ಐಶ್ವರ್ಯ ರೈ – ವಿವೇಕ್ ಲೇಖನಕ್ಕೆ ಸುಘೋಷ್ ಪಾಯಿಂಟ್ ಆಫ್ ವ್ಯೂ….

ಆತ್ಮೀಯರೆ,

ಟೆಂಪರೇಚರ್ ಸಕತ್ ಏರಿಬಿಟ್ಟಿದೆ! ಸಿಕ್ಕಾಪಟ್ಟೆ ಸೆಕೆ! ಬೇಸಿಗೆ ಎಂಬುದು ಬೆಂಗಳೂರಿಗೂ, ನನ್ನ ಬ್ಲಾಗಿಗೂ ಒಂದೇ ಸಮಯಕ್ಕೆ ದಾಳಿಯಿಟ್ಟಂತೆ ತೋರುತ್ತಿದೆ. ಬೆಂಗಳೂರಿನಲ್ಲಿ ಬೇಸಿಗೆ ತನ್ನದೇ ಧಾಂಗುಡಿಯಿಡುತ್ತಿದ್ದರೆ, ನನ್ನ ಬ್ಲಾಗ್ ನಲ್ಲಿ ಕೂಡ ನನ್ನ ತಲೆ ಮೊಟುಕಲು, ನನಗೆ ಗುಡ್ ಬೈ ಹೇಳುವಷ್ಟರ ಮಟ್ಟಿಗೆ ಟೆಂಪರೇಚರ್ ಏರಿಬಿಟ್ಟಿದೆ. ಆದರೆ……….

“ವಸಂತಕಾಲ ಬಂದಾಗ ಮಾವು ಚಿಗುರಲೇ ಬೇಕು…..ಕೋಗಿಲೆ ಹಾಡಲೇ ಬೇಕು…..”

ಯುಗಾದಿ ಬರುತ್ತಿದ್ದು, ವಸಂತಕಾಲ ಬಂದು ಮಾವಲ್ಲಿ ಹೂವು ಮೂಡಿದರೆ ಸಾಕೆ? ನನ್ನ ಬ್ಲಾಗಲ್ಲಿ ಸಿಹಿ ಚಿಗುರಬೇಡವೆ?

ನಾನು ಬ್ಲಾಗ್ ಆರಂಭಿಸಿದಾಗಿನಿಂದ ಅತೀ ಹೆಚ್ಚು ಕಮೆಂಟ್ ಗಳು ಬಂದಿದ್ದು ಐಶ್ವರ್ಯಾ-ವಿವೇಕ್ ಲೇಖನಕ್ಕೆ. (ಅದನ್ನು ವಿರೋಧಿಸಿ L) ಆದರೆ ನನಗೆ ತೃಪ್ತಿ ಕೊಟ್ಟ ವಿಚಾರವೆಂದರೆ ನನ್ನ ಲೇಖನವನ್ನು ವಿರೋಧಿಸಿದವರು ವಿಷಯಕ್ಕೆ ಸೀಮಿತವಾಗಿ ಅದನ್ನು ಆಕ್ಷೇಪಿಸಿ, ಅದಕ್ಕೆ ಕಾರಣಗಳನ್ನು ಕೊಟ್ಟಿರುವುದು. ವಿರೋಧಿಸುವ ಭರದಲ್ಲಿ ವೈಯುಕ್ತಿಕ ನಿಂದನೆಗಿಳಿದು, ಕೆಟ್ಟ ಶಬ್ದಗಳನ್ನು ಬಳಸಿ, ಇಡೀ ಬ್ಲಾಗ್ ಲೋಕವನ್ನೇ ಹೊಲಸು ಹಿಡಿಸಿ, ಇದರಿಂದ ಬೇಸತ್ತು ಹಲವರು ತಮ್ಮ ಬ್ಲಾಗ್ ಅನ್ನು ಶಾಶ್ವತವಾಗಿ ಡಿಲೀಟ್ ಮಾಡಿ ಬ್ಲಾಗ್ ಲೋಕಕ್ಕೆ ವಿದಾಯ ಹೇಳಿರುವ ಘಟನೆಗಳು ನಮ್ಮೆದುರಿಗಿರುವಾಗ, ನನ್ನ ಬ್ಲಾಗ್ ನಲ್ಲಿ ಈ ರೀತಿಯ ಸಂವಾದ ನಡೆದಿರುವುದು ನನಗೆ ತೃಪ್ತಿ ತಂದಿದೆ.

ಈ ನನ್ನ ಅಭಿಪ್ರಾಯದ (ವಾದವಲ್ಲ) ಉದ್ದೇಶವನ್ನು ಮೊದಲೇ ಹೇಳಿಬಿಡುತ್ತೇನೆ. ಇದನ್ನು ಬರೆದು, “ನಾನು ಮಾಡಿದ್ದೇ ಸರಿ. ನೀವು ಹೇಳುತ್ತಿರುವುದು ಹಂಡ್ರೆಡ್ ಪರ್ಸೆಂಟ್ ತಪ್ಪು, ನನ್ನ ಅಭಿಪ್ರಾಯವನ್ನು ನೀವು ಒಪ್ಪಿಕೊಳ್ಳಲೇಬೇಕು, ಹೌ ಡೇರ್ ಯೂ ಡಿಫರ್ ಮೈ ಓಪಿನಿಯನ್?” ಎಂದು ಹೇಳುವುದು ಖಂಡಿತ ಅಲ್ಲ. ಬದಲಾಗಿ ಅಂದು ನಾನು ಈಟಿವಿ ಪತ್ರಕರ್ತನಾಗಿದ್ದಾಗಿನ ಪರಸ್ಥಿತಿ, ಈಟಿವಿಯ ಸುವರ್ಣಕಾಲದಲ್ಲಿದ್ದ ವಾತಾವರಣ, ಪತ್ರಕರ್ತನಾಗಿ ನನ್ನ ಪಾಯಿಂಟ್ ಆಫ್ ವ್ಯೂ ಅನ್ನು ನಿಮ್ಮೆದುರಿಗೆ ಪ್ರಸ್ತುತಪಡಿಸುವುದಷ್ಟೇ ಆಗಿದೆ. ಮತ್ತೆ ಸ್ಪಷ್ಟಪಡಿಸುತ್ತೇನೆ. ಇದು ನನ್ನ ಪಾಯಿಂಟ್ ಆಫ್ ವ್ಯೂ.

ನನ್ನ ಪಾಯಿಂಟ್ ಆಫ್ ವ್ಯೂ ನಿಮ್ಮದೂ ಆಗಿರಬೇಕು ಎಂಬ ನಿಯಮವೇನಿಲ್ಲ ಎಂಬುದು ನಿಮಗೂ ಗೊತ್ತಿದೆ. ಮತ್ತೆ ಹಾಗೆ ಇಬ್ಬರೂ ಒಂದೇ ಪಾಯಿಂಟ್ ಆಪ್ ವ್ಯೂನವರಾಗಿ ಬಿಟ್ಟರೆ ಬಂಗಾರದ ಶೂಲಕ್ಕೆ ಏರಬೇಕಾದೀತು. (ಹೊಗಳಿ ಹೊಗಳಿ ಎನ್ನ ಹೊನ್ನಶೂಲಕ್ಕೇರಿಸುವರಯ್ಯಾ…) ಈಗ ವಿಷಯಕ್ಕೆ ಬರೋಣ.

ನನ್ನ ಪಾಯಿಂಟ್ ಆಫ್ ವ್ಯೂ ಅನ್ನು ಹೇಳುವ ಮೊದಲು ನಿಮಗೊಂದು ಚಿಕ್ಕಕತೆ ಹೇಳುತ್ತೇನೆ. ನಮ್ಮೂರಲ್ಲಿ ಅಂದಕಾಲತ್ತಿಲ್ ನಡೆದದ್ದು. ಊರಿಗೆ ನಾಟಕ ಕಂಪನಿ ಬಂದಿತ್ತು. ಒಂದು ಪೌರಾಣಿಕ ಹಾಗೂ ಎರಡು ಸಾಮಾಜಿಕ ನಾಟಕಗಳನ್ನು ಅದು ಪ್ರದರ್ಶಿಸುತ್ತಿತ್ತು. ಕಂಪನಿ ಬಂದ ಎರಡು ವಾರಗಳ ಕಾಲ ಪ್ರದರ್ಶನ ಚೆನ್ನಾಗಿಯೇ ನಡೆಯಿತು. ಆದರೆ ಮುಂದಿನ ವಾರದಿಂದ ಪೌರಾಣಿಕ ನಾಟಕಕ್ಕೆ ಜನರೇ ಬರುತ್ತಿಲ್ಲ. ಸಾಮಾಜಿಕ ನಾಟಕಗಳು ಮಾತ್ರ ಎಂದಿನಂತೆ ಫುಲ್ ಹೌಸ್. ಮಾಲೀಕ ತುಂಬ ತಲೆಕೆಡಿಸಿಕೊಂಡ. ಎಷ್ಟು ಯೋಚಿಸಿದರೂ ಇದರ ಕಾರಣ ಹೊಳೆಯಲಿಲ್ಲ. ನಂತರ ಗೊತ್ತಾಗಿದ್ದೇನೆಂದರೆ ಹನುಮಂತನ ಪಾರ್ಟ್ ಮಾಡುವ ಪಾತ್ರಧಾರಿ, ನಾಟಕದಲ್ಲಿ ತನ್ನ ಎಕ್ಸಿಟ್ ಆದಮೇಲೆ ಸೈಡ್ ವಿಂಗ್ ನಲ್ಲಿ ಬಂದು ಬೀಡಿ ಸೇದುತ್ತಿದ್ದನಂತೆ. ಅದೇ ಹನುಮಂತನ ಕಾಸ್ಟ್ಯೂಮ್ ನಲ್ಲಿ! ಗಾಳಿ ಬಂದರೆ ಹಾರಿಹೋಗುವ ಸೈಡ್ ವಿಂಗ್ ಅವು. ಜನರಿಗೆ ಸ್ಟೇಜ್ ಮೇಲಿನ ನಾಟಕಕ್ಕಿಂತ ಸೈಡ್ ವಿಂಗ್ ನಲ್ಲಿ ಹನುಮಂತ ಬೀಡಿ ಸೇದುತ್ತಿದ್ದುದು ನೀಟಾಗಿ ಕಾಣಿಸಿದೆ. ಹನುಮಂತ ಬೀಡಿ ಸೇದುವ ವಿಷಯ ಊರೆಲ್ಲ ಗೊತ್ತಾಗಿದೆ. ಅಷ್ಟೇ…ಬೀಡಿ ಸೇದುವ ಹನುಮಂತನ ಕಾರಣದಿಂದಾಗಿ ಪೌರಾಣಿಕ ನಾಟಕದ ಶೋವನ್ನೇ ಕೊನೆಗೆ ನಿಲ್ಲಿಸಲಾಯಿತು.

ಈಗ ನನ್ನ ನನ್ನ ಪಾಯಿಂಟ್ ಆಫ್ ವ್ಯೂ ಹೇಳುವಂತಹವನಾಗುತ್ತೇನೆ. ಆಲಿಸಿಕೊಳ್ಳುವಂತಹವರಾಗಿ.

ಯಾವುದೇ ವ್ಯಕ್ತಿ ಒಮ್ಮೆ ಸಾರ್ವಜನಿಕ ಬದುಕಿಗೆ ಬಂದನೆಂದರೆ ಅಟ್ ಲೀಸ್ಟ್ ಭಾರತದಲ್ಲಿ (ಅದು ಸರಿಯೋ ತಪ್ಪೋ ಬೇರೆ ವಿಚಾರ) ಆತನಿಂದ ಜನ ಖಾಸಗಿ ಬದುಕಿನಲ್ಲಿಯೂ ಅದೇ ರೀತಿಯ ಗುಣಗಳನ್ನು ಅಪೇಕ್ಷಿಸುತ್ತಾರೆ. ಆತ ಹಾಗಿರದಿದ್ದರೂ ಪರವಾಗಿಲ್ಲ ಆದರೆ ‘ಬೀಡಿ ಹನುಮಂತ’ನಾಗಬಾರದೆಂದು ಅಪೇಕ್ಷೆ ಪಡುವುದು ಸಹಜ ಹಾಗೂ ಸರಿ ಕೂಡ. ಸೈಫ್ ಅಲಿ ಖಾನ್, ಪಂಡಿತ್ ಜವಾಹರ ಲಾಲ್ ನೆಹರು, ಯಡಿಯೂರಪ್ಪ, ರೇಣುಕಾಚಾರ್ಯ, ಬಿಲ್ ಕ್ಲಿಂಟನ್, ಜೆ ಎಚ್ ಪಟೇಲ್, ಟೈಗರ್ ವುಡ್ಸ್, ಕುಮಾರಸ್ವಾಮಿ, ಪರಮಹಂಸ ನಿತ್ಯಾನಂದ, ಶೈನಿ ಆಹುಜಾ, ಎನ್ ಡಿ ತಿವಾರಿ, ಹೀಗೆ ಹಲವು ವ್ಯಕ್ತಿಗಳಲ್ಲಿ ನಾವು ಮೆಚ್ಚಿಕೊಳ್ಳುವಂತಹ ಗುಣ ಎಷ್ಟೇ ಇದ್ದರೂ ಅವರ ‘ಆ’ ದೌರ್ಬಲ್ಯಗಳು, ದೋಷಗಳು, ಸಾರ್ವಜನಿಕ ಬದುಕಿನಲ್ಲಿ ಮಾಡಿದ ತಪ್ಪುಗಳು, ಆ ತಪ್ಪುಗಳನ್ನು ನಿರ್ಲಜ್ಜೆಯಿಂದ ಸಮರ್ಥಿಸಿಕೊಂಡು ರೀತಿಗಳು (ಬಿಲ್ ಕ್ಲಿಂಟನ್ ಹಾಗೂ ಟೈಗರ್ ವುಡ್ಸ್ ಹೊರತುಪಡಿಸಿ) ಗಂಟಲ ಮುಳ್ಳಾಗುತ್ತವೆ. ಈ ವ್ಯಕ್ತಿಗಳು ನಾಲ್ಕು ಗೋಡೆಯ ಮಧ್ಯೆ ಏನನ್ನೇ ಮಾಡಿಕೊಳ್ಳಲಿ ಅದು ಅವರ ಖಾಸಗಿ, ವೈಯುಕ್ತಿಕ ಬದುಕಿಗೆ ಬಿಟ್ಟ ವಿಚಾರ. ಅದನ್ನು ಪ್ರಶ್ನಿಸಲು ಹೋಗಬಾರದು. ಆದರೆ ಈ ರೀತಿಯ ಅವಘಡಗಳನ್ನು ಸಾರ್ವಜನಿಕ ಬದುಕಿನಲ್ಲಿ ಮಾಡಿಕೊಳ್ಳುವುದಿದೆಯಲ್ಲ, ಅದು ಆ ವ್ಯಕ್ತಿಯದ್ದಷ್ಟೇ ಅಲ್ಲ, ಆತ ಸಂಬಂಧಪಟ್ಟಿರುವ ಕ್ಷೇತ್ರದ ಮಾನ ಕೂಡ ಕಳೆಯುತ್ತದೆ. ರಾಜಕೀಯ ಹದಗೆಟ್ಟು ಹೋಗಿದೆ, ಚಿತ್ರರಂಗದಲ್ಲಿ ನಟಿ ನಿರ್ಮಾಪಕನ ಜೊತೆ ಜೊತೆ ಮಲಗಬೇಕಂತೆ, ಸಾಹಿತಿಗಳು ಬರೀ ಕುಡುಕರಂತೆ ಇತ್ಯಾದಿ ಮಾತುಗಳು ಹುಟ್ಟುತ್ತವೆ. ಕಾರಣ, ಅವರು ತಮ್ಮ ದೌರ್ಬಲ್ಯಗಳನ್ನು ನಾಲ್ಕು ಗೋಡೆಗೆ ಸೀಮಿತವಾಗಿಡದೆ ಬಹಿರಂಗವಾಗಿ ಮಾಡುತ್ತಾರೆ ಹಾಗೂ ಹಾಗೆ ಮಾಡಿರುವುದನ್ನು ನಿರ್ಲಜ್ಜತೆಯಿಂದ ಸಮರ್ಥಿಸಿಕೊಂಡಿರುತ್ತಾರೆ.

ಇನ್ನು ವಿವೇಕ್ ಓಬೆರಾಯ್ ಪ್ರಕರಣ.

ವಿವೇಕ್, ಐಶ್ವರ್ಯಳನ್ನು ಮದುವೆಯಾಗಲಿ ಅಥವಾ ಗ್ರಾಮೀಣ ಹುಡುಗಿಯನ್ನು ಮದುವೆಯಾಗಲಿ, ಪ್ರೀತಿಸಲಿ. ಇಟ್ಸ್ ಪರ್ಫೆಕ್ಟ್ ಲೀ ಫೈನ್. ನೋ ಪ್ರಾಬ್ಲಂ ಎಟ್ ಆಲ್. ಆದರೆ ತಾನು ಇಂತಿತಹ ಹುಡುಗಿಯನ್ನು ಮದುವೆಯಾಗುತ್ತಿದ್ದೇನೆ ಎಂದು ನೂರು ಕೋಟಿ ಭಾರತೀಯರೆದರು, ಆಜ್ ತಕ್ ನಂತಹ ಚ್ಯಾನಲ್ ಸ್ಟುಡಿಯೋದಲ್ಲಿ, ಪ್ರಭು ಚಾವ್ಲಾರಂತಹ ಹಿರಿಯ ಪತ್ರಕರ್ತರ ಮುಂದೆ ಕುಳಿತು ಹೇಳಬೇಕಾದರೆ, ಆತ ಮದುವೆಯಾಗುತ್ತಿರುವ ಹುಡುಗಿಯನ್ನು ಈ ಬಗ್ಗೆ ಮೊದಲೇ ಕೇಳಿರಬೇಕಾಗಿರುವುದು ಮಿನಿಮಮ್ ಸೌಜನ್ಯ ಹಾಗೂ ಶಿಷ್ಟಾಚಾರ.

ಯಾರಾದರೂ ಐಶ್ವರ್ಯ ರೈ ದೃಷ್ಟಿಯಿಂದ ಯೋಚಿಸಿದ್ದೀರಾ? ಐಶ್ವರ್ಯ ರೈ ಗೆ ವಿವೇಕ್ ಮಾತನ್ನು ಹೀಗೆ ನೇರವಾಗಿ ಟಿವಿಯಲ್ಲಿ ಕೇಳಿ ಎಷ್ಟು ಆಘಾತವಾಗಿರಬಹುದು ಎಂದು. ಮೊದಲೇ ಸಲ್ಮಾನ್ ಖಾನ್ ನ ಕಾಟದಿಂದ ಬೇಸತ್ತಿದ್ದ ಆಕೆಗೆ ಈ ಹೊಸ ಬಾಂಬ್ ಎಷ್ಟು ಘಾಸಿ ಮಾಡಿರಬಹುದು ಎಂದು. ಹೋಗಲಿ ಐಶ್ವರ್ಯ ವಿವೇಕ್ ಗೆ ‘ನಿನ್ನನ್ನು ಪ್ರೀತಿಸುತ್ತಿದ್ದೇನೆ’ ಅಂತಲೇ ಹೇಳಿರಲಿ. ಅದನ್ನು ಅವಳ ಒಪ್ಪಿಗೆ ಪಡೆದ ನಂತರವಷ್ಟೇ ತಾನೆ ಆತ ಮೀಡಿಯಾಕ್ಕೆ ಹೇಳಬೇಕಾಗಿರುವುದು. ಆಗಷ್ಟೇ ಬಾಲಿವುಡ್ ನಲ್ಲಿ ಕಣ್ಣುಬಿಡುತ್ತಿರುವ ಹುಡುಗ, ಅದಾಗಲೇ ವಿಶ್ವಸುಂದರಿ ಪಟ್ಟಪಡೆದು ಖ್ಯಾತ ತಾರೆಯಾಗಿದ್ದವಳನ್ನು ಮದುವೆಯಾಗುತ್ತಿದ್ದಾನೆ ಎಂದು ಹೇಳುವುದು ಪಬ್ಲಿಸಿಟಿ ಸ್ಟಂಟ್ ಅಂತ ಅನ್ನಿಸುವುದಿಲ್ಲವೆ? ತಲೆಯಲ್ಲಿ ಬುದ್ಧಿ, ಹೃದಯಲ್ಲಿ ಸೌಜನ್ಯ, ಮನಸ್ಸಿನಲ್ಲಿ ಆ ಹುಡುಗಿಯ ಬಗ್ಗೆ ನಿಷ್ಕಲ್ಮಷ ಪ್ರೀತಿಯಿರುವ ಯಾವುದೇ ವ್ಯಕ್ತಿಯಾದರೂ ಹೀಗೆ ಮಾಡಲಾರ.

ಅದಾದ ಬಳಿಕ ಐಶ್ವರ್ಯ ರೈ ಳಿಂದ ಈ ಕುರಿತು ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಅಂದರೇನು ಅರ್ಥ? ವಿವೇಕ್ ಹೇಳಿದ್ದು ಶುದ್ಧ ಸುಳ್ಳು ಅಂತ ತಾನೆ? ಹೋಗಲಿ ಅದನ್ನು ತಮಾಷೆಗೆಂದೇ ಹೇಳಿರಬಹುದು. ಆದರೆ “ನಾನು ತಮಾಷೆಗೆ ಹೇಳಿದ್ದು ಇದರಿಂದ ಐಶ್ವರ್ಯಳಿಗೆ ನೋವಾಗಿದ್ದರೆ ಕ್ಷಮಿಸಲಿ” ಎಂದು ಹೇಳುವ ಸೌಜನ್ಯವನ್ನೂ ಆತ ತೋರಲಿಲ್ಲ. ಬದಲಾಗಿ ಪ್ರೆಸ್ ಕಾನ್ಫರೆನ್ಸ್ ಕರೆದವನೇ “ನನಗೆ ಸಲ್ಮಾನ್ ಪೋನ್ ಮಾಡಿ ಬೆದರಿಕೆ ಹಾಕುತ್ತಿದ್ದಾನೆ. ನನ್ನ ಜೊತೆ ಫೈಟ್ ಮಾಡುತ್ತೀನಿ ಅಂತ ಹೇಳುತ್ತಿದ್ದಾನೆ. ಅಪರಾತ್ರಿಯಲ್ಲಿ ಫೋನ್ ಮಾಡಿ ಕೆಟ್ಟ ಶಬ್ದಗಳಿಂದ ನಿಂದಿಸುತ್ತಾನೆ” ಅಂತ ಮೀಡಿಯಾದೆದರು ಗೋಳೋ ಎಂದ. ಗಮನಿಸಿ. ಆತನ ಖಾಸಗಿ ಬದುಕಿಗೆ ತೊಂದರೆ ಆದಾಗ ಮೀಡಿಯಾ ಬೇಕೆಂದ. ಆತ ಇಷ್ಟೆಲ್ಲ ಹೇಳಿದ್ದು ಪ್ರೆಸ್ ಕಾನ್ಫರೆನ್ಸ್ ಮಾಡಿ. ಪ್ಯಾಪಿರಾಝಿಗಳ ಮುಂದಲ್ಲ. ವಿವೇಕ್ ಗೆ ವೈಯುಕ್ತಿಕ ಬದುಕಿನಲ್ಲಿ ಸಂಕಷ್ಟ ಎದುರಾದರೆ ಮೀಡಿಯಾ ಬೇಕಾಗುತ್ತದೆ. ಆದರೆ ಅದೇ ಸುಘೋಷ್, “ಐಶ್ವರ್ಯಾ ಮದುವೆ ಅಟೆಂಡ್ ಮಾಡುತ್ತಿರಾ?” ಅಂತ ಕೇಳಿದಾಗ ಅಪ್ಪನ ಸಹಾಯ ಬೇಕಾಗುತ್ತದೆ. ವಿವೇಕ್ ಏನು ಲಾಲಿಪಾಪ್ ಚೀಪುವ, ತೊದಲು ಮಾತಾಡುವ ಮಗುವೆ? ಹೇಗಿದೆ ನೋಡಿ ವಿಚಿತ್ರ.

ವಿಶ್ವಸುಂದರಿ ಪಟ್ಟಪಡೆದಿರುವ, ಬಾಲಿವುಡ್ ನಲ್ಲಿ ಖ್ಯಾತ ತಾರೆಯಾಗಿರುವ ಹುಡುಗಿಯನ್ನು ಕೇಳದೆ ಹೀಗೆ ಹೇಳಿದ್ದು ನಿಮಗೆ ಸರಿಯೆನಿಸುತ್ತದೆಯೆ? ಇದಕ್ಕೆ ಮುರಿದು ಬಿದ್ದ ಪ್ರೀತಿ-ಮದುವೆ ಅಂತ ಕರೆಯಬೇಕೆ ಅಥವಾ ನಟನೊಬ್ಬನ ಚೀಪ್ ಗಿಮಿಕ್ ಎಂದು ಹೆಸರಿಸುಬಹುದೆ? ಹುಡುಗಿಯನ್ನು ಕೇಳದೆ ನೂರುಕೋಟಿಭಾರತೀಯರೆದರು ಹೀಗೆ ಹೇಳಿಕೆ ಕೊಟ್ಟು ಆಕೆಯ ಮನಸ್ಸಿಗೆ ನೋವುಂಟಮಾಡಿದವನಿಗೆ ಯಾವ ಗೋಮಾತೆ ತಾನೆ ಏನು ಆಶೀರ್ವದಿಸಿಯಾಳು?

ನಾನೇ ನಾಳೆಗೆ ಕಿರುತೆರೆ ನಟಿಯೊಬ್ಬಳ ಹೆಸರು ಹೇಳಿಕೊಂಡು ಅವಳ ಒಪ್ಪಿಗೆ ಪಡೆಯದೇ ಅವಳನ್ನು ಮದುವೆಯಾಗುತ್ತಿದ್ದೇನೆ ಎಂದು ಹೇಳಿಕೆಕೊಟ್ಟರೆ ನೀವು ನನ್ನ ಕತ್ತಿನಪಟ್ಟಿಗೆ ಕೈಹಾಕುವುದಿಲ್ಲವೆ?

ವಿವೇಕ್, ನೀವು ರೀಲ್ ಬದುಕಿನಲ್ಲಿ ವಿಲನ್ ನನ್ನು ಹೊಡೆದು ಹೊಡೆದು ಆತ ಐಶ್ವರ್ಯಳನ್ನು ರೇಪ್ ಮಾಡದಂತೆ ತಡೆಯುತ್ತೀರಿ. ಆದರೆ ರಿಯಲ್ ಲೈಫ್ ನಲ್ಲಿ ಮಾನಸಿಕ ರೇಪ್ ಅನ್ನು ಯಾವುದೇ ಎಗ್ಗಿಲ್ಲದೇ ಮಾಡುತ್ತೀರಿ. ನಾನು ಹಾಗೆ ಕೇಳಿದ್ದು ನಿಮಗೆ ಇಷ್ಟವಾಗಲಿಲ್ಲ ಅಂತಿಟ್ಟುಕೊಳ್ಳಿ. ಏನೂ ಮಾತಾಡದೇ ಸುಮ್ಮನೇ ಹೋಗಬಹುದಿತ್ತು. ಅಥವಾ ನೋ ಕಮೆಂಟ್ಸ್ ಅನ್ನಬಹುದಿತ್ತು. ಅದು ಬಿಟ್ಟು ‘ಐಸೇ ಫಾಲ್ತು ಸವಾಲ್ ಮತ್ ಪೂಛೋ’ ಅಂತ ಅಪ್ಪನಿಂದ ಸಲಹೆ ಕೊಡಿಸುವ ಅಧಿಕಾರ ನಿಮಗಾರು ಕೊಟ್ಟವರು ವಿವೇಕ್? ನಿಮ್ಮ ನಾಲಿಗೆ ಹಾಗೂ ಅಪ್ಪ ಇಬ್ಬರೂ ನಿಯಂತ್ರಣ ತಪ್ಪಿದವರಂತೆ ಆಡಿದ್ದು ಯಾಕೆ? ಯಾಕೆಂದರೆ ಸತ್ಯ ಯಾವಾಗಲೂ ಸಿಟ್ಟುತರಿಸುತ್ತದೆ. “ಇದ್ದದ್ ಇದ್ದಂಗ್ ಹೇಳಿದ್ರ ಎದ್ ಬಂದ್ ಎದಿಗ್ ವದ್ರಂತ” ಅಂತ ನಮ್ಮ ಕಡೆ ಮಾತಿದೆ. ಹಾಗಾಯಿತು ಸುರೇಶ್ ಕತೆ. “ದೇಖಿಯೇ ವೋ ಮಸಲಾ ಹಲ್ ಹೋ ಚುಕಾ ಹೈ. ಮೆರಾ ಬೇಟಾ ಉಸಕೇ ಬಾರೇ ಮೇ ಕುಛ ನಹೀ ಬೋಲನಾ ಚಹತಾ. ಉಸೆ ಅಕೇಲಾ ಛೋಡ್ ದೀಜಿಯೆ” ಅಂತ ಹೇಳಿದ್ದರೆ ನಾನೇನು ಹುಡುಕಿಕೊಂಡು ಹೋಗಿ ಮೈಕ್ ಹಿಡಿಯುತ್ತಿರಲ್ಲ.

ಇನ್ನು ನಾನು ಪ್ರಶ್ನೆ ಕೇಳದೆ ಸುಮ್ಮನಿರದಿದ್ದರೆ ಏನಾಗುತ್ತಿತ್ತು ಏನೂ ಆಗುತ್ತಿರಲಿಲ್ಲ. ವಿವೇಕ್ ಹಾಗೂ ಆತನ ಹಾಗೆ ಇರುವ ಇತರರು ನಾಳೆಗೆ ಕರೀನಾ, ಕತ್ರೀನಾ, ರುಕ್ಸಾನಾ, ಅರ್ಜಂಟೀನಾ ಅಂತ ಹೀಗೆ ಆಟವಾಡುತ್ತ ಹೋಗುತ್ತಿರಲಿಲ್ಲವೆ? ನಮ್ಮನ್ನು ಯಾರೋ ಒಬ್ಬರು ಪ್ರಶ್ನಿಸುವವರು ಇದ್ದಾರೆ ಎಂದು ಅರಿವಾದಾಗ ತಾನೆ ವಿ ಮೈಂಡ್ ಅವರ್ ವರ್ಡ್ಸ್. ಅದಕ್ಕೆ ತಾನೆ ಮೀಡಿಯಾದ ಹೆದರಿಕೆ ಅನ್ನುವುದು. ಮೀಡಿಯಾದ ಹೆದರಿಕೆ ಇಲ್ಲದಿದ್ದರೆ ಏನಾಗುತ್ತಿತ್ತು ಊಹಿಸಿ….

ಅಂದು ವಿವೇಕ್ ನನಗೆ ಎಲ್ಲೇ ಸಿಗುತ್ತಿದ್ದರೂ ನಾನು ಆ ಪ್ರಶ್ನೆ ಕೇಳುತ್ತಿದ್ದೆ. ಯಾವ ಸಮಾರಂಭವಿದೆಯೋ ಅದಕ್ಕೆ ಸಂಬಂಧಿಸಿದ ಪ್ರಶ್ನೆ ಮಾತ್ರ ಕೇಳಬೇಕು ಅಂತೇನಾದರೂ ರೂಲ್ ಬಂದರೆ ಟಿವಿ9, ಸುವರ್ಣದ ಪತ್ರಕರ್ತರು ಮೊದಲು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅದರರ್ಥ ಯಾರದೋ ಸಾವಿನ ಮನೆಗೆ ರೇಣಕಾಚಾರ್ಯ ಶ್ರದ್ಧಾಂಜಲಿ ಸಲ್ಲಿಸಲು ಬಂದಾಗ ಜಯಲಕ್ಷ್ಮಿಯ ವಿಚಾರ ಕೇಳಬೇಕು ಅಂತಲ್ಲ.

ಇನ್ನು ನಾನೇ ಪರಿಸ್ಥಿತಿಯಲ್ಲಿದ್ದರೆ ಏನು ಮಾಡುತ್ತಿದ್ದೆ ಎಂಬುದಕ್ಕೆ……ಮೊದಲು ಅಂತಹ ಪರಿಸ್ಥಿತಿಯನ್ನು ನಾನು ತಂದುಕೊಳ್ಳುತ್ತಿರಲಿಲ್ಲ. ತಂದುಕೊಂಡಿದ್ದರೂ ಕೂಡ ಕ್ಷಮೆ ಕೇಳಿ ಪ್ರಕರಣಕ್ಕೆ ಇತಿ ಶ್ರೀ ಹಾಡುತ್ತಿದ್ದೆ. ನನಗೆ ಹಳೆಯ ಗೆಳತಿಯಿದ್ದಾಳೆ ಅಂತ ಹೇಳಿದ್ದೇನೆಯೆ ಹೊರತು, ಆಕೆಯ ಹೆಸರು ಹೆಸರಿಸಿ ನಮ್ಮ ಪ್ರೀತಿಯ ಮರ್ಯಾದೆ ತೆಗೆದಿಲ್ಲ ತಾನೆ?

ಇನ್ನು ಇದು ಪ್ರೆಸೆನ್ಸ್ ಆಪ್ ಮೈಂಡೇ ಎಂಬ ಪ್ರಶ್ನೆ.

ವಿಧಾನಸೌಧದಲ್ಲಿ ಪ್ರತಿನಿತ್ಯ 12 ಗಂಟೆಗೆ ಹಾಗೂ ಸಂಜೆ ನಾಲ್ಕುವರೆ ಗಂಟೆಗೆ ಖ್ಯಾತ ಪತ್ರಕರ್ತರೆಲ್ಲರೂ ರೌಂಡ್ಸ್ ಗೆ ಹೋಗುತ್ತಾರೆ. ಅದು ಹಿಂದಿನಿಂದಲೂ ನಡೆದುಕೊಂಡ ಬಂದ ಪದ್ಧತಿ. ಮೂರನೇ ಮಹಡಿಯಿಂದ ಸುಮಾರು 25-30 ಪತ್ರಕರ್ತರು ಸಚಿವರನ್ನು, ಅಧಿಕಾರಿಗಳನ್ನು ಭೇಟಿಯಾಗಿ ಅವರವರ ಇಲಾಖೆಯಲ್ಲಿ ಏನು ನಡೆಯುತ್ತಿದೆ, ಏನು ಡೆವಲಪ್ಮೆಂಟ್ ಮುಂತಾದವುಗಳನ್ನು ಕೇಳುತ್ತಾರೆ. ಆಗ ಬರುವ ಪ್ರಶ್ನೆಗಳು ಯಾವುವು, ಅವನ್ನು ಹೇಗೆ ಕೇಳಲಾಗುತ್ತದೆ, ಕೆಲವು ಪ್ರಶ್ನೆಗಳು ಬರಬಾರದು ಎಂದು ಸಚಿವರ ರೂಂ ಪ್ರವೇಶಿಸುವಾಗ ಹೇಗೆ ಎನ್ವಲಪ್ ಗಳು ಪತ್ರಕರ್ತರ ಕೈಸೇರುತ್ತವೆ, ರಾಜ್ಯದಲ್ಲಿ ಎಷ್ಟು ಜಿಲ್ಲೆಗಳಿವೆ ಎಂದೂ ಗೊತ್ತಿರದ ಮೈಂಡ್ ಇಲ್ಲದ ಪತ್ರಕರ್ತ ಸಚಿವರ ಪ್ರೆಸೆನ್ಸ್ ನಲ್ಲಿ ಪ್ರೆಸೆಂಟ್ ಹೇಗೆ ತೆಗೆದುಕೊಳ್ಳುತ್ತಾನೆ ಎಂಬುದು ಗೊತ್ತಿರುವವರಿಗೆ ನನ್ನದು ಯಾಕೆ ಪ್ರೆಸೆನ್ಸ್ ಆಫ್ ಮೈಂಡ್ ಎಂಬುದು ನೀಟಾಗಿ ತಿಳಿಯುತ್ತದೆ. “ಈ ಕೇಸ್ ನಲ್ಲಿ ಕೋರ್ಟ್ ಏನು ತೀರ್ಪು ಕೊಡಬಹುದು?”, “ಮೊನ್ನೆ ನಿಮ್ಮ ಕಣ್ಣೆದುರೇ ನಿಮ್ಮ ಮಗಳ ರೇಪ್ ಆಯಿತಲ್ಲ ಆಗ ನಿಮಗೇನೆನ್ನಿಸಿತು?”, (ಕಸ್ತೂರಿ ರಂಗನ್ ಗೆ ಪ್ರೆಸ್ ಕಾನ್ಫರೆನ್ಸ್ ಆರಂಭದಲ್ಲಿ) “ಮೊದ್ಲು ನಿಮ್ಮ ಪರಿಚಯ ಮಾಡಿಕೊಳ್ರೀ” ಇವೆಲ್ಲವೂ ಅಬ್ಸೆನ್ಸ್ ಆಫ್ ಮೈಂಡ್ ಹಾಗೂ ನಾನ್ ಸೆನ್ಸ್ ಆಫ್ ಜರ್ನಲಿಸಂ  ಪ್ರಶ್ನೆಗಳು.

ವಿಶ್ವಗೋಸಮ್ಮೇಳನದ ದಿನದಂದು ಅಲ್ಲಿಗೆ ಉಳಿದ ನ್ಯಾಷನಲ್ ಮೀಡಿಯಾದವರು ಬಂದಿದ್ದರು. ಸಮ್ಮೇಳನ ಕವರ್ ಮಾಡಲು ಅಲ್ಲ, ವಿವೇಕ್ ಗೆ ಇದೇ ಪ್ರಶ್ನೆ ಕೇಳಲು. ಆತ ಸಿಗದಿದ್ದಾಗ ಮಾರನೇ ದಿನವೇ ಅಲ್ಲಿಂದ ಕಾಲ್ಕಿತ್ತದ್ದರು. ಅವರೂ ಅದೇ ಪ್ರಶ್ನೆ ಕೇಳುತ್ತಿದ್ದಾರೆ ಎಂದು ನಾನೂ ಕೇಳುವುದು ಎಷ್ಟು ಸರಿ ಎಂದು ನೀವು ಕೇಳಬಹುದು. ಆದರೆ ನಾನು ಕೇಳಿದ್ದು ಅಧಿಕ ಪ್ರಸಂಗತನದ, ಮೈಂಡ್ ಇಲ್ಲದ, ಧೈರ್ಯ ಅಲ್ಲ ಹುಂಬತನದ ಪ್ರಶ್ನೆಯಾಗಿದ್ದರೆ ನನಗೆ ಅಂದೇ ರಾತ್ರಿ ಈಟಿವಿಯ ಶೋ ಕಾಸ್ ನೋಟಿಸ್ ಬರುತ್ತಿತ್ತು. ಕಾರಣ ಇಷ್ಟೇ…ಅಂದಿಗೂ ಇಂದಿಗೂ ಜರ್ನಲಿಸಮ್ ಎಥಿಕ್ಸ್ ಅಂತೇನಾದರೂ ಇಟ್ಟುಕೊಂಡಿರುವ ಚ್ಯಾನಲ್ ಯಾವಾದರೂ ಇದ್ದರೆ ಅದು ಈಟಿವಿ. ಅದು ಹಂಡ್ರೆಟ್ ಪರ್ಸೆಂಟ್ ಅಂತ ನಾನು ಹೇಳುತ್ತಿಲ್ಲ. ಇದ್ದುದರಲ್ಲಿ ಬೆಟರ್ ಚ್ಯಾನಲ್. ರಾಮೋಜಿರಾಯರು ಈಟಿವಿಯಂತಹ ಬೃಹತ್ ಸಂಸ್ಥೆಯನ್ನು ಕಟ್ಟಿದ್ದು ಐಶ್ವರ್ಯ ರೈ ಅಭಿಷೇಕ್ ರೈಳನ್ನು ಮದುವೆಯಾಗುತ್ತಿದ್ದಾನೆ ಎಂಬ ಬ್ರೇಕಿಂಗ್ ಸ್ಟೋರಿಯನ್ನು ಏರ್ ಮಾಡಿಯೇ ಹೊರತು, ಜಿಲ್ಲಾಧಿಕಾರಿಯ ನಾಯಿ ಕಣ್ಮರೆಯಾಗಿದೆ ಎಂಬ ಸುದ್ದಿ ಫ್ಲಾಶ್ ಮಾಡಿ ಅಲ್ಲ. ಆ ಸುದ್ದಿಯನ್ನು ಹನ್ನೆರಡೂ ಚ್ಯಾನಲ್ ನಲ್ಲಿ ರಾಮೋಜಿರಾಯರೂ ನೋಡಿದ್ದರು. ಅದೇನಾದರೂ ತಪ್ಪು ಎಂದು ಅವರಿಗನಿಸಿದ್ದರೆ, ಈಟಿವಿಯಲ್ಲಿ ಐದು ವರ್ಷ ಬಾಳುವುದು ನನ್ನಿಂದ ಸಾಧ್ಯವಿತ್ತೆ?

ಇನ್ನು ಪ್ರಶ್ನೆ ಕೇಳಿದ್ದ ದಿನ ಐಶ್ವರ್ಯ ರೈ ಳ ಮದುವೆ ನಡೆಯವುದುತಿತ್ತು. ಅವಳನ್ನು ಮದುವೆಯಾಗಲಿದ್ದೇನೆ ಎಂದು ಹೇಳಿದ ವ್ಕಕ್ತಿಯೊಬ್ಬ ನನ್ನೆದುರಿಗೆ ಬಂದಾಗ ಏನು ನೀವು ಮದುವೆಗೆ ಹೋಗುವುದಿಲ್ಲವೆ ಎಂದು ಕೇಳಿದ್ದು ಖಂಡಿತವಾಗಿ ಚುಚ್ಚಿ ಕೇಳಿದ ಪ್ರಶ್ನೆಯೇ. ಆದರೆ ನಾನು ಚುಚ್ಚಲು ಪ್ರಯತ್ನಪಟ್ಟಿದ್ದು ಆ ವ್ಯಕ್ತಿಯ ಅವಿವೇಕಿತನವನ್ನ, ದುಷ್ಟತನವನ್ನು, ಹೆಣ್ಣನ್ನು ಟೇಕನ್ ಫಾರ್ ಗ್ರಾಂಟೆಂಟ್ ಅಂದುಕೊಂಡಿರುವವನನ್ನ. ಇದು ರಫ್ ಪ್ರಶ್ನೆ ಅಲ್ಲ. ರೋಬಸ್ಟ್ ಪ್ರಶ್ನೆ. ರಫ್ ಹಾಗೂ ರೋಬಸ್ಟ್ ಎರಡಕ್ಕೂ ವ್ಯತ್ಯಾಸವಿದೆ.

ಇನ್ನು ಧೈರ್ಯದ ಪ್ರಶ್ನೆ.

ಪತ್ರಿಕೋದ್ಯಮದಲ್ಲಿ ಯಾವಾಗಲೂ ಹೇಳಿಕೊಡುವ ಪಾಠವೇ….ಕಂಫರ್ಟೇಬಲ್ ಹಾಗೂ ವಾರ್ಮ್ ಅಪ್ ಪ್ರಶ್ನೆ ಕೇಳಬೇಡಿ. ಪಿಂಚ್ (ಅನಗತ್ಯ ಇರಿಟೇಟ್ ಅಲ್ಲ) ಮಾಡಿ. ಆಗ ಸತ್ಯ ಹೊರಬರುತ್ತದೆ ಎಂದು. ವಾರ್ಮ್ ಅಪ್ ಹಾಗೂ ಕಂಫರ್ಟೇಬಲ್ ಪ್ರಶ್ನೆ ಕೇಳುವುದು ತುಂಬಾ ಸುಲಭ. “ಯಡಿಯೂರಪ್ಪನವರೆ ನಿಮ್ಮ ಕನಸಿನ ಭವ್ಯ ಕರ್ನಾಟಕ ಹೇಗಿರಬೇಕು?” ಎಂದು ಮಾಸ್ ಕಾಮ್ ಮುಗಿಸಿದ ಪೋರನೂ ಕೇಳಬಲ್ಲ. “ಯಡಿಯೂರಪ್ಪ ನಿಮಗೂ ಶೋಭಾಗೂ ಇರುವ ಸಂಬಂಧವೇನು ಹೇಳಿಬಿಡಿ?” ಎಂದು ಕೇಳಲು ಧೈರ್ಯ ಬೇಕು. ಆ ಪ್ರಶ್ನೆ ಕೇಳುವ ಮಾಯಿ ಕಾ ಲಾಲ್ ಇದ್ದುದು ಇದೇ ಈ ಟಿವಿಯಲ್ಲಿ. (ಪತ್ರಕರ್ತೆ ಜ್ಯೋತಿ ಇರ್ವತ್ತೂರು. ಆದರೆ ಆಕೆ ಕೇಳಿದ್ದು ಶೋಭಾಗೆ) ಅನ್ ಕಂಫರ್ಟೇಬಲ್ ಪ್ರಶ್ನೆಗಳು ಯಾವಾಗಲೂ ಅನ್ ಕಂಫರ್ಟೇಬಲ್ ಪರಿಸ್ಥಿತಿಯನ್ನೂ, ಪತ್ರಕರ್ತರ ಮೇಲೆ ದಾಳಿಯನ್ನೂ ತರುತ್ತವೆ. ಸುರೇಶ್ ಓಬೆರಾಯ್ ನನ್ನ ಮೇಲೆ ಓದರಾಡಿದ ಹಾಗೆ. ಈಟಿವಿಯವರು ನನ್ನನ್ನು ಕೆಲಸಕ್ಕಿಟ್ಟುಕೊಂಡಿದ್ದು ಈ ರೀತಿಯ ಅನ್ ಕಂಫರ್ಟೇಬಲ್ ಪ್ರಶ್ನೆ ಕೇಳಲು ಎಂದು. ರಾಜಕಾರಣಿಗಳ ಚಮಚಾಗಿರಿ ಮಾಡುವುದಕ್ಕಲ್ಲ. ಅಷ್ಟಕ್ಕೂ ಭೂಮಿ, ನೆಲವನ್ನು ಪ್ರವಾಹದಲ್ಲಿ ಕಳೆದುಕೊಂಡಿರುವವರ ಮುಂದೆ ನಿಮಗೆ ಹೇಗೆನ್ನಿಸುತ್ತದೆ ಅಂತ ಕೇಳಲು ಹುಂಬತನ ಬೇಕು ಧೈರ್ಯ ಅಲ್ಲ. (ಅನ್ ಕಂಫರ್ಟೇಬಲ್ ಪ್ರಶ್ನೆಗೂ ಹುಂಬತನದ ಪ್ರಶ್ನೆಗೂ ವ್ಯತ್ಯಾಸವಿದೆ ಗಮನಿಸಿ)

ಸಡನ್ ಆಗಿ ಅಮಿತಾಬ್ ಬಚ್ಚನ್, ನಾರಾಯಣಮೂರ್ತಿ, ಅಮೀರ್ ಖಾನ್, ರಾಜ್ಯಪಾಲ ಭಾರದ್ವಾಜ್, ನಟ ದ್ವಾರಕೀಶ್ ಮುಂದೆ ಬಂದಾಗ ಬ್ಬೆಬ್ಬೆಬ್ಬೆ ಮಾಡುವ ಪತ್ರಕರ್ತರು ಇರುವುದರಿಂದಲೇ ಅಲ್ಲವೆ ಇಂದು ವಿವಿ ಆವರರಣವನ್ನು ರಿಯಲ್ ಎಸ್ಟೆಟ್ ಆಗಿ ಪರಿವರ್ತಿಸಲು ಹೊರಟಿರುವುದು.

ಕೊನೆಯದಾಗಿ,

ಮೂಲವ್ಯಾಧಿಯಿಂದಾಗಿ ಪ್ರಷ್ಠವೆಲ್ಲ ರಕ್ತಮಯವಾಗಿದ್ದಾಗಲೂ ರಾಜ್ ಕುಮಾರ್ ಸಾವಿನ ಗಲಾಟೆಯನ್ನು ಕವರ್ ಮಾಡಲು ಹೋದ, ಬೆನ್ನಿಹಿನ್ ಗಲಾಟೆಯಲ್ಲಿ ಆರ್ ಪಿ ಎಫ್ ನಿಂದ ಬೆನ್ನಿಗೆ ಬಡಿಗೆ ರುಚಿ ನೋಡಿದ, ಮೂರು ದಿನಗಳ ಅವಧಿಯಲ್ಲಿ ಕೇವಲ ನಾಲ್ಕು ಗಂಟೆ ನಿದ್ದೆ ಮಾಡಿ ವಿವಿಧ ಈವೆಂಟ್ ಗಳನ್ನು ಕವರ್ ಮಾಡುತ್ತಿದ್ದ, ಸರಿಯಾದ ಸಮಯಕ್ಕೆ ಊಟ-ತಿಂಡಿ ಮಾಡದೆ ನ್ಯೂಸ್ ಐಟಮ್ ಫೈಲ್ ಮಾಡುತ್ತಿದ್ದ ಕಾರಣಕ್ಕೆ ಅಸಿಡಿಟಿ ಉಲ್ಬಣಗೊಂಡು ಆರೋಗ್ಯ ಹಾಳುಮಾಡಿಕೊಂಡಿದ್ದ ನನಗೆ ಈಗಲೂ ಪ್ರೆಸೆನ್ಸ್ ಆಫ್ ಮೈಂಡ್ ಹಾಗೂ ಧೈರ್ಯ ಎರಡೂ ಹೆಚ್ಚಾಗಿದೆ.

ಈ ಟಿವಿಯಲ್ಲಿ ಐದು ವರ್ಷ ಕೆಲಸಮಾಡಿರುವುದರಿಂದ, ನನ್ನ ಪ್ರತಿಭೆಯ ಕಾರಣದಿಂದ ವಾರದಲ್ಲಿ ಮೂರು ದಿನ ‘ಮುಕ್ತಮುಕ್ತ’ ದಲ್ಲಿ ಬರುವುದರಿಂದ ಒಳ್ಳೆಯ ಜನಪ್ರೀಯತೆ ನನಗೆ ಸಿಕ್ಕಿದೆ. ಪ್ರಚಾರ ಗಿಟ್ಟಿಸಿಕೊಳ್ಳುವ ದರ್ದು ನನಗಿಲ್ಲ.

ಖಾಸಗಿತನವನ್ನೂ ಎಲ್ಲರೂ ಗೌರವಿಸಬೇಕು. ಮೀಡಿಯಾ ಕೂಡ. ಆದರೆ ಪರಮಹಂಸ ನಿತ್ಯಾನಂದನ ಖಾಸಗಿ ಬದುಕಲ್ಲ. ಹಾಗೆಯೇ ಸಾರ್ವಜನಿಕ ವ್ಯಕ್ತಿಗಳು ಮತ್ತೊಬ್ಬ ಸಾರ್ವಜನಿಕ ವ್ಯಕ್ತಿಯ ಬಗ್ಗೆ ಹೇಳಿಕೆ ಕೊಡುವಾಗ ಮೈಮೇಲೆ ಖಬರ್ ಇಟ್ಕೊಂಡು ಕೊಡಬೇಕು. ಇಲ್ಲದಿದ್ದರೆ ಮೀಡಿಯಾದವರು ಖಬರ್ದಾರ್ ಅನ್ನುತ್ತಾರೆ (ಇಂದಿನ ಮೀಡಿಯಾ ಅನ್ನುತ್ತೆದೆಯೋ ಇಲ್ವೋ ಗೊತ್ತಿಲ್ಲ…..)

ಇದು ನನ್ನ ಪಾಯಿಂಟ್ ಆಫ್ ವ್ಯೂ ಅಷ್ಟೇ. ಇದು ನಿಮ್ಮದೂ ಆಗಿರಬೇಕೆಂದಿಲ್ಲ.

ಇಷ್ಟಾದ ಮೇಲೂ ಆ ಪ್ರಶ್ನೆ ನಾನು ಕೇಳಬಾರದಾಗಿತ್ತು ಅಂತ ನಿಮಗೆ ಎನಿಸಿದರೆ, ಇಟ್ ಇಸ್ ಪರ್ಪೆಕ್ಟ್ ಲೀ ಫೈನ್. ದೋ ಐ ಡೋಂಟ್ ಎಗ್ರೀ ವಿತ್ ಯೂ, ಡೆಫಿನೆಟ್ಲಿ ರಿಸ್ಪೆಕ್ಟ್ ಯುವರ್ ಓಪಿನಿಯನ್.

ಪ್ರೀತಿಯಿಂದ

ಸುಘೋಷ್ ಎಸ್ ನಿಗಳೆ.