ನಾಟಿ ವೈದ್ಯವೋ, ಸಿಸ್ಟೋಸ್ಕಾಪಿಯೋ…

(ಫೋಟೋ ಕೃಪೆ – ಲೈಫ್)

ನಿದ್ದೆಯಿಂದ ಎದ್ದಾಗ ಬೆಳಗಾಗಿತ್ತು. ರಾತ್ರಿಯ ಡ್ಯೂಟಿ ಡಾಕ್ಟರ್ ಬಂದು ಬ್ಲಡ್ ಟೆಸ್ಟ್ ನ ರಿಪೋರ್ಟ್ ಹೇಳಿದರು. “ಡಬ್ಲೂಬಿಸಿ ಕೌಂಟ್ 12600 ಆಗಿದೆ. ಅಂದರೆ ಬ್ಲಡ್ ಇನ್ಫೆಕ್ಷನ್ ಆಗಿದೆ. ಹೀಗಾಗಿ ಇದು ಅಪೆಂಡಿಸೈಟಿಸ್ ಆಗಿರುವ ಸಾಧ್ಯತೆ ಹೆಚ್ಚಾಗಿದೆ. ಏನಕ್ಕೂ ಮಧ್ಯಾಹ್ನ ಸ್ಕಾನ್ ಇದೆ. ನಂತರ ಸ್ಪಷ್ಟವಾಗಿ ಗೊತ್ತಾಗುತ್ತದೆ” ಎಂದು ಹೇಳಿಹೋದರು.

ನಿರಂತರವಾಗಿ ಸಲೈನ್ ಹಚ್ಚಿದ್ದರಿಂದ ಏನನ್ನೂ ತಿನ್ನದಂತೆ ಸೂಜಿಮೆಣಸಿನಕಾಯಿ ಸಿಸ್ಟರ್ ಬಂದು ಬೆದರಿಕೆ ಹಾಕಿ ಹೋಗಿದ್ದಳು. ನೀರಡಿಕೆ ತಡೆಯಲಿಕ್ಕೆ ಆಗುತ್ತಿರಲಿಲ್ಲ. ಆದರೆ ಮಧ್ಯಾಹ್ನ ಸ್ಕಾನ್ ಇದೆ ಎಂದು ವೈದ್ಯರು ಹೇಳಿದ ತಕ್ಷಣ, “ಹೆಚ್ಚು ಹೆಚ್ಚು ನೀರು ಕುಡಿಯಿರಿ. ಬ್ಲಾಡರ್ ಫುಲ್ ಇರ್ಬೇಕು. ಆಗಷ್ಟೇ ಸ್ಕಾನಿಂಗ್” ಎಂದು ಮತ್ತೊಮ್ಮೆ ಸಿಸ್ಟರ್ ಹೇಳಿದಾಗ ಅವಳಿಗೆ ಬ್ಲಾಡರ್-ಪೂರ್ವಕ…..ಓಹ್ ಸಾರಿ…..ಹೃದಯ ಪೂರ್ವಕ ಥ್ಯಾಂಕ್ಸ್ ಹೇಳಿದೆ. ಅಷ್ಟರಲ್ಲಾಗಲೇ ‘ಸುಘೋಷ ಆಸ್ಪತ್ರೆಗೆ ಆಡ್ಮಿಟ್ ಅಂತೆ, ಸಿಕ್ಕಾಪಟ್ಟೆ ಹೊಟ್ಟೆ ನೋವಂತೆ, ಇನ್ನೊದು ಅಂತೆ ಮತ್ತೊಂದು ಅಂತೆ,’ ಎಂಬ ಸುದ್ದಿ ಬೆಂಗಳೂರಿನ ನನ್ನ ಬಂಧುಗಳಿಗೆ ತಲುಪಿಯಾಗಿತ್ತು. ಫೋನ್ ಗಳು ಆರಂಭವಾದವು. ಆದರೆ ಸುದ್ದಿ ಹರಡದಂತೆ ಸಾಕಷ್ಟು ಎಚ್ಚರಿಕೆ ವಹಿಸಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿತು.

ಎಳನೀರು ಕುಡಿಕುಡಿದು ಬ್ಲಾಡರ್ ಫುಲ್ ಮಾಡಿಕೊಂಡೆ. ಸ್ಕಾನಿಂಗ್ ಸೆಂಟರ್ ನತ್ತ ‘ಮೇರಾ ನಾಮ್ ಜೋಕರ್’ ಪಿಚ್ಚರ್ ನಲ್ಲಿ ರಾಜ್ ಕಪೂರ್ ನಡೆಯುವ ಹಾಗೆ ನಡೆದುಕೊಂಡೇ ಹೋದೆ. ಮಧ್ಯಾಹ್ನ ಎರಡೂವರೆಗೆ ಅಬ್ಡಾಮಿನ್ ಸ್ಕಾನ್ ಆಯಿತು. ಅಲ್ಲೇ ಡಾ. ರಮೇಶ್ ತೋರಿಸಿಬಿಟ್ಟರು. ಅಪೆಂಡಿಸೈಟಿಸ್ ಅಲ್ಲವೇ ಅಲ್ಲ. ಮೂರು ಕಿಡ್ನಿ ಸ್ಟೋನ್ಸ್ ಫಾರ್ಮ್ ಆಗಿದೆ.

“ಹಾಗಾದರೆ ಇಂಜೆಕ್ಷನ್ ತೆಗೆದುಕೊಂಡು ಅವುಗಳನ್ನು ತೆಗೆಯಬಹುದಲ್ಲವೆ?” ಅತ್ಯುತ್ಸಾಹಾನಂದತುಂದಿತನಾಗಿ ಕೇಳಿದೆ. “ಸ್ಕಾನ್ ಮಾಡುವುದು ಅಷ್ಟೇ ನನ್ನ ಕೆಲಸ. ಹೆಚ್ಚಿನ ಮಾಹಿತಿಗಾಗಿ ಸರ್ಜನ್ ಸಂಪರ್ಕಿಸಿ” ಎಂದುಬಿಟ್ಟರು ಡಾ. ರಮೇಶ್. ಏನೇ ಆದರೂ ಒಂದು ರೀಲಿಫ್ ಇತ್ತು. ಸಧ್ಯ ಅಪೆಂಡಿಸೈಟಿಸ್ ಅಲ್ಲ. ಹೀಗಾಗಿ ಆಪರೇಷನ್ ಭಯವಿಲ್ಲ. ಕಿಡ್ನಿ ಸ್ಟೋನ್ ತೀರಾ ಕಾಮನ್ ಎಂಬೆಲ್ಲ ವಿಚಾರಗಳು ನುಗ್ಗಿ ಬಂದು ಆ ಮಟ್ಟಿಗೆ ಮನಸ್ಸು ಶಾಂತವಾಯಿತು.

ಸಂಜೆ ನಾಲ್ಕೂವರೆ ಸುಮಾರಿಗೆ ಸರ್ಜನ್ ಡಾ. ಮಧುಸೂದನ್ ವಾರ್ಡ್ ಗೆ ಬಂದರು. ತಮ್ಮ ನೀಲಿ ನೀಲಿ ಬಣ್ಣದ ಜೆಲ್ ಪೆನ್ ನಲ್ಲಿ ಡಯಗ್ರಾಮ್ ಬಿಡಿಸಿಕೊಂಡು ಬಂದಿದ್ದರು. “ಹುಂ….ನೋಡಿ ಈಗ ಮೂರು ಕಿಡ್ನಿ ಸ್ಟೋನ್ ಗಳು ಕಂಡುಬಂದಿವೆ. ಮೊದಲನೆಯದು ಕಿಡ್ನಿಯಿಂದ ಹೊರಬಿದ್ದು ಯುರೇಟರ್ ನಲ್ಲಿ ಬಂದು ಕುಳಿತಿದೆ. ಅದರ ಗಾತ್ರ 13*8 ಎಂಎಂ. ಉಳಿದವೆರಡು ಕಿಡ್ನಿಯಲ್ಲಿವೆ. ಒಂದು 8 ಎಂಎಂ ನದು ಮತ್ತೊಂದು 3 ಎಂಎಂ ನದು. ಈ 3 ಎಂಎಂ ಕಲ್ಲಿನ ಬಗ್ಗೆ ಚಿಂತೆಯಿಲ್ಲ. ಅದನ್ನು ಟ್ಯಾಬ್ಲೆಟ್ ಗಳ ಮೂಲಕ ತೆಗೆದುಬಿಡಬಹುದು. ಆದರೆ ಉಳಿದೆರಡು ಕಲ್ಲುಗಳನ್ನು ತೆಗೆಯಲು ಸಿಸ್ಟೋಸ್ಕಾಪಿ ಮಾಡಬೇಕಾಗತ್ತದೆ” ಎಂದರು ಮಧುಸೂದನ್ ಡಾಕ್ಟ್ರು. ಮೊಟ್ಟಮೊದಲಬಾರಿಗೆ ಈ ಶಬ್ದ ಕೇಳಿದ್ದೆ.

“ಸಿಸ್ಟೋಸ್ಕಾಪಿ ಅಂದ್ರೆ?” ಎಂದೆ. “ಏನಿಲ್ಲ ಒಂದು ಪೈಪನ್ನು ಪೆನಿಸ್ ಮುಖಾಂತರ ಪಾಸ್ ಮಾಡುತ್ತೇವೆ. ನಂತರ ಯುರೇಟರ್ ಹಾಗೂ ಕಿಡ್ನಿಯಲ್ಲಿರುವ ಎರಡು ಕಲ್ಲುಗಳನ್ನು ಒಡೆದು ಹೊರತೆಗೆಯುತ್ತೇವೆ”.

ಒಂದು ಕ್ಷಣ ಏನು ಹೇಳಬೇಕೆಂದು ತಿಳಿಯಲಿಲ್ಲ. ಡಾಕ್ಟರ್ ಹೇಳಿದ ವರ್ಣನೆ ನಾನು ಡಿಹೈಡ್ರೇಟ್ ಆಗುವಂತೆ ಮಾಡಿತು. “ಡಾಕ್ ಇಸ್ ದೇರ್ ನೋ ಅಲ್ಟರ್ನೇಟಿವ್?” ದೈನ್ಯದಿಂದಲೇ ಕೇಳಿದೆ. ವೆಲ್…. ಅನ್ ಫಾರ್ಚುನೇಟ್ಲಿ ನಾಟ್ ಎಂದರು.

“ಐ ಆಮ್ ಓಕೆ ವಿತ್ ಇಟ್. ಬಟ್ ವರಿಡ್ ಅಬೌಟ್ ದಿ ಪೇನ್ ದಟ್ ಐ ನೀಡ್ ಟು ಅಂಡರ್ ಗೋ” ಎಂದೆ.

“ಇಲ್ಲ ಇಲ್ಲ. ಪೇನ್ ಇರುವುದಿಲ್ಲ. ನಿಮಗೆ ಲೋಕಲ್ ಅನಸ್ತೇಷಿಯಾ ಕೊಟ್ಟಿರ್ತೀವಿ. ಹೀಗಾಗಿ ಪೇನ್ ಗೊತ್ತಾಗುವುದಿಲ್ಲ. ಯೂ ವೋಂಟ್ ಫೀಲ್ ಎನಿಥಿಂಗ್” ಎಂದು ಭರವಸೆ ನೀಡಿದರು ಡಾ. ಮಧುಸೂದನ್. “ನೀವು ಸಿಸ್ಟೋಸ್ಕಾಪಿಗೆ ರೆಡಿ ಇದ್ದರೆ ಹೇಳಿ. ಅಷ್ಟರಲ್ಲಿ ನಾನು ರೌಂಡ್ ಮುಗಿಸಿ ಬರುತ್ತೇನೆ. ಗುಡ್ ಲಕ್” ಎಂದವರೇ ತಮ್ಮ ಹಿಂದೆ ತಂದಿದ್ದ ಹಿಂಡುಹಿಂಡು ಸಿಸ್ಟರ್ ಗಳೊಂದಿಗೆ ಮೆರವಣಿಗೆ ಮುಂದುವರೆಸಿದರು.

ಜೂನಿಯರ್ ಡಾಕ್ಟರ್ ನಾಗರಾಜ್ ಗೆ, “ಸಿಸ್ಟೋಸ್ಕಾಪಿಗೆ ಎಷ್ಟು ಖರ್ಚಾಗಬಹುದು?” ಎಂದು ಕೇಳಿದೆ. ಡಾ. ನಾಗರಾಜ್, ನನ್ನ ಅಭಿಮಾನಿ. “ಒಂದು ನಿಮಿಷ ಚೆಕ್ ಮಾಡಿ ಹೇಳುತ್ತೇನೆ. ಹೇಗೂ ನಿಮಗೆ ಇನ್ಶೂರೆನ್ಸ್ ಇದೆಯಲ್ವ…ಮತ್ಯಾಕೆ ಚಿಂತೆ?” ಎಂದು ಪುಕ್ಕಟ್ಟೆ ಸಲಹೆ ನೀಡಿ ಸೀನಿಯರ್ ಗಳ ಬಳಿಗೆ ತೆರಳಿದರು. ಅರ್ಧಗಂಟೆಯಲ್ಲ ಮರಳಿದ ಅವರು, ಸುಮಾರು 30 ಸಾವಿರ ಖರ್ಚಾಗಬಹುದು. ನಾನ್ ಮೆಡಿಕಲ್ ಎಕ್ಸಪೆಂಡಿಚರ್ ಸುಮಾರು 10 ಸಾವಿರ ಇಟ್ಟುಕೊಂಡರೂ 40 ಸಾವಿರದ ಒಳಗೆ ಎಲ್ಲ ಮುಗೀಬಹುದು ಅಂತ ರೇಟ್ ಕಾರ್ಡ್ ಮುಂದೆ ಹಿಡಿದರು. ಅವರು ಹಾಗೆ ಹೇಳುವುದಕ್ಕೂ ಕೊಪ್ಪದ ನನ್ನ ಮನೆಯಿಂದ ಅಣ್ಣನ ಫೋನ್ ಬರುವುದಕ್ಕೂ ಸರಿಹೋಯಿತು. ಅಲ್ಲಾಗಲೇ ವಿಷಯ ತಿಳಿಸಿಯಾಗಿತ್ತು. ಅಣ್ಣ ಹೇಳಿದ, “ಸುಘೋಷಾ, ಇಲ್ಲೊಬ್ರು ನಾಟಿ ವೈದ್ಯರಿದ್ದಾರೆ. ಅವ್ರು ಒಳ್ಳೇ ಔಷಧಿ ಕೊಡ್ತಾರೆ. 28 ಎಂಎಂ ವರೆಗೂ ನಾವ್ ತಗದೀದಿವಿ ಅಂತ ಹೇಳ್ತಿದಾರೆ. ನೀ ಒಂದ್ ಕೆಲಸಾ ಮಾಡಿದ್ರೆ ಆಯ್ತೆನಾ ಅಂತ. ಕಾರ್ ಮಾಡ್ಕೊಂಡು ಇಲ್ಲೇ ಕೊಪ್ಪಕ್ ಬಂದ್ ಬಿಡು. ಅವರು ಬೆಳಿಗ್ಗೆ ಆರು ಗಂಟೆಗೆ ಔಷಧಿ ಕೊಟ್ರೆ ಸಂಜೆ ಆರು ಗಂಟೆ ವಳಗೆ ಕಲ್ಲು ಹೊರಗೆ ಬಿದ್ಬಿಡತ್ತಂತೆ”. ಅಂದ ಹಾಗೆ ಆ ನಾಟಿ ವೈದ್ಯರು 200 ರೂಪಾಯಿ ಚಾರ್ಜ್ ಮಾಡುತ್ತಾರೆ ಎಂದು ಹೇಳಲು ಅಣ್ಣ ಮರೆಯಲಿಲ್ಲ.

ದ್ವಂದ್ವದ ಉಗಮವಾಗಿತ್ತು.

(ನಾಳೆ: ಹಿತ್ತಲ ಗಿಡ ಮದ್ದಲ್ಲ….)

4 thoughts on “ನಾಟಿ ವೈದ್ಯವೋ, ಸಿಸ್ಟೋಸ್ಕಾಪಿಯೋ…

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.