‘ಸುಧಾ’ದ ಪ್ರತಿಸ್ಪಂದನದಲ್ಲಿ ಮುಕ್ತ ಮುಕ್ತದ ನಿವೇದಿತಾ…

ಜಯಶ್ರೀ ರಾಜ್ ‘ಮುಕ್ತ ಮುಕ್ತ’ ದಲ್ಲಿ ನನ್ನ ಸಹನಟಿ. ಕಳೆದ 12 ವರ್ಷಗಳಿಂದ ನಟಿಸುತ್ತಿರುವ ಜಯಶ್ರೀ ಸೆಟ್ ನಲ್ಲಿ ನನಗೆ ನಟನೆಯ ಟಿಪ್ಸ್ ಗಳನ್ನೂ ಕೊಡುತ್ತಿರುತ್ತಾರೆ. ಈ ಬಾರಿಯ ಸುಧಾದ ಪ್ರತಿಸ್ಪಂದನದಲ್ಲಿ ಅವರ ಸಂದರ್ಶನ ಮೂಡಿ ಬಂದಿದೆ.

ವೋಟ್ ಮಾಡಿ, ಮಾನ ಕಾಪಾಡಿಕೊಳ್ಳಿ…

ಅಂತೂ ಇಂತೂ ಬಿಬಿಎಂಪಿ ಚುನಾವಣೆಯ ಭಾಗ್ಯ ಬಂದಿದೆ. ನಮ್ಮ ಮತದ ಸಲುವಾಗಿ ರಾಜಕೀಯ ಪಾರ್ಟಿಗಳ ಕಾರ್ಯಕರ್ತರು ಹೊಡೆದಾಡಿಕೊಂಡಿದ್ದಾರೆ, ತಲೆ ಒಡೆದುಕೊಂಡಿದ್ದಾರೆ, ದುಡ್ಡು ಹಂಚಿದ್ದಾರೆ, ಸೆರೆ ಕುಡಿಸಿದ್ದಾರೆ, ಬಿಸಿಲಲ್ಲಿ ಗಂಟಲು ಹರಿದಕೊಂಡು ಓಡಾಡಿದ್ದಾರೆ, ಗ್ರಂಥಾಲಯಕ್ಕೆ ಬೆಂಕಿ ಹಚ್ಚಿದ್ದಾರೆ ಏನೆನೆಲ್ಲ ಮಾಡಿದ್ದಾರೆ. ಇವರ ಇಷ್ಟು ಸೇವೆಗೆ ನಾವು ಕನಿಷ್ಟ ಸೌಜನ್ಯ ತೋರಿಸಬೇಕಾಗಿರುವುದು ಅತ್ಯತ್ಯತ್ಯತ್ಯಗತ್ಯ. ಹೀಗಾಗಿ ಇಂದು ದಯವಿಟ್ಟು ವೋಟ್ ಮಾಡಿ. ನಿಮ್ಮ ಅಮೂಲ್ಯ ಮತ ಚಲಾಯಿಸಿ. ಪ್ರಜಾಪ್ರಭುತ್ವ ರಕ್ಷಿಸಿ. ಬೆಂಗಳೂರಿನ ಸೋಫಿಸ್ಟೇಕೆಟೆಡ್ ಜನ ಮನೆ ಹೊರಗೆ ಬಂದು ವೋಟ್ ಮಾಡುವುದೇ ಇಲ್ಲ ಎಂಬ ಶೇಮ್ ಶೇಮ್ ಆರೋಪವನ್ನು ಸುಳ್ಳು ಮಾಡಿ. ವೋಟ್ ಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಇಲ್ಲಿದೆ.

ವೋಟರ್ಸ್ ಲಿಸ್ಟ್ ….

ಮಿತಿಯಿಲ್ಲ, ಕೊನೆಯಿಲ್ಲ, ಗಡಿಯಿಲ್ಲ ಈ ಹಾರಾಟಕ್ಕೆ

ಸೂತ್ರ-ಧಾರ

ಮಿತಿಯಿಲ್ಲ, ಕೊನೆಯಿಲ್ಲ, ಗಡಿಯಿಲ್ಲ ಈ ಹಾರಾಟಕ್ಕೆ

ಬದುಕಿನಂತೆ.

ಸುತ್ತಲೂ ಹೆಣೆದ ಸೂತ್ರಗಳು ಕರೆದುಕೊಂಡು ಹೊರಟಿವೆ ಎಲ್ಲಿಗೋ

ಗಾಳಿ ಬಂದೊಡೆ ಸೂತ್ರವ ಜಗ್ಗು, ಬಯಸಿದೆಡೆ ಹಾರು, ಜೀಕು

ಬದುಕಿನ ಕಷ್ಟಗಳನ್ನು ಎದುರಿಸುವಂತೆ.

ಯಾವ ಸೂತ್ರ ನಿನ್ನ ಕೈಯಲ್ಲಿ, ಯಾವುದು ಅವನ ಕೈಯಲ್ಲಿ

ಅರಿವಿದೆಯೆ ನಿನಗೆ?

ಗಡಿಯಿಲ್ಲ, ಮಿತಿಯಿಲ್ಲ ಎಂದು ಖುಷಿಪಡಬೇಡ

ನಿನ್ನ ಸೂತ್ರದ ನಿಯಂತ್ರಕ ಬೇರೊಬ್ಬನಿದ್ದಾನೆ.

ಅವನು ಇಲ್ಲಿ ಅದೃಶ್ಯ.

ಕಣ್ಣಿಗೆ ಕಾಣುತ್ತಿರುವುದು ಕೇವಲ ಸೂತ್ರಗಳು, ಮನುಷ್ಯರು, ಬದುಕು.

ಇವೆಲ್ಲವ ಮೀರಿದ ಸೂತ್ರ-ಧಾರ, ನಿನ್ನಂತರಗದೊಳಿದ್ದಾನೆ.

ಭುವಿಗೆ ಬಂದು

ಹುಡುಕಿಕೊ.

ಯಾರು ಹೇಳಿದ್ದು ಕಲಾವಿದರನ್ನು ಎಲ್ಲರೂ ಗುರುತಿಸುತ್ತಾರೆ ಎಂದು?

ಮುಕ್ತ ಮುಕ್ತದಲ್ಲಿ ಆಕ್ಟ್ ಮಾಡಲು ಶುರುಮಾಡಿದಾಗಿನಿಂದ ಎಲ್ಲರೂ ನನ್ನನ್ನು ಗುರುತಿಸುತ್ತಾರೆ ಎಂದು ಹಲವು ಬಾರಿ ನಾನೇ ಹೇಳಿಕೊಂಡಿದ್ದೇನೆ. ಆ ಘಟನೆಗಳನ್ನು ಬರೆದಿದ್ದೇನೆ. ಅದರ ಉಲ್ಟಾ ಘಟನೆಯೊಂದು ಹೀಗಿದೆ.

ಸಿಸ್ಟೋಸ್ಕೋಪಿ ಆದ ಬಳಿಕ ಸ್ಟೆಂಟ್ ರಿಮೂವಲ್ ಇತ್ತು. ಹಾಗಾಗೆ ಮತ್ತೆ ಗಿರಿನಗರದ ರಾಧಾಕೃಷ್ಣನ ಮೊರೆ ಹೋಗಿದ್ದೆ. ಅಲ್ಲಿ ಸ್ಟೆಂಟ್ ರಿಮೂವಲ್ ಗೂ ಮೊದಲು ಎಕ್ಸ್ ರೇ ತೆಗೆಯಲು ಸೂಚಿಸಿದರು. ಸರಿ ಎಂದು ನಾನು ಎಕ್ಸ್ ರೇ ರೂಂನತ್ತ ಹೆಜ್ಜೆ ಹಾಕಿದೆ. ಅಲ್ಲಿ ಅದಾಗಲೇ ನಾಲ್ಕೆಂಟು ಜನ ಎಕ್ಸ್ ರೇ ಗಾಗಿ ಕಾಯುತ್ತಿದ್ದರು. ಲ್ಯಾಬ್ ಅಸಿಸ್ಟೆಂಟ್ ಮಾತ್ರ ಬಂದಿರಲಿಲ್ಲ.

ಒಂದೈದು ನಿಮಿಷ ಬಿಟ್ಟು ಬಂದ ಆತ ಸರದಿ ಪ್ರಕಾರ ಎಕ್ಸ್ ರೇ ತೆಗೆಯಲು ಶುರುಮಾಡಿದ. ನನ್ನ ಸರದಿ ಬರಲು ಇನ್ನೂ ಹತ್ತು ನಿಮಿಷವಿತ್ತಾದ್ದರಿಂದ ಸುಮ್ಮನೇ ಏಕೆ ಕೂರುವುದು ಎಂದು ನನ್ನ ಬ್ಯಾಗ್ ತೆಗೆದೆ. ಮೂರ್ನಾಲ್ಕು ಚೆಕ್ ಗಳನ್ನು ಕಲೆಕ್ಷನ್ ಗೆ ಹಾಕಬೇಕಿತ್ತು. ಪೇ ಇನ್ ಸ್ಲಿಪ್ ಗಳನ್ನು ಮೊದಲೇ ತಂದಿದ್ದೆ. ಹೀಗಾಗಿ ಸ್ಲಿಪ್ ಗಳನ್ನು ತುಂಬುತ್ತ, ಪಿನ್ ಮಾಡತೊಡಗಿದೆ. ಲ್ಯಾಬ್ ಅಸಿಸ್ಟೆಂಟ್ ಸರದಿ ಸಾಲಿನಲ್ಲಿ ಇರುವವರನ್ನು ಕರೆಯಲು ಹೊರ ಬಂದಾಗಲೆಲ್ಲ ನನ್ನನ್ನು ನೋಡುತ್ತಿದ್ದ. ಕೊನೆಗೆ ನನ್ನ ಸರದಿಯೂ ಬಂತು.

ಎಕ್ಸ್ ರೇ ಟೇಬಲ್ ಮೇಲೆ ಮಲಗಿದೆ.

“ಕೆಯುಬಿ ಎಕ್ಸ್ ರೇ ಅಲ್ವಾ? ಯಾವಾಗಾ ಸಿಸ್ಟೋಸ್ಕೋಪಿ ಆಗಿದ್ದು?” ಎಂಬಿತ್ಯಾದಿ ವಿಷಯಗಳನ್ನು ಮಾತನಾಡುತ್ತ ಕೊನೆಗೆ ಆತ ಕೇಳಿದ

“ನೀವು ಕೊರಿಯರ್ ಆಫೀಸ್ ನಲ್ಲಿ ಕೆಲಸ ಮಾಡುತ್ತೀರಾ?”

ಈಗ ಹೇಳಿ ಕಲಾವಿದರ ಪಾಪ್ಯುಲಾರಿಟಿ ಎಷ್ಟಿದೆ ಎಂದು……….

ಮಹಿಂದ್ರಾ ಬೋಲೆರೋ ಜೀಪಿನಲ್ಲಿ

ಮಳೆಗಾಲದ ದಿನಗಳಲ್ಲಿ

ಬಾಳೆಹೊನ್ನೂರಿನ ದಾರಿಯಲ್ಲಿ

ಮಹಿಂದ್ರಾ ಬೋಲೆರೋ ಜೀಪಿನಲ್ಲಿ

ಸ್ಟೇರಿಂಗ್ ಮುಂದೆ ಒಬ್ಬನೇ ಕುಳಿತು

ಎಲ್ಲ ಗ್ಲಾಸ್ ಗಳನ್ನು ಏರಿಸಿಕೊಂಡು

ಹಬೆಯೇರಿದ ಗಾಜುಗಳ ಮೇಲೆ

ಪ್ರೇಯಸಿಯ ಹೆಸರಿನ ಮೊದಲ ಅಲ್ಭಾಬೆಟ್ ಬರೆಯುತ್ತ

ಬಡ್ವೈಸರ್ ಬಿಯರ್ ಹೀರುತ್ತ

ಡೆಕ್ ನಲ್ಲಿ ‘ದೀವಾರೋಂಸೆ ಮಿಲ್ಕರ್ ರೋನಾ ಅಚ್ಛಾ ಲಗತಾ ಹೈ’

ಹಾಡು ಕೇಳುತ್ತ

ಹೃದಯಕ್ಕಾದ ಗಾಯವನ್ನು ಸವರುತ್ತ

ನೂರಿಪ್ಪತ್ತು ಕಿಲೋಮೀಟರ್ ಸ್ಪೀಡಿನಲ್ಲಿ

ಸಾಗಿ

ಕಣ್ಣುಗಳಿಂದ ಹನಿಗಳನ್ನು ಬೀಳಿಸುವಾಸೆ….

ಈ ಬಸ್ ಏನು ನಿಮ್ ಅಪ್ಪಂದ?

ಮಿರಿಮಿರಿಮಿರಿ ಮಿಂಚುವ ಕೆಂಪುಬಣ್ಣದ ಬಿಎಂಟಿಸಿ ವೋಲ್ವೋ ಬಸ್ ಅದು. “ಆಜಾ ಸನಮ್ ಮಧುರ ಚಾಂದನಿ ಮೇ ಹಂ ತುಂ ಮಿಲೇ ಹೆ ಜಿಯಾ” ಹಾಡು ಎಫ್ ಎಂ ನಿಂದ ಮೂಡಿ ಬಂದು ಇಡೀ ಎಸಿ ಬಸ್ ನ ವಾತಾವರಣವನ್ನು ಮತ್ತಷ್ಟು ಆಹ್ಲಾದಕರವನ್ನಾಗಿಸಿದೆ. ಭಯಂಕರ ಎತ್ತರದ ಕಟ್ಟಡಗಳಲ್ಲಿ ಕೆಲಸ ಮಾಡುವ ಐಟಿ-ಬಿಟಿ-ಘಾಟಿ ಮಂದಿ ಬೆಳಿಗ್ಗೆಬೆಳಿಗ್ಗೆಯೇ ಹ್ಯಾಪು ಮೋರೆ ಹಾಕಿಕೊಂಡಿದ್ದರೂ, ಬಸ್ ನ ವಾತಾವರಣ ಹಾಗೂ ಹಾಡು ಅವರಲ್ಲಿ ಅದೇನೋ ಚೈತನ್ಯ ಮೂಡಿಸಿದೆ.

ಆದರೆ….

ಅಷ್ಟರಲ್ಲಿ ಮಾಸಿದ ಬಿಳಿ ಅಂಗಿ, ಮಣ್ಣು ಮೆತ್ತಿದ ಬಿಳಿ ಪಂಚೆ ಧರಿಸಿದ, ಕೈಯಲ್ಲಿ ಕೋಲು ಹಿಡಿದುಕೊಂಡಿರುವ ಮುದುಕನೊಬ್ಬ ಯಾವುದೋ ಮಾಯದಲ್ಲಿ ಈ ವೋಲ್ವೋ ಬಸ್ ಹತ್ತಿಬಿಟ್ಟಿದ್ದಾನೆ. ಒಳಗಿದ್ದ ಜನ ಇದನ್ನು ವಾರೆಗಣ್ಣಿನಲ್ಲೇ ಗಮನಿಸಿದ್ದಾರೆ. ವೋಲ್ವೋ ಬಸ್ ಚಾರ್ಜ್ ಕೊಡುವಷ್ಟು ಹಣ ಈತನ ಬಳಿ ಇದ್ದಿರಬಹುದೆ ಎಂದು ನೋಡಿದವರಿಗೆ ಪ್ರಶ್ನೆ ಬಿದ್ದಿದೆ. ಆದರೆ ಅಲ್ಲಲ್ಲಿ ಆಧಾರ ಹಿಡಿದುಕೊಂಡು ಮುದುಕ ಕೊನೆಗೂ ಬಾಗಿಲೆದುರಿನ ಸೀಟ್ ಮೇಲೆ ಕುಳಿತಿದ್ದಾನೆ. ಕಂಡಕ್ಟರ್ ಅಲ್ಲಿಗೆ ಬರುವುದಕ್ಕೂ, ಮುದುಕ ತನ್ನ ಪಂಚೆಯನ್ನು ಎತ್ತಿ ಅಂಡರವೇರ್ ನ ಕಿಸೆಯಲ್ಲಿಟ್ಟದ ಪಾಸ್ ತೆಗೆಯುವುದಕ್ಕೂ ಸರಿ ಹೋಗಿದೆ. ಪಾಸ್ ನೋಡಿದ ಕಂಡಕ್ಟರ್ ಬೇಸರಿಸಿ, “ಈ ಪಾಸ್ ನಡ್ಯಲ್ಲ ಅಜ್ಜ ಈ ಬಸ್ ಗೆ. ಮುಂದಿನ ಸ್ಟಾಪ್ ಗೆ ಇಳಿದು ಬಿಡು” ಎಂದಿದ್ದಾನೆ. ಸರಿ ಎಂದು ಮುದುಕ ಕುಳಿತಿದ್ದಾನೆ. ಆದರೆ ಮುಂಬೈ ಲೋಕಲ್ ಟ್ರೇನ್ ಗಳಂತೆ ಮುಂದಿನ, ಅದರ ಮುಂದಿನ ಸ್ಟಾಪ್ ನಲ್ಲಿ ಬಸ್ ಕೇವಲ ಹದಿನೈದು ಸೆಕೆಂಡ್ ಮಾತ್ರ ನಿಂತಿದೆ. ಹೀಗಾಗಿ ಮುದುಕಪ್ಪನಿಗೆ ಇಳಿಯಲಾಗಿಲ್ಲ. ವಾಪಸ್ ಬಂದ ಕಂಡಕ್ಟರ್ ಮುದುಕನ ಮೇಲೆ ರೇಗಿದ್ದಾನೆ. “ಒಂದು ಸಾರಿ ಹೇಳಿದ್ರೆ ಮರ್ಯಾದೆಯಾಗಿ ತಿಳಕೋಬೇಕು. ಇಳಿ ಅಂತ ಹೇಳಿರಲಿಲ್ವಾ…ನಮ್ಮ ಕೆಲಸ ತಗಸ್ತೀರಾ” ಅಂದು ಬೈದಿದ್ದಾನೆ. ಅದಕ್ಕೆ ಉತ್ತರ ಕೊಡಲು ಹೋದ ಅಜ್ಜನ ಕೈಹಿಡಿದು ಬಸ್ಸನ್ನು ಮಧ್ಯದಲ್ಲಿಯೇ ನಿಲ್ಲಿಸಿ ನಿರ್ದಾಕ್ಷಿಣ್ಯವಾಗಿ ಕೆಳಗೆ ಇಳಿಸಿದ್ದಾನೆ. ಮುಂದಿನ ಸ್ಟಾಪ್ ನಲ್ಲಿ ಖಂಡಿತ ಇಳಿಯುವುದಾಗಿ ಅಜ್ಜಪ್ಪ ರಿಕ್ವೆಸ್ಟ್ ಮಾಡಿಕೊಂಡರೂ ಕಂಡಕ್ಟರ್ ಕೇಳಿಲ್ಲ.

ಅಲ್ಲಿದ್ದ ಜನರಿಗೆ ಇದು ನೋಡಿ ಬೇಜಾರಾಗಿದೆ. ಒಬ್ಬ ಹೇಳಿದ್ದಾನೆ. “ರ್ರೀ…ಇಷ್ಟು ದೂರ ಬಂದಿದ್ದಾರೆ. ಮುಂದಿನ ಸ್ಟಾಪ್ ನಲ್ಲಿ ಇಳಿಸಬಾರ್ದಾಗಿತ್ತಾ..ಬೇಕಾದ್ರೆ ನಾನೇ ಟಿಕೆಟ್ ತಗಸ್ತಾ ಇದ್ದೆ. ಯಾಕೆ ರಸ್ತೆ ಮಧ್ಯಾನೇ ಇಳಿಸೋದಕ್ಕೆ ಹೋದ್ರಿ?”

ಕಂಡಕ್ಟರ್ ಹೇಳಿದ್ದಾನೆ “ನೀವು ಒಳ್ಳೇವ್ರು ಸಾರ್ ಅದಕ್ಕೇ ಹೀಗೆ ಹೇಳ್ತಾ ಇದ್ದೀರಿ. ಆದ್ರೆ ಚೆಕಿಂಗ್ ಗೆ ಬರುವವರು ನಿಮ್ಮ ತರಹ ಇರ್ತಾರೆ ಅನ್ಕೊಂಡ್ರಾ…? ನಾನು ಒಂದು ಸಾರಿ ಹೀಗೆ ಜನಸೇವೆ ಮಾಡಲು ಹೋದಾಗ, ‘ಈ ಬಸ್ಸೇನು ನಿಮ್ಮ ಅಪ್ಪಂದ ಬ್ಯಾವರ್ಸಿಗಳನ್ನೆಲ್ಲ ಕರೆದುಕೊಂಡು ಹೋಗಾದಿಕ್ಕೆ?’ ಅಂತ ಬೈಸಿಕೊಂಡಿದ್ದೇನೆ. ಹೀಗಾಗಿ…..”

ಹೀಗೆ ಕಟ್ಟಡ ಹತ್ತಲು ಮೀಟರ್ ಬೇಕು…

ಅಲೇನ್ ರಾಬರ್ಟ್, ಫ್ರಾನ್ಸ್ ನ ಸಾಹಸಿ. ಎತ್ತರದ ಕಟ್ಟಡಗಳನ್ನು ಹತ್ತುವುದು ಆತನ ಹುಚ್ಚುತನ. ಅಬುದಾಭಿಯ ಅತೀ ಎತ್ತರದ ಕಟ್ಟಡ (185 ಮೀಟರ್) ಅಬುದಾಭಿ ಇನ್ವೆಸ್ಟಮೆಂಟ್ ಅಥಾರಿಟಿ ಬಿಲ್ಡಿಂಗನ್ನು ಸಾವಿರಾರು ಜನರೆದುರು ಆತ ಹತ್ತಿದ. ಅದೂ ಕೇವಲ 20 ನಿಮಿಷದಲ್ಲಿ.

(ಕಳಿಸಿಕೊಟ್ಟದ್ದು  – ಶಶಿ ಜೋಯಿಸ್)

ಇಂತಹವರಿಗೆ ಮೈಕ್ ಹೀಗೆಯೇ ಹಿಡಿಯಬೇಕು…

ಕೆಲದಿನಗಳ ಹಿಂದೆ ಚಿತ್ರಕಲಾಪರಿಷತ್ ನಲ್ಲಿ ಸ್ವಿಟ್ಜರಲ್ಯಾಂಡ್ ನ ದಂಪತಿಗಳು ಮರಗಾಲು ಕಟ್ಟಿಕೊಂಡು ವಿಶಿಷ್ಟ ನೃತ್ಯಪ್ರದರ್ಶನ ನೀಡಿದರು. ಪ್ರದರ್ಶನ ಮುಗಿದ ಬಳಿಕ ಟಿವಿ ಪತ್ರಕರ್ತರು ಅವರನ್ನು ಬೈಟ್ ಗಾಗಿ ಸುತ್ತುವರಿದಾಗ ಆ ನೋಟ ಕಂಡದ್ದು ಹೀಗೆ….

ಶ್ರೀ ಆದಿಶಕ್ತಿ ಸ್ಥಂಬಾಂಬಿಕಾ ದೇವಿ ಹರಕೆಯ ಫಲಗಳು

(ಆದಿಚುಂಚನಗಿರಿ ಮಹಾಸಂಸ್ಥಾನದ ದೇವಸ್ಥಾನದಲ್ಲಿ ಕ್ಲಿಕ್ಕಿಸಿದ್ದು….)

ತರಂಗ ಯುಗಾದಿ ವಿಶೇಷಾಂಕದಲ್ಲಿ ಎರಡೂಕಾಲು ಅಡಿ

ಆತ್ಮೀಯರೆ,

ಈ ಬಾರಿಯ ತರಂಗ ಯುಗಾದಿ ವಿಶೇಷಾಂಕದಲ್ಲಿ ನನ್ನ ಪ್ರಪ್ರಥಮ ಕಥೆ ಎರಡೂಕಾಲು ಅಡಿ ಪ್ರಕಟವಾಗಿದೆ. ದಯವಿಟ್ಟು ಓದಿ. ಅಭಿಪ್ರಾಯ ತಿಳಿಸಿ.


ಕೋಲಾರದ ಹಾದಿಯಲ್ಲಿ ಕಂಡ ಕಲ್ಲುಗಳು….

ಈ ಬಾರಿ ಮುಕ್ತ ಮುಕ್ತ ಸಂವಾದಕ್ಕೆಂದು ಕೆಜಿಎಫ್ ಗೆ ಹೋಗುತ್ತಿದ್ದಾಗ ಕಣ್ಣಿಗೆ ಬಿದ್ದ ಬಂಡೆಕಲ್ಲುಗಳು, ಏನೇನೋ ಮಾತಾಡಿದವು……

ಈ ಬಾರಿಯ ಮುಕ್ತ ಮುಕ್ತ ಸಂವಾದ ಕೆಜಿಎಫ್ ನಲ್ಲಿ….

ಆತ್ಮೀಯರೆ,

ಈ ಬಾರಿಯ ‘ಮುಕ್ತ ಮುಕ್ತ ಸಂವಾದ’ ವನ್ನು ಮಾರ್ಚ್ 13, ಶನಿವಾರ ಮಧ್ಯಾಹ್ನ ಮೂರುಗಂಟೆಗೆ ಕೆಜಿಎಫ್ ನಲ್ಲಿ ಆಯೋಜಿಸಲಾಗಿದೆ. ಸಂವಾದ ನಡೆಯುವ ಸ್ಥಳ

ಬಿಇಎಂಎಲ್ ಕಲಾಕ್ಷೇತ್ರ, ಬೆಮೆಲ್ ನಗರ, ಕೆಜಿಎಫ್ .

ಪ್ರವೇಶ ಉಚಿತ.

ತಮಗೆ ಪ್ರೀತಿಯ ಆಮಂತ್ರಣ…..

ಸುಘೋಷ್ ಎಸ್ ನಿಗಳೆ

(ದೇವಾನಂದಸ್ವಾಮಿ)

ಡಾ. ಡಿ. ಎಂ. ಸಾಗರ್ ಕೇಳುತ್ತಾರೆ….

ಅಂದರೆ, ತಾವು ವಿವೇಕ್ ಇಂದ ಐಶ್ವರ್ಯ ರೈ ಗೆ ಆದ “ಅನ್ಯಾಯ”(taken for granted attitude)  ವನ್ನು ಪ್ರಚುರಪಡಿಸುವ, ಹಾಗೂ ನ್ಯಾಯ ಒದಗಿಸುವ ಕಾರ್ಯ-ಭಾರವನ್ನು ತಾವೇ ಅರೂಪಿಸಿಕೊಂದಿದ್ದಿರಿ – ಅಲ್ಲವೇ?. ನೀವು ಬರೆದಾಗಿದೆ, ಅದನ್ನು ವಿರೋಧಿಸಿ ಪ್ರಜ್ಞಾವಂತ ಓದುಗರು ಪ್ರತಿಕ್ರಿಯಿಸಿದ್ದಾರೆ. ಏಕೆಂದರೆ, ಮೀಡಿಯಾ ಹೀಗೆ ಒಂದು ವಿಷಯವನ್ನು ತಮ್ಮ ದೃಷ್ಟಿ-ಕೋನಕ್ಕೆ ಹಿಗ್ಗಿಸಿ ಅಥವಾ ಕುಗ್ಗಿಸಿ ಕಾಣಿಸಬಲ್ಲದು- ಎನ್ನುವ ಅರಿವು ಜನ-ಸಾಮಾನ್ಯರಿಗೆ ಆಗಿದೆ. ಆದ್ದರಿಂದಲೇ ಅವರು ಒಂದು ಮಟ್ಟಿನ ಸಂಶಯ ದಿಂದ ಬರೆದದ್ದನ್ನು ಸ್ವೀಕರಿಸುತ್ತಾರೆ/ತಿರಸ್ಕರಿಸುತ್ತಾರೆ. ಬರೆದಾಗಿದೆ ಎಂದು ಸಮರ್ಥಿಸಿಕೊಂದಿದ್ದಿರ. ಕೇವಲ ತಾರ್ಕಿಕ ನೆಲೆಯಲ್ಲೇ ವಿಷಯವನ್ನು ಗಮನಿಸುವುದಾದರೆ ನಿಮ್ಮ ಸಮರ್ಥನೆಯನ್ನು ಒಪ್ಪಬಹುದು!.
ಇನ್ನು E-TV ಗೆ ಬೇರೆ ಎಲ್ಲ ಚಾನೆಲ್ ಗಳಿಗಿಂತಾ ಹೆಚ್ಚು ಎಥಿಕ್ಸ್ ಇದೆ ಎಂದು ಮತ್ತೊಂದು ಸಮರ್ಥನೆ!- ಇದು BJP ಕಾಂಗ್ರೆಸ್ ಗಿಂತ ಉತ್ತಮ ಎಂದ ಹಾಗಿದೆ.
ಒಟ್ಟಿನಲ್ಲಿ, ಓದುಗರು ಪ್ರಜ್ನಾವನ್ತರಾಗಿದ್ದಾರೆ, ಹಾಗು ತಾವು ಬರೆದದ್ದನ್ನೆಲ್ಲಾ ಒಪ್ಪಿಕೊಳ್ಳುವ ಕಾಲ ಹೊಇತು ಎನ್ನುವುದು ಸಮಾಧಾನದ ವಿಷಯ!.
ಎಂದಿನಂತೆ ನನ್ನ ಪ್ರತಿಕ್ರಿಯೆ ಕಟ್ಹುವಾಗಿದೆ, I am sure you have a delete button on your comp!.

-D.M.Sagar

ಅನಿಮಿಷ ಅವರ ಇನ್ಸ್ಟಾಲೇಷನ್ಸ್ ಫೋಟೋಗಳು…

ಇಕಾನಾಮಿಕ್ ಟೈಮ್ಸ್ ನಲ್ಲಿ ಇಲ್ಲಸ್ಟ್ರೇಟರ್ ಆಗಿರುವ ಅನಿಮಿಷ ನಾಗನೂರ್, ಇತ್ತೀಚೆಗೆ ಸಮೂಹ ಆರ್ಟ್ ಗ್ಯಾಲರಿಯಲ್ಲಿ ತಮ್ಮ ‘ವಿ ಮೇಡ್ ಇಟ್’ ಪ್ರದರ್ಶನವನ್ನು ಹಮ್ಮಿಕೊಂಡಿದ್ದರು. ಅದರ ಮೂರು ಫೋಟೋಗಳು ಇಲ್ಲಿವೆ.

ಅಯ್ಯೋ….ಇದೇನ್ ಚರ್ಚೆ ಮಾಡೋ ವಿಷ್ಯಾನಾ?

ಹಾಗೆಂದು ಕೆಲವು ಅಭಿಪ್ರಾಯಗಳು ಬಂದಿವೆ. ಚರ್ಚಿಸಲು ಬೇರೆ ಬೇರೆ ಬೇರೆ ಬೇರೆ ವಿಷಯಗಳಿರಬೇಕಾದರೆ ಈ ವಿಷಯದ ಮೇಲೇಕೆ ಚರ್ಚೆ ಎಂದು. ಜೊತೆಗೆ, ನಾನು ಈ ವಿಷಯ ಬಿಟ್ಟು ಹೊಸ ಲೇಖನ ಪೋಸ್ಟ್ ಮಾಡುವಂತೆ ಪ್ರೀತಿಯ ಬೆದರಿಕೆಗಳೂ ಬಂದಿವೆ. ಯಾವುದಕ್ಕೂ ಇನ್ನೂ ಸ್ವಲ್ಪ ಟೈಮ್ ಕೊಡಿ…..ಇಂತಜಾರ್ ಮೇಂ ಜೋ ಮಝಾ ಹೈ, ವೋ ಕಾಮಿಯಾಂಬಿ ಮೇಂ ಕಹಾಂ…..ವಿವೇಕ್-ಐಶ್ ಪ್ರಕರಣ ಲೇಖನ ಮತ್ತಷ್ಟು ಚರ್ಚೆಯಾಗಲಿ. ಇದರ ಹಿಂದೆ ಸೂಕ್ತವಾದ, ಬಲವಾದ, ಪತ್ರಿಕೋದ್ಮಮಕ್ಕೆ ಸಂಬಂಧಿಸಿದ ಕಾರಣವಿದೆ ಎಂಬುದು ಮಾತ್ರ ಸತ್ಯ….ಝರಾ ಜಲ್ದೀ ಜಲ್ದೀ ದೋಸ್ತೋಂ….

ಟೀನಾ ಹೇಳುತ್ತಾರೆ…..

ವಿವೇಕ್-ಐಶ್ವರ್ಯ ರೈ ಲೇಖನಕ್ಕೆ ಸಂಬಂಧಿಸಿದಂತೆ ಚರ್ಚೆ ಆರಂಭವಾಗಿದೆ. ನೀವೂ ಕೂಡ ಚರ್ಚೆಯಲ್ಲಿ ಪಾಲ್ಗೊಳ್ಳಿ. ನಿಮ್ಮ ಅನಿಸಿಕೆ ವಿಷಯಕ್ಕೆ ಸೀಮಿತವಾಗಿರಲಿ. ಅನಿಸಿಕೆಗೆ ಕಾರಣ ಒದಗಿಸಿ. ಸ್ವೀಪಿಂಗ್ ಸ್ಟೇಟ್ ಮೆಂಟ್ ಗಳು, ಅಬ್ಯುಸಿವ್ ಭಾಷೆ ಬೇಡ. ಉತ್ತಮ ಪ್ರತಿಕ್ರಿಯೆ ಹೇಗಿರಬೇಕು ಎಂಬುದಕ್ಕೆ ಟೀನಾ ಅವರ ಪ್ರತಿಕ್ರಿಯೆ ಇಲ್ಲಿದೆ.

ಟೀನಾ ಹೇಳುತ್ತಾರೆ….

ಸುಘೋಶ್,
ನಿಮ್ಮ ದೀಘವಾದ ಸಮರ್ಥನೆಯನ್ನು ಓದಿದೆ. ಬಹುಶಃ ನಿಮ್ಮ ಹಿಂದಿನ ಬರಹದಲ್ಲಿ ನಿಮ್ಮ ಪ್ರಶ್ನೆಯ ಹಿಂದಿನ ಇತಿಹಾಸದ ಬಗ್ಗೆ ಇದ್ದ ಮಾಹಿತಿಯ Ambiguity ತಪ್ಪು ಅರ್ಥೈಸುವಿಕೆಗೆ ಕಾರಣವಾಯಿತು. ಅದನ್ನೇ ನಾನು ನಿಮ್ಮ ಬ್ಲಾಗಿನಲ್ಲಿಯ ಕಮೆಂಟಿನಲ್ಲಿ ಕೂಡ ಹೇಳಿದೇನೆ. ಮೊದಲೇ ಸರಿಯಾಗಿ ವಿವರಿಸಿ ಬರೆದಿದ್ದರೆ ಕಮೆಂಟುಗಳು ಬೇರೆ ರೀತಿಯವಾಗಿರುತ್ತಿದ್ದವು ಅಂತ ಕಾಣುತ್ತದೆ.

ಹಿಂದೆ ವಿವೇಕ್ ಒಬೆರಾಯ್ ’ಐಶ್ವರ್ಯಾಳನ್ನ ಮದುವೆಯಾಗ್ತೀನಿ’ ಅಂತ ಘಂಟಾಘೋಷವಾಗಿ ಹೇಳಿದ. ಆ ಬಗ್ಗೆ ನಂತರ ಐಶ್ವರ್ಯಾಳನ್ನು ಕೇಳಿದರೆ ಆಕೆ ಮಾಧ್ಯಮಕ್ಕೆ ಉತ್ತರಿಸಲಿಲ್ಲ. ಇದು ಕಣ್ಣಿಗೆ ಕಂಡಿರುವುದು. ಇನ್ನು ಐಶ್ವರ್ಯಾ ರೈ ದೃಷ್ಟಿಯಿಂದ ನೋಡುವುದರ ಬಗ್ಗೆ ಮಾತಾಡುವಾ. ನನ್ನ ಪ್ರಕಾರ ಆಕೆಯ ಪರ್ಸನಾಲಿಟಿಯನ್ನು ಹೊಂದಿರುವ ಒಂದು ವ್ಯಕ್ತಿಯನ್ನು ಕೀಳಾಗಿ ಕಂಡು ಅವಮಾನಿಸಬೇಕೆಂದರೆ ಅಷ್ಟೇನೂ ಸುಲಭವಲ್ಲ. It is your choice to let people respect you or do the opposite. ಆಕೆ ಸಲ್ಮಾನನ ಜತೆ ಅಬ್ಯೂಸಿವ್ ಸಂಬಂಧ ಹೊಂದಿದ್ದಳು, ಎಂದರೆ ಶಿ ಟೂ ಲೆಟ್ ಹಿಮ್ ಡೂ ಸಚ್ ಥಿಂಗ್ಸ್ ಟು ಹರ್ ಎಂದೂ ಅರ್ಥವಾಗುತ್ತದೆ. ಇದನ್ನು ಆಕೆಯೂ ಒಪ್ಪಿಕೊಂಡಿದ್ದಾಳೆ. I, a common woman, never let an abusive person take advantage of me. You always have a choice not to let such things happen to you. Vivek just became a dumb bakra in this game. There are speculations galore as to who took advantage of whom. And you should know better about the ‘other’ realities of Hindi movie industry. So, you taking sides seems a little far-fetched.

I am glad you felt that you should stop Vivek from blurting such things. But I honestly feel he has had enough number of people who ‘wanted to teach him lessons’ way before your question was posed. I would be equally glad if you are able to face Salman Khan with such questions.

ಇನ್ನು ನೀವು ವಿವೇಕ್ ಒಬೆರಾಯ್‌ಗೆ ಕೇಳಿದ ಪ್ರಶ್ನೆಯನ್ನು ‘ಪ್ರೆಸೆನ್ಸ್ ಆಫ್ ಮೈಂಡ್’ ಎನ್ನುವುದಕ್ಕಿಂತ ’ಜಾಬ್ ರೆಸ್ಪಾನ್ಸಿಬಿಲಿಟಿ’ ಎನ್ನಬಹುದು ಅಂತ ನನ್ನ ಭಾವನೆ. ನಿಮ್ಮ ಕೆಲಸವನ್ನು ಚೆನ್ನಾಗಿಯೇ ಮಾಡಿದ್ದೀರಿ ಅಂತ ನಿಮ್ಮ ಚ್ಯಾನೆಲ್‌ಗೆ ಅನ್ನಿಸಿತಲ್ಲ, ಅದು ಈ ಭಾವನೆಗೆ ಕಾರಣ. ಮತ್ತು ಇದು ಒನ್ಸ್ ಅಗೇನ್, ನನ್ನ ಭಾವನೆ ಮಾತ್ರ.

ಶುಭಾಶಯಗಳು.

ಐಶ್ವರ್ಯ ರೈ – ವಿವೇಕ್ ಲೇಖನಕ್ಕೆ ಸುಘೋಷ್ ಪಾಯಿಂಟ್ ಆಫ್ ವ್ಯೂ….

ಆತ್ಮೀಯರೆ,

ಟೆಂಪರೇಚರ್ ಸಕತ್ ಏರಿಬಿಟ್ಟಿದೆ! ಸಿಕ್ಕಾಪಟ್ಟೆ ಸೆಕೆ! ಬೇಸಿಗೆ ಎಂಬುದು ಬೆಂಗಳೂರಿಗೂ, ನನ್ನ ಬ್ಲಾಗಿಗೂ ಒಂದೇ ಸಮಯಕ್ಕೆ ದಾಳಿಯಿಟ್ಟಂತೆ ತೋರುತ್ತಿದೆ. ಬೆಂಗಳೂರಿನಲ್ಲಿ ಬೇಸಿಗೆ ತನ್ನದೇ ಧಾಂಗುಡಿಯಿಡುತ್ತಿದ್ದರೆ, ನನ್ನ ಬ್ಲಾಗ್ ನಲ್ಲಿ ಕೂಡ ನನ್ನ ತಲೆ ಮೊಟುಕಲು, ನನಗೆ ಗುಡ್ ಬೈ ಹೇಳುವಷ್ಟರ ಮಟ್ಟಿಗೆ ಟೆಂಪರೇಚರ್ ಏರಿಬಿಟ್ಟಿದೆ. ಆದರೆ……….

“ವಸಂತಕಾಲ ಬಂದಾಗ ಮಾವು ಚಿಗುರಲೇ ಬೇಕು…..ಕೋಗಿಲೆ ಹಾಡಲೇ ಬೇಕು…..”

ಯುಗಾದಿ ಬರುತ್ತಿದ್ದು, ವಸಂತಕಾಲ ಬಂದು ಮಾವಲ್ಲಿ ಹೂವು ಮೂಡಿದರೆ ಸಾಕೆ? ನನ್ನ ಬ್ಲಾಗಲ್ಲಿ ಸಿಹಿ ಚಿಗುರಬೇಡವೆ?

ನಾನು ಬ್ಲಾಗ್ ಆರಂಭಿಸಿದಾಗಿನಿಂದ ಅತೀ ಹೆಚ್ಚು ಕಮೆಂಟ್ ಗಳು ಬಂದಿದ್ದು ಐಶ್ವರ್ಯಾ-ವಿವೇಕ್ ಲೇಖನಕ್ಕೆ. (ಅದನ್ನು ವಿರೋಧಿಸಿ L) ಆದರೆ ನನಗೆ ತೃಪ್ತಿ ಕೊಟ್ಟ ವಿಚಾರವೆಂದರೆ ನನ್ನ ಲೇಖನವನ್ನು ವಿರೋಧಿಸಿದವರು ವಿಷಯಕ್ಕೆ ಸೀಮಿತವಾಗಿ ಅದನ್ನು ಆಕ್ಷೇಪಿಸಿ, ಅದಕ್ಕೆ ಕಾರಣಗಳನ್ನು ಕೊಟ್ಟಿರುವುದು. ವಿರೋಧಿಸುವ ಭರದಲ್ಲಿ ವೈಯುಕ್ತಿಕ ನಿಂದನೆಗಿಳಿದು, ಕೆಟ್ಟ ಶಬ್ದಗಳನ್ನು ಬಳಸಿ, ಇಡೀ ಬ್ಲಾಗ್ ಲೋಕವನ್ನೇ ಹೊಲಸು ಹಿಡಿಸಿ, ಇದರಿಂದ ಬೇಸತ್ತು ಹಲವರು ತಮ್ಮ ಬ್ಲಾಗ್ ಅನ್ನು ಶಾಶ್ವತವಾಗಿ ಡಿಲೀಟ್ ಮಾಡಿ ಬ್ಲಾಗ್ ಲೋಕಕ್ಕೆ ವಿದಾಯ ಹೇಳಿರುವ ಘಟನೆಗಳು ನಮ್ಮೆದುರಿಗಿರುವಾಗ, ನನ್ನ ಬ್ಲಾಗ್ ನಲ್ಲಿ ಈ ರೀತಿಯ ಸಂವಾದ ನಡೆದಿರುವುದು ನನಗೆ ತೃಪ್ತಿ ತಂದಿದೆ.

ಈ ನನ್ನ ಅಭಿಪ್ರಾಯದ (ವಾದವಲ್ಲ) ಉದ್ದೇಶವನ್ನು ಮೊದಲೇ ಹೇಳಿಬಿಡುತ್ತೇನೆ. ಇದನ್ನು ಬರೆದು, “ನಾನು ಮಾಡಿದ್ದೇ ಸರಿ. ನೀವು ಹೇಳುತ್ತಿರುವುದು ಹಂಡ್ರೆಡ್ ಪರ್ಸೆಂಟ್ ತಪ್ಪು, ನನ್ನ ಅಭಿಪ್ರಾಯವನ್ನು ನೀವು ಒಪ್ಪಿಕೊಳ್ಳಲೇಬೇಕು, ಹೌ ಡೇರ್ ಯೂ ಡಿಫರ್ ಮೈ ಓಪಿನಿಯನ್?” ಎಂದು ಹೇಳುವುದು ಖಂಡಿತ ಅಲ್ಲ. ಬದಲಾಗಿ ಅಂದು ನಾನು ಈಟಿವಿ ಪತ್ರಕರ್ತನಾಗಿದ್ದಾಗಿನ ಪರಸ್ಥಿತಿ, ಈಟಿವಿಯ ಸುವರ್ಣಕಾಲದಲ್ಲಿದ್ದ ವಾತಾವರಣ, ಪತ್ರಕರ್ತನಾಗಿ ನನ್ನ ಪಾಯಿಂಟ್ ಆಫ್ ವ್ಯೂ ಅನ್ನು ನಿಮ್ಮೆದುರಿಗೆ ಪ್ರಸ್ತುತಪಡಿಸುವುದಷ್ಟೇ ಆಗಿದೆ. ಮತ್ತೆ ಸ್ಪಷ್ಟಪಡಿಸುತ್ತೇನೆ. ಇದು ನನ್ನ ಪಾಯಿಂಟ್ ಆಫ್ ವ್ಯೂ.

ನನ್ನ ಪಾಯಿಂಟ್ ಆಫ್ ವ್ಯೂ ನಿಮ್ಮದೂ ಆಗಿರಬೇಕು ಎಂಬ ನಿಯಮವೇನಿಲ್ಲ ಎಂಬುದು ನಿಮಗೂ ಗೊತ್ತಿದೆ. ಮತ್ತೆ ಹಾಗೆ ಇಬ್ಬರೂ ಒಂದೇ ಪಾಯಿಂಟ್ ಆಪ್ ವ್ಯೂನವರಾಗಿ ಬಿಟ್ಟರೆ ಬಂಗಾರದ ಶೂಲಕ್ಕೆ ಏರಬೇಕಾದೀತು. (ಹೊಗಳಿ ಹೊಗಳಿ ಎನ್ನ ಹೊನ್ನಶೂಲಕ್ಕೇರಿಸುವರಯ್ಯಾ…) ಈಗ ವಿಷಯಕ್ಕೆ ಬರೋಣ.

ನನ್ನ ಪಾಯಿಂಟ್ ಆಫ್ ವ್ಯೂ ಅನ್ನು ಹೇಳುವ ಮೊದಲು ನಿಮಗೊಂದು ಚಿಕ್ಕಕತೆ ಹೇಳುತ್ತೇನೆ. ನಮ್ಮೂರಲ್ಲಿ ಅಂದಕಾಲತ್ತಿಲ್ ನಡೆದದ್ದು. ಊರಿಗೆ ನಾಟಕ ಕಂಪನಿ ಬಂದಿತ್ತು. ಒಂದು ಪೌರಾಣಿಕ ಹಾಗೂ ಎರಡು ಸಾಮಾಜಿಕ ನಾಟಕಗಳನ್ನು ಅದು ಪ್ರದರ್ಶಿಸುತ್ತಿತ್ತು. ಕಂಪನಿ ಬಂದ ಎರಡು ವಾರಗಳ ಕಾಲ ಪ್ರದರ್ಶನ ಚೆನ್ನಾಗಿಯೇ ನಡೆಯಿತು. ಆದರೆ ಮುಂದಿನ ವಾರದಿಂದ ಪೌರಾಣಿಕ ನಾಟಕಕ್ಕೆ ಜನರೇ ಬರುತ್ತಿಲ್ಲ. ಸಾಮಾಜಿಕ ನಾಟಕಗಳು ಮಾತ್ರ ಎಂದಿನಂತೆ ಫುಲ್ ಹೌಸ್. ಮಾಲೀಕ ತುಂಬ ತಲೆಕೆಡಿಸಿಕೊಂಡ. ಎಷ್ಟು ಯೋಚಿಸಿದರೂ ಇದರ ಕಾರಣ ಹೊಳೆಯಲಿಲ್ಲ. ನಂತರ ಗೊತ್ತಾಗಿದ್ದೇನೆಂದರೆ ಹನುಮಂತನ ಪಾರ್ಟ್ ಮಾಡುವ ಪಾತ್ರಧಾರಿ, ನಾಟಕದಲ್ಲಿ ತನ್ನ ಎಕ್ಸಿಟ್ ಆದಮೇಲೆ ಸೈಡ್ ವಿಂಗ್ ನಲ್ಲಿ ಬಂದು ಬೀಡಿ ಸೇದುತ್ತಿದ್ದನಂತೆ. ಅದೇ ಹನುಮಂತನ ಕಾಸ್ಟ್ಯೂಮ್ ನಲ್ಲಿ! ಗಾಳಿ ಬಂದರೆ ಹಾರಿಹೋಗುವ ಸೈಡ್ ವಿಂಗ್ ಅವು. ಜನರಿಗೆ ಸ್ಟೇಜ್ ಮೇಲಿನ ನಾಟಕಕ್ಕಿಂತ ಸೈಡ್ ವಿಂಗ್ ನಲ್ಲಿ ಹನುಮಂತ ಬೀಡಿ ಸೇದುತ್ತಿದ್ದುದು ನೀಟಾಗಿ ಕಾಣಿಸಿದೆ. ಹನುಮಂತ ಬೀಡಿ ಸೇದುವ ವಿಷಯ ಊರೆಲ್ಲ ಗೊತ್ತಾಗಿದೆ. ಅಷ್ಟೇ…ಬೀಡಿ ಸೇದುವ ಹನುಮಂತನ ಕಾರಣದಿಂದಾಗಿ ಪೌರಾಣಿಕ ನಾಟಕದ ಶೋವನ್ನೇ ಕೊನೆಗೆ ನಿಲ್ಲಿಸಲಾಯಿತು.

ಈಗ ನನ್ನ ನನ್ನ ಪಾಯಿಂಟ್ ಆಫ್ ವ್ಯೂ ಹೇಳುವಂತಹವನಾಗುತ್ತೇನೆ. ಆಲಿಸಿಕೊಳ್ಳುವಂತಹವರಾಗಿ.

ಯಾವುದೇ ವ್ಯಕ್ತಿ ಒಮ್ಮೆ ಸಾರ್ವಜನಿಕ ಬದುಕಿಗೆ ಬಂದನೆಂದರೆ ಅಟ್ ಲೀಸ್ಟ್ ಭಾರತದಲ್ಲಿ (ಅದು ಸರಿಯೋ ತಪ್ಪೋ ಬೇರೆ ವಿಚಾರ) ಆತನಿಂದ ಜನ ಖಾಸಗಿ ಬದುಕಿನಲ್ಲಿಯೂ ಅದೇ ರೀತಿಯ ಗುಣಗಳನ್ನು ಅಪೇಕ್ಷಿಸುತ್ತಾರೆ. ಆತ ಹಾಗಿರದಿದ್ದರೂ ಪರವಾಗಿಲ್ಲ ಆದರೆ ‘ಬೀಡಿ ಹನುಮಂತ’ನಾಗಬಾರದೆಂದು ಅಪೇಕ್ಷೆ ಪಡುವುದು ಸಹಜ ಹಾಗೂ ಸರಿ ಕೂಡ. ಸೈಫ್ ಅಲಿ ಖಾನ್, ಪಂಡಿತ್ ಜವಾಹರ ಲಾಲ್ ನೆಹರು, ಯಡಿಯೂರಪ್ಪ, ರೇಣುಕಾಚಾರ್ಯ, ಬಿಲ್ ಕ್ಲಿಂಟನ್, ಜೆ ಎಚ್ ಪಟೇಲ್, ಟೈಗರ್ ವುಡ್ಸ್, ಕುಮಾರಸ್ವಾಮಿ, ಪರಮಹಂಸ ನಿತ್ಯಾನಂದ, ಶೈನಿ ಆಹುಜಾ, ಎನ್ ಡಿ ತಿವಾರಿ, ಹೀಗೆ ಹಲವು ವ್ಯಕ್ತಿಗಳಲ್ಲಿ ನಾವು ಮೆಚ್ಚಿಕೊಳ್ಳುವಂತಹ ಗುಣ ಎಷ್ಟೇ ಇದ್ದರೂ ಅವರ ‘ಆ’ ದೌರ್ಬಲ್ಯಗಳು, ದೋಷಗಳು, ಸಾರ್ವಜನಿಕ ಬದುಕಿನಲ್ಲಿ ಮಾಡಿದ ತಪ್ಪುಗಳು, ಆ ತಪ್ಪುಗಳನ್ನು ನಿರ್ಲಜ್ಜೆಯಿಂದ ಸಮರ್ಥಿಸಿಕೊಂಡು ರೀತಿಗಳು (ಬಿಲ್ ಕ್ಲಿಂಟನ್ ಹಾಗೂ ಟೈಗರ್ ವುಡ್ಸ್ ಹೊರತುಪಡಿಸಿ) ಗಂಟಲ ಮುಳ್ಳಾಗುತ್ತವೆ. ಈ ವ್ಯಕ್ತಿಗಳು ನಾಲ್ಕು ಗೋಡೆಯ ಮಧ್ಯೆ ಏನನ್ನೇ ಮಾಡಿಕೊಳ್ಳಲಿ ಅದು ಅವರ ಖಾಸಗಿ, ವೈಯುಕ್ತಿಕ ಬದುಕಿಗೆ ಬಿಟ್ಟ ವಿಚಾರ. ಅದನ್ನು ಪ್ರಶ್ನಿಸಲು ಹೋಗಬಾರದು. ಆದರೆ ಈ ರೀತಿಯ ಅವಘಡಗಳನ್ನು ಸಾರ್ವಜನಿಕ ಬದುಕಿನಲ್ಲಿ ಮಾಡಿಕೊಳ್ಳುವುದಿದೆಯಲ್ಲ, ಅದು ಆ ವ್ಯಕ್ತಿಯದ್ದಷ್ಟೇ ಅಲ್ಲ, ಆತ ಸಂಬಂಧಪಟ್ಟಿರುವ ಕ್ಷೇತ್ರದ ಮಾನ ಕೂಡ ಕಳೆಯುತ್ತದೆ. ರಾಜಕೀಯ ಹದಗೆಟ್ಟು ಹೋಗಿದೆ, ಚಿತ್ರರಂಗದಲ್ಲಿ ನಟಿ ನಿರ್ಮಾಪಕನ ಜೊತೆ ಜೊತೆ ಮಲಗಬೇಕಂತೆ, ಸಾಹಿತಿಗಳು ಬರೀ ಕುಡುಕರಂತೆ ಇತ್ಯಾದಿ ಮಾತುಗಳು ಹುಟ್ಟುತ್ತವೆ. ಕಾರಣ, ಅವರು ತಮ್ಮ ದೌರ್ಬಲ್ಯಗಳನ್ನು ನಾಲ್ಕು ಗೋಡೆಗೆ ಸೀಮಿತವಾಗಿಡದೆ ಬಹಿರಂಗವಾಗಿ ಮಾಡುತ್ತಾರೆ ಹಾಗೂ ಹಾಗೆ ಮಾಡಿರುವುದನ್ನು ನಿರ್ಲಜ್ಜತೆಯಿಂದ ಸಮರ್ಥಿಸಿಕೊಂಡಿರುತ್ತಾರೆ.

ಇನ್ನು ವಿವೇಕ್ ಓಬೆರಾಯ್ ಪ್ರಕರಣ.

ವಿವೇಕ್, ಐಶ್ವರ್ಯಳನ್ನು ಮದುವೆಯಾಗಲಿ ಅಥವಾ ಗ್ರಾಮೀಣ ಹುಡುಗಿಯನ್ನು ಮದುವೆಯಾಗಲಿ, ಪ್ರೀತಿಸಲಿ. ಇಟ್ಸ್ ಪರ್ಫೆಕ್ಟ್ ಲೀ ಫೈನ್. ನೋ ಪ್ರಾಬ್ಲಂ ಎಟ್ ಆಲ್. ಆದರೆ ತಾನು ಇಂತಿತಹ ಹುಡುಗಿಯನ್ನು ಮದುವೆಯಾಗುತ್ತಿದ್ದೇನೆ ಎಂದು ನೂರು ಕೋಟಿ ಭಾರತೀಯರೆದರು, ಆಜ್ ತಕ್ ನಂತಹ ಚ್ಯಾನಲ್ ಸ್ಟುಡಿಯೋದಲ್ಲಿ, ಪ್ರಭು ಚಾವ್ಲಾರಂತಹ ಹಿರಿಯ ಪತ್ರಕರ್ತರ ಮುಂದೆ ಕುಳಿತು ಹೇಳಬೇಕಾದರೆ, ಆತ ಮದುವೆಯಾಗುತ್ತಿರುವ ಹುಡುಗಿಯನ್ನು ಈ ಬಗ್ಗೆ ಮೊದಲೇ ಕೇಳಿರಬೇಕಾಗಿರುವುದು ಮಿನಿಮಮ್ ಸೌಜನ್ಯ ಹಾಗೂ ಶಿಷ್ಟಾಚಾರ.

ಯಾರಾದರೂ ಐಶ್ವರ್ಯ ರೈ ದೃಷ್ಟಿಯಿಂದ ಯೋಚಿಸಿದ್ದೀರಾ? ಐಶ್ವರ್ಯ ರೈ ಗೆ ವಿವೇಕ್ ಮಾತನ್ನು ಹೀಗೆ ನೇರವಾಗಿ ಟಿವಿಯಲ್ಲಿ ಕೇಳಿ ಎಷ್ಟು ಆಘಾತವಾಗಿರಬಹುದು ಎಂದು. ಮೊದಲೇ ಸಲ್ಮಾನ್ ಖಾನ್ ನ ಕಾಟದಿಂದ ಬೇಸತ್ತಿದ್ದ ಆಕೆಗೆ ಈ ಹೊಸ ಬಾಂಬ್ ಎಷ್ಟು ಘಾಸಿ ಮಾಡಿರಬಹುದು ಎಂದು. ಹೋಗಲಿ ಐಶ್ವರ್ಯ ವಿವೇಕ್ ಗೆ ‘ನಿನ್ನನ್ನು ಪ್ರೀತಿಸುತ್ತಿದ್ದೇನೆ’ ಅಂತಲೇ ಹೇಳಿರಲಿ. ಅದನ್ನು ಅವಳ ಒಪ್ಪಿಗೆ ಪಡೆದ ನಂತರವಷ್ಟೇ ತಾನೆ ಆತ ಮೀಡಿಯಾಕ್ಕೆ ಹೇಳಬೇಕಾಗಿರುವುದು. ಆಗಷ್ಟೇ ಬಾಲಿವುಡ್ ನಲ್ಲಿ ಕಣ್ಣುಬಿಡುತ್ತಿರುವ ಹುಡುಗ, ಅದಾಗಲೇ ವಿಶ್ವಸುಂದರಿ ಪಟ್ಟಪಡೆದು ಖ್ಯಾತ ತಾರೆಯಾಗಿದ್ದವಳನ್ನು ಮದುವೆಯಾಗುತ್ತಿದ್ದಾನೆ ಎಂದು ಹೇಳುವುದು ಪಬ್ಲಿಸಿಟಿ ಸ್ಟಂಟ್ ಅಂತ ಅನ್ನಿಸುವುದಿಲ್ಲವೆ? ತಲೆಯಲ್ಲಿ ಬುದ್ಧಿ, ಹೃದಯಲ್ಲಿ ಸೌಜನ್ಯ, ಮನಸ್ಸಿನಲ್ಲಿ ಆ ಹುಡುಗಿಯ ಬಗ್ಗೆ ನಿಷ್ಕಲ್ಮಷ ಪ್ರೀತಿಯಿರುವ ಯಾವುದೇ ವ್ಯಕ್ತಿಯಾದರೂ ಹೀಗೆ ಮಾಡಲಾರ.

ಅದಾದ ಬಳಿಕ ಐಶ್ವರ್ಯ ರೈ ಳಿಂದ ಈ ಕುರಿತು ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಅಂದರೇನು ಅರ್ಥ? ವಿವೇಕ್ ಹೇಳಿದ್ದು ಶುದ್ಧ ಸುಳ್ಳು ಅಂತ ತಾನೆ? ಹೋಗಲಿ ಅದನ್ನು ತಮಾಷೆಗೆಂದೇ ಹೇಳಿರಬಹುದು. ಆದರೆ “ನಾನು ತಮಾಷೆಗೆ ಹೇಳಿದ್ದು ಇದರಿಂದ ಐಶ್ವರ್ಯಳಿಗೆ ನೋವಾಗಿದ್ದರೆ ಕ್ಷಮಿಸಲಿ” ಎಂದು ಹೇಳುವ ಸೌಜನ್ಯವನ್ನೂ ಆತ ತೋರಲಿಲ್ಲ. ಬದಲಾಗಿ ಪ್ರೆಸ್ ಕಾನ್ಫರೆನ್ಸ್ ಕರೆದವನೇ “ನನಗೆ ಸಲ್ಮಾನ್ ಪೋನ್ ಮಾಡಿ ಬೆದರಿಕೆ ಹಾಕುತ್ತಿದ್ದಾನೆ. ನನ್ನ ಜೊತೆ ಫೈಟ್ ಮಾಡುತ್ತೀನಿ ಅಂತ ಹೇಳುತ್ತಿದ್ದಾನೆ. ಅಪರಾತ್ರಿಯಲ್ಲಿ ಫೋನ್ ಮಾಡಿ ಕೆಟ್ಟ ಶಬ್ದಗಳಿಂದ ನಿಂದಿಸುತ್ತಾನೆ” ಅಂತ ಮೀಡಿಯಾದೆದರು ಗೋಳೋ ಎಂದ. ಗಮನಿಸಿ. ಆತನ ಖಾಸಗಿ ಬದುಕಿಗೆ ತೊಂದರೆ ಆದಾಗ ಮೀಡಿಯಾ ಬೇಕೆಂದ. ಆತ ಇಷ್ಟೆಲ್ಲ ಹೇಳಿದ್ದು ಪ್ರೆಸ್ ಕಾನ್ಫರೆನ್ಸ್ ಮಾಡಿ. ಪ್ಯಾಪಿರಾಝಿಗಳ ಮುಂದಲ್ಲ. ವಿವೇಕ್ ಗೆ ವೈಯುಕ್ತಿಕ ಬದುಕಿನಲ್ಲಿ ಸಂಕಷ್ಟ ಎದುರಾದರೆ ಮೀಡಿಯಾ ಬೇಕಾಗುತ್ತದೆ. ಆದರೆ ಅದೇ ಸುಘೋಷ್, “ಐಶ್ವರ್ಯಾ ಮದುವೆ ಅಟೆಂಡ್ ಮಾಡುತ್ತಿರಾ?” ಅಂತ ಕೇಳಿದಾಗ ಅಪ್ಪನ ಸಹಾಯ ಬೇಕಾಗುತ್ತದೆ. ವಿವೇಕ್ ಏನು ಲಾಲಿಪಾಪ್ ಚೀಪುವ, ತೊದಲು ಮಾತಾಡುವ ಮಗುವೆ? ಹೇಗಿದೆ ನೋಡಿ ವಿಚಿತ್ರ.

ವಿಶ್ವಸುಂದರಿ ಪಟ್ಟಪಡೆದಿರುವ, ಬಾಲಿವುಡ್ ನಲ್ಲಿ ಖ್ಯಾತ ತಾರೆಯಾಗಿರುವ ಹುಡುಗಿಯನ್ನು ಕೇಳದೆ ಹೀಗೆ ಹೇಳಿದ್ದು ನಿಮಗೆ ಸರಿಯೆನಿಸುತ್ತದೆಯೆ? ಇದಕ್ಕೆ ಮುರಿದು ಬಿದ್ದ ಪ್ರೀತಿ-ಮದುವೆ ಅಂತ ಕರೆಯಬೇಕೆ ಅಥವಾ ನಟನೊಬ್ಬನ ಚೀಪ್ ಗಿಮಿಕ್ ಎಂದು ಹೆಸರಿಸುಬಹುದೆ? ಹುಡುಗಿಯನ್ನು ಕೇಳದೆ ನೂರುಕೋಟಿಭಾರತೀಯರೆದರು ಹೀಗೆ ಹೇಳಿಕೆ ಕೊಟ್ಟು ಆಕೆಯ ಮನಸ್ಸಿಗೆ ನೋವುಂಟಮಾಡಿದವನಿಗೆ ಯಾವ ಗೋಮಾತೆ ತಾನೆ ಏನು ಆಶೀರ್ವದಿಸಿಯಾಳು?

ನಾನೇ ನಾಳೆಗೆ ಕಿರುತೆರೆ ನಟಿಯೊಬ್ಬಳ ಹೆಸರು ಹೇಳಿಕೊಂಡು ಅವಳ ಒಪ್ಪಿಗೆ ಪಡೆಯದೇ ಅವಳನ್ನು ಮದುವೆಯಾಗುತ್ತಿದ್ದೇನೆ ಎಂದು ಹೇಳಿಕೆಕೊಟ್ಟರೆ ನೀವು ನನ್ನ ಕತ್ತಿನಪಟ್ಟಿಗೆ ಕೈಹಾಕುವುದಿಲ್ಲವೆ?

ವಿವೇಕ್, ನೀವು ರೀಲ್ ಬದುಕಿನಲ್ಲಿ ವಿಲನ್ ನನ್ನು ಹೊಡೆದು ಹೊಡೆದು ಆತ ಐಶ್ವರ್ಯಳನ್ನು ರೇಪ್ ಮಾಡದಂತೆ ತಡೆಯುತ್ತೀರಿ. ಆದರೆ ರಿಯಲ್ ಲೈಫ್ ನಲ್ಲಿ ಮಾನಸಿಕ ರೇಪ್ ಅನ್ನು ಯಾವುದೇ ಎಗ್ಗಿಲ್ಲದೇ ಮಾಡುತ್ತೀರಿ. ನಾನು ಹಾಗೆ ಕೇಳಿದ್ದು ನಿಮಗೆ ಇಷ್ಟವಾಗಲಿಲ್ಲ ಅಂತಿಟ್ಟುಕೊಳ್ಳಿ. ಏನೂ ಮಾತಾಡದೇ ಸುಮ್ಮನೇ ಹೋಗಬಹುದಿತ್ತು. ಅಥವಾ ನೋ ಕಮೆಂಟ್ಸ್ ಅನ್ನಬಹುದಿತ್ತು. ಅದು ಬಿಟ್ಟು ‘ಐಸೇ ಫಾಲ್ತು ಸವಾಲ್ ಮತ್ ಪೂಛೋ’ ಅಂತ ಅಪ್ಪನಿಂದ ಸಲಹೆ ಕೊಡಿಸುವ ಅಧಿಕಾರ ನಿಮಗಾರು ಕೊಟ್ಟವರು ವಿವೇಕ್? ನಿಮ್ಮ ನಾಲಿಗೆ ಹಾಗೂ ಅಪ್ಪ ಇಬ್ಬರೂ ನಿಯಂತ್ರಣ ತಪ್ಪಿದವರಂತೆ ಆಡಿದ್ದು ಯಾಕೆ? ಯಾಕೆಂದರೆ ಸತ್ಯ ಯಾವಾಗಲೂ ಸಿಟ್ಟುತರಿಸುತ್ತದೆ. “ಇದ್ದದ್ ಇದ್ದಂಗ್ ಹೇಳಿದ್ರ ಎದ್ ಬಂದ್ ಎದಿಗ್ ವದ್ರಂತ” ಅಂತ ನಮ್ಮ ಕಡೆ ಮಾತಿದೆ. ಹಾಗಾಯಿತು ಸುರೇಶ್ ಕತೆ. “ದೇಖಿಯೇ ವೋ ಮಸಲಾ ಹಲ್ ಹೋ ಚುಕಾ ಹೈ. ಮೆರಾ ಬೇಟಾ ಉಸಕೇ ಬಾರೇ ಮೇ ಕುಛ ನಹೀ ಬೋಲನಾ ಚಹತಾ. ಉಸೆ ಅಕೇಲಾ ಛೋಡ್ ದೀಜಿಯೆ” ಅಂತ ಹೇಳಿದ್ದರೆ ನಾನೇನು ಹುಡುಕಿಕೊಂಡು ಹೋಗಿ ಮೈಕ್ ಹಿಡಿಯುತ್ತಿರಲ್ಲ.

ಇನ್ನು ನಾನು ಪ್ರಶ್ನೆ ಕೇಳದೆ ಸುಮ್ಮನಿರದಿದ್ದರೆ ಏನಾಗುತ್ತಿತ್ತು ಏನೂ ಆಗುತ್ತಿರಲಿಲ್ಲ. ವಿವೇಕ್ ಹಾಗೂ ಆತನ ಹಾಗೆ ಇರುವ ಇತರರು ನಾಳೆಗೆ ಕರೀನಾ, ಕತ್ರೀನಾ, ರುಕ್ಸಾನಾ, ಅರ್ಜಂಟೀನಾ ಅಂತ ಹೀಗೆ ಆಟವಾಡುತ್ತ ಹೋಗುತ್ತಿರಲಿಲ್ಲವೆ? ನಮ್ಮನ್ನು ಯಾರೋ ಒಬ್ಬರು ಪ್ರಶ್ನಿಸುವವರು ಇದ್ದಾರೆ ಎಂದು ಅರಿವಾದಾಗ ತಾನೆ ವಿ ಮೈಂಡ್ ಅವರ್ ವರ್ಡ್ಸ್. ಅದಕ್ಕೆ ತಾನೆ ಮೀಡಿಯಾದ ಹೆದರಿಕೆ ಅನ್ನುವುದು. ಮೀಡಿಯಾದ ಹೆದರಿಕೆ ಇಲ್ಲದಿದ್ದರೆ ಏನಾಗುತ್ತಿತ್ತು ಊಹಿಸಿ….

ಅಂದು ವಿವೇಕ್ ನನಗೆ ಎಲ್ಲೇ ಸಿಗುತ್ತಿದ್ದರೂ ನಾನು ಆ ಪ್ರಶ್ನೆ ಕೇಳುತ್ತಿದ್ದೆ. ಯಾವ ಸಮಾರಂಭವಿದೆಯೋ ಅದಕ್ಕೆ ಸಂಬಂಧಿಸಿದ ಪ್ರಶ್ನೆ ಮಾತ್ರ ಕೇಳಬೇಕು ಅಂತೇನಾದರೂ ರೂಲ್ ಬಂದರೆ ಟಿವಿ9, ಸುವರ್ಣದ ಪತ್ರಕರ್ತರು ಮೊದಲು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅದರರ್ಥ ಯಾರದೋ ಸಾವಿನ ಮನೆಗೆ ರೇಣಕಾಚಾರ್ಯ ಶ್ರದ್ಧಾಂಜಲಿ ಸಲ್ಲಿಸಲು ಬಂದಾಗ ಜಯಲಕ್ಷ್ಮಿಯ ವಿಚಾರ ಕೇಳಬೇಕು ಅಂತಲ್ಲ.

ಇನ್ನು ನಾನೇ ಪರಿಸ್ಥಿತಿಯಲ್ಲಿದ್ದರೆ ಏನು ಮಾಡುತ್ತಿದ್ದೆ ಎಂಬುದಕ್ಕೆ……ಮೊದಲು ಅಂತಹ ಪರಿಸ್ಥಿತಿಯನ್ನು ನಾನು ತಂದುಕೊಳ್ಳುತ್ತಿರಲಿಲ್ಲ. ತಂದುಕೊಂಡಿದ್ದರೂ ಕೂಡ ಕ್ಷಮೆ ಕೇಳಿ ಪ್ರಕರಣಕ್ಕೆ ಇತಿ ಶ್ರೀ ಹಾಡುತ್ತಿದ್ದೆ. ನನಗೆ ಹಳೆಯ ಗೆಳತಿಯಿದ್ದಾಳೆ ಅಂತ ಹೇಳಿದ್ದೇನೆಯೆ ಹೊರತು, ಆಕೆಯ ಹೆಸರು ಹೆಸರಿಸಿ ನಮ್ಮ ಪ್ರೀತಿಯ ಮರ್ಯಾದೆ ತೆಗೆದಿಲ್ಲ ತಾನೆ?

ಇನ್ನು ಇದು ಪ್ರೆಸೆನ್ಸ್ ಆಪ್ ಮೈಂಡೇ ಎಂಬ ಪ್ರಶ್ನೆ.

ವಿಧಾನಸೌಧದಲ್ಲಿ ಪ್ರತಿನಿತ್ಯ 12 ಗಂಟೆಗೆ ಹಾಗೂ ಸಂಜೆ ನಾಲ್ಕುವರೆ ಗಂಟೆಗೆ ಖ್ಯಾತ ಪತ್ರಕರ್ತರೆಲ್ಲರೂ ರೌಂಡ್ಸ್ ಗೆ ಹೋಗುತ್ತಾರೆ. ಅದು ಹಿಂದಿನಿಂದಲೂ ನಡೆದುಕೊಂಡ ಬಂದ ಪದ್ಧತಿ. ಮೂರನೇ ಮಹಡಿಯಿಂದ ಸುಮಾರು 25-30 ಪತ್ರಕರ್ತರು ಸಚಿವರನ್ನು, ಅಧಿಕಾರಿಗಳನ್ನು ಭೇಟಿಯಾಗಿ ಅವರವರ ಇಲಾಖೆಯಲ್ಲಿ ಏನು ನಡೆಯುತ್ತಿದೆ, ಏನು ಡೆವಲಪ್ಮೆಂಟ್ ಮುಂತಾದವುಗಳನ್ನು ಕೇಳುತ್ತಾರೆ. ಆಗ ಬರುವ ಪ್ರಶ್ನೆಗಳು ಯಾವುವು, ಅವನ್ನು ಹೇಗೆ ಕೇಳಲಾಗುತ್ತದೆ, ಕೆಲವು ಪ್ರಶ್ನೆಗಳು ಬರಬಾರದು ಎಂದು ಸಚಿವರ ರೂಂ ಪ್ರವೇಶಿಸುವಾಗ ಹೇಗೆ ಎನ್ವಲಪ್ ಗಳು ಪತ್ರಕರ್ತರ ಕೈಸೇರುತ್ತವೆ, ರಾಜ್ಯದಲ್ಲಿ ಎಷ್ಟು ಜಿಲ್ಲೆಗಳಿವೆ ಎಂದೂ ಗೊತ್ತಿರದ ಮೈಂಡ್ ಇಲ್ಲದ ಪತ್ರಕರ್ತ ಸಚಿವರ ಪ್ರೆಸೆನ್ಸ್ ನಲ್ಲಿ ಪ್ರೆಸೆಂಟ್ ಹೇಗೆ ತೆಗೆದುಕೊಳ್ಳುತ್ತಾನೆ ಎಂಬುದು ಗೊತ್ತಿರುವವರಿಗೆ ನನ್ನದು ಯಾಕೆ ಪ್ರೆಸೆನ್ಸ್ ಆಫ್ ಮೈಂಡ್ ಎಂಬುದು ನೀಟಾಗಿ ತಿಳಿಯುತ್ತದೆ. “ಈ ಕೇಸ್ ನಲ್ಲಿ ಕೋರ್ಟ್ ಏನು ತೀರ್ಪು ಕೊಡಬಹುದು?”, “ಮೊನ್ನೆ ನಿಮ್ಮ ಕಣ್ಣೆದುರೇ ನಿಮ್ಮ ಮಗಳ ರೇಪ್ ಆಯಿತಲ್ಲ ಆಗ ನಿಮಗೇನೆನ್ನಿಸಿತು?”, (ಕಸ್ತೂರಿ ರಂಗನ್ ಗೆ ಪ್ರೆಸ್ ಕಾನ್ಫರೆನ್ಸ್ ಆರಂಭದಲ್ಲಿ) “ಮೊದ್ಲು ನಿಮ್ಮ ಪರಿಚಯ ಮಾಡಿಕೊಳ್ರೀ” ಇವೆಲ್ಲವೂ ಅಬ್ಸೆನ್ಸ್ ಆಫ್ ಮೈಂಡ್ ಹಾಗೂ ನಾನ್ ಸೆನ್ಸ್ ಆಫ್ ಜರ್ನಲಿಸಂ  ಪ್ರಶ್ನೆಗಳು.

ವಿಶ್ವಗೋಸಮ್ಮೇಳನದ ದಿನದಂದು ಅಲ್ಲಿಗೆ ಉಳಿದ ನ್ಯಾಷನಲ್ ಮೀಡಿಯಾದವರು ಬಂದಿದ್ದರು. ಸಮ್ಮೇಳನ ಕವರ್ ಮಾಡಲು ಅಲ್ಲ, ವಿವೇಕ್ ಗೆ ಇದೇ ಪ್ರಶ್ನೆ ಕೇಳಲು. ಆತ ಸಿಗದಿದ್ದಾಗ ಮಾರನೇ ದಿನವೇ ಅಲ್ಲಿಂದ ಕಾಲ್ಕಿತ್ತದ್ದರು. ಅವರೂ ಅದೇ ಪ್ರಶ್ನೆ ಕೇಳುತ್ತಿದ್ದಾರೆ ಎಂದು ನಾನೂ ಕೇಳುವುದು ಎಷ್ಟು ಸರಿ ಎಂದು ನೀವು ಕೇಳಬಹುದು. ಆದರೆ ನಾನು ಕೇಳಿದ್ದು ಅಧಿಕ ಪ್ರಸಂಗತನದ, ಮೈಂಡ್ ಇಲ್ಲದ, ಧೈರ್ಯ ಅಲ್ಲ ಹುಂಬತನದ ಪ್ರಶ್ನೆಯಾಗಿದ್ದರೆ ನನಗೆ ಅಂದೇ ರಾತ್ರಿ ಈಟಿವಿಯ ಶೋ ಕಾಸ್ ನೋಟಿಸ್ ಬರುತ್ತಿತ್ತು. ಕಾರಣ ಇಷ್ಟೇ…ಅಂದಿಗೂ ಇಂದಿಗೂ ಜರ್ನಲಿಸಮ್ ಎಥಿಕ್ಸ್ ಅಂತೇನಾದರೂ ಇಟ್ಟುಕೊಂಡಿರುವ ಚ್ಯಾನಲ್ ಯಾವಾದರೂ ಇದ್ದರೆ ಅದು ಈಟಿವಿ. ಅದು ಹಂಡ್ರೆಟ್ ಪರ್ಸೆಂಟ್ ಅಂತ ನಾನು ಹೇಳುತ್ತಿಲ್ಲ. ಇದ್ದುದರಲ್ಲಿ ಬೆಟರ್ ಚ್ಯಾನಲ್. ರಾಮೋಜಿರಾಯರು ಈಟಿವಿಯಂತಹ ಬೃಹತ್ ಸಂಸ್ಥೆಯನ್ನು ಕಟ್ಟಿದ್ದು ಐಶ್ವರ್ಯ ರೈ ಅಭಿಷೇಕ್ ರೈಳನ್ನು ಮದುವೆಯಾಗುತ್ತಿದ್ದಾನೆ ಎಂಬ ಬ್ರೇಕಿಂಗ್ ಸ್ಟೋರಿಯನ್ನು ಏರ್ ಮಾಡಿಯೇ ಹೊರತು, ಜಿಲ್ಲಾಧಿಕಾರಿಯ ನಾಯಿ ಕಣ್ಮರೆಯಾಗಿದೆ ಎಂಬ ಸುದ್ದಿ ಫ್ಲಾಶ್ ಮಾಡಿ ಅಲ್ಲ. ಆ ಸುದ್ದಿಯನ್ನು ಹನ್ನೆರಡೂ ಚ್ಯಾನಲ್ ನಲ್ಲಿ ರಾಮೋಜಿರಾಯರೂ ನೋಡಿದ್ದರು. ಅದೇನಾದರೂ ತಪ್ಪು ಎಂದು ಅವರಿಗನಿಸಿದ್ದರೆ, ಈಟಿವಿಯಲ್ಲಿ ಐದು ವರ್ಷ ಬಾಳುವುದು ನನ್ನಿಂದ ಸಾಧ್ಯವಿತ್ತೆ?

ಇನ್ನು ಪ್ರಶ್ನೆ ಕೇಳಿದ್ದ ದಿನ ಐಶ್ವರ್ಯ ರೈ ಳ ಮದುವೆ ನಡೆಯವುದುತಿತ್ತು. ಅವಳನ್ನು ಮದುವೆಯಾಗಲಿದ್ದೇನೆ ಎಂದು ಹೇಳಿದ ವ್ಕಕ್ತಿಯೊಬ್ಬ ನನ್ನೆದುರಿಗೆ ಬಂದಾಗ ಏನು ನೀವು ಮದುವೆಗೆ ಹೋಗುವುದಿಲ್ಲವೆ ಎಂದು ಕೇಳಿದ್ದು ಖಂಡಿತವಾಗಿ ಚುಚ್ಚಿ ಕೇಳಿದ ಪ್ರಶ್ನೆಯೇ. ಆದರೆ ನಾನು ಚುಚ್ಚಲು ಪ್ರಯತ್ನಪಟ್ಟಿದ್ದು ಆ ವ್ಯಕ್ತಿಯ ಅವಿವೇಕಿತನವನ್ನ, ದುಷ್ಟತನವನ್ನು, ಹೆಣ್ಣನ್ನು ಟೇಕನ್ ಫಾರ್ ಗ್ರಾಂಟೆಂಟ್ ಅಂದುಕೊಂಡಿರುವವನನ್ನ. ಇದು ರಫ್ ಪ್ರಶ್ನೆ ಅಲ್ಲ. ರೋಬಸ್ಟ್ ಪ್ರಶ್ನೆ. ರಫ್ ಹಾಗೂ ರೋಬಸ್ಟ್ ಎರಡಕ್ಕೂ ವ್ಯತ್ಯಾಸವಿದೆ.

ಇನ್ನು ಧೈರ್ಯದ ಪ್ರಶ್ನೆ.

ಪತ್ರಿಕೋದ್ಯಮದಲ್ಲಿ ಯಾವಾಗಲೂ ಹೇಳಿಕೊಡುವ ಪಾಠವೇ….ಕಂಫರ್ಟೇಬಲ್ ಹಾಗೂ ವಾರ್ಮ್ ಅಪ್ ಪ್ರಶ್ನೆ ಕೇಳಬೇಡಿ. ಪಿಂಚ್ (ಅನಗತ್ಯ ಇರಿಟೇಟ್ ಅಲ್ಲ) ಮಾಡಿ. ಆಗ ಸತ್ಯ ಹೊರಬರುತ್ತದೆ ಎಂದು. ವಾರ್ಮ್ ಅಪ್ ಹಾಗೂ ಕಂಫರ್ಟೇಬಲ್ ಪ್ರಶ್ನೆ ಕೇಳುವುದು ತುಂಬಾ ಸುಲಭ. “ಯಡಿಯೂರಪ್ಪನವರೆ ನಿಮ್ಮ ಕನಸಿನ ಭವ್ಯ ಕರ್ನಾಟಕ ಹೇಗಿರಬೇಕು?” ಎಂದು ಮಾಸ್ ಕಾಮ್ ಮುಗಿಸಿದ ಪೋರನೂ ಕೇಳಬಲ್ಲ. “ಯಡಿಯೂರಪ್ಪ ನಿಮಗೂ ಶೋಭಾಗೂ ಇರುವ ಸಂಬಂಧವೇನು ಹೇಳಿಬಿಡಿ?” ಎಂದು ಕೇಳಲು ಧೈರ್ಯ ಬೇಕು. ಆ ಪ್ರಶ್ನೆ ಕೇಳುವ ಮಾಯಿ ಕಾ ಲಾಲ್ ಇದ್ದುದು ಇದೇ ಈ ಟಿವಿಯಲ್ಲಿ. (ಪತ್ರಕರ್ತೆ ಜ್ಯೋತಿ ಇರ್ವತ್ತೂರು. ಆದರೆ ಆಕೆ ಕೇಳಿದ್ದು ಶೋಭಾಗೆ) ಅನ್ ಕಂಫರ್ಟೇಬಲ್ ಪ್ರಶ್ನೆಗಳು ಯಾವಾಗಲೂ ಅನ್ ಕಂಫರ್ಟೇಬಲ್ ಪರಿಸ್ಥಿತಿಯನ್ನೂ, ಪತ್ರಕರ್ತರ ಮೇಲೆ ದಾಳಿಯನ್ನೂ ತರುತ್ತವೆ. ಸುರೇಶ್ ಓಬೆರಾಯ್ ನನ್ನ ಮೇಲೆ ಓದರಾಡಿದ ಹಾಗೆ. ಈಟಿವಿಯವರು ನನ್ನನ್ನು ಕೆಲಸಕ್ಕಿಟ್ಟುಕೊಂಡಿದ್ದು ಈ ರೀತಿಯ ಅನ್ ಕಂಫರ್ಟೇಬಲ್ ಪ್ರಶ್ನೆ ಕೇಳಲು ಎಂದು. ರಾಜಕಾರಣಿಗಳ ಚಮಚಾಗಿರಿ ಮಾಡುವುದಕ್ಕಲ್ಲ. ಅಷ್ಟಕ್ಕೂ ಭೂಮಿ, ನೆಲವನ್ನು ಪ್ರವಾಹದಲ್ಲಿ ಕಳೆದುಕೊಂಡಿರುವವರ ಮುಂದೆ ನಿಮಗೆ ಹೇಗೆನ್ನಿಸುತ್ತದೆ ಅಂತ ಕೇಳಲು ಹುಂಬತನ ಬೇಕು ಧೈರ್ಯ ಅಲ್ಲ. (ಅನ್ ಕಂಫರ್ಟೇಬಲ್ ಪ್ರಶ್ನೆಗೂ ಹುಂಬತನದ ಪ್ರಶ್ನೆಗೂ ವ್ಯತ್ಯಾಸವಿದೆ ಗಮನಿಸಿ)

ಸಡನ್ ಆಗಿ ಅಮಿತಾಬ್ ಬಚ್ಚನ್, ನಾರಾಯಣಮೂರ್ತಿ, ಅಮೀರ್ ಖಾನ್, ರಾಜ್ಯಪಾಲ ಭಾರದ್ವಾಜ್, ನಟ ದ್ವಾರಕೀಶ್ ಮುಂದೆ ಬಂದಾಗ ಬ್ಬೆಬ್ಬೆಬ್ಬೆ ಮಾಡುವ ಪತ್ರಕರ್ತರು ಇರುವುದರಿಂದಲೇ ಅಲ್ಲವೆ ಇಂದು ವಿವಿ ಆವರರಣವನ್ನು ರಿಯಲ್ ಎಸ್ಟೆಟ್ ಆಗಿ ಪರಿವರ್ತಿಸಲು ಹೊರಟಿರುವುದು.

ಕೊನೆಯದಾಗಿ,

ಮೂಲವ್ಯಾಧಿಯಿಂದಾಗಿ ಪ್ರಷ್ಠವೆಲ್ಲ ರಕ್ತಮಯವಾಗಿದ್ದಾಗಲೂ ರಾಜ್ ಕುಮಾರ್ ಸಾವಿನ ಗಲಾಟೆಯನ್ನು ಕವರ್ ಮಾಡಲು ಹೋದ, ಬೆನ್ನಿಹಿನ್ ಗಲಾಟೆಯಲ್ಲಿ ಆರ್ ಪಿ ಎಫ್ ನಿಂದ ಬೆನ್ನಿಗೆ ಬಡಿಗೆ ರುಚಿ ನೋಡಿದ, ಮೂರು ದಿನಗಳ ಅವಧಿಯಲ್ಲಿ ಕೇವಲ ನಾಲ್ಕು ಗಂಟೆ ನಿದ್ದೆ ಮಾಡಿ ವಿವಿಧ ಈವೆಂಟ್ ಗಳನ್ನು ಕವರ್ ಮಾಡುತ್ತಿದ್ದ, ಸರಿಯಾದ ಸಮಯಕ್ಕೆ ಊಟ-ತಿಂಡಿ ಮಾಡದೆ ನ್ಯೂಸ್ ಐಟಮ್ ಫೈಲ್ ಮಾಡುತ್ತಿದ್ದ ಕಾರಣಕ್ಕೆ ಅಸಿಡಿಟಿ ಉಲ್ಬಣಗೊಂಡು ಆರೋಗ್ಯ ಹಾಳುಮಾಡಿಕೊಂಡಿದ್ದ ನನಗೆ ಈಗಲೂ ಪ್ರೆಸೆನ್ಸ್ ಆಫ್ ಮೈಂಡ್ ಹಾಗೂ ಧೈರ್ಯ ಎರಡೂ ಹೆಚ್ಚಾಗಿದೆ.

ಈ ಟಿವಿಯಲ್ಲಿ ಐದು ವರ್ಷ ಕೆಲಸಮಾಡಿರುವುದರಿಂದ, ನನ್ನ ಪ್ರತಿಭೆಯ ಕಾರಣದಿಂದ ವಾರದಲ್ಲಿ ಮೂರು ದಿನ ‘ಮುಕ್ತಮುಕ್ತ’ ದಲ್ಲಿ ಬರುವುದರಿಂದ ಒಳ್ಳೆಯ ಜನಪ್ರೀಯತೆ ನನಗೆ ಸಿಕ್ಕಿದೆ. ಪ್ರಚಾರ ಗಿಟ್ಟಿಸಿಕೊಳ್ಳುವ ದರ್ದು ನನಗಿಲ್ಲ.

ಖಾಸಗಿತನವನ್ನೂ ಎಲ್ಲರೂ ಗೌರವಿಸಬೇಕು. ಮೀಡಿಯಾ ಕೂಡ. ಆದರೆ ಪರಮಹಂಸ ನಿತ್ಯಾನಂದನ ಖಾಸಗಿ ಬದುಕಲ್ಲ. ಹಾಗೆಯೇ ಸಾರ್ವಜನಿಕ ವ್ಯಕ್ತಿಗಳು ಮತ್ತೊಬ್ಬ ಸಾರ್ವಜನಿಕ ವ್ಯಕ್ತಿಯ ಬಗ್ಗೆ ಹೇಳಿಕೆ ಕೊಡುವಾಗ ಮೈಮೇಲೆ ಖಬರ್ ಇಟ್ಕೊಂಡು ಕೊಡಬೇಕು. ಇಲ್ಲದಿದ್ದರೆ ಮೀಡಿಯಾದವರು ಖಬರ್ದಾರ್ ಅನ್ನುತ್ತಾರೆ (ಇಂದಿನ ಮೀಡಿಯಾ ಅನ್ನುತ್ತೆದೆಯೋ ಇಲ್ವೋ ಗೊತ್ತಿಲ್ಲ…..)

ಇದು ನನ್ನ ಪಾಯಿಂಟ್ ಆಫ್ ವ್ಯೂ ಅಷ್ಟೇ. ಇದು ನಿಮ್ಮದೂ ಆಗಿರಬೇಕೆಂದಿಲ್ಲ.

ಇಷ್ಟಾದ ಮೇಲೂ ಆ ಪ್ರಶ್ನೆ ನಾನು ಕೇಳಬಾರದಾಗಿತ್ತು ಅಂತ ನಿಮಗೆ ಎನಿಸಿದರೆ, ಇಟ್ ಇಸ್ ಪರ್ಪೆಕ್ಟ್ ಲೀ ಫೈನ್. ದೋ ಐ ಡೋಂಟ್ ಎಗ್ರೀ ವಿತ್ ಯೂ, ಡೆಫಿನೆಟ್ಲಿ ರಿಸ್ಪೆಕ್ಟ್ ಯುವರ್ ಓಪಿನಿಯನ್.

ಪ್ರೀತಿಯಿಂದ

ಸುಘೋಷ್ ಎಸ್ ನಿಗಳೆ.

ಸುಘೋಷ್….ನೀವು ರಾಂಗ್…ರಾಂಗ್…ರಾಂಗ್….

ವಿವೇಕ್-ಐಶ್ವರ್ಯ ಲೇಖನಕ್ಕೆ ಬಂದಿರುವ ಮತ್ತಷ್ಟು ಅಭಿಪ್ರಾಯಗಳು ಇಲ್ಲಿವೆ….

ಚೇತನಾ ತೀರ್ಥಹಳ್ಳಿ ಹೇಳುತ್ತಾರೆ….

ಸುಘೋಷ್,

ನನಗೆ ನೀವು ಬರೆಯೋದು ಇಷ್ಟ ಆಗುತ್ತೆ. ಬಟ್ ಇದು ಚೆಂದ ಇಲ್ಲ. ನೀವು ಕೇಳಿದ್ದು, ಕೇಳಿದ್ದನ್ನ ಇಲ್ಲಿ ಹೀಗೆ ಬರಕೊಂಡಿದ್ದು ಎರಡೂ……ಬೇಡದೆ ಇರೋ ಕೆಲಸ ಯಾಕ ಮಾಡೋದಿಕ್ಕೆ ಹೋದ್ರಿ? ಪ್ರೆಸೆನ್ಸ್ ಆಫ್ ಮೈಂಡ್ ಅಂದ್ರೆ ಇದೇನಾ?

———————————

ಶಮಾ, ನಂದಿಬೆಟ್ಟ ಹೇಳುತ್ತಾರೆ….

ನಂಗೆ ಅಷ್ಟೇನೂ ಹಿಡಿಸಲಿಲ್ಲ ಸುಘೋಷ್. ಮುರಿದು ಬಿದ್ದ ಪ್ರೇಮ/ವಿವಾಹ ಅನ್ನುವುದು ಗೊತ್ತಿದ್ದ ನಂತರವೂ ಅದನ್ನು ಕೇಳಬಯಸುವುದು ಸಮಂಜಸವಲ್ಲ ಎನಿಸಿತು. (ಅಟ್ ಲೀಸ್ಟ್ ನಿಮ್ಮಂಥ ಪ್ರಜ್ಞಾವಂತರು) . ಆತ ನಟ ಇರಬಹುದು ಆದ್ರೆ ಅವನ ವೈಯುಕ್ತಿಕ ಬದುಕು ನಟನೆಯಲ್ಲ ಅಲ್ವಾ ? ನಿಂತ ನೀರು ಕಲಕುವುದೇಕೆ ನಾವು ? ಅಷ್ಟಕ್ಕೂ ನಿಮ್ಮಂಥವರು ಆ ಥರ ಇರುಸು ಮುರುಸು ಮಾಡಬೇಕಿರೋದು ಈ ಮಾನ ಮರ್ಯಾದೆ ಎಲ್ಲ ಬಿಟ್ಟ ರಾಜಕೀಯದ ಹೊಲಸು ತಿನ್ನುತಿರುವವರನ್ನ.. ನಾವು ಬೆವರಿಳಿಸಿ ದುಡಿದ ದುಡ್ಡನ್ನು ಲಂಚ ತೊಗೊಂಡು ಬದುಕುವ ಲಜ್ಜಾಹೀನರನ್ನ… ಯಾಕೆ ಗೊತ್ತ ವಿವೇಕ & ಐಶ್ವರ್ಯ ಮಾಡುವೆ ಆದರೂ ಬಿಟ್ರೂ ನಮಗೆನಿಲ್ಲ… ಆದ್ರೆ ಇವರಿದ್ದಾರಲ್ಲ ನಮ್ಮ ಶೋಷಣೆ ಮಾಡೋರು ಅವರನ್ನು ಮಟ್ಟ ಹಾಕಬೇಕಿದೆ…

————————————-

ರಿಸ್ಪೆಕ್ಟ್ ಎವ್ರಿ ವನ್ ಹೇಳುತ್ತಾರೆ…..

ಆತ್ಮೀಯರೇ,

ಬಹುಷಃ ರಂಜಿತಾರವರ ನಂತರ ನಿಮ್ಮ ಬ್ಲಾಗ್ ಓದುವವನು ನಾನೇ… ಯಾವುದಕ್ಕೂ ಕಾಮೆಂಟ್ ಬರೆಯದಿದ್ದವನು ಈ ವಿಷಯಕ್ಕೆ ಮಾತ್ರ ಬರೆಯುತ್ತಿದ್ದೇನೆ. ಒಬ್ಬರ ಹೃದಯಕ್ಕೆ ಕಲ್ಲು ಎಸೆಯುವ, ಕಸಿವಿಸಿಯುಂಟುಮಾಡುವ ನಿಮ್ಮ ಪ್ರಯತ್ನಕ್ಕೆ ನನ್ನ ಧಿಕ್ಕಾರವಿದೆ. ಇದು ವಿವೇಕರವರ ತೀರ ವೈಯಕ್ತಿಕ ವಿಷಯ. ಇಂಥಾ ಪ್ರಶ್ನೆಯಿಂದ ನಿಮಗೂ, ನಿಮ್ಮ ಛಾನೆಲ್-ನವರಿಗೂ ಸಿಗುವ ಆನಂದವೇನು? ಹೃದಯಕ್ಕೆ, ಭಾವನೆಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುವ ಮುನ್ನ ಆ ಜಾಗದಲ್ಲಿ ನಿಮ್ಮನ್ನು ನಿಲ್ಲಿಸಿ, ಪ್ರಶ್ನೆ ಕೇಳಿಕೊಳ್ಳಿ.

ಅಷ್ಟಾಗಿ ಆ ಪ್ರಶ್ನೆಗೆ ವಿವೇಕರವರು, “ಹೌದು, ಹೋಗ್ತೀನಿ” ಅಥವಾ “ಇಲ್ಲ” ಎಂದಿದ್ದರೆ ಇದು ಟಿವಿಯಲ್ಲಿ ಪ್ರಸಾರ ಆಗುತ್ತಿರಲಿಲ್ಲವೇನೋ?

ಬಹಳ ಬೇಸರ ತರಿಸಿದ ಪ್ರಶ್ನೆ.

————————————–

ಕರುಣಾ ಪಿ ಎಸ್ ಹೇಳುತ್ತಾರೆ……

ಇದು ತನ್ನನ್ನು ತಾನು ಹೊಗಳಿಕೊಳ್ಳುವ ಪರಿಯೇ ಹೊರತು ಜವಾಬ್ದಾರಿಯುತ ಪತ್ರಿಕೋದ್ಯಮವಲ್ಲ. ನಿಮ್ಮ ಪ್ರೆಸೆನ್ಸ್ ಆಫ್ ಮೈಂಡ್ ಹಾಗೂ ಧೈರ್ಯ ಇತರ ಪತ್ರಕರ್ತರಿಗೆ ಪಠ್ಯವಾಗದಿರಲಿ. Bad in taste. A journalist should protect one’s private life as long as it does not affect the society at large. This is what we learnt when we were discussing great journalists such as Joseph Pulitzer. This is voyerstic journaism.

——————————-

ಸುಘೋಷ್ ಎಸ್. ನಿಗಳೆ ಹೇಳುತ್ತಾರೆ…..

ಈ ಲೇಖನದ ಕುರಿತು ಅಭಿಪ್ರಾಯ ವ್ಯಕ್ತಪಡಿಸಲು ಇಚ್ಛಿಸುವ ಇತರರು ಆದಷ್ಟು ಬೇಗ ತಮ್ಮ ಪ್ರತಿಕ್ರಿಯೆಗಳನ್ನು ಕಳಿಸಬೇಕಾಗಿ ವಿನಂತಿ. ಈಗಾಗಲೇ ವ್ಯಕ್ತಪಡಿಸಲಾಗಿರುವ ಅಭಿಪ್ರಾಯಗಳಲ್ಲಿನ ವಿಷಯಗಳನ್ನು ಹೊರತು ಪಡಿಸಿ ಹೊಸ ವಿಷಯಗಳನ್ನು ಬರೆಯಿರಿ ಎಂದು ಕೇಳಿಕೊಳ್ಳುತ್ತೇನೆ. ರಿಪಿಟೇಷನ್ ಆಗದಿರಲಿ ಎಂಬ ಕಾರಣಕ್ಕೆ ಮಾತ್ರ. ಈ ಲೇಖನದ ಕುರಿತು ಅನಿಸಿಕೆ ತಿಳಿಸಿರುವ ಕೇಶವ, ಮನಸಾರೆ, ಗಣೇಶ್, ಟೀನಾ, ಕೇಶವ್ ಪ್ರಸಾದ್ ಬಿ ಕಿದೂರ್, ಎಚ್ ಆನಂದರಾಮಶಾಸ್ತ್ರಿ, ರಂಜಿತ್, ಅಪಾರ, ಆರ್ ಶರ್ಮಾ, ಚೇತನಾ ತೀರ್ಥಹಳ್ಳಿ, ಶಮಾ ನಂದಿಬೆಟ್ಟ, ರಿಸ್ಪೆಕ್ಟ್ ಎವ್ರಿ ವನ್, ಕರುಣಾ ಪಿ ಎಸ್ ಅವರಿಗೆ ನಾನು ಆಭಾರಿ.

ಸುಘೋಷ್ ನೀವು ರಾಂಗ್….ಅಲ್ಲಲ್ಲ….ರೈಟ್….ಅಲ್ಲಲ್ಲ ರಾಂಗ್…

ವಿವೇಕ್-ಐಶ್ವರ್ಯ ಲೇಖನಕ್ಕೆ ವ್ಯಕ್ತವಾಗಿರುವ ಅಭಿಪ್ರಾಯಗಳು ಇಲ್ಲಿವೆ…..

ಕೇಶವ ಹೇಳುತ್ತಾರೆ…..

ಆ ಪ್ರಶ್ನೆಯನ್ನು ಕೇಳಿ ನೀವು ಖಂಡಿತ ತಪ್ಪು ಮಾಡಿದ್ದೀರಿ. ಸೆಲಿಬ್ರಿಟಿಗಳು ಕೂಡ ಖಾಸಸಿ ಬದುಕು ಅಂತ ಒಂದಿರುತ್ತೆ. ವಿವೇಕ ತನ್ನ ಅವಿವೇಕತನದಲ್ಲಿ ಸಾರ್ವಜನಿಕವಾಗಿ ಹಾಗೆ ಹೇಳಿದ್ದು ತಪ್ಪು; ಆದರೆ ಪತ್ರಕರ್ತರಾಗಿ ಗೋಪೂಜೆ ಸಮಯದಲ್ಲಿ ಅಂಥ ಪ್ರಶ್ನೆ ಕೇಳುವುದು ಖಂಡಿತ ತಪ್ಪು ಅಂತ ಮಾತ್ರ ಹೇಳಬಲ್ಲೆ.

———————————

ಮನಸಾರೆ ಹೇಳುತ್ತಾರೆ…..

ರೀ ಸುಘೋಷ್ ಅವರೇ , ನೀವು ಪತ್ರಕರ್ತರು criticism ನು ಅಸ್ತೆ positive ಆಗಿ ತೊಗೊತಿರ ಅಂತ ಈ ಮಾತು ಹೇಳ್ತಾ ಇದ್ದೇನೆ. ನೀವು ಆ ಪ್ರಶ್ನೆ ಕೇಳಬಾರದಿತ್ತು . ನಿಮ್ಮ ಆ coverage ಅಸ್ಟೊಂದು ಚಾನೆಲ್ ನಲ್ಲಿ ಬರ್ತಿರೋದು ನೋಡಿ ನಿನ್ಮಗೆ ಖುಷಿ ಆಗಿರಬಹುದು . ಆದ್ರೆ ನಮ್ಮಂತ್ ಸಾಮಾನ್ಯ ಜನರ ವಿಶ್ವಾಸ ಮೀಡಿಯಾ ದಿಂದ ಹೋಗ್ಬಿಡುತ್ತೆ ರೀ… ಏನ್ ಈ ಮೀಡಿಯಾ ದವರು ಬರಿ ಇಂಥ gossip ಅಥವಾ ಕೆಲ್ಸಕ್ಕೆ ಬಾರದ ವಿಷಯಗಳನ್ನ ಬಿಂಬಿಸೋದರಲ್ಲೇ ನಿಮಗೆ ಕೊಟ್ಟ ಆ power ನ ವೇಸ್ಟ್ ಮಾಡ್ತಾ ಇದ್ದೀರಾ . ನಿಮಗೆ ಬರಿ ಪ್ರಚಾರ ಮಾಡೋದು , ದುಡ್ಡು ಮತ್ತು ಹೆಸರು ಗಿಟ್ಟಿಸ್ಕೋದೇ ಪ್ರಮುಖ್ ಆಗಬಾರ್ದ್ರಿ . ನೀವು ನಮ್ಮ ಎಲ್ಲ ಸಾಮಾನ್ಯ ಜನರ ದ್ವನಿ ಅಗಬೇಕ್ರಿ . ನಮಗೆ ವಿವೇಕ್ ಯಾಕೆ ಐಶ್ವರ್ಯ ಮದುವೆ ಗೆ ಹೋಗಲಿಲ್ಲ ? ಅನ್ನೋ ಪ್ರಶ್ನೆ ಗೆ ಉತ್ತರ ಬೇಡಾರಿ . ನಮಗೆ ನಾವು ಕೊಟ್ಟ ವೋಟನನ ನಮ್ಮ ರಾಜಕಾರಣಿಗಳು ಎಷ್ಟು ಸರಿಯಾಗಿ ಉಪಯೋಗಿಸ್ತ ಇದ್ದಾರೆ ಅನ್ನೋದಕ್ಕೆ ಉತ್ತರ ಹುಡುಕಿ . ೫ ವರ್ಷ ಕೊಮ್ಮೆಬದಲಾಗುವ ನಮ್ಮ ಸರ್ಕಾರ್ ಈಗ ಬರಿ ೧ ಅಥವಾ ೩ ವರ್ಷಕ್ಕೆ ಬದಲಾಗ್ತಾ ಇದೆ ಅದು ಯಾಕೆ ಅಂತ ಕೇಳಿ. ರೋಡ್ ಟ್ಯಾಕ್ಸ್ ತುಂಬಿದರು , ರೋಡ್ ಗಳಲ್ಲಿರೋ ತಗ್ಗು ದಿಣ್ಣೆ ಗಳನ್ನ ಇನ್ನು ಯಾಕೆ ಸೆಮೆಂಟ್ ನಿಂದ ತುಂಬಿಲ್ಲ ಕೇಳಿ . traffic rules ಬ್ರೇಕ್ ಮಾಡಿದವರಿಗೆ ಬರಿ ಲಂಚ್ ತೊಗೊಂಡು ಬೀಡೋ ನಮ್ಮ traffic ಪೊಲೀಸರಿಗೆ ಇನ್ನು ಯಾಕೆ ಕೆಲಸದಿಂದ ವಜಾ ಮಾಡಿಲ್ಲ ಅದನ್ನ ಕೇಳಿ . ಯಾವದೇ government ಕೆಲಸ ಲಂಚ್ ಕೊಡದೆ file ಮುಂದೊಗೋಲ್ಲ , ಅದು ಯಾಕೆ ಅಂತ ಕೇಳಿ .
ಇನ್ನು ಹೀಗೆ ಎಸ್ಟೊಂದು ವಿಷ್ಯ ನೀವು ಪತ್ರಕರ್ತರು ಸಮಯ ಪ್ರಜ್ಞೆ ಹಾಗೂ ಧೈರ್ಯ ದಿಂದ ಕೇಳಬೇಕಾಗಿದೆ ಅದನ್ನ ಮೊದಲು ಕೇಳಿರಿ …

————————————-

ಸುಘೋಷ್ ನಿಗಳೆ ಹೇಳುತ್ತಾರೆ……

ಆತ್ಮೀಯ ‘ಮನಸಾರೆ’,
ಮೊದಲಿಗೆ……
ನೀವು ನಿಮ್ಮ ಅಭಿಪ್ರಾಯವನ್ನು ಖಡಾಖಂಡಿತವಾಗಿ, ವಿಷಯಕ್ಕಷ್ಟೇ ಸೀಮಿತವಾಗಿ, ಟು ದಿ ಪಾಯಿಂಟ್ ಹೇಳಿರುವುದಕ್ಕೆ ಅಭಿನಂದಿಸುತ್ತೇನೆ. ಟೀಕಿಸುವ ಭರದಲ್ಲಿ ವೈಯುಕ್ತಿಕ ನಿಂದೆಗಿಳಿಯುವ ಜನರಿಗಿಂತ ನೀವು ಭಿನ್ನ ಎಂದು ಹೇಳಲು ನನಗೆ ಖುಷಿಯೆನಿಸುತ್ತದೆ.
ಎರಡನೆಯಾದಾಗಿ,…….
ನನ್ನ ಬ್ಲಾಗ್ ನ ಲಿಂಕನ್ನು ನಿಮ್ಮ ಬ್ಲಾಗ್ ನಲ್ಲಿ ನೀಡಿದ್ದಕ್ಕೆ ಧನ್ಯವಾದ. ಈ ಮೊದಲೇ ನಾನು ನಿಮಗೆ ಈ ಕುರಿತು ಮೇಲ್ ಮಾಡಬೇಕೆಂದಿದ್ದೆ. ಆದರೆ ಸ್ಟೆಂಟ್ ರಿಮೂವಲ್ ಗಾಗಿ ಮತ್ತೆ ಆಸ್ಪತ್ರೆ ಸೇರಿದ್ದರಿಂದ ಮಾಡಲಾಗಿರಲಿಲ್ಲ. ಕ್ಷಮಿಸಿ.
ಮೂರನೆಯದಾಗಿ……
ತಾವು ಮಾಧ್ಯಮ ಹಾಗೂ ಪತ್ರಕರ್ತರ ಬಗ್ಗೆ ಎತ್ತಿರುವ ಪ್ರಶ್ನೆಗಳು, ಪತ್ರಕರ್ತರು ಯಾವ ರೀತಿಯ ಪ್ರಶ್ನೆ ಕೇಳಬೆಕೆಂದು ಹೇಳಿರುವುದು ಸರಿಯಾಗಿಯೇ ಇದೆ. ಮಾಧ್ಯಮದ ಕುರಿತು ತಮಗಿರುವ ವಿಷನ್, 100 ಶೇಕಡಾ ಸರಿಯಾಗಿದೆ.
ನಾಲ್ಕನೆಯದಾಗಿ….
ನಾನು ನನ್ನ ಬ್ಲಾಗ್ ನಲ್ಲಿ ಇದುವರೆಗೆ 200 ಕ್ಕೂ ಹೆಚ್ಚು ಪೋಸ್ಟ್ ಗಳನ್ನು ಹಾಕಿದ್ದೇನೆ. ಅದರಲ್ಲಿ ಮಾಧ್ಯಮಕ್ಕೆ ಸಂಬಂಧಿಸಿದಂತೆ ಸುಮಾರು 20 ಲೇಖನಗಳಿವೆ. ತಾವು ದಯವಿಟ್ಟು ಅವುಗಳಲ್ಲಿನ ಗೌಡರ ಗತ್ತೇ ಗಮ್ಮತ್ತು, ಕಾಷಿಯಸ್ ಮೈಂಡ್ – ನನ್ನ ಕಿತಾಪತಿಗಳ ಜಗತ್ತು, ಇನ್ಸಿಡೆಂಟ್ಸ್ @ 100, ಪಾರಿವಾಳಗಳಲ್ಲಿದ್ದುದು ಪತ್ರಕರ್ತರಲ್ಲಿಲ್ಲ, ಟಿವಿ ಕ್ಯಾಮಾರಾ ಅಂದ್ರೆ ಹೆಣಾನೂ ಬಾಯ್ಬಿಟ್ಟಿತ್ತಂತೆ ಮುಂತಾದ ಮಾಧ್ಯಮಕ್ಕೆ ಸಂಬಂಧಿಸಿದ 20 ಲೇಖನಗಳನ್ನು ಓದಬೇಕಾಗಿ ವಿನಮ್ರವಾಗಿ ಕೇಳಿಕೊಳ್ಳುತ್ತೇನೆ. ಇವುಗಳನ್ನು ಓದಿದಾಗ ನಾನು ಯಾವ ಯಾವ ಪ್ರಶ್ನೆಗಳನ್ನು ಕೇಳಿದ್ದೆ, ಘಟನೆಗಳನ್ನು ಯಾವ ರೀತಿ ಡೀಲ್ ಮಾಡಿದ್ದೆ ಅನ್ನವುದು ತಮಗೆ ಗೊತ್ತಾಗಲಿದೆ.
ಅಂದಹಾಗೆ ಒಂದು ಚಿಕ್ಕ ಸ್ಪಷ್ಟನೆ….
ಗಾಸಿಪ್ ಹರಡಲು, ದುಡ್ಡು (ಹೊಟ್ಟೆಪಾಡು ಹೊರತುಪಡಿಸಿ), ಪ್ರಚಾರ ಗಿಟ್ಟಿಸಲು ನಾನು ಮಾಧ್ಯಮವನ್ನು ಎಂದಿಗೂ ಬಳಸಿಕೊಂಡಿಲ್ಲ ಎಂದು ಹೇಳುವ ಅಗತ್ಯ ನನಗಿಲ್ಲ. ನಾನು ಪ್ರಾಮಾಣಿಕ ಅಂತ ನನಗಷ್ಟೇ ಗೊತ್ತಿದ್ದರೆ ಸಾಕು. ಇದು ಅಹಂಕಾರದ ಮಾತಲ್ಲ. ಹೆಮ್ಮೆಯ ಮಾತು. ಆದರೆ ತಾವು ನನ್ನ ಲೇಖನಕ್ಕೆ ನೀಡಿರುವ ಮೌಲ್ಯಯುತ ಕಾಮೆಂಟಿನಿಂದಾಗಿ ತಮ್ಮ ಸೆನ್ಸಿಟಿವಿಟಿಯನ್ನು ಗೌರವಿಸುತ್ತ ಹೀಗೆ ಹೇಳುತ್ತಿದ್ದೇನೆ.
ಪ್ರೀತಿಯಿರಲಿ….
ಸುಘೋಷ್ ಎಸ್ ನಿಗಳೆ

————————————-

ಮನಸಾರೆ ಹೇಳುತ್ತಾರೆ……

ಸುಘೋಷ್ ಅವರೇ,
ನಿಮ್ಮ positive attitude ಗೆ ನನ್ನದೊಂದು ಸಲಾಮು ರೀ . ಅದು ಒಬ್ಬ ಪತ್ರಕರ್ತನಿಗೆ ಇರಬೇಕಾದ ಪ್ರಮುಖ್ ಗುಣ . ಅಸ್ಟು ಖಾರವಾದ ನನ್ನ ಕಾಮೆಂಟ್ ನಾ ಅಭಿನಂದಿಸೋವ ದಿಲ್ ಇದೆ ನೋಡಿ ನಿಮಗೆ , ಅದು ನಿಮ್ಮಲ್ಲಿರೋ positive attitude ನಾ ಎತ್ತಿ ಹಿಡಿಯುತ್ತೆ . ನೀವು ನನ್ನ ಕಾಮೆಂಟ್ ಗೆ ಅಭಿನಂದಿಸಿದಿರಿ ಅಂತ ನಾ ಉಬ್ಬಿ , ನಿಮ್ಮನ್ನ ತೆಗಳೋದು ಬೀಡಲ್ಲ . ನಂಗೆ ಯಾವಾಗ್ ಯಾವಾಗ್ ಇಷ್ಟ ಆಗೋಲ್ಲ ಅವಾಗ್ ಖಂಡಿತ ನಮ್ಮ ಖಾರವಾದ ಕಾಮೆಂಟ್ ನಿಮ್ಮ ಬ್ಲಾಗ್ ನಲ್ಲಿ ಇರುತ್ತೆ . ನಮ್ಮ ಟೀಕೆಗಳಿಗೆ ಸದಾ ಸಿದ್ದರಾಗಿ . ಆದ್ರೆ ನಮ್ಮ ಟೀಕೆಗಳಲ್ಲಿ ಒಂದು ಕಳ ಕಳಿಯ ಒಳ್ಳೆ ಉದ್ದೇಶ ಇರುತ್ತೆ ಅಂತ ಮರಿಬೇಡಿ .
ಇನ್ನು ನಿಮ್ಮ ಹಳೆ ಪೋಸ್ಟಗಳನ್ನ ಓದದೆ ಬರಿ ಒಂದು ಲೇಖನದ ಮೇಲೆ ನಿಮ್ಮನ್ನ ಅಳೆದಿದಕ್ಕೆ ಕ್ಷಮೆ ಇರಲಿ. ಮತ್ತೆ ನಮ್ಮ ಬೆಳಗಾಂ ಹುಡುಗ ಅಂತ ಸ್ವಲ್ಪ ಜೋರು ಮಾಡಿ ಕಾಮೆಂಟ್ ಬರಿದಿದ್ದೆ ಅದಕ್ಕೆ ತಾವು ಅಸ್ಟೊಂದು ಚೆನ್ನಾಗಿ ಪ್ರತಿಕ್ರಿಯುಸಿತ್ತಿರಾ ಅಂದ್ಕೊಂಡಿರಲಿಲ್ಲ . ಹೌದು ನನಗೆ ನಿಮ್ಮ ಲೇಖನಗಳು ಅಂದ್ರೆ ಇಷ್ಟ, ಅದರಲ್ಲಿ ನೀವು ಕುಟುಂಬದಲ್ಲಿರೊ ಭಾಂಧವ್ಯದ ಬಗ್ಗೆ, , public experience ಬಗ್ಗೆ , ಅಲ್ಲಿ ಇಲ್ಲಿ ಎನಾಗುತ್ತಿಗೆ ಅನ್ನುವ ಚಿಟುಕು ಮಾಹಿತಿ ಬಗ್ಗೆ ,ನಿಮ್ಮ ಮೊಟಕು jokes ಗಳೆಲ್ಲಾ ಇಸ್ಟ . ಊದಾಹರಣೆಗೆ ಆಸ್ಪತ್ರೆಯಲ್ಲಿ ಯುರಿನ್ ಬ್ಯಾಗ್ ಹಿಡ್ಕೊಂಡು ವ್ಹೀಲ್ ಚೇರ್ ಮೇಲೆ ಹೋಗೋವಾಗಲು ರಾಜ್ ನಂತೆ ಫೀಲ್ ಮಾಡಿಕೊಂಡಿರೋ ನೀವು , ಅದು ಎಲ್ಲರಿಗೂ ಸಾಧ್ಯವಾಗಲ್ಲ. ಇಂತಾ ಲೇಖನದಿಂದಾ ನಿಮ್ಮಲ್ಲಿ ಎಷ್ಟು positive radiation ಇದೆ ಅಂತ ಗೊತ್ತಾಗುತ್ತೆ . ಅದಕ್ಕೆ ನಿಮ್ಮ ಬ್ಲಾಗ್ ಲಿಂಕ್ ನನ್ನ ಬ್ಲಾಗ್ ನಲ್ಲಿ .
ಇನ್ನು ನೀವು ನಿಮ್ಮ ಮಾಧ್ಯಮವನ್ನ ಯಾವದಕ್ಕೂ ದುರುಪಯೋಗ್ ಪಡಿಸಿಕೊಂಡಿಲ್ಲ ಅಂತ ಯಾರಿಗೂ ಹೇಳೋ ಅಗತ್ಯ ಇಲ್ಲ , ನೀವು ಪ್ರಾಮಾಣಿಕ ಅಂತ ನಿಮಗಸ್ಟೆ ಗೊತ್ತಿದ್ದರೆ ಸಾಕು ಅಂತ ಹೇಳಿದಿರಲ್ಲ , ಅಸ್ಟು ಸಾಕು ಬಿಡಿ . ಈ Zeal ನ ಯಾವತ್ತು ಇತ್ಕೊಂಡಿರಿ.

———————————–

ಗಣೇಶ್ ಹೇಳುತ್ತಾರೆ…..

ಸರ್,

ಅದೇ ಜಾಗದಲ್ಲಿ ನೀವಿದ್ದು ಇನ್ನೊಬ್ಬ ನಿಮ್ಮನ್ನು ಈ ರೀತಿ ಪ್ರಶ್ನೆ ಮಾಡಿದ್ದರೆ ಏನ್ ಉತ್ತರ ಕೊಡುತ್ತಿದ್ದಿರಿ? ಸ್ವಲ್ಪ ಸಾವಧಾನವಾಗಿ ಯೋಚಿಸಿ. ಮನಸ್ಸಿಗೆ ತುಂಬಾ ಬೇಸರವಾಗತ್ತೆ ಅಲ್ವಾ?

ಇನ್ನು ಮಾದ್ಯಮಗಳು… ಈಗ ಹೆಚ್ಚಿನ ಮಾಧ್ಯಮಗಳು ತಮ್ಮ ರೇಟಿಂಗ್ ಜಾಸ್ತಿ ಮಾಡ್ಕೊಳ್ಳಬೇಕು ಅನ್ನೋದೇ ಅವರ ಮೂಲ ಮಂತ್ರ. ಯಾರು ಹಾಳಗಲಿ, ಏನಾದರೂ ಆಗಲಿ ಜನ ನಮ್ಮ ಟಿ.ವಿ/ಪೇಪರ್ ಓದಬೇಕು. ಅದರಿಂದ ಖಾಸಗೀ ಬದುಕಿಗೆ ಎಷ್ಟು ನಷ್ಟ ಆಗೊತ್ತೆ ಅನ್ನೋದು ಗೊತ್ತಿದ್ರು ಈ ರೀತಿ ಕೆಲ್ಸ ಮಾಡ್ತಾರೆ. ತಾವು ಬಯಲಿಗಿಳಿದು ಏನನ್ನೋ ಸಾಧನೆ ಮಾಡಿದ ಹಾಗೆ ತಿಳಿದುಕೊಂಡಿರ್ತಾರೆ. ಆದರೆ ಅವರ ಹತ್ತಿರ ಏನೂ ಮಾಡೋಕೆ ಆಗೊಲ್ಲ. ನಾಲ್ಕು ದಿನ ಜನ ಆಡಿಕೊಳ್ತಾರೆ ಆಮೇಲೆ ಜನ ಮರೆತಿರ್ತಾರೆ..

——————————–

ಟೀನಾ ಹೇಳುತ್ತಾರೆ…..

ಪ್ರೀತಿಯ ಸುಘೋಷ್,
ಇದರಲ್ಲಿಯ ’ಪ್ರೆಸೆನ್ಸ್ ಆಫ್ ಮೈಂಡ್’ ನನ್ನನ್ನು ತಾಕಲಿಲ್ಲ, ಆದರೆ ನಿಮ್ಮ ಧೈರ್ಯ ನಗು ಬರಿಸಿತು!! I think the style gives way for lot of misunderstandings here. It makes the reader feel that you are basking in the glory of having exhibited what is generally considered ‘paparazzi’cal, while having a total disregard for the feelings of the person on the other end of your mic. I know and understand that it requires a lot of daring to ask such a question and be exposed to the consequences, but this was uncalled for. Off late, I watched an Amitabh Bachchan interview. He was asked by a lady why he chose to reply in monosyllables in most of his interviews. He replied, “I would answer in detail, but most of the questions asked are stupid. Ask me something intelligent and I will reply in detail gladly.” Hope you don’t take this in an offensive manner. I have always liked your writeups for their wit, sense of humour and your ability to see things which could have gone unobserved otherwise. I feel you could have asked him something that could have brought forth his emotions. This was rough.

———————————————

ಕೇಶವ್ ಪ್ರಸಾದ್ ಬಿ ಕಿದೂರ್ ಹೇಳುತ್ತಾರೆ…..

very nice article

——————————————–

ಎಚ್ ಆನಂದರಾಮಶಾಸ್ತ್ರಿ ಹೇಳುತ್ತಾರೆ…..

ಸುಘೋಷ್,
ನಿಮಗೆ ಶಾಭಾಸ್
ಎಂಬ ಬಹುಮಾನ
ಘೋಷ್‌ಅಣೆ ಮಾಡಿದ್ದೇನೆ.
ಅಂದು ನಿಮ್ಮ ಆ ಬೈಟನ್ನು ನೋಡಿ (ನಿಮ್ಮನ್ನು ಮತ್ತು ಅದೇ ಪ್ರೆಸೆನ್ಸ್ ಆಫ್ ಮೈಂಡ್‌ಗಾಗಿ ಸುರೇಶ್ ಒಬೆರಾಯ್ ಅವರನ್ನೂ) (ಸುಘೋಷ್, ಸುರೇಶ್ ಇಬ್ಬರನ್ನೂ) ಮೆಚ್ಚಿದ ಕೋಟ್ಯಂತರ ವೀಕ್ಷಕರಲ್ಲಿ ನಾನೂ ಒಬ್ಬ.

————————————-

ರಂಜಿತ್ ಹೇಳುತ್ತಾರೆ……

ನಿಗಳೆಯವರೇ,

ಮೊದಲಿಂದಲೂ ನಿಮ್ಮ ಬರಹ ಇಷ್ಟ ಪಡ್ತಾ ಬರ್ತಿದೇನೆ. ಬೆಳ್ಳಂಬೆಳಿಗ್ಗೆ ಬಹುಶಃ ಮೊದಲು ನಿಮ್ಮ ಪೋಸ್ಟ್ ಓದೋನು ನಾನೇ ಅನ್ಸುತ್ತೆ.

ಈ ಬರಹ ಯಾಕೋ ಇಷ್ಟ ಆಗ್ಲಿಲ್ಲ. ನೀವು ಆ ಪ್ರಶ್ನೆ ಕೇಳೊದನ್ನ ಧೈರ್ಯ ಅನ್ನಬಹುದು, ನಿಮ್ಮ ಬಾಸಿಗೆ ಖುಷ್ ಆಗಿರಬಹುದು, ಆದರೆ ಇದು ಒಂದು ರೀತಿಯ ಸ್ಯಾಡಿಸ್ಮ್ ಅಲ್ಲವಾ?

ಭೂಮಿ, ಹೊಲ, ತಮಗೆ ಸಂಬಂಧಪಟ್ಟವರನ್ನು ಕಳೆದುಕೊಂಡ ಜನರನ್ನು “ಈಗ ನಿಮ್ಗೆ ಹೇಗೆ ಅನಿಸ್ತಾ ಇದೆ?” ಅಂತ ಕೇಳೋಕೂ ಇದೇ ತರಹದ ಧೈರ್ಯ ಬೇಕಾಗ್ತದೇನೋ ಅಲ್ವಾ? ಅಲ್ಲ ಅನ್ನೋದನ್ನ ಹೇಗೆ ಹೇಳ್ತೀರಿ?

ದಯವಿಟ್ಟು ಉತ್ತರಿಸಿ, ನಿಮ್ಮ ವ್ಯೂ ಪಾಯಿಂಟ್ ನಿಂದ ಬಹುಶಃ ನನ್ನ ಬೇಸರಾದ ಮನ ತುಸು ಅರಳಬಹುದೇನೋ?

——————————–

ಅಪಾರ ಹೇಳುತ್ತಾರೆ…..

ನಂಗಿಷ್ಟವಾಗಲಿಲ್ಲ ಸುಘೋಷ್‌. ಹೀಗೆ ಬೇಡದ ಪ್ರಶ್ನೆಗಳನ್ನು ಕೇಳುವುದು ಇಂದಿನ ಜರ್ನಲಿಸಂನ ಅನಿವಾರ್ಯವಾಗಿರುವುದು ವಿಷಾದದ ವಿಷಯ. ನೀವಿದನ್ನು ಒಂದು ಸ್ವಾರಸ್ಯಕರ ನೆನಪಾಗಿ ಬರೆದಿದ್ದರೆ ಓದಬಹುದಾಗಿತ್ತು. ಆದರೆ ಪ್ರಸೆನ್ಸ್‌ ಆಫ್‌ ಮೈಂಡ್‌ ಎಂದಿದ್ದೀರ. ನನಗ್ಯಾಕೋ ಇಂದಿನ ಪತ್ರಿಕೋದ್ಯಮ ಆಬ್ಸೆನ್ಸ್‌ ಆಫ್‌ ಮೈಂಡಿಗೆ ಇದು ಉದಾಹರಣೆ ಅನಿಸುತ್ತೆ.

———————————

ಆರ್ ಶರ್ಮಾ, ಹೇಳುತ್ತಾರೆ…..

Olle maja ide

———————————

ಸುದ್ದಿ ವಿಭಾಗಕ್ಕೆ ಹೋಗಿ ಆವೇಶದಿಂದ ಅಬ್ಬರಿಸಿದೆ…

-ಎಚ್. ಆನಂದರಾಮ ಶಾಸ್ತ್ರೀ

ಡಾ.ನಾ.ಮೊಗಸಾಲೆ ಅವರಿಗೆ ಬೆಂಗಳೂರಿನಲ್ಲಿ ’ಸೂರ್ಯನಾರಾಯಣ ಚಡಗ ಪ್ರಶಸ್ತಿ’ ಪ್ರದಾನ. ಸಂತೋಷದ ವಿಷಯ.

ಸೂರ್ಯನಾರಾಯಣ ಚಡಗರ ನಿಕಟವರ್ತಿಯಾಗಿದ್ದವನು ನಾನು. ಬೆಂಗಳೂರಿನಲ್ಲಿ ಅವರು ವಿಧಿವಶರಾದಾಗ ಕೂಡಲೇ ಎಲ್ಲ ಕನ್ನಡ ದಿನಪತ್ರಿಕೆಗಳ ಬೆಂಗಳೂರು ಕಚೇರಿಗಳಿಗೆ ನಾನು ದೂರವಾಣಿ ಕರೆಮಾಡಿ ಸುದ್ದಿ ಮುಟ್ಟಿಸಿದೆ. ಲಿಖಿತ ಸುದ್ದಿಯನ್ನೂ ಅದೇ ದಿನ ಪತ್ರಿಕಾಲಯಗಳಿಗೆ ತಲುಪಿಸಲಾಯಿತು. ಆ ದಿನಗಳಲ್ಲಿ ’ಈ ಟಿವಿ’ಯಲ್ಲಿದ್ದ ಸುಘೋಷ್ ನಿಗಳೆ ಅವರ ಪರಿಚಯ ನನಗಿದ್ದುದರಿಂದ ಅವರಿಗೆ ದೂರವಾಣಿ ಕರೆಮಾಡಿ ವಿಷಯ ತಿಳಿಸಿದೆನಲ್ಲದೆ ಚಡಗರ ಪಾರ್ಥಿವ ಶರೀರದ ಚಿತ್ರೀಕರಣ ಮಾಡಿಕೊಂಡು ಟಿವಿಯಲ್ಲಿ ಬಿತ್ತರಿಸುವಂತೆ ವಿನಂತಿಸಿದೆ. ಸಂಬಂಧಿಸಿದವರಿಗೆ ಕೂಡಲೇ ತಿಳಿಸುವುದಾಗಿ ಸುಘೋಷ್ ಹೇಳಿದರು.

ಹೆಬ್ಬಾಳದ ಚಿತಾಗಾರದಲ್ಲಿ ಚಡಗರ ಪಾರ್ಥಿವ ಶರೀರವನ್ನು ಚಿತೆಗೆ ಸಮರ್ಪಿಸುವ ಕ್ಷಣ ಸಮೀಪಿಸಿದರೂ ’ಈ ಟಿವಿ’ಯವರು ಪತ್ತೆ ಇಲ್ಲ. ಚಿತೆಯೆದುರು ಪಾರ್ಥಿವ ಶರೀರ ಬಂದಾಗ ಮತ್ತೆ ಸುಘೋಷ್‌ಗೆ ಕರೆಮಾಡಿದೆ. ತಾನೀಗ ಬೇರೆ ಕಡೆ ಇರುವುದಾಗಿಯೂ, ಸಂಬಂಧಿಸಿದವರಿಗೆ ಆಗಲೇ ತಿಳಿಸಿರುವುದಾಗಿಯೂ ಹೇಳಿದರಲ್ಲದೆ ಯಾರೂ ಬರದಿದ್ದುದಕ್ಕೆ ಆಶ್ಚರ್ಯವನ್ನೂ ವ್ಯಕ್ತಪಡಿಸಿದರು. ಇನ್ನು ನಾವು ಕಾಯುವಂತಿರಲಿಲ್ಲ. ಸುಘೋಷ್ ತನ್ನ ಪಾಲಿನ ಕರ್ತವ್ಯವನ್ನು ನಿರ್ವಹಿಸಿದ್ದರೂ ಕೂಡ ನನ್ನಿಂದ ಫೋನ್ ದ್ವಾರಾ ಖಡಕ್ ಮಾತುಗಳನ್ನು ಕೇಳಬೇಕಾಯಿತು! ನನ್ನ ತೀಕ್ಷ್ಣನುಡಿಗಳನ್ನು ಅವರು ಸಮಾಧಾನದಿಂದ ಸಹಿಸಿಕೊಂಡರು.

ಚಡಗರ ಅಂತ್ಯಕ್ರಿಯೆ ಪೂರೈಸುತ್ತಲೇ ನಾನು ’ಈ ಟಿವಿ’ಯ ಕಚೇರಿಗೆ ಧಾವಿಸಿದೆ. ಅಲ್ಲಿ ಸುದ್ದಿ ವಿಭಾಗ ನೋಡಿಕೊಳ್ಳುತ್ತಿದ್ದವರ ಬಳಿ ಹೋಗಿ ಆವೇಶದಿಂದ ಅಬ್ಬರಿಸಿದೆ. ಕೊನೆಗೆ ಸುದ್ದಿಯನ್ನು ಬರೆದುಕೊಟ್ಟು ವಾರ್ತೆಯಲ್ಲಿ ಬಿತ್ತರಿಸುವಂತೆ ಕೇಳಿಕೊಂಡೆ. ಆ ರಾತ್ರಿಯ ವಾರ್ತೆಯಲ್ಲಿ ಚಡಗರ ನಿಧನದ ಸುದ್ದಿ ಪ್ರಸಾರವಾಯಿತು, ದೋಷಭರಿತ ವಾಕ್ಯವೊಂದನ್ನು ತೋರಿಸುವ ಮೂಲಕ!

ಈ ಮಧ್ಯೆ ಚಡಗರ ಬಗ್ಗೆ ಕಿರುಲೇಖನವೊಂದನ್ನು ಸಿದ್ಧಪಡಿಸಿ ಅದನ್ನು ’ವಿಜಯ ಕರ್ನಾಟಕ’ದ ಕಚೇರಿಗೆ ಕೊಂಡೊಯ್ದು ಸುದ್ದಿ ಸಂಪಾದಕ ವಸಂತ ನಾಡಿಗೇರ ಅವರಿಗೆ ಕೊಟ್ಟುಬಂದಿದ್ದೆ. ಜೊತೆಗೆ ಚಡಗರ ಅಭಿನಂದನ ಗ್ರಂಥವನ್ನೂ ಕೊಟ್ಟು ಅದರ ಬರಹವೊಂದನ್ನೂ ಬಳಸಿಕೊಳ್ಳುವಂತೆ ನಾಡಿಗೇರರನ್ನು ವಿನಂತಿಸಿಕೊಂಡಿದ್ದೆ. ಮರುದಿನವೇ ’ವಿಜಯ ಕರ್ನಾಟಕ’ದಲ್ಲಿ ಚಡಗರ ನಿಧನದ ಸುದ್ದಿಯೊಡನೆ ನನ್ನ ಲೇಖನ ಮತ್ತು ಅಭಿನಂದನ ಗ್ರಂಥದಲ್ಲಿನ ವ್ಯಾಸರಾಯ ಬಲ್ಲಾಳರ ಲೇಖನ ಇವಿಷ್ಟೂ ಪ್ರಕಟವಾದವು. ಬೇರೆ ಪತ್ರಿಕೆಗಳ ಬಗ್ಗೆ ಹೇಳದಿರುವುದೊಳ್ಳೆಯದು.

ಕಾದಂಬರಿಯಾದಿಯಾಗಿ ವಿವಿಧ ಪ್ರಕಾರಗಳಲ್ಲಿ ಅನೇಕ ಕೃತಿಗಳನ್ನು ರಚಿಸಿದ, ಸಂಪಾದಿಸಿದ ಮತ್ತು ಕನ್ನಡ ನಾಡು ನುಡಿಗಾಗಿ ತಮ್ಮ ಆಯುಷ್ಯವನ್ನೆಲ್ಲ ಸವೆಸಿದ ಹಿರಿಯ ಚೇತನವೊಂದನ್ನು ನಮ್ಮ ಮಾಧ್ಯಮಗಳು (’ವಿಜಯ ಕರ್ನಾಟಕ’ ಹೊರತುಪಡಿಸಿ) ಎಷ್ಟರಮಟ್ಟಿಗೆ ಗುರುತಿಸಿದವು ಎಂಬುದನ್ನು ನೆನೆದಾಗ ಬಲು ಬೇಸರವಾಗುತ್ತದೆ.

ಐಶ್ವರ್ಯಾ ರೈ ಮದುವೆ ಅಟೆಂಡ್ ಮಾಡುತ್ತೀರಾ ಎಂದು ವಿವೇಕ್ ಓಬೇರಾಯ್ ಗೆ ಕೇಳಿದ್ದು…..

ಪ್ರೆಸೆನ್ಸ್ ಆಫ್ ಮೈಂಡ್ ಹಾಗೂ ಧೈರ್ಯ ಇವೆರಡೂ ಪತ್ರಕರ್ತನಿಗಿರಬೇಕಾದ ಅತ್ಯಗತ್ಯ ಗುಣಗಳಲ್ಲಿ ಪ್ರಮುಖವಾದವು. ಇವೆರಡರಲ್ಲಿ ಒಂದು ಕೈಕೊಟ್ಟರೂ ಎಡವಟ್ಟುಭಟ್ಟನಾಗುವುದು ಖಚಿತ. ಯಾಕೆಂದರೆ ಪ್ರೆಸೆನ್ಸ್ ಆಫ್ ಮೈಂಡ್ ಯಾವಾಗಲೂ ಧೈರ್ಯವನ್ನು ಬಯಸುತ್ತದೆ. ಧೈರ್ಯ ರಹಿತ ಪ್ರೆಸೆನ್ಸ್ ಆಫ್ ಮೈಂಡ್ ಮೊಬೈಲ್ ಇಲ್ಲದ ಸಿಮ್ ಹಾಗೆ ( ಹ್ಹೆ..ಹ್ಹೆ….ವಾಕ್ಯ ಕ್ಲಿಷೆ ಎನಿಸಿತೆ?)

ರಾಮಚಂದ್ರಾಪುರಮಠದಲ್ಲಿ ಪ್ರಪ್ರಥಮ ವಿಶ್ವಗೋಸಮ್ಮೇಳನದ ಸಂದರ್ಭ. ಬೆಂಗಳೂರಿನಿಂದ ನಾನು ಹಾಗೂ ಕ್ಯಾಮರಾಮನ್ ಕೊಂಡಯ್ಯ ಸಮ್ಮೇಳನದ ಕವರೇಜ್ ಗೆ ಹೋಗಿದ್ದವು. ಹಲವು ವಿಶಿಷ್ಟ ಭಾರತೀಯ ಗೋತಳಿಗಳು, ಅವುಗಳನ್ನು ವರ್ಣಿಸಲು ಬರುವವರಿದ್ದ ವಿದೇಶಿ ಗೋತಜ್ಞರು, ಗೋವಿನಂತೆ ಕಾಣುವ ಆದರೆ ಒಂದಿಷ್ಟೂ ಅದರ ಗುಣವನ್ನು ಹೊಂದಿರದ ರಾಜ್ಯದ ರಾಜಕಾರಣಿಗಳು, ಹಿರಿ,ಕಿರಿ, ಕಿರಿಕಿರಿ, ಪಿರಿಪಿರಿ ಮಠಾಧೀಶರು, ಲಕ್ಷಾಂತರ ಭಕ್ತರು ಹೀಗೆ ಹಲವರು ಪಾಲ್ಗೊಳ್ಳಲಿದ್ದ ಸಮ್ಮೇಳನವಾಗಿತ್ತು ಅದು. ನಾನು ಹಾಗೂ ಕೊಂಡಯ್ಯ ಒಂದು ದಿನ ಮುಂಚಿತವಾಗಿಯೇ ಮಠ ಸೇರಿಕೊಂಡಿದ್ದೆವು. ಸಮ್ಮೇಳನದ ಪ್ರಿಪರೇಷನ್ ಎಂದು, ನಾನಾಗಲೇ ಭಾರತೀಯ ಗೋತಳಿಗಳ ಹೆಸರುಗಳು, ಯಾವ ತಳಿ ಯಾವ  ರಾಜ್ಯಕ್ಕೆ ಸೇರಿದ್ದು, ಯಾವ ತಳಿ ಎಷ್ಟು ಹಾಲು ಕೊಡುತ್ತದೆ ಇತ್ಯಾದಿ ಎಲ್ಲವನ್ನೂ ಕಂಠಪಾಠ ಮಾಡಿಕೊಂಡು ಫುಲ್ ಆತ್ಮವಿಶ್ವಾಸದಿಂದ ಸಮ್ಮೇಳನವನ್ನು ಕವರ್ ಮಾಡಲು ಸಿದ್ಧನಾಗಿದ್ದೆ.

ಆದರೆ ಇದೇನಿದು, ಗೋ ಸಮ್ಮೇಳನದ ಮಧ್ಯದಲ್ಲಿ ‘ಹೋರಿ’ಯೊಂದು ಬಂದುಬಿಟ್ಟಿತ್ತು. ಹೋರಿಯಷ್ಟೇ ಅಲ್ಲ ಅದರ ಅಪ್ಪ ಕೂಡ ಬಂದಿದ್ದರು. ಖ್ಯಾತ ಬಾಲಿವುಡ್ ನಟ ವಿವೇಕ್ ಓಬೇರಾಯ್, ಆತನ ತಂದೆ ಸುರೇಶ್ ಓಬೇರಾಯ್ ಗೋಸಮ್ಮೇಳನಕ್ಕಾಗಿ ಬಂದಿದ್ದರು. ವಿವೇಕ್ ಓಬೇರಾಯ್ ಹಾಗೂ ಗೋವಿನ ಮಧ್ಯೆ ನನಗೆ ಯಾವ ಸಂಬಂಧವೂ ಕಾಣಿಸಲಿಲ್ಲ. ನಾನು ಚಕಿತನಾಗಿಬಿಟ್ಟೆ. ಆದರೆ ಸುರೇಶ್ ಓಬೇರಾಯ್ ರಾಮಚಂದ್ರಾಪುರಮಠದ ಸ್ವಾಮಿ ರಾಘವೇಶ್ವರರ ಭಕ್ತರು, ಹೀಗಾಗಿ ಕುಟುಂಬ ಸಮೇತ ಬಂದಿದ್ದಾರೆ ಎಂದು ತಿಳಿಯಿತು.

ಮಠದ ವಿವಿಧೆಡೆಗಳಲ್ಲಿ ಪೂಜೆಗಳು ನಡೆಯುತ್ತಿದ್ದವು. ಸ್ವಾಮಿಗಳ ಜೊತೆ, ಸುರೇಶ್ ಹಾಗೂ ವಿವೇಕ್ ಮತ್ತು ಆತನ ತಾಯಿ ಕೂಡ ಹೋಗುತ್ತಿದ್ದರು. ನಾನೂ ಸಹ ಕ್ಯಾಮೆರಾದೊಡನೆ ಹಿಂಬಾಲಿಸುತ್ತಿದ್ದೆ. ಸರಿಯಾದ ಟೈಮ್ ಗೆ ಬೈಟ್ ತೆಗೆದುಕೊಳ್ಳಲು ಅವಕಾಶ ಹುಡುಕುತ್ತಿದ್ದೆ. ವಿವೇಕ್ ಓಬೆರಾಯ್ ಆಕಳ ಮೈಸವರುವುದು, ಎತ್ತಿನಗಾಡಿ ಹೊಡೆಯುವುದು ಹೀಗೆ ಎಲ್ಲ ಶಾಟ್ಸ್ ಗಳನ್ನು ಆಗಲೇ ಕೊಂಡಯ್ಯ ತೆಗೆದುಕೊಂಡಿದ್ದರು.

ಇನ್ನೇನು ಮಂದಿರವೊಂದರಿಂದ ವಿವೇಕ್ ಹೊರಬರಲು ಕೆಲವೇ ಕ್ಷಣಗಳು ಬಾಕಿಯಿದ್ದವು. ನಾನು ಯಾವ ಯಾವ ಪ್ರಶ್ನೆಗಳನ್ನು ಕೇಳಬೇಕು ಎಂದು ಮನಸ್ಸಿನಲ್ಲಿ ಯೋಚಿಸುತ್ತಿದ್ದೆ. ಆಗಲೇ ಹೊಳೆದಿದ್ದು, ಅಂದು ಐಶ್ವರ್ಯಾ ರೈ ಹಾಗೂ ಅಭಿಷೇಕ್ ವಿವಾಹ ಕೂಡ ನಡೆಯುವುದಿತ್ತು. ನಿಮಗೆ ಗೊತ್ತಿರುವಂತೆ ‘ಆಜ್ ತಕ್’ ನ ‘ಸೀಧಿ ಬಾತ್’ ನಲ್ಲಿ ಪ್ರಭು ಚಾವ್ಲಾ ಜೊತೆ ಮಾತನಾಡುವಾಗ ತಾನು ಐಶ್ವರ್ಯಳನ್ನು ಮದುವೆಯಾಗುವುದಾಗಿ ವಿವೇಕ್ ಹೇಳಿ, ಬಾಲಿವುಡ್ ನಲ್ಲಿ ಭಾರೀ ಗದ್ದಲವೆಬ್ಬಿಸಿದ್ದ.

ಅಷ್ಟರಲ್ಲಿ ನನಗೆ ದ್ವಂದ್ವಕಿಟ್ಟುಕೊಂಡಿತು. ಐಶ್ವರ್ಯ ಕುರಿತಾದ ಪ್ರಶ್ನೆ ಕೇಳಲೋ ಬೇಡವೋ, ಕಾರ್ಯಕ್ರಮ ಗೋವಿಗೆ ಸಂಬಂಧಿಸಿದ್ದು, ಅಲ್ಲಿ ಯಾಕೆ ವೈಯುಕ್ತಿಕ ವಿಚಾರಗಳನ್ನು ಕೇಳುವುದು, ಇಲ್ಲ ಇಲ್ಲ ನಾನು ಪತ್ರಕರ್ತ ಕೇಳಲೇಬೇಕು, ಬೇಡ ಬೇಡ ಆತ ಸಿಟ್ಟುಗೊಂಡರೆ ಏನು ಮಾಡವುದು, ಅಥವಾ ಆತ ನನ್ನ ಪ್ರಶ್ನೆಗೆ ಬೇಸರಗೊಂಡು, ಮಠದ ಭಕ್ತರು ನನ್ನ ಮೇಲೆ ಬೇಸರಗೊಂಡರೆ, ಮುಂದಿನ ನಾಲ್ಕು ದಿನಗಳ ಕಾಲ ನನ್ನ ಕಥೆ ಅಷ್ಟೇ, ಬೇರೆ ಚ್ಯಾನಲ್ ನವರು ಯಾರೂ ಇಲ್ಲ, ಆತ ಮಾತನಾಡಿದರೂ ಸುದ್ದಿ, ಸುಮ್ಮನಿದ್ದರೂ ಸುದ್ದಿ,..,,ಹೀಗೆ ಐಶ್ವರ್ಯ ರೈ ವಿಷಯ ಕೇಳುವುದೋ ಬೇಡವೋ ಎಂಬ ಭಯಂಕರ ದ್ವಂದ್ವಕ್ಕೆ ಸಿಕ್ಕಿಬಿಟ್ಟೆ. ನಾನು ನಿರ್ಧರಿಸುವಷ್ಟರಲ್ಲಿ ವಿವೇಕ್ ತನ್ನಪ್ಪನೊಡನೆ ಹೊರಗೆ ಬಂದೇ ಬಿಟ್ಟ.

ತಕ್ಷಣ ಮೈಕ್ ಹಿಡಿದು, “ವಿವೇಕ್, ಆಪ್ ಗೋ ಸಮ್ಮೇಲನ್ ಆಯೆ ಹುವೆ ಹೈ. ವಜಹ್ ಕ್ಯಾ ಹೈ?” ಎಂದು ಮೊದಲು ವಾರ್ಮ್ ಅಪ್ ಪ್ರಶ್ನೆ ತೂರಿದೆ. ವಿವೇಕ್ ನಗುನಗುತ್ತಲೇ ತುಂಬ ಸಂತೋಷದಿಂದ ಉತ್ತರ ನೀಡಿದ. ಗೋವಿಗೆ ಸಂಬಂಧಿಸಿದ ಎರಡು ಮೂರು ಪ್ರಶ್ನೆಗಳಾದವು. ಆತ ಏನು ಉತ್ತರ ಕೊಡುತ್ತಿದ್ದಾನೆ ಎಂಬುದರತ್ತ ನನ್ನ ಗಮನ ಒಂಚೂರು ಇರಲಿಲ್ಲ…..ನನ್ನ ತಲೆಯಲ್ಲಿ ಏನಿದ್ದರೂ ಐಶ್ವರ್ಯಳೇ ಸುತ್ತುತ್ತಿದ್ದಳು.

ಅಷ್ಟರಲ್ಲಿ ರಾಘವೇಶ್ವರರು ಹೊರಬಂದು ಮತ್ತೊಂದು ದೇವಸ್ಥಾನಕ್ಕೆ ತೆರಳಿದರು. ವಿವೇಕ್ ಕೂಡ ಹೊರಡುವಂತೆ ಆತನ ಅಪ್ಪ ಆಗಿನಿಂದಲೂ ಆತನ ಹಿಂದೆ ನಿಂತು ಆಗ್ರಹಪಡಿಸುತ್ತಲೇ ಇದ್ದರು. ಬಹುಶಃ ಮಗನನ್ನು ಮೀಡಿಯಾದಿಂದ ದೂರವಿರಿಸುವುದು ಸುರೇಶ್ ಉದ್ದೇಶವಾಗಿತ್ತು. ಇನ್ನೇನು ವಿವೇಕ್ ಅಲ್ಲಿಂದ ತೆರಳಬೇಕು ಅಷ್ಟರಲ್ಲಿ ನಾನು,

“ವಿವೇಕ್, ಐಶ್ವರ್ಯಾ ಕಿ ಶಾದೀ ಮೇ ನಹೀಂ ಜಾಯೆಂಗೆ?” ಅಂತ ಕೇಳಿಯೇ ಬಿಟ್ಟೆ.

ವಿವೇಕ್ ನನ್ನು ತಳ್ಳಿದ ಅವರಪ್ಪ ಸುರೇಶ್ ಮುಂದೆ ಬಂದವರೇ “ದೇಖೋ ಐಸೆ ಫಾಲ್ತು ಸವಾಲೊಂಕೆ ಲಿಯೆ ಹಮಾರೆ ಪಾಸ್ ಟೈಮ್ ನಹೀಂ ಹೈ….ಜೋ ಕುಛ್ ಭೀ ಪೂಛನಾ ಹೈ ವೋ ಗೋಮಾತಾ ಕೆ ಬಾರೇ ಮೇಂ ಪೂಛೋ….ಢಂ…ಢಂ….ಢುಸ್..ಢುಸ್…”ಎನ್ನುತ್ತ ಹೋಗಿಬಿಟ್ಟರು. ಅಷ್ಟೇ ಸಾಕಾಗಿತ್ತು ನನಗೆ. ಸೀದಾ ಹೈದ್ರಾಬಾದಿಗೆ ಫೋನಾಯಿಸಿ ಹಿಂಗಿಂಗೆ ಹಿಂಗಿಂಗೆ, ಕ್ಯಾಸೆಟ್ ಇಷ್ಟು ಗಂಟೆಗೆ ಶಿವಮೊಗ್ಗ, ನಿಮಗೆ ವಿಶುವಲ್ ಇಷ್ಟೊತ್ತಿಗೆ ಸಿಗುತ್ತೆ ಅಂತ ಫೋನ್ ಮಾಡಿದೆ.

ಅಷ್ಟರಲ್ಲಿ ಮೋಹನ್ ಸರ್ ಫೋನ್ ಬಂತು. “ಏನು ಹೇಳಿದ ವಿವೇಕ್ ಓಬೇರಾಯ್?” ಸರ್ ಕೇಳಿದರು.

ನಾನು ಗೋವಿನ ಬಗ್ಗೆ ಹೇಳಲು ಶುರುಮಾಡುತ್ತಿದ್ದಂತೆ “ಅದಲ್ಲ ಸುಘೋಷ್, ಐಶ್ವರ್ಯ ಬಗ್ಗೆ ಏನು ಹೇಳಿದ?” ಎಂದು ಕೇಳಿದರು. ನಾನು ನೆಡೆದುದೆಲ್ಲವನ್ನೂ ಹೇಳಿದೆ. “ಸರಿ” ಎಂದು ಫೋನ್ ಕಟ್ ಮಾಡಿದರು. ಮರುಕ್ಷಣ ನನ್ನ ಮೊಬೈಲ್ ನಲ್ಲಿ ‘ಗುಡ್’ ಎಂಬ ಅವರ ಎಸ್ ಎಂ ಎಸ್ ನನ್ನನ್ನು ಉಬ್ಬುವಂತೆ ಮಾಡಿತ್ತು.

ಈ ಟಿವಿ ಕನ್ನಡದ ರಾತ್ರಿಯ 08.30 ರ ಪ್ರೈಮ್ ಬುಲೆಟಿನ್ ಹಾಗೂ ನಮ್ಮ ಇತರ 12 ನೆಟ್ ವರ್ಕ್ ಚ್ಯಾನಲ್ ಗಳಲ್ಲಿ ನಮ್ಮದು ಎಕ್ಸ್ ಕ್ಲೂಸಿವ್ ನ್ಯೂಸ್ ಟೆಲಿಕಾಸ್ಟ್ ಆಗುತ್ತಿದ್ದರೆ, ಉಳಿದ ಚ್ಯಾನಲ್ ಗಳಲ್ಲಿ ಅದೇ ಐಶ್ವರ್ಯ-ಅಭಿ ಮದುವೆ ನಡೆದ ಕಟ್ಟಡದ ಎಸ್ಟಾಬ್ಲಿಶ್ಮೆಂಟ್ ಶಾಟ್ ಬರುತ್ತಿತ್ತು.

ಇಂದಿಗೂ ನನಗೆ ಅನಿಸುತ್ತದೆ. ಒಂದು ವೇಳೆ ಆ ಪ್ರಶ್ನೆಯನ್ನು ನಾನು ಕೇಳದೆ ಹೋಗಿದ್ದರೆ ನಾನೆಂತಹ ತಪ್ಪು ಮಾಡಿಬಿಡುತ್ತಿದ್ದೆ ಎಂದು. ಏನೇ ಆಗಲಿ ಧೈರ್ಯಂ ಸರ್ವತ್ರ ಸಾಧನಂ….