ಮನುಷ್ಯರ ಜೊತೆ ನಾಯಿ ಇದ್ರೆ ಅಷ್ಟೇ ಗೇಟಿನ ಮುಂದೆ ಇಸ್ಸಿ ಮಾಡೋದು….

©sughosh s. nigale

ನಮ್ಮ ಮನೆಯ ಓನರ್ ಆಂಟಿ ಸದಾ ಬೇಸರ ಮಾಡಿಕೊಳ್ಳುತ್ತಲೇ ಇದ್ದರು “ನೋಡಿ ಸುಘೋಷ್. ಈ ಜನಕ್ಕೆ ಎಷ್ಟು ಹೇಳಿದರೂ ಬುದ್ಧಿನೇ ಬರಲ್ಲ. ಕಾಮನ್ ಸೆನ್ಸೇ ಇಲ್ಲ ಅಂತೀನಿ. ಅಲ್ಲ ಎಷ್ಟು ಜನರಿಗೇಂತ ಹೇಳುತ್ತ ಕೂತ್ಕೋಳಗಾತ್ತೆ ಹೇಳಿ? ನನಗಂತೂ ಹೇಳಿ ಹೇಳಿ ಸಾಕಾಗಿ ಹೋಗಿದೆ. ಬೆಳಿಗ್ಗೆ ಎದ್ದು ಗೇಟಿನ ಮುಂದೆ ನೋಡಿದರೆ ನಾಯಿ ಇಸ್ಸಿ ಮಾಡಿರುತ್ತೆ. ಕ್ಲೀನ್ ಮಾಡಿ ಮಾಡಿ ಸಾಕಾಗಿ ಹೋಗುತ್ತೆ”

ಅಷ್ಟರಲ್ಲಿ ಯಾವುದೋ ಬೀದಿ ನಾಯಿ ನಮ್ಮ ಗೇಟಿನ ಮುಂದೆ ಬಂದು ನಿಂತುಕೊಳ್ಳಲು ಸರಿಹೋಯಿತು. ಅಲ್ಲೇ ನಿಂತಿದ್ದ ಅಂಕಲ್ ಹಚಾ ಹಚಾ ಎಂದು ನಾಯಿಯನ್ನು ಓಡಿಸಲು ಮುಂದಾದರು. ಅದನ್ನು ನೋಡಿದ ಆಂಟಿ, ಅಯ್ಯೋ ಬರೇ ನಾಯಿಯನ್ನು ಓಡಿಸಬೇಡ್ರಿ. ನನಗೂ ನಾಯಿ ಅಂದ್ರೇ ಇಷ್ಟಾನೇ…ಬರೇ ನಾಯಿ ಬಂದ್ರೆ ಅದು ಗೇಟಿನ ಮುಂದೆ ಇಸ್ಸಿ ಮಾಡೋದೇ ಇಲ್ಲ. ಆದ್ರೆ ಬೆಳಿಗ್ಗೆ ಬೆಳಿಗ್ಗೆ ವಾಕಿಂಗ್ ಗೆ ಅಂತ ಈ ನಾಯಿಗಳನ್ನು ಕರೆದುಕೊಂಡು ಬರುತ್ತಾರಲ್ಲ ಜನ. ಆಗಷ್ಟೇ ನಾಯಿಗಳು ಗೇಟಿನ ಮುಂದೆ ಇಸ್ಸಿ ಮಾಡುತ್ವೆ

ನನಗೂ ಹೌದು ಎನಿಸಿತು. ನಾನು ಹಲವು ಬಾರಿ ನೋಡಿದ್ದೇನೆ. ಸಾವಿರಾರು ರೂಪಾಯಿಗಳ ನಾಯಿಯನ್ನು ಕೊಂಡು, ಅದಕ್ಕೆ ಸಾವಿರಾರು ರೂಪಾಯಿ ಪಿಡಿಗ್ರಿ ಫುಡ್ ಹಾಕಿ, ಬೆಲೆಬಾಳುವ ಚೈನ್ ಕಟ್ಟುವ ಜನ, ನಾಯಿಗಳ ಇಸ್ಸಿ ಬಗ್ಗೆ ಮಾತ್ರ ತಲೆಕೆಡಿಸಿಕೊಳ್ಳುವುದೇ ಇಲ್ಲ. ಇತರರ ಮನೆಯೆ ಗೇಟೇ ತಮ್ಮ ನಾಯಿಯ ಪಾಯಿಖಾನೆ ಎಂದುಕೊಂಡು ಬಿಟ್ಟಿರುತ್ತಾರೆ. ಬೇಕಂತಲೆ ಮಾಡುತ್ತಾರೋ, ಕಾಮನ್ ಸೆನ್ಸ್ ಇರುವುದಿಲ್ಲವೋ ಒಂದೂ ಗೊತ್ತಾಗುವುದಿಲ್ಲ. ಹೇಳಲು ಹೋದರೆ ತಲೆ ತಗ್ಗಿಸಿಕೊಂಡು ಹೋಗುವ ಈ ಜನ ಮಾರನೇ ದಿನ ಅಲ್ಲೇ ಬಂದು ಮತ್ತೆ ನಾಯಿ ಇಸ್ಸಿ ಮಾಡಿಸುತ್ತಾರೆ. ಹಾಗಂತ ಈ ಜನರಿಗೆ ಬೇರೆಯವರ ಮೇಲೆ ದ್ವೇಷವಾಗಲಿ, ಶತ್ರುತ್ವವಾಗಲಿ ಇರುವುದಿಲ್ಲ. ಮತ್ತೆ ಏಕೆ ಹೀಗೆ ಮಾಡುತ್ತಾರೆ ಗೊತ್ತಿಲ್ಲ. ಅಂತೂ ನಾಯಿಗಳ ಮಾಲೀಕರನ್ನು ಓಡಿಸುವ ಕೆಲಸವಂತೂ ಮುಂದುವರೆದೇ ಇದೇ.