ಈಗ ಪ್ರಯಾರಿಟಿಗಳು ಬದಲಾಗಿವೆ

kemmu

ತುಮಕೂರಿನಲ್ಲಿ ಮುಕ್ತ ಮುಕ್ತ ಸಂವಾದ ಮುಗಿಸಿದ ನಂತರ ಖಾಸಗಿ ಕೆಲಸದ ನಿಮಿತ್ತ ಒಂದು ದಿನ ಅಲ್ಲೇ ತಂಗಿದ್ದು, ಮಾರನೆ ದಿನ ಬೆಂಗಳೂರಿಗೆ ಮರಳಿದೆ. ಅಷ್ಟರಲ್ಲಿ ತುಮಕೂರಿನ ಹತ್ತು ಹಲವು ಕಡೆಗಳಲ್ಲಿ ನೀರು ಕುಡಿದೆ. ನೀರು ಬದಲಾಗಿದ್ದೇ ಬದಲಾಗಿದ್ದು ಬೆಂಗಳೂರಿಗೆ ಬಂದ ತಕ್ಷಣ ಜ್ವರ, ನೆಗಡಿ, ಕೆಮ್ಮು. ಆರತಿ ತಗೊಂಡರೆ ಜ್ವರ, ತೀರ್ಥ ಸೇವಿಸಿದರೆ ಶೀತ ಎಂಬಂತಹ ಪ್ರಕೃತಿ ನನ್ನದಲ್ಲ. ಆದರೂ ತುಮಕೂರಿನಲ್ಲಿ ಮಳೆಯಲ್ಲಿ ನೆನೆದದ್ದು, ಬೆಂಗಳೂರಿನಲ್ಲಿ ಹವಾಮಾನ ವೈಪರೀತ್ಯ ಎಲ್ಲ ಸೇರಿಕೊಂಡು ಇಂದೂ ಕೂಡ ಕೆಮ್ಮುತ್ತಿದ್ದೇನೆ.

ಮೊನ್ನೆ ರಾತ್ರಿಯಿಂದ ನನ್ನ ಅರ್ಧಾಂಗಿಯದು ನಿರಂತರ ಹಟ. ಜೇನುತುಪ್ಪ ನೆಕ್ಕುತ್ತಿರಿ, ಕಷಾಯ ಕುಡಿಯಿರಿ, ಬಿಸಿ ನೀರೆ ಕುಡಿಯಿರಿ ಕೆಮ್ಮು ಕಡಿಮೆಯಾಗುತ್ತದೆ ಎಂದು ಒಂದೇ ಸಮನೆ ಸಲಹೆ. ಆಕೆಯ ಕಾಟಕ್ಕೆ ನಾನು ಆಗಾಗ ಆಕೆ ಹೇಳುತ್ತಿದ್ದುದನ್ನು ಪಾಲಿಸುತ್ತಿದ್ದೆನಾದರೂ ಸೀರಿಯಸ್ಸಾಗಿ ಏನೂ ಮಾಡುತ್ತಿರಲಿಲ್ಲ. ಎರಡು ದಿನ ಕಳೆದರೂ ನನ್ನ ಕೆಮ್ಮು ಮುಂದುವರೆದಿತ್ತು. ನಿನ್ನೆ ರಾತ್ರಿಯಿಂದ ಮಾತ್ರ ಸೀರಿಯಸ್ಸಾಗಿ ಜೇನುತುಪ್ಪ ನೆಕ್ಕಲು ಆರಂಭಿಸಿದ್ದೇನೆ. ಕಾರಣ ನನ್ನಾಕೆಯ ಒಂದೇ ಒಂದು ಹೇಳಿಕೆ.

ಸುಗು….ನೀನು ತುಮಕೂರಿನಿಂದ ಬಂದಾಗಿನಿಂದ ನಿನ್ನ ಕೆಮ್ಮು ಹಾಗೇ ಇದೆ. ನೀನು ಪ್ರತಿಬಾರಿ ಕೆಮ್ಮಿದಾಗಲೂ ಪುಟ್ಟ ನಿದ್ದೆಯಿಂದ ಬೆಚ್ಚಿ ಬೀಳುತ್ತಾನೆ. ಆತನ ನಿದ್ದೆ ಮುರಿಯುತ್ತಿದೆ. ಬೇಗ ಕೆಮ್ಮು ವಾಸಿ ಮಾಡಿಕೊ

ಹೌದು ಈಗ ಪ್ರಯಾರಿಟಿಗಳು ಬದಲಾಗುತ್ತಿವೆ.