ಮನುಷ್ಯರಾಗಿದ್ರೆ ನನ್ನ ಬುದ್ಧಿ ಮಾತು ಕೇಳ್ತಿದ್ರಾ…..

ಶೂಟಿಂಗ್ ಮುಗಿಸಿಕೊಂಡು ಕ್ಯಾಂಡಿಮೆಂಟ್ಸ್ ಅಂಗಡಿಯೊಂದರ ಮುಂದೆ ಸಿಗರೇಟು ಸೇದುತ್ತ ನಿಂತಿದ್ದೆ. ಅದೇ ಸಮಯಕ್ಕೆ ನಾಲ್ಕಾರು ಜನರು ಅದೇ ಅಂಗಡಿಗೆ ಬಂದರು. ಅದರಲ್ಲಿ ಓರ್ವ ವೃದ್ಧರಿದ್ದು, ಅವರೊಡನೆ ಒಂದು ನಾಯಿ ಕೂಡ ನಡೆದುಕೊಂಡು ಬಂತು. ಈ ಜನ ಕಾಫಿಗೆ ಹೇಳಬೇಕು ಎನ್ನುವಷ್ಟರಲ್ಲಿ ವೃದ್ಧರೊಡನೆ ಬಂದಿದ್ದ ನಾಯಿಗೂ, ಅಲ್ಲೇ ಅಂಗಡಿ ಮುಂದೆ ಮಲಗಿದ್ದ ನಾಯಿಗೂ ಜಗಳ ಶುರುವಾಗಿಬಿಟ್ಟಿತು. ಮೊದಮೊದಲು ಹಲ್ಲು ತೋರಿಸಿದ ನಾಯಿಗಳು ಬಳಿಕ, ದೊಡ್ಡ ಸ್ವರದಲ್ಲಿ ಬೊಗಳುತ್ತ ಒಂದರಮೇಲೊಂದು ಎರಗಲು ಸನ್ನದ್ಧವಾಗಿ ಬಿಟ್ಟವು. ಕ್ಷಣಾರ್ಧದಲ್ಲಿ ಯುದ್ಧ ಘೋಷಣೆಯಾಗಿಯೇ ಬಿಟ್ಟಿತು. ಹಲ್ಲು ತೋರಿಸುವುದೇನು, ಗುರ್ ಎನ್ನುವುದೇನು, ಬಾಲ ನಿಮಿರಿಸುತ್ತ ಶಕ್ತಿ ಪ್ರದರ್ಶನವೇನು ಎಲ್ಲ ಶುರುವಾಗಿಬಿಟ್ಟಿತು. ಇನ್ನೇನು ಆ ನಾಯಿಗಳು ಕಚ್ಚಾಡಿ ಕೊಂಡು ಸುತ್ತಮುತ್ತಲಿದ್ದ ಜನರ ಮಧ್ಯೆ ಓಡಾಡಿ ಗೊಂದಲವೆಬ್ಬಿಸುವುದೊಂದು ಬಾಕಿ ಇತ್ತು. ಅಷ್ಟರಲ್ಲಿ ಆ ವೃದ್ಧರು ತಮ್ಮ ಹೆಗಲ ಮೇಲಿನ ಟರ್ಕಿಸ್ ಟಾವೆಲ್  ತೆಗೆದವರೆ ನಾಯಿಗಳತ್ತ ಹುಶ್ ಹುಶ್ ಎಂದು ಬೀಸುತ್ತ, “ಏ ನಿಲ್ಲಸ್ರೋ…ನಿಲ್ಲಸ್ರೋ….ನಿಮ್ಮ ಜಗಳಾನಾ…ಅಯಾಯಾ…ಹಿಂಗ್ ಹಾದಿ ಬೀದಿಲೆಲ್ಲ ಜಗಳಾಡ್ತಾ ಕುಂತ್ಕಂಡ್ರೆ ಮರ್ವಾದೆ ಇರ್ತದಾ? ನೋಡು ನೀನ್ ಮೊದಲೇ ಜಗಳಾಡಿ ಎಷ್ಟೊಂದು ಕಚ್ಚಸ್ಕಂಡಿದಿಯಾ…ಮತ್ತೆ ಎಗರಕ್ ಹೋಯ್ತೀಯಾ….ಹುಶ್ ಹುಶ್…”ಎನ್ನುತ್ತಾ ನಾಯಿಗಳನ್ನು ದೂರಸರಿಸಿದರು.

ಅವರ ಮಾತಿಗೋ, ಅವರ ಟಾವೆಲ್ ಗೋ ಏನೋ ಗೊತ್ತಿಲ್ಲ, ಆದರೆ ಅವರು ಮಾತು ಮುಗಿಸುತ್ತಿದ್ದಂತೆ ಅಂಗಡಿಯ ನಾಯಿ ಏನೂ ನಡೆದೇ ಇಲ್ಲವೆನೋ ಎಂಬಂತೆ ಮತ್ತೆ ತನ್ನ ಸ್ಥಾನಕ್ಕೆ ತೆರಳಿ ಸುರುಳಿ ಸುತ್ತಿಕೊಂಡು ಮಲಗಿಬಿಟ್ಟಿತು. ವೃದ್ಧರೊಡನೆ ಬಂದಿದ್ದ ನಾಯಿ ಬಾಲವಲ್ಲಾಡಿಸುತ್ತ ಅವರ ಹಿಂದೆ ಬಂತು ನಿಂತಿತು. ಅಲ್ಲಿ ನಿಂತಿದ್ದವರು ಒಂದು ಕ್ಷಣ ಆಶ್ಚರ್ಯಗೊಂಡರು. ನಂತರ  ಆ ವೃದ್ಧರೆಂದರು. “ನೋಡಿ ಸ್ವಾಮಿ…ಮಾತು ಬರ್ದ ಪಶುಗೋಳು ಮಾತು ಕೇಳುತ್ವೆ….ಅದೇ ಈಗ ಮನುಷ್ಯರು ಜಗಳಾಡ್ತಾ ಇದ್ರೆ ನನ್ನ ಬುದ್ಧಿ ಮಾತು ಕೇಳ್ತಿದ್ರಾ….?