ಅಯ್ಯೋ ಟ್ರಾಕ್ಟರ್, ನಿನಗೀಗತಿಯೆ?

ಅದೊಂದು ಟ್ರಾಕ್ಟರ್. ತುಂಬ ಬಲಿಷ್ಠ. ಕಾಡೆಮ್ಮೆಯಷ್ಟು. ಬಣ್ಣ ಕಡು ಕೆಂಪು. ಮೂತಿಯ ಮೇಲೆ ಹಿತ್ತಾಳೆಯ ಫಳ ಫಳಹೊಳೆಯುವ ಪುಟ್ಟ ಪುಟ್ಟ ಎರಡು ಚಿಕ್ಕ ಚಿಕ್ಕ ಎತ್ತುಗಳ ಮೂರ್ತಿ. ಅವುಗಳ ಹಣೆಯ ಮೇಲೆ ಢಾಳಾಗಿ ಹಚ್ಚಲಾಗಿರುವ ಕುಂಕುಮ. ಕೊರಳಲ್ಲಿ ಮಲ್ಲಿಗೆ ಹೂವು. ಗಾಡಿ ಮೇಲೆಲ್ಲ ದಪ್ಪ ದಪ್ಪ ವಿಭೂತಿಯ ಮುದ್ರೆಗಳು. ಬಸವನ ಹುಳುವಿಗಿರುವ ಹಾಗೆ ಮೂತಿಯಿಂದ ಮೇಲೆದ್ದಿರುವ ಎರಡು ಸ್ಪ್ರಿಂಗ್ ಗಳು. ಅದರ ತುದಿಯಲ್ಲಿ ಕಪ್ಪು ಬಿರಡೆ. ಅವಕ್ಕೆ ಗುಲಾಬಿ ಬಣ್ಣಗಳ ರಿಬ್ಬನ್ ಅಲಂಕಾರ. ಸ್ಪ್ರಿಂಗ್ ಮಧ್ಯೆ ಹಚ್ಚಲಾಗಿರುವ ಅರಿಶಿಣ ಕುಂಕುಮ. ಟ್ರಾಕ್ಟರ್ ನ ಕಪ್ಪು ಟಾಪ್ ಒಳಗೆ  ಗೆ ಜೋಡಿಸಲಾಗಿರುವ ಟೇಪ್ ರೆಕಾರ್ಡರ್ ನಿಂದ “ಉಳುವ ಯೋಗಿಯ ನೋಡಲ್ಲಿ” ಹಾಡು. ಹಿಂಭಾಗದಲ್ಲಿ “ಉತ್ರಿ ಬಿಳಿ ಜೋಳ ಬಿತ್ರಿ ನಾ ಬರದಿದ್ದ ನೀವ್ ಸತ್ರಿ” ಹಾಗೂ “ಶ್ರೀ ಬಸವೇಶ್ವರ ಪ್ರಸನ್ನ”, ಮತ್ತು “ನಾವಿಬ್ಬರು ನಮಗಿಬ್ಬರು” ಎಂದು ತೀರ ಇಕ್ಕಟ್ಟಿನಲ್ಲಿ ಬರೆದಿರುವ ಬರಹಗಳು. ಹಾರೆ, ಪಿಕಾಸಿ, ಕುಡುಗೋಲು ಇಡಲು ಇಂಜಿನ್ ಪಕ್ಕದಲ್ಲಿ ವಿಶೇಷವಾಗಿ ವೆಲ್ಡ್ ಮಾಡಲಾದ ಡಿಟ್ಯಾಚೇಬಲ್ ಸ್ಟಾಂಡ್. ಗದ್ದೆಯಲ್ಲಿ ಗಾಡಿ ಮುನಿದು ನಿಂತರೆ ಅದನ್ನು ಮುದ್ದುಮಾಡಲು ಪುಟ್ಟದಾದ ಟೂಲ್ ಕಿಟ್. ಎಂತಹ ಭೂಮಿಯಲ್ಲೂ ಉಳುಮೆ ಸಾಧ್ಯವಾಗಿಸಲು ಅತೀ ಹೆಚ್ಚಿನ ಅಶ್ವಶಕ್ತಿಯ ಎಂಜಿನ್. ಟಿವಿಯ ಅನ್ನದಾತ, ಕೃಷಿ ದರ್ಶನ, ರೇಡಿಯೋದ ಕೃಷಿ ವಾರ್ತೆಗಳ ಮಧ್ಯದಲ್ಲಿ ಈ ಟ್ರಾಕ್ಟರ್ ನದೇ ಜಾಹೀರಾತು ವಿಜೃಂಭಣೆ. ಡ್ರೈವರ್ ಉಳುಮೆ ಮಾಡುತ್ತಿರಬೇಕಾದರೆ ಆತನ ಅಕ್ಕ-ಪಕ್ಕ ಕುಳಿತು ಬೀಜ ಬಿತ್ತಲು ಅನುಕೂಲವಾಗುವ ಹಾಗೆ ಮಾಡಲಾಗಿರುವ ಸೀಟುಗಳು. ಕೆಎ-22 ಡಿ- 6…… ಎಂಬ ನಂಬರ್ ಪ್ಲೇಟ್ ನಿಂದ, ಇದು ಪಕ್ಕಾ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಯಾವುದೋ ಮೊಕ್ಕಾಂ ನ ಯಾವುದೋ ಸಾಕಿನ್ ಹಳ್ಳಿಯ ಯಾವುದೋ ಗೌಡನ ಟ್ರಾಕ್ಟರ್ ಎಂಬ ಋಜುವಾತು.

ಇಂತಹ ಟ್ರಾಕ್ಟರ್ ಒಂದು ಬೆಂಗಳೂರಿನಲ್ಲಿ ಅಪಾರ್ಟ್ ಮೆಂಟ್ ಒಂದರ ಕಾಮಗಾರಿಗಾಗಿ ಇಟ್ಟಿಗೆ, ಸಿಮೆಂಟ್ ಹೊರುತ್ತಿತ್ತು.