ತುಮಕೂರಿನಲ್ಲಿ ಮುಕ್ತ ಮುಕ್ತ ಸಂವಾದ…

Picture 063

ಆತ್ಮೀಯರೆ,

ನಾಳೆ ಅಂದರೆ ಭಾನುವಾರ 2009 ನೇ ಇಸವಿಯ ನವೆಂಬರ್ ಮಾಹೆಯ 8 ನೇ ದಿನದಂದು ತುಮಕೂರು ಪ್ರದೇಶದಲ್ಲಿನ  ಬಿರ್ಲಾ ಆಡಿಟೋರಿಯಂ ನಲ್ಲಿ ‘ಮುಕ್ತ ಮುಕ್ತ ಸಂವಾದ’ ಕಾರ್ಯಕ್ರಮ ನಡೆಯಲಿದೆ. ತುಮಕೂರಿನ ಸಮಸ್ತ ನಾಗರಿಕರಿಗೆ ಸಂವಾದ ಕಾರ್ಯಕ್ರಮಕ್ಕೆ ಆತ್ಮೀಯ ಸ್ವಾಗತ.

ಇತಿ ವಿಶ್ವಾಸಿ

ಸುಘೋಷ್ ಎಸ್. ನಿಗಳೆ

(‘ಮುಕ್ತ ಮುಕ್ತ’ ದಲ್ಲಿನ ದೇವಾನಂದಸ್ವಾಮಿ)

‘ವಿಜಯ್ ಸೂಪರ್’ ಸ್ಕೂಟರ್ ನೆನಪಿದೆಯಾ?

aಚಿತ್ರ ಕೃಪೆ – ಕೋಚಿ ಓಎಲ್ಎಕ್ಸ್.ಇನ್

ಇಡೀ ಜಗತ್ತಿನ ಭಾರವನ್ನು ತನ್ನ ಹೆಗಲ ಮೇಲೆ ಹೊತ್ತ ಹರ್ಕ್ಯುಲಿಸ್ ಬ್ರಾಂಡ್ ಸೈಕಲ್ ಬಳಿಕ, ನನ್ನಪ್ಪ ಮೊದಲು ಖರೀದಿಸಿದ್ದು ವಿಜಯ್ ಸೂಪರ್ ಎಂಬ ಹಳದಿ ಬಣ್ಣದ ಸ್ಕೂಟರ್. ಅದರ ನಂಬರ್ ಇಂದಿಗೂ ನನಗೆ ನೆನಪಿದೆ. ಸಿಎನ್ಎಲ್ 1520. ನಾ ಸಣ್ಣವನಿದ್ದಾಗ ಅಪ್ಪನ ಹಿಂದುಗಡೆ ತಿರುಗುಮುರುಗಾಗಿ ಕೂತು ಅದರ ಮೇಲೆ ಅಸಂಖ್ಯ ಬಾರಿ ಪ್ರಯಾಣಿಸಿದ್ದಿದೆ. ಬಹುಶಃ ಸುಮಾರು 80 ರ ಆಸುಪಾಸು ಇದ್ದಿದ್ದು ಎರಡೇ ಸ್ಕೂಟರ್. ಒಂದು ಲ್ಯಾಮ್ರೆಟಾ ಮತ್ತೊಂದು ವಿಜಯ್ ಸೂಪರ್. ಲ್ಯಾಮ್ರಟಾ, ವಿಜಯ್ ಸೂಪರ್ ಗಿಂತಲೂ ಹಳೆಯ ಸ್ಕೂಟರ್. ಶೋಲೆ ಪಿಚ್ಚರ್ ನಲ್ಲಿ ಅಮಿತಾಭ್ ಹಾಗೂ ಧಮೇಂದ್ರ ಅಕ್ಕ ಪಕ್ಕ ಕೂತು ಹೋಗುತ್ತಾರಲ್ಲ ಅದೇ ರೀತಿಯ ಸೈಡ್ ಕ್ಯಾರಿಯರ್ ಲ್ಯಾಮ್ರಟಾ ಸ್ಕೂಟರ್ ಗೂ ಇತ್ತು. ನನ್ನಪ್ಪ ಕಪ್ಪು ಗಾಗಲ್ ಹಾಕಿಕೊಂಡು ವಿಜಯ್ ಸೂಪರ್ ಸ್ಕೂಟರ್ ಮೇಲೆ ಬರುತ್ತಿದ್ದರೆ, ಅಂದಕಾಲತ್ತಿಲ್ ಯಾವ ಹಿರೋಗೂ ಕಡಿಮೆ ಇರಲಿಲ್ಲ.

ವಿಜಯ್ ಸೂಪರ್ ವಿಶೇಷತೆಯೆಂದರೆ ಅದರ ಸೆಂಟರ್ ಇಂಜಿನ್. ಬಜಾಜ್ ಸ್ಕೂಟರ್ ಗಿದ್ದಂತೆ ಸೈಡ್ ಇಂಜಿನ್ ಅಲ್ಲ. ಬಜಾಜ್ ಮೇಲೆ ಕುಳಿತರೆ ಒಂದು ಕಡೆ ವಾಲಿಕೊಂಡೇ ಸ್ಕೂಟರ್ ಓಡಿಸಬೇಕು. ಆದರೆ ಇಲ್ಲಿ ಸೆಂಟರ್ ಇಂಜಿನ್ ಇದ್ದದ್ದರಿಂದ ಯಾವುದೇ ರೀತಿಯ ವಾಲಿಕೆ ಅಗತ್ಯವಿರಲಿಲ್ಲ. ಆದರೆ ಒಂದೇ ಸಮಸ್ಯೆ ಎಂದರೆ ಬಜಾಜ್ ನೋಡಲು ದೊಡ್ಡದಾಗಿ ಕಾಣಿಸಿದರೂ ಹಗುರವಾದ ಸ್ಕೂಟರ್ ಆಗಿತ್ತು. ವಿಜಯ್ ಸೂಪರ್ ಹಾಗಿರಲಿಲ್ಲ. ನೋಡಲು ಬಜಾಜ್ ಗಿಂತ ಚಿಕ್ಕದಾಗಿದ್ದರೂ ಹೆವಿ ವೆಹಿಕಲ್. ಅದರ ಸ್ಟಾಂಡ್ ಹಾಕಲು ಮತ್ತು ತೆಗೆಯಲು ಕೂಡ ಪರಿಶ್ರಮ ಪಡಬೇಕಿತ್ತು. ಅದರ ಫೈರಿಂಗ್ ಸೌಂಡ್ ಕೂಡ ತೀರ ಭಿನ್ನವಾಗಿತ್ತು. ಒಂದು ರೀತಿಯ ಟಿಪಿಕಲ್ ಟೂಸ್ಟ್ರೋಕ್ ಗೆ ವಿಜಯ್ ಸೂಪರ್ ಉದಾಹರಣೆ. ಇದರ ಮತ್ತು ಲ್ಯಾಮ್ರೆಟಾ ಸ್ಕೂಟರ್ ನ ಸೌಂಡ್ ನಲ್ಲಿ ಸಾಮ್ಯತೆ ಇತ್ತು. ಯಾವುದು ಲ್ಯಾಮ್ರೆಟಾ ಯಾವುದು ವಿಜಯ್ ಸೂಪರ್ ಎಂದು ಕಂಡುಹಿಡಿಯುವುದು ಸುಲಭವಾಗಿರಲಿಲ್ಲ. ಆದರೆ ನಮ್ಮ ಮನೆಯಲ್ಲಿ ಸಾಕಿದ್ದ ರಂಜನಿ (ಆಕಳು) ಮಾತ್ರ ಈ ವ್ಯತ್ಯಾಸವನ್ನು ಭಾರೀ ಚಾಣಾಕ್ಷತೆಯಿಂದ ಗುರುತಿಸುತ್ತಿದ್ದಳು. ದಿನಾಲೂ ನನ್ನ ತಂದೆ ಪೇಟೆಯಿಂದ ರಂಜನಿಗಾಗಿ ಮಕ್ಕಾ (ಮೆಕ್ಕೆ ಜೋಳದ ಹುಲ್ಲು) ತರುತ್ತಿದ್ದರು. ನಮ್ಮ ಪಕ್ಕದ ಮನೆಯಲ್ಲಿಯೇ ಮೊಹಮ್ಮದ್ ಬಳ್ಳಾರಿ ಎಂಬುವರಿದ್ದರು. ಅವರದ್ದು ಲ್ಯಾಮ್ರೆಟಾ ಸ್ಕೂಟರ್. ಅವರ ಸ್ಕೂಟರ್ ಬಂದರೆ ಕೂಗದ ರಂಜನಿ, ನನ್ನಪ್ಪನ ಸ್ಕೂಟರ್ ದೂರದಿಂದ ಬರುತ್ತಿದ್ದರೂ ಜೋರಾಗಿ ಕೂಗುತ್ತಿದ್ದಳು.

ನಾನು ಒಂಬತ್ತನೆ ತರಗತಿ ಬರುವವಗೆರೂ ನನ್ನಪ್ಪನ ಸ್ಕೂಟರ್ ನ ಸ್ಟಾಂಡ್ ತೆಗೆಯಲಾಗಲಿ, ಕಿಕ್ ಹೊಡೆಯಲಾಗಲಿ ಬರುತ್ತಿರಲಿಲ್ಲ (ವಾಟ್ ಎ ಶೇಮ್ ಐ ಸೇ…). ನಂತರ ರಜಾ ದಿನಗಳಲ್ಲಿ ಸ್ಕೂಟರ್ ಕಲಿತೆ. ಆದರೆ ನನ್ನ ಸಣಕಲು ಶರೀರಕ್ಕೆ ಸಕತ್ ಹೆವಿಯಾದ ವಿಜಯ್ ಸೂಪರ್ ಸೆಟ್ ಆಗುತ್ತಲೇ ಇರಲಿಲ್ಲ. ಒಮ್ಮೆ ಟರ್ನಿಂಗ್ ತೆಗೆದುಕೊಳ್ಳಲು ಹೋಗಿ ಸ್ಟೈಲ್ ಮಾಡಲೆಂದು ಸ್ಕೂಟರ್ ಅನ್ನು ಕೊಂಚ ಹೆಚ್ಚು ವಾಲಿಸಿದೆ ನೋಡಿ, ಗಗನವು ಎಲ್ಲೋ ಭೂಮಿಯೋ ಎಲ್ಲೋ ಆಗಿತ್ತು. ಆದರೆ ಹೆಚ್ಚೆನೂ ಪೆಟ್ಟು ಆಗದೇ ಇದ್ದುದರಿಂದ ನಾನೇ ಎದ್ದು ಮನೆಗೆ ಬಂದು ಅಪ್ಪನಿಗೆ ಹೇಳಿದೆ. “ನಿಂಗ್ ಏನಾದ್ರೂ ಆಯ್ತನಾ?” ಎಂದು ಕೇಳಿದ ಅಪ್ಪ ನನಗೆ ಏನೂ ಆಗಿಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಂಡು ನಂತರ ಸ್ಕೂಟರ್ ಪರೀಕ್ಷೆಗೆ ತೊಡಗಿದೆ. (ಐ ಲವ್ ಯೂ ಅಪ್ಪ….).

ಈ ಸ್ಕೂಟರ್ ಗೆ ರೋಡ್ ಗ್ರಿಪ್ ಕೂಡ ಅಷ್ಟೇ ಚೆನ್ನಾಗಿತ್ತು. ಸ್ಕಿಡ್ ಎನ್ನುವ ಶಬ್ದ ವಿಜಯ್ ಸೂಪರ್ ನ ನಿಘಂಟಿನಲ್ಲಿಯೇ ಇರಲಿಲ್ಲ. ನನ್ನಪ್ಪ ಸುಮಾರು ಇಪ್ಪತ್ತು ವರ್ಷ ಆ ಸ್ಕೂಟರ್ ಬಳಸಿದರೂ ಆಕ್ಸಿಡೆಂಟ್ ಹೋಗಲಿ, ಸ್ಕಿಡ್ ಕೂಡ ಆಗಿ ಬಿದ್ದಿಲ್ಲ. ಸ್ವಲ್ಪ ಹೆಚ್ಚುಕಡಿಮೆಯಾದರೂ ಸರ್ರ್ ಎಂದು ಸ್ಕಿಡ್ ಆಗುವ ಬಜಾಜ್ ಎದುರು ವಿಜಯ್ ಸೂಪರ್ ನದ್ದು ಒಂದು ಕೈ ಮೆಲೆಯೇ.

ಆದರೆ ಕಾಲಕ್ರಮೇಣ ಬಜಾಜ್ ನ ಹೊಸಹೊಸ ಬ್ರಾಂಡ್ ಗಳು ಬಂದವು. ಅದಕ್ಕೆ ಎಲ್ಎಂಎಲ್ ವೆಸ್ಪಾ ಕೂಡ ತೀವ್ರ ಪೈಪೋಟಿ ನೀಡಿತ್ತು. ಮೊಟ್ಟ ಮೊದಲ ಬಾರಿಗೆ ಶಬ್ದ ಬರುವ ಇಂಡಿಕೇಟರ್ ಹೊಂದಿದ್ದ ವೆಸ್ಪಾ ಸ್ಕೂಟರ್ ಶ್ರೀಮಂತಿಕೆಯ ಪ್ರತೀಕವಾಗಿತ್ತು. ಈ ಎಲ್ಲದರ ಮಧ್ಯೆ ವಿಜಯ್ ಸೂಪರ್ ಕಣ್ಮರೆಯಾಯಿತು. ಹೆವಿ ವೇಟ್, ಕಡಿಮೆ ಮೈಲೇಜ್, ಮತ್ತೆ ಮತ್ತೆ ಕೈಕೊಡುತ್ತಿದ್ದ ಕಾರ್ಬೋರೇಟರ್ ಗಳಿಂದಾಗಿ ವಿಜಯ್ ಸೂಪರ್ ಪಾಪ್ಯುಲಾರಿಟಿಯೂ ಕಡಿಮೆಯಾಗಿ ಅದರ ಪ್ರೋಡಕ್ಷನ್ ನಿಂತುಬಿಟ್ಟಿತು.

ಮುಂದೆ ಕೃಷಿ ಕೆಲಸಕ್ಕೆಂದು ನನ್ನಣ್ಣ ಕೆಲ ದಿನ ವಿಜಯ್ ಸೂಪರ್ ಬಳಸಿದ. ನಂತರ ಅಪ್ಪ ಅದನ್ನು ಮಾರಿ ಸೆಕೆಂಡ್ ಹ್ಯಾಂಡ್ ಟಿವಿಎಸ್ ಕೊಂಡುಕೊಂಡ. ಈಗಲಂತೂ ನಮ್ಮ ಮನೆಯಲ್ಲಿ ಬರೀ ಹೊಸ ಟೂ ವ್ಹೀಲರ್ ಗಳೇ ತುಂಬಿವೆ.

ಆದರೆ ಇಂದಿಗೂ ಬೆಂಗಳೂರು ರಸ್ತೆಗಳಲ್ಲಿ ಅಲ್ಲಲ್ಲಿ ವಿಜಯ್ ಸೂಪರ್, ಲ್ಯಾಮ್ರೆಟಾಗಳು ಹಲವು ಅಲ್ಟ್ರೇಶನ್ ನೊಂದಿಗೆ ಕಣ್ಣಿಗೆ ಬೀಳುತ್ತವೆ. ಆಗೆಲ್ಲ ನನ್ನಪ್ಪನ ಹಳದಿ ಬಣ್ಣದ ವಿಜಯ್ ಸೂಪರ್ ನೆನಪಾಗುತ್ತದೆ. ಅದೇ ಸಿಎನ್ಎಲ್ 1520…..