ನೊಣವೇ…..ಐ ಆಮ್ ಸಾರಿ…..

ನಾವು ಚಿಕ್ಕಂದಿನಲ್ಲಿರಬೇಕಾದರೆ ಹಲವು ವಿಚಿತ್ರ ಕೆಲಸಗಳನ್ನು ಮಾಡುತ್ತೇವೆ. ಅವುಗಳಿಗೆ ಸೈಕಾಟ್ರಿಸ್ಟಗಳು ವಿವಿಧ ಕಾಯಿಲೆಗಳ ಕಾರಣ ಕೊಡುತ್ತಾರೆ ಎಂಬುದು ಬೇರೆ ವಿಚಾರ. ಆದರೆ ಎಲ್ಲರೂ ಒಂದಿಲ್ಲ ಒಂದು ಬಾರಿ, ಈ ರೀತಿಯ ಕೆಲಸಗಳನ್ನು ಮಾಡಿರುತ್ತಾರೆ. ಪಾತರಗಿತ್ತಿಯ ರೆಕ್ಕೆಗಳನ್ನು ಕತ್ತರಿಸುವುದು, ‘ಹೆಲಿಕಾಪ್ಟರ್’ ಎಂದು ಮಕ್ಕಳು ಕರೆಯುವ ಹೆಲಿಕಾಪ್ಟರ್ ನಂತೆ ಕಾಣುವ ಕೀಟವನ್ನು ಹಿಡಿದು ಅದಕ್ಕೆ ದಾರ ಕಟ್ಟಿ ಎಳೆಯುವುದು ಇತ್ಯಾದಿ ಈ ಕೆಟೆಗರಿಯಲ್ಲಿ ಬರುತ್ತವೆ.

ನಾನಾಗ ಎಂಟನೇ ಕ್ಲಾಸಿನಲ್ಲಿದ್ದೆ. ವಿದ್ಯುತ್ ಬಗ್ಗೆ ಆಗಷ್ಟೇ ಪಾಠಗಳು ಆರಂಭವಾಗಿದ್ದವು. ತೀರ ಸಣ್ಣವನಿದ್ದಾಗ ಒಮ್ಮೆ ಶಾಕ್ ಹೊಡೆಸಿಕೊಂಡಿದ್ದು ಬಿಟ್ಟರೆ, ವಿದ್ಯುತ್ ತೀವ್ರತೆ ಅಷ್ಟೊಂದು ಅರ್ಥವಾಗಿರಲಿಲ್ಲ. ಹೀಗಾಗಿ ಆ ವಿದ್ಯುತ್ ಬಗ್ಗೆ ತೀವ್ರವಾದ ಆಸಕ್ತಿ ಹುಟ್ಟಿಕೊಂಡುಬಿಟ್ಟಿತ್ತು. ಇಂತಿಪ್ಪ ಸಂದರ್ಭದಲ್ಲಿ, ಆಗಷ್ಟೇ ನೊಣಗಳನ್ನು ಕೈಯಲ್ಲಿ ಛಕ್ ಎಂದು ಹಿಡಿಯುವ ಅನಗತ್ಯ, ಬೇಡವಾದ ಕಲೆಯನ್ನು ಸಿದ್ಧಿಸಿಕೊಂಡಿದ್ದೆ.

ಆಗ ಹೊಳೆದ ಐಡಿಯಾನೇ ನೊಣಕ್ಕೆ ಶಾಕ್ ಹೊಡೆಸಿ ಕೊಲ್ಲುವುದು.

ನಾನು ಮಾಡುತ್ತಿದ್ದುದ್ದು ಇಷ್ಟೆ. ಮೊದಲು ನೊಣವನ್ನು ಹಿಡಿಯುತ್ತಿದ್ದೆ. ನಂತರ ಅದನ್ನು ಎರಡೂ ಬೆರಳುಗಳಲ್ಲಿ ಹಿಡಿದು ಸಾಕೆಟ್ ನೊಳಗೆ ತೂರಿಸುತ್ತಿದ್ದೆ. ಸ್ವಿಚ್ ಆನ್ ಮಾಡುತ್ತಿದ್ದೆ. ಕ್ಷಣಾರ್ಧದಲ್ಲಿ ಅದರ ಪ್ರಾಣನೊಣ ಹಾರಿಹೋಗುತ್ತಿತ್ತು. ಇಟ್ ವಾಸ್ ಆಸ್ ಸಿಂಪಲ್ ಆಸ್ ದಾಟ್. ಇಷ್ಟರಲ್ಲಿ ಒಂದು ಅಚಾತುರ್ಯ ನಡೆದು ಹೋಯಿತು. ಉಳಿದ ನೊಣಗಳು ನಾನು ಹೀಗೆ ಮಾಡುವುದನ್ನು ನೋಡಿ ಬಿಟ್ಟವು. ಈ ಬಾರಿ ನಾನು ನೊಣವನ್ನು ಸಾಕೆಟ್ ನಲ್ಲಿ ತೂರಿಸಿ, ಇನ್ನೇನು ಸ್ವಿಚ್ ಅದುಮಬೇಕು ಅನ್ನುವಷ್ಟರಲ್ಲಿ ತೂತಿನೊಳಗಿನಿಂದ ಹೊರಬಂದು ಹಾರಿಹೋಗತೊಡಗಿದವು.

ನಾನು ಸೋಲೊಪ್ಪಿಕೊಳ್ಳುವ ಮಾತೇ ಇರಲಿಲ್ಲ. ಯಕಶ್ಚಿತ್ ನೊಣದ ಎದುರಿಗೆ ಸೋಲುವುದುಂಟೆ? ಸಾಧ್ಯವಿಲ್ಲ, ಸಾಧ್ಯವಿಲ್ಲ. ಅದಕ್ಕೆ ಉಪಾಯ ಮಾಡಿದೆ. ನೊಣವನ್ನು ಸಾಕೆಟ್ ನಲ್ಲಿ ತೂರಿಸಿ, ಅದು ಹೊರ ಬರುವಾಗ ಬೆಂಕಿಕಡ್ಡಿಯಿಂದ ಒಳಗೇ ಒತ್ತಿ ಹಿಡಿಯುತ್ತಿದ್ದೆ. ಆಮೇಲೆ ಸ್ವಿಚ್ ಅದುಮಿದರೆ ನೊಣ ಸತ್ತುಹೋಗುತ್ತಿತ್ತು. ಹೀಗೆ ಸಾಗಿತ್ತು ನನ್ನ ಆಟ. ಆಮೇಲೆ ಏನೋ ಆಗಿ ಆ ಬೆಂಕಿಕಡ್ಡಿ ಮುರಿದು ಹೋಗಿಬಿಟ್ಟಿತು.

ಆಗ ನಾನು ಮತ್ತೊಂದು ಬೆಂಕಿಕಡ್ಡಿ ತೆಗೆದುಕೊಳ್ಳಲು ಅಡಿಗೆ ಮನೆಗೆ ಹೋದೆ. ಬೆಂಕಿಪೊಟ್ಟಣ ಖಾಲಿಯಾಗಿತ್ತು. ಹೀಗಾಗಿ ಮತ್ತೆ ರೂಮಿಗೆ ಬಂದು ಗುಂಡುಸೂಜಿಯೊಂದನ್ನು ತೆಗೆದುಕೊಂಡೆ. ನೊಣ ಹಿಡಿದೆ. ಸಾಕೆಟ್ ನೊಳಗೆ ತೂರಿಸಿದೆ. ಅದು ಹೊರಬರಲು ನೋಡಿತು. ಗುಂಡುಸೂಜಿಯಿಂದ ಒಳಗೆ ಒತ್ತಿ ಹಿಡಿದೆ. ಸ್ವಿಚ್ ಅದುಮಿದೆ. ಅಷ್ಟೇ….ಭಡ್…..ಎಂದು ಹೊಡೆಯಿತು ನೋಡಿ ಶಾಕ್. ನಾನೆಲ್ಲೊ, ನೊಣವೆಲ್ಲೋ, ಗುಂಡುಸೂಜಿಯೆಲ್ಲೋ……..ಒಂದು ಕ್ಷಣ ಏನಾಯಿತೆಂದು ಗೊತ್ತಾಗಲಿಲ್ಲ. ಕೈಗೆ ಸರಿಯಾಗಿ ಶಾಕ್ ಹೊಡೆದಿತ್ತು. ನಾನು ಮಾಡಿದ ಪಾಪಕ್ಕೆ ಸರಿಯಾಗಿ ಪ್ರಾಯಶ್ಚಿತ್ತವಾಗಿತ್ತು. ವಿದ್ಯುತ್ ಅವಾಹಕವಾದ ಬೆಂಕಿಕಡ್ಡಿಯ ಮುಖಾಂತರ ವಿದ್ಯುತ್ ಹರಿದಿರಲಿಲ್ಲ. ಆದರೆ ಕಬ್ಬಿಣದ ಗುಂಡುಸೂಜಿಯಿಂದ ವಿದ್ಯುತ್ ಸಡನ್ ಆಗಿ ಹರಿದಿತ್ತು.

ಇಂದಿಗೂ ಅಂತಹ ಆಟ ಆಡಿದ್ದಕ್ಕೆ ನನಗೆ ಖೇದವಿದೆ. ಆದರೆ ಹುಡುಗ ಮನಸ್ಸಿಗೆ ಅದ್ಯಾವುದೂ ಗೊತ್ತಾಗುತ್ತಿರಲಿಲ್ಲ. ದೇವರು ಮಾತ್ರ ಸರಿಯಾಗಿ ಶಿಕ್ಷೆ ನೀಡಿದ್ದ. ಇಂದು ಮಾತ್ರ ನಾನು ಭಾರೀ ಪ್ರಾಣಿಪ್ರಿಯನಾಗಿದ್ದೇನೆ. ನಾನು ಮನೆಯಿಂದ ಹೊರಬಿದ್ದ ತಕ್ಷಣ ಬೀದಿನಾಯಿಗಳು ಬಂದು ಬಾಲವಲ್ಲಾಡಿಸುತ್ತ ನಿಲ್ಲುತ್ತವೆ. ಯಾರ ಬಳಿಯೂ ಹೋಗದ ಇತರರ ಮನೆಯ ಬೆಕ್ಕುಗಳು ನನ್ನ ತೊಡೆಯ ಮೇಲೆ ಬಂದು ಕೂರುತ್ತವೆ. ನಾನು ಇಂದಿಗೂ ಕೂಡ ಸೊಳ್ಳೆಯನ್ನು ಅನಿವಾರ್ಯವಾಗಿಲ್ಲವಾದರೆ ಹೊಡೆಯುವುದಿಲ್ಲ. ಹಾಗೇ…..ನೊಣಕ್ಕೆ ಒಂದೇ ಮಾತು ಹೇಳುತ್ತೇನೆ…..

ನೊಣವೇ…ಐ ಆಮ್ ಸಾರಿ……