ಈ ಬಸ್ ಏನು ನಿಮ್ ಅಪ್ಪಂದ?

ಮಿರಿಮಿರಿಮಿರಿ ಮಿಂಚುವ ಕೆಂಪುಬಣ್ಣದ ಬಿಎಂಟಿಸಿ ವೋಲ್ವೋ ಬಸ್ ಅದು. “ಆಜಾ ಸನಮ್ ಮಧುರ ಚಾಂದನಿ ಮೇ ಹಂ ತುಂ ಮಿಲೇ ಹೆ ಜಿಯಾ” ಹಾಡು ಎಫ್ ಎಂ ನಿಂದ ಮೂಡಿ ಬಂದು ಇಡೀ ಎಸಿ ಬಸ್ ನ ವಾತಾವರಣವನ್ನು ಮತ್ತಷ್ಟು ಆಹ್ಲಾದಕರವನ್ನಾಗಿಸಿದೆ. ಭಯಂಕರ ಎತ್ತರದ ಕಟ್ಟಡಗಳಲ್ಲಿ ಕೆಲಸ ಮಾಡುವ ಐಟಿ-ಬಿಟಿ-ಘಾಟಿ ಮಂದಿ ಬೆಳಿಗ್ಗೆಬೆಳಿಗ್ಗೆಯೇ ಹ್ಯಾಪು ಮೋರೆ ಹಾಕಿಕೊಂಡಿದ್ದರೂ, ಬಸ್ ನ ವಾತಾವರಣ ಹಾಗೂ ಹಾಡು ಅವರಲ್ಲಿ ಅದೇನೋ ಚೈತನ್ಯ ಮೂಡಿಸಿದೆ.

ಆದರೆ….

ಅಷ್ಟರಲ್ಲಿ ಮಾಸಿದ ಬಿಳಿ ಅಂಗಿ, ಮಣ್ಣು ಮೆತ್ತಿದ ಬಿಳಿ ಪಂಚೆ ಧರಿಸಿದ, ಕೈಯಲ್ಲಿ ಕೋಲು ಹಿಡಿದುಕೊಂಡಿರುವ ಮುದುಕನೊಬ್ಬ ಯಾವುದೋ ಮಾಯದಲ್ಲಿ ಈ ವೋಲ್ವೋ ಬಸ್ ಹತ್ತಿಬಿಟ್ಟಿದ್ದಾನೆ. ಒಳಗಿದ್ದ ಜನ ಇದನ್ನು ವಾರೆಗಣ್ಣಿನಲ್ಲೇ ಗಮನಿಸಿದ್ದಾರೆ. ವೋಲ್ವೋ ಬಸ್ ಚಾರ್ಜ್ ಕೊಡುವಷ್ಟು ಹಣ ಈತನ ಬಳಿ ಇದ್ದಿರಬಹುದೆ ಎಂದು ನೋಡಿದವರಿಗೆ ಪ್ರಶ್ನೆ ಬಿದ್ದಿದೆ. ಆದರೆ ಅಲ್ಲಲ್ಲಿ ಆಧಾರ ಹಿಡಿದುಕೊಂಡು ಮುದುಕ ಕೊನೆಗೂ ಬಾಗಿಲೆದುರಿನ ಸೀಟ್ ಮೇಲೆ ಕುಳಿತಿದ್ದಾನೆ. ಕಂಡಕ್ಟರ್ ಅಲ್ಲಿಗೆ ಬರುವುದಕ್ಕೂ, ಮುದುಕ ತನ್ನ ಪಂಚೆಯನ್ನು ಎತ್ತಿ ಅಂಡರವೇರ್ ನ ಕಿಸೆಯಲ್ಲಿಟ್ಟದ ಪಾಸ್ ತೆಗೆಯುವುದಕ್ಕೂ ಸರಿ ಹೋಗಿದೆ. ಪಾಸ್ ನೋಡಿದ ಕಂಡಕ್ಟರ್ ಬೇಸರಿಸಿ, “ಈ ಪಾಸ್ ನಡ್ಯಲ್ಲ ಅಜ್ಜ ಈ ಬಸ್ ಗೆ. ಮುಂದಿನ ಸ್ಟಾಪ್ ಗೆ ಇಳಿದು ಬಿಡು” ಎಂದಿದ್ದಾನೆ. ಸರಿ ಎಂದು ಮುದುಕ ಕುಳಿತಿದ್ದಾನೆ. ಆದರೆ ಮುಂಬೈ ಲೋಕಲ್ ಟ್ರೇನ್ ಗಳಂತೆ ಮುಂದಿನ, ಅದರ ಮುಂದಿನ ಸ್ಟಾಪ್ ನಲ್ಲಿ ಬಸ್ ಕೇವಲ ಹದಿನೈದು ಸೆಕೆಂಡ್ ಮಾತ್ರ ನಿಂತಿದೆ. ಹೀಗಾಗಿ ಮುದುಕಪ್ಪನಿಗೆ ಇಳಿಯಲಾಗಿಲ್ಲ. ವಾಪಸ್ ಬಂದ ಕಂಡಕ್ಟರ್ ಮುದುಕನ ಮೇಲೆ ರೇಗಿದ್ದಾನೆ. “ಒಂದು ಸಾರಿ ಹೇಳಿದ್ರೆ ಮರ್ಯಾದೆಯಾಗಿ ತಿಳಕೋಬೇಕು. ಇಳಿ ಅಂತ ಹೇಳಿರಲಿಲ್ವಾ…ನಮ್ಮ ಕೆಲಸ ತಗಸ್ತೀರಾ” ಅಂದು ಬೈದಿದ್ದಾನೆ. ಅದಕ್ಕೆ ಉತ್ತರ ಕೊಡಲು ಹೋದ ಅಜ್ಜನ ಕೈಹಿಡಿದು ಬಸ್ಸನ್ನು ಮಧ್ಯದಲ್ಲಿಯೇ ನಿಲ್ಲಿಸಿ ನಿರ್ದಾಕ್ಷಿಣ್ಯವಾಗಿ ಕೆಳಗೆ ಇಳಿಸಿದ್ದಾನೆ. ಮುಂದಿನ ಸ್ಟಾಪ್ ನಲ್ಲಿ ಖಂಡಿತ ಇಳಿಯುವುದಾಗಿ ಅಜ್ಜಪ್ಪ ರಿಕ್ವೆಸ್ಟ್ ಮಾಡಿಕೊಂಡರೂ ಕಂಡಕ್ಟರ್ ಕೇಳಿಲ್ಲ.

ಅಲ್ಲಿದ್ದ ಜನರಿಗೆ ಇದು ನೋಡಿ ಬೇಜಾರಾಗಿದೆ. ಒಬ್ಬ ಹೇಳಿದ್ದಾನೆ. “ರ್ರೀ…ಇಷ್ಟು ದೂರ ಬಂದಿದ್ದಾರೆ. ಮುಂದಿನ ಸ್ಟಾಪ್ ನಲ್ಲಿ ಇಳಿಸಬಾರ್ದಾಗಿತ್ತಾ..ಬೇಕಾದ್ರೆ ನಾನೇ ಟಿಕೆಟ್ ತಗಸ್ತಾ ಇದ್ದೆ. ಯಾಕೆ ರಸ್ತೆ ಮಧ್ಯಾನೇ ಇಳಿಸೋದಕ್ಕೆ ಹೋದ್ರಿ?”

ಕಂಡಕ್ಟರ್ ಹೇಳಿದ್ದಾನೆ “ನೀವು ಒಳ್ಳೇವ್ರು ಸಾರ್ ಅದಕ್ಕೇ ಹೀಗೆ ಹೇಳ್ತಾ ಇದ್ದೀರಿ. ಆದ್ರೆ ಚೆಕಿಂಗ್ ಗೆ ಬರುವವರು ನಿಮ್ಮ ತರಹ ಇರ್ತಾರೆ ಅನ್ಕೊಂಡ್ರಾ…? ನಾನು ಒಂದು ಸಾರಿ ಹೀಗೆ ಜನಸೇವೆ ಮಾಡಲು ಹೋದಾಗ, ‘ಈ ಬಸ್ಸೇನು ನಿಮ್ಮ ಅಪ್ಪಂದ ಬ್ಯಾವರ್ಸಿಗಳನ್ನೆಲ್ಲ ಕರೆದುಕೊಂಡು ಹೋಗಾದಿಕ್ಕೆ?’ ಅಂತ ಬೈಸಿಕೊಂಡಿದ್ದೇನೆ. ಹೀಗಾಗಿ…..”