ಮನುಷ್ಯರ ಜೊತೆ ನಾಯಿ ಇದ್ರೆ ಅಷ್ಟೇ ಗೇಟಿನ ಮುಂದೆ ಇಸ್ಸಿ ಮಾಡೋದು….

©sughosh s. nigale

ನಮ್ಮ ಮನೆಯ ಓನರ್ ಆಂಟಿ ಸದಾ ಬೇಸರ ಮಾಡಿಕೊಳ್ಳುತ್ತಲೇ ಇದ್ದರು “ನೋಡಿ ಸುಘೋಷ್. ಈ ಜನಕ್ಕೆ ಎಷ್ಟು ಹೇಳಿದರೂ ಬುದ್ಧಿನೇ ಬರಲ್ಲ. ಕಾಮನ್ ಸೆನ್ಸೇ ಇಲ್ಲ ಅಂತೀನಿ. ಅಲ್ಲ ಎಷ್ಟು ಜನರಿಗೇಂತ ಹೇಳುತ್ತ ಕೂತ್ಕೋಳಗಾತ್ತೆ ಹೇಳಿ? ನನಗಂತೂ ಹೇಳಿ ಹೇಳಿ ಸಾಕಾಗಿ ಹೋಗಿದೆ. ಬೆಳಿಗ್ಗೆ ಎದ್ದು ಗೇಟಿನ ಮುಂದೆ ನೋಡಿದರೆ ನಾಯಿ ಇಸ್ಸಿ ಮಾಡಿರುತ್ತೆ. ಕ್ಲೀನ್ ಮಾಡಿ ಮಾಡಿ ಸಾಕಾಗಿ ಹೋಗುತ್ತೆ”

ಅಷ್ಟರಲ್ಲಿ ಯಾವುದೋ ಬೀದಿ ನಾಯಿ ನಮ್ಮ ಗೇಟಿನ ಮುಂದೆ ಬಂದು ನಿಂತುಕೊಳ್ಳಲು ಸರಿಹೋಯಿತು. ಅಲ್ಲೇ ನಿಂತಿದ್ದ ಅಂಕಲ್ ಹಚಾ ಹಚಾ ಎಂದು ನಾಯಿಯನ್ನು ಓಡಿಸಲು ಮುಂದಾದರು. ಅದನ್ನು ನೋಡಿದ ಆಂಟಿ, ಅಯ್ಯೋ ಬರೇ ನಾಯಿಯನ್ನು ಓಡಿಸಬೇಡ್ರಿ. ನನಗೂ ನಾಯಿ ಅಂದ್ರೇ ಇಷ್ಟಾನೇ…ಬರೇ ನಾಯಿ ಬಂದ್ರೆ ಅದು ಗೇಟಿನ ಮುಂದೆ ಇಸ್ಸಿ ಮಾಡೋದೇ ಇಲ್ಲ. ಆದ್ರೆ ಬೆಳಿಗ್ಗೆ ಬೆಳಿಗ್ಗೆ ವಾಕಿಂಗ್ ಗೆ ಅಂತ ಈ ನಾಯಿಗಳನ್ನು ಕರೆದುಕೊಂಡು ಬರುತ್ತಾರಲ್ಲ ಜನ. ಆಗಷ್ಟೇ ನಾಯಿಗಳು ಗೇಟಿನ ಮುಂದೆ ಇಸ್ಸಿ ಮಾಡುತ್ವೆ

ನನಗೂ ಹೌದು ಎನಿಸಿತು. ನಾನು ಹಲವು ಬಾರಿ ನೋಡಿದ್ದೇನೆ. ಸಾವಿರಾರು ರೂಪಾಯಿಗಳ ನಾಯಿಯನ್ನು ಕೊಂಡು, ಅದಕ್ಕೆ ಸಾವಿರಾರು ರೂಪಾಯಿ ಪಿಡಿಗ್ರಿ ಫುಡ್ ಹಾಕಿ, ಬೆಲೆಬಾಳುವ ಚೈನ್ ಕಟ್ಟುವ ಜನ, ನಾಯಿಗಳ ಇಸ್ಸಿ ಬಗ್ಗೆ ಮಾತ್ರ ತಲೆಕೆಡಿಸಿಕೊಳ್ಳುವುದೇ ಇಲ್ಲ. ಇತರರ ಮನೆಯೆ ಗೇಟೇ ತಮ್ಮ ನಾಯಿಯ ಪಾಯಿಖಾನೆ ಎಂದುಕೊಂಡು ಬಿಟ್ಟಿರುತ್ತಾರೆ. ಬೇಕಂತಲೆ ಮಾಡುತ್ತಾರೋ, ಕಾಮನ್ ಸೆನ್ಸ್ ಇರುವುದಿಲ್ಲವೋ ಒಂದೂ ಗೊತ್ತಾಗುವುದಿಲ್ಲ. ಹೇಳಲು ಹೋದರೆ ತಲೆ ತಗ್ಗಿಸಿಕೊಂಡು ಹೋಗುವ ಈ ಜನ ಮಾರನೇ ದಿನ ಅಲ್ಲೇ ಬಂದು ಮತ್ತೆ ನಾಯಿ ಇಸ್ಸಿ ಮಾಡಿಸುತ್ತಾರೆ. ಹಾಗಂತ ಈ ಜನರಿಗೆ ಬೇರೆಯವರ ಮೇಲೆ ದ್ವೇಷವಾಗಲಿ, ಶತ್ರುತ್ವವಾಗಲಿ ಇರುವುದಿಲ್ಲ. ಮತ್ತೆ ಏಕೆ ಹೀಗೆ ಮಾಡುತ್ತಾರೆ ಗೊತ್ತಿಲ್ಲ. ಅಂತೂ ನಾಯಿಗಳ ಮಾಲೀಕರನ್ನು ಓಡಿಸುವ ಕೆಲಸವಂತೂ ಮುಂದುವರೆದೇ ಇದೇ.

Advertisements

ಅಯ್ಯೋ ಟ್ರಾಕ್ಟರ್, ನಿನಗೀಗತಿಯೆ?

ಅದೊಂದು ಟ್ರಾಕ್ಟರ್. ತುಂಬ ಬಲಿಷ್ಠ. ಕಾಡೆಮ್ಮೆಯಷ್ಟು. ಬಣ್ಣ ಕಡು ಕೆಂಪು. ಮೂತಿಯ ಮೇಲೆ ಹಿತ್ತಾಳೆಯ ಫಳ ಫಳಹೊಳೆಯುವ ಪುಟ್ಟ ಪುಟ್ಟ ಎರಡು ಚಿಕ್ಕ ಚಿಕ್ಕ ಎತ್ತುಗಳ ಮೂರ್ತಿ. ಅವುಗಳ ಹಣೆಯ ಮೇಲೆ ಢಾಳಾಗಿ ಹಚ್ಚಲಾಗಿರುವ ಕುಂಕುಮ. ಕೊರಳಲ್ಲಿ ಮಲ್ಲಿಗೆ ಹೂವು. ಗಾಡಿ ಮೇಲೆಲ್ಲ ದಪ್ಪ ದಪ್ಪ ವಿಭೂತಿಯ ಮುದ್ರೆಗಳು. ಬಸವನ ಹುಳುವಿಗಿರುವ ಹಾಗೆ ಮೂತಿಯಿಂದ ಮೇಲೆದ್ದಿರುವ ಎರಡು ಸ್ಪ್ರಿಂಗ್ ಗಳು. ಅದರ ತುದಿಯಲ್ಲಿ ಕಪ್ಪು ಬಿರಡೆ. ಅವಕ್ಕೆ ಗುಲಾಬಿ ಬಣ್ಣಗಳ ರಿಬ್ಬನ್ ಅಲಂಕಾರ. ಸ್ಪ್ರಿಂಗ್ ಮಧ್ಯೆ ಹಚ್ಚಲಾಗಿರುವ ಅರಿಶಿಣ ಕುಂಕುಮ. ಟ್ರಾಕ್ಟರ್ ನ ಕಪ್ಪು ಟಾಪ್ ಒಳಗೆ  ಗೆ ಜೋಡಿಸಲಾಗಿರುವ ಟೇಪ್ ರೆಕಾರ್ಡರ್ ನಿಂದ “ಉಳುವ ಯೋಗಿಯ ನೋಡಲ್ಲಿ” ಹಾಡು. ಹಿಂಭಾಗದಲ್ಲಿ “ಉತ್ರಿ ಬಿಳಿ ಜೋಳ ಬಿತ್ರಿ ನಾ ಬರದಿದ್ದ ನೀವ್ ಸತ್ರಿ” ಹಾಗೂ “ಶ್ರೀ ಬಸವೇಶ್ವರ ಪ್ರಸನ್ನ”, ಮತ್ತು “ನಾವಿಬ್ಬರು ನಮಗಿಬ್ಬರು” ಎಂದು ತೀರ ಇಕ್ಕಟ್ಟಿನಲ್ಲಿ ಬರೆದಿರುವ ಬರಹಗಳು. ಹಾರೆ, ಪಿಕಾಸಿ, ಕುಡುಗೋಲು ಇಡಲು ಇಂಜಿನ್ ಪಕ್ಕದಲ್ಲಿ ವಿಶೇಷವಾಗಿ ವೆಲ್ಡ್ ಮಾಡಲಾದ ಡಿಟ್ಯಾಚೇಬಲ್ ಸ್ಟಾಂಡ್. ಗದ್ದೆಯಲ್ಲಿ ಗಾಡಿ ಮುನಿದು ನಿಂತರೆ ಅದನ್ನು ಮುದ್ದುಮಾಡಲು ಪುಟ್ಟದಾದ ಟೂಲ್ ಕಿಟ್. ಎಂತಹ ಭೂಮಿಯಲ್ಲೂ ಉಳುಮೆ ಸಾಧ್ಯವಾಗಿಸಲು ಅತೀ ಹೆಚ್ಚಿನ ಅಶ್ವಶಕ್ತಿಯ ಎಂಜಿನ್. ಟಿವಿಯ ಅನ್ನದಾತ, ಕೃಷಿ ದರ್ಶನ, ರೇಡಿಯೋದ ಕೃಷಿ ವಾರ್ತೆಗಳ ಮಧ್ಯದಲ್ಲಿ ಈ ಟ್ರಾಕ್ಟರ್ ನದೇ ಜಾಹೀರಾತು ವಿಜೃಂಭಣೆ. ಡ್ರೈವರ್ ಉಳುಮೆ ಮಾಡುತ್ತಿರಬೇಕಾದರೆ ಆತನ ಅಕ್ಕ-ಪಕ್ಕ ಕುಳಿತು ಬೀಜ ಬಿತ್ತಲು ಅನುಕೂಲವಾಗುವ ಹಾಗೆ ಮಾಡಲಾಗಿರುವ ಸೀಟುಗಳು. ಕೆಎ-22 ಡಿ- 6…… ಎಂಬ ನಂಬರ್ ಪ್ಲೇಟ್ ನಿಂದ, ಇದು ಪಕ್ಕಾ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಯಾವುದೋ ಮೊಕ್ಕಾಂ ನ ಯಾವುದೋ ಸಾಕಿನ್ ಹಳ್ಳಿಯ ಯಾವುದೋ ಗೌಡನ ಟ್ರಾಕ್ಟರ್ ಎಂಬ ಋಜುವಾತು.

ಇಂತಹ ಟ್ರಾಕ್ಟರ್ ಒಂದು ಬೆಂಗಳೂರಿನಲ್ಲಿ ಅಪಾರ್ಟ್ ಮೆಂಟ್ ಒಂದರ ಕಾಮಗಾರಿಗಾಗಿ ಇಟ್ಟಿಗೆ, ಸಿಮೆಂಟ್ ಹೊರುತ್ತಿತ್ತು.

ಮನುಷ್ಯರಾಗಿದ್ರೆ ನನ್ನ ಬುದ್ಧಿ ಮಾತು ಕೇಳ್ತಿದ್ರಾ…..

ಶೂಟಿಂಗ್ ಮುಗಿಸಿಕೊಂಡು ಕ್ಯಾಂಡಿಮೆಂಟ್ಸ್ ಅಂಗಡಿಯೊಂದರ ಮುಂದೆ ಸಿಗರೇಟು ಸೇದುತ್ತ ನಿಂತಿದ್ದೆ. ಅದೇ ಸಮಯಕ್ಕೆ ನಾಲ್ಕಾರು ಜನರು ಅದೇ ಅಂಗಡಿಗೆ ಬಂದರು. ಅದರಲ್ಲಿ ಓರ್ವ ವೃದ್ಧರಿದ್ದು, ಅವರೊಡನೆ ಒಂದು ನಾಯಿ ಕೂಡ ನಡೆದುಕೊಂಡು ಬಂತು. ಈ ಜನ ಕಾಫಿಗೆ ಹೇಳಬೇಕು ಎನ್ನುವಷ್ಟರಲ್ಲಿ ವೃದ್ಧರೊಡನೆ ಬಂದಿದ್ದ ನಾಯಿಗೂ, ಅಲ್ಲೇ ಅಂಗಡಿ ಮುಂದೆ ಮಲಗಿದ್ದ ನಾಯಿಗೂ ಜಗಳ ಶುರುವಾಗಿಬಿಟ್ಟಿತು. ಮೊದಮೊದಲು ಹಲ್ಲು ತೋರಿಸಿದ ನಾಯಿಗಳು ಬಳಿಕ, ದೊಡ್ಡ ಸ್ವರದಲ್ಲಿ ಬೊಗಳುತ್ತ ಒಂದರಮೇಲೊಂದು ಎರಗಲು ಸನ್ನದ್ಧವಾಗಿ ಬಿಟ್ಟವು. ಕ್ಷಣಾರ್ಧದಲ್ಲಿ ಯುದ್ಧ ಘೋಷಣೆಯಾಗಿಯೇ ಬಿಟ್ಟಿತು. ಹಲ್ಲು ತೋರಿಸುವುದೇನು, ಗುರ್ ಎನ್ನುವುದೇನು, ಬಾಲ ನಿಮಿರಿಸುತ್ತ ಶಕ್ತಿ ಪ್ರದರ್ಶನವೇನು ಎಲ್ಲ ಶುರುವಾಗಿಬಿಟ್ಟಿತು. ಇನ್ನೇನು ಆ ನಾಯಿಗಳು ಕಚ್ಚಾಡಿ ಕೊಂಡು ಸುತ್ತಮುತ್ತಲಿದ್ದ ಜನರ ಮಧ್ಯೆ ಓಡಾಡಿ ಗೊಂದಲವೆಬ್ಬಿಸುವುದೊಂದು ಬಾಕಿ ಇತ್ತು. ಅಷ್ಟರಲ್ಲಿ ಆ ವೃದ್ಧರು ತಮ್ಮ ಹೆಗಲ ಮೇಲಿನ ಟರ್ಕಿಸ್ ಟಾವೆಲ್  ತೆಗೆದವರೆ ನಾಯಿಗಳತ್ತ ಹುಶ್ ಹುಶ್ ಎಂದು ಬೀಸುತ್ತ, “ಏ ನಿಲ್ಲಸ್ರೋ…ನಿಲ್ಲಸ್ರೋ….ನಿಮ್ಮ ಜಗಳಾನಾ…ಅಯಾಯಾ…ಹಿಂಗ್ ಹಾದಿ ಬೀದಿಲೆಲ್ಲ ಜಗಳಾಡ್ತಾ ಕುಂತ್ಕಂಡ್ರೆ ಮರ್ವಾದೆ ಇರ್ತದಾ? ನೋಡು ನೀನ್ ಮೊದಲೇ ಜಗಳಾಡಿ ಎಷ್ಟೊಂದು ಕಚ್ಚಸ್ಕಂಡಿದಿಯಾ…ಮತ್ತೆ ಎಗರಕ್ ಹೋಯ್ತೀಯಾ….ಹುಶ್ ಹುಶ್…”ಎನ್ನುತ್ತಾ ನಾಯಿಗಳನ್ನು ದೂರಸರಿಸಿದರು.

ಅವರ ಮಾತಿಗೋ, ಅವರ ಟಾವೆಲ್ ಗೋ ಏನೋ ಗೊತ್ತಿಲ್ಲ, ಆದರೆ ಅವರು ಮಾತು ಮುಗಿಸುತ್ತಿದ್ದಂತೆ ಅಂಗಡಿಯ ನಾಯಿ ಏನೂ ನಡೆದೇ ಇಲ್ಲವೆನೋ ಎಂಬಂತೆ ಮತ್ತೆ ತನ್ನ ಸ್ಥಾನಕ್ಕೆ ತೆರಳಿ ಸುರುಳಿ ಸುತ್ತಿಕೊಂಡು ಮಲಗಿಬಿಟ್ಟಿತು. ವೃದ್ಧರೊಡನೆ ಬಂದಿದ್ದ ನಾಯಿ ಬಾಲವಲ್ಲಾಡಿಸುತ್ತ ಅವರ ಹಿಂದೆ ಬಂತು ನಿಂತಿತು. ಅಲ್ಲಿ ನಿಂತಿದ್ದವರು ಒಂದು ಕ್ಷಣ ಆಶ್ಚರ್ಯಗೊಂಡರು. ನಂತರ  ಆ ವೃದ್ಧರೆಂದರು. “ನೋಡಿ ಸ್ವಾಮಿ…ಮಾತು ಬರ್ದ ಪಶುಗೋಳು ಮಾತು ಕೇಳುತ್ವೆ….ಅದೇ ಈಗ ಮನುಷ್ಯರು ಜಗಳಾಡ್ತಾ ಇದ್ರೆ ನನ್ನ ಬುದ್ಧಿ ಮಾತು ಕೇಳ್ತಿದ್ರಾ….?

ಒಬ್ಬ ಮಾಂಸಾಹಾರಿ = ಮೂರು ಸಸ್ಯಾಹಾರಿಗಳು

‘ಸುಧಾ’ ವಾರಪತ್ರಿಕೆ (ಅಕ್ಟೋಬರ್ 29ರ) ಸಂಚಿಕೆಯಲ್ಲಿ “ಅನ್ನದ ಬಟ್ಟಲಲ್ಲಿ ಬಿರುಗಾಳಿ” ಎಂಬ ಲೇಖನವನ್ನು ಡಾ. ಜಯಕರ ಭಂಡಾರಿ ಎಂ. ಬರೆದಿದ್ದಾರೆ. ಆ ಲೇಖನದಲ್ಲಿನ ಒಂದು ಪ್ಯಾರಾಗ್ರಾಫ್ ಹೀಗಿದೆ.

ಒಂದು ಕಿಲೋ ಕೋಳಿ ಮಾಂಸ ಬೆಳೆಯಲು ಸರಾಸರಿ 2 ಕಿಲೋ ಆಹಾರ ಧಾನ್ಯದಿಂದ ತಯಾರಿಸಿದ ಫೀಡ್ ಬೇಕು. ಒಂದು ಕಿಲೋ ಹಂದಿ ಮಾಂಸ ಬೆಳೆಯಲು 3 ಕಿಲೋ ಆಹಾರ ಧಾನ್ಯ ತಿನ್ನಿಸಬೇಕು. ಅದೇ ಒಂದು ಕಿಲೋ ಗೋಮಾಂಸ ಬೆಳೆಯಲು 7 ಕಿಲೋ ಆಹಾರ ಧಾನ್ಯ ಬೇಕು. ಹಾಗಾಗಿ ಯಾರಾದರೂ ಒಂದು ಕಿಲೋ ಗೋಮಾಂಸ ತಿಂದಾಗ ಅವರು ಪರೋಕ್ಷವಾಗಿ 7 ಕಿಲೋ ಆಹಾರ ಧಾನ್ಯ ತಿಂದಂತೆ. ನೀವು ಅರ್ಧ ಪೌಂಡಿನ ಒಂದು ಬೀಫ್ ಬರ್ಗರ್ ತಿಂದರೆ, ಕನಿಷ್ಠ ಮೂರು ಜನ ಸಸ್ಯಾಹಾರಿಗಳ ಒಪ್ಪೊತ್ತಿನ ಕೂಳು ಕಬಳಿಸಿದಂತೆ….

ಶಿವಮೊಗ್ಗದಿಂದ ಬೆಂಗಳೂರಿಗೆ, ಬೆಂಗಳೂರಿನಿಂದ ಬನಶಂಕರಿಗೆ

ಮೊನ್ನೆ ನನ್ನಪ್ಪ-ಅಮ್ಮ ಶಿವಮೊಗ್ಗದಿಂದ ಬೆಂಗಳೂರಿಗೆ ರೈಲಿನಲ್ಲಿ ಬಂದರು.

ಒಬ್ಬರಿಗೆ 40 ರೂಪಾಯಿಯಂತೆ ಇಬ್ಬರಿಗೆ ತಗಲಿದ್ದು 80 ರೂಪಾಯಿ.

ಬೆಂಗಳೂರು ಸಿಟಿ ರೈಲ್ವೆ ಸ್ಟೇಷನ್ ನಲ್ಲಿ ನಾನು ಇಬ್ಬರನ್ನೂ ಬರಮಾಡಿಕೊಂಡೆ.

ಮೇರು ಟ್ಯಾಕ್ಸಿಯಿಂದ ಬನಶಂಕರಿಯಲ್ಲಿನ ನನ್ನ ಮನೆಗೆ ಕರೆತಂದೆ.

ಅದಕ್ಕೆ ತಗಲಿದ್ದು 117 ರೂಪಾಯಿ.