ಬದುಕಿನಲ್ಲಿ ಮೊಟ್ಟ ಮೊದಲ ಬಾರಿಗೆ ವ್ಹೀಲ್ ಚೇರ್ ಮೇಲೆ ಕುಳಿತ ಅನುಭವ

ನನಗೆ ಮೊದಲಿನಿಂದಲೂ ವ್ಹೀಲ್ ಚೇರ್ (ಯಾವ ಚೇರಿಗೆ ವ್ಹೀಲ್ ಇರುತ್ತದೋ ಅದು) ಗಳೆಂದರೆ ಅದೆಂತಹುದೋ ಪ್ರೀತಿ. ಮೋಹ. ಅಫ್ ಕೋರ್ಸ್ ನಾನು ಮೊದಲು ನೋಡಿದ್ದು ಆಸ್ಪತ್ರೆಯ ವ್ಹೀಲ್ ಚೇರ್ ಗಳನ್ನಲ್ಲ. ಬದಲಾಗಿ ನನ್ನಪ್ಪನ ಆಫೀಸಿನಲ್ಲಿದ್ದ ಚಿಕ್ಕಚಿಕ್ಕಗಾಲಿಗಳಿರುವ ಅಪ್ಪನ ಬಾಸ್ ನ ಚೇರ್. ಆಬ್ಬ ಎಷ್ಟು ಚೆನ್ನಾಗಿತ್ತು ಆ ಕುಷನ್ ಚೇರ್. ಅಪ್ಪನ ಆಫೀಸು ಬೆಳಗಾವಿಯಲ್ಲಿ ಮನೆಯ ಹತ್ತಿರದಲ್ಲೇ ಇದ್ದುದರಿಂದ ದಿನದಲ್ಲಿ ಹತ್ತಾರು ಬಾರಿ ಅಪ್ಪನ ಆಫೀಸಿಗೆ ಹೋಗುತ್ತಿದ್ದೆ. ಚಿಕ್ಕಹುಡುಗನಾದ್ದರಿಂದ ಅಪ್ಪನ ಬಾಸ್, ತಾವು ಪಕ್ಕದಲ್ಲಿ ಕುಳಿತು ನನ್ನನ್ನು ತಮ್ಮ ಚೇರ್ ಮೇಲೆ ಕೂರಿಸಿ ಕೆಲಸಮಾಡುತ್ತಿದ್ದರು. ಅಬ್ಬ!! ಎಂತಹ ಆನಂದ ಆ ಚೇರ್ ಮೇಲೆ ಕುಳಿತರೆ. ಚೇರ್ ಮೇಲೆ ಕುಳಿತ ತಕ್ಷಣ ನನ್ನ ಕೆಲಸ ಒಂದೇ. ಟೇಬಲ್ ಮೇಲೆ ಇರುತ್ತಿದ್ದ ಹಳೆದ ಕಾಲದ ತಿರುಪಿತಿರುಪಿ ಇಟ್ಟು ಬಾರಿಸಬಹುದಾಗಿದ್ದ ಕಾಲಿಂಗ್ ಬೆಲ್ ಒತ್ತುವುದು ಹಾಗೂ ಒಂದು ರೌಂಡ್ ಚೇರ್ ಮೇಲೆ ತಿರುಗುವುದು. ತಲೆ ಸುತ್ತು ಬರುವವರೆಗೂ ಆ ಕೆಲಸ ಮಾಡಿ ನಂತರ ಓಡಿಹೋಗುತ್ತಿದ್ದೆ.

ವ್ಹೀಲ್ ಚೇರ್ ನ ಮೋಹ ನನ್ನನ್ನು ದೊಡ್ಡವನಾದ ಮೇಲೂ ಬಿಟ್ಟಿರಲಿಲ್ಲ. ಆಫೀಸಿನಲ್ಲಿ ಇರುತ್ತಿದ್ದ ಕಂಪ್ಯೂಟರ್ ಚೇರ್ ಮೇಲೆ ಕುಳಿತು ಅನವಶ್ಯವಕಾಗಿ ತಿರುಗುತ್ತಿದ್ದೆ. ಬಹುಶಃ ನನ್ನ ಮನಸ್ಸಿನಲ್ಲಿದ್ದ ಬಾಲಕ (ಬಾಲ….?) ಇನ್ನೂ ಹೊರಹೋಗಿರಲಿಲ್ಲ ಎನಿಸುತ್ತದೆ. ಅಷ್ಟೇ ಏಕೆ, ಇಂದಿಗೂ ಸಹ ನನಗೆ ಕಂಪ್ಯೂಟರ್ ಚೇರ್ ಮೇಲೆ ಸುಮ್ಮನೆ ಕುಳಿತುಕೊಳ್ಳಲು ಬರುವುದೇ ಇಲ್ಲ. ಸ್ವಲ್ಪ ಟೈಪ್ ಮಾಡುತ್ತಿರುವಂತೆ ಡೂಂಯ್….ಡೂಂಯ್….ಎಂದು ಒಂದು ಸುತ್ತು ಸುತ್ತಿ ಮತ್ತೆ ಟೈಪ್ ಮಾಡಲು ಶುರುಮಾಡುತ್ತೇನೆ.

ಆದರೆ ಬದುಕಿನಲ್ಲಿ ಮೊಟ್ಟಮೊದಲ ಬಾರಿಗೆ ಆಸ್ಪತ್ರೆಯ ವ್ಹೀಲ್ ಚೇರ್ ಮೇಲೆ ಕುಳಿತುಕೊಳ್ಳುವ ಸುಯೋಗ ನನ್ನ ಪಾಲಿಗೆ ಒದಗಿ ಬಂದಿತ್ತು. ಅದರ ಮೇಲೆ ಕೂರುವುದು ಒಂದು ರೀತಿಯ ಹಿಂಸೆ ಎನಿಸಿತು. “ಬೇಡ. ನಡೆದುಕೊಂಡೇ ಬರುತ್ತೇನೆ” ಎಂದೆ ಪುಟ್ಟರಾಜುಗೆ. ಒಮ್ಮೆಲೇ ವಿರೋಧಿಸಿದ. “ಇಲ್ಲ ಇಲ್ಲ. ಆಪರೇಷನ್ ಗೆ ಹೋಗಬೇಕಾದರೆ ವ್ಹೀಲ್ ಚೇರ್ ಮೇಲೆಯೇ ಹೋಗಬೇಕು” ಎಂದು ಪುಟ್ಟರಾಜು.

ಸರಿ ಎಂದು ವ್ಹೀಲ್ ಚೇರ್ ಮೇಲೆ ಕುಳಿತೆ. ಗೌನ್ ನ ಹಿಂದಿನ ಕಷೆ ಕಟ್ಟಿಲ್ಲದ ಕಾರಣ ಹಿಂದಿನ ಭಾಗವೆಲ್ಲ ಓಪನ್ ಇತ್ತು. ಬೆಳಗಿನ ಆರೂಕಾಲ ಸುಮಾರಿನ ಚಳಿಯಲ್ಲಿ ಕಬ್ಬಿಣದ ವ್ಹೀಲ್ ಚೇರ್ ಮೇಲೆ ನನ್ನ ಪೃಷ್ಠ, ಬೆನ್ನು, ಕಾಲು ತಾಗುತ್ತಿರುವಂತೆ ಚಳಿ ಚಳಿ ಚಳಿ ತಾಳೆನು ಈ ಚಳಿಯ ಆಯಿತು. ಪುಟ್ಟರಾಜು ವ್ಹೀಲ್ ಚೇರ್ ನೂಕಲಾರಂಭಿಸಿದ. ಹೊರಟಿತು ಸುಘೋಷ್ ಎಸ್. ನಿಗಳೆ ಅವರ ಸವಾರಿ ಸಿಸ್ಟೋಸ್ಕೋಪಿಗೆ. ನಾನು, ನನ್ನ ಹಿಂದೆ ಪುಟ್ಟರಾಜು, ಅವನ ಅಕ್ಕಪಕ್ಕ ಇಬ್ಬರು ಸಿಸ್ಚರ್ ಗಳು. ಒಬ್ಬ ಸಿಸ್ಟರ್ ಕೈಯಲ್ಲಿ ನನ್ನ ಸಲೈನ್ ಬಾಟಲಿ. ಮತ್ತೊಬ್ಬ ಸಿಸ್ಟರ್ ಕೈಯಲ್ಲಿ ನನ್ನ ಕೇಸ್ ಸ್ಟಡಿ ಪೇಪರ್. ನಾನು ರಾಜ, ಪುಟ್ಟರಾಜು ಸೇವಕ, ಸಿಸ್ಟರ್ ಗಳು ದಾಸಿಯರು ಅನ್ನುವಂತಿತ್ತು ಆ ದೃಶ್ಯ. ಒಂದೇ ವ್ಯತ್ಯಾಸ ಅಂದರೆ ರಾಜನಾಗಿದ್ದವನು ವ್ಹೀಲ್ ಚೇರ್ ಮೇಲೆ ಕುಳಿತಿದ್ದ ಹಾಗೂ ಆತನ ಪರಿಸ್ಥಿತಿ ಚಿಂತಾಜನಕವಾಗಿತ್ತು.

ಅಷ್ಟರಲ್ಲಿ ಮುಂದಿನಿಂದ ಒಬ್ಬ ಸಿಸ್ಟರ್ ಕೈಯಲ್ಲಿ ಏನೋ ಹಿಡಿದುಕೊಂಡು ಬಂದಳು. ಏನೆಂದು ನೋಡುವಷ್ಟರಲ್ಲಿ, ನನ್ನ ತಲೆಗೆ ಅನಾಮತ್ತಾಗಿ ಹಸಿರು ಬಣ್ಣದ ಬಟ್ಟೆಯ ಕ್ಯಾಪೊಂದನ್ನು ತೊಡಿಸಿಬಿಟ್ಟಳು. ಹಸಿರು ಗೌನ್ ನಲ್ಲಿ, ಹಸಿರು ಟೊಪ್ಪಿಯಲ್ಲಿ ರೈತ ಹೋರಾಟಗಾರನಂತೆ ಕಾಣುತ್ತಿದ್ದೆ.

ನಾನಿದ್ದದ್ದು ಸೆಕೆಂಡ್ ಫ್ಲೋರ್ ನಲ್ಲಿ. ಮೇಜರ್ ಓಟಿ ಫಸ್ಟ್ ಫ್ಲೋರ್ ನಲ್ಲಿತ್ತು. ಲಿಫ್ಟ್ ನೊಳಗೆ ಮೆರವಣಿಗೆ ಎಂಟರ್ ಆಯಿತು. ಲಿಫ್ಟ್ ನೊಳಗೆ ಮೂರು ಫೋಟೋ ಹಾಕಿದ್ದರು. ಅಕ್ಕಪಕ್ಕ ಗಣಪತಿ, ಲಕ್ಷ್ಮಿಯರಿದ್ದರೆ ಮಧ್ಯದಲ್ಲಿ ಮೋಹನ್ ದಾಸ್ ಕರಮಚಂದ್ ಗಾಂಧಿ ಫೋಟೋ ಇತ್ತು. ಗಾಂಧಿ ತಾತ ಬೊಚ್ಚುಬಾಯಿಯಲ್ಲಿ ನಗುತ್ತಿರುವ ಫೋಟೋ ಅದು. ನನಗೆ ಮಾತ್ರ ಅವರು ನನ್ನನ್ನೇ ನೋಡಿ ನಗುತ್ತಿದ್ದಾರೆ ಎನಿಸಿತು. “ಸುಘೋಷ್, ನಾನು ಹೇಳಿರುವ ತತ್ವಗಳನ್ನು ಅನುಸರಿಸು. ನಿನ್ನ ಕಿಡ್ನಿ ಅಷ್ಟೇ ಅಲ್ಲ. ಇಡೀ ದೇಹವೇ ಸುಸ್ಥಿಯಲ್ಲಿರುತ್ತದೆ” ಎಂದು ಗಾಂಧಿ ತಾತ ಹೇಳಿದಂತೆನಿಸಿತು. ಲಿಫ್ಟ್ ನಿಂದ ಹೊರಬಂದಾಗ ಕೆಂಪುಬಣ್ಣದಲ್ಲಿ MAJOR OT ಎಂದು ಬರೆದಿದ್ದ ಗಾಜಿನ ಬಾಗಿಲು ನನ್ನನ್ನು ಸ್ವಾಗತಿಸಿತು.

(ನಾಳೆ: ಆಯ್ತು….ಆಯ್ತು….ಆಗೇssssss ಹೋಯ್ತು……ಸಿಸ್ಟೋಸ್ಕೋಪಿ)