
ಒಂದೇ ಒಂದ್ಸಲ
ಹೇಳಿ-ಬಿಡಬಹುದಿತ್ತು ಕಣೇ
ಹೇಳಲು ನಾಚಿಕೆಯಾಗುತ್ತಿದ್ದರೆ
ಪಟಪಟನೆ ಕಣ್ಣು ಮಿಟಕಿಸಬಹುದಿತ್ತು
ಕಾಲ ಹೆಬ್ಬೆರಳ ಕೆರೆಯಬಹುದಿತ್ತು
ದುಪಟ್ಟಾದ ಅಂಚನ್ನು ಬೆರಳಲ್ಲಿ ಸುತ್ತಬಹುದಿತ್ತು
ಕಣ್ಣಲ್ಲಿ ಕಣ್ಣಿಟ್ಟು ನಾಚಬಹುದಿತ್ತು.
ನೀವು ಹುಡುಗಿಯರು
ಹೇಳಿಕೊಡಬೇಕೆ?
ಒಂದಿನ ಮನೆಗೆ ಕರ್ದಿದ್ದೆ
ಊಟ ಹಾಕಿದ್ದೆ
ಹಿಡಿಕಡ್ಡಿ ಹಾಗಾಗಿದ್ದ ನನಗೆ
ಮೊಸರನ್ನ ಮಿಡಿ ಉಪ್ಪಿನಕಾಯಿ ಬಡಿಸಿದ್ದೆ.
ನೆನಪಾಯ್ತಾ?
ಅವತ್ತೇ ಹೇಳ್ತಿಯೇನೋ ಅಂದ್ಕೋಂಡಿದ್ದೆ
ಹೇಳ್ಳಿಲ್ಲ.
ಅವಳಿದ್ದಾಳಲ್ಲ ನಿನ್ನ ಗೆಳತಿ
ಹೌದಮ್ಮ ಅವಳೇ……ಇಂದಿಗೂ ಮದುವೆಯಾಗಿಲ್ಲ ನೋಡು.
ಎಷ್ಟು ಚೆನ್ನಾಗಿ ಕಮ್ಯುನಿಕೇಟ್ ಮಾಡ್ತಾಳೆ….
ಗೊತ್ತಾ? (ನನ್ನ ಕಂಡ್ರೆ)
ಪ್ರೀತಿ, ಕಾಮ, ಆಸೆ, ಇಚ್ಛೆ
ಎಲ್ಲವನ್ನೂ ಕಣ್ಣು, ಭಾಷೆ, ತುಟಿಯಿಂದ್ಲೇ
ಹೇಳಿಬಿಡ್ತಾಳೆ.
ನೀನೋಬ್ಳಿದೀಯಾ ಗೂಬೆ.
ಒಂದೇ ಒಂದ್ಸಲ ಹೇಳ್ತಿಯಾ ಅಂದ್ರೆ….
ಈಗ ಮಾತ್ರ ಒಂಥರಾ ಆಡ್ತೀಯಾ
ಆಗ ಮಾಡಬೇಕಾಗಿದ್ದೆಲ್ಲ ಈಗ ಮಾಡ್ತಿದೀಯಾ
ಏನ್ ಬಂತು ಹೇಳು?
ತುಂಬಾ ಲೇಟಾಯ್ತು ಅಷ್ಟೇ.
ಅಂದ ಹಾಗೆ ನಿನ್ ಗಂಡ ಸಾಫ್ಟ್ ವೇರಿ ಅಂತೆ
ಆರಂಕಿ ಸಂಬ್ಳ, ಆರ್ ತಿಂಗ್ಳು ಫಾರೆನ್ ಅಂತೆ
ನಾನ್ ಮಾತಾಡ್ದಾಗ ಮಾತ್ರ
ಪ್ಯೂರ್ ಗೂಬೆ ಅನ್ನಿಸ್ದ ಕಣೇ.
“ನಮ್ ಮಿಸೆಸ್ ಹ್ಯಾಂಡ್ ರೈಟಿಂಗ್ ತುಂಬಾ ಚೆನ್ನಾಗಿದೆ.
ಅದ್ಕೆ ಕವನ ಬರೀ ಅಂತ ಹೇಳಿದಿನಿ”
ಅಂದ.
ಹೂಂ…..ಅದ್ಹೇಗ್ ಬಾಳತೀಯೋ
ಇರ್ಲಿಬಿಡೆ.
ನಿಂಗೆ ‘ಜೆ’ ಆಗೋ ವಿಷಯ ಅಂದ್ರೆ
ನನ್ ಹೆಂಗಸ್ರು ನಿನ್ ಗಂಡಸ್ರ ಥರ ಇಲ್ಲ
ಸಾಹಿತ್ಯ-ಪಾಯಿತ್ಯ ಇಲ್ದೆ ಇದ್ರೂ
ಪೇಂಟಿಂಗ್ ಇದೆ. ಸೆನ್ಸ್ ಆಫ್ ಹ್ಯೂಮರ್ ಇದೆ.
ಆದ್ರೂ ಒಂದೇ ಒಂದ್ಸಲ
ನೀನು ಹೇಳಿ-ಬಿಡಬಹುದಿತ್ತು ಕಣೇ.
Like this:
Like ಲೋಡ್ ಆಗುತ್ತಿದೆ...