ಅರ್ಧ ಶರೀರದ ರೋಮ ಕಳೆದುಕೊಂಡ ನನ್ನ ದೇಹ ವಿಚಿತ್ರವಾಗಿ ಕಾಣುತಿತ್ತು

ನನಗೆ ಮೊದಲಿನಿಂದಲೂ ಅಷ್ಟೇ. ನನ್ನ ಶರೀರದ ಮೇಲೆ ನನಗೇ ವಿಪರೀತ ಅನ್ನಿಸುವಷ್ಟು ಅಭಿಮಾನವಿದೆ. ನನ್ನ ದೈಹಿಕ ಸ್ಟ್ರೆನ್ತ್ ಮೇಲೆ ಅತೀ ಎನ್ನಿಸುವಷ್ಟು ಓವರ್ ಕಾನ್ಫಿಡೆನ್ಸ್. ಹೀಗಾಗಿಯೇ ಶಾಲೆಯಲ್ಲಿ ನನಗಿಂತ ಬಲಿಷ್ಠರಾದವರೊಡನೆ ಹೊಡೆದಾಟಕ್ಕಿಳಿಯುತ್ತಿದ್ದೆ. ಎತ್ತೆತ್ತರ ಮುಗಿಲೆತ್ತರ ಹೈಟ್ ಇರುವ ನನ್ನದೇ ವಾರಿಗೆಯ ಹುಡುಗರ ಮಧ್ಯೆ ಕುಳ್ಳನಾಗಿ ಕಾಣುತ್ತಿದ್ದ ನಾನು ಫುಟ್ಬಾಲ್ ಮೈದಾನದಲ್ಲಿ ಫುಟ್ಬಾಲ್ ಯಾರು ಕಾಲಿಗೂ ಸಿಗದಂತೆ ಮೂವ್ ಮಾಡಿ ಬಿಡುತ್ತಿದ್ದೆ.

ಇನ್ನು ಸೌಂದರ್ಯದ ವಿಷಯಕ್ಕೆ ಬಂದರೂ ನನ್ನ ದೇಹ ನನಗೆ ತುಂಬ ಪ್ರಿಯವಾಗಿತ್ತು. ಕಾಲೇಜ್ ಲೈಫಿನಲ್ಲಿ ಟೀನೇಜ್ ಹುಡುಗಿಯರು ನನ್ನತ್ತ ಮೀನಿಂಗ್ ಫುಲ್ ಆಗಿ ನೋಡುತ್ತಿದ್ದುದರಿಂದ ಒಳಗೊಳಗೇ ಹೆಮ್ಮೆಯಾಗುತ್ತಿತ್ತು. ನಾಟಕ, ಚರ್ಚಾಸ್ಪರ್ಧೆ, ಗ್ರೂಪ್ ಡ್ಯಾನ್ಸ್, ಇಂಡಿವಿಜುವಲ್ ಡ್ಯಾನ್ಸ್, ಹಾಡು, ಸ್ಕೇಟಿಂಗ್, ಟ್ರೆಕ್ಕಿಂಗ್,  ಯೋಗಾಸನ, ಸೈಕ್ಲಿಂಗ್, ಲಾಠಿ ಅಂತ ಛಪ್ಪನ್ನೈವತ್ತಾರು ಹವ್ಯಾಸಗಳಿಂದ ದೇಹವೆಂಬ ದೇಹವನ್ನು ಯೋಗ ಕಲಶವನ್ನಾಗಿಸಿಕೊಂಡಿದ್ದೆ.

ಮಾನವ ದೇಹವು ಮೂಳೆ ಮಾಂಸದ ತಡಿಕೆ ಎಂದು ಒಪ್ಪಿಕೊಳ್ಳಲು ನಾನು ಶತಾಯಗತಾಯ ಸಿದ್ಧನಿರಲಿಲ್ಲ. ಅಂತಹ ದೇಹ ರೂಮ್ ನಂ. 202 ರಲ್ಲಿ ವಿಚಿತ್ರವಾಗಿ ಮಲಗಿತ್ತು. ತಲೆಯಿಂದ ಎದೆಯವರೆಗೆ ರೋಮ, ಮತ್ತೆ ಎದೆಯ ಕೆಳಗಿನಿಂದ ಮೊಳಕಾಲಿನವರೆಗೆ ರೋಮಗಳಿಲ್ಲ. ಮೊಳಕಾಲುಗಳ ಕೆಳಗೆ ಮತ್ತೆ ರೋಮ. ನಿಜವಾಗಿ ಝಿಬ್ರಾ ಕಂಡಂತೆ ಕಾಣುತ್ತಿದ್ದೆ. ಪುಟ್ಟರಾಜು ನನ್ನನ್ನು ‘ಆಪರೇಷನ್’ ಗೆ ರೆಡಿ ಮಾಡಿಯಾಗಿತ್ತು. ಚಳಿಗೆ ದೇಹ ಗಡಗಡಗಡ ನಡುಗುತ್ತಿತ್ತು.

ಪುಟ್ಟರಾಜುವಿನ ಮಾತುಗಳನ್ನು ಕೇಳುತ್ತ ಮನಸ್ಸು ಭಾರವಾಗಿದ್ದರೆ, ರೋಮಗಳನ್ನು ಕಳೆದುಕೊಂಡ ಶರೀರ ಇನ್ನೂ ಭಾರವಾಗಿತ್ತು. “ಸಾರ್ ಗೀಜರ್ ಸ್ವಿಚ್ ಹಾಕಿದ್ದೆ. ನೀರು ಚೆನ್ನಾಗಿ ಬಿಸಿ ಆಗಿದೆ. ಸ್ನಾನ ಮಾಡಿಕೊಂಡು ಬಿಡಿ” ಅಂದ ಪುಟ್ಟರಾಜು. ಸರಿ ಎಂದು ಹಾಗೆಯೇ ಎದ್ದು ಬಾತ್ ರೂಮ್ ನತ್ತ ಹೆಜ್ಜೆ ಹಾಕಿದ್ದೆ. ಎಡಗೈಗೆ ಚುಚ್ಚಿದ್ದ ಸಲೈನ್ ಇಂಜೆಕ್ಷನ್ ಹಾಗೆಯೇ ಇತ್ತು. ಬಾತ್ ರೂಮ್ ಹೋಗಿ ಬಿಸಿ ನೀರು ಬಕೆಟ್ ಗೆ ಬಿಟ್ಟೆ. ಪುಟ್ಟರಾಜು ಸ್ನಾನ ಮಾಡಿಸಲು ಬಂದ. ಬೇಡ ನಾನೇ ಮಾಡಿಕೊಳ್ಳುತ್ತೇನೆ ಅಂದೆ.

ಬಿಸಿಬಿಸಿ ನೀರಿನ ಮೊದಲ ತಂಬಿಗೆಯನ್ನು ಮೈಮೇಲೆ ಸುರಿದುಕೊಂಡೆ. ಅಷ್ಟರಲ್ಲಿ ನೆನಪಾಯ್ತು. ಬಾತ್ ರೂಮ್ ಬಾಗಿಲು ಹಾಕಿಲ್ಲ ಅಂತ. ನಗು ಬಂತು.

ಬಾಗಿಲು ಹಾಕಿಕೊಂಡು ಏನು ಮುಚ್ಚಿಕೊಳ್ಳಬೇಕು ಎಂದು.

(ನಾಳೆ : ನಾನು ಮಾನಸಿಕವಾಗಿ ಸಿಸ್ಟೋಸ್ಕಾಪಿಗೆ ತಯಾರಾದೆ)