ಸಿಎನ್ಎನ್-ಐಬಿಎನ್ ವೆಂಕಟೇಶ್ ಮೇಲೆ ಹಲ್ಲೆ; ವಕೀಲರ ಗೂಂಡಾಗಿರಿಗೆ ಧಿಕ್ಕಾರ

venkiಕೃಪೆ – ವಿಜಯ ಕರ್ನಾಟಕ

ಮಾಡಬಾರದ್ದನ್ನು ಮಾಡಿದ್ದಾರೆ ವಕೀಲರು. ಕಾನೂನು ರಕ್ಷಣೆಗೆ, ಜನರಿಗೆ ನ್ಯಾಯ ದೊರಕಿಸಿ ಕೊಡಲು ಇರುವ ವಕೀಲರೇ ಕಾನೂನನ್ನು ಮುರಿದು ಅಪ್ಪಟ ರೌಡಿಗಳಂತೆ ವರ್ತಿಸಿದ್ದಾರೆ. ಸಿಎನ್ಎನ್ ಐಬಿಎನ್ ಚಾನಲ್ ನ ಕ್ಯಾಮರಾಮನ್ ವೆಂಕಟೇಶ್ ಅವರ ಬಟ್ಟೆ ಹರಿದು ಹಾಕಿ, ಬೇಕಾಬಿಟ್ಟಿ ಹೊಡೆದು ಹಲ್ಲೆ ನಡೆಸಿದ್ದಾರೆ.

ವೆಂಕಟೇಶ್ ಈ ಟಿವಿಯಲ್ಲಿ ನನ್ನೊಡನೆ ಕೆಲಸ ಮಾಡಿದ ಹುಡುಗ. ಕ್ಯಾಮೆರಾದೊಡನೆ ಹೊಸಹೊಸ ಪ್ರಯೋಗಗಳನ್ನು ಮಾಡುತ್ತ, ವಿನೂತನ ರೀತಿಯ ಪಿಟಿಸಿಗಳನ್ನು ಮಾಡಲು ನನಗೆ ಸೂಚಿಸುತ್ತ, ರಿಪೋರ್ಟರ್ ಗಳ ಜೊತೆಗೆ ಮತ್ತು ಜನತೆಯ ಜೊತೆಗೆ ಅತ್ಯಂತ ಸ್ನೇಹಭಾವದಿಂದ ಇದ್ದ ವೆಂಕಟೇಶ್ ಇಂದು ವಕೀಲರ ಗೂಂಡಾಗಿರಿಗೆ ತುತ್ತಾಗಿದ್ದಾರೆ.

ವಕೀಲರ ಈ ರೀತಿಯ ಗೂಂಡಾಗಿರಿ ಇದೇ ಮೊದಲಲ್ಲ. ಕಕ್ಷಿದಾರರು, ಪೋಲಿಸರು, ಸಾರ್ವಜನಿಕರು, ಟ್ರಾಫಿಕ್ ಪೋಲಿಸರು,  ಹೀಗೆ ಎಲ್ಲರ ಮೇಲೆ ಹಲ್ಲೆ ನಡೆಸಿ ಈಗಾಗಲೇ ಸಾಕಷ್ಟು ಕುಖ್ಯಾತಿ ಗಳಿಸಿದ್ದಾರೆ. ಕಪ್ಪು ಕೋಟು ಹಾಕಿಕೊಂಡಿದ್ದೇವೆ ಎಂದ ಮಾತ್ರಕ್ಕೆ ಇಡೀ ಜಗತ್ತೇ ತಮ್ಮ ಗುಲಾಮ ಎಂದು ವರ್ತಿಸುವುದು ಎಷ್ಟು ಸರಿ? ನ್ಯಾಯಾಲಯದ ಕಲಾಪವನ್ನು ನಿಲ್ಲಿಸಲು ರಾಷ್ಟ್ರಗೀತೆ, ಗೀಗೀಪದ ಹಾಡುವ ಇವರಿಂದ ಜನತೆಗೆ ನ್ಯಾಯ ಸಿಗುವ ಯಾವುದಾದರೂ ಭರವಸೆ ಇದೆಯೆ?

ಇನ್ನು ನಮ್ಮ ಮಾಧ್ಯಮಗಳೂ ಹೃದಯ ವೈಶಾಲ್ಯತೆ, ಒಗ್ಗಟ್ಟು ಪ್ರದರ್ಶಿಸುವುದಿಲ್ಲ ಎಂಬುದಕ್ಕೆ…… ನಿನ್ನೆ ಎಷ್ಟು ಚಾನಲ್ ಗಳಲ್ಲಿ ಹಾಗೂ ಇಂದಿನ ಎಷ್ಟು ಪತ್ರಿಕೆಗಳಲ್ಲಿ ಸಿಎನ್ಎನ್ ಐಬಿಎನ್ ಚಾನಲ್ ಹಾಗೂ ವೆಂಕಟೇಶ್ ಹೆಸರು ಪ್ರಕಟವಾಗಿದೆ ಹುಡುಕಿ ನೋಡಿ. ಪ್ರಸಾರ/ಪ್ರಕಟವಾಗಿರುವುದು “ಮಾಧ್ಯಮ ಪ್ರತಿನಿಧಿ ಮೇಲೆ ಹಲ್ಲೆ” ಎಂದಷ್ಟೇ….