆದರೆ ಎಂಗೇಜ್ ಬರುತ್ತಿತ್ತು”. (ಇದನ್ನೂ ನೀವು ನಂಬಲೇಬೇಕು.)

ಇಷ್ಟೇ ಅಲ್ಲ. ಇವು ಕೇವಲ ಎಕ್ಸಾಂಪಲ್ ಅಷ್ಟೇ. ಇದೇ ರೀತಿಯ ಮತ್ತಷ್ಟು ಉತ್ತರಗಳು ಸಿಗುತ್ತವೆ. ಇಲ್ಲಿ ಸಂಪೂರ್ಣ ದೋಷವನ್ನು ಯಾಂತ್ರಿಕತೆಯ ಮೇಲೆ ಹೊರೆಸಿ ಜವಾಬ್ದಾರಿಯಿಂದ ಪಾರಾಗುವ ಪ್ರಯತ್ನ ಸ್ಪಷ್ಟವಾಗಿ ಕಂಡುಬರುತ್ತದೆ. ಇಂತಹ ಉತ್ತರಗಳಲ್ಲಿ ಯಾವುದನ್ನು ನಂಬಬೇಕು, ಯಾವುದನ್ನು ನಂಬಬಾರದು ಎಂಬುದು ತಿಳಿಯುವುದಿಲ್ಲ. ನೀವು ನಂಬಿದರೂ, ನಂಬದಿದ್ದರೂ ಆಕಡೆಯವನಿಗೇನೂ ಪರಿಣಾಮವಾಗುವುದಿಲ್ಲ. ಏಕೆಂದರೆ ಆತ ಈಗಾಗಲೇ ಹೀಗೆ ಉತ್ತರ ಕೊಟ್ಟು ಸ್ವತಃ ಕ್ಲಿನ್ ಚಿಟ್ ಪಡೆದುಕೊಂಡುಬಿಟ್ಟಿದ್ದಾನೆ. ಹಣೆಯನ್ನು ಚಚ್ಚಿಕೊಳ್ಳುವ ಹೊರತು ನಿಮಗೆ ಬೇರಾವ ಆಪ್ಶನ್ ಇರುವುದಿಲ್ಲ.

ಮೊದಲಾದರೆ, ಅಂದರೆ ಮನೆಯಲ್ಲಿ ಲಾಂಡ್ ಲೈನ್ (ಈ ಶಬ್ದ ಕೂಡ ಹೊಸತು. ಕೆಲ ವರ್ಷಗಳ ಹಿಂದೆ ಫೋನ್ ಎಂದರೆ ಲ್ಯಾಂಡ್ ಲೈನ್ ಎಂದೇ ಅರ್ಥವಾಗುತ್ತಿತ್ತು.) ಇರುತಿತ್ತು. ಕಾಲರ್ ಐಡಿ ಇಲ್ಲದ, ಕಪ್ಪುಬಣ್ಣದ, ರೋಟೆಟಿಂಗ್ ಡಯಲಿಂಗ್ ಇರುವ, ಪ್ರತಿ ನಂಬರ್ ತಿರುವಿದಾಗಲೂ ಗರ್..ಎಂದು ಸದ್ದು ಮಾಡುತ್ತಿದ್ದ ಫೋನ್ ಗಳು. ಆಗ ಈ ರೀತಿಯ ಕನ್ ಫ್ಯೂಶನ್ ಗಳಿಗೆ ಆಸ್ಪದವೇ ಇರಲಿಲ್ಲ. ಫೋನ್ ಬಂದರೆ ಎತ್ತಿಕೊಳ್ಳದೇ ಬೇರೆ ವಿಧಿ ಇರುತ್ತಿರಲಿಲ್ಲ. ಒಂದು ವೇಳೆ ಫೋನ್ ರಿಸೀವ್ ಆಗಿಲ್ಲ ಅಂದರೆ ಮನೆಯಲ್ಲಿ ಯಾರೂ ಇಲ್ಲ ಎಂದು ನಿಶ್ಚಿತವಾಗಿ ತಿಳಿದುಕೊಂಡುಬಿಡುತ್ತಿದ್ದೆವು. ಯಾಂತ್ರಿಕತೆ ಮುಂದುವರೆದ ಹಾಗೆಲ್ಲ ಸುಳ್ಳು ಹೇಳುವುದು ಹೆಚ್ಚಾಗಿದೆ ಮತ್ತು ಸುಲಭವಾಗಿದೆ.

ನನ್ನ ಆತ್ಮೀಯ ಗೆಳತಿಯೊಬ್ಬಳಿದ್ದಾಳೆ. ಹೆಚ್ಚಾಗಿ ನಾನೇ ಅವಳ ಮೊಬೈಲ್ ಗೆ ವಾರಕ್ಕೊಮ್ಮೆ ಕಾಲ್ ಮಾಡುತ್ತಿರುತ್ತೇನೆ. ಆದರೆ ಅಕೆ ರಿಸೀವ್ ಮಾಡವುದೇ ಇಲ್ಲ.  ಎರಡು ಮೂರು ವಾರ ಬಿಟ್ಟು ಆಕೆ ರಿಸೀವ್ ಮಾಡಿ ನಾನು ಮೇಲೆ ಹೇಳಿದ ಐದು ಕಾರಣಗಳಲ್ಲಿ ಯಾವುದಾದರೂ ಒಂದನ್ನು ಹೇಳುತ್ತಾಳೆ. ನಾನು ಒಪ್ಪಿಕೊಳ್ಳಲೇ ಬೇಕು. ಇದು ಕೇವಲ ನನ್ನ ಗೆಳತಿಯೊಬ್ಬಳ ವಿಷಯವಲ್ಲ. ಹಲವರಿಗೆ ಇಂತಹ ಅನುಭವಗಳಾಗಿರುತ್ತವೆ. ಮೊಬೈಲ್ ರಿಸೀವ್ ಮಾಡದಿದ್ದರೆ, ನನಗಂತೂ ತೀರ ಕಿರಿಕಿರಿಯಾಗುತ್ತದೆ. ಜೊತೆಗೆ ಸಿಟ್ಟೂ ಬರುತ್ತದೆ. ಇದರಿಂದ ಒಮ್ಮೊಮ್ಮೆ ಸಂಬಂಧಗಳೇ ಸೊರಗಿಹೋಗುವ ಸಾಧ್ಯತೆ ಇರುತ್ತದೆ.

ಮೋಸ್ಟ್ ಮೊಬೈಲ್ ಯೂಸರ್ಸ್ ದೇಶಗಳಲ್ಲಿ ಭಾರತ ಮಂಚೂಣಿಯಲ್ಲಿದೆಯಂತೆ. ಮೊಬೈಲ್ ಮ್ಯಾನರ್ಸ್ ನಲ್ಲಿ ಯಾವ ಸ್ಥಾನದಲ್ಲಿ ಯಾರಿಗಾದರೂ ಗೊತ್ತಿದೆಯೆ?

“Don’t eat a person who is working”

566

Five cannibals (man eaters) get appointed as programme producers  in a tv channel.

During the welcoming ceremony the boss says: “You’re all part of our team now. You can earn good money here, and you can go to the company canteen for something to eat. So don’t trouble the other employees”.

The cannibals promise not to trouble the other employees.

Four weeks later the boss returns and says: “You’re all working very hard, and I’m very satisfied with all of you. One of our programme producer has disappeared however. Do any of you know what happened to her?” The cannibals disown all knowledge of the missing programme producer. After the boss has left, the leader of the cannibals says to the others: “Which of you idiots ate the programme producer?”

One of the cannibals raises his hand hesitantly, to which the leader of the cannibals says: “You FOOL! For four weeks we’ve been eating copy editors , bulleting producers, executives , and chiefs and no-one has noticed anything, and now YOU ate one programme producer and it got noticed. So here after please don’t eat a person who is working.”

ಮಾಧ್ಯಮ ಪರಿಸ್ಥಿತಿ ಹೇಗಿದೆ? ಮತ ಚಲಾಯಿಸಿ…

ರಾಜ್ಯದಲ್ಲಿ ಮಾಧ್ಯಮಗಳ ಪರಿಸ್ಥಿತಿ ಹೇಗಿದೆ ಎಂಬ ಬಗ್ಗೆ ಪೋಲ್ ಆರಂಭಿಸಿದ್ದೇನೆ. ನೀವೂ ವೋಟ್ ಮಾಡಿ…

ಗೌಡರ ಗತ್ತೇ ಗಮ್ಮತ್ತಿನ ಚರ್ಚೆ

ಈ ಹಿಂದೆ ನನ್ನ ಬ್ಲಾಗ್ ನಲ್ಲಿ ಗೌಡರ ಗತ್ತೇ ಗಮ್ಮತ್ತು ಎಂಬ ಪೋಸ್ಟ್ ಹಾಕಿದ್ದೆ. ಕೆಲ ದಿನಗಳ ಹಿಂದೆ ಅದೇ ಪೋಸ್ಟನ್ನು ಫೇಸ್ ಬುಕ್ ನಲ್ಲಿ ಪ್ರಕಟಿಸಿದ್ದೆ. ಅದಕ್ಕೆ ಬಂದ ಆಸಕ್ತಿದಾಯಕ ಪ್ರತಿಕ್ರಿಯೆಗಳು ಇಲ್ಲಿವೆ.

dg

ಅರಕಲಗೂಡು ಜಯರಾಮ್ ಹೇಳುತ್ತಾರೆ….

ಹೌದು ಸರ್ ಪತ್ರಕರ್ತರಿಗೆ ಸುದ್ದಿಯ ಹಪಾಹಪಿ ಇರುತ್ತದೆ ವಿನಹ, ನಾವು ಭೇಟಿ ಮಾಡಲು ತೆರಳುತ್ತಿರುವ ವ್ಯಕ್ತಿಯನ್ನು ಹೇಗೆ ಟ್ರಾಕ್ ಮಾಡಬೇಕು, ಯಾವ ಸಂಧರ್ಭ ಬಳಸಿಕೊಳ್ಳಬೇಕು ಎಂಬುದು ಗೊತ್ತಿರುವುದಿಲ್ಲ. ಗುಂಪಿನೊಳಗೆ ಗೋವಿಂದ ಅಂತ ನುಗ್ಗಿ ಬಲವಂತದ ಬೈಟ್ ತೆಗೆದುಕೊಳ್ಳುವುದು ತಪ್ಪು. ಇಲ್ಲಿ ಪರಸ್ಪರರ ಭಾವನೆಗಳನ್ನು ಗೌರವಿಸುವ ಅವಕಾಶವಿರಬೇಕು. ದೇವೇಗೌಡ ಹುಂಬತನದ ವ್ಯಕ್ತಿತ್ವದವರು ಎನಿಸುವುದು ನಿಜ. ಅದಕ್ಕೆ ಅವರ ಸ್ಥಾನಮಾನಗಳು ಕಾರ… Read Moreಣವಿರಬಹುದು ಹಾಗಾಗಿ ಪತ್ರಕರ್ತನಾದವನಿಗೆ ಹಪಾಹಪಿ ಇದ್ದರೆ ಸಾಲದು ಒಳನೋಟವು ಬೇಕು. ಅದರಲ್ಲೂ ದೃಶ್ಯ ಮಾಧ್ಯಮದ ಪತ್ರಕರ್ತರಿಗೆ ಇಂತಹ ತಿಳುವಳಿಕೆ ಅಗತ್ಯವಾಗಿರಲೇಬೇಕು. (ಯಾರಿಗಾದರೂ ನೋವಾದರೆ ಕ್ಷಮಿಸಿ)

ರಮೇಶ್ ಎಸ್ ಪೆರ್ಲಾ ಹೇಳುತ್ತಾರೆ….

@AJ your right..Devegowda never disappointed me

ಅಶ್ವಿನಿ ಶ್ರೀಪಾದ್ ಹೇಳುತ್ತಾರೆ….

ನಂಗೆ ನಿಮ್ಮ ಕೊನೆ ಲೈನ್ ಇಷ್ಟ ಆಯ್ತು. Its very much true. ನಮ್ಮ ಜನಕ್ಕೆ ಬುದ್ಧಿ ಇಲ್ಲ.

ಪ್ರದೀಪ್ ಪೈ ಹೇಳುತ್ತಾರೆ…..

Media is bit by bite. Mediamen use and abuse politicians. Politicians overuse, abuse and use otherwise the media-men. E-media is bit by this bite syndrome, politicians wound the media men more by using this bite syndrome

ರಮೇಶ್ ಎಸ್. ಪೆರ್ಲಾ ಹೇಳುತ್ತಾರೆ….

ನೀತಿ – ಗೌಡರಿಗೆ ಯಾವ ಪತ್ರಕರ್ತರನ್ನು ಎಲ್ಲಿ, ಹೇಗೆ, ಯಾಕೆ, ಇಡಬೇಕು ಎಂಬ ಸ್ಪಷ್ಟ ಕಲ್ಪನೆ ಇದೆ. ಅದೇ ಪತ್ರಕರ್ತರಿಗೆ ಇಲ್ಲ.. (ಯಾರಿಗಾದರೂ ನೋವಾದರೆ ಏನು ಮಾದುವುದು..)

ಅರಕಲಗೂಡು ಜಯರಾಮ್ ಹೇಳುತ್ತಾರೆ….

yeah i agree with perla… bcoz ಯಾವ ಪತ್ರಕರ್ತರನ್ನು ಹೇಗೆ ಎಲ್ಲಿಡಬೇಕೆಂಬುದು ಗೌಡಪ್ಪನಿಗೆ ಮತ್ತು ಅವರ ಪುತ್ರರಿಗೆ ಚೆನ್ನಾಗಿ ಗೊತ್ತು! ಗೌಡ ಹುಂಬ ವ್ಯಕ್ತಿತ್ವದವರು. ತಮಗೆ ಇಷ್ಟ ಬಂದರೆ ಮಾತು, ಅದೂ ಬೇಕೋ ಬೇಡವೋ ಎಂಬಂತೆ ವರ್ತಿಸುತ್ತಾರೆ. ಕಳೆದ ವಿಧಾನ ಸಭಾ ಚುನಾವಣೆಗಳಲ್ಲಿ ಜೆಡಿಎಸ್ರ ಹೀನಾಯ ಸೋಲು ಕಂಡಾಗ ಟಿವಿ9 ಪತ್ರಕರ್ತರನ್ನು ಬೆಂಗಳೂರಿನಲ್ಲಿ ನಡೆದ ಪಕ್ಷದ ಸಭೆಯಿಂದ ನಿರ್ದಾಕ್ಷ್ಯೀಣ್ಯವಾಗಿ ಹಚಾ ಅಂದಿದ್ದರು. ಆಗ ಸ್ಥಳದಲ್ಲಿದ್ದ ಇತರೆ ಪತ್ರಕರ್ತರು ತೆಪ್ಪಗಾಗಿದ್ದರೆ ವಿನಹ ಯಾರೊಬ್ಬರು ಪ್ರತಿಭಟಿಸಲಿಲ್ಲ. ಒಮ್ಮೆ ಉದಯ ಟಿವಿಯಲ್ಲಿ ದೀಪಕ್ ತಿಮ್ಮಯ್ಯ ಪ್ರಶ್ನೆಗಳ ಮೇಲೆ ಪ್ರಶ್ನೆ ಎಸೆಯುತ್ತ ನೀರಿಳಿಸುವ ಪ್ರಯತ್ನ ಮಾಡಿದರೆ ದೇವೇಗೌಡರು ದೀಪಕ್ ತಿಮ್ಮಯ್ಯನಿಗೂ ತಿರುಗುಬಾಣವಾಗಿ ಆತನನ್ನೆ ಮಂಗ ಮಾಡಿದರೆ ವಿನಹ ತಮ್ಮ ಮೈ ನೀರಿಳಿಸಲು ಬಿಡಲಿಲ್ಲ, ಅಂತಹ ಚಾಣಾಕ್ಷತೆ, ಕುಖ್ಯಾತಿ ಗೌಡರಿಗಿದೆ. ಅಷ್ಟೇ ಅಲ್ಲ ಗೌಡರಿಗೆ ಪತ್ರಕರ್ತರು ಅನುಕೂಲ ಸಿಂದುವಾಗಿ ಬಳಕೆಯಾಗುತ್ತಾರೆಯೇ ವಿನಹ ಬೇರೇ ಏನೂ ಅಲ್ಲ… ಕಿರಿಯ ಪತ್ರಕರ್ತರ ಮುಂದೆ ಘಟಾನುಘಟಿ ಹಿರಿಯ ಪತ್ರಕರ್ತರ ಪರಿಚಯ ಹೇಳಿ ಕಿರಿ ಕಿರಿ ಮಾಡುತ್ತಾರೆ . ನಿಮ್ಮ ನೀತಿಯಿಂದ ಯಾರಿಗಾದರು ನೋವಾಗಿದ್ದರೆ definately he is unfit for the journalism… what u say?

ಟಿಪ್ಪು ಸಾವಿನ ಸಂದರ್ಭದಲ್ಲಿ….

tippu

ಟಿಪ್ಪು ಸುಲ್ತಾನ್ ನ ಅಂತಿಮ ಯುದ್ಧದ (1799) ಸಂದರ್ಭದಲ್ಲಿ ಆತನ ಕುದುರೆಯ ಮೇಲೆ ಹೊದಿಸಿದ್ದ ಬಟ್ಟೆ ಇದು. ಕೆಲ ತಿಂಗಳ ಹಿಂದೆ ಬೆಂಗಳೂರಿನ ಟಿಪ್ಪು ಅರಮನೆಯಲ್ಲಿ ಪ್ರದರ್ಶನಕ್ಕಿಡಲಾಗಿತ್ತು.

ಕ್ಯಾಮೆರಾ ಕಂಡೊಡನೆ ಶೋಕ ನಾಪತ್ತೆ

speak

ಡಾ. ರಾಜ್ ನಿಧನರಾಗಿ ಒಂದು ವರ್ಷವಾಗಿತ್ತು. ಮೊದಲ ಪುಣ್ಯತಿಥಿಯ ಮುನ್ನಾದಿನ ಕರ್ಟನ್ ರೇಸರ್ ಸ್ಟೋರಿ ಮಾಡಲು ರಾಜ್ ಸಮಾಧಿಗೆ ತೆರಳಿದ್ದೆ. ಸಮಾಧಿಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಯತಿರಾಜ್ ಎಂದಿನಂತೆ ರಾಜ್ಯದ ವಿವಿಧ ಕಡೆಗಳಿಂದ ಬರುತ್ತಿರುವ ಜನತೆ, ಅಂಕಿ-ಸಂಖ್ಯೆ, ಸಮಾಧಿಗೆ ಇನ್ನೂ ಅಗತ್ಯವಿರುವ ಮೂಲಭೂತ ಸೌಕರ್ಯಗಳು ಇತ್ಯಾದಿಗಳ ಬಗ್ಗೆ ಮಾಹಿತಿ ನೀಡುತ್ತಿದ್ದರು. ಹೀಗೆ ಮಾತನಾಡುತ್ತ ಯತಿರಾಜ್, “ಸುಘೋಷ್, ಕಳೆದ ಒಂದು ತಿಂಗಳ ಹಿಂದೆ ಕೋಲಾರದಿಂದ ಒಬ್ಬ ಮನುಷ್ಯ ಬಂದಿದ್ದಾನೆ. ಹಳದಿ-ಕೆಂಪು ಬಣ್ಣದ ಸೈಕಲ್ ತುಳಿಯುತ್ತ ಇಲ್ಲೇ ಸಮಾಧಿಯ ಬಳಿಯೇ ಸುತ್ತಾಡುತ್ತಿರುತ್ತಾನೆ. ಡಾ. ರಾಜ್ ಅಭಿಮಾನಿಯಂತೆ. ಅವರ ಎಲ್ಲ ಚಿತ್ರಗಳನ್ನೂ ನೋಡಿದ್ದಾನಂತೆ. ಆದರೆ ಅವರು ತೀರಿಕೊಂಡಾಗಿನಿಂದ ಮನಸ್ಸಿಗೆ ತೀರ ನೋವಾಗಿ ಅದರಿಂದ ಹೊರಬರಲಾರದೆ ಮೌನವೃತ ಕೈಗೊಂಡಿದ್ದಾನಂತೆ. ಹೀಗೆ ಮೌನವೃತ ಕೈಗೊಳ್ಳುವದರ ಬದಲು ಅಣ್ಣಾವ್ರ ನೆನಪಿನಲ್ಲಿ ಸಮಾಜಕ್ಕೆ ಉಪಯೋಗವಾಗುವಂತಹದ್ದೇನಾದರೂ ಮಾಡು ಎಂದರೆ ಕೇಳಲೊಲ್ಲ. ಅವನ ಮೇಲೆ ಸ್ಟೋರಿ ಮಾಡಬಹುದು” ಎಂದರು. ಎಲಾ..ಎಲಾ…ಡಾ. ರಾಜ್ ತೀರಿಕೊಂಡಿದ್ದಕ್ಕೆ ಈ ಪಾರ್ಟಿ ಮೌನವೃತ ಮಾಡುತ್ತಿದ್ದಾನಲ್ಲ. ‘ಒಳ್ಳೆ’ ಸ್ಟೋರಿ ಮಾಡಬೇಕು ಎಂದುಕೊಂಡು ಆತನನ್ನು ಕರೆಸಿದೆ. ಕ್ಯಾಮೆರಾಮನ್ ಗೆ ಸ್ಟೋರಿ ಬ್ರೀಫ್ ಮಾಡಿ ಆತ ಸಮಾಧಿಯ ಬಳಿ ಸೈಕಲ್ ನಡೆಸುವುದು, ನಡೆದುಕೊಂಡು ಬರುವುದು, ಸಮಾಧಿ ಬಳಿ ಅಣ್ಣಾವ್ರ ಭಾವಚಿತ್ರವನ್ನು ನೋಡುತ್ತ ಜೋಲು ಮುಖ ಹಾಕಿಕೊಂಡು ಕುಳಿತಿರುವುದು ಹೀಗೆ ಹಲವು ಶಾಟ್ ಗಳನ್ನು ತೆಗೆಸಿಕೊಂಡೆ. ಸರಿ ಬೈಟ್ ಗಾಗಿ ನಿಂತುಕೊಂಡಾಗಲೇ ಸಮಸ್ಯೆಯಾಗಿದ್ದು. ಪಾರ್ಟಿ ಮೌನವೃತಧಾರಿ. ಹಾಗಾದರೆ ಬೈಟ್ ಹೇಗೆ ತೆಗೆಯುವುದು. ಇದಕ್ಕೆ ಮತ್ತೆ ಯತಿರಾಜನೇ ಮಧ್ಯಸ್ಥಿಕೆ ವಹಿಸಿದ. ಆತನನ್ನೂ, ಯತಿರಾಜ್ ನನ್ನು ನಿಲ್ಲಿಸಿ ಡಬಲ್ ಫ್ರೇಮ್ ಇಡಲು ಹೇಳಿದೆ. ನಾನು ಪ್ರಶ್ನೆ ಕೇಳುವುದು, ಮೌನವೃತಧಾರಿ ಕೈಸನ್ನೆ, ಬಾಯಿ ಸನ್ನೆ ಮಾಡುವುದು, ಯತಿರಾಜ್ ಅದನ್ನು ಅರ್ಥಮಾಡಿಕೊಂಡು ಮಾತನಾಡುವುದು ಹೀಗೆ ಸಾಗಿತ್ತು ನಮ್ಮ ಬೈಟ್ ನ ವೈಖರಿ. ನಾನು ಕೇಳಿದ್ದಕ್ಕೆ ಆ ಪಾರ್ಟಿ ಏನೇನೋ ಕೈಸನ್ನೆ ಮಾಡುತ್ತಿದ್ದ. ಅದು ಯತಿರಾಜನಿಗೂ ಎಷ್ಟು ಅರ್ಥವಾಗುತ್ತಿತ್ತೋ ಗೊತ್ತಿಲ್ಲ. ಆತನಿಗೆ ಅರ್ಥವಾಗಿದ್ದನ್ನು ಆತ ಬಂದಷ್ಟು ಹೇಳುತ್ತಿದ್ದ. ಈ ತಮಾಷೆ ನೋಡುತ್ತಿದ್ದ ಜನ ಸುತ್ತಲೂ ಜಮಾಯಿಸಿದ್ದರು. ನಂತರ ಅದ್ಯಾಕೋ ಆಸಾಮಿಗೆ ಕ್ಯಾಮೆರ ಮುಂದೆ ಹೀಗೆಲ್ಲ ಮಾಡುವುದು ತೀರ ಬೇಜಾರು ಎನಿಸಿರಬೇಕು. ಒಂದು ಸಂದರ್ಭದಲ್ಲಿ ತಾನು ಮಾಡಿದ ಕೈಸನ್ನೆಯನ್ನು ಯತಿ, ಸರಿಯಾಗಿ ಇಂಟಪ್ರಿಟ್ ಮಾಡುತ್ತಿಲ್ಲ ಎಂದು ಬೇಸರಿಸಿ ಧಡಾರ್ ಎಂದು ಮಾತನಾಡಲು ಆರಂಭಿಸಿಬಿಟ್ಟ. ಹ್ಹೆ..ಹ್ಹೆ..ಹ್ಹೆ….ಎಂದು ಮೊದಲು ನನ್ನ ಕ್ಯಾಮರಾಮನ್ ನಗಲಾರಂಭಿಸುತ್ತಿದ್ದಂತೆ ಸುತ್ತಲಿದ್ದ ಜನ ಹೋ…ಎಂದು ಕಿರುಚಿದರು. ನನಗೆ ಏನೂ ಮಾಡಲು ತೋಚದೆ, ರಾಜ್ ಅಭಿಮಾನಿ ಮೌನವೃತಧಾರಿಯಾದ ಸ್ಟೋರಿಗೆ ಎಳ್ಳು ನೀರು ಬಿಟ್ಟು ಕಾರ್ ಏರಿದೆ. ಅಣ್ಣಾವ್ರ ಹೆಸರಿನಲ್ಲಿ ಏನೆನೆಲ್ಲ ಮಾಡುತ್ತಾರೆ ಅಲ್ವಾ?

ಹುಚ್ಚು ಮನಸ್ಸಿನ ಐದು ಆವಿಷ್ಕಾರಗಳು

suhalf

ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಚಲಿಸುವ ವಸ್ತು ಯಾವುದು? ಡೌಟೇ ಇಲ್ಲ…. ಅದು ಮನಸ್ಸು. ಜಗತ್ತಿನಲ್ಲಿ ಅತೀ ದೊಡ್ಡ ಗಡವ ಯಾವುದು? ನೋ ಡೌಟ್. ಅದೂ ಮನಸ್ಸೇ. ಒಂದು ಕ್ಷಣ ಇಲ್ಲೇ ಬೆಡ್ ರೂಂ ನಲ್ಲಿದ್ದರೆ ಮತ್ತೊಂದು ಕ್ಷಣ ಚಂದ್ರಲೋಕಕ್ಕೋ, ಶೇರ್ ಮಾರ್ಕೆಟ್ಟಿಗೋ ಲಗ್ಗೆ ಇಟ್ಟಿರುತ್ತದೆ. (ಕೆಲವರ ಮನಸ್ಸು ಬೆಡ್ ರೂಂ ಬಿಟ್ಟು ಬೇರೆಲ್ಲೂ ಹೋಗುವುದೇ ಇಲ್ಲ ಎಂಬುದು ಬೇರೆ ಮಾತು). ಮೊನ್ನೆ ಒರಾಂಗುಟಾನ್ ನಂತಹ ನನ್ನ ಮನಸ್ಸು ಪಾನಮತ್ತವಾಗಿತ್ತು. ಸಾಲದೆಂಬಂತೆ ಅದಕ್ಕೆ ಚೇಳು ಕುಟುಕಿತ್ತು. ಸಾಲದೆಂಬಂತೆ ಅದರ ಮೈಯಲ್ಲಿ ಭೂತ ಹೊಕ್ಕಿತ್ತು. ಸಾಲದೆಂಬಂತೆ ಅದು ಟೀವಿಯಲ್ಲಿ ಸಚ್ ಕಾ ಸಾಮ್ನಾ ನೋಡುತ್ತಿತ್ತು. ಇಂತಿಪ್ಪ ಸಂದರ್ಭದಲ್ಲಿ ಭವಿಷ್ಯದ ಕರಾಳ ಕತ್ತಲನ್ನು ಊಹಿಸಿದ ಅದು ಸಡನ್ ಆಗಿ ಪರೋಪಕಾರ ಮಾಡಲು ಸಿದ್ಧವಾಯಿತು. ಅಂತಹ ಸಂದರ್ಭದಲ್ಲಿ ಅದಕ್ಕೆ ಮುಂದಿನ ಪೀಳಿಗೆಗೆ ಯಾವ ರೀತಿಯ ಆವಿಷ್ಕಾರಗಳು ಉಪಯೋಗವಾಗಬಹುದು ಎಂದು ಯೋಚಿಸಿತು. ಅದು ಯೋಚಿಸಿದ ಆವಿಷ್ಕಾರಗಳು ಹೀಗಿವೆ.

1. ಥ್ರೀ ಟೈರ್ ಸಿಟಿ ಸೈಬಸ್ (ಸೈಕಲ್ ಬಸ್) – ಹೌದು. ಈ ಬಸ್ ಗೆ ಮೂರೇ ಚಕ್ರ. ಮೂರು ಚಕ್ರಗಳಿಂದ ಆಟೋ ಓಡಬಹುದಾದರೆ ಬಸ್ ಯಾಕಾಗಬಾರದು? ಈ ಬಸ್ಸಿನಲ್ಲಿ ಪ್ರತಿ ಸೀಟಿನ ಕೆಳಗೂ ಸೈಕಲ್ ಗೆ ಇರುವಂತೆ ಪೆಡಲ್ ಗಳಿರುತ್ತವೆ. ಪ್ರತಿಯೊಬ್ಬ ಪ್ರಯಾಣಿಕನೂ ತಾನು ಕುಳಿತುಕೊಂಡ ಬಳಿಕ ತಿಕ್ಕಲು ತಿಕ್ಕಲಾಗಿ ನಿದ್ದಗೆ ಶರಣಾಗದೆ ಪೆಡಲ್ ತುಳಿಯಲು ಆರಂಭಿಸಬೇಕು. ಗರ್ಭಿಣಿಯರು, ಮಕ್ಕಳು ಹಾಗೂ ಹಿರಿಯ ನಾಗರಿಕರು ಯಥಾಶಕ್ತಿ ತುಳಿಯಬಹುದು ಅಥವಾ ತುಳಿಯದೇ ಇರಬಹುದು. ಆಯ್ಕೆಯ ಸ್ವಾತಂತ್ರ್ಯ ಅವರಿಗೆ ಬಿಟ್ಟದ್ದು. ಹೀಗೆ ಎಲ್ಲ ಪ್ರಯಾಣಿಕರು ಪೆಡಲ್ ತುಳಿಯುವ ಮೂಲಕ ಬಸ್ ಮುಂದೆ ಚಲಿಸುತ್ತದೆ. ಪ್ರಯಾಣಿಕರು ಕಡಿಮೆಯಿದ್ದರೆ, ಎಮರ್ಜೆನ್ಸಿ ಎಂಜಿನ್ ಸ್ಟಾರ್ಟ್ ಮಾಡಿ ಕೊಂಚ ವೇಗ ದಯಪಾಲಿಸಬಹುದು. ಈ ಪೆಡಲ್ ಬಳಿಯೇ ಚಿಕ್ಕದೊಂದು ಮೋಟರ್ ಅಳವಡಿಸಲಾಗಿರುತ್ತದೆ. ಪೆಡಲ್ ತುಳಿಯುತ್ತಿರುವಂತೆ ಈ ಮೋಟರ್ ಕೂಡ ಚಾರ್ಜ್ ಆಗುತ್ತದೆ. ಹೀಗೆ ಚಾರ್ಜ್ ಆದ ಮೋಟರ್ ನಿಂದ ಪ್ರಯಾಣಿಕರು ತಮ್ಮ ಮೊಬೈಲ್ ಇತ್ಯಾದಿಗಳನ್ನು ಚಾರ್ಜ್ ಮಾಡಿಕೊಳ್ಳಬಹುದು. ಆದರೆ ಚಾರ್ಜಿಂಗ್ ಸೌಲಭ್ಯಕ್ಕೆ ಬಿಎಂಟಿಸಿ ವತಿಯಿಂದ ಪಾಸ್ ತೆಗೆದುಕೊಳ್ಳಬೇಕಾಗುತ್ತದೆ. ಪರಿಸರ ಸಂರಕ್ಷಣೆಯಲ್ಲಿ ಇದೊಂದು ದಿಟ್ಟ ಹೆಜ್ಜೆ.

2. ಟೆಲಿಪತಿ ಪಿಸಿಓ – ಎಲ್ಲ ಕಡೆ ಪಿಸಿಓಗಳಿರುವಂತೆ ಟೆಲಿಪತಿ ಸೆಂಟರ್ ಗಳಿರುತ್ತವೆ. ಈ ಸೆಂಟರ್ ಗಳಲ್ಲಿ ಟೆಲಿಪತಿ ಮೂಲಕ ಸಂದೇಶ ಕಳಿಸುವಲ್ಲಿ ನಿಷ್ಣಾತರಾದ ಟೆಲಿಪತಿ ಕಾಲ್ ಎಕ್ಸಿಕ್ಯೂಟಿವ್ಸ್ ಇರುತ್ತಾರೆ. ಇವರ ಬಳಿ ತೆರಳಿ ನಮಗೆ ಸಂದೇಶ ರವಾನಿಸಬೇಕಾದ ವ್ಯಕ್ತಿಯ ಫೋಟೋ ನೀಡಿ, ನಮ್ಮ ಸಂದೇಶ ತಿಳಿಸಿದರೆ ಮುಗಿಯಿತು. ಟೆಲಿಪತಿ ಕಾಲ್ ಎಕ್ಸಿಕ್ಯೂಟಿವ್ ಗಳು ಸಂದೇಶ ರವಾನಿಸುತ್ತಾರೆ. ಇದೊಂದು ರೀತಿ ಹ್ಯೂಮನ್ ಪೇಜರ್ ಸರ್ವಿಸ್ ಇದ್ದಹಾಗೆ. ಕೊಂಚ ಹೊತ್ತು ಕಾದರೆ ಮರು ಸಂದೇಶವನ್ನೂ ತಿಳಿಸಲಾಗುತ್ತದೆ. ಈ ಪದ್ಧತಿಯು ಹೆಚ್ಚು ಸಮಯ ಬೇಡುತ್ತದಾದರೂ, ಮೊಬೈಲ್ ಸಿಗ್ನಲ್ ಗಳಿಂದ ಆಗುವ ಹಾನಿ ತಡೆಗಟ್ಟುವಲ್ಲಿ ಸಹಕಾರಿ.

3. ಚೇನ್ ಸ್ನ್ಯಾಚಿಂಗ್ ಡಿಟೆಕ್ಟಿಂಗ್ ಆಟೋಮ್ಯಾಟಿಕ್ ಅಲಾರ್ಮ್ ಸಿಸ್ಟಮ್ – ಒಂಟಿ ಮಹಿಳೆಯರ ಅಥವಾ ಫಾರ್ ದೆಟ್ ಮ್ಯಾಟರ್ ಪತಿಯ ಜೊತೆ ಹೊರಟ ಮಹಿಳೆಯರ ಕತ್ತಿನಲ್ಲಿರುವ ಸರ ಅಪಹರಣ ಪ್ರಕರಣ ತಡೆಯಲು ಇದು ಸಹಾಯಕ. ಪ್ರತಿಯೊಬ್ಬ ಮಹಿಳೆಯೂ ತಾನು ಚಿನ್ನದ ಅಂಗಡಿಯಿಂದ ಆಭರಣ ಖರೀದಿಸುವಾಗ ಮೊಬೈಲ್ ರೀತಿಯ ಪುಟ್ಟ ಯಂತ್ರವೊಂದನ್ನು ಖರೀದಿಸಬೇಕಾಗುತ್ತದೆ. ಆಭರಣಗಳನ್ನು ಧರಿಸಿ ಹೊರಹೋಗುವ ಸಂದರ್ಭದಲ್ಲಿ ಮಹಿಳೆಯರು ಈ ಯಂತ್ರವನ್ನು ತಮ್ಮ ಬಳಿ ಇಟ್ಟುಕೊಂಡಿರುವುದು ಅವಶ್ಯ. ಕಳ್ಳರು ಬೈಕ್ ನಲ್ಲಿ ಬಂದು ಸರ ಎಗರಿಸಿ ಓಡಿಹೋಗುತ್ತಿರುವಂತೆ ಯಂತ್ರದಲ್ಲಿರುವ ಗುಂಡಿಯನ್ನು ತಕ್ಷಣ ಒತ್ತಬೇಕು. ಆಗ ಈ ಯಂತ್ರ ಸೆಕೆಂಡಿನ ಹತ್ತನೇ ಒಂದರಷ್ಟು ಸಮಯದಲ್ಲಿ ಸರದ ಬಾರ್ ಕೋಡ್ ಅನ್ನು ಚೇನ್ ಸ್ನ್ಯಾಚಿಂಗ್ ಡಿಟೆಕ್ಟಿಂಗ್ ಸೆಂಟರ್ ಗೆ ತಲುಪಿಸುತ್ತದೆ. ಅಲ್ಲಿನ ಸಿಸ್ಟಮ್ ಗಳು ತಕ್ಷಣ ಅಲಾರ್ಮ್ ಬಟನ್ ಒತ್ತುತ್ತಿರವಂತೆ ಸರದಲ್ಲಿ ಅಳವಡಿಸಲಾಗಿರುವ ನಾನೋ ಚಿಪ್ ಗಳ ಸಹಾಯದಿಂದ ಈಗಾಗಲೇ ವಿದ್ಯುದ್ದೀಪ ಕಂಬಗಳಲ್ಲಿ ಅಳವಡಿಸಲಾಗಿರುವ ಸೈರನ್ ಗಳು ಕಳ್ಳರು ಓಡಿಹೋಗುವ ದಿಕ್ಕಿನ ಉದ್ದಕ್ಕೂ ಲಬೋ ಲಬೋ ಎಂದ ಬಾಯಿ ಬಡಿದುಕೊಳ್ಳಲಾರಂಭಿಸುತ್ತವೆ. ಮುಂದೆ ಸಾರ್ವಜನಿಕರ ಸಹಾಯದಿಂದ ಕಳ್ಳರಿಗೆ ಧರ್ಮದೇಟು ಹಾಕಬಹುದು. ಕನ್ನಡ ಸುದ್ದಿವಾಹಿನಿಗಳ ಕ್ರೈಮ್ ಕಾರ್ಯಕ್ರಮ ತಂಡ ಚಿತ್ರೀಕರಣ ಮುಗಿಸಿದ ಬಳಿಕ, ಪೋಲಿಸರು ಎಂದಿನಂತೆ ಕೊನೆಯಲ್ಲಿ ಬಂದು ಕಳ್ಳನನ್ನು ಬಂಧಿಸಿ ಆತನ ಚಿತ್ರವನ್ನು ಪೋಲಿಸ್ ಆಲ್ಬಮ್ ಗೆ ಸೇರಿಸಬಹುದು.

4. ಸಿಗ್ನಲ್ ಜಂಪ್ ಕಂಟ್ರೋಲಿಂಗ್ ಡಿವೈಸ್ – ಡೆನ್ಮಾರ್ಕ್ ನಲ್ಲಿ ಜನಗಳಿಗಿಂತ ದನಗಳ ಸಂಖ್ಯೆ ಜಾಸ್ತಿಯಿರುವಂತೆ ಬೆಂಗಳೂರಿನಲ್ಲಿ ಜನಗಳಿಗಿಂತ ಟೂ ವ್ಹೀಲರ್ ಹಾಗೂ ಇತರ ವಾಹನಗಳ ಸಂಖ್ಯೆ ಬೆಳೆಯುತ್ತಿದೆ. ಹೀಗಾಗಿ ಪೀಕ್ ಅವರ್ ನಲ್ಲಿಯೂ ಸಿಗ್ನಲ್ ಜಂಪ್ ಮಾಡುವ ಪರಿಪಾಠ ಪ್ರಾಚೀನ ಕಾಲದಿಂದಲೂ ಅಚಾನೂಕವಾಗಿ ನಡೆದುಕೊಂಡು ಬಂದಿದೆ. ಚಾಲಕರ ಈ ಜಂಪಿಂಗ್ ಪ್ರವೃತ್ತಿಯಿಂದಾಗಿ ಅಪಘಾತಗಳ ಪ್ರಮಾಣ ಏರುತ್ತಿದೆ. ಇದನ್ನು ತಡೆಗಟ್ಟಲು ಪ್ರತಿ ಸಿಗ್ನಲ್ ನಲ್ಲಿಯೂ ಸಿಗ್ನಲ್ ಜಂಪ್ ಕಂಟ್ರೋಲಿಂಗ್ ಡಿವೈಸ್ ಅಳವಡಿಸಲಾಗಿರುತ್ತದೆ.

ಹಸಿರು ದೀಪ ಆರಿ, ಕೇಸರಿ ದೀಪ (ಎಡಪಂಥೀಯರು ಬೇಕಾದರೆ ಇದನ್ನು ಆರೆಂಜ್ ದೀಪ ಎಂದು ಓದಿಕೊಳ್ಳಬಹುದು) ಉರಿಯುತ್ತಿರುವಂತೆ ಸೀತಾಮಾತೆಯನ್ನು ಭೂತಾಯಿಯು ಬಾಚಿಕೊಳ್ಳುವ ಸಂದರ್ಭದಲ್ಲಿ ಬಾಯಿ ಬಿಟ್ಟಂತೆ ಝಿಬ್ರಾ ಕ್ರಾಸಿಂಗ್ ಗುಂಟ ಭೂಮಿ ಬಾಯಿತೆರೆಯುತ್ತದೆ. ಅದರಿಂದ ನಿಧಾನವಾಗಿ ಒಂದೂವರೆ ಇಂಚು ಅಗಲದ ಕಬ್ಬಿಣದ ಮೊಳೆಗಳು ನಿಧಾನವಾಗಿ ಹೊರಬರುತ್ತವೆ. ಯಾರಾದರೂ ಸಿಗ್ನಲ್ ಜಂಪ್ ಮಾಡಿದರೆ ಅಷ್ಟೇ…ಅವರ ವಾಹನದ ಟೈರ್ ಮೊಳೆಗೆ ಸಿಕ್ಕು ಢಬ್ ಎನ್ನುತ್ತದೆ ಅಥವಾ ಫುಸ್ ಎಂದು ನಿಧಾನವಾಗಿ ಗಾಯಗೊಳ್ಳುತ್ತದೆ. ಮುಂದೆ ಗಾಡಿಯನ್ನು ತಳ್ಳಿಕೊಂಡು ಹೋಗುವ ದುರ್ದೆಸೆ ಯಾರಿಗೆ ಬೇಕು ಎಂಬ ಭಯದಿಂದ ಎಲ್ಲರೂ ಸಿಗ್ನಲ್ ಲೈಟ್ ಫಾಲೋ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೇಗಿದೆ ಐಡಿಯಾ?

5. ಇಂಡೀಸಂಟ್ ಕಾಮೆಂಟ್ ಎಲಿಮಿನೇಟಿಂಗ್ ಟೆಕ್ನಿಕ್ – ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಸೇರಿದಂತೆ ರಾಜ್ಯದ ವಿವಿಧೆಡೆ ನಡೆಯುವ ನಾಟಕ ಪ್ರದರ್ಶನಗಳ ಸಂದರ್ಭದಲ್ಲಿ ಹಲವು ಕಿಡಿಗೇಡಿ ಪ್ರೇಕ್ಷಕರು (ಕಿಡಿಗೇಡಿಯಾಗಿದ್ದರೆ ಪ್ರೇಕ್ಷಕ ಎನ್ನಬೇಕೆ ಎಂಬುದು ಬೇರೆ ಪ್ರಶ್ನೆ) ಅಸಭ್ಯ ಕಾಮೆಂಟ್ ಗಳನ್ನು ಮಾಡುವುದು ಸಾಮಾನ್ಯ. ಇದರ ನಿಯಂತ್ರಣಕ್ಕಾಗಿ ಆಡಿಟೋರಿಯಂನ ಮೇಲ್ಭಾಗದಲ್ಲಿ ಕಲ್ಲುಗಳಿಂದ ತುಂಬಿದ ಬಾಕ್ಸಿಂಗ್ ಗ್ಲೌಸ್ ಗಳನ್ನು ಕಟ್ಟಲಾಗಿರುತ್ತದೆ. ಯಾವುದೇ ಕಿಡಿಗೇಡಿ ಪ್ರೇಕ್ಷಕ ಅಸಭ್ಯ ಕಾಮೆಂಟ್ ಮಾಡಿದರೆ ಲೈಟಿಂಗ್ ರೂಮಿನಲ್ಲಿರುವ ವ್ಯಕ್ತಿ, ಕಿಡಿಗೇಡಿ ಕುಳಿತ ಸೀಟ್ ನಂಬರಿನ ಗುಂಡಿ ಒತ್ತುತ್ತಾನೆ. ಆಗ ತಕ್ಷಣ ಮೇಲಿನಿಂದ ಬಾಕ್ಸಿಂಗ್ ಗ್ಲೌಸ್ ಭಾರೀ ವೇಗವಾಗಿ ಬಂದು ಕಿಡಿಗೇಡಿ ತಲೆಗೆ ಕುಕ್ಕುತ್ತದೆ ಅಥವಾ ಜಪ್ಪುತ್ತದೆ. ಆಗ ಕಿಡಿಗೇಡಿ ಬಾಯಿ ಮುಚ್ಚಿಕೊಂಡು ನಾಟಕ ನೋಡಬೇಕಾಗುತ್ತದೆ. ಕರ್ನಾಟಕದ ಸಂಸ್ಕೃತಿ ರಕ್ಷಣೆಗೆ ಇದು ಅನಿವಾರ್ಯ ಕ್ರಮ ಹಾಗೂ ಕರ್ಮ.