‘ಮುಕ್ತ ಮುಕ್ತ’ದ ನನ್ನ ಪಾತ್ರಕ್ಕೆ ಎಂತೆಂತಹ ಫೀಡ್ ಬ್ಯಾಕ್….

©ಚಿತ್ರ – ನಾನು

ವಿಶ್ವೇಶ್ವರ ಭಟ್ಟರ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಹೋಗಿದ್ದೆ. ಎಂದಿನಂತೆ ಹಲವರು ನನ್ನ ಬಳಿ “ಸರ್ ನಿಮ್ಮ ವಾಯ್ಸ್ ತುಂಬಾ ಚೆನ್ನಾಗಿದೆ” “ಆಕ್ಟಿಂಗ್ ನ್ಯಾಚುರಲ್ ಆಗಿದೆ” “ನಿಮ್ಮ ಕ್ಯಾರಕ್ಟರ್ ತುಂಬಾ ಪವರ್ ಫುಲ್ ಆಗಿದೆ” “ನಿಮ್ಮ ಅಪ್ಪನ ಮಾತು ಕೇಳಲು ಹೋಗ್ಬೇಡಿ. ಬೇಗ, ನಿವೇದಿತಾಳನ್ನು ಮದುವೆ ಮಾಡಿಕೊಳ್ಳಿ” ಎಂದೆಲ್ಲ ಹೇಳುತ್ತಿದ್ದರು. ಅಷ್ಟರಲ್ಲಿ ಪರಿಚಯವಾದವರು ಆಚಾರ್ಯ ಪಿಯು ಕಾಲೇಜಿನ ಪ್ರಿನ್ಸಿಪಾಲ್ ಹಾಗೂ ಬರಹಗಾರ ಗುರುರಾಜ ದಾವಣಗೆರೆ ಅವರು. ಗುರುರಾಜ ಅವರು ಕೂಡ ನನ್ನ ಪಾತ್ರದ ಬಗ್ಗೆ ಮಾತನಾಡುತ್ತ ಹೇಳಿದರು “ಸುಘೋಷ್, ನಮ್ಮ ಮನೆಯಲ್ಲಿ ತಪ್ಪದೆ ಮುಕ್ತ ಮುಕ್ತ ನೋಡುತ್ತೇವೆ. ನಿಮ್ಮ ಪಾತ್ರವಂತೂ ತುಂಬಾ ಚೆನ್ನಾಗಿ ಬರ್ತಾ ಇದೆ. ನನ್ನ ಹೆಂಡತಿ ಯಾವಾಗಲೂ ಹೇಳುತ್ತಿರುತ್ತಾಳೆ ನಿಮ್ಮ ಹಾಗೂ ನಿವೇದಿತಾ ಜೋಡಿ ತುಂಬಾ ಚೆನ್ನಾಗಿದೆ ಎಂದು. ನನ್ನ ಮಗ ಆರನೇ ಕ್ಲಾಸಿನಲ್ಲಿ ಓದುತ್ತಿದ್ದಾನೆ. ಆತ ಕೂಡ ‘ಮುಕ್ತ ಮುಕ್ತ’ ನೋಡುತ್ತಾನೆ. ನಿಮ್ಮ ಕ್ಲೋಸ್ ಅಪ್ ಶಾಟ್ ಬಂದಾಗ ಮೊನ್ನೆ ಆತ ಹೇಳುತ್ತಿದ್ದ ‘ಅಪ್ಪಾ, ನೋಡು ದೇವಾನಂತ ಸ್ವಾಮಿಯ ಮೀಸೆ ಒಂದು ಕಡೆ ಉದ್ದ ಇದೆ ಮತ್ತೊಂದು ಕಡೆ ಗಿಡ್ಡ ಇದೆ’ ಎಂದು…”ಅಂದರು. ಮನೆಗೆ ಬಂದು ಮೀಸೆ ಮೇಷರ್ ಮಾಡದೆ ನನ್ನ ಬಳಿ ಬೇರಾವುದೇ ದಾರಿ ಇರಲಿಲ್ಲ.

Advertisements