ಇದ್ರ ಇರಬೇಕು ನನ್ನ ಮಾವನ್ಹಂಗ….

ಪ್ರಾಥಮಿಕ ಶಾಲೆಯಲ್ಲಿದ್ದಾಗ ವಿರುದ್ಧಾರ್ಥಕ ಪದಗಳನ್ನು ಬರೆಯುವಂತೆ ಮಾಸ್ತರರು ಹೇಳುತ್ತಿದ್ದಾಗ ಕೆಲವು ಶಬ್ದಗಳು ವಿರುದ್ಧಾರ್ಥಕ ಪದಗಳ ಪಟ್ಟಿಯಲ್ಲಿ ಖಾಯಂ ಆಗಿ ಇರುತ್ತಿದ್ದವು. ಹುಡುಗ-ಹುಡುಗಿ, ಅಪ್ಪ-ಅಮ್ಮ, ಅಣ್ಣ-ತಮ್ಮ, ಅಕ್ಕ-ತಂಗಿ, ಅತ್ತೆ-ಸೊಸೆ, ಮಾವ-ಅಳಿಯ ಈ ಶಬ್ದಗಳನ್ನು ಕ್ಲಾಸಿನಲ್ಲಿದ್ದ ಅಷ್ಟೂ ವಿದ್ಯಾರ್ಥಿಗಳು ಮೊದಲಿಗೆ ಬರೆದು ನಂತರ ಉಳಿದ ವಿರುದ್ಧಾರ್ಥಕ ಪದಗಳನ್ನು ಬರೆಯುತ್ತಿದ್ದರು. ಈಗ ಅದನ್ನು ಯೋಚಿಸಿದರೆ ತುಂಬ ಮೋಜೆನಿಸುತ್ತದೆ.

ಅತ್ತೆ-ಸೊಸೆ, ಮಾವ-ಅಳಿಯ ಸಂಬಂಧಗಳನ್ನು ನಮ್ಮ ಮಾಧ್ಯಮ, ಸಾಹಿತ್ಯ ಹಾಗೂ ಸಮಾಜ ಬಹುಶಃ ವಿರುದ್ಧಾರ್ಥಕ ಪದಗಳಂತೆಯೇ ನೋಡಿದೆ. ನಿಜಜೀವನದಲ್ಲಿ ಯಾರಿಗೂ ಆದರ್ಶ ಅತ್ತೆ-ಸೊಸೆ, ಮಾವ-ಅಳಿಯ ಸಂಬಂಧಗಳು ಸಿಗದ ಕಾರಣ ಈ ಕೊರತೆಯಿರಬೇಕು. ನನ್ನ ಲಿಸ್ಟ್ ನಲ್ಲಿ ಸಹ ಇಂದಿನವೆರೆಗೆ ಆದರ್ಶ ಅತ್ತೆ-ಸೊಸೆಯಂದಿರ ಸಂಖ್ಯೆ ಐದು ದಾಟಿಲ್ಲ. ವರದಕ್ಷಿಣೆ ಕಿರುಕುಳ, ತವರು ಮನೆಯ ಹೀಗಳೆಯುವಿಕೆ, ಮಾವನ ಮನೆಯ ಮರ್ಯಾದೆ ಹರಾಜು, ಗಂಡನಿಗೆ ಮಂಗಳಾರತಿ, ಅತ್ತೆಯ ಹಿಂಸೆ, ಸೊಸೆಯ ಬಯ್ಗಳ ಮುಂತಾದ ಪ್ರಕರಣಗಳಿಂದ ಒಟ್ಟಿನಲ್ಲಿ ಈ ಸಂಬಂಧಗಳು ಭಾರತೀಯ ಸಮಾಜದ ಗಲ್ಲಿಗಲ್ಲಿಗಳ ಸಂದುಗೊಂದಿಗಳಲ್ಲಿ ಸದಾ ಚರ್ಚೆಯ ವಿಷಯ.

ನಾನು ಆಸ್ಪತ್ರೆ ಸೇರಿದಾಗ ನನ್ನೊಡನೆ ವಿದ್ಯಾಳೇ ಉಳಿದುಕೊಳ್ಳುವುದು ಎಂದು ನಿರ್ಧಾರವಾಗಿತ್ತು. ಹಾಗೆ ನಾವೇ ಮಾತಾಡಿಕೊಂಡಿದ್ದೆವು. ನಾನು, ವಿದ್ಯಾ, ಉದಾತ್ತ ಮೂರು ಜನ ಇರುವುದೆಂದು ಅಂದುಕೊಂಡಿದ್ದೆವು. ಅದೇ ಆಸ್ಪತ್ರೆಯಲ್ಲಿ ಹುಟ್ಟಿದ್ದ ಉದಾತ್ತ ಆಗಲೇ ಹತ್ತಾರು ಸಿಸ್ಟರ್ ಗಳ ಕಣ್ಮಣಿಯಾಗಿದ್ದ. ನಮ್ಮ ನಿರ್ಧಾರವನ್ನು ಕೇಳಿದ ಸಿಸ್ಟರ್ ಗಳು, ಬೇಡ ಬೇಡ ಅವ ಇಲ್ಲಿ ಬೇಡ. ಹಾಸ್ಟಿಟಲ್ ಇನ್ಫೆಕ್ಷನ್ ಆಗಬಹುದು ಎಂದು ಹೇಳಿದ್ದರಿಂದ ವಿದ್ಯಾ ನನ್ನೊಡನೆ ಇರುವುದು ರದ್ದಾಯಿತು.

ಉಳಿದಿದ್ದ ಒಂದೇ ಒಂದು ಆಯ್ಕೆಯೆಂದರೆ ನನ್ನ ಮಾವನದ್ದು. ಈಗಾಗಲೇ ಬರೆದಿರುವಂತೆ ನನ್ನ ಮಾವನಿಗೆ 71 ವಯಸ್ಸು. 35 ವರ್ಷಗಳ ಕಾಲ ಏರ್ ಫೋರ್ಸ್ ನ ಮೆಡಿಕಲ್ ಟ್ರೇಡ್ ನಲ್ಲಿದ್ದವರು. ಇಂದಿಗೂ ನಿತ್ಯ ಐದು ಗಂಟೆಗೆ ಎದ್ದು ಆಸ್ಥಾ ಚಾನಲ್ ಆನ್ ಮಾಡಿ ಬಾಬಾ ರಾಮದೇವ್ ರ ಕೋಚಿಂಗ್ ಕ್ಲಾಸ್ ನಲ್ಲಿ ತಪ್ಪದೆ ಪಾಲ್ಗೊಳ್ಳುತ್ತಾರೆ. ಅವರ ಡ್ರೆಸ್ಸಿಂಗ್ ಸೆನ್ಸ್, ವೈಯುಕ್ತಿಕ ಶಿಸ್ತು, ಎಲ್ಲವೂ ಥೇಟ್ ಏರ್ ಫೋರ್ಸ್ ನದ್ದೆ. ಬಾಂಗ್ಲಾ, ಚೀನಾ, ಪಾಕಿಸ್ತಾನ್ ಮೂರು ಯುದ್ಧಗಳಲ್ಲಿ ಪಾಲ್ಗೊಂಡಿರುವ ನನ್ನ ಮಾವ ರಾಮಚಂದ್ರ ಅನಗೋಳಕರ ಇಂದಿಗೂ ಶಿಸ್ತಿನ ಸಿಪಾಯಿ.

ಆದರೆ ವಯೋ ಸಹಜವಾಗಿ ಇದ್ದಕ್ಕಿದ್ದಂತೆ ಕುಳಿತಲ್ಲೇ ನಿದ್ದೆ ಬಂದುಬಿಡುವುದು, ಈಗ ಹೇಳಿರುವ ವಿಷಯವನ್ನು ಮತ್ತೊಂದು ಕ್ಷಣವೇ ಮರೆತುಬಿಡುವುದು, ದೈಹಿಕ ದುರ್ಬಲತೆ ಮುಂತಾದವುಗಳೂ ಹೆಚ್ಚಾಗುತ್ತಿವೆ. ಅಂತಹವರಿಗೆ ತೊಂದರೆ ಕೊಡುವುದು ನನಗೆ ಮನಸ್ಸಿಲ್ಲದಿದ್ದರೂ ನನ್ನ ಬಳಿ ಯಾವುದೇ ಆಯ್ಕೆ ಇರಲಿಲ್ಲ. ಹೀಗಾಗಿ ರಾತ್ರಿ-ಹಗಲೆನ್ನದೆ ಮಾವ ನನ್ನ ಜೊತೆಗಿದ್ದರು. ಮೆಡಿಕಲ್ ಟ್ರೇಡ್ ನಲ್ಲಿದ್ದುದರಿಂದ ಸಲೈನ್ ಹಚ್ಚುವುದು, ಸಮಯಕ್ಕೆ ಸರಿಯಾಗಿ ಮಾತ್ರೆ ಕೊಡುವುದು, ನನಗೆ ಧೈರ್ಯ ತುಂಬುವುದು ಎಲ್ಲವನ್ನೂ ತುಂಬ ಶ್ರದ್ಧೆಯಿಂದ ಮಾಡಿದರು. ತೀರ ಕಫ ಕಟ್ಟಿ ಖೋರ್…ಖೋರ್ ಎಂದು ಗಟ್ಟಿಯಾಗಿ ಕಫ ಹೊರತೆಗೆದಾಗ ಸಡನ್ ಆಗಿ ನನ್ನ ಮುಂದೆ ಪ್ಯಾನ್ ಹಿಡಿದು ಉಗುಳಲು ಸಹಾಯ ಮಾಡಿದರು. ಅವರ ಕಾಳಜಿ ನನ್ನ ಹೃದಯವನ್ನು ಮುಟ್ಟಿತ್ತು.

ಇಲ್ಲೀತನಕ ಕೇವಲ ಅಳಿಯ-ಮಾವ ಸಂಬಂಧವಿದ್ದ ನಾವು, ನನ್ನ ಸಿಸ್ಟೋಸ್ಕೋಪಿ ಕಾರಣದಿಂದಾಗಿ ಈ ಶಬ್ದಗಳ ಸಂಬಂಧಕ್ಕಿಂತ ಹೆಚ್ಚಿನ ಸಂಬಂಧವನ್ನೇನೋ ಪಡೆದಿದ್ದೇವೆ ಎನಿಸುತ್ತಿದೆ.

(ನಾಳೆ – ಅಲ್ಲೆರಡು ಜೀವಗಳಿದ್ದವು. ದೂರದಿಂದಲೇ ಕೊರಗ್ಗುತ್ತಿದ್ದವು)