ಯಾರು ಹೇಳಿದ್ದು ಕಲಾವಿದರನ್ನು ಎಲ್ಲರೂ ಗುರುತಿಸುತ್ತಾರೆ ಎಂದು?

ಮುಕ್ತ ಮುಕ್ತದಲ್ಲಿ ಆಕ್ಟ್ ಮಾಡಲು ಶುರುಮಾಡಿದಾಗಿನಿಂದ ಎಲ್ಲರೂ ನನ್ನನ್ನು ಗುರುತಿಸುತ್ತಾರೆ ಎಂದು ಹಲವು ಬಾರಿ ನಾನೇ ಹೇಳಿಕೊಂಡಿದ್ದೇನೆ. ಆ ಘಟನೆಗಳನ್ನು ಬರೆದಿದ್ದೇನೆ. ಅದರ ಉಲ್ಟಾ ಘಟನೆಯೊಂದು ಹೀಗಿದೆ.

ಸಿಸ್ಟೋಸ್ಕೋಪಿ ಆದ ಬಳಿಕ ಸ್ಟೆಂಟ್ ರಿಮೂವಲ್ ಇತ್ತು. ಹಾಗಾಗೆ ಮತ್ತೆ ಗಿರಿನಗರದ ರಾಧಾಕೃಷ್ಣನ ಮೊರೆ ಹೋಗಿದ್ದೆ. ಅಲ್ಲಿ ಸ್ಟೆಂಟ್ ರಿಮೂವಲ್ ಗೂ ಮೊದಲು ಎಕ್ಸ್ ರೇ ತೆಗೆಯಲು ಸೂಚಿಸಿದರು. ಸರಿ ಎಂದು ನಾನು ಎಕ್ಸ್ ರೇ ರೂಂನತ್ತ ಹೆಜ್ಜೆ ಹಾಕಿದೆ. ಅಲ್ಲಿ ಅದಾಗಲೇ ನಾಲ್ಕೆಂಟು ಜನ ಎಕ್ಸ್ ರೇ ಗಾಗಿ ಕಾಯುತ್ತಿದ್ದರು. ಲ್ಯಾಬ್ ಅಸಿಸ್ಟೆಂಟ್ ಮಾತ್ರ ಬಂದಿರಲಿಲ್ಲ.

ಒಂದೈದು ನಿಮಿಷ ಬಿಟ್ಟು ಬಂದ ಆತ ಸರದಿ ಪ್ರಕಾರ ಎಕ್ಸ್ ರೇ ತೆಗೆಯಲು ಶುರುಮಾಡಿದ. ನನ್ನ ಸರದಿ ಬರಲು ಇನ್ನೂ ಹತ್ತು ನಿಮಿಷವಿತ್ತಾದ್ದರಿಂದ ಸುಮ್ಮನೇ ಏಕೆ ಕೂರುವುದು ಎಂದು ನನ್ನ ಬ್ಯಾಗ್ ತೆಗೆದೆ. ಮೂರ್ನಾಲ್ಕು ಚೆಕ್ ಗಳನ್ನು ಕಲೆಕ್ಷನ್ ಗೆ ಹಾಕಬೇಕಿತ್ತು. ಪೇ ಇನ್ ಸ್ಲಿಪ್ ಗಳನ್ನು ಮೊದಲೇ ತಂದಿದ್ದೆ. ಹೀಗಾಗಿ ಸ್ಲಿಪ್ ಗಳನ್ನು ತುಂಬುತ್ತ, ಪಿನ್ ಮಾಡತೊಡಗಿದೆ. ಲ್ಯಾಬ್ ಅಸಿಸ್ಟೆಂಟ್ ಸರದಿ ಸಾಲಿನಲ್ಲಿ ಇರುವವರನ್ನು ಕರೆಯಲು ಹೊರ ಬಂದಾಗಲೆಲ್ಲ ನನ್ನನ್ನು ನೋಡುತ್ತಿದ್ದ. ಕೊನೆಗೆ ನನ್ನ ಸರದಿಯೂ ಬಂತು.

ಎಕ್ಸ್ ರೇ ಟೇಬಲ್ ಮೇಲೆ ಮಲಗಿದೆ.

“ಕೆಯುಬಿ ಎಕ್ಸ್ ರೇ ಅಲ್ವಾ? ಯಾವಾಗಾ ಸಿಸ್ಟೋಸ್ಕೋಪಿ ಆಗಿದ್ದು?” ಎಂಬಿತ್ಯಾದಿ ವಿಷಯಗಳನ್ನು ಮಾತನಾಡುತ್ತ ಕೊನೆಗೆ ಆತ ಕೇಳಿದ

“ನೀವು ಕೊರಿಯರ್ ಆಫೀಸ್ ನಲ್ಲಿ ಕೆಲಸ ಮಾಡುತ್ತೀರಾ?”

ಈಗ ಹೇಳಿ ಕಲಾವಿದರ ಪಾಪ್ಯುಲಾರಿಟಿ ಎಷ್ಟಿದೆ ಎಂದು……….