ಐಬಿಎನ್ ವೆಂಕಟೇಶ್ ನಂತರ ದೆಹಲಿ ಪತ್ರಕರ್ತರ ಸರದಿ

b

ಇತ್ತ ಬೆಂಗಳೂರಿಲ್ಲಿ ಸಿಎನ್ಎನ್ ಐಬಿಎನ್ ಕ್ಯಾಮರಾಮನ್ ವೆಂಕಟೇಶ್ ಮೇಲೆ ವಕೀಲರ ಗೂಂಡಾ ವರ್ತನೆ ಘಟನೆ ಹಸಿರಿರುವಾಗಲೆ ಅತ್ತ ದೆಹಲಿಯಲ್ಲಿ ಟಿವಿ ಚಾನಲ್ ಗಳ ಪತ್ರಕರ್ತರು ಹಾಗೂ ಕ್ಯಾಮರಾಮನ್ ಗಳು ದೆಹಲಿ ಮೆಟ್ರೋ ರೇಲ್ ಕಾರ್ಪೋರೇಷನ್ (ಡಿ ಎಮ್ ಆರ್ ಸಿ) ಕಡೆಯಿಂದ ಬಹಿಷ್ಕಾರದ ಬಿಸಿ ಎದುರಿಸಿದ್ದಾರೆ.

ನಿನ್ನೆ ಡಿ ಎಮ್ ಆರ್ ಸಿ ತನ್ನ ಪ್ರಯಾಣ ದರದಲ್ಲಿನ ಹೆಚ್ಚಳವನ್ನು ಸಾರ್ವಜನಿಕರಿಗೆ ತಿಳಿಸುವ ಉದ್ದೇಶದಿಂದ ಪತ್ರಿಕಾಗೋಷ್ಠಿ ಕರೆದಿತ್ತು. ಆದರೆ ಅಲ್ಲಿಗೆ ತಮ್ಮ ಕ್ಯಾಮರಾಗಳೊಡನೆ ತಲುಪಿದ ಟಿವಿ ಚಾನಲ್ ಪತ್ರಕರ್ತರಿಗೆ ಸ್ವಾಗತಿಸಿದ್ದು ಡಿ ಎಮ್ ಆರ್ ಸಿ ಯ ಸೆಕ್ಯುರಿಟಿ ಗಾರ್ಡ್ ಗಳು. ಪ್ರಿಂಟ್ ಮೀಡಿಯಾದವರು ಪ್ರವೇಶಿಸಲು ಅನುಮತಿ ನೀಡಿದ ದೆಹಲಿ ಮೆಟ್ರೋ, ಟಿವಿ ಪತ್ರಕರ್ತರನ್ನು ಮಾತ್ರ ಹತ್ತಿರವೂ ಬಿಟ್ಟುಕೊಳ್ಳಲಿಲ್ಲ. ಹೋಗಲಿ, ಈ ಪ್ರವೇಶ ನಿರ್ಭಂಧ ಏಕೆ ಎಂದೂ ಸಹ ವಿವರಣೆ ನೀಡುವ ಸೌಜನ್ಯ ತೋರಲಿಲ್ಲ. ಹೋಗಲಿ ಕ್ಯಾಮರಾ ಬೇಡ, ನಮ್ಮನ್ನಾದರೂ ಒಳಗೆ ಬಿಡಿ ಎಂದು ಟಿವಿ ಪತ್ರಕರ್ತರು ಮನವಿ ಮಾಡಿಕೊಂಡರೆ ಅದಕ್ಕೆ ಕೂಡ ಕವಡೆ ಕಾಸಿಗೆ ಸಿಗುವ ಕಿಮ್ಮತ್ತೂ ಕೂಡ ಸಿಗಲಿಲ್ಲ.

ದೆಹಲಿ ಮೆಟ್ರೋದ ಅವಘಡಗಳು ಹಾಗೂ ಇತ್ತೀಚೆಗೆ ನಡೆದ ವಿದ್ಯುತ್ ವೈಫಲ್ಯದ ಪ್ರಕರಣವನ್ನು ಅನವಶ್ಯಕವಾಗಿ ಟಿವಿ ಚಾನಲ್ ಗಳು ವೈಭವೀಕರಿಸಿವೆ ಎಂಬ ಕಾರಣಕ್ಕೆ ಈ ಪ್ರವೇಶ ನಿರ್ಭಂದ ಎಂಬುದು ಒಳಸುದ್ದಿ.

ಟಿವಿ ಪತ್ರಕರ್ತರು ಹಾಗೂ ಕ್ಯಾಮರಾಮನ್ ಗಳು ಯಾವುದಾದರೂ ಶಾಂತಿ, ಹೋಮ ಮಾಡಿಸುವುದು ಒಳಿತು.